ಪುಸ್ತಕ ಸಂಗಾತಿ
ಮೈನಾಎಂಬತಂಕಾಮಾಸ್ಟರ್
“The difficulty of literature is not to write, but to write what you mean.”
-Robert Louis Stevenson
“The difficulty of literature is not to write, but to write what you mean.”
-Robert Louis Stevenson
ಪ್ರಕೃತಿಯ ಎಲ್ಲ ಜೀವಸಂಕುಲಗಳಲ್ಲಿ ಮನುಷ್ಯ ಜೀವಿ ತನ್ನ ಭಾವನಗಳಿಂದಲೆ ವಿಭಿನ್ನವಾಗಿ, ವಿಶಿಷ್ಟವಾಗಿ ಹಾಗೂ ಅನುಪಮವಾಗಿರುವ ಭಾವನಾ ಜೀವಿ. ತನ್ನ ಭಾವನೆಗಳ ಅಭಿವ್ಯಕ್ತಿಗೆ ತನಗೆ ಅನುಕೂಲವಾದ ಭಾಷೆಯನ್ನು ಬಳಸಿಕೊಳ್ಳುತ್ತ ಬಂದಿದ್ದಾನೆ. ಅದುವೇ ಮುಂದೆ ಸಾಹಿತ್ಯದ ರೂಪ ಪಡೆಯಿತು. ಸಾಹಿತ್ಯ ಸದಾ ಪರಿವರ್ತನಶೀಲ, ಪಾದರಸದಂತೆ. ಇದೊಂದು ಕಾಲಘಟ್ಟದ ಒತ್ತಡದಲ್ಲಿ ಅರಳಿದ, ಅರಳುವ ಕೂಸು. ಸಾಹಿತ್ಯದ ಸಂಜೀವಿನಿಯಾದ ಕಾವ್ಯ ನವನವೋನ್ಮೇಷಶಾಲಿನಿ. ಸದಾ ಹೊಸತನಕ್ಕಾಗಿ ತುಡಿಯುತ್ತಿರುತ್ತದೆ. ನೀರು ಸದಾ ಜೀವಂತಿಕೆಯ ಕುರುಹು, ಅದರ ಹರಿವು. ನೀರಾಗಿ ಎಲ್ಲವನು ಒಳಗೊಳ್ಳುವ, ಲೋಕದ ಕೊಳೆ ತೊಳೆದು ನಿರ್ಮಲ ನದಿಯಂತೆ ಕಾವ್ಯವು ಪ್ರವಹಿಸುತ್ತಿದೆ. ಕಾವ್ಯ ಬರೆಯುವುದು, ಓದುವುದೆಂದರೆ ಬಿಡುಗಡೆಗಾಗಿ ಕಂಡುಕೊಂಡ ಒಂದು ಚಾರಣ ಕ್ರಿಯೆ. ಇದನ್ನು ಎದೆಗಿಳಿಸಿಕೊಂಡರೆ ಆತ್ಮದ ಶುದ್ಧೀಕರಣವಾಗುತ್ತದೆ!! ಈ ದಿಸೆಯಲ್ಲಿ ಸಹೃದಯ, ವಾಗ್ದೇವಿಯ ಆರಾಧಕರಿಗೆ ಜಗತ್ತಿನ ಯಾವ ಭಾಷೆಯ ಹಂಗು ಇರುವುದಿಲ್ಲ, ಇರಲೂ ಬಾರದು. ಅಂತೆಯೇ ಅವರು ತಮ್ಮ ಹೃದಯಕ್ಕೆ ಸ್ಪಂದಿಸುವ ಸಾಹಿತ್ಯದ ಕಡೆಗೆ ಸಹಜವಾಗಿಯೇ ವಾಲುತ್ತಾರೆ. ಕನ್ನಡ ಕಾವ್ಯದ ವಿಶೇಷವಾಗಿ ಹೊಸಗನ್ನಡ ಸಾಹಿತ್ಯದ ನೂರು ವರುಷಗಳ ಪಯಣದಲ್ಲಿ ಹೊರಗಿನಿಂದ ಅನುವಾದ ಕಾವ್ಯ ಮತ್ತು ಸ್ವಪ್ರೇರಣೆಯ ಒಳಗಿನ ಪರಂಪರೆಯ ಶಕ್ತಿಯಿಂದ ಕನ್ನಡ ಕಾವ್ಯವು ಕೊನರೊಡೆಯುತ್ತ ಬಂದಿದೆ. ಲೋಕದ ಭಾಷೆಗಳೊಂದಿಗಿನ ಮುಖಾಮುಖಿ ಹಾಗೂ ತನ್ನದೆ ಪೂರ್ವಪರಂಪರೆಯೊಂದಿಗಿನ ಸಂವಾದದಿಂದ ಹೊಸಗನ್ನಡ ಕಾವ್ಯವು ಸಂಕರಗೊಂಡಿದೆ. ಕಾವ್ಯವು ಯುಗಧರ್ಮಕ್ಕೆ ಮುಖಾಮುಖಿಯಾಗುತ್ತಲೇ ಹೊಸತನ್ನು ಸೃಜಿಸುತ್ತದೆ. ಈ ಕಾರಣದಿಂದಾಗಿ ಆಧುನಿಕ ಕನ್ನಡ ಕಾವ್ಯದಲ್ಲಿ ಹಲವು ಪ್ರಕಾರಗಳು ರೂಪಗೊಂಡಿವೆ. ಸಾಹಿತ್ಯದ ಒಂದು ಪ್ರಕಾರವಾಗಿ, ವಿಧಾನವಾಗಿ ಬೆಳೆದಿರುವ, ಬೆಳೆಯುತ್ತಿರುವ ಭಾಷಾಂತರವೂ ಇದಕ್ಕೆ ಒಂದು ವರವಾಗಿದೆ. ಭಾಷೆಯ ಅನಂತ ಸಾಧ್ಯತೆಗಳು ಕಾವ್ಯದ ಭಾಷೆಯಲ್ಲಿಯೇ ತೆರೆದುಕೊಳ್ಳುತ್ತವೆ. ಶ್ರೀಮಂತ ಪರಂಪರೆಯ ಒಂದು ಭಾಷೆಯ ಅತ್ಯುತ್ತಮ ಅಭಿವ್ಯಕ್ತಿಯಾಗಿ ಕಾವ್ಯವು ಇಡೀ ಸಾರಸ್ವತ ಲೋಕವನ್ನು ಮುನ್ನಡೆಸುತ್ತಿದೆ. ಈ ಕಾರಣಕ್ಕಾಗಿಯೇ ಎಲ್ಲಿಯೊ ಇರುವ ಜಪಾನಿನ ಹಲವು ಸಾಹಿತ್ಯ ಪ್ರಕಾರಗಳು ಕನ್ನಡಿಗರ ಮನಗೆದ್ದು, ಸ್ವತಂತ್ರವಾಗಿ ಕನ್ನಡದಲ್ಲಿಯೆ ಕೃಷಿ ಆರಂಭಿಸಲು ಪ್ರೇರಿತವಾಗಿವೆ. ಅವುಗಳಲ್ಲಿ ಹೈಕು, ತಂಕಾ… ಮುಂಚೂಣಿಯಲ್ಲಿವೆ. ಈ ಜಪಾನಿ ಕಾವ್ಯ ಪ್ರಕಾರಗಳು ಯಾಕೆ ನಮಗೆ ಇಷ್ಟು ಹತ್ತಿರವಾಗಿವೆ, ಹತ್ತಿರವಾಗುತ್ತಿವೆ ಎಂದು ಹಲವು ಬಾರಿ ನನಗೆ ಕಾಡಿದ್ದುಂಟು. ಬಹುಶಃ ನಮ್ಮವರೆ ಆದ ಗೌತಮ ಬುದ್ಧರನ್ನು ಅವರು ಸ್ವೀಕರಿಸಿದ್ದು, ನಮ್ಮಂತೆಯೇ ಅವರೂ ಕೈ ಜೋಡಿಸಿ ನಮಸ್ಕರಿಸುವುದು, ಕಾಯಕ ಜೀವಿಗಳಾದ ಅವರು ಅವಿರತವಾಗಿ ದುಡಿಯುವುದು, ದೇಶ ಭಕ್ತರಾಗಿದ್ದು ದೇಶಕ್ಕಾಗಿ ಪ್ರಾಣ ಸಮರ್ಪಿಸುವುದು, ಊಟ ಮತ್ತು ಉಡುಗೆ ಧರಿಸುವುದರಲ್ಲಿ ತುಂಬಾನೇ ಟ್ರೆಡಿಷನಲ್ ಇರುವುದು, ನಮ್ಮಂತೆಯೇ ಸಾಂಪ್ರದಾಯಿಕ ಮನಸ್ಥಿತಿ ಹೊಂದಿರುವುದು, ಜೊತೆಗೆ ನಮ್ಮಂತೆಯೇ ಅವರಲ್ಲಿಯೂ ಟೀ ಕುಡಿಯುವ ಅಭ್ಯಾಸವಿರುವುದು…!! ಹೀಗೆ ಕಾರಣಗಳನ್ನು ಬೆನ್ನತ್ತಿ ಹೊರಟರೆ ನಮಗೆ ಸಾಕಷ್ಟು ಕಾರಣಗಳು ಸಿಗಬಹುದು.
ಭಾಷಾಂತರದ ಕಾರಣವಾಗಿ ಸಾಹಿತ್ಯ ಪ್ರಕಾರಗಳನ್ನು ಹಲವಾರು ಹೆಸರುಗಳಿಂದ ಗುರುತಿಸಲಾಗುತ್ತಿದೆ. ಉದಾಹರಣೆಗೆ ತಂಕಾ..ಇದನ್ನು ಟಂಕಾ, ತಾಂಕಾ, ಟ್ಯಾಂಕಾ… ..ಎಂತಲೂ ಕರೆಯಲಾಗುತ್ತಿದೆ. ಇವುಗಳಲ್ಲಿ ಹೇಗೆ ಕರೆದರೂ ಸರಿಯೇ!! ಇದು ಜಪಾನ್ ದಲ್ಲಿ ಏಳನೆಯ ಶತಮಾನದಲ್ಲಿಯೇ ಪ್ರವರ್ಧಮಾನದಲ್ಲಿತ್ತು. ಇದು ಎಷ್ಟು ಜನಪ್ರಿಯವಾಗಿತ್ತು ಎಂದರೆ ಅಂದಿನ ಜಪಾನಿನ ಇಂಪೀರಿಯಲ್ ನ್ಯಾಯಾಲಯದ ಗಣ್ಯರು ‘ತಂಕಾ’ ಕವನ ಸ್ಪರ್ಧೆಗಳಲ್ಲಿ ಭಾಗವಹಿಸುತಿದ್ದರಂತೆ…!! ‘ಚಕಾ’ ಎನ್ನುವ ಉದ್ದನೆಯ ಸಾಹಿತ್ಯ ಪ್ರಕಾರವನ್ನು ತುಂಡರಿಸಿ ‘ತಂಕಾ’ ಸಾಹಿತ್ಯ ಪ್ರಕಾರ ಹುಟ್ಟಿಕೊಂಡಿದೆಯೆಂದು ಜಪಾನಿನ ಕವಿ ಮತ್ತು ವಿಮರ್ಶಕ ‘ಮಸೋಕಾ ಶಿಕಿ’ ಅವರು ಹೇಳುತ್ತಾರೆ. ಮೂವತ್ತೊಂದು ಉಚ್ಚರಾಂಶಗಳನ್ನು ಹೊಂದಿರುವ ಇದನ್ನು ಆರಂಭದಲ್ಲಿ ಮುರಿಯದ ಒಂದೇ ಸಾಲಿನಲ್ಲಿಯೆ ಬರೆಯಲಾಗುತಿತ್ತು. ಮುಂದೆ ಕ್ರಮೇಣವಾಗಿ ಇಂಗ್ಲೀಷ್ ಭಾಷಾಂತರಗಳಲ್ಲಿ ಇದು ಐದು ಸಾಲಿನ ರೂಪವನ್ನು ಪಡೆಯಿತು. ಮೊದಲನೆಯ ಮತ್ತು ಮೂರನೆಯ ಸಾಲುಗಳು ಐದು ಉಚ್ಚರಾಂಶ/ ಅಕ್ಷರಗಳನ್ನು ಹೊಂದಿರುತ್ತದೆ. ಇನ್ನೂ ಎರಡನೆಯ, ನಾಲ್ಕನೆಯ ಮತ್ತು ಐದನೆಯ ಸಾಲುಗಳು ಏಳು ಉಚ್ಚರಾಂಶ/ ಅಕ್ಷರಗಳನ್ನು ಹೊಂದಿರುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆಯನ್ನು ನೋಡಬಹುದು..
“ನೋಡು, ಮಾಗಿಯ ಮಾರುತ ಹೇಗೆ ಓಡಿಸುತ್ತಿದೆ ಮೋಡಗಳನ್ನು ಎಡ ಬಲಕ್ಕೆ ; ಎಡಕಿನಿಂದ ಚಂದಿರ ಇಣುಕುತ್ತಾನೆ ಕಿರಣಗಳಿಂದ ಓಡಿಸುತ್ತಾ ರಾತ್ರಿಯ ಕತ್ತಲನು“
ಮೇಲಿನದು ‘ಅಕಿ-ಸುಕೆ’ ಯವರ ಪ್ರಸಿದ್ಧ ತಂಕಾ. ಇದು ಪ್ರಕೃತಿಯ ಸುಂದರ ಚಿತ್ರಣವನ್ನು ನೀಡುತ್ತಿದೆ ಜೊತೆಗೆ ಜೀವನಪ್ರೀತಿಯ ಸಾಂಕೇತಿಕವಾಗಿ ಮನಸನ್ನು ಪ್ರಪುಲ್ಲಗೊಳಿಸುತ್ತದೆ.
‘ತಂಕಾ’ ಕಾವ್ಯ ಪ್ರಕಾರವು ೧೩೦೦ ವರ್ಷಗಳಿಗಿಂತಲೂ ಪುರಾತನವಾಗಿದ್ದು ಎಲ್ಲ ಸಾಹಿತ್ಯ ಪ್ರೇಮಿಗಳ ಮನಸನ್ನು ಕದ್ದಿದೆ, ಕದಿಯತ್ತಲೂ ಇದೆ. ಜಗತ್ತಿನ ಎಲ್ಲ ಭಾಷೆಗಳಲ್ಲಿ ಇದರ ಕೃಷಿ ಸಮೃದ್ಧವಾಗಿ ನಡೆಯುತ್ತಿದೆ. ನಮ್ಮ ಕನ್ನಡದಲ್ಲಿಯಂತೂ ತುಸು ಜೋರಾಗಿಯೇ ಸಾಗುತ್ತಿದೆ. ಪುಸ್ತಕ ರೂಪದಲ್ಲಿ ದಾಖಲಾಗಿದ್ದಕ್ಕಿಂತಲೂ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಕಂಪು ಸೂಸಿದ್ದೇ ಹೆಚ್ಚು!! ಹಾಗಾಗಿ ಮುಖಪುಟ, ಯೂವರ್ ಕೋಟ್, ವ್ಯಾಟ್ಸಫ್ ಗಳಲ್ಲಿ ಈ ಕಾವ್ಯ ಪ್ರಕಾರದೆ ಸದ್ದು, ಝೇಂಕಾರ. ತುಂಬಾ ಜನರು ಅಂದರೆ ಕವಿಗಳು ವಿಶೇಷವಾಗಿ ಹೈದರಾಬಾದ್ ಕರ್ನಾಟಕದ ಸಾಹಿತಿಗಳು ತಂಕಾವನ್ನು ಬೆಳೆಸಿಕೊಂಡು, ಉಳಿಸಿಕೊಂಡು ಬರುವಲ್ಲಿ ನಿರತರಾಗಿರುವುದು ವಿಶೇಷವಾಗಿದೆ. ಸದ್ಯದ ಸ್ಥಿತಿಯಲ್ಲಿ ಕರುನಾಡಿನಾದ್ಯಂತ ತಂಕಾ ಕೃಷಿ ಕೈಂಕರ್ಯದಲ್ಲಿ ತೊಡಗಿರುವ ಕವಿಗಳಲ್ಲಿ ಪ್ರಾತಿನಿಧಿಕವಾಗಿ ಹಲವರ ಹೆಸರನ್ನು ಇಲ್ಲಿ ಉಲ್ಲೇಖಿಸಬಹುದು!! ಈರಣ್ಣ ಬೆಂಗಾಲಿ, ಡಾ.ಸಿದ್ಧರಾಮ ಹಿರೇಮಠ, ಡಾ. ಸುರೇಶ್ ನೆಗಳಗುಳಿ, ಶಶಿಕಾಂತ ದೇಸಾಯಿ, ವೇಣು ಜಾಲಿಬೆಂಚಿ, ಸುಧಾ ಪಾಟೀಲ, ಪ್ರೇಮಾ ಹೂಗಾರ, ಮಹಿಪಾಲ್ ರೆಡ್ಡಿ ಮುನ್ನೂರು, ತೇಜಾವತಿ ಹುಳಿಯಾರ್, ಶಬ್ಬಿರ್ ಹುಳಿಯಾರ್, ಭಾರತಿ ರವೀಂದ್ರ, ಸುಜಾತಾ ರವೀಶ್, ಬಹದ್ದೂರ್ ಬಸವರಾಜ, ಅನುಸುಯಾ ಯತೀಶ್, ಹರೀಶ್ ಕಿಗ್ಗಾಲು, ನಾಗರಾಜ್ ಹಳ್ಳಿಕೇರಿ, ಅಶೋಕ್ ಅಬಾಟೆ, ಡಾ. ವಿಜಯಕುಮಾರ ಪರುತೆ, ಈಶ್ವರ ಮಮದಾಪೂರ, ಅರುಣಾ ನರೇಂದ್ರ, ವತ್ಸಲಾ ಶ್ರೀಶ, ಶಮಾ ಜಮಾದಾರ, ಶಿವಲೀಲಾ ಡೆಂಗಿ, ಡಾ. ಮಲ್ಲಿನಾಥ ಎಸ್.ತಳವಾರ,…. ಹೀಗೆ ಹೆಸರುಗಳನ್ನು ಹೆಸರಿಸುತ್ತ ಹೋದರೆ ಆಂಜನೇಯನ ಬಾಲವಾದೀತು..!! ಆದರೆ ಕನ್ನಡದಲ್ಲಿ ಇದನ್ನು ಆರಂಭಿಸಿದವರು ಯಾರು ಎಂಬ ಜಿಜ್ಞಾಸೆ ಜೋರಾಗಿಯೇ ನಡೆಯುತ್ತಿದೆ!! ವೇಣು ಗೋಪಾಲ ಸೊರಬ, ಜಯದೇವ ಪ್ರಸಾದ ಮೊಳೆಯಾರ, ರಾಘವೇಂದ್ರ ಜೋಶಿ, ಡಾ. ಮಲ್ಲಿನಾಥ ಎಸ್.ತಳವಾರ, ಸುಧಾ ಪಾಟೀಲ್, ಡಾ. ಗಿರಿಜಾ ಮಾಲಿಪಾಟೀಲ್, ತೇಜಾವತಿ ಹುಳಿಯಾರ್… ಮುಂತಾದವರು ‘ತಂಕಾ’ ಕುರಿತು ಲೇಖನಗಳನ್ನು ಬರೆದು ಪ್ರಕಟಿಸಿರುವುದು ತಿಳಿದು ಬರುತ್ತದೆ. ಇನ್ನೂ ಕೆಲವರು ತಮ್ಮ ಇನ್ನಿತರ ಕಾವ್ಯ ಪ್ರಕಾರದ ಕೃತಿಗಳಲ್ಲಿ ಕೆಲವು ತಂಕಾಗಳನ್ನು ಪ್ರಕಟಿಸಿದವರೂ ಇದ್ದಾರೆ. ಅವರುಗಳಲ್ಲಿ ಬೆಂಗಳೂರಿನ ನಿವಾಸಿ ಕೆ.ಎ.ಸುಜಾತ ಗುಪ್ತ ಅವರು ಒಬ್ಬರು. ಆದರೆ ‘ತಂಕಾ’ಗಳನ್ನು ಸಂಪೂರ್ಣ ಪುಸ್ತಕ ರೂಪದಲ್ಲಿ ಮೊದಲ ಬಾರಿಗೆ ಪ್ರಕಟಿಸಿದವರೆಂದರೆ ಪ್ರೇಮಾ ಹೂಗಾರ ಎಂದು ಹೇಳಲಾಗುತ್ತಿದೆ! ಇವರ ನಂತರದಲ್ಲಿ ಶ್ರೀ ಮಹಿಪಾಲ ರೆಡ್ಡಿ ಮುನ್ನೂರು ಅವರು “ಇತೀ ನಿನ್ನ ಮೈನಾ” ಎಂಬ ತಂಕಾ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಪತ್ರಕರ್ತರಾಗಿ, ಸಾಹಿತಿಗಳಾಗಿ, ಸಂಮೋಹಕ ವಾಕ್ಪಟುಗಳಾಗಿ, ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಯೆ ಕಲಾವಿದರಾಗಿ, ಪ್ರಕಾಶರಾಗಿ ಹಾಗೂ ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ ಹಾಗೂ ತಮ್ಮ ಸೃಜನಶೀಲತೆಯ ದ್ಯೋತಕವಾಗಿ ಶ್ರೀ ಮಹಿಪಾಲ ರೆಡ್ಡಿ ಮುನ್ನೂರು ಅವರು ಕರುನಾಡಿನಾದ್ಯಂತ ಚಿರಪರಿಚಿತರಾಗಿದ್ದಾರೆ. ಕತೆ, ಕಾವ್ಯ, ನಾಟಕ, ವ್ಯಕ್ತಿ ಪರಿಚಯ, ಲೇಖನಗಳ ಮಾಲಿಕೆ, ಹೈಕು, ಗಜಲ್… ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿರುವ, ಮಾಡುತ್ತಿರುವ ಇವರು ‘ತಂಕಾ’ದಲ್ಲೂ ವಿಶೇಷ ಸಾಧನೆಗೈದಿದ್ದಾರೆ. ‘ಇತೀ ನಿನ್ನ ಮೈನಾ’ ಎನ್ನುವ ತಂಕಾ ಸಂಕಲನವು ಜಯದೇವ ಪ್ರಸಾದ ಮೊಳೆಯಾರ ಅವರ ಲೇಖನ, ಎಚ್.ಎಸ್. ವೆಂಕಟೇಶ್ ಮೂರ್ತಿಯವರ ಸದಾಶಯದ ಬೆನ್ನುಡಿಯೊಂದಿಗೆ ೧೦೦ ಸದಭಿರುಚಿಯ ತಂಕಾಗಳು ಸೂಕ್ತ ರೇಖಾಚಿತ್ರಗಳನ್ನು ಹೊಂದಿವೆ. ಇಲ್ಲಿಯ ಲೇಖನಗಳು ‘ತಂಕಾ’ ಕುರಿತು ಆಸಕ್ತಿಯನ್ನು ಕೆರಳಿಸುವಂತಿವೆ. ಹ್ಯಾಂಡಿಯಾಗಿರುವ ಈ ಕೃತಿಯು ೨೦೨೧ ರಲ್ಲಿ ಪ್ರಥಮ ಮುದ್ರಣವಾಗಿದ್ದು ೧೧೬ ಪುಟಗಳನ್ನು ಹೊಂದಿದ್ದು, ೧೨೫ ರೂಪಾಯಿ ಮುಖಬೆಲೆಯನ್ನು ಹೊಂದಿದೆ. ಮಾತಿನ ಬಳಕೆಯಲ್ಲಿ ಸಂಯಮ, ಭಾಷೆಯಲ್ಲಿ ನಾವೀನ್ಯತೆ, ಕಣ್ಣಿಗೆ ಕಟ್ಟುವ ಚಿತ್ರಮಯತೆ, ವಸ್ತುವಿನ ಆಯ್ಕೆಯಲ್ಲಿ ಅಸೀಮ ವಿಸ್ತಾರ… ಎಲ್ಲವೂ ಇಲ್ಲಿಯ ‘ತಂಕಾ’ಗಳಲ್ಲಿ ಗುರುತಿಸಿ, ಓದಿ ಸಂಭ್ರಮಿಸಬಹುದು. ಪ್ರೀತಿ, ಪ್ರೇಮ, ಪ್ರಣಯ, ಕೌಟುಂಬಿಕ ಸಂಬಂಧಗಳು, ಸಾಮಾಜಿಕ ವ್ಯವಸ್ಥೆಯ ಚಿತ್ರಣ, ವಿಡಂಬನೆ, ಕೊರೊನಾದ ಭೀಭತ್ಸ, ಪ್ರಕೃತಿ, ಬಡತನದ ರೇಖಾಚಿತ್ರ, ರೈತನ ತೊಳಲಾಟ, ಪ್ರೇರಣದಾಯಕ ನುಡಿಗಳು, ಜೀವನ ಶ್ರದ್ಧೆ, ಆಧ್ಯಾತ್ಮಿಕ ಬೆಳಕು.. ಮುಂತಾದ ವೈವಿಧ್ಯಮಯ ಸಂವೇದನೆಗಳ ತಂಕಾಗಳು ಓದುಗರನ್ನು ಆಲೋಚನಾ ಲೋಕಕ್ಕೆ ನೂಕುತ್ತವೆ!!
ಪ್ರೀತಿ, ಪ್ರೇಮ, ಪ್ರಣಯ, ವಿರಹ… ಇವೆಲ್ಲವೂ ಒಂದಕ್ಕೊಂದು ಪೂರಕವಾಗಿವೆ, ಋತು ಚಕ್ರದಂತೆ. ಒಂದರಿಂದ ಮತ್ತೊಂದನ್ನು ಬೇರ್ಪಡಿಸಲಾಗದು. ಮನುಷ್ಯನ ಜೀವನವು ಈ ಚಕ್ರಕ್ಕೆ ಋಣಿಯಾಗಿದೆ. ಭಾವನೆಗಳ ಬಿಂಬವಾದ ಸಾಹಿತ್ಯ ಇವುಗಳನ್ನು ಹೊರತುಪಡಿಸಿ ಉಸಿರಾಡಲಾದೀತೆ…! ಇಲ್ಲ ಅಲ್ಲವೇ.. ಅಂತೆಯೇ ಎಲ್ಲ ಸಾಹಿತ್ಯ ಪ್ರಕಾರಗಳ ಆಧಾರಸ್ತಂಭ, ಸ್ಥಾಯಿಭಾವ, ಆಕ್ಸಿಜನ್ ಎಂದರೆ ಅದು ‘ಪ್ರೀತಿ’ ಮಾತ್ರ. ಇದಕ್ಕೆ ‘ಇತೀ ನಿನ್ನ ಮೈನಾ’ ಕೃತಿಯೂ ಹೊರತಾಗಿಲ್ಲ.
“ಉಸಿರಿಗೊಮ್ಮೆ
ನಿನ್ನದೇ ಧ್ಯಾನ ಪ್ರಿಯೆ
ಕೈಬೆರಳಲಿ
ಮದರಂಗಿ ಬಣ್ಣದ
ತುಂಬೆಲ್ಲ ನಿಂತಿರುವೆ“
“ಬಿಸಿ ಅಪ್ಪುಗೆ
ನಿಭಾಯಿಸುವ ಭಾಷೆ
ದಿಗ್ಭ್ರಮೆ ಇಲ್ಲ
ನುಣುಚಿಕೊಳ್ಳಲಾರೆ
ಪ್ರೀತಿಯೇ ನನ್ನುಸಿರು“
“ದೀಪ ಆರಿಸು
ಮೈಮನಗಳ ಶೃತಿ
ಮೀಟಬೇಕಿದೆ
ಧ್ಯಾನ ಮರೆತ ಸ್ಪರ್ಶ
ನನ್ನೆದೆ ದಣಿಯಲಿ“
“ನರಳುತಿದೆ
ತುಟಿವರೆಗೂ ಬಂದ
ನೋವು, ಉಸಿರು
ಎದೆಗೆ ಆದ ಗಾಯ
ಗೋರಿಗೂ ಪ್ರೀತಿ ಸೋಂಕು“
ಈ ಮೇಲಿನ ಎಲ್ಲಾ ‘ತಂಕಾ’ಗಳು ಪ್ರೀತಿಯ ಮಾಧುರ್ಯತೆಯನ್ನು ಎಳೆ ಎಳೆಯಾಗಿ ಬಿಡಿಸಿ ಓದುಗರ ಮನವನ್ನು ತಣಿಸುತ್ತಿವೆ. ಹೃದಯ ನಿಮಿಷಕ್ಕೆ ಎಷ್ಟು ಬಾರಿ ಬಡಿಯುತ್ತದೆಯೊ ಅದಕ್ಕಿಂತಲೂ ಹೆಚ್ಚು ಸಲ ಪ್ರೇಮಿಗಳು ಪರಸ್ಪರ ಧ್ಯಾನ ಮಾಡುತ್ತಿರುತ್ತಾರೆ, ಆ ಧ್ಯಾನದ ಝಲಕ್ ಅಂಗೈಯ ಮದರಂಗಿಯಲ್ಲಿ ಕಂಪಿಸುತ್ತಿದೆ ಎಂಬುದನ್ನು ಪ್ರೀತಿಯಿಂದ ದಾಖಲಿಸಿದ್ದಾರೆ. ಇದರೊಂದಿಗೆ ಪ್ರೀತಿಯಲ್ಲಿರುವ ಮೋಹಕತೆ, ನಶಾ, ಮಮತೆ, ಸ್ಪರ್ಶದ ಅನುಪಮತೆ, ಸಮರ್ಪಣೆ, ಕಾಯುವಿಕೆ -ಕನವರಿಸುವಿಕೆ ….ಎಲ್ಲವೂ ಇಲ್ಲಿಯ ‘ತಂಕಾ’ಗಳಲ್ಲಿವೆ.
ಪ್ರಕೃತಿಯ ಮಡಿಲು ಎಲ್ಲ ಜೀವಸಂಕುಲಗಳಿಗೆ ಆಶ್ರಯತಾಣವಾಗಿದೆ. ಹಸಿರು ಸೀರೆಯುಟ್ಟು ಮನುಕುಲದ ನೆಮ್ಮದಿಯನ್ನು ಪೋಷಿಸುತ್ತ ಬಂದಿದ್ದಾಳೆ. ಎಂಥಹ ಕದಡಿದ ಮನಸ್ಸನ್ನೂ ತಿಳಿಯಾಗಿಸುವ ಶಕ್ತಿ, ಸಾಮರ್ಥ್ಯ ಇದಕ್ಕಿದೆ. ಆದರೆ ಹಲವು ಬಾರಿ ಮನುಷ್ಯನ ದುರಾಲೋಚನೆಯ ಫಲವಾಗಿ ತಳಮಳ ಪಟ್ಟಿದ್ದು ಇದೆ. ಇದೆಲ್ಲದರ ಇಂಪ್ಯಾಕ್ಟ್ ಆಗಿದ್ದು, ಆಗುತ್ತಿರುವುದು; ಆಗುವುದು ಮಾತ್ರ ಜೀವಸಂಕುಲದ ಮೇಲೆ… ವಿಶೇಷವಾಗಿ ಮನುಷ್ಯನ ಮೇಲೆ. ಭಾರತದ ರೈತರು ಯಾವತ್ತೂ ಮಾನ್ಸೂನ್ ಮಳೆಯೊಂದಿಗೆ ಜೂಜಾಡುತ್ತ, ತಮ್ಮ ಭವಿಷ್ಯವನ್ನು ಅರಸುತ್ತಿರುತ್ತಾರೆ. ಅದರಿಂದುಂಟಾಗುವ ಪರಿಣಾಮಗಳನ್ನೂ ತಂಕಾ ಮಾಸ್ಟರ್ ಅವರು ವಾಸ್ತವದ ನೆಲೆಯಲ್ಲಿ ಅನಾವರಣಗೊಳಿಸಿದ್ದಾರೆ. ‘ನೆಲ ಬಿಕ್ಕಳಿಸಿತು’ ಎನ್ನುವ ರೂಪಕ ಮನುಷ್ಯನ ಕರ್ಮಫಲದ ದ್ಯೋತಕವಾಗಿ ಮೂಡಿಬಂದಿದೆ. ಇದರೊಂದಿಗೆ ಮತ್ತೊಂದು ‘ತಂಕಾ’ದಲ್ಲಿ ವರ್ಷಧಾರೆಯ ನವಿಲು ನರ್ತನವನ್ನು ಚಿತ್ರಿಸಿದ್ದಾರೆ. ಬಿತ್ತುವ, ಸಸಿ ಮೊಳಕೆಯೊಡೆಯುವ, ಫಲಗಳಿಂದ ಮಾಗುವ ಹಾಗೂ ಸುಗ್ಗಿಯ ರೂಪದಲ್ಲಿ ರಾಶಿ ಮಾಡುವ ಪ್ರಕ್ರಿಯೆಯನ್ನು ಒಂದು ಹೆಣ್ಣಿನ ತಾಯ್ತನದೊಂದಿಗೆ ಸಂಮೇಳಿಸಿರುವುದು ಸೂಕ್ತ ಎನಿಸುತ್ತದೆ. ಈ ನೆಲೆಯಲ್ಲಿ ಇಲ್ಲಿಯ ‘ತಂಕಾ’ಗಳು ಹಚ್ಚಹಸಿರಿನ ಫೀಲ್ ನೀಡುವಲ್ಲಿ ಯಶಸ್ವಿಯಾಗಿವೆ.
“ಹಸಿರು ಹೂವು
ಹಾದಿಯುದ್ದಕ್ಕೂ ಇವೆ
ಸೊಬಗಿನಂತೆ
ವರ್ಣಮಯ ಪ್ರಕೃತಿ
ನಗು ತುಂಬಿಕೊಂಡಿದೆ“
“ಗುಳೆ ಹೊರಟ
ನೆಲ ಬಿಕ್ಕಳಿಸಿತು
ಮಾಯಾವಿ ಮಳೆ
ಸುರಿಯಲಿಲ್ಲ ಹನಿ
ರೈತ ಹೊರಟೇಬಿಟ್ಟ“
“ಮೋಡ ತುಂಬಿದೆ
ನೆಲದ ಒಡಲಿಗೆ
ಮತ್ತೆ ಬಿತ್ತಲು
ಸೀಮಂತ ಸಂಕ್ರಮಣ
ರಾಶಿ ರಾಶಿ ಫಸಲು“
ಕಲ್ಪನೆ ಕಾವ್ಯದ ತಿರುಳಾದರೂ ಅದುವೆ ಅಂತಿಮವಲ್ಲ. ಇದು ಮನೋರಂಜನೆ ಒದಗಿಸುತ್ತದೆಯಾದರೂ ಅಲ್ಲಿಯೇ ವಿರಮಿಸುವುದಿಲ್ಲ. ನಿರಂತರವಾಗಿ ಪ್ರವಚನವನ್ನು ನೀಡುವುದಿಲ್ಲ, ನೀಡಲೂ ಬಾರದು. ಅನುಸಂಗಿಕವಾಗಿ ಪ್ರೇರಣೆ ನೀಡುತಿದ್ದರೆ ಕಾವ್ಯ ಬಾಳಿಗೆ ಊರುಗೋಲಾಗುವುದರಲ್ಲಿ ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ ರೆಡ್ಡಿಯವರು ತಮ್ಮ ಜೀವನಗಾಥೆಯ ಅನುಭವದ ಒಳಪದರುಗಳಿಗೆ ಅಕ್ಷರದ ರೂಪ ನೀಡಿರುವುದನ್ನು ಇಲ್ಲಿ ಗಮನಿಸಬಹುದು. ಜೀವನದ ರಣರಂಗದಲ್ಲಿ ಸೋಲು-ಗೆಲುವು ಸರ್ವೆ ಸಾಮಾನ್ಯ. ಯಾವ ಯಶಸ್ಸು ಸರಳವಾಗಿ ಕೈಗೆಟಕುವುದಿಲ್ಲ. ಅದಕ್ಕೆ ಹೋರಾಟ ಬೇಕೇ ಬೇಕು. ಇದಕ್ಕಾಗಿಯೇ ಅವಡುಗಚ್ಚಿ ನಿಂತರೆ ಯಶಸ್ಸು ಲಭಿಸುತ್ತದೆ ಎಂದಿದ್ದಾರೆ. ಸೋಲಿನಿಂದ ಕಂಗೆಟ್ಟರೆ, ಇಂದಡಿ ಇಟ್ಟರೆ ಗೆಲುವು ಮುಗಿಲಮಲ್ಲಿಗೆಯಾಗಿಯೆ ಉಳಿದುಬಿಡುತ್ತದೆ. ಈ ಸಂಘರ್ಷದ ಜೋನ್ ನಲ್ಲಿ ಹಲವು ‘ತಂಕಾ’ ಬಂದಿವೆ, ಸಂಕಲನದಲ್ಲಿ. ಇವುಗಳು ಓದುಗರಲ್ಲಿ ಪಾಸಿಟಿವ್ ವೈಬ್ ಮೂಡಿಸುತ್ತವೆ. ಈ ದಿಸೆಯಲ್ಲಿ ಇಲ್ಲಿಯ ‘ತಂಕಾ’ಗಳು ಗೆಲುವನ್ನು ಆಲಂಗಿಸಿವೆ.
“ಸಾಧನ ಮಾರ್ಗ
ಗೆಲುವಿಗೆ ಸಾವಿರ
ಮೆಟ್ಟಿಲು ಇವೆ
ಅವಡುಗಚ್ಚಿ ನಿಲ್ಲು
ಕಾಲೂರಿಕೊಂಡು ನಡೆ“
“ಗೊಂದಲವಿಲ್ಲ
ಸಾಗುವ ದಾರಿಯಲ್ಲಿ
ಎದುರಾದೀತು
ಸುಗಂಧ ದುರ್ಗಂಧವು
ಕಂಗೆಡುವುದು ಏಕೆ“
“ಬದುಕೆಂದರೆ
ಬಿದ್ದು ಮೇಲೇಳುವುದು
ಹೆಜ್ಜೆ ತಪ್ಪಿಲ್ಲ
ಮಿತಿ ಅತಿಯಾದಾಗ
ದುಡುಕಬೇಡ ಮುಂದೆ“
ಕಾವ್ಯದ ಜೀವಂತಿಕೆ ಇರುವುದು ಮರ ಸುತ್ತುವುದರ ಆಚೆ. ಅಂದರೆ ಸಾಮಾಜಿಕ ವ್ಯವಸ್ಥೆ, ವಿಡಂಬನೆ, ಪ್ರಸ್ತುತ ಸ್ಥಿತಿಗತಿಗಳ ದರ್ಪಣ ಸಹೃದಯ ಓದುಗರ ಚಿಂತನೆಗೆ ಹಚ್ಚಬೇಕು. ಶ್ರೀಯುತರು ‘ತಂಕಾ’ಗಳಲ್ಲಿ ಜಾತಿಯ ಭೂತ ಮನುಕುಲದ ಹೃದಯಗಳಲಿ ಎಷ್ಟು ಆಳವಾಗಿ ಬೇರೂರಿದೆ, ಅದು ಮಾಡುತ್ತಿರುವ ಅವಾಂತರಗಳೆಷ್ಟು ಎಂಬುದನ್ನು ತುಂಬಾ ಸೂಕ್ಷ್ಮವಾಗಿ ದಾಖಲಿಸಿದ್ದಾರೆ. ಇದರೊಂದಿಗೆ ಲಂಚಾವತಾರದ ಮಾಯವಾದದ ಮೋಹ, ಗೌತಮ ಬುದ್ಧ ಅವರ ಪ್ರಸ್ತುತತೆ, ಅವರ ಹೆಸರಿನ ದುರ್ಬಳಕೆ ಕುರಿತು ಗಮನ ಸೆಳೆದಿದ್ದಾರೆ. ಇನ್ನೂ ಕೊರೊನಾ ಕುರಿತಂತೆ ಅನುಭವಿಸಿದ ಆತಂಕ, ಮುಂದೇನಾಗುತ್ತೆ ಎಂಬುದರ ಭಯ, ಜಗತ್ತನ್ನೆ ಸೂತಕದ ಮನೆಯನ್ನಾಗಿಸಿದ ಕೊರೊನಾದ ಪರಾಕ್ರಮ ಕುರಿತು ಕಾಳಜಿ, ಕಕ್ಕುಲಾತಿಯ ನೆಲೆಯಲ್ಲಿ ಧ್ವನಿಸಿದ್ದಾರೆ.
“ಮನಸಿನಾಳ
ಜಾತಿ ಬೇಧಗಳಲಿ
ನರಳಾಡಿದೆ
ಮಾತು ಕೇಳುವರಿಲ್ಲ
ಅಸ್ತ್ರಗಳೇ ಎಲ್ಲವೂ“
“ಆಲೋಚನೆಗೂ
ಮೀರಿದೆ ಈ ಸಂಪತ್ತು
ಬದುಕೇ ಇಲ್ಲ
ದಕ್ಷಿಣೆ ಕೊಟ್ಟರೇನೆ
ನಿರಾತಂಕವಿಲೋಕ“
“ಅರ್ಧ ರಾತ್ರಿಗೆ
ಎದ್ದು ನಡೆದು ಹೋದ
ಈಗಲೂ ಎದ್ದ
ಬುದ್ಧನಾಗಲು ಅಲ್ಲ
ರಿಲ್ಯಾಕ್ಸ್ ಬದುಕಿಗೆ“
“ಎದ್ದು ಹೋದವ
ಬುದ್ಧ ಇನ್ನೂ ಬಂದಿಲ್ಲ
ಆಸೆಯೇ ಮೂಲ
ಅರ್ಧರಾತ್ರಿ ನಿನ್ನಂತೆ
ಮೌನವಾಗಿದೆ ದುಃಖ“
“ನೆಲದ ತುಂಬ
ಹಸಿ ಹಸಿ ನೆತ್ತರು
ಕೊರೊನಾ ಮಾರಿ
ಮನ ಬದಲಿಸದೇ
ಮೃತ್ಯು ಪಾತ್ರೆ ತುಂಬಿತ್ತು“
ಜಾಗತಿಕ ಸಾಹಿತ್ಯ ಲೋಕಕ್ಕೆ ಕನ್ನಡ ಸಾಹಿತ್ಯದ ಅನುಪಮ ಕೊಡುಗೆಯೆಂದರೆ ಅದು ಬಸವಾದಿ ಶರಣರ ವಚನ ಸಾಹಿತ್ಯ. ಒಂದು ಸಾಹಿತ್ಯ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದ್ದರೆ ಮಾತ್ರ ಅಂತಹ ಸಾಹಿತ್ಯ ಜೀವಂತವಾಗಿರುತ್ತದೆ ಎನ್ನುವುದಕ್ಕೆ ವಚನ ಸಾಹಿತ್ಯ ಎವರ್ ಗ್ರೀನ್ ಉದಾಹರಣೆಯಾಗಿದೆ. ಅಂತೆಯೇ ಈ ವಚನ ಸಾಹಿತ್ಯದ ಪ್ರಭಾವಕ್ಕೆ ಒಳಗಾಗದ ಲೇಖಕರೆ ಇಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಇದನ್ನು ರೆಡ್ಡಿಯವರ ‘ತಂಕಾ’ಗಳಲ್ಲಿಯೂ ಗುರುತಿಸಬಹುದು. ಶರಣರು ‘ಕಾಯಕ’, ‘ದಾಸೋಹ’ ದಂತಹ ಸಾರ್ವತ್ರಿಕ ಮೌಲ್ಯಗಳನ್ನು ‘ಅರಿವೆ ಗುರು’ ಎನ್ನುವ ಮಾರ್ಗದಲ್ಲಿ ನೀಡಿರುವುದನ್ನು ಈ ‘ತಂಕಾ’ದಲ್ಲಿ ಕಾಣಬಹುದಾಗಿದೆ.
“ಅರಿವೆ ಗುರು
ವಚನದ ಸಾಲೀಗ
ದಾರಿ ತೋರಿತು
ಕಾಯಕವ ಮಾಡೆಂದು
ದಾಸೋಹ ಗೈಯುತಲಿ“
ಇಂದು ಕನ್ನಡ ಸಾಹಿತ್ಯವು ಇತರ ಭಾಷೆಯ ಸಾಹಿತ್ಯ ಪ್ರಕಾರಗಳಿಗೆ ಮುಕ್ತವಾಗಿ ತೆರೆದುಕೊಂಡಿದೆ. ಅವುಗಳಲ್ಲಿ ‘ಗಜಲ್’ ಇಂದು ಮುಂಚೂಣಿಯಲ್ಲಿದ್ದು, ಪ್ರತಿ ಸಾಹಿತ್ಯಾರಾಧಕರ ಹೃದಯದ ಮಿಡಿತವಾಗಿದೆ. ಪ್ರತಿಯೊಬ್ಬರೂ ‘ಗಜಲ್’ ನ ಸೆಳೆತಕ್ಕೆ ಗುರಿಯಾಗಿ ‘ಅಶಅರ್’ ಬರೆಯುತ್ತಿದ್ದಾರೆ. ಹಿರಿಯರಾದ ಶ್ರೀ ಮಹಿಪಾಲ ರೆಡ್ಡಿ ಮುನ್ನೂರು ಅವರ ಹೃದಯವನ್ನು ‘ಗಜಲ್’ ದೊರೆಸಾನಿ ಕದ್ದದ್ದು ಇಂದು-ನೆನ್ನೆಯಲ್ಲ!! ಆದರೆ ಇತ್ತೀಚೆಗಂತೂ ‘ಗಜಲ್’ ಮಾಯೆ ಎಲ್ಲ ಕಡೆಗೂ ಆವರಿಸಿದೆ. ಈ ಕಾರಣಕ್ಕಾಗಿಯೋ ಏನೊ ಇವರ ‘ತಂಕಾ’ ಗಳಲ್ಲಿ ಗಜಲ್ ನ ಛಾಯೆ, ಷೇರ್-ಅಶಅರ್ ಪ್ರಭಾವ ಕಾಣಿಸುತ್ತಿದೆ. ಬಹುಶಃ ಇದಕ್ಕೆ ಇನ್ನೊಂದು ಕಾರಣವೂ ಇದ್ದೀತು.. ಅದೆಂದರೆ ನಾನು ಓರ್ವ ಗಜಲ್ ಗೋ ಆಗಿದ್ದು ಹಾಗೂ ರೆಡ್ಡಿಯವರು ವೈಯಕ್ತಿಕವಾಗಿ ನನಗೆ ಪರಿಚಯವಿದ್ದದ್ದು!! ಇರಬಹುದು, ಇಲ್ಲವೆನ್ನಲಾಗದು. ಈ ಕಾರಣಕ್ಕಾಗಿಯೇ ಕಾವ್ಯದ ಸ್ವಾದ ಅನುಭವಿಸಬೇಕಾದರೆ ಸಹೃದಯ ಓದುಗರು ‘ಮಾನಸಿಕ ದೂರ’ ವನ್ನು ಅರಿತಿರಬೇಕು, ಅಳವಡಿಸಿಕೊಳ್ಳಬೇಕು ಎನ್ನಲಾಗುತ್ತದೆ. ಈ ‘ತಂಕಾ’ಗಳಲ್ಲಿ ತಂಕಾ ಮಾಸ್ಟರ್ ಪ್ರೀತಿಯಲ್ಲಿ ಪ್ರೇಮಿ ದೊರೆಸಾನಿಯನ್ನು ಕನವರಿಸುವ ಕುರಿತು, ತನ್ನ ಪ್ರಿಯತಮೆಯ ಕಂಗಳನ್ನು ಮಧುಬಟ್ಟಲು ಮಾಡಿಕೊಂಡು ಮದಿರೆ ಹೀರುವ ಕ್ರಮವನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ. ಖಂಡಿತವಾಗಿಯೂ ಈ ‘ತಂಕಾ’ವನ್ನು ಎದೆಗಿಳಿಸಿಕೊಂಡರೆ ಆ ಹೃದಯದಲ್ಲಿ ‘ಗಜಲ್’ ಬೆಡಗಿಯ ಹೆಜ್ಜೆ ಗುರುತುಗಳು ಮೂಡಲು ಸಾಧ್ಯ.
“ಬಾ ದೊರೆಸಾನಿ
ಮೌನ ನಿಲ್ದಾಣದಿಂದ
ಎದೆಯಾಳಕ್ಕೆ
ವಿರಹದೂರಿನಿಂದ
ಪ್ರೇಮದರಮನೆಗೆ“
“ಮೌನದ ಮಾತು
ದಿಬ್ಬಣವೂ ತಲ್ಲಣ
ಮಾತು ಮಥಿಸಿ
ಬಿಕ್ಕಳಿಕೆಗೆ ನಾನೇ
ಕಾರಣ ದೊರೆಸಾನಿ“
“ಬದ್ಧತೆ ಪ್ರೀತಿ
ತೋರಿಕೆಗಾಗಿ ಅಲ್ಲ
ದೊರೆಸಾನಿಯೇ
ಪ್ರೇಮ ಚಿತ್ತಾರ ಮುನ್ನ
ಮೃದು ಮಧುರ ರಾಗ“
“ಮಧುಬಟ್ಟಲು
ಖಾಲಿಯಾದರೆ ಹೇಳು
ಸಾಕಿ ನಿನ್ನಯ
ಬೊಗಸೆ ಕಂಗಳಲಿ
ಸಂಭ್ರಮಿಸುವೆ ಕೇಳು“
‘ತಂಕಾ’ ವನ್ನು ಎರಡು ವಿಭಿನ್ನ ವಿಭಾಗಗಳಾಗಿ ವಿಂಗಡಿಸಿದಾಗ ಎರಡೂ ಪ್ರತ್ಯೇಕವಾಗಿ ಬೇರೆ ಬೇರೆಯ ಅರ್ಥವನ್ನು ನೀಡುವಂತಿರಬೇಕು. ಅದು ಪರಸ್ಪರ ಪೂರಕವಾಗಿ ಆಗಲಿ, ಇಲ್ಲವೇ ವಿರೋಧಾಭಾಸಲ್ಲಾಗಲಿ ಇರಬಹುದು. ಐದು ಸಾಲುಗಳಲ್ಲಿ ಮೂರನೆಯ ಸಾಲು ‘ತಂಕಾ’ವನ್ನು ವಿಭಾಗಿಸಿ ಪ್ರತ್ಯೇಕ ಅರ್ಥವನ್ನು ನೀಡುವಂತಿರಬೇಕು. ಇದಕ್ಕೆ “ಪಿವೋಟ್” ಎಂದು ಕರೆಯುವರು. ‘ಪಿವೋಟ್’ ಎಂದರೆ ಮಹತ್ವದ ತಿರುವು ಎಂದರ್ಥ. ‘ತಂಕಾ’ ದ ೫-೭-೫ ರ ಮೇಲ್ಭಾಗವನ್ನು ‘ಕಮಿ-ನೋ-ಕು’ (ಮೇಲಿನ ನುಡಿಗಟ್ಟು) ಎಂದು ಕರೆದರೆ, ೭-೭ ರ ಕೆಳಭಾಗವನ್ನು ‘ಶಿಮೊ-ನೋ-ಕು’ (ಕಡಿಮೆ ನುಡಿಗಟ್ಟು) ಎಂದು ಕರೆಯುತ್ತಾರೆ. ಈ ನೆಲೆಯಲ್ಲಿ ಪ್ರತಿಯೊಂದು ‘ತಂಕಾ’ ಎರಡು ಅನನ್ಯ ಸಾದೃಶ್ಯವನ್ನು ನೀಡುತ್ತವೆ, ನೀಡಬೇಕು ಸಹ!! ಸಿಲೆಬಲ್ ಬಾಹ್ಯ ಲಕ್ಷಣಗಳಾದರೆ ‘ಪಿವೋಟ್’ ಆಂತರಿಕ ಲಕ್ಷಣವಾಗಿದೆ. ಇಲ್ಲಿಯ ಹಲವು ‘ತಂಕಾ’ಗಳು ಈ ಹಿನ್ನೆಲೆಯಲ್ಲಿ ಮೂಡಿಬಂದಿವೆ. ಈ ದಿಸೆಯಲ್ಲಿ ‘ತಂಕಾ’ ಹೆಜ್ಜೆ ಗುರುತುಗಳನ್ನು ಅರಿಯುವಲ್ಲಿ ‘ಇತೀ ನಿನ್ನ ಮೈನಾ’ಕೃತಿಯೂ ಸಂಗ್ರಹಯೋಗ್ಯವಾಗಿದೆ. ಶ್ರೀಯುತರಿಂದ ಸಾಹಿತ್ಯ ಕೃಷಿ ನಿರಾತಂಕವಾಗಿ ಹಾಗೂ ಆಹ್ಲಾದಕರವಾಗಿಯೂ ಸಾಗಲಿ ಎಂದು ಶುಭ ಕೋರುತ್ತೇನೆ.
“Show me a family of readers, and I will show you the people who move the world.”
-Napoléon Bonaparte
ಡಾ. ಮಲ್ಲಿನಾಥ ಶಿ. ತಳವಾರ