ಮೇ ದಿನದ ವಿಶೇಷ
ಮೇ ದಿನದ ಅಂಗವಾಗಿ ಬರೆದ
ಅಗುಳಿನಷ್ಟೆ ಕತೆಗಳು.
ಬಿ.ಶ್ರೀನಿವಾಸ.
ಮೇ ದಿನದ ಅಂಗವಾಗಿ ಬರೆದ ಅಗುಳಿನಷ್ಟೆ ಕತೆಗಳು.
೧.
ಲಾಕ್ ಡೌನ್ ಅವಧಿಯ ಭಾರ
ಉಳ್ಳವರು ಹೊತ್ತ ದಿನಸಿ ಮೂಟೆಗಳಲಿ
ಬಡವರ ಹಸಿವಿನದ್ದೇ ಭಾರ!
೨.
ಭಾರ
ಅಬ್ಬಾ….!
ಎಷ್ಟೊಂದು ಭಾರ!
ಈ ಹಸಿವು!
ಮೂಟೆ ಹೊತ್ತ ಹಮಾಲಿ ಉದ್ಘರಿಸಿದ.
೩.
ಬ್ರೇಕ್
ಟೀವಿಯಲಿ ಲೈವ್ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು.
ರೈತ,ಕಾರ್ಮಿಕ,ಕೂಲಿಗಳ,ಹಮಾಲಿಗಳ ಕಾರ್ಯಕ್ರಮ ಅದಾಗಿತ್ತು.
ನಿರೂಪಕ ಅತ್ಯುತ್ಸಾಹದಿಂದಲೆ ಕಾರ್ಯಕ್ರಮ ನಿರೂಪಿಸುತ್ತಿದ್ದ.
ಅವರೆಲ್ಲ ಹಸಿವು ! ಎಂದರು.
ತಕ್ಷಣವೇ “ಹೀಗೊಂದು ಬ್ರೇಕ್” ಘೋಷಿಸಿದ!
೪.
ಸಾಂತ್ವನ
ಗಾಯಗೊಂಡವರು,ಹಸಿವಿನಿಂದ ಕಂಗಾಲಾದವರು,ಪ್ರತಿಮೆಗಳ ಬಳಿ ಬಂದರು.
ಪ್ರತಿಮೆಗಳು ಮಾತಾಡಲಿಲ್ಲ.
ಬುಡದಲ್ಲಿ ಕುಳಿತವರು ಸಂತೈಸಿದರು.!
೫.
ಪ್ರೀತಿ
“ಕೊನೆಗಾಲದಲ್ಲೂ ಆ ಕೂಲಿಕಾರರು ನಮ್ಮನ್ನು ಅದೆಷ್ಟು ಪ್ರೀತಿಸುತ್ತಿದ್ದರು”
ದಲ್ಲಾಳಿಯೊಬ್ಬ ನುಡಿದ.
“ಅದು ಹೇಗೆ ಹೇಳುತ್ತಿ?”
ಮತ್ತೊಬ್ಬ ಕೇಳಿದ.
ಹಸಿವಿನಿಂದ ಸಾಯುವಾಗಲೂ ಅವರ ಕಣ್ಣುಗಳಲ್ಲಿ ನಮ್ಮದೇ ಚಿತ್ರಗಳಿದ್ದವು!” ಎಂದ.
*೬.
ಅನುಭವ
ನ್ಯಾಯಾಧೀಶರಿಗೆ ಸಿಟ್ಟು ಬಂದಿತ್ತು.
ತಡವಾಗಿ ಬಂದ ಸಾಕ್ಷಿದಾರ ಹೇಳಲಿಲ್ಲ, ಪಾದಗಳು ಬಿರಿದ ಸುದ್ದಿ.
“ಈ ಕಾಲದಲ್ಲೂ ಹಸಿವೆಯೇ …?” ಅಚ್ಚರಿ ವ್ಯಕ್ತಪಡಿಸಿದರು ನ್ಯಾಯಾಧೀಶರು.
“ಹೌದು ಸ್ವಾಮಿ,ಸೊಸೈಟಿಯ ಅಕ್ಕಿ,ಗೋಧಿ ಮಾರಿಯೆ ಕೋರ್ಟಿನ ಫೀಜು ತುಂಬಿದ್ದು” ಎಂದ.
“ಹೇಳಿದರೆ ತಾನೆ ಗೊತ್ತಾಗೋದು …?” ನ್ಯಾಯಾಧೀಶರು ಗದರಿದರು.
“ಹೇಳಿದರೆ ಆಗೊಲ್ಲ,ಅನುಭವಿಸಬೇಕು ಸ್ವಾಮಿ”
ತಣ್ಣಗೆ ಉತ್ತರಿಸಿದ.
೭.
ಬುಲೆಟ್ಟು ಟ್ರೈನೂ
ಬುಲೆಟ್ಟು ಟ್ರೈನು ಬರುವುದಂತೆ..? ಯಾರೋ ಕೇಳಿದರು.
ಟ್ರೈನೂ ಅವರದೆ…ಬುಲೆಟ್ಟೂ ಅವರದೆ; ಸೀಳುವ ಎದೆ ಮಾತ್ರ ನಮ್ಮದೆ”
ಹೊಲ ಕಳೆದುಕೊಂಡ ರೈತ ಬುಲೆಟ್ಟಿಗಿಂತಲೂ ವೇಗವಾಗಿ ಉತ್ತರಿಸಿದ.
೮.
ದೇವರು
ದೇವರು
ಯಾರಿಗೋ ಕೈ ಮುಗಿಯುತ್ತಿದ್ದ.
ನೋಡಿದರೆ…..
ಎದುರಿಗೇ ಇತ್ತು ಬೆವರು!.
೯.
ಕಣ್ಣೀರು
ಅಗ್ಗವಾದ ತರಕಾರಿ ಮಾರಲು ಬಂದವನ ಕಣ್ಣಲ್ಲಿ ನೀರು!
ಯಾಕೆಂದು ಕೇಳಿದೆ.
“ಇದು ನನ್ನದಲ್ಲ ” ಎಂದ.
ಮತ್ತೆ..?
“ಬೆಳೆದಾತನದು ..…” ಎಂದು ಕಣ್ಣೀರೊರೆಸಿಕೊಂಡ.!
೧೦.
ನೋಡಿ
ನನ್ನ ಮೈ ಹಿಂಡಿ ತೆಗೆದರೂ ಹನಿ ರಕ್ತ ಬರಲಿಲ್ಲ.
ನೋವಿಗೆ ಕಣ್ಣೀರೂ ಬರಲಿಲ್ಲ.
ಈಗ ನೋಡಿ….
ಬೆಳೆದ ಟೊಮ್ಯಾಟೋ..ಈರುಳ್ಳಿ ರಸ್ತೆಯ ಮೇಲೆ!
ಹೇಗೆ ಸುರಿಸುತ್ತಿವೆ ನೋಡಿ!
ರಕ್ತ ಮತ್ತು ಕಣ್ಣೀರು!
ರೈತ ಅಲವತ್ತುಕೊಂಡ.
೧೧.
ಬಣ್ಣ!
ಮೊದ ಮೊದಲು ಸರಕಾರಿ ಕಟ್ಟಡಗಳಿಗೆ ಇಂಥದೇ ಬಣ್ಣ ಹಚ್ಚಬೇಕೆಂದೇನಿರಲಿಲ್ಲ.
ಈಗೀಗ..
ಪೇಂಟರ್ ಇಸ್ಮಾಯಿಲ್ಲು,ಯಾರನ್ನೂ ಕೇಳದೆ ಬಳಿದೇ ಬಿಡುತ್ತಾನೆ ಕೇಸರಿ!
೧೨.
ಎ ಪ್ಲಸ್ ಬಿ ಹೋಲ್ ಸ್ಕ್ವಯರ್…
ಎ ಪ್ಲಸ್ ಬಿ ಹೋಲ್ ಸ್ಕ್ವಯರ್ ಇಜಿಕುಲ್ಟು ಎ ಸ್ಕ್ವಯರ್ ಪ್ಲಸ್ ಬ್ ಸ್ಕ್ವಯರ್ ಪ್ಲಸ್ ಎರಡು ಎ ಬಿ.
ಲೆಕ್ಕದ ಮೇಷ್ಟರ ಪಾಠ ತಲೆಗೋಗುತ್ತಿಲ್ಲ.
ಕೂಲಿಗೆ ಹೋದ ಅಪ್ಪ ಡಾಣಿ ಮಂಡಕ್ಕಿ ತಂದಿರಬಹುದೆ?
ಕೂಲಿಯಿಂದ ಅವ್ವ ಮನೆಗೆ ಬಂದಿರಬಹುದೆ?
ಆ ಹುಡುಗರ ತಲೆಯಲ್ಲಿ ಕನಸುಗಳು ತೇಲಾಡುತಿವೆ.
ಲೆಕ್ಕದ ಪಾಠ ತಲೆಗೆ ಹೋಗಲು ಬಿಡುತ್ತಿಲ್ಲ.
ಉದ್ಯೋಗಖಾತ್ರಿಯ ಕೆಲಸ ಕೊಡುವುದಿಲ್ಲವೇಕೆಂದು ಕೇಳಿದ್ದಕ್ಕೆ ಲಾಠಿಯೇಟು ತಿಂದು,ಹೊತ್ತೊಯ್ದ ಪೊಲೀಸರ ವ್ಯಾನಿನಲ್ಲಿ ಅವರಿಬ್ಬರೂ ಇದ್ದರೆಂಬುದು ಅವರಿಗೆ ತಿಳಿದಿಲ್ಲ.
ಸಾಲಿ ಬಿಟ್ಟ ಮಕ್ಕಳು
ಬೀದಿ ಬೀದಿಯಲ್ಲಿ ಹುಡುಕುತ್ತಿದ್ಧಾರೆ.
೧೩.
ಹರಿದ ಪಂಚೆಯ ನೋಡಿ ನಕ್ಕ ನಗೆ
ಅಪ್ಪನ ರಂಟಿ ಹೊಡೆದ ಗೀರುಗಳಲಿ ಎದ್ದ ಕೂಳೆವು ಆರಿಸಿದ ಹುಡುಗನ ಕಣ್ಣಲ್ಲಿ ಹೊಸ ಪಾಟೀ ಚೀಲದ ಕನಸು.
ಹಚ್ಚ ಹಸುರಿನ ಗಿಡಗಳು,ಹೂವಾಗಿ,ಈಚಾಗಿ,ಕಾಯಾಗಿ,ಬರುವುದೆ ತಡ,ಆತ ಹೆಗಲಮೇಲಿನ ವಲ್ಲಿ ತಲೆಗೆ ಸುತ್ತುತ್ತಾನೆ.
ದಲ್ಲಾಳಿಯೊಬ್ಬ ತಡೆಯುತ್ತಾನೆ.
ಆತನ ಬೆವರು
ಆಕೆಯ ಶ್ರಮ
ಮಗನ ಕನಸು
ತೂಕಕ್ಕೆ ಹಾಕಿ,ಐವತ್ತು ಕೇಜಿಯಷ್ಟು ತರಕಾರಿಗೆ ಐವತ್ತು ರೂಪಾಯಿ ಬಿಸಾಕುತ್ತಾನೆ.
ಐವತ್ತರ ನೋಟು ಹಿಡಿದ ಆತನಿನ್ನೂ ಅಲ್ಲಿಯೇ ನಿಂತಿದ್ದಾನೆ.
ತನ್ನದೇ ತರಕಾರಿ ಕೇಜಿಗೆ ಮುವ್ವತ್ತು ರೂಪಾಯಿಯಂತೆ ಸಾವಿರದೊಂಭೈನೂರು ರೂಪಾಯಿಗಳಾಗುವ ಬೆರಗು!
ತಕ್ಕಡಿಯೊಳು ಕುಂತ ಅವನದ್ದೇ ತರಕಾರಿ ಹರಿದ ಪಂಚೆಯನ್ನು,ಕುರುಚಲು ಗಡ್ಡವನ್ನು ನೋಡಿ ಕಿಸಕ್ಕನೆ ನಕ್ಕಂತೆ ಭಾಸವಾಗುತ್ತದೆ.
೧೩
ಪ್ರತಿಮೆಗಳ ದುಃಖ
ಪ್ರತಿಮೆಗಳು
ಮಾತಾಡುವುದಿಲ್ಲ ನಿಜ,
ಆದರೆ
ದುಃಖಿಸುತ್ತವೆ
ಈ ದಿನ ಮೇ ದಿನ, ಕಾಲಬುಡದಲ್ಲಿ ನಿಂತು ನ್ಯಾಯಕ್ಕಾಗಿ ಕೂಗುವವರಿಗಾಗಿ
ದುಃಖಿಸುತ್ತವೆ.
೧೪.
ನೆತ್ತರು
ಸುರಿವ ಮಳೆಗೆ ಹರಿವ ನೀರು
ಸೊಂಡೂರಿನ ಬೋಳು ಗುಡ್ಡದ ತುದಿಗೆ ಕುಂತ ಅನಾಥ ಹುಡುಗ
ಕೇಳುತ್ತಿದ್ದಾನೆ…
ಅದಿರು
ಅಗೆದವರ
ಬೆವರು
ಆಗಿರಬಹುದೆ
ಹೀಗೆ ನೆತ್ತರು ..?
ಬಿ.ಶ್ರೀನಿವಾಸ.
.
ಸರ್, ಯಾವ ಕವನದ ಬಗ್ಗೆ ಹೇಳಲಿ ಯಾವದನ್ನು ಬಿಡಲಿ, ಒಂದೊಂದು ಕವನವೂ ನೋವಿಗೆ ಕನ್ನಡಿಯಾಗಿವೆ.ಓದುವಾಗ ಎದೆಯಲ್ಲಿ ನೋವು ಸುಳಿಯುತ್ತದೆ! ನಿಮ್ಮ ಬರವಣಿಗೆ ಈ ದಿನವನ್ನು ಅರ್ಥಪೂರ್ಣ ಗೊಳಿಸಿದೆ. ಧನ್ಯವಾದಗಳು ತಮಗೆ.