ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆ-ಎಷ್ಟೊಂದು ಮಾತುಗಳು

ಕಾವ್ಯ ಸಂಗಾತಿ

ಎಷ್ಟೊಂದು ಮಾತುಗಳು

ಸಂತೆಬೆನ್ನೂರು ಫೈಜ್ನಟ್ರಾಜ್

ಡಾಂಬರು ರಸ್ತೆಯ ಆಜೂ ಬಾಜು ಬಿದ್ದ
ಯಾವುದೋ ಕಾಲದ ಕಲ್ಲು
ಗಳಂತೆ ಮೌನ ಸಹಚಾರಿಗಳ ಮಾತುಗಳು ಬಿಕ್ಕಳಿಸುತಿವೆ ಸುಮ್ಮನೆ

ಆಡಿದ , ಆಡದ
ಆಡಬೇಕಾದ ಮಾತುಗಳು ಮರಣ
ಶಾಸನವಾಗಿವೆ ಎದೆಯೊಳಗೆ
ಮೌನ ಒರೆಯೊಳಗಿನ ಕತ್ತಿ ಈ ಮಾತು
ಹೊರ ಬಂದಾಗೆಲ್ಲಾ ರಕ್ತ ನೋಡಿದೆ
ಆಡಿಕೊಂದ , ಆಡದೇ ಕೊಂದ ಮಾತುಗಳ ನಡುವೆ
ಬಿಕ್ಕಳಿಕೆಯೊಂದೇ ಶಬ್ಧಾನುಸಂಧಾನ!

ಒಳಗೊಳಗೇ ಗಿರಕಿಯಾಡೋ ಮಾತುಗಳ
ಹಿಡಿದ್ಹಿಡಿದು ಗಂಟಲ ಹೈವೇಯಿಂದ ತುಟಿ ತುದಿಗೆ ತಂದು
ಒಗೆಯುವಷ್ಟರಲ್ಲಿ ಭಾಷಾಂತರ, ರೂಪಾಂತರ ಅಥವಾ ಭಾವಾಂತರ!

ಎಲೆಯ ಮೇಲಿನ ಹನಿ ಮಂಜು ಒಂದೂ ಮಾತಾಡದೇ
ಮುದ್ದಿಸಿ ಮುದ್ದಿಸಿ ಬಿಸಿಲ ಕಿರಣ
ಬಂದ ಕೂಡಲೇ ಒಲವಿನೊಂದಿಗೆ ಮಾಯ!

ಮಧುರ ಒಲವಿಗೆ ಮಾತಾದರೂ ಯಾಕೆ ಬೇಕು?
ನೂರು ಮಾತು ಒಂದು ಮೌನದೆದುರು ನೆಲ ಕಚ್ಚುತಿರುವಾಗ
ಒಲ್ಲದ ಗಂಡನ ಕಲ್ಲಿನ ಮೊಸರಾದರೂ ಬೇಕಾ?
ಕೃಷ್ಣನ ಮಾತು ಅರ್ಜುನನ ಅದಃಪತನ
ಕರ್ಣಾವಸಾನ
ಮಾತಾಡದ ಅದೆಷ್ಟೋ ಭಾವಗಳು ಅಂತಃಪುರದಲ್ಲಿ ಬಂಧಿ
ಮನೆ ಕೆಡಿಸುವ
ಮನ ಕಾಡುವ ಅಗಣಿತ ಮಾತುಗಳ ನಡುವೆ ಮೌನ ಅನಾಥ
ಮಾತು
ಮೌನ ಮತ್ತೆ ಕಾಡಿದಂತೆ
ಸತ್ತ ಕವಿತೆಗಳು ಮೈ ಮುರಿಯುತ್ತವೆ ಅಷ್ಟೇ!


ಸಂತೆಬೆನ್ನೂರು ಫೈಜ್ನಟ್ರಾಜ್

5 thoughts on “ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆ-ಎಷ್ಟೊಂದು ಮಾತುಗಳು

  1. ಕನ್ನಡದ ಸಾರಸ್ವತ ಲೋಕದಲ್ಲಿ ಮಿಂಚುತ್ತಿರುವ ನಮ್ ಸರ್ ಕವಿತೆಗಳನ್ನು ಓದುವುದೇ ಒಂದು ಆನಂದ .

  2. ಕನ್ನಡ ನಾಡು ಕಂಡ ಹಲವು ಯುವ ಪೀಳಿಗೆಯ ಸಾಹಿತಿಗಳಲ್ಲಿ ಗುರುತಿಸಿಕೊಂಡಿರುವ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ನಿಮ್ಮ ಸಾಹಿತ್ಯ ಕೃಷಿ ನಿಮ್ಮನ್ನು ಬಹಳ ಎತ್ತರಕ್ಕೆ ಬೆಳೆಸಿ ಆ ಕಂಪು ನಾಡಿನಾಚೆಗೂ ಪಸರಿಸಲಿ ನೀವು ಇನ್ನೂ ಅನೇಕ ಯುವಕರಿಗೆ ಪ್ರೇರಣೆ ಸ್ಪೂರ್ತಿಯಾಗಿರಿ ಎಂಬುದು ನನ್ನ ಆಶಯ ಅಭಿನಂದನೆಗಳು ಮತ್ತೊಮ್ಮೆ

Leave a Reply

Back To Top