ಬಾಗು ಬೆನ್ನು

ಕಾವ್ಯ ಸಂಗಾತಿ

ಬಾಗು ಬೆನ್ನು

ವಾಣಿ ಭಂಡಾರಿ

ಬಳ್ಳಿ ಮರವನ್ನಾಶ್ರಯಿಸಿ
ಬದುಕಿ ಹಬ್ಬಲೇ ಬೇಕು
ಪ್ರಕೃತಿ ಸಹಜವೇ
ಮಾನವ ಸಹಜ??
ಅರಿಷಡ್ವರ್ಗದ ಕಥೆ ಮಿತಿಯೇ ಬೇರೆ
ದುರ್ಬುದ್ದಿ ದುರಾಲೋಚನೆ
ಹೆತ್ತವರ ಒಡಲಿಗೆ ಬರಿ ಪಿಕಾಸಿ
ಗುದ್ದಲಿಯೊಳಿಂದ ಮೀಟುತಲೇ
ಹಣ್ಗಾಯಿ ನೀರ್ಗಾಯಿ
ಒಡಲು ಮಿಡಿತ ಮನದ ತುಡಿತ
ದುಡಿತ ಕಾಲದೊಳಗೆ ಮರ್ಮಘಾತ.

ಆತುಗೊಳುವ ಮನದ ಛಾಯೆಗೆ
ನಿತ್ಯ ಕರಿ‌ನೆರಳ ಸೊಂಕು
ಬಾಗು ಬೆನ್ನಿಗೆಷ್ಟೊ ಪ್ರಾಯ
ಬಾರಿ ಬಾರಿ ಕಳೆದು ಕೂಡಿ
ಬಾಗಿಸಿ ಗುಣಕಾರದೊಳಗೆ
ಬಾಳ ಪಗಡೆಯಾಟ
ಮುಗಿಯಲು‌ ಓಡಬೇಕೆ?

ಬಾಳನರಿತ ಕಾಯವೊಂದು
ಅರಿಯದೆ ಒದಗುವ ಕಾಲಕರೆಗೆ
ರಥದ ಚಕ್ರ ಉರುಳಿ ಹೋದ ಮೇಲೆ
ಕಾಲಧರ್ಮ ಸಹಜವೇ
ಮುಪ್ಪು ಅಡರಿ ಬಾಗಿ
ಬೆದರಿ ಬಸವಳಿದ ಮೇಲೆ
ಮಣ್ಣು ತಾನೆ ಮಿತ್ರ.

ಎಲ್ಲ ಇದ್ದು ಪಯಣ ಒಂಟಿ
ಗಟ್ಟಿ ದೇಹ ಕಾಂಚಾಣ ಇರುವಷ್ಟು
ಸುತ್ತಲು ನೆಂಟರು ಮಕ್ಕಳು
ಸೋತ ಮೇಲೆ ನಾನು ನೀನು
ಮೂಡಣ ಪಡುವಣ
ನಡುವಣ ಬಂಧವೆಲ್ಲ ಸಾಪಸಪಾಟು.
ಮುತ್ತು ತುತ್ತು ಎಲ್ಲ
ಬೇಲಿಯಾಚಿನ ಪ್ರೀತಿ ಗಂಟು
ಹಿರಿಯ ಕಣ್ಣು ಮಂಜು
ನೋವ ತೀರ ದಾಟಲಾಗದೆ
ಮಣ್ಣುಪಾಲು ತಾನೆ ಬಾಳು?


Leave a Reply

Back To Top