ಕಾವ್ಯಸಂಗಾತಿ
ಅವ್ವ
ದೇವರಾಜ್ ಹುಣಸಿಕಟ್ಟಿ.
ಹಸಿ ಕಟ್ಟಿಗೆಯಲ್ಲೆ
ಉರಿದ ಆ ಒಲೆ….
ಸಗಣಿಯಲ್ಲೇ ಸಾರಿಸಿದ ಆ ನೆಲ……
ಸುಣ್ಣ- ಕೆಮ್ಮಣ್ಣಿನಿಂದಲೇ ಬಳಿದ ಆ ಗೋಡೆ..
ನೊರೆಯಿಡುತ್ತಿರುವ ಹಾಗೇ ಕರೆದ
ಆಕಳ ಆ ಹಾಲು…………
ಬೆರಣಿಯಿಂದಲೇ ಕಾಸಿದ ಬಿಸಿ ನೀರು…
ಮೈ-ಮನವನೆಲ್ಲ ಶುಚಿಗೊಳಿಸಿ
ಸುತ್ತಿದ ತುಳಸಿಕಟ್ಟೆ…..
ಹೊಸ್ತಿಲಿಗೆ ಇಟ್ಟ ಆ ಹಸೆ
ಅಂಗಳಕೆ ಬಿಟ್ಟ ರಂಗೋಲಿ….
ಮನೆಯೆಲ್ಲ ಪರಿಮಳ
ಹರಡುವಂತೆ ತೊಟ್ಟಿಲಡಿಯಲಿ
ಇಟ್ಟ ಆ ಧೂಪ…………….
ಮನೆಯ ಜಂತಿಗೆ ಹಾಕಿದ ಆ ನೆಲುವು…
ಸಂಜೆಯಾದೊಡನೆ ಹಚ್ಚುತ್ತಿದ್ದ
ಮಣ್ಣಿನ ಆ ದೀಪ…
ಎಲ್ಲವೂ ಪರಿಮಳ ಸೂಸುತ್ತಿವೆ
ಅವ್ವಾ ನನ್ನ ನೆನಪಿನಂಗಳದಿ…….. !!
ಸೆರಗು ಸುಟ್ಟ ಆ ಒಲೆಯ ಕಿಚ್ಚು…..
ಇಷ್ಟಾದ್ರೂ ನಿನಗೆ ಅದೇ ಅಚ್ಚು ಮೆಚ್ಚು…
ಹೊಟ್ಟೆಗೆ ಹಿಟ್ಟುಳಿಯದೆ ರಾತ್ರಿ
ಹಸಿವು ನುಂಗಿ ಕುಡಿದ ನೀರು…..
ಇಂಗದ ಅವನ ತೆವಲಿಗೆ ಹೊಮ್ಮಿದ ಬೆವರು…..
ಉಳಿದ ನೋವಿಗೆ ತೆಲೆ ದಿಂಬಿಗೆ
ಕಂಗಳು ಹೊರಹಾಕಿದ ಪನ್ನೀರು…..
ಮೇಣದಂತೆ ಕರಗಿದ, ಚಪ್ಪಲಿಯಂತೆ ಸವೆಸಿದ
ಬದುಕಿನಲ್ಲೂ ಹುಣ್ಣಿಮೆಯಂತೆ ತುಂಬಿದ ಆ ನಗು….
ತಪ್ಪುಗಳ ತಿದ್ದಲೆಂದೇ ತುಂಬಿಕೊಂಡ ಹುಸಿಮುನಿಸು….
ಅದು ಸದ್ದಿಲ್ಲದೇ ಕರಗಿಬಿಡುತಿದ್ದದ್ದು ಇನ್ನೂ ಸೊಗಸು….
ನನಗಾಗಿ ಕಟ್ಟಿಕೊಂಡ ಎತ್ತರೆತ್ತರದ ಕನಸು…..
ಅದಕಾಗಿ ಕರಗಿಸಿ ಬಿಟ್ಟಿ ಮೈ-ಮನಸ್ಸು ವಯಸ್ಸು
ಎಲ್ಲವೂ ಕಣ್ಣಂಚಲ್ಲಿ ಪರಿಮಳ ತುಂಬಿವೆ……
ಅವ್ವಾ ನನ್ನ ನೆನಪಿನಂಗಳದಿ……
ನನ್ನ ಅವ್ವ ಅಲಂಕಾರಗಳಿಂದ ತುಂಬಿ
ತುಳುಕಿದವಳಲ್ಲ ನಿರಾಭರಣ ಸುಂದರಿ…. ನನ್ನ ಕವಿತೆಯಂತೆ….
ಈಗೀಗ ನನ್ನವ್ವ ಸಂಜೆ ನೆಲಕಚ್ಚಿದ ಹೂವು……..!!
ಈಗೀಗ ನನ್ನವ್ವ ನೆಲಕಚ್ಚಿದ ಹೂವು..! ಅವಳ ಸವೆದ ಬದುಕಿನ ಪ್ರತಿಬಿಂಬದಂತಿದೆ ಈ ಸಾಲು. ಒಂದು ಪ್ರತಿಮೆ ಹಲವು ರೂಪದಂತೆ ಒಬ್ಬೊಬ್ಬರಿಗೆ ಒಂದೊಂದು ರೂಪದಲ್ಲಿ ಕಾಣಿಸಿಕೊಳ್ಳುವಳು ತಾಯಿ! ಮನಸನ್ನು ಕಾಡುತ್ತದೆ ಕವನ.