ವೈ.ಜಿ.ಅಶೋಕ್ ಕುಮಾರ್ ಕವಿತೆಗಳು

ಕಾವ್ಯ ಸಂಗಾತಿ

ವೈ.ಜಿ.ಅಶೋಕ್ ಕುಮಾರ್ ಕವಿತೆಗಳು

ಬುದ್ದನಿದ್ದಾನೆ ಎಚ್ಚರ

ಬುದ್ಧನಾಗಲು ನಾವು ಬೌದ್ದರಾಗಬೇಕಿಲ್ಲ
ಇದ್ದಲ್ಲಿಯೇ ಬುದ್ದರಾಗೋಣ

ಕೂಲಿ ಕಾರ್ಮಿಕ ಚಮ್ಮಾರ ಕಮ್ಮಾರ
ನೇಗಿಲ ಯೋಗಿ
ಎಲ್ಲರೂ ಬುದ್ದರೇ

ಬುದ್ಧ ಸಂವಿಧಾನ ಬರೆಯಲಿಲ್ಲ,
ತಾನೇ ಸಂವಿಧಾನವಾದ

ಗಾಂಧಿ ಬುದ್ದನಾದದ್ದು
ಅಹಿಂಸೆಯ
ಹಠದಿಂದ
ಬುದ್ಧ ಅಹಿಂಸಾ ಪುರುಷನಾದ

ವೇಷಗಳ ತೊಟ್ಟವರು
ಲೆಟರ್ ಹೆಡ್ ಬುದ್ದರೂ ಇದ್ದಾರೆ
ನಮ್ಮ ನಿಮ್ಮ ನಡುವೆ
ದೇಶ ಆಳುವ ಭಾಷಣವೀರರೇ
ಬುದ್ದನಾಗಲು ನಿಮ್ಮ ಶಿಫಾರಸು ಪತ್ರ ಬೇಕಿಲ್ಲ

ಖಾದಿ ಖಾವಿಯ ಬಿಸಿಯಲ್ಲಿ ಬುದ್ದನಿಲ್ಲ
ಬುದ್ದನಿದ್ದಾನೆ ಬದ್ದ ಜೀವಗಳ ಕಾಯಕದೊಳಗೆ

ಬುದ್ದ ಭಾಷಣಗಳ
ಬಿಗಿಯಲಿಲ್ಲ
ವೇಷ ಭೂಷಣಗಳ ತೊಡಲಿಲ್ಲ

ಮೌನದೊಳಗಿನ ಮಾತುಗಳ ಗ್ರಾಂಥಿಕನಾದ

ಬುದ್ದನ ಮೌನದಿಂದಲೇ ಮಾತುಕಟ್ಟಿಕೊಂಡೆವು

ನಾವು ಇದ್ದಲ್ಲಿಯೇ ಬುದ್ದರಾಗೋಣ
ಬುದ್ದನ ಸಂತತಿಯನ್ನು ಸಾವಿರಗೊಳಿಸೋಣ…

*****

ಅಮ್ಮನ ಕ್ಷಣ

ಕ್ಷಣ ಪ್ರತಿಕ್ಷಣ
ಅಮ್ಮನ ಕ್ಷಣವೇ
ದಿನ ಪ್ರತಿದಿನ
ಅಮ್ಮಂದಿರ ದಿನವೇ

ಅಡುಗೆ ಮನೆಯಿಂದ ಆಗಸದವರೆಗೂ
ಬ್ರೂಣದಿಂದ ಸಮಾಧಿಯವರೆಗೂ
ಅವಳೇ ಅವಳು

ರಾಮನಿಲ್ಲದ
ಲವ ಕುಶರ ಸೀತೆ
ಕರ್ಣನ ಬಿಟ್ಟ ಪಾಂಡವರ ಕುಂತಿ ನೂರೊಂದು ಇದ್ದರೂ
ಕುರುಡಿ ಗಾಂಧಾರಿ

ಸಾವಿರ ಮಕ್ಕಳ ತಾಯಿ ನಮ್ಮ ಸಾಲು ಮರದ ತಿಮ್ಮಕ್ಕ
ತಾಯಿಗೆ ಬಂಜೆತನವಿಲ್ಲ

ನಾವು ಅನಾಥರಲ್ಲ
ನಮ್ಮೊಳಗೂ
ತಾಯಿಯಿದ್ದಾಳೆ


Leave a Reply

Back To Top