ಒಲೆಯ ಮೇಲಿನ ಬದುಕು

ಕಾವ್ಯ ಸಂಗಾತಿ

ಒಲೆಯ ಮೇಲಿನ ಬದುಕು

ಶಂಕರಾನಂದ ಹೆಬ್ಬಾಳ

Ashes to ashes Painting by Hein Mark | Saatchi Art

ಒಲೆಯ ಮೇಲೆ ಉರಿದ ಬದುಕು
ನರಳಿ ನರಳಿ ಹೋಗಿದೆ..!
ಒಲವ ಬಯಸಿ ಕುಳಿತ ಜೀವ
ಸುಟ್ಟು ಬೂದಿಲಾಗಿದೆ..!!

ಕಮರಿ ಹೊರಟ ಭಾವ ರಥದ
ಚಕ್ರಮುರಿದು ನಿಂತಿದೆ..!
ವಿಮಲ ಹೃದಯ ಶಿಲೆಯ ತೆರದಿ
ಮೌನದಾರಿ ಹಿಡಿದಿದೆ..!!

ಹೆತ್ತ ತಾಯಿ ತಂದೆಯಿರದ
ಬಾಳು ನನ್ನದಾಗಿದೆ..!
ಅತ್ತು ಕರೆದು ಜೀವ ಇಂದು
ಒಳಗೆ ತಾನು ಕೊರಗಿದೆ..!!

ಕಿಚ್ಚಿನಲ್ಲಿ ಸುಡುತಲಿರುವ
ಬಾಳು ರೊಟ್ಟಿಯಾಗಿದೆ..!
ಹುಚ್ಚಿಯಂತೆ ಅಲೆವ ಮನವು
ದೇವನನ್ನು ಕೂಗಿದೆ..!!

ಕಟ್ಟಿಕೊಂಡ ಪತಿಯು ಇರದೆ
ನಿತ್ಯ ಕಷ್ಟ ನೋಡಿದೆ..!
ಗಟ್ಟಿಯಾಗಿ ಲೋಕದೊಳಗೆ
ನೋವನುಂಡು ಹಾಡಿದೆ..!!


ಶಂಕರಾನಂದ ಹೆಬ್ಬಾಳ

Leave a Reply

Back To Top