ಅಂಕಣ ಸಂಗಾತಿ

ನೆನಪಿನದೋಣಿಯಲಿ

ಮರೆಯಲಾಗದ ಪಾಕ ಪ್ರಯೋಗಗಳು

ನಾನೂ ಬಿಸಿಬೇಳೆಭಾತ್ ಮಾಡಿದೆ

ಮುದ್ದಣ ಮನೋರಮೆಯರ ಸಲ್ಲಾಪದ ಒಂದು ಸಂಭಾಷಣೆಯ ತುಣುಕು “ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತೆ”

ಅಂತ.ಹಾಗಾಯ್ತು ನಾನು ಬಿಸಿಬೇಳೆಭಾತ್ ಮಾಡಿದ ಪ್ರಸಂಗ.

ಆ ಗುಟ್ಟನ್ನು ಈಗ ರಟ್ಟು ಮಾಡ್ತಿದೀನಿ.ನನ್ನ reputation ಹಾಳಾಗಬಹುದು ಅಂತ ಗೊತ್ತಿದ್ರೂನೂ. ಇರಲಿ ಎಲ್ಲದಕ್ಕೂ ಒಂದು ಓಂಪ್ರಥಮ ಇರುತ್ತೆ ಅಲ್ವಾ?

ಆಗ ನಾನಿನ್ನೂ ಏಳನೇ ಕ್ಲಾಸು. ಅದುವರೆಗೂ ನಾನು ಸ್ವತಂತ್ರವಾಗಿ ಇರಲಿˌಅಮ್ಮನ ಕಣ್ಗಾವಲಲ್ಲೂ ಅಡಿಗೆ ಮಾಡಿರಲಿಲ್ಲ.ಆದರೆ ರುಬ್ಬುಕಲ್ಲಿನಲ್ಲಿ ಅಮ್ಮನಿಗೆ ಅಡಿಗೆಗೆ ರುಬ್ಬಿಕೊಡುತ್ತಿದ್ದೆ.ಹಾಗಾಗಿ ಯಾವುದಕ್ಕವೆ ಏನು ಎಷ್ಠು ಹಾಕಬೇಕು ಅಂತ ಅಂದಾಜಿತ್ತು.ಒಂದು ಬಾರಿ   ಊರಿಗೆ ಅಣ್ಣ  ಅಮ್ಮ ಬೆಳಿಗ್ಗೆ ಹೋಗಿ ರಾತ್ರಿ ಹಿಂದಿರುಗುವ ಸಂಧರ್ಭ ಇತ್ತು. ಬೆಳಿಗ್ಗೆ ತಿಂಡಿ ಮಾಡಿಟ್ಟು ಮಧ್ಯಾಹ್ನ  ಊಟಕ್ಕೆ ನಮ್ಮ ಸೋದರಮಾವನ ಮನೆಗೆ ಹೋಗಿ ಅಂದಿದ್ರು. ನನಗೇನೋ ಅವತ್ತು ಅಡಿಗೆ ಮಾಡುವ ಉಮೇದು. ತಂಗಿಯರಿಬ್ಬರಿನ್ನೂ ಬಿಸಿಬೇಳೆಭಾತ್ ಮಾಡ್ತೀನಿ ಕಣ್ರೇ ಅಂತ ಒಪ್ಪಿಸಿದೆ. ಮೊದಲೇ ನಾವು ಮೂವರಿಗೂ ಅದು ಮನೆದೇವ್ರು. ಓ ಅಂದ್ರು.ತಿಂಡಿ ತಿಂದು ಶುರುವಾಯ್ತು ನನ್ನ ಪಾಕ ಪ್ರಸಂಗ.ತರಕಾರಿ ಬೇಳೆ ಬೇಯಲು ಇಟ್ಟಾಯ್ಥು. ಅಕ್ಕಿ ತೊಳೆದು ನೆನೆ ಹಾಕಿದೆ.ಸಾಮಾನುಗಳನ್ನು ಒಂದು ಅಂದಾಜಲ್ಲಿ ತೊಗೊಂಡು ಹುರಿದು ರುಬ್ಬಲು ಕೂತೆ.ಇದ್ದಕ್ಕಿದ್ದಂತೆ ಟ್ಯೂಬ್ ಲೈಟ್ ಝಗ್ ಅಂತು.ಹುಣಸೇಹಣ್ಣು ಹಾಕಬೇಕಲ್ಲಾ? ಯಾವಾಗ? confuse ಆಯ್ತು.ಕಿವುಚಿ ಹಾಕಬೇಕು ಅಂತ ಮರ್ತೇ ಹೋಯ್ತು.ಅಮ್ಮ ಚಟ್ನಿಗೆ ಹುಣಸೆಹಣ್ಣು ರುಬ್ಬಲು ಹಾಕ್ತಾ ಇದ್ದದ್ದು ನೆನಪಾಯ್ತುˌ ಇದಕ್ಕೂ ಹೀಗೆ ಹಾಕಬೇಕು ಅಂತ ನನಗೆ ನಾನೇ decide ಮಾಡ್ಖೊಂಡು ನಿಂಬೆಗಾತ್ರ ತೊಗೊಂಡು ರುಬ್ಬೋ ಸಾಮಗ್ರಿ ಜೊತೆ ಸೇರಿಸಿ ರುಬ್ಬಿ ಹಾಕಿದೆ ಮಸಾಲೆ ಹಾಕಿ ಅಕ್ಕಿ ಹಾಕಿ ಕುದಿಸಿ ಅಂತೂ ಭಾತ್ ಸಿದ್ದ ಆಯ್ತುˌವಾಸನೆಯಂತೂ ಘಮ ಘಮ. ನೋಡಲೂ ಸೂಪರ್.ನನ್ನ ಬೆನ್ನು ನಾನೇ ತಟ್ಟಿಕೊಂಡು ಮೂರೂ ಜನ ತಿನ್ನಲು ಕೂತೆವು.ಏನೋ ಒಂಥರಾ ಇದೆ ಕಣೆ ಚಿಲ್ಟು ಪಿಲ್ಟುಗಳ ಉವಾಚ.ಏನೂ ಇಲ್ಲ ಚೆನ್ನಾಗಿದೆ ತಿನ್ರೇ ಅಂತ ಗದರಿ ಇನ್ನೆರಡು ಮಿಳ್ಳೆ ತುಪ್ಪ ಹಾಕಿ ನುಂಗಿಸಿದೆ.ನನಗೂ ಅನ್ನಿಸಿತು ಒಂಥರಾ ಇದೆ ಅಮ್ಮ ಮಾಡಿದ ಹಾಗಾಗಿಲ್ಲ ಅಂತ ಆದರೂ “ಅಟ್ಟವರಿಗೆ ಅಡಿಗೆ ಅಮೃತ  ಅಲ್ವಾ?”

ರಾತ್ರಿ ಅಮ್ಮ ಬಂದ ಮೇಲೆ ಹೇಳಿದಾಗ ಗೊತ್ತಾಯ್ತು ಚಟ್ನಿ ಬಿಟ್ಟು ಮಿಕ್ಕ ಅಡಿಗೆಗೆಲ್ಲಾ ಹುಳಿ ಕಿವುಚಿ ಹಾಕಬೇಕು ಅಂತ.ಆಗಿನಿಂದ ನಮ್ಮ ಮನೆಯವರೆಲ್ಲಾ ಬಿಸಿಬೇಳೆಭಾತ್ ಮಾಡಿದ್ದೆ ಅಂದಾಗಲೆಲ್ಲಾ ಹುಣಸೆಹಣ್ಣು ರುಬ್ಬಲಿಕ್ಕೆ ಹಾಕಿಲ್ಲ ತಾನೇ ಅಂತ ರೇಗಿಸ್ತಾರೆ.ನೀವು ರೇಗಿಸಲ್ಲಾ ತಾನೇ? 

ಪಲಾವ್ ಪಾಯಸ ಪ್ರಸಂಗ

ನನ್ನ ಇನ್ನೊಂದು ಅಡಿಗೆ ಅನುಭವನಾ ನಿಮ್ಮಂತ ಒಳ್ಳೇ ಸ್ನೇಹಿತರ ಜೊತೆ ಹಂಚಿಕೊಳ್ಳುವ ಆಸೆ ರೀ. ಏನೋ ಪಾಪ ಹೇಳ್ತಿದಾಳೆ ಓದೋಣ ಅಂದ್ಕೊಂಡ್ರಾ?ಧನ್ಯವಾದಗಳು ಕಣ್ರೀ .ಇವತ್ತು ನಾನು ಮಾಡಿದ ಮೊದಲ ಪಲಾವ್ ನೆನಪಿಗೆ ಬಂತು. infact ಯಾವಾಗ ಪಲಾವ್ ಮಾಡಿದ್ರೂ ನೆನಪಿಗೆ ಬಂದು ನಗು ಬರುತ್ತೆˌಇದು ನಡೆದದ್ದು 35 ವರ್ಷಗಳ ಹಿಂದೆ.ನಾನು highschool ಓದುತ್ತಿದ್ದಾಗ.ನಮ್ಮ ಅಣ್ಣ (ತಂದೆ) ಅಮ್ಮ ಏನೋ ಕೆಲಸದ ಮೇಲೆ ಬೆಳಗ್ಗೆ ಹೋಗಿ ಸಂಜೆ ಬರುವ ಪ್ರೋಗ್ರಾಂ ಇತ್ತು. ದೋಸೆಹಿಟ್ಟು ಪಲ್ಯ ಬೇಳೆಚಟ್ನಿ ಮಾಡಿ ಅನ್ನ ಮಾತ್ರ ಮಾಡಿಕೊಳ್ಳಲು ಹೇಳಿ ಹೋಗಿದ್ದರುˌಆಗ ನಮ್ಮ ಮನೆಯಲ್ಲಿ ಅಮ್ಮ ಪಲಾವ್ ಮಾಡ್ತಿರಲಿಲ್ಲ. ಸುಧಾ ವಾರಪತ್ರಿಕೆಯಲ್ಲಿ ಹೊಸರುಚಿಯಲ್ಲಿ ಪಲಾವ್ ನೋಡಿದ್ದೆನಾ. ಪ್ರಯೋಗಕ್ಕೆ ಇದೇ ಸರಿಯಾದ ಸಮಯ ಅಂತ ಲಂಗದ ನೆರಿಗೆ ಸಿಕ್ಕಿಸಿ ಸಿದ್ದವಾದೆ. ಹೇಗಿದ್ದರೂ ನನ್ನ ತಂಗಿಯರಿಬ್ಬರೂ ಇದ್ದರಲ್ಲ ಪ್ರಯೋಗ ಪಶುಗಳಾಗಲುˌ ಆಗಿನ್ನೂ ಕುಕರ್ ತೆಗೆದುಕೊಂಡ ಹೊಸತು ಬೇರೆ. ಉಪಯೋಗಿಸುವ ಕುತೂಹಲ. ಮನೆಯಲ್ಲಿದ್ದ ಸಾಮಾನುಗಳಲ್ಲೇ ಎಲ್ಲಾ ಸಿದ್ದ ಮಾಡಿಕೊಂಡು ಕುಕರ್ಗೆ ಹಾಕಿ ಕೂಗಿಸಿದ್ದೇ ಕೂಗಿಸಿದ್ದು. ಎಷ್ಟು ಸಲ ಕೂಗ್ತೋ ಏನೋ. ಆಮೇಲೆ ಓಪನ್ ಮಾಡಿ ನೋಡಿದಾಗ ಪಲಾವ್ ಹೋಗಿ ಪಾಯಸ ಆಗಿಬಿಟ್ಟಿತ್ತು. ಆಮೇಲೆ ಏನು ಮಾಡಿದ್ರಿ ಅಂದ್ರಾ? ಹಸಿವೆ ಆಗ್ತಾ ಇತ್ತು.ಮತ್ತೆ ಅನ್ನ ಮಾಡುವಷ್ಟು ತಾಳ್ಮೇನೂ ಇರಲಿಲ್ಲ. ಹಾಗೇ ಅದಕ್ಕೆ ಮೊಸರು ಹಾಕಿ ಗಂಜಿ ತರಹ ತಿನ್ನಿಸಿದೆ. ನಾನೂ ಹಾಗೇ ತಿಂದೇಪ್ಪಾ. ಅಮ್ಮ ಬಂದ ಮೇಲೆ ಹೇಳಿದಾಗ ಕುಕರ್ ನ 2—3 ಸಲ ಮಾತ್ರ ಕೂಗಿಸಬೇಕು ಅಂತ ಹೇಳಿ ಎಲ್ಲಾ ಬಿದ್ದುಬಿದ್ದು ನಕ್ಕರು. ಈ ವಿಷಯ ಇದುವರೆಗೂ ಯಾರಿಗೂ ಹೇಳೇ ಇರಲಿಲ್ಲˌನನ್ನ ತಂಗಿಯರಿಗೂ ನೆನಪಿದೆಯೋ ಇಲಲವೋ ?ಈಗ ಇದನ್ನ ಓದಿ ರೇಗಿಸ್ತಾರೆ. ಹುಶ್ಶಪ್ಪಾ ಇಷ್ಟಾಯ್ತು ನನ್ನ ಪಲಾವ್ ಪುರಾಣ. ಪ್ಲೀಸ್ ನೀವೂ ರೇಗಿಸಬೇಡೀಪ್ಪಾ….

ಈಗ ನಾನು ಅಡಿಗೆ ಚೆನ್ನಾಗಿ ಮಾಡ್ತೀನಪ್ಪಾ!

ನನ್ನ ನಂಬಿ ಪ್ಲೀಸ್ ಪ್ಲೀಸ್ …


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು

One thought on “

  1. ಪ್ರಕಟಿಸಿದ ಪ್ರೋತ್ಸಾಹಿಸುತ್ತಿರುವ ಸಂಪಾದಕರಿಗೆ ಅನಂತ ಧನ್ಯವಾದಗಳು.

    ಸುಜಾತಾ ರವೀಶ್

Leave a Reply

Back To Top