ಕಾವ್ಯ ಸಂಗಾತಿ
ರಸ ಗಳಿಗೆ
ನಾಮದೇವ ಕಾಗದಗಾರ.
ಕವಿತೆ ಮತ್ತು ಚಿತ್ರಕೃಪೆ-ನಾಮದೇವ ಕಾಗದಗಾರ.
ನಿನೊಮ್ಮೆ
ನೋಡಬೇಕಿತ್ತು…….
ಅಲ್ಲೊಂದು
ನಡೆದಿತ್ತು ವಿವಾಹ..! ಬಣ್ಣಗಳ ಲೋಕದಲ್ಲಿ ….
“ಕ್ಯಾನ್ವಾಸ್” ಮದುಮಗ
ಶ್ವೇತವರ್ಣದಲ್ಲಿ ಕಂಗೊಳಿಸಿದ್ದ,
ನಾಚಿಕೆಯಲ್ಲಿ ಮಿಂದಿದ್ದ,
ರಜತ ಲೇಪನಗೊಂಡಿದ್ದ
‘ಕಲ್ಪನೆ’ಯ ಮದುಮಗಳು
ಬಣ್ಣ-ಬಣ್ಣಗಳ
ಮುಸುಕು ಹೊದ್ದಿದ್ದಳು,
ಲಾಲಿತ್ಯದಿಂದ ಮೆರೆದಿದ್ದಳು
ಅಲ್ಲಿ ಅನುಪಮ ಸೌಂದರ್ಯವಿತ್ತು,
ಕುಂಚಗಳು ಬಣ್ಣ ಮೆತ್ತಿದ್ದವು,
ಕಲ್ಪನೆಗಳ ಮುತ್ತುಗಳ ಧರಿಸಿದ್ದವು,
ಫಳ-ಫಳನೆ ಮಿನುಗಿದ್ದವು-
ಆ ರಾಗ ರಂಜಿತ ಒಡ್ಡೋಲಗದಲ್ಲಿ,
ನವರಸ, ಲಾಲಿತ್ಯಗಳ ಕಲರವವಿತ್ತು,
ಕಲಾರಸ ಕ್ಯಾನ್ವಾಸ್
ಕಲ್ಪನೆಯ ಕೈ ಹಿಡಿದಿದ್ದ
ಅಲ್ಲಿ ನವರಸಗಳ
ಸೆಲೆ-ನೆಲೆ ಇದೆ,
ಆ ಕಲಾ ಬಾಗಿಲ ಮುಂದೆ
ನಿಂತು ಕದ ತಟ್ಟಿ ಕರೆವ
ಎದೆಗಾರಿಕೆಯೇ ನಿನಗೆ
ಸೋಮಾರಿತನದಿಂದ ಮೇಲೆದ್ದು,
ಒಮ್ಮೆ ನೋಡಬೇಕಿತ್ತು,
ಕ್ಯಾನ್ವಾಸಿನೆಡೆಗೆ,
ಕಲ್ಪನೆಯ ಬಣ್ಣದೆಡೆಗೆ,
ಅವರ ಮಿಲನದೆಡೆಗೆ…