ವಿದ್ಯಾರ್ಥಿಗಳ ಬೆನ್ನಿಗೆ ಬಿದ್ದು ಬೋಧಿಸುವವನೇ ನಿಜವಾದ ಶಿಕ್ಷಕ

ಶಿಕ್ಷಕ ದಿನಾಚರಣೆ ವಿಶೇಷ

ವಿದ್ಯಾರ್ಥಿಗಳ ಬೆನ್ನಿಗೆ ಬಿದ್ದು

ಬೋಧಿಸುವವನೇ ನಿಜವಾದ ಶಿಕ್ಷ

ಜಿ.ಎಸ್.ಹೆಗಡೆ

ಗಿಡವೊಂದನ್ನು ನೆಟ್ಟಾಗ ಅದಕ್ಕೆ ನೀರು, ಗೊಬ್ಬರ ಹಾಕಿ ಬೆಳೆಸಬೇಕು. ಸೂಕ್ತ ರಕ್ಷಣೆಯೂ ಅದಕ್ಕಿರಬೇಕು. ಗಿಡ ನೆಟ್ಟಾಯಿತು. ಇನ್ನು ಅದರ ಪಾಡಿಗೆ ಅದು ಬೆಳೆಯುವುದು ಎಂದು ಭಾವಿಸಿದರೆ ನಮಗಿಷ್ಟದ ರೀತಿಯಲ್ಲಿ ಬೆಳೆಯಲಾರದು. ನಮಗೆ ಬೇಕಾದ ಗಾತ್ರ, ಎತ್ತರ ಆಗಲಾರದು. ನಾವು ಅಂದು ಕೊಂಡ ಕಾಲಕ್ಕೆ ಫಲ ನೀಡದು  ಆಗ ನಾವು  ಅದರ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುವುವೆವು. ಗಿಡಕ್ಕೇನಾದರೂ ಹುಳು ತಗುಲಿತೇ? ಪೋಷಕಾಂಶ ಕಡಿಮೆಯಾಯಿತೇ? ಅಥವಾ ಬೆಳಕು ಸರಿಯಾಗಿ ತಾಗದೇ ಇದ್ದಿತೆ?. ಬಿಸಿಲು ಹೆಚ್ಚಾಯಿತೇ?  ಮುಂತಾದ ಅಂಶಗಳ ಕಡೆ ಗಮನಹರಿಸಿದಾಗ ಗಿಡದ ಬೆಳವಣಿಗೆ ಸರಿಯಾಗುವುದು. ನಾವಂದುಕೊಂಡ ಕಾಲಕ್ಕೆ ಫಲ ನೀಡುವುದು.

     ಇವೇ ವಿಚಾರಗಳನ್ನು ಎಳೆಯ ಮಕ್ಕಳ‌ ಕುರಿತು ಯೋಚಿಸುವುದು ಒಳಿತು. ಕಲಿಯಲು ಬರುವ ಮಕ್ಕಳಲ್ಲಿ ವಿಭಿನ್ನತೆ ಸಹಜ. ಕೆಲವರಿಗೆ ಕಲಿಯುವ ಮಾರ್ಗ ತೋರಿಸಿಕೊಟ್ಟರೆ ಸಾಕು. ಕಲಿಯುತ್ತಾ ಹೋಗುತ್ತಾರೆ. ಸ್ವಕಲಿಕೆ ಅವರಿಗರಿವಿಲ್ಲದೇ ಸಾಗಿರುತ್ತದೆ. ಮುಂದೆ ಸಾಧಿಸುತ್ತಾರೆ ಎನ್ನುವುದು ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಷ್ಟೇ ಸತ್ಯ. ಇನ್ನು ಕೆಲವರಿಗೆ ಹಾಗಲ್ಲ. ಅವರ ಜೊತೆಗಿರಬೇಕು. ಸೂಕ್ತ ಮಾರ್ಗದರ್ಶನ ಮತ್ತು ಅವಲೋಕನ ಬೇಕು.

     ನಾನು ಬಹಳ ಚೆನ್ನಾಗಿ ಪಾಠ ಮಾಡಬಹುದು. ಗಣಿತವನ್ನು ಬಹಳ ಸುಲಭವಾಗಿ ಅರ್ಥೈಸಬಹುದು. ಒಂದಿಷ್ಟು ಮನೆಗೆಲಸ ನೀಡಬಹುದು. ಅದೇ ಕಾಲಕ್ಕೆ ನೀಡಿದ ಹೋಂ ವರ್ಕನ್ನು ನೋಡದೇ ಹೋದಲ್ಲಿ ಸುಲಭವಾಗಿ ಕಲಿತದ್ದು ಸುಲಭವಾಗಿಯೇ ಮರೆತು ಹೋಗುತ್ತದೆ. ಹಾಗೆಂದ ಮಾತ್ರಕ್ಕೆ ಮನೆಗೆಲಸವನ್ನು ನೋಡಿದಾಕ್ಷಣ ಮನದಲ್ಲಿ ಗಟ್ಟಿಯಾಗಿ ಉಳಿಯುತ್ತದೆ ಎಂದು ಅರ್ಥೈಸಲಾಗದು. ಅದು ಮುಂದುವರಿದು ಕಲಿಸಿದ ಕಲಿಕಾಂಶದ ಮುಂದುವರಿದ ಭಾಗ ಅದರಲ್ಲೇ ನಿಂತಿದ್ದು ಅಲ್ಲಿಯ ಕಲಿಕೆ ವಿದ್ಯಾರ್ಥಿಗಳಿಗೆ ಸುಲಭವಾದರೆ ಕಲಿಸಿದ ಶಿಕ್ಷಕನ ಶ್ರಮ ಸಾರ್ಥಕವಾಗುತ್ತದೆ.

     ಕೆಲವೊಮ್ಮೆ ಅಡಚಣೆಗಳು ಉಂಟಾಗುತ್ತದೆ. ಆ ಅಡಚಣೆಗಳು ಯಾವವು—-

* ಇಂದು ಕಲಿಸಿದ ಕಲಿಕಾಂಶ ನಾಳೆ ಮುಂದುವರಿಯುವಾಗ ದಿಢೀರ್ ಎಂದು‌ ಮಳೆ ಹೆಚ್ಚಿ ನೆರೆ ಬರುವ ಸಂಭವವಿರುವುದರಿಂದ ಶಾಲೆಗಳಿಗೆ ರಜೆ ಘೋಷಣೆಯಾಗಿ ಕಲಿತ ಕಲಿಕಾಂಶ ಮರೆಯಬಹುದು.

* ಎರಡನೆಯದಾಗಿ ಇತರ ಚಟುವಟಿಕೆಗಳಲ್ಲಿ ತೊಡಗಿಸಿದಾಗ. ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಸ್ಪರ್ಧೆಗಳು ಮುಂತಾದವುಗಳನ್ನು ನಡೆಸುವಾಗ ಸಾಮಾನ್ಯವಾಗಿ ಶಿಕ್ಷಕರ‌ ಮತ್ತು ವಿದ್ಯಾರ್ಥಿಗಳ ಗಮನ ಆ ಕಡೆ ಹೋಗುವುದು ಸ್ವಾಭಾವಿಕ. ಆಗ ಇಲ್ಲಿ ಕಲಿತ ಕಲಿಕೆ ಮರೆಯಬಹುದು.

* ಮೂರನೆಯದಾಗಿ ಅನಾರೋಗ್ಯ–

ಶಿಕ್ಷಕರಿಗೆ ಅನಾರೋಗ್ಯ ಕಾಣಿಸಿಕೊಂಡರೆ ಮಕ್ಕಳ ಕಲಿಕೆ ಕುಂಠಿತಗೊಳ್ಳುವುದು. ದೀರ್ಘಕಾಲದ ರಜೆಯು ಕಲಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು.

* ನಾಲ್ಕನೆಯದಾಗಿ ಕಲಿಕಾರ್ಥಿಗೆ ಅನಾರೋಗ್ಯ ಕಾಣಿಸಿಕೊಂಡರೂ ಸಹ ಇಡೀ ತರಗತಿಗೆ ನಷ್ಟವಾಗದಿದ್ದರೂ ಕಲಿಕಾರ್ಥಿಗೆ ನಷ್ಟವಾಗುವುದು.

* ಐದನೆಯದಾಗಿ ಶಿಕ್ಷಕರಿಗೆ ಅನ್ಯ ಕೆಲಸದ ಜವಾಬ್ದಾರಿ

  ಇದು ಶಿಕ್ಷಣ ವ್ಯವಸ್ಥೆಗೆ ಅಂಟಿದ ಪಿಡುಗಾಗಿದೆ. ದೀಢೀರ್ ಎಂದು ಏರ್ಪಡುವ ಸಭೆಗಳು. ಮಾಹಿತಿಗಳ ಪೂರೈಕೆ ಇತ್ಯಾದಿ ವಿದ್ಯಾರ್ಥಿಗಳ ಕಲಿಕೆಯನ್ನು ಕುಂಠಿತಗೊಳಿಸುವುದು.

* ಆರನೆಯದಾಗಿ ಮೌಲ್ಯಮಾಪನದಲ್ಲಿ ವಿಳಂಬ

  ಕಲಿಕೆ ಸಾಗುತ್ತಿರುವಾಗ ಒಂದು ಕಡೆ ಮೌಲ್ಯಮಾಪನವೂ ನಿರಂತರವಾಗಿರಬೇಕು. ಇದೊಂದು ಸಿಂಹಾವಲೋಕನದ ಘಟ್ಟವೂ ಹೌದು. ವಿದ್ಯಾರ್ಥಿಗಳ ಕಲಿಕಾ ವೇಗ ಹೆಚ್ಚಿಸಲು ಮತ್ತು ಶಿಕ್ಷಕರ ಸ್ವ ಅವಲೋಕನದ ಸಾಧನವೂ ಹೌದು.

* ಏಳನೆಯದಾಗಿ ತರಬೇತಿಗಳು—

   ಇದು ಕಲಿಕೆಯ ನಿರಂತರತೆಗೆ ಅಡ್ಡಗಾಲಾಗಿ ಇತ್ತೀಚಿನ ವರ್ಷಗಳಲ್ಲಿ ಕಾಣಿಸುತ್ತಿದೆ. ವಾರಪೂರ್ಣ ತರಬೇತಿಯಲ್ಲಿ ತೊಡಗಿಸಿಕೊಂಡರೆ ಶಾಲೆಗಳಲ್ಲಿ ಕಲಿಕೆ ನಿಲ್ಲುತ್ತದೆ. ತರಬೇತಿಯ ಅವಶ್ಯಕತೆ ಇದೆ. ನಿಜ. ಆದರೆ ಇಂತಹ ತರಬೇತಿಗಳನ್ನು ಅವಶ್ಯವಿದ್ದಲ್ಲಿ ರಜಾ ಅವಧಿಯಲ್ಲಿ ನೀಡಬೇಕು. ತರಬೇತಿಯ ಮಾನವ ದಿನಗಳ ಗುರಿ ಸಾಧನೆಗೆಂದು ತರಬೇತಿ ನೀಡುವುದು ಅರ್ಥಹೀನವಾದದ್ದು.

  ಇದರ ಜೊತೆಗೆ ನಿಯೋಜನೆಗಳು, ಹಬ್ಬಗಳು ಮುಂತಾದವೆಲ್ಲವೂ ಕಲಿಕೆಯ ನಿರಂತರತೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ.

      ಪಠ್ಯದ ಜೊತೆಗೆ ಸಹಪಠ್ಯವೂ ಬಹು ಮುಖ್ಯ ನಿಜ. ಆದರೆ ಸೂಕ್ತ ಕಾಲಾವಕಾಶ, ನಿಗದಿತ ಸಮಯದೊಳಗೆ ಪೂರೈಸಿ ಕಲಿಕೆಯ ಜಾಡಿನೊಟ್ಟಿಗೇ ತೆಗೆದುಕೊಂಡು ಹೋಗುವ ಜಾಣ್ಮೆ ಶಿಕ್ಷಕನಿಗಿರಬೇಕು.

       ಇಂದು ಶಿಕ್ಷಕ ದಿನಾಚರಣೆ. ದೇಶ ಕಂಡ ಮಹಾ ತತ್ವಜ್ಞಾನಿ, ಮಹಾನ್ ಶಿಕ್ಷಕ ಇವರನ್ನು ನೆನೆಯಲೇ ಬೇಕು. ಶಿಕ್ಷಣದಲ್ಲಿ ಕ್ರಾಂತಿ ಹುಟ್ಟಿಸುವುದರ ಜೊತೆಗೆ ಭಾರತದ ಸಂಸ್ಕೃತಿಯ ಹಿರಿಮೆಯನ್ನು ಕಡಲಿನಾಚೆ ಪಸರಿಸಿದ ಎರಡನೇ ಗಣ್ಯರು. ಪ್ರಥಮರು  ಸ್ವಾಮಿ ವಿವೇಕಾನಂದರಾದರೆ ದ್ವಿತೀಯರು ಡಾ. ಸರ್ವಪಲ್ಲಿ ರಾಧಾಕೃಷ್ಣನ್. ದ್ವಿತೀಯರಾದರೂ ಅವರ ಕೊಡುಗೆ ಮಾತ್ರ ಅದ್ವಿತೀಯವಾದ್ದು

       ಇಂದು ಶಿಕ್ಷಕ ಡಾ. ರಾಧಾಕೃಷ್ಣನ್ ಅವರಂತೆ ಅರ್ಪಣಾ ಮನೋಭಾವದಿಂದ ಕರ್ತವ್ಯ ಎಸಗಬೇಕು. ಇಂದಿನ ವ್ಯವಸ್ಥೆಯಲ್ಲಿ ಶಿಕ್ಷಕನಿಗೆ ಶಾಲೆಯಿಂದ ಹೊರಗಿರಲು ಸಾಕಷ್ಟು ಸಕಾರಣಗಳೂ ಇವೆ. ಆದರೆ ವೃತ್ತಿಗೆ ಬಂದಿದ್ದರ ಮೂಲ ಉದ್ದೇಶ ಶಿಕ್ಷಣ ನೀಡಲೇ ಹೊರತು ಉಳಿದ ಚಟುವಟಿಕೆಗಳಿಗಲ್ಲ.  ಗಾಂಧೀಜಿಯವರು ಹೇಳುತ್ತಾರೆ ”  ನಾನು ಓದುವಾಗ ಓದುವುದನ್ನು ಮಾತ್ರ ಮಾಡುತ್ತೇನೆ, ಆಹಾರ ಸೇವಿಸುವಾಗ ಆಹಾರ ಮಾತ್ರ ಸೇವಿಸುತ್ತೇನೆ. ನಿದ್ರಿಸುವಾಗ ನಿದ್ದೆಯನ್ನು ಮಾತ್ರ ಮಾಡುತ್ತೇನೆ”  ಅಂದರೆ ನಾವು ಏಕಕಾಲದಲ್ಲಿ ಹಲವು ಕೆಲಸ ಮಾಡಿದಾಗ ಯಾವ ಕೆಲಸವೂ ಪೂರ್ಣವಾಗಲಾರದು. ಪಾಠ ಮಾಡಲು ಬಂದವರಿಗೆ ಹಲವು ಕೆಲಸಗಳು ಕೈ ಬೀಸಿ ಕರೆಯುವುದುಂಟು. ಆದರೆ ಮಕ್ಕಳನ್ನು ಬಿಟ್ಟು ನಮ್ಮದಲ್ಲದ ಕೆಲಸಕ್ಕೆ ಪ್ರಾಮುಖ್ಯತೆ ನೀಡಿದಾಗ ಎಣಿಸುವ ಸಂಬಳ ಯಾವುದರದ್ದು ಎಂದು ಯೋಚಿಸುವುದು ಒಳಿತು. ಮಕ್ಕಳ‌ ಬೆನ್ನಿಗೆ ಬಿದ್ದು ಬೋಧಿಸುವುದು, ಕಲಿಕೆಯ ಮಧ್ಯೆ ಅಡಚಣೆಗಳಿಗೆ ಅವಕಾಶ ನೀಡದೇ ಹೋದರೆ ಎಲ್ಲಾ ವಿದ್ಯಾರ್ಥಿಗಳೂ ಅಂದುಕೊಂಡ ರೀತಿಯಲ್ಲಿ ಕಲಿಯುವರು.

      ಶಿಕ್ಷಕರು ಶಿಕ್ಷಕರಾಗೇ ಇದ್ದರೆ ವ್ಯವಸ್ಥೆಯನ್ನು ಸರಿಪಡಿಸಲೋಸುಗ ಕ್ರಮ ಕೈಗೊಳ್ಳುವ ಅವಶ್ಯಕತೆ ಇರದು.

    ——————————

Leave a Reply

Back To Top