ಪ್ರಬಂಧ
ಆಸಮಯದಲ್ಲಿ…
ನಿಂಗಮ್ಮ ಭಾವಿಕಟ್ಟಿ
ನನಗೆ ಗೊತ್ತು, ನನಗೇನೋ ಆಗಿದೆ. ಅಯ್ಯೋ ಏನೋ ಅಂದ್ರೆ ಆ ಏನೋ ಅಲ್ಲ , ಏನೋ . ಆದ್ರೆ …ಏನು? ಎಲ್ಲಾ ಸರಿಯಾಗೇ ಇದೆ. ಗಂಡ ಮೊದಲಿನಂತೆ ಸಣ್ಣ ವಿಷಯಕ್ಕೂ ರೇಗುವುದಿಲ್ಲ. ಮಕ್ಕಳೆಲ್ಲ ದೊಡ್ಡವರಾಗಿದಾರೆ. ಒಬ್ಬೊಬ್ಬರು ಒಂದೊAದು ದೊಡ್ಡ ದೊಡ್ಡ ಊರುಗಳಲ್ಲಿ ಓದುತಿದ್ದಾರೆ. ಹಿರಿ ಮಗನ ಮದುವೆಯೂ ಆಗಿ ಎರಡು ವರ್ಷ ಆಯ್ತು. ಬಡತನದಿಂದ ಮೇಲೆ ಬಂದು ಹೇಗೋ ನಾಲ್ಕು ಜನರ ತರ ನಾವೂ ಇದ್ದೇವೆ. ತಾನಾದರೂ ಬೇರೆಯವರ ಕಷ್ಟಕ್ಕೆ ಕರಗುವ ಕರುಳಿನಾಕೆ . ಅದಕ್ಕೂ ಯಾರ ಅಡ್ಡಿಯೂ ಇಲ್ಲ.
ಆದ್ರೂ ಇತ್ತೀಚೆಗೆ ಸಮಾಧಾನವೇ ಇಲ್ಲ. ಎಲ್ಲೋ ಓದಿದ ನೆನಪು. “ ಎಲ್ಲಾ ಇದ್ದೂ ಕೊರಗುವ ಮನಸ್ಥಿತಿಗೆ ಖಿನ್ನತೆ ಅಂತಾರೆ ಹಾಗಾದಾಗ ಬೇಕಾದವರೊಂದಿಗೆ ಬೆರೆಯಬೇಕು. ಇಷ್ಟವಾದ ಕೆಲಸ ಮಾಡಬೇಕು, ಒಳ್ಳೇ ಸಾಹಿತ್ಯ ಓದಬೇಕು ಒಟ್ಟಿನಲ್ಲಿ ಯಾವುದಾದರೊಂದರಲ್ಲಿ ತೊಡಗಿಸಿಕೊಳ್ಳಬೇಕು.” ಎಲ್ಲಾ ಗೊತ್ತು ನನಗೇನು ಖಿನ್ನತೆ ಅನಿಸಲಿಲ್ಲ. ಅಲ್ಲದೇ ಹಿಪ್ನಾಟಿಸಂ ಗೆ ಒಳಗಾಗುವ ವ್ಯಕ್ತಿ ಗೆ ತಾನು ಹಿಪ್ನಾಟಿಸಂ ಗೆ ಒಳಗಾಗುತಿದ್ದೇನೆ ಎಂದು ತಿಳಿದರೆ ಆ ಪ್ರಯೋಗ ಅಷ್ಟು ಯಶಸ್ವಿಯಾಗಲಾರದು . ಹಾಗೇ ಸಮಸ್ಯೆ ಗೊತ್ತು ಪರಿಹಾರ ಗೊತ್ತಿದ್ದಾಗ ಅಳವಡಿಕೆ ಅಷ್ಟು ಸರಳವಲ್ಲ , ಅಲ್ಲದೇ ಅದು ಪರಿಣಾಮವೂ ಆಗಲಿಕ್ಕಿಲ್ಲವೇನೋ. ಹಾಗಾಗಿ ಒಂದೆರಡು ಪ್ರಯೋಗಗಳೂ ವರ್ಕೌಟ್ ಆಗಲಿಲ್ಲ.
ಸಣ್ಣ ಮಾತಿಗೂ ಸಿಡುಕುತ್ತೇನೆ. ಸುಮ್ಮನಿರುವ ವಿಷಯಕ್ಕೆ ದೊಡ್ಡ ಮಾತಾಡುತ್ತೇನೆ. ಹಿಂದಿನದೇನೋ ನೆನಪಾಗಿ ಪೇಚಾಡುತ್ತೇನೆ. ಸಕಲ ಸೌಖ್ಯದಲ್ಲೂ ನೋವಿನ ನೆನಪು. ಮಕ್ಕಳೊಂದಿಗೆ ಮಾತಾಡುತ್ತಲೇ ಜೋರಾಗಿ ಮಾತಾಡಿ ಫೋನಿಟ್ಟುಬಿಡುತ್ತೇನೆ. ಆಮೇಲೆ ಹಾಗೆ ಮಾಡಬಾರದಿತ್ತು ಅನಿಸುತ್ತದೆ. ಆದ್ರೆ… ಆ ಸಮಯ ಕಳೆದಿರುತ್ತದೆ.
ತನ್ನ ಬಗ್ಗೆ ತನಗೇ ತಿಳಿಯದಂತಾಗಿ ಸುಮ್ಮನೇ ಅಳುತ್ತೇನೆ. ಗೊತ್ತಿದೆ ನನಗೆ ‘ಅಳುವುದರಿಂದ ಏನೂ ಸಾಧಿಸಲಾಗದು ಅಂತ’ ಆದರೂ… ಒಮ್ಮೆಲೇ ಅನಿಸುತ್ತದೆ. ಗಂಡ ತನ್ನನ್ನು ಪ್ರೀತಿಸುತಿಲ್ಲ ತಾನಂದ್ರೆ ಕಾಳಜಿ ಇಲ್ಲ. ಆದ್ರೆ ಗೊತ್ತಿದೆ ತನಗೆ ದೊಡ್ಡ ಸಂಸಾರ ಅವನು ಮೊದಲಿನಿಂದಲೂ ಹಾಗೆಯೇ ಈಗಿನ್ನೂ ಚೊಲೋ ಒಂದೊಂದು ಮಾತು ಕೇಳುತ್ತಾನೆ. ಮುನಿಸಿಕೊಂಡಾಗ ರಮಿಸುತ್ತಾನೆ. ನಗಿಸುತ್ತಾನೆ. ಆದ್ರೂ ಅಳು… ಯಾರೂ ಇಲ್ಲದಾಗ ಒಬ್ಬಳೇ ಹೇಳುತ್ತೇನೆ ‘ಐ ಹೇಟ್ ಯೂ ಹೋಗೋ’ ದೊಡ್ ಮಕ್ಕಳ ದೊಡ್ಡ ಓದು ಜವಾಬ್ದಾರಿ ಗಂಡನದು. ಅವನ ಬಿಸಿನೆಸ್ ಟೆನ್ಶನ್ ನಲ್ಲೂ ಅವನ ಗಮನ ನನ್ನ ಮೇಲೇ ಇರಲಿ ಅನ್ನು ಹುಚ್ಚು ಯಾಕೋ? ಅವನೆದುರು ಹೇಳೋಕಾಗಲ್ಲ ಹೇಳದೇ ಇರೋಕಾಗಲ್ಲ. ಕಿರಿ ಮಗನ ಕೊನೆ ಪೇಪರ್ ಮುಗಿದು ಮನೆಗೆ ಬರುತಿದ್ದಾನೆ. ಅಳಬಾರದು ಎಂದುಕೊಳ್ಳುತ್ತೇನೆ. ಅಷ್ಟೊತ್ತಿಗೆ ಗಂಟಲು ಬಿಗಿದಿರುತ್ತದೆ. ತಂಗಿಯೂ ನಾನು ಸುಮ್ಮನಿದ್ರೂ ತಾನೇ ಚೆಂದಗೆ ಮಾತಾಡಿಸುತ್ತಾಳೆ ಪಾಪ. ಎಲ್ಲಿಗಾದರೂ ಗಂಡನೊಡನೆ ಹೋಗಿ ಬಾ ಚೇಂಜ್ ಇರುತ್ತೆ ಅಂತ ಮನವೊಲಿಸುತ್ತಾಳೆ. ಅವನೂ “ಬಾರೇ ನೀನು ಬಂದ್ರೆ ಚೆನಾಗಿರುತ್ತೆ” ಅನುನಯಿಸುತ್ತಾನೆ. ಮೊನ್ನೆ ಒಮ್ಮೆ ಫೋಟೋಗೆ ಫೋಜ್ ಕೊಡಲಿಲ್ಲ ಅಂತ ಅವನೊಡನೆ ಎಲ್ಲೂ ಹೋಗಬಾರದು ಎಂದುಕೊಂಡಿದ್ದೇನೆ. ಸಣ್ಣ ಕಾರಣ ಪೆದ್ದಿ. “ಇಲ್ಲ ಬೇಡ ಅಂದೆ ತಾನೇ? ಒಲ್ಲೆ. ನಾನೇನು ಚಿಕ್ಕವಳಾ? ಯಾಕೆ ಫೋರ್ಸ ಮಾಡೋದು? “ ಅವರನ್ನು ಮಾತಾಡಲು ಬಿಡದೇ ಹೇಳಿಬಿಡುತ್ತೇನೆ.
ಹೌದು ತಾನು ಚಿಕ್ಕವಳಲ್ಲ ಹಠ ಮಾಡಲು. ನಲವತ್ತೆöಟದರ ಆಸುಪಾಸಿನಲ್ಲಿರುವ ಗೃಹಿಣಿ. ಅಂದ್ರೆ… ಮೊನ್ನೆ ಓದಿದ್ದೆನಲ್ಲವೇ ‘ನಲವತೈದರಿಂದ ಐವತ್ತು ಮೆನೋಪಾಸ್ ಏಜ್’ (ಮುಟ್ಟು ನಿಲ್ಲುವ ಸಮಯ) ಆಗೆಲ್ಲ ಹೀಗೇ ಅಂತೆ ಆಗೋದು. ಅದೆಲ್ಲ ಗೊತ್ತಿದ್ರೂ ತಾನು ತನ್ನು ಸಂಭಾಳಿಸಿಕೊಳ್ಳಲಾಗುತಿಲ್ಲವೇ? ಅಂದ್ರೆ? ತಾನು ದುರ್ಬಲಳೇ? ನೋ ಎಂತೆಂತಹ ಸಮಸ್ಯೆಗಳನ್ನು ಸಹಿಸಿಕೊಂಡು, ಎದುರಿಸಿ, ಅನುಭವಿಸಿದ ಅನುಭವಗಳಿಂದ ಗಟ್ಟಿಯಾಗಿದೀನಿ. ಅಂದುಕೋತೀನಿ ತನ್ನನ್ನು ಯಾರೂ ಯಾಕೆ ಕೇರ್ ಮಾಡಬೇಕು? ಅಂದರೆ ತಾನು ಎಲ್ಲರನ್ನೂ ಕೇರ್ ಮಾಡ್ತೀನಿ ಅಂತ ಎಲ್ಲರೂ ತನ್ನ ಕೇರ್ ಮಾಡ್ಲಿ ಎನ್ನುವ ಮುಯ್ಯಿಬಾವವೇ? ನಾಚಿಕೆಗೇಡು.
ತನ್ನ ಗೆಳತಿಗೊಮ್ಮೆ ಹೀಗೇ ಆದಾಗ ಅವಳಿಗೆ ಒಳ್ಳೇ ಆಪ್ತಸಮಾಲೋಚಕಿಯಂತೆ ಹತ್ತಿರವಾಗಿ ಅವಳನ್ನು ಆ ಸಮಯ ಆ ಭಾವದಿಂದ ಮುಕ್ತಳನ್ನಾಗಿ ಮಾಡಿದಾಗ ಅವಳು ಅವಳ ಮಗಳು ಈಗಲೂ ತನ್ನನ್ನು ತುಂಬಾ ಗೌರವಿಸುತ್ತಾರೆ. ಈಗ ಅನಿಸುತ್ತಿದೆ ಇನ್ನೊಬ್ಬರಿಗೆ ಹೇಳುವುದು ಎಷ್ಟು ಸುಲಭ. ನನ್ನ ಸಮಸ್ಯೆಗೆ ಆಪ್ತಸಮಾಲೋಚಕರಾರು? ತನ್ನೊಳಗಿನ ಖಾಲಿತನ ತುಂಬಿ ತಾನು ನಿರೀಕ್ಷಿಸುವ ಮಾತುಗಳು ಸಿಗುವುದೆಲ್ಲಿ? ಗೊತ್ತಿದೆ ತನಗೆ ಯಾಕೆ ನಿರೀಕ್ಷೆ ಮಾಡಬೇಕು? ಓಶೋ ಮಹಾನುಭಾವ ಹೇಳಿಲ್ಲವೇ? “ಇನ್ನೊಬ್ಬರಿಂದ ಪ್ರೀತಿ, ಸಾಂತ್ವನ ನಿರೀಕ್ಷಿಸುವುದಾದರೆ ಅದೊಂದು ಭಿಕ್ಷೆಯಂತೆ”
ಅಮ್ಮ ಚಿಕ್ಕಮ್ಮರೂ,ಇತಿಹಾಸದ ಮಹನೀಯರೂ ಕೂಡ ಈ ಏಜ್ ನ್ನು ದಾಟಿಯೇ ಹೋಗಿರುವುದು ನೆರೆಹೊರೆಯ, ತನ್ನ ಹಳ್ಳಿಯ ಎಲ್ಲ ಹಿರಿಯರೂ ಈ ಏಜ್ ದಾಟಿದವರೇ ತಾನೇ? ಅವರು ಆ ಕಾಲವನ್ನು ಹೇಗೆ ದಾಟಿದರು? ಬಹುಶಃ ಅವರ ಅವಿಭಕ್ತ ಕುಟುಂಬದಲ್ಲಿ ಇದನ್ನೆಲ್ಲ ಯೋಚಿಸಲು ಸಮಯವಿಲ್ಲದಿರಬಹುದು. ಆ ಕಾಲದಲ್ಲಿ ಅವರು ಬೇರೆ ರೀತಿಯಲ್ಲಿ ವರ್ತಸಿ ತಮಗರಿವಿಲ್ಲದೇ ದಾಟಿರಬಹುದು. ತಾನು ತನ್ನೊಂದಿಗೆ ಆತ್ಮಾವಲೋಕನ ಎನ್ನುವ ಭ್ರಮೆಯಿಂದ ಹೀಗಾಗಿದ್ದೇನಾ?
ಗೂಗಲ್ ನೂ ಕೇಳಿದ್ದಾಯ್ತು ಹೀಗಾದಾಗ ಏನು ಮಾಡಬೇಕು? ಅಲ್ಲಿ ಅದೇ ಗೊತ್ತಿರುವ ಉತ್ತರ. ನಗಿ, ಬೆರೆಯಿರಿ, ಓದಿ ಇನ್ನೂ ಏನೇನೋ ವಿಚಿತ್ರ ಪರಿಹಾರಗಳು. ಅವಾಗಿಂದ ಅದೇ ಎಪಿಸೋಡ್ ಗಳು ಶುರುವಾದವು. ‘ಬೇಸರವೇ?’, ‘ ಜಿಗುಪ್ಸೆಯೇ?’ ‘ಒಂಟಿತನವೇ?’ ‘ಮೆನೋಪಾಸ್ ಏಜ್ ನಿಭಾಯಿಸುವ ಪರಿ’ ಹೀಗೇ … ಈ ಆರ್ಟಿಫಿಸಿಯಲ್ ಇಟಲಿಜೆನ್ಸ್ ಗೆ ಎಲ್ಲಾ ಗೊತ್ತು ಯಾರು ಏನು ನೋಡುತ್ತಾರೋ ಅ ಬಗೆಗೇ ಅತ್ತಲೇ ಕರೆದುಕೊಂಡು ಹೋಗುತ್ತೆ. ಅಲ್ಲಿಗೆ ನಮಸ್ಕಾರ ಹೇಳಿದೆ.
ಗಂಡ ಏನೋ ತರುವುದನ್ನು ಮರೆತದ್ದಕ್ಕೆ ಕೋಪಿಸಿಕೊಳ್ಳುವ ಮುನ್ನ ಗಂಡನೇ ಇಲ್ಲದವರ ನೆನೆಸಿಕೊಂಡು ಸುಮ್ಮನಾಗಬೇಕು. ಒಳ್ಳೆಯ ಚಪ್ಪಲಿ ಇಲ್ಲದ್ದಕ್ಕೆ ಕೊರಗುವುದರ ಬದಲು ಕಾಲೇ ಇಲ್ಲದವರ ನೋಡಿ ಕಾಲಾದರೂ ಇದ್ದಾವಲ್ಲಾ ಎಂದುಕೊಳ್ಳಬೇಕು. ಹೊರಗೆ ಊಟಕ್ಕೆ ಕರೆದುಕೊಂಡು ಹೋಗಲಿಲ್ಲ ಎಂದು ಮುನಿಸಿಕೊಳ್ಳುವ ಮುನ್ನ ಹೊಟ್ಟೆ ತುಂಬಾ ಊಟ ಮಾಡದಿರುವವರು ಅದೆಷ್ಟು ಜನರಿದ್ದಾರೆ ಎಂದುಕೊಳ್ಳಬೇಕು. ಎಲ್ಲವನ್ನೂ ಕೊಟ್ಟ ದೇವರಿಗೆ ದಿನಾ ಬೆಳಿಗ್ಗೆ ಎದ್ದು ಕೈಮುಗಿಯಬೇಕು. ಎಂತೆಲ್ಲಾ ಗೊತ್ತು. ಆದರೂ…
“ಅಮ್ಮಾ” ಮಗ ಒಳಗಡಿ ಇಡುತ್ತಲೇ ಮನವರಳಿ ಹೂವಾಗಿ “ಬಂದೆಯಾ ಕೂಸೇ” ಅಪ್ಪಿದರೆ ಮತ್ತೆ ಕಣ್ಣೀರು ಅಲ್ಲಲ್ಲ ಅದು ಪನ್ನೀರು. “ಅಮ್ಮಾ ಅರಾಮಾ? ನಿನಗೇನು ತಂದೀನಿ ನೋಡು “ ಮಗ ತನಗೆ ಇಷ್ಟವಾದ ಸೇಂಗಾಚಿಕ್ಕಿ ಮುಂದೆ ಹಿಡಿದಾಗ ಮತ್ತೆ ಕಣ್ಣೀರು. “ಯಾಕಮ್ಮಾ ಏನಾತು ನೀನು ಕಣ್ಣೀರೊರೆಸುವವಳು ನಗಿಸುವವಳು ಅಳಬಾರದು.” ಏನಂದ ಮಗ ‘ನಾನು ಕಣ್ಣೀರೊರೆವಾಕೆ ಅಳಬಾರದು.’ ಕಣ್ಣೊರೆಸಿಕೊಂಡು “ಮುಖತೊಳೆದುಕೋ ಹೋಗು ಏನಾದ್ರೂ ಕೊಡುತ್ತೇನೆ” ಮನಸು ಹಗುರಾದ ಭಾವ. ಹೆಚ್ಚು ಕಡಿಮೆ ತಿಂಗಳಿಂದ ಬಾಧಿಸುತಿದ್ದ ಮೌನದ ಮಂಜು ಬೆಳದಿಂಗಳಿನಲ್ಲಿ ತಂಗಾಳಿಯಂತೆ ಬಂದ ಮಗನ ಮಾತಿನಿಂದ ಕರಗಿಹೋಯಿತು. ನಾನು ಆ ಏಜ್ ನೊಂದಿಗೆ ಹೋರಾಡುತಿದ್ದೆ ಮಗ ಹೊಂದಿಕೊಳ್ಳಲು ಕಲಿಸಿದ. ಅಥವಾ ತನ್ನೊಳಗಿನ ಯೋಚನೆಗಳ ಅಬ್ಬರ ಉಬ್ಬರವೆಲ್ಲಾ ಇಳಿಮುಖವಾಗಿತ್ತೇ?
ಗೊತ್ತಿಲ್ಲವೆ ತನಗೆ ಮೆನೋಪಾಸ್ ಏಜ್ ಎಂಬುದು ಪ್ರಕೃತಿಸಹಜ ಪ್ರಕ್ರಿಯೆ, ಹಾರ್ಮೋನುಗಳ ಏರುಪೇರಿನಿಂದ ಭಾವನೆಗಳ ಏರಿಳಿತ ಉಂಟಾಗುತ್ತದೆ. ಹೆಣ್ಣಿನ ಜೀವನದಲ್ಲಿ ಬರುವ ಈ ಹಂತದಲ್ಲಿ ಒಂದಿಷ್ಟು ಕಾಲ ಶೂನ್ಯಬಾವ ಆವರಿಸುತ್ತದೆ. ಒಂದಿಷ್ಟು ಸತ್ಯಗಳು ಹೊಳೆದರೆ ಒಂದೊಷ್ಟು ಸತ್ಯಗಳು ಸುಳ್ಳೆನಿಸತೊಡಗುತ್ತವೆ. ಅನುಮಾನ, ಕೋಪ, ನಿರ್ಲಕ್ಷö್ಯ, ವೈರಾಗ್ಯಭಾವಗಳ ಸಂಘರ್ಷ ನಡೆಯುತ್ತದೆ ಎಂದು. ಆದರೂ…
“ಅಮ್ಮಾ…” ಮಗ ಮುಖ ತೊಳೆದು ಹೊಳೆಯುವ ಚಂದಿರನಂತೆ ಮುಂದೆ ನಿಂತಾಗ “ಬಂಗಾರ” ಮುದ್ದಿಸಿದೆ. ನಕ್ಕ ಹೂವಿನಂತೆ.
ನಿಂಗಮ್ಮಭಾವಿಕಟ್ಟಿ
ಪ್ರತಿ ಹೆಣ್ಣಿನ ಬದುಕಿನಲ್ಲೂ ಬರುವ ಈ ಸಂದರ್ಭವನ್ನು ಎದುರಿಸಲು ಅರಿವು ಮುಖ್ಯ ಅನ್ನುವುದು ತಿಳಿಸಿದ್ದೀರಿ. ಉತ್ತಮ ಲೇಖನ.
ಹೆಣ್ಣಿನ ಆಂತರಿಕ ಬದಲಾವಣೆ, ತಳಮಳ, ಗೊಂದಲ ಒಂದು ಹೆಣ್ಣಿಗೆ ಮಾತ್ರ ತಿಳಿಯುತ್ತದೆ. ದೈಹಿಕ ಬದಲಾವಣೆ, ಹಾರ್ಮೋನ್ ಗಳ ವ್ಯತ್ಯಾಸಗಳಿಂದ ಉಂಟಾಗುವ ಭಾವನಾತ್ಮಕ ತೊಳಲಾಟವನ್ನು ಮುಕ್ತವಾಗಿ ಬಿಂಬಿಸಿದ್ದೀರಿ… ತುಂಬಾ ಚನ್ನಾಗಿದೆ.