ವ್ಯಕ್ತಿ ಚಿತ್ರ ಸಂಗಾತಿ
ಡಾ.ಟ.ಯಲ್ಲಪ್ಪನವರ ಬದುಕು ಬರಹ
ಅನುಸೂಯ ಯತೀಶ್ ರವರ ಲೇಖನಿಯಲ್ಲಿ
ದಲಿತ ಮತ್ತು ಬಡ ಕುಟುಂಬಗಳಲ್ಲಿ ಜನಿಸುವ ಮಕ್ಕಳಿಗೆ ಸಮಾಜದ ಜೊತೆ ಬೆರೆಯುವ ಅವಕಾಶಗಳು ತುಂಬಾ ಕಡಿಮೆ. ಅಂತಹ ಸಾಮಾಜಿಕ ಏಕಾಂಗಿತನ ಅಥವಾ ಊರಾಚೆಗಿನ ಕೇರಿಯ ಬದುಕು ನನ್ನದಾಗಿತ್ತು. ಆಗ ಜನರ ಜೊತೆ ಬೆರೆಯುವ ಅವಕಾಶವಿಲ್ಲದ್ದರಿಂದ ಅಂತರ್ಮುಖಿಯಾಗಿರುತ್ತಿದ್ದೆ ನನ್ನಂತಹ ಅನೇಕ ವ್ಯಕ್ತಿಗಳಿಗೆ ಸಮಾಜದ ವ್ಯಕ್ತಿಗಳ ಜೊತೆ ಮಾತನಾಡಲು ಅವಕಾಶ ಸಿಗದಿದ್ದಾಗ ತನ್ನ ಸುತ್ತಲಿನ ಪರಿಸರದೊಂದಿಗೆ ಮಾತನಾಡುತ್ತಾ, ತನ್ನೊಳಗಿನ ದುಃಖಗಳನ್ನು ಅಂತರ್ ಭಾವಗಳನ್ನು ಹೊರಹಾಕಲು ಕವಿತೆಗಳನ್ನು ಕಂಡುಕೊಳ್ಳುತ್ತಾರೆ. ಹಾಗಾಗಿ ನಾನು ಕೂಡ ಶಾಲಾ ದಿನಗಳಲ್ಲಿ ಆಶು ಕವಿಯಾಗಿ ನನ್ನ ಮನೋಗತವನ್ನು ಕಾವ್ಯವಾಗಿಸಿದೆ ಎಂಬ ಮಹತ್ವದ ವಿಚಾರಗಳನ್ನು ಜನತೆಯ ಮುಂದೆ ತೆರೆದಿಟ್ಟವರು ಡಾ.ಟಿ.ಯಲ್ಲಪ್ಪನವರು.
ಡಾ. ಟಿ. ಯಲ್ಲಪ್ಪನವರು ದಿನಾಂಕ ೦೮ ನವಂಬರ್ ೨೦೨೨ ರ ಮಂಗಳವಾರದಂದು ದೂರದರ್ಶನ ಚಂದನ ವಾಹಿನಿಯ ನಮಸ್ಕಾರ ನಮ್ಮ ಕರ್ನಾಟಕ ಕಾರ್ಯಕ್ರಮದ ಅತಿಥಿಗಳಾಗಿ ಸಾಧಕರ ಸೀಟಿನಲ್ಲಿ ಕುಳಿತು ತಮ್ಮ ಬದುಕು ಬರಹ ವೃತ್ತಿ ಪಯಣವನ್ನು ಕನ್ನಡಿಗರ ಮುಂದೆ ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ. ಇವರನ್ನು ಸಂದರ್ಶಿಸಿದವರು ನಮ್ಮ ಪಕ್ಕದ ಊರಿನವರೇ ಆದ ಅದ್ಭುತ ನಿರೂಪಕಿ ಮೋಟಿವೇಶನ್ ತರಬೇತಿದಾರರಾದ ದಿವ್ಯ ಆಲೂರು ಅವರು.
ಪ್ರಕೃತಿಯ ರಮಣೀಯ ತಾಣಗಳು ಮಾತ್ರ ಕವಿಗಳಿಗೆ ಕವಿತೆ ರಚಿಸಲು ಸ್ಪೂರ್ತಿಯಲ್ಲ. ಅದರ ಹೊರತಾಗಿಯೂ ಸಮಾಜದಲ್ಲಿನ ಅಸಮಾನತೆ, ಸಾಮಾಜಿಕ ಸಂಪರ್ಕದ ಕೊರತೆ, ಬಲ್ಲಿದರು ಬಡವರನ್ನು ನಡೆಸಿಕೊಳ್ಳುವ ರೀತಿ, ಸಮಾಜದ ಮುಖ್ಯ ವಾಹಿನಿಯಿಂದ ದೂರ ಬದುಕಬೇಕಾದ ಪರಿಸ್ಥಿತಿಗಳು ವ್ಯಕ್ತಿಯನ್ನು ಏಕತಾನತೆಯಲ್ಲಿ ಮುಳುಗಿಸಿ ಅಂತರ್ಮುಖಿಯಾಗಿಸುತ್ತವೆ. ಇದು ಕೆಲವರಲ್ಲಿ ನಕಾರಾತ್ಮಕ ಬದಲಾವಣೆಗೆ ದಾರಿಯಾದರೆ ಹಲವರಲ್ಲಿ ಹೊಸದೊಂದು ಸಾಧನೆಗೆ ಅಡಿಗಲ್ಲಾಗುತ್ತದೆ. ಅವರ ಮನದೊಳಗೆ ಜ್ವಾಲಾಮುಖಿಯಾಗಿ ಕುದಿಯುವ ಲಾವ, ಭಾವಗಳ ರೂಪ ಪಡೆದು ಕವಿತೆಗಳಾಗಿ ಅಕ್ಷರ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತವೆ. ಇದಕ್ಕೆ ಉತ್ತಮ ನಿದರ್ಶನವಾಗಿ ನಿಲ್ಲುವವರಲ್ಲಿ ಡಾ. ಟಿ ಯಲ್ಲಪ್ಪನವರು ಕೂಡ ಪ್ರಮುಖರು. ಡಾ.ಟಿ. ಯಲ್ಲಪ್ಪನವರು ಕೆ.ಆರ್. ಪುರದ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಕನ್ನಡ ಸ್ನಾತಕೋತರ ಅಧ್ಯಯನ ವಿಭಾಗ ಮತ್ತು ಸಂಶೋಧನಾ ಕೇಂದ್ರದ ಸಂಯೋಜಕರಾಗಿ, ಪಿ.ಎಚ್.ಡಿ. ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕರ್ತವ್ಯ ನಿರ್ವಹಿಸುತ್ತಾ, ಪ್ರಸಕ್ತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಪ್ರಥಮವಾಗಿ ಯಲ್ಲಪ್ಪನವರ ಬಾಲ್ಯ ಬದುಕಿನ ಬಗ್ಗೆ ಒಂದಷ್ಟು ಬೆಳಕು ಚೆಲ್ಲುವ ಅಂಶಗಳು ಇಲ್ಲಿ ಚರ್ಚೆಗೊಳಪಟ್ಟವು. ಅಲೆಮಾರಿ ಕುಟುಂಬದ ಕೂಸಾಗಿ ಶಾಲಾ ದಾಖಲಾತಿಗೆ ಜನ್ಮಸ್ಥಳ ನೀಡುವಾಗ ಉಂಟಾದ ಗೊಂದಲವನ್ನು ನಿಸ್ಸಂಕೋಚವಾಗಿ, ಯಾವುದೇ ಮುಜುಗರವಿಲ್ಲದೆ ಸಮಾಜದ ಮುಂದೆ ತೆರೆದಿಟ್ಟ ಇವರ ದಿಟ್ಟ ನಡೆಯನ್ನು ಮೆಚ್ಚಲೇಬೇಕು. ಹೇಳ್ಕೊಳ್ಳೋಕೆ ಒಂದೂರು
ತಲೆಮ್ಯಾಗೆ ಒಂದು ಸೂರು ಮಲಗೋಕೆ ಭೂಮ್ ತಾಯೆ ಮಂಚ ಎನ್ನುವ ಕವಿವಾಣಿಯನ್ನು ಉಲ್ಲೇಖಿಸುತ್ತಾ ತಾನು ಕಗ್ಗದಾಸಪುರ ಮತ್ತು ಎ.ನಾರಾಯಣಪುರ ಎಂಬ ಎರಡು ಊರುಗಳ ನಡುವಿನ ಕಾಡೊಂದರಲ್ಲಿ ಜನಿಸಿದ ಕಾನನದ ಕೂಸೆಂದು ಹೇಳುವಾಗ ಅವರ ಮೊಗದಲ್ಲಿ ತನ್ನ ತಂದೆ ತಾಯಿಗಳ ಮುಗ್ಧತೆ ಕಂಡಿತೇ ವಿನಹ ಅವರ ಜನ್ಮ ಸ್ಥಳ ಸರಿಯಾಗಿ ಗುರುತಿಸದೆ ಇರುವುದಕ್ಕೆ ತಿರಸ್ಕಾರ ಭಾವ ಮೂಡಲಿಲ್ಲ. ಲಕ್ಷಗಟ್ಟಲೆ ಆಸ್ತಿ ಮಾಡಿಟ್ಟರು ಏನು ಮಹಾ ಸಂಪಾದನೆ ಮಾಡಿದ್ದಾರೆ ಎನ್ನುವ ಮಕ್ಕಳ ನಡುವೆ ಇವರು ವಿಭಿನ್ನವಾದ ವಿಶಿಷ್ಟವಾದ ವ್ಯಕ್ತಿಯಾಗಿ ಕಾಣುತ್ತಾರೆ . ಇಂದು ಅವರು ಸಮಾಜದಲ್ಲಿ ಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿ ಅದ್ಭುತ ಸಾಧನೆ ಮಾಡಿದ್ದರು ತನ್ನ ಹಿಂದಿನ ಬದುಕನ್ನು ಮರೆಮಾಚದ ಯಲ್ಲಪ್ಪನವರ ನಡೆ ಅಭಿನಂದನಾರ್ಹ. ತಾವು ತುಳಿದ ಸಂಕಟಗಳ ದಾರಿಯನ್ನು, ಸಾಧನೆಯ ಮೆಟ್ಟಿಲು ಮಾಡಿಕೊಂಡು ಭವ್ಯ ಭವಿಷ್ಯತ್ತಿನ ಪ್ರಜೆಗಳನ್ನು ನಿರ್ಮಿಸುವ ಒಂದು ಉನ್ನತವಾದ ಹಂತಕ್ಕೆ ಬೆಳೆದವರು.
ಜಮೀನುದಾರರ ಬಳಿ ಜೀತದಾಳುಗಳಾಗಿ ದುಡಿಯುತ್ತಾ, ತನ್ನ ದೊಡ್ಡ ಕುಟುಂಬವನ್ನು ಸಲಹುತ್ತಾ, ಕಿತ್ತು ತಿನ್ನುವ ಬಡತನದ ನಡುವೆ ಅನ್ನ ಆಹಾರ ಒದಗಿಸಲು ಹೆಣಗಾಡುತ್ತಿದ್ದ ತಂದೆ ತಾಯಿಗಳಿಗೆ ಅಕ್ಷರ ಜ್ಞಾನದ ಅರಿವಿಲ್ಲದಿದ್ದರೂ ತಾನೇ ಸ್ವತಹ ಹಠ ಮಾಡಿ ಸರ್ಕಾರಿ ಶಾಲೆಗೆ ಸೇರಿಕೊಂಡೆ ಎನ್ನುವ ಯಲ್ಲಪ್ಪನವರ ಮಾತುಗಳನ್ನು ಕೇಳಿದಾಗ ಸಾಧನೆಗೆ ಸಿರಿವಂತಿಕೆ ಬೇಕಿಲ್ಲ ಸಾಧಿಸಿಯೇ ತೀರುವೆನೆಂಬ ಛಲ ಸಾಕಲ್ವಾ ಎಂದೆನಿಸಿದ್ದಂತು ಸತ್ಯ. ನಿತ್ಯ ಜಮೀನುದಾರರನ್ನು ನೋಡುತ್ತಿದ್ದ ಯಲ್ಲಪ್ಪನವರು ತಾವು ದುಡಿದು ಸಂಪಾದನೆ ಮಾಡುವ ಹಂತಕ್ಕೆ ತಲುಪಿದಾಗ ತನ್ನ ತಂದೆ ತಾಯಿಗಳಿಬ್ಬರಿಗೂ ಜಮೀನುದಾರರ ವಸ್ತ್ರವನ್ನು ತಂದು ತೊಡಿಸಿ ನೋಡಿ ಖುಷಿಪಟ್ಟಿದ್ದು ನಿಜಕ್ಕೂ ಹೆತ್ತವರಿಗೆ ಅವಿಸ್ಮರಣೀಯ ಘಟನೆಯಾಗಿದೆ.
ಓದಬೇಕೆಂಬ ತನ್ನೊಳಗಿನ ಅಧಮ್ಯ ಒಳತುಡಿತ ಹಾಗೂ ತನ್ನ ಶಿಕ್ಷಕರೊಬ್ಬರ ಸಹಾಯ ಹಸ್ತ, ಮಾರ್ಗದರ್ಶನ ತನ್ನ ಶಾಲಾ ಕನಸನ್ನು ನನಸಾಗಿಸಿತು ಎನ್ನುವ ಡಾ. ಯಲ್ಲಪ್ಪನವರು ಅವರ ಹೆಸರು ತಿಳಿಯದಿದ್ದರೂ ಅವರು ತೋರಿದ ಪ್ರೀತಿ ಕುರಿತು ಪ್ರಬಂಧ ರಚಿಸಿ ಅವರಿಗೆ ಗುರುಕಾಣಿಕೆ ನೀಡಿರುವುದು ಗುರು ಶಿಷ್ಯರ ಬಾಂಧವ್ಯದ ಪ್ರತೀಕವಾಗಿದೆ. ಅವರು ನೀಡಿದ ಪೆನ್ನೊಂದು ಯಲ್ಲಪ್ಪನವರ ಸಂಗಾತಿಯಾಗಿ ಇಂದಿಗೂ ಇರುವುದು ಹರ್ಷದದ ಸಂಗತಿ.
ವನಮಾಲಿಯಾಗಿದ್ದ ತನ್ನ ತಂದೆಗೆ ನೆರವಾಗಲು ಹಾಗೂ ತಾನು ಶಿಕ್ಷಣದ ವೆಚ್ಚವನ್ನು ಬರಿಸಲು ಮಕ್ಕಳಿಗೆ ಮನೆ ಪಾಠ ಮಾಡಿದ್ದನ್ನು ಪ್ರೇಕ್ಷಕರ ಮುಂದೆ ನೆನಪಿಸಿಕೊಳ್ಳುತ್ತಾ, ಅವರಿಗೆ ಕಲಿಸುತ್ತಾ ತನ್ನ ಜ್ಞಾನ ಭಂಡಾರವು ತುಂಬುತ್ತ ಹೋಯಿತೆನ್ನುವಾಗ ಜ್ಞಾನದ ಬೀಜ ಬಿತ್ತಿದಷ್ಟು ಖಾಲಿಯಾಗದ ಅಕ್ಷಯವಾಗುತ್ತದೆ ಎನಿಸಿತು. ಇವರ ಕಾಲೇಜು ವಿದ್ಯಾಭ್ಯಾಸ ಬೆಂಗಳೂರಿನ ಆಚಾರ್ಯ ಪಾಠ ಶಾಲೆಯಲ್ಲಿ ನಡೆದಿದ್ದು ಈ ಕಾಲೇಜು ಇವರ ಒಳಗಿನ ಅಧಮ್ಯ ಸಾಹಿತ್ಯಿಕ ಶಕ್ತಿಯನ್ನು ಅಭಿವ್ಯಕ್ತಪಡಿಸಲು ದೊಡ್ಡ ವೇದಿಕೆಯಾಯಿತು. ಕಲೆ ಸಾಹಿತ್ಯ ಸಂಸ್ಕೃತಿಗಳಿಗೆ ಪ್ರೋತ್ಸಾಹ ನೀಡಿದ ಉಪನ್ಯಾಸಕರಾದ ಅಬ್ದುಲ್ ಬಶೀರ್, ಕೆ.ಎಸ್. ಎನ್. ಕೆ .ಆರ್ .ಗಣೇಶ್, ಡಾ. ಮುರುಳಿಧರ್ ಅವರುಗಳ ಮಾರ್ಗದರ್ಶನ ಇವರನ್ನು ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿ ವರ್ಷ ಪ್ರಥಮ ಸ್ಥಾನ ಪಡೆದು ಕಾಲೇಜಿನಲ್ಲಿ ಒಂದಲ್ಲ ಒಂದು ಕಾರಣದಿಂದ ನೋಟಿಸ್ ಬೋರ್ಡ್ ನಲ್ಲಿ ಇವರ ಹೆಸರು ಇರುತ್ತಿತ್ತು ಎನ್ನುವಾಗ ಇವರ ಬಹುಮುಖ ಪ್ರತಿಭೆಯು ವೀಕ್ಷಕರಿಗೆ ಅಚ್ಚರಿ ಮೂಡಿಸದಿರಲು ಸಾಧ್ಯವಿಲ್ಲ. ಇವರು ಕೇವಲ ಸಹಪಠ್ಯ ಚಟುವಟಿಕೆಗಳು ಅಷ್ಟೇ ಅಲ್ಲ ಪಠ್ಯ ವಿಷಯಗಳಲ್ಲೂ ಕೂಡ ಓದಿನಲ್ಲಿ ಮುಂದಿದ್ದು ಇವರು ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಮೊದಲಿಗರಾದರೆ, ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯಕ್ಕೆ ಮೊದಲಿಗರಾಗಿ ಉತ್ತೀರ್ಣರಾಗಿದ್ದು ಸಾಕ್ಷಿಯಾಗಿದೆ. ಇಂತಹ ವಿಚಾರಗಳನ್ನು ಓದಿದಾಗ ಶಿಷ್ಯರ ವಿಜಯ ಯಾತ್ರೆಯಲ್ಲಿ ಗುರುಗಳ ಪಾತ್ರ ಅದೆಷ್ಟು ಪ್ರಮುಖವೆನಿಸುತ್ತದೆ. ಇಂತಹ ಗುರುಗಳ ಮಾರ್ಗದರ್ಶನ ಪ್ರೋತ್ಸಾಹ ದೊರೆಯದಿದ್ದರೆ ಇಂದು ಯಲ್ಲಪ್ಪನವರಂತಹ ಅದ್ಭುತ ಪ್ರಾಧ್ಯಾಪಕರನ್ನು, ಕವಿಯನ್ನು, ವಿಮರ್ಶಕರನ್ನು, ಚಿಂತಕರನ್ನು, ಲೇಖಕರನ್ನು ಈ ನಾಡು ಕಳೆದುಕೊಳ್ಳುತ್ತಿತ್ತು. ಸಾಹಿತ್ಯ ಲೋಕಕ್ಕೆ ನಷ್ಟವಾಗುತ್ತಿತ್ತು ಎಂಬುದರಲಿ ಎರಡು ಮಾತಿಲ್ಲ.
ಓದುವ ದಿನಗಳಲ್ಲಿ ಪ್ರಬಂಧ, ಆಶುಭಾಷಣ, ಮಿಮಿಕ್ರಿ, ಏಕ ಪಾತ್ರಾಭಿನಯ ಚರ್ಚಾ ಸ್ಪರ್ಧೆ ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಓದುವ ದಿನಗಳಲ್ಲಿ ಪ್ರಬಂಧ ಆಶುಭಾಷಣ ಮಿಮಿಕ್ರಿ, ಏಕ ಪಾತ್ರಾಭಿನಯ, ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಸರಣಿಯೋಪಾದಿಯಲ್ಲಿ ಪ್ರಶಸ್ತಿಗಳನ್ನು ಪಡೆದದ್ದು ಒಂದು ಅವಿಸ್ಮರಣೆಯ ಮೈಲಿಗಲ್ಲು. ಎಲ್ಲೋ ಕಾಡಲ್ಲಿ ಜನಿಸಿ ನಾಡಲ್ಲಿ ಹೆಸರು ಉಳಿಯುವ ಸಾಧನೆ ಮಾಡುವುದು ಸುಲಭದ ಮಾತಲ್ಲ. ಅದೊಂದು ಆತ್ಮವಿಶ್ವಾಸದ ಹರಿಗೋಲು. ನಿಷ್ಠೆ ಹಾಗೂ ಪ್ರಾಮಾಣಿಕ ಪ್ರಯತ್ನದ ಫಲ. ತನ್ನಂತೆ ನೊಂದವರ ದನಿಯಾಗುವ ಹಂಬಲ. ತನಗೆ ಸಿಕ್ಕ ಗುರುಗಳಂತೆ ತನ್ನ ವಿದ್ಯಾರ್ಥಿಗಳಿಗೆ ಉತ್ತಮ ಗುರುವಾಗುವ ಹೆಬ್ಬಯಕೆ ಹೊಂದಿರುವ ಇವರ ದೊಡ್ಡ ಸಂಕಲ್ಪವು ಮೆಚ್ಚುವಂಥದ್ದು.
ಇವರು ಮಿಮಿಕ್ರಿ ಮಾಡುತ್ತಿದ್ದಿದ್ದರು ಎಂದಾಗ ನನಗೆ ನೆನಪಾಗಿದ್ದು ಖ್ಯಾತ ಬಂಡಾಯ ಕವಿಗಳಾಗಿದ್ದ ದೇವನೂರ ಮಹಾದೇವರವರು ರಚಿಸಿರುವ ಜೋಗತಿಯಮ್ಮಂದಿರ ಸಂಭಾಷಣೆೆ ಇಲ್ಲಿ ವಿವಿಧ ಹೆಣ್ಣುಗಳ ಧ್ವನಿಯಲ್ಲಿ ಜೋಗತಿಯರ ಸ್ಥಾನದಲ್ಲಿ ಸಂಭಾಷಣೆ ಮಾಡಿದ್ದು ನಿಜಕ್ಕೂ ಅಮೋಘ ಅವರ ಸಂಭಾಷಣೆಗಳು ನನ್ನ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿವೆ.
ಹೊಸೂರು ರಸ್ತೆಯ ಕ್ರೈಸ್ಟ್ ಯೂನಿವರ್ಸಿಟಿಯು ಕವಿಯಾಗಿ ಒಂದು ಐಡೆಂಟಿಟಿ ನೀಡಿತು ಎನ್ನುವ ಇವರು ಅಲ್ಲಿನ ಕನ್ನಡ ಸಂಘದ ಶ್ರೀನಿವಾಸ್ ರಾಜ್ ಮೇಷ್ಟ್ರು ತನ್ನ ಕಾವ್ಯ ಜೀವನದ ಪ್ರಾತಸ್ವರಣೀಯ ಗುರುಗಳೆಂದು ಮೇ
ಮೆಲುಕು ಹಾಕುತ್ತಾರೆ. ಇವರು ಪಿಯುಸಿ ಇಂದ ಎಂ.ಪಿಲ್. ಪದವಿಯವರೆಗೆ ನಿರಂತರವಾಗಿ ಏಳು ಬಾರಿ “ಬೇಂದ್ರೆ ಸ್ಮೃತಿ ಅಂತರ್ ಕಾಲೇಜು ರಾಷ್ಟ್ರಮಟ್ಟದ ಕಾವ್ಯ ಸ್ಪರ್ಧೆ”ಯಲ್ಲಿ ಬಹುಮಾನ ಪಡೆದಿರುವುದು ಯಲ್ಲಪ್ಪನವರ ಕಾವ್ಯ ಪ್ರೀತಿ ಹಾಗೂ ಪ್ರಬುದ್ಧ ಸಾಹಿತ್ಯ ರಚನೆಯ ಪ್ರತಿಬಿಂಬವಾಗಿದೆ ಹಾಗೂ ಹೊಸದಾಗಿ ಕಾವ್ಯ ರಚಿಸುವಂತಹ ಕಾವ್ಯಸಕ್ತರಿಗೆ ಸ್ಪೂರ್ತಿಯ ಸೆಲೆಯಾಗಿದೆ.
ಇಲ್ಲಿ ಮತ್ತೊಂದು ವಿಶೇಷತೆಯೆಂದರೆ ಬಹುಮಾನ ಪಡೆದವರನ್ನು ನಾಡಿನ ಸುಪ್ರಸಿದ್ಧ ಕವಿಗಳ ಮನೆಗಳಿಗೆ ಕರೆದುಕೊಂಡು ಹೋಗಿ ಅವರೊಂದಿಗೆ ಊಟ ತಿಂಡಿ ಸೇವನೆಯ ಜೊತೆಗೆ ಅವರ ಕಾವ್ಯ ಬದುಕಿನ ವಿಚಾರಗಳನ್ನು ಚರ್ಚಿಸುವಾಗ ಗೋಪಾಲಕೃಷ್ಣ ಅಡಿಗರ ಮನೆಯಲ್ಲಿ ಇವರ ಒಡಲಾಳ ಕವಿತೆ ಓದಿದ್ದು, ಶಿವರಾಮ ಕಾರಂತರು, ಶಾಂತಿನಾಥ ದೇಸಾಯಿ, ಪು.ತಿ.ನ. ಸೇರಿದಂತೆ ಹಲವು ದಿಗ್ಗಜ ಕವಿಗಳಿಂದ ಬಹುಮಾನ ಪಡೆದಿದ್ದನ್ನು ತುಂಬಾ ಸಂತಸದಿಂದ ಪ್ರೇಕ್ಷಕರೊಂದಿಗೆ ಹಂಚಿಕೊಂಡರು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಮಾಡಿದ ಸಾಹಿತ್ಯ ಸಾಧನೆಯಾಗಿದೆ.
ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಯ್ಯ, ಡಿ.ಆರ್. ನಾಗರಾಜು, ಡಾ. ಹಂಪ ನಾಗರಾಜಯ್ಯ, ಜಿ.ಎಸ್.ಎಸ್. ಸೇರಿದಂತೆ ಹಲವು ಸಾಹಿತ್ಯ ರತ್ನಗಳ ಪ್ರೋತ್ಸಾಹದಿಂದ ತಾನು ಇಷ್ಟೆಲ್ಲಾ ಸಾಧಿಸಿದೆ ಎನ್ನುವ ಇವರ ಮಾತುಗಳು ಪ್ರೋತ್ಸಾಹ ನೀಡುವ ಮನಸ್ಸು ಬೆನ್ನು ತಟ್ಟುವ ಕೈಗಳು ಇದ್ದಾಗ ಅಂಬರವನ್ನಾದರೂ ಸ್ಪರ್ಶಿಸಿ ಬರವ ಆನೆ ಬಲ ಬರುತ್ತದೆ ಎಂಬುದನ್ನು ರುಜುವಾತ್ ಪಡಿಸಲು ಇವರಿಗಿಂತ ನಿದರ್ಶನ ಬೇಕಿಲ್ಲ.
ಯಲ್ಲಪ್ಪನವರು ನಾಡಿನಾದ್ಯಂತ ಕವಿಯಾಗಿ ಒಳ್ಳೆಯ ಹೆಸರು ಕೀರ್ತಿ ಸಂಪಾದಿಸಿದ್ದರು ಇವರು ಅಧಿಕೃತವಾಗಿ ಸಾರಸ್ವತ ಲೋಕ ಪ್ರವೇಶಿಸಿದ್ದು “ಕಡಲಿಗೆ ಕಳಿಸಿದ ದೀಪ” ಇವರ ಪ್ರಥಮ ಕವನ ಸಂಕಲನದ ಮೂಲಕ 2018ರಲ್ಲಿ. ಇದು ಆನ್ಕ್ಲೆಟ್ಸ್ ಎಂಬ ಶೀರ್ಷಿಕೆಯಲ್ಲಿ ಆಂಗ್ಲ ಭಾಷೆಗೂ ಅನುವಾದಗೊಂಡಿದೆ. “ಚಿಟ್ಟೆ ಮತ್ತು ಜೀವಯಾನ”, “ನವಿಲಿಗೆ ಬಿದ್ದ ಕತ್ತಲ ಕನಸು”, “ಕಣ್ಣ ಪಾಪೆಯ ಬೆಳಕು” ಇವು ಇವರ ಇತರ ಕವನ ಸಂಕಲನಗಳಾಗಿದ್ದು ಅವುಗಳಿಂದ ಹಲವಾರು ಕವಿತೆಗಳನ್ನು ನಮಸ್ಕಾರ ನಮ್ಮ ಕರ್ನಾಟಕ ಕಾರ್ಯಕ್ರಮದಲ್ಲಿ ವೀಕ್ಷಕರ ಮುಂದೆ ಓದಿ ಅವರ ಕಾವ್ಯದ ಸಾರವನ್ನು ರಾಸಾಯನದಂತೆ ಉಣಬಡಿಸಿದರು. “ಇಪ್ಪತ್ತೆರಡರ ಅಳಲು” ಎಂಬ ಪ್ರಬಂಧ ಸಂಕಲನ ಇವರೊಬ್ಬ ಯಶಸ್ವಿ ಪ್ರಬಂಧಕಾರರೆಂದು ನಿರೂಪಿಸಿದೆ. ಜೊತೆಗೆ “ಮಡಿವಾಳ ಮಾಚದೇವ”, “ಗೋಪಾಲಕೃಷ್ಣ ಅಡಿಗರ ಕಾವ್ಯದ ಬಗ್ಗೆ ಎಂ.ಫಿಲ್. ಸಂಪ್ರಬಂಧ”, “ಗೋಪಾಲಕೃಷ್ಣ ಅಡಿಗರು ಹಾಗೂ ಅನಂತರದ ಕನ್ನಡ ಸಾಹಿತ್ಯದ ಸಂಬಂಧ ಅಂತರಗಳ ಪಿ.ಎಚ್.ಡಿ” ಮಹಾಪ್ರಬಂಧ ಇವರ ಸಂಶೋಧನಾ ಗ್ರಂಥಗಳಾಗಿವೆ. ಇವರದು ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕವಿಗೋಷ್ಠಿಗಳಲ್ಲಿ ಕವಿತ ವಾಚನ ಮಾಡಿದ ಹೆಗ್ಗಳಿಕೆ ಒಂದೆಡೆಯಾದರೆ 500ಕ್ಕೂ ಹೆಚ್ಚು ಲೇಖನಗಳು ರಾಜ್ಯದ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕಗಳಲ್ಲಿ ಪ್ರಕಟಗೊಂಡು ಸಾಹಿತ್ಯ ಕ್ಷೇತ್ರದ ಇವರ ಅಭೂತಪೂರ್ವ ಕೊಡುಗೆಯನ್ನು ಸಾರುತ್ತದೆ.
ಇವರ ಸಾಧನೆಗೆ ಗರಿ ಮೂಡಿಸುವಂತೆ ಕೇಂದ್ರ ಪಠ್ಯಕ್ರಮದ ಏಳು ಮತ್ತು ಎಂಟನೇ ತರಗತಿ ಹಾಗೂ ರಾಜ್ಯ ಪಠ್ಯ ಕ್ರಮದ 9ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಕನ್ನಡ ಪಠ್ಯಪುಸ್ತಕ ಹಾಗೂ ಪದವಿ ಪುಸ್ತಕಗಳಲ್ಲಿ ಇವರ ಬರಹಗಳು ಪಾಠಗಳಾಗಿವೆ.
2018ರಲ್ಲಿ ಗೋವಾದಲ್ಲಿ ನಡೆದ ಭಾರತದ 22 ಭಾಷೆಗಳ 72 ಕವಿಗಳ 72 ಗಂಟೆಗಳ ಸತತವಾಗಿ ಕಾವ್ಯವಾಸಿಸಿ ನಿರ್ಮಿಸಿದ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಕನ್ನಡ ಕಾವ್ಯವಾಸಿಸಿ ನಮ್ಮ ನಾಡಿನ ಹಿರಿಮೆ ಗರಿಮೆಯನ್ನು ಹೆಚ್ಚಿಸಿದ್ದಾರೆ. 10ನೇ ತರಗತಿಯಲ್ಲಿ ಇವರ ಬರೆದ ಕವಿತೆ ನಿಜಕ್ಕೂ ಬರಗಲ್ಲದೆ ಬೇರೇನೂ ಆಗಿರಲು ಸಾಧ್ಯವಿಲ್ಲ. ವಯಸ್ಸಿಗೆ ಮೀರಿದ ಅನುಭವ ಕವಿಗೆ ಪ್ರಬುದ್ಧತೆಯನ್ನು ತಂದುಕೊಡುತ್ತದೆ. ಇವರ ವಯಸ್ಸಿಗೆ ಮೀರಿದ ಕಷ್ಟಗಳು, ಸುತ್ತಲಿನ ಅವಮಾನಗಳು, ನನ್ನ ಆಹಾರ ವಯಸ್ಸಿಗೆ ಮೀರಿದ ಅನುಭವ ಕವಿಗೆ ಪ್ರಬುದ್ಧತೆಯನ್ನು ತಂದುಕೊಡುತ್ತದೆ. ಇವರ ವಯಸ್ಸಿಗೆ ಮೀರಿದ ಕಷ್ಟಗಳು ಸುತ್ತಲಿನ ಅವಮಾನಗಳು, ನನ್ನ ಆಹಾರಕ್ಕಾಗಿ, ಹುಟ್ಟಿನ ಕಾರಣಕ್ಕಾಗಿ ಅನುಭವಿಸಿದ ನೋವುಗಳು, ಸಾಮಾಜಿಕ ಶೋಷಣೆ ಇವುಗಳನ್ನೆಲ್ಲ ಮೆಟ್ಟಿ ಅವುಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ನಮ್ಮ ನಾಡಿನ ತೊಟ್ಟಿಲಿನಂತಹ ಜನರ ಪ್ರೀತಿಯ ನಡುವೆ ಮಗುವಾದೆ ಎಂದು ಅತ್ಯಂತ ಖುಷಿಯಿಂದ ಎಲ್ಲರೊಂದಿಗೆ ಹಂಚಿಕೊಂಡರು.
ನಾಡಿನ ಯಾವುದೇ ಸಮುದಾಯದ ವ್ಯಕ್ತಿಗಳನ್ನು ಜಾತಿ ಧರ್ಮ ಭಾಷೆಗಳ ಭೇದವಿಲ್ಲದೆ ಒಬ್ಬ ವಿದ್ಯಾರ್ಥಿಯ ಆತ್ಮವಿಕಾಸಕ್ಕೆ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಶಿಕ್ಷಣವನ್ನು ಕೊಡುವ ಗುರುಗಳು ಇವರಿಗೆ ಪಿಯುಸಿಯಲ್ಲಿ ದೊರೆತು ಇಂಗ್ಲಿಷ್ ಪ್ರೊಫೆಸರ್ ರಾಮಕೃಷ್ಣ ಆಶ್ರಮದ ಸನ್ಯಾಸಿನಿಯಾದ ಶಾಂತಮಣಿಯವರ ಪ್ರೋತ್ಸಾಹ ದೊಂದಿಗೆ ಭಗವದ್ಗೀತೆಯನ್ನು ಕಂಠಪಾಠ ಮಾಡಿ ಅಂತರ್ ಕಾಲೇಜು ಸ್ಪರ್ಧೆಗಳಲ್ಲಿಿ ಭಾಗವಹಿಸಿ ಭಗವದ್ಗೀತೆಯನ್ನು ವಾಚಿಸಿ ಅದರ ಸಾರಾಂಶವನ್ನು ಬಿತ್ತರಿಸಿ ಬಹುಮಾನ ಪಡೆಯುತ್ತಿದ್ದರು. ಭಗವದ್ಗೀತೆಯ ಹೃದಯ ಭಾಗವಾದ ಭಕ್ತಿ ಯೋಗದ ಶ್ಲೋಕಗಳನ್ನು ಪುಂಖಾನುಪುಂಖವಾಗಿ ವಾಚಿಸುತಿದ್ದರೆ ಕೇಳುಗರು ಒಂದಿಷ್ಟು ಪುಳಕಗೊಂಡರು. ಯುದ್ಧ ಭೂಮಿಯಲ್ಲಿ ಹುಟ್ಟಿದ ಮಹಾಕಾವ್ಯವಾದ ಭಗವದ್ಗೀತೆ ತನ್ನ ಮೇಲೆ ಅಗಾಧ ಪ್ರಭಾವವನ್ನು ಬೀರಿದ್ದನ್ನು ಬಿಡಿಸಿಟ್ಟರು.
ಈ ಸಮಯ ಬದಲಾಗುತ್ತದೆ ಎಂಬ ಭಗವದ್ಗೀತೆಯ ಸಾಲು ದುಃಖದಲ್ಲಿರುವವರೆಗೂ ಸಾಂತನ ಸಮಾಧಾನ ನೀಡಿದರೆ, ಸುಖವಾಗಿ ಇರುವವರಿಗೆ ಎಚ್ಚರಿಕೆಯನ್ನು ನೀಡುತ್ತದೆ ಎಂದು ಉಲ್ಲೇಖಿಸುತ್ತಾ
ದಿವ್ಯ ರವರು ಮತ್ತಷ್ಟು ವಿಚಾರಗಳನ್ನು ಚರ್ಚಿಸಿದರು. ಯಲ್ಲಪ್ಪನವರ ಶೈಕ್ಷಣಿಕ ಬದುಕಿನಲ್ಲಿ ದೊರೆತ ಅಸಂಖ್ಯಾತ ಕನ್ನಡ ಮೇಷ್ಟ್ರುಗಳು ಇವರ ಮೇಲೆ ಅಗಾಧವಾದ ಪ್ರಭಾವವನ್ನು ಬೀರಿದ್ದು ತಾನು ಕೂಡ ಕನ್ನಡ ಮೇಷ್ಟ್ರೇ ಆಗಬೇಕೆಂಬ ಅಧಮ್ಮ ಹಂಬಲದಿಂದ ನನಗೆ ಸಿಕ್ಕ ಮೂರ್ನಾಲ್ಕು ಕೆಲಸಗಳನ್ನು ಕೈಚೆಲ್ಲಿದ್ದು ಇವರಿಗೆ ಕನ್ನಡದ ಮೇಲಿನ ಪ್ರೀತಿಯ ಸಂಕೇತವಾಗಿದೆ. ಇದನ್ನು ಕೇಳಿದ ನಮಗೆಲ್ಲ ಇವರ ಬಗ್ಗೆ ಇದ್ದ ಅಭಿಮಾನ ದುಪ್ಪಟ್ಟಾಯಿತು.
ಯಲ್ಲಪ್ಪನವರ ಬಗ್ಗೆ ಹೆಮ್ಮೆಯ ವಿಚಾರವನ್ನು ನೋಡುವುದಾದರೆ ನಿಮಾನ್ಸ್ ನಲ್ಲಿ ಕೌನ್ಸಿಲಿಂಗ್ಗ್ ತರಬೇತಿ ಪಡೆದು ಸತತ 15 ರಿಂದ 20 ವರ್ಷಗಳ ಕಾಲ ತನ್ನ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಮಾಡಿ ಅವರ ಮನೋ ದೈಹಿಕ ಸಮಸ್ಯೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿ ಸಲ್ಲಿಸಿದ ವರದಿಯನ್ನು ದೇಶದ ಖ್ಯಾತ ಮನೋರೋಗ ತಜ್ಞರಾದ ಪ್ರೊ. ಸಿ. ಆರ್. ಚಂದ್ರಶೇಖರ್ ರವರು ಇತರ ದೇಶಗಳ ಸೆಮಿನಾರ್ನಲ್ಲಿ ಪ್ರಾತ್ಯಕ್ಷಿಕೆಯಾಗಿ ಬಳಸಿಕೊಂಡಿದ್ದು ಇವರ ಮತ್ತೊಂದು ಸಾಧನೆಯ ಮೈಲಿಗಲ್ಲಾಗಿದೆ.
ಪ್ರತಿಯೊಬ್ಬರ ಸಾಹಿತ್ಯವನ್ನು ಓದಿ ಜ್ಞಾನ ಸಂಪಾದಿಸಬೇಕು. ಆದರೆ ಯಾರನ್ನು ಅನುಕರಿಸದೆ ಸ್ವಂತಿಕೆ ಬರಹದ ಶೈಲಿ ರೂಢಿಸಿಕೊಳ್ಳಬೇಕೆನ್ನುವ ಯಲ್ಲಪ್ಪನವರು, ಅದಕ್ಕಾಗಿ ತಾನು ಪ್ರಜ್ಞಾಪೂರ್ವಕವಾಗಿ ಅಧ್ಯಯನ ಮಾಡಿ ಭೂತ ಮತ್ತು ವರ್ತಮಾನಗಳನ್ನು ಸಮಕಾಲಿನಗೊಳಿಸಿ ನೊಂದ ಮನಸ್ಸುಗಳಿಗೆ ಧನಿಯಾಗುವ ನಿಟ್ಟಿನಲ್ಲಿ ಕಾವ್ಯ ಕೃಷಿಗೈದಿದ್ದನ್ನು ಚಂದನ ವಾಹಿನಿಯ ಮೂಲಕ ಕನ್ನಡಿಗರ ಮನ ಮನೆಗಳಿಗೆ ತಲುಪಿಸಿದರು.
ಕನ್ನಡ ಸಾಹಿತ್ಯ ಸೇವೆ ಮಾಡಲು ಬಯಸುವ ಯುವಕರಿಗೆ ಉತ್ಸಾಹಿ ಬರಹಗಾರರಿಗೆ ಕವಿತೆ ರಚಿಸುವ ಅಭಿಲಾಷೆ ಹೊಂದಿರುವವರಿಗೆ ಹಲವಾರು ಉಪಯುಕ್ತ ಟಿಪ್ಸ್ ಗಳನ್ನು ನೀಡಿದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿತೆ ಹೀಗೆ ಇರಬೇಕೆಂಬ ಮಾದರಿ ಯಾವುದು ಇಲ್ಲ. ತನ್ನ ಜೀವನ ಅನುಭವವನ್ನು ಕಲಾತ್ಮಕವಾಗಿ ಜನರ ವಿವೇಕವನ್ನು ಅರಳಿಸುವ ಹಾಗೆ, ವ್ಯಕ್ತಿತ್ವ ವಿಕಸನ ಮಾಡುವ ಹಾಗೆ, ಅಭಿವ್ಯಕ್ತಿಸುವ ಕಲೆಯ ಕಡೆಗೆ ಗಮನ ಕೊಟ್ಟು ಕವಿತೆ ರಚಿಸಬೇಕೆಂಬ ಕಿವಿಮಾತು ಹೇಳಿದರು. ಈಗಾಗಲೇ ಕನ್ನಡ ಸಾರಸ್ವತ ಲೋಕಕ್ಕೆ ಸೇರಿರುವ ಮಹಾನ್ ಕವಿಗಳ ಕಾವ್ಯವನ್ನು, ಕನ್ನಡ ಕಾವ್ಯ ಪರಂಪರೆಯನ್ನು ಓದಿ ಅವರು ಒಂದು ವಸ್ತುವನ್ನು ಹೇಗೆ ಕಾವ್ಯವಾಗಿಸಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಿ, ತಾನು ಅದನ್ನು ಬೇರೆ ಯಾವ ಆಯಾಮಗಳಲ್ಲಿ ತನ್ನದೇ ಆದ ಶೈಲಿಯಲ್ಲಿ ಬರೆಯಬೇಕು ಎಂಬುದನ್ನುರಿತು ಕಾವ್ಯ ರಚಿಸಲು ಸಲಹೆ ನೀಡಿದರು.
ಒಂದು ಬೀಜ ಭುವಿಗೆ ಬೀಳಬೇಕು ಅದನ್ನು ತನ್ನ ಪರಿಸರಕ್ಕೆ ತಕ್ಕಂತೆ ಗಾಳಿ ಬೆಳಕು ಗೊಬ್ಬರಗಳನ್ನೀರಿಕೊಂಡು ಬೆಳೆಯುವಂತೆ ನೋಡಿಕೊಳ್ಳಬೇಕು. ಅದನ್ನು ಬೇರೆಯವರು ಚಿವುಟಿದರೂ ಮತ್ತೆ ಚಿಗುರುತ್ತದೆ. ಅದರಂತೆ ನಾವು ಕಾವ್ಯ ರಚಿಸುತ್ತಾ ನಮ್ಮ ಪಾಡಿಗೆ ನಾವು ಸಾಗಬೇಕು, ಬೇರೆಯವರು ತೊಂದರೆ ಕೊಟ್ಟರೂ ನಾವು ಮತ್ತೆ ಪುಟಿದೆದ್ದು ನಿಲ್ಲಬೇಕು, ಆಗ ಹೆಸರು ಕೀರ್ತಿ ಅದೇ ನಮ್ಮನರಸಿ ಬರುತ್ತದೆ ಎಂಬ ಮಾರ್ಗದರ್ಶನ ಮಾಡಿದರು.
ಜೊತೆಗೆ ಕೃತಿ ಚೌರ್ಯದ ಬಗ್ಗೆ ಒಂದಷ್ಟು ಚರ್ಚೆ ನಡೆಯಿತು. ಒಂದೇ ತಿಂಗಳಲ್ಲಿ ಮೂರು ಮುದ್ರಣ ಕಂಡ ಇವರ ಚಿಟ್ಟೆ ಮತ್ತು ಜೀವಯಾನ ಕವನ ಸಂಕಲನದ ಕವಿತೆಗಳು ನಕಲು ಆಗಿದ್ದವು. ಆದರೆ ನಾನು ಅವರ ಕಾವ್ಯ ಬದುಕು ಹಾಳಾಗಬಾರದೆಂದು ಅವರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳಲಿಲ್ಲವೆಂದು ವಿಷಾದದಿಂದ ನುಡಿದು, ಅದರಿಂದ ಹೊರಬಂದು ಸ್ವಂತಿಕೆ ದಾರಿ ಕಂಡುಕೊಂಡು ಕಾವ್ಯ ರಚಿಸಲು ಸಲಹೆ ನೀಡಿದರು.
ಒಟ್ಟಾರೆ ಡಾ. ಟಿ. ಯಲ್ಲಪ್ಪನವರ ಅಮೋಘ ಸಾಹಿತ್ಯ ಸೇವೆಗೆ ಸಂದ ಪ್ರಶಸ್ತಿ ಮತ್ತು ಬಹುಮಾನಗಳಿಗೆ ಮಿತಿಯಿಲ್ಲ. “ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ” “ವರ್ಧಮಾನ ಪ್ರಶಸ್ತಿ” “ಸಿದ್ದಲಿಂಗಯ್ಯ ಕಾವ್ಯ ಪ್ರಶಸ್ತಿ” “ಬೇಂದ್ರೆ ಕಾವ್ಯ ಪ್ರಶಸ್ತಿ” ಸೇರಿದಂತೆ ಹಲವಾರು ಬಹುಮಾನಗಳಿಗೆ ಭಾಜನರಾಗಿದ್ದರೂ, ಕವಿಯದು ತನ್ನದೇನು ಸಾಧನೆ ಇಲ್ಲ ಎನ್ನುವ ವಿನಮ್ರಭಾವ, ಅದೇ ಸರಳತೆ, ಸೌಜನ್ಯತೆ, ಕಾವ್ಯ ಪ್ರಿಯರಿಗೆ ಇವರು ಆಪ್ತರಾಗಲು ಕಾರಣವಾಗುತ್ತದೆ.
ಇಂತಹ ಅದ್ಭುತ ಸಾಧಕರೊಬ್ಬರನ್ನು ನಾಡಿಗೆ ಪರಿಚಯಿಸಿದ ಚಂದನ ವಾಹಿನಿಗೆ ಧನ್ಯವಾದಗಳು.
ಅನುಸೂಯ ಯತೀಶ್