ಕರ್ನಾಟಕ ರಾಜ್ಯೋತ್ಸವ ವಿಶೇಷ

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬರೆದ ಬರಹ

ಜಿ. ಹರೀಶ್ ಬೇದ್ರೆ

*ಸರ್ಕಾರಿ ಶಾಲೆಗಳು ಉಳಿಸಬೇಕು ಬಲಪಡಿಸಬೇಕು ಎಂದರೆ ಮೊದಲು ನಮ್ಮ ಮನಸ್ಥಿತಿಗಳು ಬದಲಾಗಬೇಕು. ನಾವೆಲ್ಲಾ ಓದಿದ್ದು ಸರ್ಕಾರಿ ಶಾಲೆ ಕಾಲೇಜುಗಳಲ್ಲೆ. ಅಲ್ಲಿ ಓದಿಯೇ ಇಂದು ನಮ್ಮ ಬದುಕನ್ನು ಅಚ್ಚುಕಟ್ಟಾಗಿ ರೂಪಿಸಿಕೊಂಡಿದ್ದೇವೆ. ಆದರೆ ಆಗಿನ ಕಾಲಮಾನಕ್ಕೂ ಇಂದಿನ ಕಾಲಮಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅಂದು ಇದ್ದದ್ದೇ ಸರ್ಕಾರಿ ಶಾಲೆಗಳು. ಎಲ್ಲೋ ದೊಡ್ಡ ದೊಡ್ಡ ಊರುಗಳಲ್ಲಿ ಬೆರಳೆಣಿಕೆಯ ಖಾಸಗಿ ಶಾಲೆಗಳಿದ್ದವು. ಆಗ ಶಾಲೆಗಳ ಸ್ಥಿತಿಗತಿಗಳು ಹೇಗೇ ಇದ್ದರೂ ಕಲಿಕೆ ಮುಖ್ಯವಾಗಿತ್ತು. ಆದರೆ, ಈಗ ನಾವೇ ನಮ್ಮ ಮಕ್ಕಳಿಗೆ ಕಲಿಕೆ ಮಾತ್ರವಲ್ಲ ಕಲಿಯುವ ಸ್ಥಳದಲ್ಲಿ ಮಕ್ಕಳಿಗೆ ಬೇಕಾದ ಎಲ್ಲಾ ಅವಶ್ಯಕ ವ್ಯವಸ್ಥೆಗಳು ಇದೆಯೇ ಎಂದು ನೋಡುತ್ತೇವೆ. ಈಗಲೂ ಅಲ್ಲಿ ಅಲ್ಪಸ್ವಲ್ಪ  ಸುಧಾರಣೆಗಳು ಮಾಡಿದ್ದಾರೆಯೇ ಹೊರತೂ ಖಾಸಗಿ ಶಾಲೆಗಳಂತೆ ಸುಸಜ್ಜಿತ ಕಟ್ಟಡಗಳು,  ಶಾಲಾ ಕೊಠಡಿಗಳು, ವ್ಯವಸ್ಥೆಗಳು ಇರುವುದಿಲ್ಲ. ಹಾಗಾಗಿ ತಂದೆತಾಯಿಯರು ತಮಗೆ ಎಷ್ಟೇ ಕಷ್ಟವಾದರೂ ತಮ್ಮ ಮಕ್ಕಳು ಒಳ್ಳೆಯ ಶಾಲೆಯಲ್ಲಿ ಓದಲಿ ಎಂದು ಬಯಸುತ್ತಾರೆ.   ಖಾಸಗಿ ಶಾಲೆಗಳಂತೆ ಎಲ್ಲಾ ರೀತಿಯ ವ್ಯವಸ್ಥೆಗಳು ದೊರೆಯುವಂತೆ ಆಗಬೇಕು ಜೊತೆಗೆ ಓದುವ ಮಕ್ಕಳು ಎಲ್ಲೇ ಇದ್ದರೂ ಚೆನ್ನಾಗಿ ಓದುತ್ತಾರೆ, ತಾವು ಓದಿದಂತೆ ತಮ್ಮ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಲಿ ಎಂಬ ಮನೋಭಾವನೆ ಪೋಷಕರಲ್ಲಿ ಬರಬೇಕು.

*ಶಿಕ್ಷಕ ವೃತ್ತಿ ಮಾಡುವ ಶೇ. ೯೭ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕೇಳಿಸುವುದಿಲ್ಲ ಏಕೆಂದರೆ ಇವರೂ ಕೂಡ ಇತರ ತಂದೆತಾಯಿಯರಂತೆಯೆ ತಾನೆ ಇರುವುದು. ಇವರಿಗೂ ತಮ್ಮ ಮಕ್ಕಳು ಇತರ ಮಕ್ಕಳಂತೆ ಬೆಳೆಯಲಿ ಎಂದು ಅನಿಸುವುದು ಸಹಜವೆ. ಅಲ್ಲದೆ ನಾವು ಕಷ್ಟ ಪಡುವುದೇ ನಮ್ಮ ಹಾಗೂ ನಮ್ಮ ಮಕ್ಕಳ ಏಳಿಗೆಗಾಗಿ ಎಂದಾಗ  ಮಕ್ಕಳು ಖಾಸಗಿ ಶಾಲೆಯಲ್ಲಿ ಓದುವುದು ತಪ್ಪೇನಲ್ಲ.

*ಶಿಕ್ಷಣ ಸಚಿವರು, ಅಧಿಕಾರಿಗಳು ಏಕೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಒತ್ತಾಯಿಸುವುದಿಲ್ಲ ಎಂದರೆ ಉತ್ತರ ಸುಸ್ಪಷ್ಟ, ಏನೆಂದರೆ ಅವರದೇ ಅಥವಾ ಅವರಿಗೆ ಬೇಕಾದವರ ಅಥವಾ ಅವರ ಚೇಲಾಗಳ ಶಾಲೆಗಳು ಇರುತ್ತವೆ.  ಇವರು ಎಲ್ಲಾ ಮಕ್ಕಳು ತಮ್ಮ ಶಾಲೆಗೆ ಬರಲೆಂದು ಬಯಸುತ್ತಾರೆಯೇ ಹೊರತು ಬೇರೆ ಕಡೆ ಹೋಗಿ ಎಂದು ಹೇಳಲು ಹೇಗೆ ಸಾಧ್ಯ?  ಅಧಿಕಾರಿಗಳ ಬಗ್ಗೆ ಏನೂ ಹೇಳುವ ಅವಶ್ಯಕತೆ ಇಲ್ಲ ಎಂದು ಭಾವಿಸುವೆ.

*ಕನ್ನಡ ಉಳಿಸಲು ಸರ್ಕಾರ ಹಾಗೂ ಸಾಹಿತ್ಯ ಪರಿಷತ್ತು ಏನು ಮಾಡಬೇಕು ಎಂದರೆ, ಮೊದಲನೇ ತರಗತಿಯಿಂದ ಪದವಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದವರಿಗೆ ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗದಲ್ಲಿ ಇಂತಿಷ್ಟು ಮೀಸಲಾತಿ ನಿಗದಿಪಡಿಸಬೇಕು ಮತ್ತು ಹೊರರಾಜ್ಯದಿಂದ ಇಲ್ಲಿಗೆ ನೇಮಕಾತಿಯಾಗಿ ನೌಕರಿಗೆ ಬರುವವರಿಗೆ ಆರು ತಿಂಗಳಿಂದ ಒಂದು ವರ್ಷದ ಅವಧಿ ನಿಗದಿಪಡಿಸಿ ಅಷ್ಟರೊಳಗೆ ಸಂಪೂರ್ಣವಾಗಿ ಕನ್ನಡದಲ್ಲಿ ವ್ಯವಹರಿಸುವಂತೆ  ಷರತ್ತು ವಿಧಿಸಬೇಕು. ತಪ್ಪಿದಲ್ಲಿ ಅವರ ನೇಮಕಾತಿ ರದ್ದುಗೊಳಿಸುವ ನಿಯಮ ರೂಪಿಸಬೇಕು. ಆಗ ಕರ್ನಾಟಕದಲ್ಲೇ ಇದ್ದು ಯಾವುದೇ ಸಂಕೋಚ ಇಲ್ಲದೆ ಧೈರ್ಯವಾಗಿ ಕನ್ನಡ್ ಗೊತ್ತಿಲ್ಲ ಎನ್ನುವ ಮಾತು ಕೇಳುವುದು ತಪ್ಪುತ್ತದೆ.


ಜಿ. ಹರೀಶ್ ಬೇದ್ರೆ

One thought on “ಕರ್ನಾಟಕ ರಾಜ್ಯೋತ್ಸವ ವಿಶೇಷ

Leave a Reply

Back To Top