ಅಂಕಣ ಸಂಗಾತಿ

ಸಿನಿ ಸಂಗಾತಿ

ಹಿಚ್ಕಿ (ಹಿಂದಿ ಸಿನಿಮಾ)

ಶಿಕ್ಷಕಿ- ವಿದ್ಯಾರ್ಥಿ ಸಂಬಂಧದ ಭಾವಯಾನ

ಹಿಂದಿ ಸಿನಿಮಾ – ಹಿಚ್ಕಿ

ತಾರಗಣ – ರಾಣಿ ಮುಖರ್ಜಿ, ಸುಪ್ರಿಯಾ ಬೆಳಗಾವ್ಕರ್ , ಸಚಿನ್ ಪಿಲ್ಗೌಕರ್, ಹರ್ಷ ಮಾಯಕ್, ಶಿವಕುಮಾರ್ ಸುಬ್ರಮಣ್ಯಂ, ನೀರಜ್ ಕಬಿ ಇತರರು.

ನಿರ್ದೇಶಕ – ಸಿದ್ದಾರ್ಥ್ ಬಿ ಮಲ್ಹೋತ್ರ ,

ಸಂಕಲನ – ಶ್ವೇತಾ ವೆಂಕಟ್ ಮ್ಯಾಥ್ಯೂ

ಸಿನಿಮಾ ಟೋಗ್ರಫಿ -ಅವಿನಾಶ್ ಅರುಣ್

ಸಂಗೀತ – ಜಸ್ಲಿನ್ ಗೋಯಲ್

****

“ಕೆಟ್ಟ ಶಿಕ್ಷಕರಿರಬಹುದು, ಆದರೆ ಕೆಟ್ಟ ಮಕ್ಕಳೆಂಬುದಿಲ್ಲ” ಇದು ” ಹಿಚ್ಕೀ ” ಚಿತ್ರದಲ್ಲಿ, ಚಿತ್ರದ ನಾಯಕಿ ನೈನಾ ಮಾಥೂರ್ – (ರಾಣಿ ಮುಖರ್ಜಿ)ಯವರ ಒಂದು ಸಂಭಾಷಣೆ. ಇಡೀ ಚಿತ್ರ ಹೇಳಲು ಹೊರಟಿರುವುದು ಇದನ್ನೇ.

   ಟುರೇಟ್ ಸಿಂಡ್ರೋಮ್ ಎಂಬ ನರ ದೌರ್ಬಲ್ಯದಿಂದ ಬಳಲುವ ಶಿಕ್ಷಕಿ ಮತ್ತು ಸಮಾಜದ ಕೆಳವರ್ಗದ ಆರ್ಥಿಕವಾಗಿ ಹಿಂದುಳಿದ ಮಕ್ಕಳು ತಮ್ಮನ್ನು ತಾವು ಒಳ್ಳೆಯ ಮಕ್ಕಳೆಂಬುದನ್ನು ಪ್ರತಿಪಾದಿಸಬೇಕಾದ ಸನ್ನಿವೇಶ ಮತ್ತು ಅವರನ್ನು ಇತರ ಮಕ್ಕಳಂತೆ ದಾರಿಗೆ ತರಲು ಆ ಶಿಕ್ಷಕಿ ನಡೆಸುವ ಹೋರಾಟವೇ ಚಿತ್ರದ ಹೂರಣ. ಈ ಟು ರೇಟ್ ಸಿಂಡ್ರೋಮ್  ಎಂಬ  ಅಪರೂಪದ ಕಾಯಿಲೆಯಿಂದ   ಬಳಲುವ ಶಿಕ್ಷಕಿ ಒಳ್ಳೆಯ ಅಂಕ ಡಿಗ್ರಿ ಪಡೆದಿದ್ದರು ಶಿಕ್ಷಕಿಯಾಗಿ ಆಯ್ಕೆಯಾಗದೆ ನಿರಂತರವಾಗಿ ತಿರಸ್ಕೃತವಾಗುತ್ತಾಳೆ. ಆದರೆ ಅವಳ ಪ್ರಯತ್ನ ನಿಂತಿರುವುದಿಲ್ಲ, ಕೊನೆಗೊಂದು ಮಿಷನರಿ ಶಾಲೆಯಲ್ಲಿ ಅವಳಿಗೆ ದೊರೆಯುವುದು ತಾತ್ಕಾಲಿಕ ಹುದ್ದೆ, ಕೇವಲ 14 ಮಕ್ಕಳನ್ನು ಒಳಗೊಂಡ 9 ಎಫ್ ತರಗತಿಯ ಶಿಕ್ಷಕಿಯಾಗಿ ಅವಳ ನೇಮಕಗೊಳ್ಳುತ್ತಾಳೆ.

   9 ಎಫ್ ನ ಮಕ್ಕಳು ಶಾಲೆಯ ಕುಖ್ಯಾತ ಮಕ್ಕಳು ಅವರೆಲ್ಲ, ಕೊಳೆಗೇರಿಯ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು. ಅಲ್ಲಿಯ ಶಾಲೆ ಮುಚ್ಚಿದ್ದರಿಂದ ಆರ್‌ಟಿಇ ಕಾಯ್ದೆ ಅನ್ವಯ ಈ ಮಿಶ್ನರಿ ಶಾಲೆಯಲ್ಲಿ ಒಂದು ಪ್ರತ್ಯೇಕ ವರ್ಗವಾಗಿ ಅವರ ಸೇರ್ಪಡೆ, ಅವರು ಎಲ್ಲರಿಂದಲೂ ತಿರಸ್ಕೃತರು,

 ಮಾತು ಮಾತಿನ ನಡುವೆ ತೊದಲಿಕೆ ಉಂಟಾಗಿ ವಾವ್, ಚಾ , ಚಾ ಎಂದು ಉದ್ಘಾರ ತೆಗೆವಾ, ತನ್ನ ಕೈಗಳಿಂದ ಕೆನ್ನೆ ಒತ್ಕೊಂಡು, ಕತ್ತು ಸರಿಪಡಿಸಿಕೊಳ್ಳುವ ತಮ್ಮ ಶಿಕ್ಷಕಿ ಅವರಿಗೆ ನಗೆ ಪಾಟಲಿನ ವಸ್ತು, ಆದರೆ ಹೆಜ್ಜೆ ಹೆಜ್ಜೆಗೂ ಸವಾಲುಗಳ  ಎದುರಿಸುತ್ತಾ ತನ್ನ ಪ್ರಯೋಗಾತ್ಮಕ ಶಿಕ್ಷಣ ರೂಪರೇಷೆಗಳಿಂದ ಆ ಮಕ್ಕಳ ಮನಸ್ಸನ್ನು ಶಿಕ್ಷಕಿ ನೈನಾ ಮಾಥೂರ್ ಗೆಲ್ಲುತ್ತಾಳೆ.

          ವಾಡಿಯ ಎಂಬ ಶಿಕ್ಷಕ, ಹಾಗೂ ಇತರೆ ಶಿಕ್ಷಕರ ಅಭಿಪ್ರಾಯದಂತೆ ಶಾಲೆಯಿಂದ ಅಮಾನತುಗೊಳ್ಳಲು ಲಾಯಕ್ಕಾಗಿರುವ ವರ್ಗದ ಮಕ್ಕಳನ್ನು ಹೇಗೆ ಶಾಲೆಯ ಮುಖ್ಯ ವಾಹಿನಿಗೆ ಸೇರ್ಪಡೆಗೊಳ್ಳುವಂತೆ ಶಿಕ್ಷಕಿ ಚಮತ್ಕಾರ ಮಾಡುತ್ತಾರೆ ಎಂಬುದು ಚಿತ್ರದ ರೋಚಕತೆ

          ಸಮಾಜದಲ್ಲಿ ಅವಕಾಶ ವಂಚಿತರಾದ ಮಕ್ಕಳು ಹಾಗೂ ತನ್ನ ವಿಶಿಷ್ಟ ಕಾಯಿಲೆಯಿಂದ ಅವಮಾನಿತಳಾದ ಒಬ್ಬ ಶಿಕ್ಷಕಿ ತಮ್ಮ ದೌರ್ಬಲ್ಯಗಳನ್ನು ಮಿತಿಗಳನ್ನು ಶಕ್ತಿಯಾಗಿ ಪರಿವರ್ತಸಿಕೊಳ್ಳಬಲ್ಲರು ಎಂಬುದು ಚಿತ್ರದ ಸಾರಾಂಶ.

      ತನ್ನ ಕಾಯಿಲೆಯಿಂದಾಗಿ ಶಿಕ್ಷಕಿಯಾಗಲು ಅನರ್ಹಳಾಗಿದ್ದ ನೈನ ಮಾಥುರ್ ತಾನು ಸಮರ್ಥಳು ಎಂಬುದನ್ನು ನಿರೂಪಿಸಲು ಸಿಗುವ ಅವಕಾಶವನ್ನು ಬಳಸಿಕೊಂಡು ಕೇವಲ ಆರು ತಿಂಗಳ ಶಿಕ್ಷಕಿ ಆಗದೆ ತನ್ನ ಶಿಕ್ಷಣವೃತ್ತಿಯನ್ನು 25 ವರ್ಷಗಳ ಸೇವೆಯಲ್ಲಿ ಪ್ರಿನ್ಸಿಪಾಲರಾಗಿ ನಿರ್ವಹಿಸಿ ತಾನು ಬೆಳೆಸಿ ಪೋಷಿಸಿದ ತನ್ನ 9 ಎಫ್ ವರ್ಗದ ಅವಕಾಶ ವಂಚಿತ ಮಕ್ಕಳಿಂದಲೇ ವಂದನೆ ಸ್ವೀಕರಿಸುವುದರೊಂದಿಗೆ ಚಿತ್ರ ಅರ್ಥಪೂರ್ಣವಾಗಿ ಕೊನೆಗೊಂಡು ಶಿಕ್ಷಕ ಮಕ್ಕಳು ಅವಿನಾಭಾವ ಸಂಬಂಧವನ್ನು ಧ್ವನಿ ಪೂರ್ಣವಾಗಿ ನಿರೂಪಿಸಿದೆ.

        ಇಡೀ ಚಿತ್ರದ ಯಶಸ್ಸಿನ ಭಾರವನ್ನು ಹೊತ್ತುಕೊಂಡಿರುವ ರಾಣಿ ಮುಖರ್ಜಿ ಇಡೀ ಚಿತ್ರದ ಜೀವಾಳವಾಗಿದ್ದಾರೆ. ಟುರೇಟ್ ಸಿಂಡ್ರೋಂ ಲಕ್ಷಣಗಳನ್ನು ಅಭಿನಯಿಸುವುದರಲ್ಲಿ ಅವರ ಅಭಿನಯ ಚಳಕವನ್ನು ಕಾಣಬಹುದು ವಾ, ವಾ, ಚ , ಛಾ ಎಂಬ ಶಬ್ದಗಳನ್ನು ಹೊರಡಿಸುತ್ತಾ ಕತ್ತನ್ನು ತಿರುಗಿಸಿ, ಕೆನ್ನೆ ತೀಡಿಕೊಂಡು ತಮ್ಮ ವಿಶಿಷ್ಟ ಅಂಗೀಕ ಅಭಿನಯದಿಂದ ಎಲ್ಲರ ಅನುಕಂಪ ಗೆಲ್ಲುತ್ತಾರೆ, ಮಾತ್ರವಲ್ಲ ತನ್ನ ದೌರ್ಬಲ್ಯ ಮೀರಿ ನಾಯಕಿಯನ್ನು ಗೆಲ್ಲಿಸುವ ಅವರ ಛಲ ನಮ್ಮಲ್ಲಿ ಮೆಚ್ಚಿಗೆಯನ್ನು ತರುತ್ತದೆ. ಚಿತ್ರದಲ್ಲಿ ತಂದೆ ಮಗಳ ನಡುವಿನ ಸಂಘರ್ಷವೂ ಮನ ಮಿಡಿಯುವಂತಿದೆ.

     ಸಿನಿಮಾದಲ್ಲಿ ನೈನ್ ಎಫ್ ವರ್ಗದ ವಿದ್ಯಾರ್ಥಿಗಳಾಗಿ ಅಭಿನಯಿಸಿರುವ ಮಕ್ಕಳು ಮನೋಜ್ಞ ಅಭಿನಯ ನೀಡಿದ್ದಾರೆ, ಅವರೆಲ್ಲರ ಅಭಿನಯ ಬಹಳ ಸಹಜವಾಗಿದೆ, ಹೆಜ್ಜೆ ಹೆಜ್ಜೆಗೂ 9 ಎಫ್ ವರ್ಗದ ವಿದ್ಯಾರ್ಥಿಗಳನ್ನು ಹಿಯ್ಯಾಳಿಸುವ ವಾಡಿಯ ಮೇಷ್ಟ್ರು ಅಭಿನಯ ಬಹಳ ಚೆನ್ನಾಗಿದೆ, ಚಿತ್ರದ ಪ್ರಾಂಶುಪಾಲರು ಉತ್ತಮ ಅಭಿನಯ ನೀಡಿದ್ದಾರೆ.

      ನಿರ್ದೇಶಕ ಸಿದ್ದಾರ್ಥ್ ಜಿ ಮಲ್ಹೋತ್ರ ತಮ್ಮ ಚೊಚ್ಚಿಲ ಚಿತ್ರದಲ್ಲಿ ಭರವಸೆಯ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ, ಸಂಗೀತ ಜಸ್ಲಿಂ ರಾಯಲ್ ಅವರದ್ದು.

    ಕೇವಲ ಎರಡು ಗಂಟೆ ಅವಧಿಯ ಚಿತ್ರ ತನ್ನ ವೇಗದ ಗತಿಯಿಂದ ನೋಡಿಸಿಕೊಂಡು ಹೋಗುತ್ತದೆ, ಶಾಲೆ,ಮಕ್ಕಳು, ಶಾಲೆಯ ವಾತಾವರಣ ಎಲ್ಲವನ್ನು ಅಚ್ಚುಕಟ್ಟಾಗಿ ದೃಷೀಕರಿಸಿದ್ದಾರೆ.

2018ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ನೋಡುವಾಗ ನಾವು ನಮ್ಮ ಶಾಲಾ ದಿನಗಳಿಗೆ ಜಾರಿ ನಾವು ಕಂಡಂತಹ ಉತ್ತಮ ಶಿಕ್ಷಕರ, ನಮ್ಮ ಶಾಲಾ ಗೆಳೆಯರ, ನಾವು ಆಡಿದ ಆಟ ಪಾಠಗಳ ನೆನಪಿಗೆ ಜಾರದಿರೆವು.

      ಮಕ್ಕಳನ್ನು ಸಮಾಜ ಕಟ್ಟುವ ರೂವಾರಿಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರದ ಮಹತ್ವವೇನು ಎಂಬುದನ್ನು ಚಿತ್ರ ಮತ್ತೊಮ್ಮೆ ನಿರೂಪಿಸುತ್ತದೆ.

         ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಒಂದು ಉತ್ತಮ ಮಕ್ಕಳಚಿತ್ರವಾಗಿ ಹಿಚ್ಕಿ ಹಿಂದಿ ಸಿನಿಮಾ ಅತ್ಯುತ್ತಮ ಕೊಡುಗೆಯಾಗಿ ಮೂಡಿಬಂದಿದೆ, ನೋಡಲು ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ.


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top