ಪ್ರಬಂಧ ಸಂಗಾತಿ
ಉಗುಳು ಮಾರರು.
ಜ್ಯೋತಿ ಡಿ , ಬೊಮ್ಮಾ.
ನಸುಕಿನ ನಾಲ್ಕೂವರೆ ಐದು ಗಂಟೆಯಾಗಿರಬಹುದು ,ಲೋಕವೆಲ್ಲ ಇನ್ನೂ ಸಿಹಿನಿದ್ದೆಯಲ್ಲಿರುವ ಹೊತ್ತು.ಹೊರಗೆ ಕತ್ತಲೆ , ನೀರವ ಮೌನವನ್ನು ಭೇದಿಸಿಕೊಂಡು ಬಂದ ಶಬ್ದ ಕಿವಿಯಲ್ಲಿ ಮಾರ್ದನಿಸಿ ಮಿದುಳಿಗೆ ಸಂದೇಶ ರವಾನಿಸಿದ್ದೆ ತಡ ಅದು ಗಾಢ ನಿದ್ದೆಯಲ್ಲಿದ್ದ ನನ್ನ ರಪ್ಪನೆ ಎಚ್ಚರಿಸಿತು. ಪಕ್ಕದ ಮನೆಯ ಕಂಪೌಂಡಿನಲ್ಲಿ ಯಾರೋ ವಾಂತಿ ಮಾಡಿಕೊಳ್ಳುತಿದ್ದ ಶಬ್ದ. ಪದೆ ಪದೆ ನೀರು ಬಾಯಿಯೊಳಗೆ ಸುರಿದುಕೊಳ್ಳುವ ಮತ್ತು ವಾಂತಿ ಮಾಡಿಕೊಳ್ಳುವ ಶಬ್ದ ಪುನರಾವರ್ತನೆ ಯಾಗುತ್ತಲೆ ಇತ್ತು.ಈಗ ಮುಗಿಯಬಹುದು , ಇನ್ನೊಂದು ಕ್ಷಣಕ್ಕೆ ಮುಗಿಯಬಹುದೆನ್ನುವ ಆ ಶಬ್ದ ಇನ್ನೂ ಹಾಸಿಗೆಯಲ್ಲಿರುವದು ಅಸಾದ್ಯ ವೆನಿಸಿ ಬಡಿದೆಬ್ಬಿಸಿತು. ಪಾಪ ಯಾರಿಗೋ ಆರೋಗ್ಯದಲ್ಲಿ ವ್ಯತ್ಯಾಸ ವಾಗಿರಬೆಕೆಂದು ಕುತೂಹಲದಿಂದ ಬಾಗಿಲು ತೆರೆದು ಪಕ್ಕದ ಮನೆಯತ್ತ ಇಣುಕಿದೆ.ಕ್ಷಣದಲ್ಲಿ ನನ್ನ ಕುತುಹಲ ಕೋಪವಾಗಿ ಪರಿವರ್ತನೆ ಹೊಂದಿತು. ಇಷ್ಟೊಂದು ಭಯಂಕರ ಶಬ್ದ ಹೊರಡಿಸುತ್ತ ಆಸಾಮಿ ಹಲ್ಲುಜ್ಜಿ ಬಾಯಿ ತೊಳೆದುಕೊಳ್ಳುತಿದ್ದ.
ಬೆಳಿಗ್ಗಿನ ಮುಖಮಾರ್ಜನದ ಶಬ್ದ ಮನೆಯಲ್ಲಿನ ಅಥವಾ ಅಕ್ಕಪಕ್ಕದವರಿಗೆ ಕಿರಿಕಿರಿಯ ಅನುಭವ ನಿಡುತ್ತದೆ. ತಡವಾಗಿ ಏಳುವ ಅಭ್ಯಾಸ ವಿರುವವರು ಎಷ್ಟೇ ಮುಸುಗು ಹೊದ್ದು ಮಲಗಿದರು , ಬಾಗಿಲು ಕದವಿಕ್ಕಿ ಮಲಗಿದರು ಶಬ್ದಗಳು ತಟ್ಟದೆ ಇರವು.
ಕೋಳಿ ಕೂಗುವ ಶಬ್ದದಿಂದ ಬೆಳಗಾಯಿತು ಎಂದು ಭಾವಿಸುತಿದ್ದವರು ಈಗ ಮತ್ತೊಬ್ಬರ ಹಲ್ಲುಜ್ಜುವ ಶಬ್ದದಿಂದಲೇ ಬೆಳಕಾಗಿರುವದನ್ನು ತಿಳಿದುಕೊಳ್ಳಬೇಕು. ಆ ಶಬ್ದಗಳೋ ವರ್ಣಾತೀತ.ಒಬ್ಬೊಬ್ಬರ ಗಂಟಲಿನಿಂದ ಒಂದೋಂದು ಶಬ್ದಗಳು .
ಚಿಕ್ಕ ಚಿಕ್ಕಮನೆಗಳ ಅಟ್ಯಾಚ್ಡ ಬಾತ್ ರೂಮ್ ಗಳಿರುವ ಮನೆಗಳಲ್ಲಿ ಒಬ್ಬರ ಉಸಿರಾಟದ ಸದ್ದು ಮತ್ತೊಬ್ಬರಿಗೆ ಕೇಳುವಂತ ಪರಿಸ್ಥಿತಿಯಲ್ಲಿ , ಬೇಗ ಎದ್ದು ಈ ರೀತಿ ಶಬ್ದ ಹೊರಡಿಸುತ್ತ ಮುಖ ಬಾಯಿ ತೊಳೆದುಕೊಳುವ ಶಬ್ದ ಇನ್ನೂ ಮಲಗಿರುವವರಿಗೆ ಎಷ್ಟು ಕೋಪ ತರಿಸಬೇಡ. ಒಬ್ಬೊಬ್ಬರ ಮುಖ ತೊಳೆದು ಕೊಳ್ಳುವ ವರಸೆಯೆ ಹಾಗಿರುತ್ತದೆ. ಖ್ಯಾಕರಿಸಿ ಹೊಟ್ಟೆಯಲ್ಲಿನ ಕರುಳು ಬಾಯಿಗೆ ಬರುತ್ತವೋ ಅಥವಾ ಕಣ್ಣುಗುಡ್ಡೆಗಳೆ ಹೊರಗೆ ಬರುತ್ತವೋ ಎಂಬಂತೆ ಶಬ್ದ ಹೊರಡಿಸುತ್ತ ಮುಖ ತೊಳೆದುಕೊಳ್ಳುತ್ತಾರೆ .
ಹೊಸದಾಗಿ ಮದುವೆಯಾದ ಜೊಇಡಿಯೊಂದು ಹಿರಿಯರು ಬೇಗನೆದ್ದು ಬಾಯಿ ಮುಕ್ಕಳುಸುವ ಸದ್ದಿಗೆ ರೋಸಿ ಬೇರೆ ಮನೆ ಮಾಡಿದ್ದರಂತೆ. ವಯಸ್ಸಾದ ಮೇಲೆ ನಿದ್ದೆಯ ಕೊರತೆಯಿಂದ ಪದೆ ಪದೆ ಎಚ್ಚರವಾಗಿ ಬಾತ್ ರೂಮ್ ಗೆ ಅಲೆದಾಡುವ ಪ್ರಸಂಗ ಸಹಜ . ಅಂತಹ ಸಂದರ್ಭದಲ್ಲಿ ಮನೆಯ ಇತರರ ನಿದ್ರೆಗೆ ಭಂಗ ಬರದಂತೆ ಎಚ್ಚರ ವಹಿಸುವದು ಅವರಿಗೆ ಸವಾಲಿನ ಕೆಲಸ. ಪರಿಸ್ಥಿತಿ ಅರ್ಥ ಮಾಡಿಕೊಂಡು ತಾಳ್ಮೆಯಿಂದ ಇದ್ದರೆ ಸರಿ, ಇಲ್ಲದಿದ್ದರೆ ಇಂತಹ ವಿಷಯಗಳು ಹಿರಿಯರು ಮತ್ತು ಕಿರಿಯರ ನಡುವಿನ ವೈಮನಸ್ಸಿಗೆ ಕಾರಣವಾಗುತ್ತವೆ.
ಇತರರಿಗೆ ಕಿರಿಕಿರಿಯಾಗುವದೆಂದು ತಮ್ಮ ಸ್ವಚ್ಚತೆಯನ್ನು ನಿರ್ಲಕ್ಷಿಸಲಾಗುತ್ತೆಯೆ ಎನ್ನುವದು ಕೆಲವರ ವಾದ. ಬಾಯನ್ನು ಗಲಗಲಿಸುವಾಗ ಸದ್ದು ಬರುವದು ಸಹಜ . ಸದ್ದು ಮಾಡದೆ ಅದೇಗೆ ಬಾಯಿ ತೊಳೆದುಕೊಳ್ಳುವದು.!ನಮ್ಮ ಬಾಯಿ , ನಾವು ಇಷ್ಟ ಪಟ್ಟಂಗೆ ಸದ್ದು ಮಾಡುತ್ತೆವೆ . ಅಂದರೆ , ಸದ್ದು ಮಾಡುತ್ತ ವಿರೋಧಿಸುವವರು ಅವರ ಸುದ್ದಿಗೆ ಹೋಗದಂತಾಗುತ್ತದೆ.
ಹೊಟೆಲ್ ಗಳಲ ತಿಂಡಿ ತಿನ್ನುವದಕ್ಕೂ ಮೊದಲು ಅಥವ ತಿಂದಾದ ನಂತರ ಕೆಲವರು ಸಿಂಕನಲ್ಲಿ ಕೈ ತೊಳೆದು ಬಾಯಲ್ಲಿ ನೀರು ಹಾಕಿಕೊಂಡು ಪಿಚಕ್ಕನೆ ಉಗುಳುತ್ತ ಖ್ಯಾಕರಿಸುತ್ತ ಸದ್ದು ಮಾಡುತ್ತಾರೆ. ಅಲ್ಲಿ ಇನ್ನೂ ತಿಂಡಿ ತಿನ್ನುತ್ತಿರುವರು ರೇಜಿಗೆ ಪಟ್ಟುಕೊಳ್ಳುವಂತೆ ಮಾಡುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಗುಟಖಾ , ಪಾನ ತಿಂದು ಉಗುಳುವರದ್ದು ಒಂದು ಉಪದ್ರ. ಅಂತಹವರು ಒಂದಿಷ್ಟು ಶಿಷ್ಟಾಚಾರದ ಬಗ್ಗೆ ಚಿಂತಿಸರು.ಶಿಷ್ಟಾಚಾರವಿರಲಿ ಆರೋಗ್ಯದ ದೃಷ್ಟಿಯಿಂದ ಲಾದರು ಯೋಚಿಸಬೇಕಲ್ಲವೆ. ಕೆಲವೊಂದು ಆಫಿಸುಗಳಲ್ಲಿ ಮೆಟ್ಟಿಲೇರುವ ಮೂಲೆಯಲ್ಲಿ ಗೊಡೆಯ ತುಂಬಾ ಉಗುಳಿನ ಕೆಂಪು ಚಿತ್ತಾರ.ಉಗುಳಿ ಉಗುಳಿ ಕೆಂಪುಗಟ್ಟಿ ಒಣಗಿ ಮತ್ತೆ ಹಕ್ಕಳೆಯಾಗಿ ಉದುರುತ್ತಿರುತ್ತದೆ. ಅವಿದ್ಯಾವಂತರಿಗಿಂತ ವಿದ್ಯಾವಂತರೆ ಹೆಚ್ಚು ಉಗುಳು ಮಾರಿಗಳಾಗುತ್ತಿರುವದು ವಿಷಾದನೀಯ.
ವಾಹನಗಳಲ್ಲಿ ಪ್ರಯಾಣಿಸುವರು ತಲೆ ಹೊರಗೆ ಹಾಕಿ ಪಕ್ಕದಲ್ಲೇ ಜನರಿರುವದನ್ನು ಗಮನಿಸದೆ ಪಿಚ್ ಕ್ಕನ್ನೆ ಉಗುಳುತ್ತಾರೆ.ಪಕ್ಕದವರ ಮೇಲೆ ಸಿಡಿಯಬಹುದು ಎಂಬ ಪರಿಜ್ಞಾನ ವೂ ಇಲ್ಲದೆ .ಬಸ್ಸುಗಳು ಅಥವಾ ಯಾವದೆ ದೊಡ್ಡ ವಾಹನದ ಪಕ್ಕ ಸಂಚರಿಸುವಾಗ ಯಾರು ಯಾವಾಗ ಉಗುಳುವರೋ ಎಂಬ ಆತಂಕದಲ್ಲಿರುತ್ತದೆ ಮನ. ಅಷ್ಟೇ ಏಕೆ , ಬಸ್ಸಿನ ಕಿಟಕಿಯಿಂದ ಉಗುಳಿದರೆ ಹನಿಗಳನ್ನು ಗಾಳಿ ತನ್ನ ದಿಕ್ಕಿಗೆ ಒಯ್ದು ಕಿಟಕಿಗೆ ಮುಖ ಒಡ್ಡಿ ಗಾಳಿಯನ್ನು ಅಸ್ವಾದಿಸುವರ ಮುಖಕ್ಕೂ ಪ್ರೋಕ್ಷಣೆಯಾಗುತ್ತದೆ.
ಉಗುಳಿಗೂ ನಮ್ಮ ಭಾವನೆಗಳಿಗೂ ನಂಟುಂಟು.ಸುಮ್ಮನೇ ನಡೆಯುತ್ತ ಉದಾಸೀನವಾಗಿ ಉಗಿಯುವದು. ಬಾಯಲ್ಲಿ ತುಂಬಿಕೊಂಡ ರಸಗವಳ ಉಮೇದಿನಿಂದ ಉಗಿಯುವದು . ಇಷ್ಟವಾಗದವರ ಬಗ್ಗೆ ತಿರಸ್ಕಾರದಿಂದ ಉಗಿಯುವದು . ಬಾಯಿ ಗಂಟಲು ಸ್ವಚ್ಚಗೊಳಿಸಲು ಖ್ಯಾಖರಿಸಿ ಉಗಿಯುವದು. ಉಗಿದು ಪರಿಸರ ಮಲೀನವಾದರೂ ತಾವು ಹಗುರಾಗುವರು.
ಉಗಿಯುವಿಕೆಯನ್ನು ಕೆಲವೊಮ್ಮೆ ರೂಪಕವಾಗಿಯು ಬಳಸಲ್ಪಡುತ್ತದೆ. ಉಗಿದು ಬುದ್ದಿ ಹೇಳಿದರು ಎಂತಲೋ , ಎಷ್ಟು ಉಗಿದರು ಬುದ್ದಿ ಬರಲಿಲ್ಲ ಎಂತಲೋ , ಉಗುದು ಉಪ್ಪಿನ ಕಾಯ ಕಾಕಿದರು , ಅಂತಲೋ ಹೀಗೆ ಉಗಿತ ತನ್ನ ಹೀನತೆಯಲ್ಲೂ ಶ್ರೇಷ್ಟತೆಯನ್ನು ಕಾಪಾಡಿಕೊಂಡಿದೆ.
ದೃಷ್ಟಿ ನಿವಾಳಿಸುವ ಪ್ರಕ್ರಿಯೆಯಲ್ಲೂ ಉಗಿತ ಪ್ರಮುಖ ಪಾತ್ರ ವಹಿಸುತ್ತದೆ.ಚಿಕ್ಕಮಕ್ಕಳು ಹಠ ಮಾಡಿ ಅಳತೊಡಗಿದರೆ ತಾಯಂದಿರು ತಮ್ಮ ಸೀರೆಯ ಸೆರಗನ್ನು ಮಕ್ಕಳ ಮುಖಕ್ಕೆ ನಿವಾಳಿಸಿ ಒಂದೆರಡು ಸಲ ಥೂ ಥೂ ಎಂದು ಉಗಿದರಾಯಿತು.ದೃಷ್ಟಿ ತಾಗಿದ್ದು ದೂರ ಓಡಿದಂತೆಯೆ ಸರಿ. ಕೆಲವೊಬ್ಬರಿಗೆ ಮಾತಾಡುವಾಗ ವೀಪರೀತ ಉಗುಳು ಸಿಡಿಸುವ ರೂಢಿ ಇರುತ್ತದೆ.ಓತಪ್ರೋತವಾಗಿ ಮಾತಾಡುವ ಭರದಲ್ಲಿ ಎದುರಿನವರನ್ನು ಎಂಜಲಿನಲ್ಲಿ ಮಿಯಿಸುವ ಅರಿವು ಆಗದಷ್ಟು ತಮ್ಮ ಮಾತಿನಲ್ಲಿ ಮಗ್ನರಾಗಿರುತ್ತಾರೆ.ಇನ್ನೂ ಭಾಷಣಕಾರರಂತೂ ಭರದಿಂದ ಕೊರೆಯುತ್ತ ಮೈಕಾಸುರನ್ನು ತಮ್ಮ ಉಗುಳಿನಿಂದ ಪೂರ್ಣ ಮಿಯಿಸಿಬಿಡುವರು. ಪ್ರೋಕ್ಷಿಸಿಕೊಂಡವರು ಅನ್ನಲಾಗದೆ ಆಡಲಾಗದೆ ಅನುಭವಿಸುವ ಫಜೀತಿ ಹೇಳಲಾಗದು.
ಬಾಯನ್ನು ಸದಾ ತೇವವಾಗಿಟ್ಟು ಆಹಾರ ನುರಿಯಲು ಸಹಾಯ ಮಾಡುವ ಲಾವಾರಸ ಬಾಯಿಂದ ಹೊರಗೆ ಸಿಡಿದು ಸೃಷ್ಟಿಸುವ ಅವಾಂತರ ಮತ್ತು ಮುಜುಗುರ ವಿವರಿಸಲಸಾದ್ಯ.
ಜ್ಯೋತಿ ಡಿ , ಬೊಮ್ಮಾ.
ವಿಭಿನ್ನ ವಿಷಯ ಆಯ್ದುಕೊಂಡು ಚೆನ್ನಾಗಿ ಬರೆದಿದ್ದೀರಿ
ಧನ್ಯವಾದಗಳು
ಚಂದದ ಅರ್ಥಪೂರ್ಣ ಬರಹ