ಗಝಲ್
ಜಯಶ್ರೀ.ಭ.ಭಂಡಾರಿ.
ನಾಡವರು ನಾವು ಸಿರಿನಾಡವರು ನಾವು ಎನುತ ಮರಳಿ ಬಂದಿದೆ ರಾಜ್ಯೋತ್ಸವ.
ಕನ್ನಡಕ್ಕಾಗಿ ದುಡಿದು ಮಡಿದವರ ಸೇವೆಗೆ ನಿತ್ಯನಿರಂತರ ಸಂದಿದೆ ರಾಜ್ಯೋತ್ಸವ.
ಭುವನಗಿರಿಯಲಿ ನೆಲೆಸಿದ ಕನ್ನಡಮ್ಮನ ಒಡ್ಡೋಲಗ ಒಮ್ಮೆ ಕಂಡು ಬರಬಾರದೇ
ಭವನಗಳಲಿ ಆಲಸಿ ಭಾವದಿ ಮರೆದು ಹೆಮ್ಮೆ ಅಡಗಿ ಕುಂದಿದೆ ರಾಜ್ಯೋತ್ಸವ
ಹಳದಿ, ಕೆಂಪು ಬಾವುಟ ಅರಿಸಿನ, ಕುಂಕುಮ ಸಂಕೇತ ಮುತ್ತೈದೆ ಚೆಲುವೆ ಅಂಬೆ
ಕಳೆಯ ಕಂಪು ಕಂಗಳದಿ ಬೀರುತ ರಥವನೇರಿ ಸಂಭ್ರಮ ತಂದಿದೆ ರಾಜ್ಯೋತ್ಸವ.
ಕನ್ನಡಿಗರು ತಾಯಿ ಭುವನೇಶ್ವರಿ ದೇವಿಯ ಸೇವೆಗೆ ಸದಾ ಕಂಕಣ ಬದ್ಧರು.
ಸನ್ನಡತೆಯ ವೀರಪುತ್ರರ ಕಾಯುತ ತಾಯಿಯ ಅಭಯ ನಿಂದಿದೆ ರಾಜ್ಯೋತ್ಸವ.
ದೇಶ ವಿದೇಶದಿ ವಾಸಿಸು ತನು ಮನದಿ ಮಾತೃಭಾಷೆಯ ಬಲ್ಮೆಯ ಉಸಿರಿಸು
ಆದೇಶ ಪಾಲಿಸುತ ಅನುದಿನದಿ ಕಂದಮ್ಮಗಳ ನಲ್ಮೆಯು ಎಂದಿದೆ ರಾಜ್ಯೋತ್ಸವ
ಹರಿದು ಹಂಚಿ ಹೋದ ನಾಡಿನ ಪ್ರಾಂತ್ಯಗಳ ವಿಲೀನದ ಸಡಗರದ ಹಬ್ಬವಿದು.
ಮೆರೆದು ಗಂಗ ಕದಂಬ ರಾಷ್ಟ್ರಕೂಟ ಚಾಲುಕ್ಯ ಹೊಯ್ಸಳರ ಮಿಂದಿದೆ ರಾಜ್ಯೋತ್ಸವ.
ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಚನ್ನಮ್ಮಾ ನಮ್ಮವಳೆಂಬುದು ಜಯಳಿಗೆ ಕೆಚ್ಚೆದೆಯು.
ಪಾರತಂತ್ರ್ಯವ ನುಚ್ಚು ನೂರು ಮಾಡಿದ ಧೀರನಾರಿಯರಿಗೆ ವಂದಿದೆ ರಾಜ್ಯೋತ್ಸವ
ಜಯಶ್ರೀ.ಭ.ಭಂಡಾರಿ.
ಸೂಪರ್ mam