ಅಮ್ಮಂದಿರ ದಿನದ ವಿಶೇಷ

ಲೇಖನ

ಅಮ್ಮಂದಿರ ದಿನದ ವಿಶೇಷ

ಅಮ್ಮ ಕ್ಷಮಿಸಿಬಿಡು

ಜಿ. ಹರೀಶ್ ಬೇದ್ರೆ

ಅಪ್ಪ ಒಂದೇ ಒಂದು ದಿನವೂ ನನಗೆ ಬೈಯಲ್ಲಿಲ್ಲ, ಹೊಡೆಯಲಿಲ್ಲ, ಗದರಲಿಲ್ಲ, ಗೂರಾಯಿಸಲಿಲ್ಲ. ಸದಾ ಶಾಂತಚಿತ್ತರಾಗಿ ನನ್ನ ಏಳಿಗೆಗಾಗಿ ಬೇಕಾದದ್ದನ್ನೆಲ್ಲಾ ಮಾಡುತ್ತಿದ್ದರು. ಆದರೂ ನಾನು ಬಾಲ್ಯದಿಂದ ಸ್ವಂತ ಕಾಲಮೇಲೆ ನಿಲ್ಲುವವರೆಗೆ ಆಶ್ರಯ ಪಡೆದದ್ದು ಅಮ್ಮನ ಅಗಾಧ ಪ್ರೀತಿಯಲ್ಲಿ. ಎಂತಹ ಸಣ್ಣ ವಿಚಾರವೇ ಇರಲಿ, ಮತ್ತೊಂದೇ ಇರಲಿ ಹೇಳಿಕೊಂಡಿದ್ದು ಅಮ್ಮನ ಬಳಿ ಮಾತ್ರ.

ಹೆಸರಿಗೆ ಅಮ್ಮ ಎಂದು ಕರೆಯುತ್ತಿದ್ದೆನೆ ಹೊರತು, ನಂತರ ಮಾತನಾಡುತ್ತಿದ್ದದ್ದು ಏಕವಚನದಲ್ಲೇ. ಅದಕ್ಕವಳು ಎಂದೂ ಬೇಸರಿಸಿಕೊಳ್ಳಲಿಲ್ಲ. ಯಾವಾಗಾದರೂ ಒಮ್ಮೆ ಬೇಕೆಂದು ಬಹುವಚನದಲ್ಲಿ ಮಾತನಾಡಿಸಿದಾಗ, ತನಗಲ್ಲವೇನೋ ಎಂಬಂತೆ ಇರುತ್ತಿದ್ದಳು. ಅಷ್ಟರ ಮಟ್ಟಿಗೆ ಅವಳು ಏಕವಚನಕ್ಕೆ ಒಗ್ಗಿಕೊಂಡಿದ್ದಳು.

ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ, ನಾನು ಮನೆಯಲ್ಲಿದ್ದರೆ ಅಮ್ಮನ ಹಿಂದೆ ಮುಂದೆಯೇ ಓಡಾಡಿಕೊಂಡು ಇರುತ್ತಿದ್ದೆ. ಅವಳು ಓದಿದ ಪುಸ್ತಕಗಳ ಬಗ್ಗೆಯೋ, ಮನೆಯ ವಿಚಾರವಾಗಿಯೋ, ಎಲ್ಲೋ ನೋಡಿದ, ಓದಿದ ವಿಚಾರವಾಗಿಯೋ..‌‌‌‌‌…. ಹೇಳುತ್ತಿದ್ದಳು. ಅದನ್ನು ಕೇಳಲು ನನಗೂ ಅಷ್ಟೇ ಉತ್ಸಾಹ ಇರುತ್ತಿತ್ತು. ನಿಜ ಹೇಳಬೇಕೆಂದರೆ, ನನಗೆ ಸಾಹಿತ್ಯದ ಗೀಳು ಹತ್ತಿದ್ದೇ ಅವಳಿಂದ.

ಎದೆಹಾಲು ಕುಡಿಸಿ, ಕೈತುತ್ತು ತಿನ್ನಿಸಿ, ಅಂಬೆಗಾಲು ಇಡುತ್ತಿದ್ದವನ ಬೆರಳು ಹಿಡಿದು ನಡೆಸಿ, ಶಾಲೆಗೆ ಕಳಿಸಿ, ಪದವಿಯ ವರೆಗೆ ಓದಿಸಿ, ಎಲ್ಲೂ ಎಡವದಂತೆ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ ಅಮ್ಮನ ಬಗ್ಗೆ ಎಷ್ಟು ಬರೆದರೂ ಕಮ್ಮಿನೇ…

ನನ್ನಲ್ಲಿ ಆಗುತ್ತಿದ್ದ ಸಣ್ಣ ಬದಲಾವಣೆಯಿಂದಲೇ ನನ್ನ ಬೇಕು, ಬೇಡಗಳನ್ನು ಅರ್ಥ ಮಾಡಿಕೊಂಡು, ಸಂತೋಷಕ್ಕೆ ದಾರಿ ಮಾಡಿಕೊಡುತ್ತಿದ್ದ ಅಮ್ಮನಿಗೆ ಎರಡು ಬಾರಿ ನೋವು ಕೊಟ್ಟಿರುವೆ.

ಮೊದಲಿಗೆ, ನನಾಗ ಎರಡನೇ ಅಥವಾ ಮೂರನೇ ತರಗತಿಯಲ್ಲಿ ಓದುತ್ತಿದ್ದೆ ಅನಿಸುತ್ತೆ, ಸರಿಯಾಗಿ ನೆನಪಿಲ್ಲ. ಬೇಸಿಗೆ ರಜೆಗೆಂದು ಅಮ್ಮನ ಜೊತೆ ಚೆನ್ನಗಿರಿಯಲ್ಲಿದ್ದ ಚಿಕ್ಕಮ್ಮನ ಮನೆಗೆ ಹೋಗಿದ್ದೆ. ಅಲ್ಲಿಗೆ ನನ್ನ ಮತ್ತೊಬ್ಬ ಚಿಕ್ಕಮ್ಮನ ಮಗನು ಬಂದಿದ್ದ. ನನಗೂ ಅವನಿಗೂ ಒಂದು ವರ್ಷದ ಅಂತರವಷ್ಟೆ. ಇಬ್ಬರೂ ಸೇರಿ ಇಡೀ ಊರನ್ನು ಸುತ್ತುತ್ತಿದ್ದೆವು. ಊಟ ತಿಂಡಿಯ ಪರಿವೇ ನಮಗಿರುತ್ತಿರಲಿಲ್ಲ. ನಾವು ಆಡಿದ್ದೆ ಆಟ, ಹೂಡಿದ್ದೆ ಲಗ್ಗೆ.  ಚೆನ್ನಗಿರಿಯ ಚಿಕ್ಕಮ್ಮನವರಿಗೆ ಮಕ್ಕಳಿರದ ಕಾರಣ, ಗಂಡ ಹೆಂಡತಿ ಇಬ್ಬರೂ ನಮ್ಮನ್ನು ತುಂಬಾ ಪ್ರೀತಿಯಿಂದ  ನೋಡಿಕೊಳ್ಳುತ್ತಿದ್ದರು. ಹಾಗಾಗಿ ರಜೆ ಬಂದರೆ ಸಾಕು, ಮನಸ್ಸು ಅಲ್ಲಿಗೆ ಹೋಗಲು ಬಯಸುತ್ತಿತ್ತು. ಆ ಸಮಯದಲ್ಲಿ ಚೆನ್ನಗಿರಿಯಲ್ಲಿ ಬಳಸುವ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ಇತ್ತು. ಒಂದು ದಿನ ನೀರು ತರಲೆಂದು ಅಮ್ಮ ಮತ್ತು ಚಿಕ್ಕಮ್ಮ, ನನಗೂ ತಮ್ಮನಿಗೂ ಮನೆ ಕಾಯಲು ಬಿಟ್ಟು ಹೋಗಿದ್ದರು. ನಾವಿಬ್ಬರೂ ಮನೆಯ ಹೊಸ್ತಿಲಿನ ಒಳಭಾಗದಲ್ಲಿ ಕುಳಿತು, ಸಣ್ಣ ಕೋಲುಗಳ ಜೊತೆ ಆಡುತ್ತಿದ್ದೆವು. ಅಮ್ಮ ನೀರಿನ ಬಿಂದಿಗೆಯೊಂದಿಗೆ ಹೊಸ್ತಿಲ ಒಳಗೆ ಕಾಲಿಡುವ ಸಮಯಕ್ಕೆ ಸರಿಯಾಗಿ ನಾನು, ಗಮನಿಸದೆ ನನ್ನ ಕೈಯಲ್ಲಿದ್ದ ಕೋಲನ್ನು ಚಾಚಿದ್ದೆ. ಇದರಿಂದ ಅಮ್ಮ, ಬಿಂದಿಗೆಯ ಸಮೇತ ಮುಗ್ಗರಿಸಿ ಬಿದ್ದರು. ಬಿದ್ದ ರಭಸಕ್ಕೆ ಹಲ್ಲಿಗೆ ಪೆಟ್ಟಾಗಿ ಬಾಯಿಂದ ರಕ್ತ ಬರುತ್ತಿತ್ತು. ಅದನ್ನು ನೋಡಿ ನಾನು ಜೋರಾಗಿ ಅಳುತ್ತಿದ್ದರೆ, ಅಮ್ಮ ನನಗೇನೋ ಆಯಿತೆಂದು ಹೆದರಿ, ನನಗೆ ಸಮಾಧಾನ ಮಾಡಲು ಬಂದಿದ್ದಳು. ಮುಂದೆ ಈ ಪೆಟ್ಟಿನಿಂದಾಗೆ ಅವಳು, ಬಹಳ ಬೇಗನೇ ತನ್ನ ಹಲ್ಲುಗಳನ್ನು ಕೀಳಿಸಿಕೊಂಡು ಕೃತಕ ದಂತಗಳನ್ನು ಕಟ್ಟಿಸಿಕೊಳ್ಳಬೇಕಾಯ್ತು. ಇದರಿಂದ ಇರುವವರೆಗೂ ನೋವು ತಿಂದರೂ, ಒಂದೇ ಒಂದು ದಿನವೂ ನನ್ನನ್ನು ದೋಷಿಸಲಿಲ್ಲ. ನಾನೇ ಹಲವು ಬಾರಿ ನನ್ನಿಂದ ನಿನಗೆ ತೊಂದರೆ ಆಯಿತಲ್ಲವೇ ಎಂದರೂ, ಅವಳು ಮಾತ್ರ, ನೋಡದೆ ಹೆಜ್ಜೆ ಇಟ್ಟೆ ಅದಕ್ಕೆ ಹೀಗಾಯಿತು. ಪಾಪ ನಿನ್ಯಾಕೆ ನೊಂದುಕೊಳ್ಳುವೆ ಎಂದು ನನಗೆ ಸಮಾಧಾನ ಮಾಡುತ್ತಿದ್ದಳು.

ಎರಡನೇ ಘಟನೆ ನಡೆದದ್ದು, ನಾನು ಕೆಲಸಕ್ಕೆ ಸೇರಿದ ಹೊಸತರಲ್ಲಿ. ಪರಿಚಯದವರೊಬ್ಬರು ಹೇಳಿದ ಮಾತಿನಿಂದ ಸ್ಪೂರ್ತಿಗೊಂಡು, ಹಳೆಯ, ಚಲಾವಣೆಯಲ್ಲಿ ಇಲ್ಲದ ನಾಣ್ಯ ಹಾಗೂ ನೋಟುಗಳನ್ನು ಸಂಗ್ರಹ ಮಾಡುತ್ತಿದ್ದೆ. ಹೀಗೆ ಒಮ್ಮೆ, ಹಳೆಯ ಇಪ್ಪತ್ತು ರೂಪಾಯಿಯ ನೋಟು ಸಿಕ್ಕಿತ್ತು. ಅದನ್ನು ಅಂಗಿಯ ಜೇಬಿನಲ್ಲಿ ಇಟ್ಟಿದ್ದೆ. ಅಮ್ಮ ತುರ್ತಿಗೆ ಬೇಕಾದ ದಿನಸಿ ತರಲು ಅದೇ ಇಪ್ಪತ್ತು ರೂಪಾಯಿಯನ್ನು ಬಳಸಿದ್ದಳು. ಇದು ತಿಳಿಯದ ನಾನು ಒಂದೆರೆಡು ದಿನಗಳ ನಂತರ, ಆ ನೋಟಿಗಾಗಿ ಹುಡುಕಾಡಿ, ಅವಳಿಗೆ ಕೇಳಿದೆ. ಅವಳು ಇರುವ ವಿಚಾರ ಹೇಳಿದಾಗ, ನಾನು ಹಿಂದೆಮುಂದೆ ಯೋಚಿಸದೆ, ನನ್ನ ಜೇಬಿಗೆ ಯಾಕೆ ಕೈಹಾಕಿದೆ. ನನಗೆ ಕೇಳಿ ತಗೋಬೇಕು ಅಂತ ತಿಳಿಯುವುದಿಲ್ಲವೇ, ಹಾಗೆ ಹೀಗೆ ಎಂದು ತುಂಬಾ ಮಾತನಾಡಿ ಬಿಟ್ಟೆ. ಪಾಪ ಅಮ್ಮ, ಒಂದೂ ಮಾತನಾಡಲ್ಲಿಲ್ಲ. ಆದರೆ ಅಂದಿನಿಂದ ಕೊನೆಯವರೆಗೂ ಎಂದೂ ನನ್ನ ಜೇಬಿಗೆ ಕೈಹಾಕಲಿಲ್ಲ. ನಾನೇ ತೆಗೆದುಕೋ ಎಂದರೂ, ಮತ್ತೆ ತಪ್ಪಾಗಬಾರದು ತೆಗೆದುಕೊಡು ಎನ್ನುತ್ತಿದ್ದಳು.  ಇದಾದ ನಂತರ ಸಾಕಷ್ಟು ಅಂತಹ ನೋಟುಗಳು ಸಿಕ್ಕವು, ಆದರೆ ಅಮ್ಮನಿಗೆ ಮಾಡಿದ ನೋವು ಇಂದಿಗೂ ಕಾಡುತ್ತಿದೆ.

ನನ್ನ ಕೊನೆಯ ಉಸಿರಿನವರೆಗೂ ಈ ನೋವು ಕಾಡುತ್ತಲ್ಲೇ ಇರುತ್ತದೆ. ಎಲ್ಲವನ್ನೂ ಕೊಟ್ಟ ಅಮ್ಮನಿಗೆ ಒಮ್ಮೆ ತಿಳಿಯದೆ, ಮತ್ತೊಮ್ಮೆ ತಿಳಿದು ನೋವು ಕೊಟ್ಟೆ. ಈಗ ಸಂಗಾತಿ ಪತ್ರಿಕೆಯ ಲಕ್ಷಾಂತರ ಓದುಗರ ಮುಂದೆ, ಅಮ್ಮನಿಗೆ ಮನಸಾರೆ ಕ್ಷಮೆ ಕೇಳುವೆ. ಅಮ್ಮ Really really SORRY.


6 thoughts on “ಅಮ್ಮಂದಿರ ದಿನದ ವಿಶೇಷ

  1. ಅಮ್ಮ ಎಂಬ ಪದಕ್ಕೆ ಬದಲಾದ ಪದ ಇಲ್ಲ. ಚೆನ್ನಾಗಿ ಮೂಡಿಬಂದಿದೆ.

  2. ಮನಬಿಚ್ಚಿ ಬರೆದ ಕಥನ. ತಪ್ಪುಗಳನೆಲ್ಲ ಒಪ್ಪಿಸಿ ಹಗುರಾಗುವ ಆ ಮೂಲಕ ಹೆತ್ತಮ್ಮನೆಡೆಗೆ ಇರುವ ಪ್ರೀತಿಯ ಪರಿಯನ್ನು ನಿವೇದಿಸಿರುವ ಬರೆಹ ಮನಮುಟ್ಟಿತು.

  3. ಅಮ್ಮ ಕ್ಷಮಿಸಿಬಿಡು – ಒಳ್ಳೆಯ ಶೀರ್ಷಿಕೆ. ಬರಹ ಮನಮುಟ್ಟುವಂತೆ ಇದೆ.

Leave a Reply

Back To Top