ಅಂಕಣ ಸಂಗಾತಿ

ಸಕಾಲ

ಇದೊಂದೆ ಪರಿಹಾರವಾ ಬದುಕಿಗೆ?

ಆಸೆಯೇ ದುಃಖಕ್ಕೆ ಮೂಲ‌ ಎಂಬ ಭಗವಾನ್ ಬುದ್ಧನ ಮಾತು ಅರ್ಥಪೂರ್ಣ.ಹಾಗೂ ಸಾರ್ವಕಾಲಿಕ ಸತ್ಯ ಕೂಡ. ಪ್ರತಿಯೊಬ್ಬ ಮನುಷ್ಯನ ಮನಸ್ಸು ಚಂಚಲತೆಯ ಆಗರ.ಅದು ಒಮ್ಮೆ ಹಾಗಿದ್ದರೆ, ಇನ್ನೊಮ್ಮೆ ಹೀಗಿರುತ್ತದೆ.ಮನುಷ್ಯನಿಗೆ ವೇದನೆ ಶುರುವಾಗುವುದು ಅವನ/ಳ ಮಾನಸಿಕ ದೌರ್ಬಲ್ಯ, ಆಶಾಭಂಗ, ದ್ವೇಷ, ಸೇಡು,ಹತಾಶೆ ಬೇರೆಯವರಿಂದ ಉಂಟಾಗುವ ಒತ್ತಡ ಇತ್ಯಾದಿಗಳು ನಿರಾಸೆಯ ಬಲಹೀನ ಮನಸ್ಸು ಈ ಮೇಲಿನ ಯಾವುದೇ ಕಾರಣದಿಂದಲೇ ಆಗಲಿ ಆತ್ಮಹತ್ಯೆ ಮಾಡಿಕೊಂಡರೆ ಸಾಕೆಂಬ ಕೊನೆ ಘಟ್ಟಕ್ಕೆ ಬಂದು ನಿಲ್ಲುತ್ತದೆ.ಆಗ ಅದು ಶಾಸನೋಲ್ಲಂಘನವಾಗುತ್ತದೆ. ಆತ್ಮಹತ್ಯೆ ಮಹಾಪಾಪ  ಎಂಬುದು ಎಲ್ಲರೂ ತಿಳಿದ ವಿಚಾರವಾದರೂ,ಅದರ ಅನಿರೀಕ್ಷಿತ ದಾಳಿಗೆ ಒಳಗಾಗುವವರು ಅಸಂಖ್ಯಾತರು.

ದಾಸ ಶ್ರೇಷ್ಠ ಶ್ರೀ ಪುರಂದರ ದಾಸರ ವಾಣಿಯಂತೆ,

 “ಮಾನವ ಜನ್ಮದೊಡ್ಡದು ಅದ ಹಾನಿ ಮಾಡಿಕೊಳ್ಳಬೇಡಿರೊ ಹುಚ್ಚಪ್ಪಗಳಿರಾ’ ಅನ್ನುವಾಗ ಮಾನವ ಜನ್ಮ ಶ್ರೇಷ್ಠ ಎನ್ನುವುದನ್ನು ಅರ್ಥೈಸಬೇಕು.

ಆತ್ಮಹತ್ಯೆ ಅಂದರೆ ಅದೊಂದು ವಿಚಲಿತ ಮನಸ್ಸಿನ ಉದ್ವೇಗ,ಆತುರತೆಯ ತುಡಿತ. ಸ್ವ ಪ್ರೇರಣೆಯಿಂದ ನಡೆಯುವಂತಹುದು. ಸಾಯಲು ತವಕಿಸುವ ಅತಂತ್ರ ಮನಕ್ಕೆ ಯಾವಾಗ ಹೇಗೆ ಈ ಖಿನ್ನತೆಗೆ ಒಳಗಾಗುತ್ತಾರೆ ಎಂಬ ಅಂಶಗಳನ್ನು ನಿಖರವಾಗಿ ನಿರ್ಧರಿಸಲು ಆಗದು.ನಕಾರಾತ್ಮಕ ಭಾವಗಳು ಸ್ವಂತಿಕೆಯನ್ನು ಮರೆಮಾಚಿ ಪೈಶಾಚಿಕ ಜಗತ್ತನ್ನು ಪ್ರವೇಶಿಸಲು ಅಣಿಗೊಂಡಂತೆ ಏಕಾಂಗಿತನವು ಕೈಬೀಸಿ ಕರೆಯುತ್ತಿದ್ದಾಗ ನಿಧಾನಗೊಂಡ ಮೆದುಳು ಒಂಟಿತನ ದತ್ತ ವಾಲುವುದು ನಿಶ್ಚಿತ ‌

ಹಾಗಾದರೆ ಈ ರೀತಿ ಮನೋಭಾವಗಳು ಈಗಷ್ಟೇ ಹುಟ್ಟಿಕೊಂಡವಾ?ಅಥವಾ ಮೊದಲು ಇದ್ದವಾ? ಯಾಕೆಂದರೆ ಇತಿಹಾಸ ದಾಖಲಾದರೆ ಮಾತ್ರ  ನಮಗೆ ಓದಲು ಸಿಗುತ್ತದೆ.ಆತ್ಮ ಹತ್ಯೆಯ ಮಾರ್ಗಗಳನ್ನು ಹುಡುಕುತ್ತಾ  ಹೊಂಟ್ರೆ ಸರಿಸುಮಾರು ಹದಿನೇಳು ಹದಿನೆಂಟನೆಯ ಶತಮಾನಗಳಲ್ಲಿ,ಇಂಗ್ಲೆಂಡಿನ ಡಾನ್ ಮತ್ತು ಹ್ಯೂಮ್, ಫ್ರಾನ್ಸ್ ದೇಶದ ಮಾಂಟೇನ್ ಮಾಂಟೇಸ್ಕೂ ವೋಲ್ಟೇರ್ ಮತ್ತು ರೂಸೊ ,ಇಟಲಿ ದೇಶದ ಬೆಕ್ಕಾರಿಯೋರವರು ಆತ್ಮಹತ್ಯೆಯನ್ನು ಮತ ಮತ್ತು ರಾಜ್ಯ ಸರ್ಕಾಕಳೆದುಕೊಳ್ಳುತ್ತದೆ.ವಾದ ಮಾಡಿದರು.ಈಗಲೂ ಅನೇಕರು ಇವರ ಅಭಿಪ್ರಾಯವನ್ನು ಎತ್ತಿ ಹಿಡಿದಿದ್ದಾರೆ.

ಆತ್ಮ ಹತ್ಯೆಯ ಕಾಯಿದೆಯು ವಿವೇಚನೆಯ ವಯಸ್ಸು, ನ್ಯಾಯ ಮತ್ತು ಬುದ್ಧಿಸ್ವಾಸ್ಥ್ಯ ಉಳ್ಳ ವ್ಯಕ್ತಿ ಉದ್ದೇಶ ಪೂರ್ವಕವಾಗಿ ತನ್ನ ಕ್ರಿಯೆ ಅಥವಾ ನಿಷ್ಕ್ರಿಯೆಯಿಂದ ಅಪಕೃತ್ಯವೆಸಗಿ ಅದರಿಂದಸ್ವನಾಶಮಾಡಿಕೊಳ್ಳುವುದೇ ಆತ್ಮಹತ್ಯೆಯಾಗಿದೆ. ಆತ್ಮಹತ್ಯೆ ನೈತಿಕ ಮತ್ತು ಧಾರ್ಮಿಕ ದೃಷ್ಟಿಗಳಿಂದ ಮಾತ್ರವೇ ಅಪರಾಧವಲ್ಲ.ಸಾಮಾಜಿಕ ಮತ್ತು ಶಾಸನ ದೃಷ್ಟಿಗಳಿಂದಲೂದೋಷರ್ಹವಾದುದು‌.

ಸಮಾಜದಲ್ಲಿ ವ್ಯಕ್ತಿಯ ಬೌದ್ಧಿಕ ಮತ್ತು ಶಾರೀರಿಕ ಜೀವನದ ಮೌಲ್ಯ ಕೇವಲ ಅವನ ವೃಷ್ಟಿಸಿದ್ಧಿಗೆ ಸೀಮಿತವಾಗದೇ ಸಮಷ್ಟಿಸಿದ್ಧಿಗೂ ಲಭ್ಯವಾಗಬೇಕೆಂಬ ಲೋಕ ಹಿತ ದೃಷ್ಟಿಯಿಂದ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿದರೆ ಹೇಗೆ ಅವನು ಶಿಕ್ಷಾರ್ಹನಾಗುತ್ತಾನೆಯೋ,ಅದೇ ಪ್ರಕಾರವೇ ತನ್ನನ್ನು ತಾನೇ ಕೊಲೆ ಮಾಡಿಕೊಂಡರೂ ಅವನು ದೋಷಿಯಾಗುತ್ತಾನೆ.

ಅಬ್ಬಾ….ವಿಚಿತ್ರವಾದರೂ ಸಚಿತ್ರದೆಡೆಗೆ ಸಾಗುವ

ಸಂದರ್ಭದಲ್ಲಿ ಮನಸ್ಸು ಸ್ವಾಸ್ಥ್ಯ ಕಳೆದುಕೊಳ್ಳುತ್ತದೆ ಎಂಬ ಸತ್ಯ ಗೋಚರಿಸುವುದು ಹಾಗೂ ಆಗೋಚರ ಅನಾಹುತವನ್ನು ತಡೆಗಟ್ಟಲು ವಿವೇಕ ಬಳಸುವ ಮೊದಲೇ ಕೈ ಮೀರಿ ಹೋಗೋ ಸಮಯಕ್ಕೆ ತಡೆಯೊಡ್ಡುವವರಾರು.? ಕೈಚೆಲ್ಲಿ ಕುಳಿತವರ ಕೈಗೆ ಮನೋಬಲ ತುಂಬುವ ಸ್ನೇಹಿತರು ಬೇಕೆನಿಸದೇ ಇರದು.ಹಾಗಿದ್ದಾಗ್ಯೂ ಹೇಗೆಲ್ಲ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಸಾಧ್ಯವೆಂಬ ಅಂಕೆ ಸಂಖ್ಯೆಯ ಆಧಾರ ನಿಖರವಾಗಿ ಲಭಿಸದು. ಕೆಲವರಿಗಂತೂ ಸ್ವಲ್ಪ ನೋವಾದರೂ ಸಾಕು ಅದನ್ನು ಸಹಿಸಿಕೊಳ್ಳದೆ ತಕ್ಷಣ ನಾನೇಕೆ ಬದುಕಬೇಕೆಂಬ ಸಂಕುಚಿತ ಭಾವಕೆಮನಸ್ಸು ತುಂಬಾ ಸೂಕ್ಷ್ಮವಾದುದು.ಅದಕ್ಕೆ ಸ್ವಲ್ಪ ಘಾಸಿಯಾದರೂ ಅದು ಸಹಿಸಿಕೊಳ್ಳುವುದಿಲ್ಲ. ದುರ್ಬಲಗೊಂಡ ಮನಸ್ಸು ಸದಾ ಸಾವಿನ ಕಡೆಯೇ ಆಲೋಚಿಸುತ್ತಿರುತ್ತದೆ. ಸಾಯಲು ಇಂತಹದೇ ಕಾರಣಗಳು ಬೇಕಿಲ್ಲ.ಎಷ್ಟೋ ಸಲ ಕ್ಷುಲ್ಲಕವೆನಿಸಬಹುದಾದ ಘಟನೆಗಳು ಸಾವಿಗೆ ಕಾರಣವಾಗಿರುವುದನ್ನು ಗಮನಿಸಬಹುದಾಗಿದೆ. ಹಲವರು ಹಲವಾರು ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಾಣಬಹುದಾಗಿದೆ.ಕಷ್ಟ ಸುಖಗಳನ್ನು ಸರಿಸಮನಾಗಿ ಸ್ವೀಕರಿಸಿ, ಜೀವನದಲ್ಲಿ ಸಾಧಿಸುವ ಛಲದಿಂದ ಬದುಕುವ ಮನಸ್ಸು ಜಾಗೃತವಾಗಬೇಕಿದೆ.

ನೇಣು ಬಿಗಿದುಕೊಂಡು,ಬೆಂಕಿಯಲ್ಲಿ ಸುಟ್ಟುಕೊಂಡು

ನೀರಿನಲ್ಲಿ ಬಿದ್ದು, ವಿಷ ಕುಡಿದು,ಬಸ್ಸಿಗೆ,ರೈಲಿಗೆ ಆಹುತಿಯಾಗಲು ದೃಢ ಮನಸ್ಸು ಮಾಡುವ ಹೇಡಿ ಜೀವಿಗಳಿಗೆ ದಿಕ್ಕಾರವಿದೆ.ಹುಟ್ಟಿದ್ದು ಯಾಕಾಗಿ? ಹೆತ್ತವರ ಬದುಕಿಗೆ ಕೊಳ್ಳಿಯಿಡುವ ಅಥವಾ ಹೆತ್ತವರು ಮಕ್ಕಳ ಬದುಕಿಗೆ ಮಾರಕವಾಗುವ ದೃಶ್ಯಗಳನ್ನು ಕಣ್ಣಾರೆ ಕಂಡಿದ್ದೆವೆ.ಅನೇಕ ಪ್ರಮುಖ ಮತಗಳು ಆತ್ಮಹತ್ಯೆಯನ್ನು ದುಷ್ಕರ್ಮ, ಪಾಪ ಎಂದು ಖಂಡಿಸಿವೆ. ಇಸ್ಲಾಂ ಮತದಲ್ಲಿ ಇದನ್ನು ನಿಷೇಧಿಸಿದ್ದಾರೆ. ಬೈಬಲ್ಲಿನ ಹಳೆಯ, ಹೊಸ ಒಡಂಬಡಿಕೆಗಳಲ್ಲಿ ಸ್ಪಷ್ಟವಾಗಿ ಟೀಕಿಸಿ ಪ್ರತಿಷೇಧಿಸಿಲ್ಲದಿದ್ದರೂ ಸಂತ ಅಗಸ್ಟೀನ್ ಕಾಲದಿಂದೀಚೆಗೆ ಕ್ರೈಸ್ತಮತದವರು ಆತ್ಮಹತ್ಯೆಯನ್ನು ನಿಷೇಧಿಸಿದ್ದಾರೆ. ಕೊಲೆಗಳನ್ನು ಮಾಡಿದಷ್ಟೇ ಪಾಪಕರವೆಂದು ಸಾರಿದ್ದಾರೆ.

ಯೆಹೂದ್ಯರ ತಾಲ್ಮೂಡ್ ಎಂಬ ಧರ್ಮಶಾಸ್ತ್ರದಲ್ಲಿ ಆತ್ಮಹತ್ಯೆ ಘೋರ ಪಾಪವೆಂದು ಸಾರಿ, ಆತ್ಮಹತ್ಯೆ ಮಾಡಿಕೊಂಡವನಿಗೆ ಶಾಸ್ತ್ರೋಕ್ತ ಅಂತ್ಯ ಸಂಸ್ಕಾರವ ನ್ನು ನಿಷೇಧಿಸಿದೆ.ಬುದ್ಧ‌ ಮಧ್ಯಮಾರ್ಗಾವಲಂಬಿಯಾಗಿ ದೇಹವನ್ನು ದಂಡಿಸುವುದನ್ನು ಖಂಡಿಸುವುದರಿಂದ ಆತ್ಮಹತ್ಯೆಯನ್ನು ನಿಷೇಧಿಸಿದೆ ಆದರೆ ಬೌದ್ಧಮತದಲ್ಲಿ ಬೌದ್ಧ ಸಂಘಕ್ಕೋಸ್ಕರ ಪುನರ್ಜನ್ಮತಾಳುವ ಅತಿಶ್ರೇಷ್ಠ ಉದ್ದೇಶಕ್ಕೋಸ್ಕರ ಅತಿ ಮೇಲ್ಮಟ್ಟದ ಬೋಧಿಸತ್ವರು ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶವಿದೆ. ಅದು ಜನಸಾಮಾನ್ಯರಿಗೆ ಖಂಡಿತ ಅನ್ವಯಿಸುವುದಿಲ್ಲ. ಇದೇ ರೀತಿಯಲ್ಲಿ ಜೈನಧರ್ಮದಲ್ಲೂ ಅತಿಶ್ರೇಷ್ಠ ಯತಿಗಳು ಅವಸಾನ ಕಾಲದಲ್ಲಿ ಭಿಕ್ಷೆಯನ್ನು ತಿರಸ್ಕರಿಸಿ ಹಸಿವು ಬಾಯಾರಿಕೆಗಳಿಂದ ಬಳಲಿ ದೇಹವನ್ನು ದಂಡಿಸಿ  ಅಸುವನ್ನು ನೀಗಲು ಅವಕಾಶವಿದೆ. ಇದಕ್ಕೆ ಸಲ್ಲೇಖನಪದ್ಧತಿ ಎಂದು ಹೇಳುತ್ತಾರೆ. ಪಾಶ್ರ್ವ ಮತ್ತು ಅರಿಷ್ಟನೇಮಿ ತೀರ್ಥಂಕರರು ಈ ರೀತಿಯಲ್ಲಿ ಕಾಯೋತ್ಸರ್ಗ ಮಾಡಿದರು. ಈಗಲೂ ಕೆಲವು ಶ್ರೇಷ್ಠ ಜೈನ ಯತಿಗಳು ಸಲ್ಲೇಖನ ಮಾಡುತ್ತಾರೆ.

ಜಿಗುಪ್ಸೆ ಹೊಂದಿದಾಗ ಬ್ರಾಹ್ಮಣನಾದವನು ನೀರು ಗಾಳಿಯನ್ನು ಮಾತ್ರ ಸೇವಿಸಿಕೊಂಡು ನಿರ್ಜನ ಪ್ರದೇಶದಲ್ಲಿ ಈಶಾನ್ಯ ದಿಕ್ಕಿನ ಕಡೆ ನಡೆದುಕೊಂಡು ಹೋಗುತ್ತ ಕುಸಿದು ಬಿದ್ದು ಅಸುನೀಗಿದರೆ, ಬ್ರಹ್ಮ ನಿರ್ವಾಣ ಪಡೆಯಬಹುದೆಂದು ಮನುಧರ್ಮಶಾಸ್ತ್ರ ದಲ್ಲಿ ಹೇಳಿದೆ.ಅನೇಕ ಮಹಾಯೋಗಿಗಳು ಜೀವಸಮಾಧಿಯನ್ನು ಮಾಡಿಕೊಳ್ಳುತ್ತಾರೆ. ನದೀ ಅಥವಾ ಜಲಪ್ರವೇಶ, ಗುಹಾಪ್ರವೇಶ, ಅಗ್ನಿಪ್ರವೇಶ ಇತ್ಯಾದಿ ಪ್ರಸಂಗಗಳನ್ನು ಮಹಾ ಯೋಗಿಗಳು, ಮಹಿಮಾವಂತರು ದೇಹವಿಸರ್ಜನೆಗೋಸ್ಕರ ಮಾಡಿದ್ದಾರೆ. ಮಾಡುವುದೂ ಉಂಟು. ನಮ್ಮ ಸಂಸ್ಕ್ರತಿಯಲ್ಲಿ ಸತೀ ಪದ್ಧತಿ, (ಸಹಗಮನ, ಜೋಹರ್) ರೂಢಿಯಲ್ಲಿತ್ತು.ಅದನ್ನು ದಿಕ್ಕರಿಸಿದರ ಫಲವಾಗಿ ರಾಜಾರಾಮ ಮೋಹನ್ರಾಯ್ ರ ಹೋರಾಟದ ಫಲ ಇಂದು ವರದಾನವಾಗಿದೆ.

ರಾಜನ ಜೀವಕ್ಕೆ ಪ್ರತಿಯಾಗಿ ಪ್ರಾಣಾರ್ಪಣೆ ಮಾಡಲು ಸಿದ್ಧರಿದ್ದ ಆಪ್ತ ಸೈನಿಕರನ್ನು ಗರುಡರೆಂದು ಕರೆಯುತ್ತಿದ್ದರು. ರಾಜನ ನಿಧನದ ವಾರ್ತೆಯನ್ನು ಕೇಳುತ್ತಿದ್ದಂತೆ ಗರುಡರು ಬೆಂಕಿಗೆ ಹಾರಿ ಸಾಯುತ್ತಿದ್ದ ಕಥೆಗಳು ಭಾರತ ಇತಿಹಾಸದಲ್ಲಿವೆ.ಅಂತೂ ಯಾವ ಧರ್ಮವೇ ಆಗಲಿ, ಮತವೇ ಆಗಲಿ ಸಾಮಾನ್ಯ ವ್ಯಾವಹಾರಿಕ ಉದ್ದೇಶಗಳಿಗೋಸ್ಕರ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಖಂಡಿಸುತ್ತದೆ. ಆತ್ಮಹತ್ಯೆಯಲ್ಲಿ ಮೊದಲನೆಯ ದೇಶವೆಂದರೆ ಅಮೆರಿಕ. ಪ್ರತಿವರ್ಷವೂ ಆ ದೇಶದಲ್ಲಿ 22,000ಕ್ಕಿಂತಲೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈಗ ಆತ್ಮಹತ್ಯೆಯನ್ನೂ ಆತ್ಮಹತ್ಯೆಯ ಪ್ರಯತ್ನವನ್ನೂ ನಿಷೇಧಿಸಲಾಗಿದೆ. ಅದಕ್ಕೆ ಸಹಾಯ ಮಾಡಿದವರನ್ನು ಸರ್ಕಾರ ಶಿಕ್ಷಿಸುತ್ತದೆ.

ಇಂಗ್ಲೆಂಡಿನಲ್ಲಿ ಆತ್ಮಹತ್ಯಾಶಾಸನ 1961 (ಸೂಯಿಸೈಡ್ ಆಕ್ಟ್)[೫] ಜಾರಿಗೆ ಬರುವವರೆಗೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೃತ ಶರೀರಕ್ಕೆ ಮತ್ತು ಅವನ ಆಸ್ತಿಪಾಸ್ತಿಗಳಿಗೆ ಶಿಕ್ಷಾರ್ಹವಾದ ಕೆಲವು ನಿರ್ಬಂಧ ಕ್ರಮಗಳು ಜಾರಿಯಲ್ಲಿದ್ದುವು. ಆದರೆ ಈಗ ಮೇಲಿನ ಶಾಸನದ ಪ್ರಕಾರ ಆತ್ಮಹತ್ಯೆ ಅಥವಾ ಅದರ ಪ್ರಯತ್ನ ಅಪರಾಧವಲ್ಲ.ಆತ್ಮಹತ್ಯೆಗೆ ನೆರವಾಗುವ ಮತ್ತು ಪ್ರೋತ್ಸಾಹಿಸುವ ವ್ಯಕ್ತಿ ಕಠಿಣಶಿಕ್ಷೆಗೆ ಗುರಿಯಾಗುತ್ತಾನೆ. ಇಂಡಿಯನ್ ಪೀನಲ್‍ಕೋಡ್ ಪ್ರಕಾರ ಸಹ ಆತ್ಮಹತ್ಯೆಗೆ ನೆರವಾಗುವ ಮತ್ತು ದುಷ್ಟಾನುಕೂಲನಾ ಗುವ ವ್ಯಕ್ತಿ ಶಿಕ್ಷಾರ್ಹ ಸೆಕ್ಷನ್ 305, 306. ಹಾಗಿದ್ದೂ ಸಾವು ಬಯಸುವುದು ಯಾವ ನ್ಯಾಯ?

ಅಪರಾಧಿ ಮಾನವಶಾಸನದ ವ್ಯಾಪ್ತಿಗೆ ಅತೀತನಾಗಿ ಶಿಕ್ಷೆ ವಿಧಿಸಲು ಅಸಾಧ್ಯವಾದರೂ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಸಿದ್ಧತೆಗಳನ್ನು ಮಾಡಿಕೊಂಡು ಅನಂತರ ಪ್ರಯತ್ನ ಮಾಡಿದರೆ ಅದು ಇಂಡಿಯನ್ ಪೀನಲ್ ಕೋಡ್ ಪ್ರಕಾರ (ಸೆಕ್ಷನ್ 309) ಶಿಕ್ಷಾರ್ಹವಾದುದು.ಲೀಸರಿಂದ ತಪ್ಪಿಸಿಕೊಳ್ಳಲು ಅಪರಾಧಿ ನೀರಿಗೆ ಧುಮುಕಿದರೆ, ವಿಷದ ಸೀಸೆ ಹತ್ತಿರ ಇಟ್ಟುಕೊಂಡ ಮಾತ್ರಕ್ಕೆ, ಗಂಡನ ಹಿಂಸೆಯನ್ನು ಸಹಿಸಲಾರದೇ ವಯಸ್ಕಳಾದ ಹೆಂಡತಿ ಅವನಿಂದ ಪಾರಾಗಲು ಬಾವಿಗೆ ಬಿದ್ದರೆ ಇವು ಯಾವುದು ಶಿಕ್ಷಾರ್ಹವಾದ ಆತ್ಮಹತ್ಯಾ ಪ್ರಯತ್ನಗಳೆನಿಸುವುದಿಲ್ಲ.

ಮರಣಾಂತ ಉಪವಾಸದ ಘೋಷಣೆ ಮಾಡಿ ಅನ್ನಾಹಾರಾದಿಗಳನ್ನು ಸಂಪೂರ್ಣ ವಜ್ರ್ಯಮಾಡಿ ಮೃತ್ಯು ಸನ್ನಿಹಿತವಾದಾಗ,ಆತ್ಮಹತ್ಯೆಯ

ಉದ್ದೇಶದಿಂದ ನೀರಿಗೆ ಬೀಳುವುದು ಅಥವಾ ನೇಣುಹಾಕಿಕೊಳ್ಳುವುದು ಇತ್ಯಾದಿ ಸಕ್ರಿಯಾ ಚಟುವಟಿಕೆಯ ಪ್ರಯತ್ನ ವಿಫಲವಾಗಿ ಉಳಿಯುವ ವ್ಯಕ್ತಿ ಅಪರಾಧಿ ಎನಿಸಿಕೊಂಡು ಶಿಕ್ಷಾರ್ಹನಾಗುತ್ತಾನೆ..

ಎತ್ತ ಸಾಗಿದೆ ನಮ್ಮಿ ಬದುಕು,ಭುವಿಗೆ ಆಧಾರವಾಗುವ ಬದಲು ಪ್ರಕೃತಿಗೆ ವ್ಯತಿರಿಕ್ತವಾಗಿ ತನ್ನ ಅಳಿವನ್ನು ತಾನೆ ಬರಮಾಡಿಕೊಳ್ಳುವ ಹುನ್ನಾರ.ಮೇಲ್ನೋಟಕ್ಕೆ ಆತ್ಮಹತ್ಯೆ ಸರಳವೆನಿಸಿದರೂ,ಅದರ ಹಿಂದಿರುವ ಕರಾಳ ಸತ್ಯಗಳು ಮನುಕುಲದ ಅಸ್ತಿತ್ವಕ್ಕೆ ಮಾರಕವೆಂದರೆ ತಪ್ಪಾಗದು.ದೇಶಯಾವುದಾದರೇನು ಹುಟ್ಟಿದ ಮೇಲೆ ಅದು ಸಾರ್ಥಕ ಬದುಕಾಗುವತ್ತ ಸಾಗಬೇಕು ಸಂಕಿಚಿತ ಮನಸ್ಸಿಂದ,ಬಲಹೀನ ಸ್ಥಿತಿಯಿಂದ ಹೊರಬಂದರೆ ಸಮಾಜದಲ್ಲಿ ಇಂತಹ ಅಕಾಲಿಕ ಮರಣಗಳನ್ನು ತಡೆಗಟ್ಟಬಹುದು…ಪ್ರತಿ ಮನೆಯಲ್ಲಿ ಸಕಾರಾತ್ಮಕ ಪರಿಣಾಮಗಳು ಜಾಗೃತವಾಗಬೇಕಾದರೆ ಸದಾ ಚಟುವಟಿಕೆಯಿಂದ ಕೂಡಿರಬೇಕು.ಸಿಟ್ಟಿನಲ್ಲಿ ಕೊಯ್ದುಕೊಂಡ ಮೂಗು ಮತ್ತೆ ಬರದು….ಹಾಗೆ.ಆತ್ಮಹತ್ಯೆ ಸ್ವಯಂ ಅಪರಾಧ. ಇದರತ್ತ ಯಾರ ಮನವು ವಾಲದಿರಲಿ….


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ…

11 thoughts on “

    1. ತುಂಬಾ ಚೆನ್ನಾಗಿದೆ ಬರವಣಿಗೆ. ದ್ವೇಷ ಅಸೂಯೆಗಳೆಲ್ಲ ದೂರ ವಾಗಿರಲಿ, ಪ್ರೀತಿ ವಿಶ್ವಾಸ ಒಂದಾಗಿರಲಿ.
      ನೋವಿನಲ್ಲೂ ನಗು ತುಂಬಿರಲಿ.ಏನೇ ನೋವಿರಲಿ ಬದುಕುವ ಧೈರ್ಯ ದೇವರು ತುಂಬಲಿ. ಎನ್ನುವ ಸಂದೇಶ ನೀಡಿದಂತಿದೆ. ಸೂಪರ್

  1. ತುಂಬಾ ಚೆನ್ನಾಗಿದೆ ಸವಿವರ ಮಾಹಿತಿ ಒಳಗೊಂಡ ಲೇಖನ ಶಿವಲೀಲಾ ಮೇಡಂ

  2. ಲೇಖನ ಓದುತ್ತಿದ್ದಂತೆ…ಏನಿರಬಹುದು ಪರಿಹಾರ? ಎಂಬ ಪ್ರಶ್ನೆ ಕಣ್ಮುಂದೆ ಬರುತ್ತೆ..ಯಾಕೆಂದರೆ ಆತ್ಮಹತ್ಯೆ ನೆ ಪರಿಹಾರ ಅಲ್ಲ ಅಲ್ವಾ…ಹಾಗಾಗಿ.. ಯಾವ ವ್ಯಕ್ತಿ ತನ್ನನ್ನ ತಾನು ಅರ್ಥಮಾಡಿಕೊಳ್ಳುವುದಿಲ್ಲವೊ ಅಲ್ಲಿಯವರೆಗೆ ಆತ ತಪ್ಪು ದಾರಿ ಹಿಡಿಯುವುದು ಬಿಡುವುದಿಲ್ಲ.ಇಂತಹ ಕಾರ್ಯಕ್ಕೆ ಕೈ ಹಾಕುವವರು ಹೇಡಿ ಅನ್ನುವುದಕ್ಕಿಂತಲೂ ಹಿಂದೆ ಮುಂದೆ ಆಲೋಚಿಸದೆ ತಕ್ಷಣ ನಿರ್ಧಾರ ಕೈಗೊಳ್ಳುವುದು.ಯಾರೇ ಆಗಲಿ ಬದುಕನ್ನು ತುಂಬಾ ಬೇಕಾಬಿಟ್ಟಿಯಾಗಿ ಸ್ವೀಕರಿಸದೆ,ಅದಕ್ಕೊಂದು ಸುಂದರವಾದ ರೂಪವಿದೆ.ಅದನ್ನು ಸರಿಯಾದ ದಿಶೆಯಲ್ಲಿ ಒಯ್ದು ನೆಮ್ಮದಿಯ ಜೀವನ ಸಾಗಿಸಲು ಮುಂದಾಗಿ ಏನೇ ಬಂದರೂ ಎದುರಿಸಿ ಛಲದಿಂದ ಮುನ್ನುಗಿ ಇರುವಷ್ಟು ಕಾಲ ಜೀವಿಸಬೇಕೆ ಹೊರತು ಆತ್ಮಹತ್ಯೆ ಗೆ ಶರಣಾಗಬಾರದು.ಉತ್ತಮ ಸಂದೇಶವುಳ್ಳ ಹಲವು ಉದಾಹರಣೆ ಯೊಂದಿಗೆ ಸಮಯೋಚಿತ ಲೇಖನ ಇದಾಗಿದೆ. ಮೆಡಮ್ ಅಭಿನಂದನೆಗಳು

  3. ಅತ್ಯುತ್ತಮ ಅರ್ಥಪೂರ್ಣ ಲೇಖನ.ಎಷ್ಟೇ ಕಷ್ಟ ಬಂದರೂ ತಾಳ್ಮೆಯಿಂದ ಎದುರಿಸಿ ಮುನ್ನುಗ್ಗುವ ತಮ್ಮ‌ ಲೇಖನದ ಉದ್ದೇಶ ಸಾರ್ವಕಾಲಿಕ ಸತ್ಯ.

  4. ತುಂಬಾ ಚೆನ್ನಾಗಿದೆ ಬರಹ ಅರ್ಥಪೂರ್ಣವಾಗಿದೆ. ಸಾವಿರಾರು ಕಾಯಗಳ ಮೀರಿ ಬಂದ ದೇಹವನ್ನು ಜೋಪಾನವಾಗಿ ನೋಡಿಕೋ ಬೇಕು ನಾವು……… ಆತ್ಮ ಹತ್ಯೆ ಅಂತಹ ವಿಚಾರವನ್ನು ಯೋಚಿಸದೆ ಬದುಕು ಸೋಲು ಗೆಲುವುಗಳ ಕಡೆ ಸಾಗಬೇಕು….. ಚೆನ್ನಾಗಿ ಮೂಡಿಬಂದಿದೆ ಲೇಖನ ಮೇಡಂ………. ಸೂಪರ್

  5. ಅತ್ಯುತ್ತಮ ಮೌಲ್ಯಯುತ ಲೇಖನ.ಪ್ರಸ್ತುತಕ್ಕೆ ಅವಶ್ಯಕತೆ ಇದೆ ಇಂತಹ ಅರಿವಿನ ಬೆಳಕನ್ನು ಕೊಡುವ ಪ್ರಯತ್ನ ಅದ್ಭುತವಾಗಿದೆ.ತಮ್ಮ ಪ್ರತಿ ಲೇಖನವೂ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ರೀ ಮೇಡಂ ಅಭಿನಂದನೆಗಳು.

  6. ಇದು ಅತ್ಯಂತ ಅರ್ಥಪೂರ್ಣ ಹಾಗೂ ಎಚ್ಚರಿಕೆಯ ಲೇಖನ….ವಿವರಗಳು‌ ಸೂಕ್ತ ರೀತಿಯಲ್ಲಿ ಅರ್ಥೈಸಲು ಸಾಧ್ಯವಾಗಿದೆ.

  7. ಅದ್ಭುತವಾಗಿ ಮೂಡಿಬಂದಿದೆ ಸಿಸ್ಟರ್..
    ಓದಿಸಿಕೊಂಡು ಹೋಗುತ್ತದೆ,.

Leave a Reply

Back To Top