ಅಂಕಣ

ಹೊತ್ತಾರೆ

ಅಮ್ಮನೂರಿನ ನೆನಪುಗಳು

ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ

ಅಶ್ವಥ್

ಅಮ್ಮ… 

Image result for photos of indian village mother baking roti


ಅಜ್ಜಿಯನ್ನು ನಾನು ಅಮ್ಮ ಅಂತ ಕರೆಯುತ್ತಿದ್ದುದು. ನನ್ನ ಬಾಲ್ಯದ ಮುಕ್ಕಾಲು ಪಾಲಿಗಿಂತಲೂ ಹೆಚ್ಚು ಅಮ್ಮನ ಜೊತೆಯಲ್ಲೇ ಕಳೆದಿದ್ದರಿಂದ ನೆನಪುಗಳ ರಾಶಿಯೇ ಇದೆ. ಹಾಗಾಗಿ ನಾನು ನಿಧಾನವಾಗಿ ಸಂದರ್ಭಗಳನ್ನೆಲ್ಲ ಪೋಣಿಸುತ್ತಾ ಒಂದೊಂದೇ ಬರಹ ಬರೆಯುತ್ತಿರುತ್ತೇನೆ. ಮುಂದೆ ಎಲ್ಲವನ್ನೂ ಕ್ರೋಢೀಕರಿಸುವುದೂ ಆಗುತ್ತದೆ. ಒಂದಂತೂ ನಿಜ ಇದುವರೆಗಿನ ನನ್ನ ಬದುಕಿನ ಎಂತಹದ್ದೇ ಮುಖ್ಯ ಸಂದರ್ಭವಾದರೂ ಅಲ್ಲಿ ಅಮೂರ್ತವಾಗಿ ಅಮ್ಮ ಇದ್ದೇ ಇರುತ್ತಾರೆ.

ನನಗಿನ್ನೂ ನೆನಪಿದೆ. ನನಗೆ ಬುದ್ಧಿ ತಿಳಿಯುವಾದಾಗಿಂದಲೂ, ಅಮ್ಮ ನಿತ್ಯವೂ ಕೋಳಿ ಕೂಗುವ ಹೊತ್ತಿಗೆ ಎದ್ದು ತನ್ನ ಕೆಲಸದಲ್ಲಿ ತಲ್ಲೀನರಾಗಿಬಿಡುತ್ತಿದ್ದರು. ಸುಮಾರು ಐದುಮುಕ್ಕಾಲಿಗೆ ಅಮ್ಮನ ಕೆಲಸಗಳ ಧಡಬಡ ಸದ್ದು ಕೇಳಲು ಶುರುವಾಗುತ್ತಿತ್ತು. ಸುಮಾರು ನೂರೈವತ್ತು ಅಡಿ ಉದ್ದ ಹದಿನೈದು ಅಡಿ ಅಗಲದ ಮನೆಯ ಅಂಗಳವನ್ನು ಗುಡಿಸಿ ನೀರು/ಗಂಜಲ ಹಾಕಿ ಸಾರಿಸಿ ರಂಗೋಲಿಯಿಟ್ಟು, ಹೊಸ್ತಿಲು ತೊಳೆದು ಅರಿಶಿನ ಕುಂಕುಮಗಳಿಂದ ಅಲಂಕಾರ ಮಾಡಿ, ಬಿಸಿನೀರಿನ ಒಲೆ ಹಚ್ಚುತ್ತಿದ್ದರು. ಆಮೇಲೆ ಕೊಟ್ಟಿಗೆಯಿಂದ ದನಗಳನ್ನೆಲ್ಲ ಹೊರಗೆ ಕಟ್ಟಿ ಕೊಟ್ಟಿಗೆ ಕಸ ಗುಡಿಸಲು ಅಣಿಯಾಗುತ್ತಿದ್ದರು.  ಇವೆಲ್ಲವೂ ನಡೆಯುವಾಗ ನನ್ನ ನಿದ್ರೆ ಸಾಂಗವಾಗಿ ಸಾಗುತ್ತಲೇ ಇರುತ್ತಿತ್ತು. ಹಬ್ಬದ ದಿನಗಳಲ್ಲಿ ಮಾತ್ರ ಮಾತಿನಲ್ಲೇ ತಿವಿದು ತಿವಿದು ಏಳುವವರೆಗೆ ಬಿಡುತ್ತಲೇ ಇರಲಿಲ್ಲವಾದ್ದರಿಂದ ಆ ದಿನಗಳಲ್ಲಿ ಅಮ್ಮನ ನಿತ್ಯದ ಕೆಲಸಗಳನ್ನು ಗಮನಿಸುವುದು ಸಾಧ್ಯವಿತ್ತು. ಮಿಕ್ಕ ದಿನಗಳಲ್ಲಿ ಅಮ್ಮ ಕೆಲಸಗಳನ್ನೆಲ್ಲ ಮುಗಿಸಿ ನಮ್ಮ ಮನೆಯಲ್ಲಿದ್ದ ಪುಟ್ಟ ಫಿಲಿಪ್ಸ್ ರೇಡಿಯೋ ಹೊತ್ತಿಸಿದಾಗಲೇ ನನಗೆ ಬೆಳಗಾಗುತ್ತಿದ್ದುದು. ಅದರಲ್ಲೂ, ಇಯಂ ಆಕಾಶವಾಣಿಃ, ಸಂಪ್ರತಿ ವಾರ್ತಾಹ ಶ್ರೂಯಂತಾಂ, ಪ್ರವಾಚಕಾಃ ಬಲದೇವಾನಂದ ಸಾಗರಃ ಅಂದಾಗ, ಸರಿಯಾಗಿ ಆರುಮುಕ್ಕಾಲು…. ಆ ಮಾರಾಯ ಬಲದೇವಾನಂದ ಸಾಗರಾಹ ಗೆ ಹುಷಾರು ತಪ್ಪುತ್ತಲೇ ಇರಲಿಲ್ಲವೇನೋ.  ಒಂದೂ ದಿನ ತಪ್ಪದ ಹಾಗೆ ಸಂಸ್ಕೃತ ವಾರ್ತೆ ಕೇಳಿಸುತ್ತಿದ್ದರು. ನಂತರ ಚಿಂತನ, ಆಮೇಲೆ ಪ್ರದೇಶ ಸಮಾಚಾರ ಹೀಗೆ ರೇಡಿಯೋ ಕಾರ್ಯಕ್ರಮಗಳು ಮುಂದುವರಿಯುತ್ತಿರುವಾಗ ನನಗೂ ಹಾಸಿಗೆಗೂ ಇರುವ ಅಂಟು ನಿಧಾನವಾಗಿ ಬಿಡಿಸಿಕೊಳ್ಳುತ್ತಿತ್ತು. ಅಂಟು ಅಂದರೆ ಅದೊಂದು ನೀಳ್ಗತೆ. ಇಲ್ಲಿ ಸ್ವಲ್ಪ polished ಭಾಷೆಯಲ್ಲಿ ಹೇಳ್ತೇನೆ. ಬಾಲ್ಯದಲ್ಲಿ ನಾನು bedwetting ಮಾಡಿಕೊಳ್ಳುವ ಹವ್ಯಾಸ ಇತ್ತು; ಹವ್ಯಾಸ ಅನ್ನುವುದಕ್ಕೆ ಅದೇನು ಫೋಟೋಗ್ರಫಿ, ಪಕ್ಷಿವೀಕ್ಷಣೆ, ಚಾರಣ ಇಂತಹದ್ದೇನಲ್ಲ. ನಿತ್ಯವೂ ತಪ್ಪದೇ ನಡೆಯುತ್ತಿದ್ದರಿಂದ ಹಾಗಂದಿದ್ದು. ನನ್ನ ಬಾಲ್ಯದಲ್ಲಿ ಕನಸು ನನಸಾಗುತ್ತಿದ್ದುದು ಉಂಟು. ಅದು ಈ ಹವ್ಯಾಸದ ಮೂಲಕವಷ್ಟೇ! ನಿತ್ಯವೂ ನಾನು ಹೊರಗೆಲ್ಲೋ ಹೋಗಿ ಸೂಸು ಮಾಡಿಬಂದಿರುತ್ತಿದ್ದೆ. ಎಚ್ಚರವಾದಾಗ ಎಂದಿನಂತೆ ಎಡವಟ್ಟಾಗಿರುತ್ತಿತ್ತು!! ಕನ್ನಡಕ್ಕೆ ಅನುವಾದಿಸಿದರೆ ಆ ಬಾಲ್ಯದ ಸಂಕೋಚ ಮತ್ತೆ ಮರಳಿಬಿಡುವುದಲ್ಲಾಂತ ಈ ರೀತಿ ಪಾಲಿಶ್ ಮಾಡಿದ್ದೇನಷ್ಟೇ. ಸಧ್ಯಕ್ಕೆ ಈ ಕತೆ ಇಲ್ಲಿಗೇ ನಿಂತಿರಲಿ.

ಅಮ್ಮನ ಹೊರಗಿನ ಕೆಲಸಗಳೆಲ್ಲ ಮುಗಿದು  ಅಡುಗೆ ಮನೆಗೆ ಬಂದು ರೊಟ್ಟಿ ಮಾಡಲು ಅಣಿ ಮಾಡಿಕೊಳ್ಳುತ್ತಿದ್ದರು. ಅಮ್ಮನ ತಿಂಡಿ ಅಂದರೆ ಅದು ರೊಟ್ಟಿಯೇ. ಅಪ್ಪಿತಪ್ಪಿ ಉಪ್ಪಿಟ್ಟೋ ಚಿತ್ರಾನ್ನವೋ ಆದರೆ ಆ ದಿನ ಅಮ್ಮನ ಆರೋಗ್ಯ ಸರಿಯಿಲ್ಲ ಅಂತ ಅರ್ಥ, ಅಥವಾ ಬೆಳಗಿನ ಗ್ರಹಚಾರ ನೆಟ್ಟಗಿಲ್ಲ ಅಂತ ಇನ್ನೊಂದು ಅರ್ಥ.  ರೊಟ್ಟಿಯ ಹೊರತಾಗಿ ಬೇರೆ ಯಾವುದೇ ತಿಂಡಿಯನ್ನೂ ನಾನೂ ನನ್ನ ಕೊನೆಯ ಸೋದರಮಾವನೂ ಒಕ್ಕೊರಲಿನಿಂದ ನಿರಾಕರಿಸುತ್ತಿದ್ದೆವು. ಅದರಲ್ಲೂ ಅಕ್ಕಿರೊಟ್ಟಿಯೇ ಆಗಬೇಕು. ಅಪರೂಪಕ್ಕೆ ಒಮ್ಮೊಮ್ಮೆ ಅಕ್ಕಿಹಿಟ್ಟು ಖಾಲಿಯಾಗಿ ಮುದ್ದೆ ಮಾಡಲು ಯಥೇಚ್ಛವಾಗಿರುತ್ತಿದ್ದ ರಾಗಿ ಹಿಟ್ಟಿನ ರೊಟ್ಟಿಯೇನಾದರೂ ಆಯ್ತೋ, ಅದಕ್ಕೂ ಗ್ರಹಚಾರ ಬಿಡಿಸುತ್ತಿದ್ದೆವು. ರೊಟ್ಟಿಗೆ ನಿತ್ಯವೂ ತೆಂಗಿನಕಾಯಿ ಚಟ್ನಿ, ಮುಂಗಾರಿನಲ್ಲಾದರೆ  ತಿಂಗಳ ಹುರುಳಿಯ ಕಾಯಿ ಫಲ್ಯ, ಆಲೂಗಡ್ಡೆ ಫಲ್ಯ. ಅಮ್ಮನ ಆ ಒಂದು ರೊಟ್ಟಿ ತಿಂದರೆ ಮಧ್ಯಾಹ್ನ ಊಟದ ಅಗತ್ಯವಿರುತ್ತಿರಲಿಲ್ಲ. ಹಾಗಾಗಿ ಸ್ಕೂಲ್ ನ ಮಧ್ಯಾಹ್ನದ ಊಟದ ಸಮಯದಲ್ಲಿ ಅದೆಷ್ಟು ಒತ್ತಾಯಿಸಿದರೂ, ಗೆಳೆಯರ ಜೊತೆಯಲ್ಲಿ ಆಟ ಆಡುವುದಕ್ಕೆ ಜಾರಿಕೊಳ್ತಿದ್ದೆ. ಹಾಗೆ ಆಟ ಆಡುವಾಗ, ಕಳ್ಳ ಪೊಲೀಸ್ ಆಟವೇನಾದರೂ ಆಗಿದ್ದು, ಗುಡ್ಡದಂತೆ ಇದ್ದ ನಮ್ಮ ಊರಿನ ಕೆಳಭಾಗದಲ್ಲಿದ್ದ ಸ್ಕೂಲ್ ನಿಂದ ಗುಡ್ಡದ ತುದಿಯಲ್ಲಿದ್ದ ನಮ್ಮ ಮನೆಯ ಸಮೀಪ ಬಂದದ್ದೇನಾದರೂ ಆಗಿದ್ದರೆ ಅಂತಹ ಮಧ್ಯಾಹ್ನ ಊಟಕ್ಕೆ. ಇಲ್ಲಾಂದ್ರೆ ಚಕ್ಕರ್. ಒತ್ತಾಯಗಳಿಗೆ ಮಣಿಯದ ನನ್ನನ್ನು ಬದಲಾಯಿಸಲಾಗದೇ  ಅಮ್ಮನೇ ಒಂದರ್ಧ ರೊಟ್ಟಿಯನ್ನು ಬ್ಯಾಗಿನೊಳಗೆ ಹಾಕಿ ಸ್ಕೂಲಿಗೆ ಕಳಿಸ್ತಿದ್ದರು.

ಅಮ್ಮನ ಅಡುಗೆ ಅಂದರೆ ಅದು ಖಾರಾ ಬಾಂಬು! ಓಹೋ, ಆ ಖಾರಾಪುಡಿಯನ್ನು ತಯಾರಿ ಮಾಡಿಕೊಳ್ಳುವುದಂತೂ ಅಮ್ಮನ ಸಂಪ್ರದಾಯ. ಮೆಣಸಿನಕಾಯಿ ಹೆಕ್ಕಿ ಅದನ್ನು ಬಿಸಿಲಿನಲ್ಲಿ ಹದವಾಗಿ ಒಣಗಿಸಿ ಆಮೇಲೆ ಮೆಲು ಉರಿಯಲ್ಲಿ ಹುರಿದು ಪುಡಿಮಾಡಿಸುತ್ತಿದ್ದ ಪ್ರಕ್ರಿಯೆ, ನಮ್ಮ ರಕ್ಷಣಾ ಇಲಾಖೆಯ ಮದ್ದುಗುಂಡುಗಳ ತಯಾರಿಕೆಯ ಹಾಗೆ ಇರುತ್ತಿತ್ತು. ಇನ್ನು ಉಳಿದ ಸಂಬಾರ ಪದಾರ್ಥಗಳ ಏರ್ಪಾಡು ಅಂದರೆ ಅದು ಬಿಡಿ, ಬಜೆಟ್ ಮಂಡಿಸುವುದಕ್ಕೂ ಸಹ ಹಣಕಾಸು ಸಚಿವರು ನನ್ನ ಅಮ್ಮನ ರೀತಿಯ ತಯಾರಿ ಮಾಡಿಕೊಳ್ಳಲಾರರು!  ಅಮ್ಮನ ಆ ಖಾರಾಬಾಂಬಿಗೆ ನಾವು ಎಷ್ಟು ಒಗ್ಗಿಹೋಗಿದ್ದೆವೆಂದರೆ ಯಾರಾದರೂ ನೆಂಟರು ಬಂದರೆ ಅವರ ಮೇಲಿನ ಕಾಳಜಿಯಿಂದ ಅಮ್ಮ ಸ್ವಲ್ಪ ಖಾರ ಕಡಿಮೆ ಮಾಡಿದರೂ ಅವರ ಬೆವರಿಳಿಯುತ್ತಿರುತ್ತಿತ್ತು. ನಾವು ಬೇರೆ ಮನೆಗಳಲ್ಲಿ ಊಟ ಮಾಡುವಾಗ ಉಪ್ಪಿನ ಕಾಯಿ ಇದ್ದರಷ್ಟೇ ಅಮ್ಮನ ಬಾಂಬಿಗೆ ತುತ್ತಾದ ನಮ್ಮ ನಾಲಿಗೆಗೆ ಬೇರೆಯವರ ಸಾಂಬಾರಿನ ರುಚಿ ಹೊಂದಿಸಿಕೊಳ್ಳಬಹುದಾಗಿತ್ತು.

ಅಮ್ಮನ ಇನ್ನೊಂದು ವೈಖರಿಯೆಂದರೆ ಕಾಲಕ್ಕೆ ತಕ್ಕಂತೆ, ಋತು ಬದಲಾದ ಹಾಗೆ ಅಮ್ಮನ ತರಕಾರಿ ಪದಾರ್ಥಗಳೂ ಬದಲಾಗುತ್ತಿದ್ದವು. ಒಂದೇ ರೀತಿಯ ತರಕಾರಿಯನ್ನು ಯಾವತ್ತೂ ಪುನರಾವರ್ತಿಸುತ್ತಿರಲಿಲ್ಲ. ಸೊಪ್ಪು ಹೊಂದಿಸುವುದಕ್ಕಂತೂ ಅರ್ಧ ಮೈಲಿ ಸುತ್ತಿ ಬರುತ್ತಿದ್ದರು. ಇನ್ನು ಅಣಬೆ ಅಂದರೆ ಮುಂಜಾವಿನಲ್ಲಿಯೇ ಹೊರಟು ಒಂದು ಬುಟ್ಟಿ ಅಣಬೆ ಹೊಂದಿಸಿ ತಂದಿಟ್ಟಿರುತ್ತಿದ್ದರು. ಸೀಗೆಸೊಪ್ಪು, ನುಗ್ಗೆಸೊಪ್ಪು, ಬಸಳೆಸೊಪ್ಪು, ಬಿದಿರಿನ ಕಳಲೆ, ಗದ್ದೆಬದುಗಳಲ್ಲಿ ಇರ್ತಿದ್ದ ಕಹಿಎಣಿಗೆ ಸೊಪ್ಪು. ಹಲಸಿನ ಬಡುಕು, ಹಲಸಿನ ಬೀಜ, ಇವು ಕೆಲವೇ ಕೆಲವು.  ಇನ್ನು ತರಕಾರಿಗೆ ತಕ್ಕಂತೆ ಹೊಂದುವ ಕಾಳುಗಳು. ಅವೂ ಸಹ ಎರಡು ದಿನಕ್ಕೆ ಪುನರಾವರ್ತನೆಯಾಗುತ್ತಿರಲಿಲ್ಲ. ಇಷ್ಟೆಲ್ಲಾ ಆಹಾರ ವೈವಿಧ್ಯತೆಯಿರುತ್ತಿದ್ದರಿಂದ ನಮಗೆ ಅನಾರೋಗ್ಯ ಅನ್ನುವುದೇ ಗೊತ್ತಿರಲಿಲ್ಲ. ಅಪರೂಪಕ್ಕೆಂದು ಜ್ವರವೋ, ಕೆಮ್ಮೋ ಆದರೆ ನಮ್ಮ ಊರಿನ ಪಕ್ಕದಲ್ಲಿರುವ ಶೆಟ್ಟಿಹಳ್ಳಿಯ ಸಂತಮರಿಯಮ್ಮನ ಆಸ್ಪತ್ರೆ. ಅಲ್ಲಿ ಒಂದು ಕ್ಯಾನ್ ನಲ್ಲಿ ಇರಿಸುತ್ತಿದ್ದ ಕೆಮ್ಮಿನ ಸಿರಪ್, ಅಥವಾ ಬಿಸಿನೀರಿನಲ್ಲಿ ಸದಾ ಕುದಿಸುತ್ತಿದ್ದ ಆ ಗಾಜಿನ ಸಿರಿಂಜುಗಳಲ್ಲಿ ಮೇಲಿನ ತುದಿಗೆ ಒಂದೆರಡು ಹನಿಯಂತೆ ಎಳೆದು ಚುಚ್ಚುತ್ತಿದ್ದ ಇಂಜೆಕ್ಷನ್ನು, ಅದೂ  ಯುಗಾದಿ, ದೀಪಾವಳಿಯ ಹಾಗೆ ವರ್ಷಕ್ಕೊಂದೋ ಅಥವಾ ಎರಡೋ ಅಷ್ಟೇ!

 ನಾವು ಮಳೆಯಲ್ಲಿ ನೆನೆಯುವುದು ಧೂಳು ಕೊಳಕಿನಲ್ಲಿ ಆಟವಾಡುತ್ತಿದ್ದಕ್ಕೆ ಶೀತ ನೆಗಡಿ ಅನ್ನುವುದು ಆಗ್ಗಾಗ್ಗೆ ತೋರ್ಪಡಿಸಿಕೊಳ್ಳುತ್ತಿತ್ತು. ಹಾಲಿಗೆ ಒಂದಿಷ್ಟು ಮೆಣಸಿನ ಪುಡಿ, ಇನ್ನೊಂದಿಷ್ಟು ಅರಿಶಿನ ಹಾಕಿ ಬಿಸಿಯಾಗಿ ಕುಡಿದರೆ ಅದೇ ಮದ್ದು. ಅದಕ್ಕಿಂತ ಹೆಚ್ಚಿನ ಶುಶ್ರೂಷೆಯ ಅಗತ್ಯವಿರಲಿಲ್ಲ.  ಆದರೆ ಅಮ್ಮನ ನಿತ್ಯದ ಖಾರಾಬಾಂಬಿನ ಜೊತೆಯಲ್ಲೇ, ಪ್ರತಿಶನಿವಾರವೂ ಕೊತಕೊತ ಕುದಿಯುತ್ತಿದ್ದ ನೀರಿನ ಅಭ್ಯಂಜನ. ಅದಂತೂ ಲಾವಾರಸವೇ ಮೈಮೇಲೆ ಹರಿದ ಹಾಗಿರುತ್ತಿತ್ತು. ನಾನಂತೂ ಶನಿವಾರದ ಸ್ನಾನ ತಪ್ಪಿಸಿಕೊಳ್ಳುವುದಕ್ಕೆ ತುದಿಗಾಲಿನಲ್ಲಿರುತ್ತಿದ್ದೆ. ಆಗುತ್ತಿರಲಿಲ್ಲ. ಓಹೋ, ಮೈಯೆಲ್ಲಾ ಸುಟ್ಟು ಹೊಗೆ ಬರುವ ಹಾಗೆ ಮಾಡಿಬಿಡುತ್ತಿದ್ದರು.  ಅಲ್ಲಿಗೆ ಮಿಕ್ಕ ಖಾಯಿಲೆಗಳೆಲ್ಲ ಅದರಿ ಅಲ್ಲಾಡಿ ಬೆದರಿ ಬೆಂಡಾಗಿ ಹೋಗಿಬಿಡಬೇಕಿತ್ತಷ್ಟೇ!

ಅಮ್ಮನ ಜೊತೆಗಿನ ಈ ದಿನಗಳಲ್ಲಿ ಅಂಗನವಾಡಿಯ ಸಮಯದಲ್ಲಿ ಆಂಟಿಯೂ ಇದ್ದರು. ನಾನು ಒಂದನೇ ಕ್ಲಾಸಿನಲ್ಲಿದ್ದಾಗ ಅವರ ಮದುವೆಯಾಯ್ತು. ಅದಾದ ನಂತರ ಏಳನೇ ಕ್ಲಾಸಿನ ತನಕ ಅಮ್ಮನ ಜೊತೆಯಲ್ಲಿಯೇ ಇದ್ದೆ. ಅಮ್ಮನ ಜೊತೆಯಿದ್ದು ಅದೆಷ್ಟು ಅವಲಂಬಿತನಾಗಿದ್ದೆ ಅಂದರೆ, ನನಗೆ ಬಾಗಿ ನನ್ನ ಕಾಲು ತೊಳೆದುಕೊಳ್ಳುವುದಕ್ಕೇ ಬರುತ್ತಿರಲಿಲ್ಲ. ನಾಲ್ಕನೇ ಕ್ಲಾಸಿನಲ್ಲಿ ನನ್ನ ಇಮ್ಮಡಿಗಳನ್ನು ಉಜ್ಜಿ ತೊಳೆಯುವುದಕ್ಕೆ ಕಲಿತಿದ್ದು. ಅಷ್ಟೇ ಯಾಕೆ, ಮೂಗಿನ ಸಿಂಬಳ ತೆಗೆಯುವುದು ಹೇಗೆ !

ಅಂತಲೂ ಗೊತ್ತಿರಲಿಲ್ಲ. ಅಮ್ಮನ ಆ ಆರೈಕೆ ಕಾಳಜಿಗಳು ಮುಂದೆ ನಾನು ಹಾಸ್ಟೆಲ್ ಸೇರಿದ ದಿನಗಳಲ್ಲಿ  ವಿಪರೀತ ಹಿಂಸೆ ಅನುಭವಿಸುವ ಹಾಗೂ ಮಾಡಿದವು. ಆದರೆ ಬಾಲ್ಯದ ಅಮ್ಮನ ಆ ಆಹಾರ ಪದ್ಧತಿಯು ನನ್ನ ಆರೋಗ್ಯವನ್ನು ಏರುಪೇರಾಗದಂತೆ ಇರಿಸಿತ್ತು. ಒಂದು ಸಾರ್ತಿ ಹಾಸನದಲ್ಲಿದ್ದಾಗ ಟೈಫಾಯ್ಡ್ ಆಗಿ ಆಸ್ಪತ್ರೆ ದಾಖಲಾಗಿದ್ದ ಒಂದೇ ಘಟನೆ. ಅದು ಬಿಟ್ಟು ನಾನು ಈವರೆಗೆ ಬೇರೆ ಖಾಯಿಲೆ ಅಂತ ಡಾಕ್ಟರನ್ನು ನೋಡಿಲ್ಲ. ಇನ್ನು ದೇಶಬಿಟ್ಟ ನಂತರವಂತೂ, ಒಂದು ದಿನ ಡ್ರೈವರ್ ಲೈಸಿನ್ಸ್ ಪಡೆಯುವುದಕ್ಕೆ ಕಡ್ಡಾಯವಾಗಿ ನಡೆಸಬೇಕಾದ ತಪಾಸಣೆಗೆಂದು ಆಸ್ಪತ್ರೆಗೆ ಹೋಗಿದ್ದು; ಆಮೇಲೆ ಒಂದು ಸಾರ್ತಿ ರಾಶಿ ಹಿಮ ಸುರಿದಿದ್ದ ಚಳಿಗಾಲದಲ್ಲಿ ಕೆಮ್ಮಾಗಿ ನಿರ್ಲಕ್ಷಿಸಿದ್ದಕ್ಕೆ ಅದು ಜ್ವರಕ್ಕೆ ತಿರುಗಿ ಒಂದು ದಿನ ಆಸ್ಪತ್ರೆಗೆ ಹೋಗಿದ್ದೆ. ಅದು ಬಿಟ್ಟರೆ ಹತ್ತು ವರ್ಷಗಳಲ್ಲಿ ಆಸ್ಪತ್ರೆಯ ಮುಖ ನೋಡಬೇಕಾದ ಅಗತ್ಯವೇ ಬಂದಿಲ್ಲ ನನಗೆ. ಹಾಂ, ಸದಾ ಕಂಪ್ಯೂಟರ್ ಮುಂದೆಯೇ ನನ್ನ ಕೆಲಸವಾಗಿರುವುದರಿಂದ, ಮೊದಲ ಕೆಲವು ವರ್ಷಗಳ ಸಿಆರ್‌ಟಿ ಮಾನಿಟರುಗಳ ಕೃಪೆಯಿಂದಾಗಿ ದೃಷ್ಟಿ ನೆಟ್ಟಗೆ ಮಾಡಿಕೊಳ್ಳುವುದಕ್ಕೆಂದು ಕನ್ನಡಕ ಕಡ್ಡಾಯವಾಗಿಬಿಟ್ಟಿದೆ! ಅದಕ್ಕಂತೂ ಪ್ರತಿ ಎರಡು ವರ್ಷಕ್ಕೊಮ್ಮೆ ರಾಜಾಸೀಟಿನ ಮೇಲೆ ಕೂತು ಆ ಡಾಕ್ಟರು ತಿರುಗಿಸುವ ಲೆನ್ಸುಗಳ ಮೂಲಕ ನೋಡಿ ನನಗೆ ಓದಲು ಬರ್ತದೋ ಇಲ್ಲವೋ ಅಂತ ಅವರ ಮುಂದೆ ಸಾಬೀತುಪಡಿಸಬೇಕಾಗ್ತದೆ. ಆದರೆ ಸಣ್ಣಪುಟ್ಟ ಖಾಯಿಲೆಗಳಿಗೆ ನಾನು ಇಂದೂ ಸಹ ಅಮ್ಮನ ಆ ಮನೆ ಔಷಧಿಗಳನ್ನೇ ಅನುಸರಿಸ್ತೇನೆ, ಖಾರಾಬಾಂಬು, ಹೊಗೆಯಾಡಿಸುವಂತಹ ಆ ಅಭ್ಯಂಜನ ಸ್ನಾನ ಇವೆರಡನ್ನು ಹೊರತುಪಡಿಸಿ!

*********


Leave a Reply

Back To Top