ನೆನಪಿನಲ್ಲುಳಿದ_ಕಾರ್ಮಿಕ 
ಸ್ವೀಪರ್ ನಾಗಿ 

ಮೇ ದಿನದ ವಿಶೇಷ ಲೇಖನ

ಸುಜಾತಾ ರವೀಶ್

Indian “Maids” — The True Heroes of Corona | by Prerita Chawla | Thoughts  And Ideas | Medium

ನೆನಪಿನಲ್ಲುಳಿದ_ಕಾರ್ಮಿಕ 

ಸ್ವೀಪರ್ ನಾಗಿ 

ವರ್ಷಗಳುರುಳಿ ವರ್ಷಗಳು ಬರುತ್ತಲೇ ಇದೆ ಮತ್ತೆ ಮೇ 1 ಕಾರ್ಮಿಕರ ದಿನ ಬಂದಿದೆ .ತಮ್ಮ ಶ್ರಮ ಯೋಗ ಅನುದಾನದಿಂದ ನಮ್ಮೆಲ್ಲರ ಬದುಕು ಹಸನುಗೊಳಿಸುವ, ಸಹನೀಯ ಮಾಡಿಸುವ ಎಲ್ಲಾ ಕಾರ್ಮಿಕ ಬಂಧುಗಳಿಗೂ ಕೃತಜ್ಞತಾಪೂರ್ವಕ ವಂದನೆಗಳು ಅಭಿನಂದನೆಗಳು 

ಕಾರ್ಮಿಕರೆಂದರೆ ಸಂಘಟಿತ ವರ್ಗದ ನೀಲಿಯ ಕಾಲರಿನ ಉದ್ಯೋಗಿಗಳು ಅಥವಾ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕ ವರ್ಗ ಮಾತ್ರವಲ್ಲ.  ಅಸಂಘಟಿತ ವರ್ಗದಲ್ಲಿ ನಮ್ಮ ದಿನನಿತ್ಯದ ಒಳಿತಿಗಾಗಿ ದುಡಿಯುವವರ ದೊಡ್ಡ ಪಟ್ಟಿಯೇ ಇದೆ.  ಸಾಮಾನ್ಯ ಅವರ ಹೆಸರುಗಳೂ ತಿಳಿದಿರದಿರುವುದು ನಮ್ಮ ಸಹಜ ಅಹಂಕಾರವೋ ಅಥವಾ ಉದ್ದೇಶಿತ ನಿರ್ಲಕ್ಷ್ಯವೋ ತಿಳಿದಿಲ್ಲ . 

ನಮ್ಮ ಜೀವನ ಸುಗಮ ಸುಲಲಿತವಾಗಲು ಎಷ್ಟೋ ಅನಾಮಿಕ ಕಾರ್ಮಿಕರ ಕೊಡುಗೆಯೇ ಕಾರಣ. ಅಂಥವರ ಸಂಖ್ಯೆ ಹೆಚ್ಚು. ಮೊದಲು ಬೀದಿ ಗುಡಿಸಲು ಬರುತ್ತಿದ್ದ ಪೌರಕಾರ್ಮಿಕರು ಈಗ ಕಸ ತೆಗೆದುಕೊಂಡು ಹೋಗಲು ಬರುವವರು,  ಮನೆ ಕೆಲಸಕ್ಕೆ ಸಹಾಯಕರಾಗಿ ಬರುವವರು, ಕೂಲಿ ಕಾರ್ಮಿಕರು ತೋಟದ ಮಾಲಿಗಳು, ಚಪ್ಪಲಿ ಹೊಲಿಯುವವರು  ಹೀಗೆ ಅಸಂಘಟಿತ ಕಾರ್ಮಿಕರೇ ಬಹಳ .ಆದರೆ ಕೆಲವರು ಮಾತ್ರ ನಮ್ಮ ನೆನಪಿನಂಗಳದಲ್ಲಿ ಸದಾ ಹಸಿರಾಗಿ ಉಳಿದಿರುತ್ತಾರೆ . ಏನೋ  ಒಂದು ತರಹ ಹೊಸಬರು ಹೊಸತನ ಅಂತ ಅನ್ನಿಸಿದರೂ ಕೆಲವೊಮ್ಮೆ ಆಗ ಅದರ ಮಹತ್ವ ಅರ್ಥವಾಗಿರುವುದಿಲ್ಲ ಈಗ ಜೀವನದ ಹಲವಾರು ಮಜಲುಗಳನ್ನು ದಾಟಿ ಬಂದು ನಿಂತು ನೆನಪಿಸಿಕೊಂಡಾಗ ಅವರೆಂತ ವಿಶಿಷ್ಟ ಎನಿಸುತ್ತಾರೆ.  ಆಗ ನಮಗೇಕೆ ಅರ್ಥವಾಗಲಿಲ್ಲ ಎಂದೆನಿಸುತ್ತದೆ .  ಅಂತಹವರಲ್ಲಿ ಒಬ್ಬಳು ನಾಗಿ .

ಇವತ್ತು ನಿಮ್ಮೊಂದಿಗೆ ನಾಗಿಯ ನೆನಪುಗಳನ್ನು ಹಂಚಿಕೊಳ್ಳುತ್ತೇನೆ .ಆಗ ಎಪ್ಪತ್ತರ ದಶಕ .ಮನೆಯ ಶೌಚಾಲಯಗಳನ್ನು ತೊಳೆಯಲು ಬೇರೆಯೇ ಕರ್ಮಚಾರಿಗಳು ಬರುತ್ತಿದ್ದರು. ಆಗೆಲ್ಲ ಶೌಚಾಲಯಗಳು ಅಂಗಳದಲ್ಲಿ ಹೊರಗಡೆ ಇರುತ್ತಿದ್ದವು .ವಿಶ್ವೇಶ್ವರನಗರದ ನಮ್ಮ ಮನೆಯಲ್ಲಿ ಕೆಲಸಕ್ಕೆ ಬರುತ್ತಿದ್ದವಳು ನಾಗಿ.

ಕಪ್ಪು ಬಣ್ಣದವಳಾದರೂ ಲಕ್ಷಣವಾಗಿದ್ದ ಆಕೆ ಏಕೋ ನನ್ನ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿದ್ದಾಳೆ .ಕಾಫಿಯ ಹುಚ್ಚಿದ್ದ ಅವಳು ಒಂದು ರೂಪಾಯಿ ಕಡಿಮೆ ಬೇಕಾದರೂ ಕೊಡಿ ದಿನ ಕಾಫಿ ಮಾತ್ರ ಕೊಟ್ಬುಡಿ ಎನ್ನುತ್ತಿದ್ದುದು ,ಬಂದ ಕನ್ನಡ ಸಿನಿಮಾಗಳನ್ನು ಬಿಡದೆ ನೋಡುತ್ತಿದ್ದ ಅವಳ ಉತ್ಸಾಹ ಮತ್ತು ನಾಯಕಿಯ ಕಷ್ಟದ ಮುಂದೆ ತನ್ನದು ಏನೂ ಇಲ್ಲ ಎಂದು ಸಮಾಧಾನಿಸಿ ಕೊಳ್ಳುತ್ತಿದ್ದುದು. ಎಲ್ಲಕ್ಕಿಂತ ಹೆಚ್ಚು ಎನ್ನಿಸುವುದು ಕಥೆಯೆಂದರೆ ಅವಳಿಗಿದ್ದ ಪ್ರೀತಿ. ಅವಳೇ ಹೇಳಿದಂತೆ ಚಾಮರಾಜನಗರದ ಕಡೆಯವಳಾದ ಅವಳು ವಯಸ್ಸಾದ ಗಂಡನ್ನು ಮದುವೆಯಾಗಲು ಒಪ್ಪದೆ ಪ್ರೀತಿಸಿದ ಹುಡುಗನ ಜೊತೆ ಓಡಿ ಬಂದಿದ್ದಂತೆ. ರಾತ್ರಿಯೆಲ್ಲಾ ಕುಡಿದು ಗಲಾಟೆ ಮಾಡಿ ಹೊಡೆದು ಬಡಿದರೂ “ಬಿಡಿಯಮ್ಮಾ ಇದೆಲ್ಲಾ ನಮ್ಮಲ್ಲಿ ಇದ್ದದ್ದೇ.  ಕುಡಿಯದಿದ್ದಾಗ ಅವನು ತುಂಬಾ ಒಳ್ಳೆಯವನು” ಎಂದು ಗಂಡನನ್ನು ವಹಿಸಿ ಕೊಳ್ಳುತ್ತಿದ್ದಳು .”ಚಿಕ್ಕಮ್ಮರೇ ನಾಳೆ ಸಿನಿಮಾಗೆ ಹೋಗ್ಬೇಕು ನನಗೊಂದಿಷ್ಟು ಹೂವು ಕೊಡಿ ಆಯ್ತಾ “ಅಂತ ನಮ್ಮ ಮನೆಯಲ್ಲಿ ಬಿಟ್ಟಿದ್ದ ಯಾವುದೇ ಹೂವನ್ನ ಆಗಲಿ ಕೇಳಿ ತೆಗೆದುಕೊಂಡು ಹೋಗುತ್ತಿದ್ದಳು. ಅವಳ ವ್ಯಕ್ತಿತ್ವ ಎಷ್ಟು ವಿಶಿಷ್ಟ ಎಂದು ಈಗ ಅರ್ಥವಾಗುತ್ತಿದೆ ..ಅತ್ತು ಕರೆದು ಮಗನನ್ನು ಶಾಲೆಗೆ ಕಳುಹಿಸಿ ಎಸ್ಸೆಸ್ಸೆಲ್ಸಿ ಪಾಸಾಗುವಂತೆ ಮಾಡಿ ಸರಕಾರಿ ನೌಕರರಿಗೆ ಸೇರಿಸಿದ ಹೆಗ್ಗಳಿಕೆ ಅವಳದು. ಮಗಳು ಮಾತ್ರ ಅವಳ ನಿರೀಕ್ಷೆಗೆ ತಕ್ಕಂತೆ ಓದಲಿಲ್ಲ .ಮನೆಯವರ ವಿರೋಧದ ಮಧ್ಯೆಯೂ ಎರಡೇ ಮಕ್ಕಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಳು .ತಾನು ಎಷ್ಟೇ ಆರ್ಥಿಕ ಕಷ್ಟದಲ್ಲಿದ್ದರೂ ತನಗಿಂತ ಕಷ್ಟದಲ್ಲಿರುವವರಿಗೆ ಕೈಲಾದಷ್ಟು ಕೊಡುತ್ತಿದ್ದಳು “ಬಡವರಿಗೆ ಬಡವರೇ ತಾನೇ ಆಗಬೇಕು” ಅನ್ನೋದು ಅವಳ ಡೈಲಾಗು.  

ಎಷ್ಟೇ ಕಷ್ಟವಿದ್ದರೂ ಮಕ್ಕಳ ಏಳಿಗೆಗೆ ದುಡಿಯುವ ತಾಯಿ ,ಪ್ರೀತಿಯಿಂದ ಗಂಡನನ್ನು ವಹಿಸಿಟ್ಟುಕೊಳ್ಳುವ ಪ್ರೇಮಮಯಿ’ ಅದಮ್ಯ ಜೀವನೋತ್ಸಾಹದ ಕಾರಂಜಿ ಎಂದೆಲ್ಲಾ ಈಗ ಅನ್ನಿಸುತ್ತದೆ. ಆಗ ಅರ್ಥವಾಗದ ವಯಸ್ಸು ಆದರೂ ಅವಳಂತಿನ ಇತರರಿಗಿಂತ ಅವಳು ವಿಭಿನ್ನ ಎಂದು ಮಾತ್ರ ಅನ್ನಿಸಿತ್ತು .ಬೇಕು ಬೇಕುಗಳ ಹಪಾಹಪಿಯಲ್ಲಿರುವ ಇಂದಿನವರ ಮಧ್ಯೆ ಅವಳು ವಿಶಿಷ್ಟ ಎಂದು ನಿಮಗೂ ಅನ್ನಿಸುವುದಿಲ್ಲವೇ ಹೇಳಿ ?ಸ್ವಲ್ಪ ಮಾತ್ರ ಕಷ್ಟವನ್ನೂ ಗುಡ್ಡವನ್ನಾಗಿಸಿ ಕೊರಗಿ ಬಿಪಿ ಶುಗರ್ ಬರಿಸಿಕೊಳ್ಳುವ ನಮ್ಮ ಇಂದಿನ ಜನಾಂಗಕ್ಕೆ 

ಎಷ್ಟೇ ಕಷ್ಟವಿದ್ದರೂ ನಗುನಗುತ್ತಾ ಜೀವನದ ಸಣ್ಣ ಸಣ್ಣ ವಿಷಯಗಳಲ್ಲೂ ಖುಷಿ ಕಾಣುತ್ತಾ ನೋವನ್ನು ಮರೆಯುತ್ತಿದ್ದೆ ಇಂತಹವರು ಉದಾಹರಣೆ ಆಗಬೇಕಲ್ಲವೇ? ಒಳ್ಳೆಯದು ಯಾರಲ್ಲೇ ಇರಲಿ ಗೌರವಿಸಿ ಅನುಕರಿಸುವುದು ನಮ್ಮ ಅಭ್ಯಾಸ ಆಗಬೇಕು ತಾನೆ?


ಸುಜಾತಾ ರವೀಶ್ 

4 thoughts on “ನೆನಪಿನಲ್ಲುಳಿದ_ಕಾರ್ಮಿಕ 
ಸ್ವೀಪರ್ ನಾಗಿ 

  1. ಇಂಥ ಅಸಾಧ್ಯವಾದ ಕೆಲಸವನ್ನು ಯಾರೇ ಮಾಡಲಿ ಅಂಥವರನ್ನು ಪ್ರೀತಿ ಗೌರವಗಳಿಂದ ಕಾಣಬೇಕಾದುದು ನಮ್ಮ ಕರ್ತವ್ಯ ಅವರು ಸಾಮಾನ್ಯರಲ್ಲ ಶ್ರೇಷ್ಠರಲ್ಲಿ ಶ್ರೇಷ್ಠರು! ತಮ್ಮ ನೆನಪಿನ ನಾಗಿ ಮತ್ತು ಅಂಥ ಸಾವಿರಾರು ಜನರ ಬಗ್ಗೆ ನಾವೆಲ್ಲರೂ ಯೋಚಿಸಬೇಕಾಗಿದೆ ನಮ್ಮಂತೆ ಅವರೆಂದು ಕಾಣಬೇಕಾಗಿದೆ. ಧನ್ಯವಾದಗಳು ಮೇಡಂ ತಮಗೆ.

    1. ನಿಜ ಮೇಡಂ. ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಅನಂತಾನಂತ ಧನ್ಯವಾದಗಳು.

      ಸುಜಾತಾ ರವೀಶ್

  2. ನಾಗಿಯಂಥವರು ನಮ್ಮಲ್ಲಿ ಅಲ್ಲಲ್ಲಿ ಇದ್ದೇ ಇರುತ್ತಾರೆ. ನಮ್ಮ ತೋಟದ ಕೆಲಸಕ್ಕಾಗಿ ಬರುತ್ತಿದ್ದ ಶರಣವ್ವ ಎಂಬ ಅಂತಃಕರಣದ ವ್ಯಕ್ತಿತ್ವ ನನಗೆ ತಟಕ್ಕಂತ ನೆನಪಾಯ್ತು. ನಮ್ಮ ತೋಟದಲ್ಲೂ ಒಂದು ಮನೆ ಇತ್ತು. ಸುಗ್ಗಿ ಕಾಲಕ್ಕೆ ತೋಟದಲ್ಲೇ ಇರತಿದ್ವಿ.ಊರಾಗಿನ ಮನೆಯಿಂದ ಊಟ ಬರಲು ತಡವಾದಾಗ ಅಲ್ಲೇ ತನ್ನ ಬುತ್ತಿಯಿಂದಲೇ ತಾ ಹೆತ್ತ ಮಕ್ಕಳಂತೆ ಉಣ್ಣಿಸುತ್ತಿದ್ದ ನೆನಪು ಇನ್ನೂ ಹಸಿರಾಗಿದೆ. ಮಕ್ಕಳೇ ಇರದ ಅವಳಿಗೆ ನಾವೆ ಮಕ್ಕಳಾಗಿದ್ದೆವು. ಈಗ ಅವಳ ಸಂಬಂಧಿಯೇ ನಮ್ಮ ಜಮೀನು ನೋಡಿಕೊಳ್ಳುತ್ತಿದ್ದಾನೆ. ಅವರು ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿದ್ದಾರೆ. ನಿಮ್ಮ ನಾಗಿಯಿಂದಾಗಿ ನಮ್ಮ ಶರಣವ್ವ ನೆನಪಾದಳು.

    – ರಾಜೇಂದ್ರ ಪಾಟೀಲ
    ಹುಬ್ಬಳ್ಳಿ, 9148391546

  3. ಖಂಡಿತ ನಿಜ ಸರ್ ಅಂತಹ ಅಂತಕರಣದ ಜೀವಗಳು ಈಗ ಅಪರೂಪ . ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಅನಂತಾನಂತ ಧನ್ಯವಾದಗಳು .

    ಸುಜಾತಾ ರವೀಶ್

Leave a Reply

Back To Top