ಅಂಬೇಡ್ಕರ್ ಓದು(ಭಾಗ-12)

ಮಾನವ ಹಕ್ಕುಗಳ ಸ್ಥಾಪನೆ


       1927 ರ ಜನವರಿ 1 ರಂದು ಡಾ. ಬಾಬಾ ಸಾಹೇಬ ಅಂಬೇಡ್ಕರರು ಕೊರೆಗಾಂವ ಯುದ್ದ ಸ್ಮಾರಕಕ್ಕೆ ಬೇಟಿಕೊಟ್ಟು ಅಲ್ಲಿ ನೆರೆದಿದ್ದ ಸಾವಿರಾರು ಜನರನ್ನುದೇಶಿಸಿ ಮಾತನಾಡುವರು. ಮಹಾರ ನಗರದ  ವೀರಯೋಧರು, ಶೌರ್ಯದಿಂದ ತಮ್ಮ ಜೀವದ ಹಂಗುತೊರೆದು ಪೇಶ್ವೆಗಳ ವಿರುದ್ದ ಹೋರಾಟ ಮಾಡಿ ಜಯಶಾಲಿಗಳಾದ ದೀರರ ಸಾಹಸಗಾತೆಯನ್ನು ವಿವರಿಸುವರು. ಸೆನೆಯಲ್ಲಿ ಸೇರಲು ಅಸ್ಪೃಶ್ಯರು ಅರ್ಹರಲ್ಲವೆಂದು ನಿರ್ಧರಿಸಿ ಅಸ್ಪೃಶ್ಯರು ಸೈನಿಕರಾಗಲು ಬ್ರಿಟಿಷರು ನಿರ್ಬಂದಿಸಿದ್ದನ್ನು ಖಂಡಿಸುತ್ತಾರೆ. ಕೋರೆಗಾಂವ ಕದನದಲ್ಲಿ ಬ್ರಿಟೀಷರ ಪರನಿಂತೂ ಮಹಾರ ಸೈನಿಕರು  ಹೋರಾಡಿ ಗೆದ್ದಿರುವುದನ್ನು ನೆನಪಿಸಿಕೊಡುತ್ತಾರೆ. ಬ್ರಿಟೀಷರ ಪರವಾಗಿ ಹೋರಾಡಿದ್ದು ಹೆಮ್ಮೆಯ ವಿಷಯವೇನಲ್ಲ ಆದರೆ ಅಸ್ಪೃಶ್ಯ ಜನರು ಶೂರರು, ವೀರರು ಸೈನಿಕ ಸೇವೆಯಲ್ಲಿ ಸೇರಲು ಯೋಗ್ಯರಿದ್ದು ಅಸ್ಪೃಶ್ಯರು ಸೇನೆಯನ್ನು ಸೇರಲು ನಿರ್ಬಂದಿಸಿದ ನಿರ್ದಾರವನ್ನು ಬದಲಿಸುವಂತೆ ಕರೆಕೊಡುತ್ತಾರೆ. ಕೋರೆಗಾಂವ ಯುದ್ಧ ಮಹಾರ ಜನರ ಹೆಮ್ಮೆಯ ಪ್ರತಿಕವಾಗಿದೆ.

        ಅಂಬೇಡ್ಕರರು ಅದೆ ವರ್ಷ ಪೇಬ್ರುವರಿ ತಿಂಗಳಲ್ಲಿ ಮುಂಬಯಿ ವಿಧಾನ ಪರಿಷತ್ತಿಗೆ ನಾಮಕರಣ ಗೊಂಡಿದ್ದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. ಭಾರತದ ಸಮಾಜ ಅಸಮಾನತೆಯಿಂದ ಕೂಡಿದ ಸಮಾಜ. ಅದು ಮೇಲು ಕೀಳು, ಉಚ್ಚ ನೀಚ ಜಾತಿಗಳ ಅಮಾನುಷ್ಯ ಸಮಾಜಿಕ ವ್ಯವಸ್ಥೆಯಲ್ಲಿ ಆತ್ಮ ಗೌರವ ಎಂಬ ಸ್ವಾಭಿಮಾನದ ಸೂರ್ಯ  ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಮೂಲಕ ಪ್ರಕಾಶಿಸ ತೊಡಗಿದ್ದ ಅನ್ಯಾಯ ದಬ್ಬಾಳಿಕೆಯ ಮೋಡಗಳು ಮಾಯವಾಗಿ ಸಮಾನತೆಯ ಸ್ವಾಭಿಮಾನದ ಬರವಸೆಯ ಮೋಡಗಳು ಉದಯಿಸತೋಡಗಿದ್ದವು, ಮುಂಬಯಿ ಪ್ರಾಂತ ಸರಕಾರ 1923 ರಲ್ಲಿಯೆ ಸಾರ್ವಜನಿಕ ಕೆರೆ ಬಾವಿಗಳು, ಕೋರ್ಟ ಕಛೇರಿಗಳು, ಶಾಲೆ ದೇವಸ್ಥಾನಗಳು, ಹಾಗೂ ಸಾರ್ವಜನಿಕ ಸ್ಥಳಗಳು ಅಸ್ಪೃಶ್ಯರಿಗೆ ಮುಕ್ತವಿರಬೇಕು. ಯಾರು ಅಡ್ಡಿ ಪಡಿಸಕೂಡದೆಂದು ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಆ ನಿರ್ಣಯವು ಎಸ್.ಕೆ.ಬೋಲೆ ಅವರ ನೆತೃತ್ವದಲ್ಲಿ ಮಂಡನೆ ಯಾಗಿದ್ದರಿಂದ ಅದು ಬೋಲೆ ನಿರ್ಣಯವೆಂದು ಕರೆಯಾಲಾಗಿತ್ತು.ಬೋಲೆ ನಿರ್ಣಯವು 1926 ರಲ್ಲಿ ಜಾರಿಗೆ  ಬರುತ್ತದೆ . ಅಂಬೇಡ್ಕರರು ಪರಿಷತ್ ಸದಸ್ಯರಾಗಿದ್ದರಿಂದ ಇನ್ನಷ್ಟು ಹೆಚ್ಚಿನ ಬಲಬಂದತ್ತಾಗಿತ್ತು. ಕೋಲಾಬಾ ಜಿಲ್ಲೆಯ ನಿಮ್ನಜನರ ಮುಖಂಡರು 1927ರ ಮಾರ್ಚ 19 ಮತ್ತು 20 ರಂದು ಮಹಾ ನಗರದಲ್ಲಿ ಶೋಷಿತ ವರ್ಗದ ಮಹಾಸಮಾವೇಶವನ್ನು ಆಯೋಜಿಸುವರು. ಡಾ.ಅಂಬೇಡ್ಕರರನ್ನು ಮಹಾಸಮಾವೇಶದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಸುರೇಂದ್ರನಾಥ ಟಿಪ್ನಿಸ್, ಸುಭೇದಾರ ಸಾವಡ್ಕರ್ ಹಾಗೂ ಅನಂತರಾವ ಚಿತ್ರೆ ಮುಂತಾದ ಮುಖಂಡರುಗಳು ಸಮಾವೇಶದ ಮುಂದಾಳತ್ವ ವಹಿಸಿಕೊಳ್ಳುತ್ತಾರೆ. ಪ್ರತಿ  ಹಳ್ಳಿ ಹಳ್ಳಿಗಳಿಗೆ ಬೇಟಿಕೊಟ್ಟು ಸಮಾವೇಶದ ಮಹತ್ವ ಹೇಳಿಕೊಟ್ಟು ಬಾಗವಹಿಸಲು ತಿಳಿಸಿದ್ದರಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಬಾಲಕರಿಂದ ಹಿಡಿದು ವಯೋವೃದ್ದ ವಯೋಮಾನದ ಪುರುಷರು ಸ್ತ್ರೀಯರು ಅಪಾರ ಸಂಖ್ಯೆಯಲ್ಲಿ ಜನರು ಸಮಾವೇಶಕ್ಕೆ 19 ನೇ ತಾರಿಖಿನ ದಿನದಂದು ಬಂದು ಸೇರುತ್ತಾರೆ. 

        ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ  ಡಾ. ಅಂಬೇಡ್ಕರರು ಭಾಷಣ ಮಾಡಲು ಎದ್ದು ನಿಲ್ಲುತ್ತಾರೆ. ಒಂದು ಸಾರಿ ಎಲ್ಲರತ್ತ ಕಣ್ಣು ಹಾಯಿಸಿ ನೋಡಿದಾಗ ನೆರೆದ ಜನರು ಹರಕು ಬಟ್ಟೆಯಲ್ಲಿ ಅರೆಬೆತ್ತಲೆಯಲ್ಲಿ ಬಡತನದ ಬೇಗುದಿಯಲ್ಲಿ ನೊಂದುಬೆಂದ ಜೀವಗಳು ಅಲ್ಲಿ ಸೇರಿದ್ದು ಕಂಡುಬರುವುದು.  ನೊಂದ ಅಸ್ಪೃಶ್ಯರನ್ನುದ್ದೇಶಿಸಿ ಅಂಬೇಡ್ಕರರು ಬಾಷಣ ಆರಂಭಿಸುತ್ತಾರೆ. ದಾಪೋಲಿಯಲ್ಲಿ ತಾವು ಅನುಭವಿಸಿದ ಅಸ್ಪೃಶ್ಯತೆಯ ನೋವುಗಳನ್ನು ಶಾಲಾ ದಿನಗಳಲ್ಲಿನ ಯಾತನೆಗಳನ್ನು ನೆನಪುಮಾಡಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ನಮ್ಮನ್ನು ಅಸ್ಪೃಶ್ಯರೆಂದು ಜನರು ಹಿಯಾಳಿಸುತ್ತಿದ್ದರು. ಆದರೆ ಇಂದು ನಾವು ವಿದ್ಯಾಭ್ಯಾಸದಲ್ಲಿ ಮುಂದಿದ್ದೆವೆ. ಮುಂದೊಂದುದಿನ ದೇಶ ನಮ್ಮ ಆಡಳಿತದಲ್ಲಿ ಮುನ್ನಡೆಯುದೆಂಬ ವಿಶ್ವಾಸವನ್ನು ವ್ಯಕ್ತಪಡಿಸುವರು ನೆರೆದ ತನ್ನ ಜನರಿಗೆ ಇನ್ನು ಮುಂದೆ ಮೂರು ಕಾರ್ಯಗಳನ್ನು ಮಾಡಬೇಕೆಂದು ಪ್ರತಿಜ್ಞೆ ಮಾಡಲು ಕರೆಕೊಡುವರು. ಮೊದಲನೆಯದಾಗಿ ನಾವು ಸೂಚಿಯಾಗಿರಬೇಕು ಮೈಮೇಲಿನ ಬಟ್ಟೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಶುಚಿಯಾಗಿ ಇದ್ದರೆ ಎದುರಿಗಿರುವವರು ಗೌರವ ಕೊಟ್ಟು ಮಾತನಾಡುವರು. ಕೀಳರಿಮೆಯಿಂದ ಮಾತನಾಡದೆ ದೈರ್ಯದಿಂದ ಗಟ್ಟಿಯಾಗಿ ಅಂಜದೆ ಅಳುಕದೆ ಸ್ಪಷ್ಟವಾಗಿ ಮಾತನಾಡಬೇಕು ಎಂದು ಮೊದಲನೆ ಶಪತ ಮಾಡಿಸುತ್ತಾರೆ. ಎರಡನೇಯ ಶಪತ ಏನೆಂದರೆ ಸವರ್ಣಿಯರ ಮನೆಯಲ್ಲಿ ಸತ್ತ ಧನ ಕರಗಳನ್ನು ಹೊತ್ತೋಯ್ದು ಮುಚ್ಚಬಾರದು ಅವರವರ ಮನೆಯಲ್ಲಿ ಸತ್ತ ದನಕರುಗಳನ್ನು ಅವರೆ ಹೊತ್ತೊಯ್ದು ಮುಚ್ಚಿಕೊಳ್ಳುವಂತೆ ಅವರಿಗೆ ಹೇಳಬೇಕು ಅವರು ಕೊಡುವ ಹಳಸಿದ ಅನ್ನಕ್ಕೆ ಹರಿದ ಬಟ್ಟೆಗೆ  ಕೈಚಾಚಬಾರದು. ಎಂಜಲು ಪದಾರ್ಥಗಳನ್ನು ಇಸಿದುಕೊಳ್ಳಬಾರದು ಕಷ್ಟಪಟ್ಟು ದುಡಿದು ಸ್ವಾಭಿಮಾನದಿಂದ ಗೌರವಯುತ ಬದುಕು ಸಾಗಿಸುವಂತೆ ಶಪಥ ಮಾಡಿಸುತ್ತಾರೆ. ಮೂರನೆಯದಾಗಿ ಎಷ್ಟೆ ಕಷ್ಟಗಳಿದ್ದರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಅವರಿಗೆ ಶಿಕ್ಷಣ ಕೊಡಿಸಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸದ ಪಾಲಕರು ಪಶುವಿಗೆ ಸಮಾನರು ಮಕ್ಕಳನ್ನು ಜೀತಕ್ಕೆ ಅಟ್ಟದೆ ಸ್ವಾವಲಂಬಿಗಳಾಗಲು ಶಿಕ್ಷಣ ಕೊಡಿಸಲು ಕಟಿಬದ್ಧರಾಗಬೇಕೆಂದು ಶಪಥ ಮಾಡಿಸುವರು.

      ಸಂಜೆಗೆ ಮತ್ತೆ ಸಭೆ ಸೇರಿ ಹಿಂದೂಗಳು ಅಸ್ಪೃಶ್ಯರಿಗೆ ಮಾನವ ಹಕ್ಕುಗಳನ್ನು ಮರಳಿ ಪಡೆಯಲು ಸಹಾಯ ಮಾಡಬೇಕು ಮೇಲಿಗೆ ಅಪವಿತ್ರ ಎನ್ನದೆ ಅಸ್ಪೃಶ್ಯರನ್ನು ಹಿಂದೂಗಳ ಕೆಲಸ ಕಾರ್ಯಗಳಲ್ಲಿ ನೇಮಕ ಮಾಡಿಕೋಳ್ಳಬೇಕು. ಮಕ್ಕಳಿಗೆ ವಿದ್ಯಾರ್ಥಿನಿಲಯಗಳಲ್ಲಿ ಉಟ ವಸತಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಅಲ್ಲದೆ ಹಿಂದೂಗಳು ತಮ್ಮ ಮನೆಯಲ್ಲಿ  ದನಕರುಗಳು ಸತ್ತರೆ ತಾವೆ ಹೂಳಿಕೊಳ್ಳಬೇಕು, ಅಲ್ಲದೆ ಬೇರೆ ಅವರ ತ್ಯಜಿಸಿ ಆಹಾರ ಪದಾರ್ಥಗಳನ್ನು ಅಸ್ಪೃಶ್ಯರು ಸೇವಿಸುವುದನ್ನು ಕಾನೂನು ಮೂಲಕ ನಿಷೇಧಿಸಬೇಕು. ಪಾನನಿಷೇದ ಕಾನೂನು ಜಾರಿಗೆ ತರಬೇಕು ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣ ಅನುಷ್ಠಾನಗೊಳಿಸಬೇಕು. ಹೀಗೆ ಹಲವಾರು ನಿರ್ಣಯಗಳನ್ನು ಅಂಗೀಕರಿಸಲಾಗುತ್ತದೆ. ಅಲ್ಲದೆ ಮರುದಿನ ಮಂಜಾನೆ ಸರಕಾರ ಸ್ವಾಮ್ಯದ ಚವಡಾರ ಕೆರೆಯಿಂದ ನೀರು ಉಪಯೋಗಿಸುವ ನಿರ್ಣಯವು ಒಳಗೊಂಡಿರುತ್ತದೆ. ಈ ಎಲ್ಲಾ ಶರತ್ತುಗಳಿಗೆ ಅಂತರಜಾತಿಯ ವಿವಾಹಒಂದನ್ನು ಹೊರತು ಪಡಿಸಿ ಸವರ್ಣಿಯ ಹಿಂದೂ ಮುಖಂಡರು ಸಹಮತಿಸಿ ಒಪ್ಪಂದ ಪತ್ರಕ್ಕೆ ರುಜು ಹಾಕುವರು.

        1927   ರ ಮಾರ್ಚ 20 ರಂದು ಪನಃ ಸಭೆಸೇರಿ ಚಾವಡ್  ಕೆರೆಯ ನೀರನ್ನು ಮುಟ್ಟಿ ಕುಡಿಯುದಾಗಿ ಅಸ್ಪೃಶ್ಯರು ತಮ್ಮ ಹಕ್ಕು ಸ್ಥಾಪಿಸಲು ನಿರ್ಧರಿಸಿ ಎಲ್ಲರು ಶಾಂತಯುತವಾಗಿ ಸಮ್ಮೇಳನ ಸ್ಥಳದಿಂದ ಚವಡಾರ ಕೆರೆಯತ್ತ ಹೊರಡುವರು. ಸಾಲುಸಾಲಗಿ ಊರಿನ ಪ್ರಮುಖ ಬೀದಿಗಳ ಮೂಲಕ ಚವಡಾರ ಕೆರೆಯತ್ತ ಮೆರವಣಿಗೆ ಸಾಗುತ್ತದೆ, ಡಾ. ಬಾಬಾ ಸಾಹೇಬ ಅಂಬೇಡ್ಕರರು ಮೇರವಣಿಗೆಯ ಮುಂಬಾಗದಲ್ಲಿ ಮಹಾದಂಡನಾಯಕನಂತೆ ಮುನ್ನಡೆಯುತ್ತಿದ್ದರು. ಅಸ್ಪೃಶ್ಯರು ಮಾಂಸಹಾರಿಗಳು ಕೆರೆಯ ನೀರನ್ನು ಮುಟ್ಟಿದರೆ ಮೈಲಿಗೆಯಾಗುತ್ತದೆ ಎಂಬುವುದಾಗಿದ್ದರೆ ಮಾಂಸಹಾರಿಗಳಾದ ಕ್ರಶ್ಚಿಯನ್ ಬಾಂಧವರು, ಮುಸ್ಲಿಂ ಬಾಂಧವರು  ಕೆರೆಯ ನೀರನ್ನು ಮುಟ್ಟಿ ಬಳಸಿಕೊಳ್ಳುತ್ತಿದ್ದಾರೆ, ಆದರೆ ಅಸ್ಪೃಶ್ಯರು ಅದೆ ಹಿಂದೂ ದೇವರುಗಳನ್ನು, ಹಿಂದೂ ಸಂಪ್ರದಾಯವನ್ನು ಪೂಜಿಸುತ್ತಾ ಆಚರಿಸುತ್ತಾ ಬಂದಿದ್ದರೂ ಯುಗಯುಗಗಳಿಂದ ಹಿಂದೂ ಧರ್ಮದ ಒಂದು ಭಾಗವಾಗಿ ಸಮಾಜದಲ್ಲಿ ಬದುಕುತ್ತಾ ಅವರ ಸೇವೆ ಮಾಡುತ್ತಾಇರುವ ದಲಿತರಿಗೆ ಗಂಟಲು ಬಾಯಾರಿ ಒಣಗಿ ಪ್ರಾಣ ಹೋಗುತ್ತಿದ್ದರೂ ಕೆರೆಯ ನೀರನ್ನು ಮುಟ್ಟಿ ಕುಡಿಯುವಂತಿರಲಿಲ್ಲ ಮಹಾನಾಯಕ ಬಾಬಾ ಸಾಹೇಬರ ಮುಂದಾಳತ್ವದಲ್ಲಿ ಮಾನವಹಕ್ಕುಗಳ ಸ್ಥಾಪನೆಗಾಗಿ ಹೋರಾಟ ಆರಂಭಗೊಂಡಿತ್ತು.

        ಶಾಂತಿಯುತವಾಗಿ ಮಹಾಡನ ಮುಖ್ಯ ರಸ್ತೆಗಳಲ್ಲಿ ಸಾಗಿ ಚವಡಾರ ಕೆರೆಯ ನೀರಿನ ಹತ್ತಿರ ಅಸ್ಪೃಶ್ಯರೆಲ್ಲರೂ ಬಂದು ನಿಲ್ಲುವರು. ದೇಶದಲ್ಲಿಯೇ ಅತೀ ಹೆಚ್ಚು ಪದವಿಗಳನ್ನು ಪಡೆದ ಮಹಾನ ಜ್ಞಾನಿ, ಶ್ರೇಷ್ಟ ಬುದ್ದಿವಂತ, ಆರ್ಥಿಕ ತಜ್ಞ, ಮಹಾ ಮಾನವತಾವಾದಿಯಾಗಿದ್ದ ಡಾ. ಬಾಬಾ ಸಾಹೇಬ ಅಂಬೇಡ್ಕರರು ಚವಡಾರ ಕೆರೆಯ ದಂಡೆಗೆ ಬಂದು ನಿಂತಿದ್ದರು. ಅಷ್ಟೆಲ್ಲ  ಓದಿಬುದ್ದಿವಂತ  ಮಹಾಜ್ಞಾನಿಗೆ ನೀರು ಮುಟ್ಟುವ ಹಕ್ಕು ಇರಲಿಲ್ಲ ಹಿಂದೂ ಆಗಿದ್ದರೂ ನೀರು ಮುಟ್ಟುವಂತಿರಲಿಲ್ಲ, ಪ್ರಾಣಿ ಪಕ್ಷಿಗಳಿಗೆ, ಗಿಡಮರಗಳಿಗೆ ನದಿಬೆಟ್ಟಗಳಿಗೆ ಕಲ್ಲು ಬಂಡೆಗಳಿಗೆ ಪೂಜಿಸಿ ಗೌರವದಿಂದ ಕಾಣುವ ಹಿಂದೂ ಧರ್ಮ ತನ್ನದೆ ಧರ್ಮ ಅನುಸರಿಸುತ್ತಿರುವ ಅಸ್ಪೃಶ್ಯರನ್ನು ನಾಯಿ, ಬೇಕ್ಕುಗಳಿಗಿಂತ ಕೀಳಾಗಿ ಕಾಣುತ್ತಿತ್ತು, ನಾವು ಮನುಷ್ಯರಿದ್ದೆವೆ. ಎಲ್ಲ ಪ್ರಾಣಿಗಳಲ್ಲಿ ಮನುಷ್ಯ ಶ್ರೇಷ್ಠ, ಮನುಷ್ಯರು ಮುಟ್ಟಿದರೆ ಮೈಲಿಗೆಯಾಗುವುದಿಲ್ಲ. ಎಂಬುದನ್ನು ಇದು ಸಾಬಿತುಪಡಿಸುವುದಾಗಿದೆ. ಇದು ಹಿಂದೂಗಳ ವಿರುದ್ದವಾಗಿರದೆ ಜಾತಿಯ ವಿರುದ್ದ ಚಳುವಳಿಯಾಗಿದೆ ಎನ್ನುತ್ತಾ ಡಾ. ಬಾಬಾ ಸಾಹೇಬ ಅಂಬೇಡ್ಕರರು ಬಾಗುತ್ತಾ ತಮ್ಮ ಬೊಗಸೆಯಿಂದ ಕೆರೆಯ ನೀರನ್ನು ತೆಗೆದುಕೊಂಡು ಕುಡಿಯುತ್ತಾರೆ. ನಂತರ ಅಲ್ಲಿ ನೆರೆದಿದ್ದ ಸಾವಿರಾರು ಜನರು ನೀರು ಮುಟ್ಟಿ ಬೊಗಸೆ ಕೈಯಿಂದ ತೆಗೆದುಕೊಂಡು ನೀರು ಕೂಡಿಯುತ್ತಾರೆ.  ಗುಲಾಮಗಿರಿಯನ್ನು ದಿಕ್ಕರಿಸಿ ದಲಿತರು ನೀರಿನ ಹಕ್ಕು ಸ್ಥಾಪಿಸಿದ ದಿನವಾಗಿತ್ತು.

      ಚವಡಾರ ಕೆರೆಯ ನೀರು ಕುಡಿಯುವುದರೊಂದಿಗೆ ತಮ್ಮ ನೀರಿಗಾಗಿ ಹಮ್ಮಿಕೊಂಡಿದ್ದ ಚಳುವಳಿ ಮುಕ್ತಾಯಗೊಂಡಿತ್ತೆಂದು ಎಲ್ಲ ಜನರು ಶಾಂತಯುತವಾಗಿ ಸಮಾವೇಶ ನಡೆದ ಸ್ಥಳಕ್ಕೆ ಮರಳಿ ಬರಲು ಆರಂಭಿಸುತ್ತಾರೆ ಸಮಾವೇಶದಲ್ಲಿ ಭಾಗಿಯಾದ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೆಲವರು ಊಟಕ್ಕೆ ಕೂಳಿತುಕೊಂಡಿದ್ದರೆ ಇನ್ನು ಕೆಲವರು ಊಟ ಮುಗಿಸಿ  ತಮ್ಮ ಗಂಟುಮುಟೆ ಕಟ್ಟಿಕೊಂಡು ಹೇಗಲಿಗೇರಿಸಿ ತಮ್ಮೂರುಗಳಿಗೆ ಮರಳುವ ಸಿದ್ದತೆಯಲ್ಲಿರುತ್ತಾರೆ ಊರಿನ ಮೇಲ್ಜಾತಿಯ ಕೆಲವು ಕಿಡಿಗೇಡಿಗಳು ಗ್ರಾಮದ ವಿರೇಶ್ವರ ದೇವಾಲಯವನ್ನು ಅಸ್ಪೃಶ್ಯರು ಪ್ರವೇಶ ಮಾಡಲು ಹೊರಟಿದ್ದಾರೆಂದು ಸುಳ್ಳು ವದಂತಿ ಹಬ್ಬಿಸಿಬಿಡುತ್ತಾರೆ. ಇದನ್ನು ಕೇಳಿದ ಸಂಪ್ರದಾಯವಾದಿ ಹಿಂದೂಗಳೆಲ್ಲರು ಗುಂಪುಗೂಡಿ ಅಸ್ಪೃಶ್ಯರು ವಿರೇಶ್ವರ ಮಂದಿರವನ್ನು ಪ್ರವೇಶ ಮಾಡಿ ಅಪವಿತ್ರಗೊಳಿಸುತ್ತಾರೆಂದು, ಮಲಿನ ಮಾಡುತ್ತಾರೆಂದು ತಮ್ಮ ದೇವರು ಅಪಾಯದಲ್ಲಿದೆ ಎಂದು ಮಾತನಾಡುತ್ತಾ ಕೈಯಲ್ಲಿ ಉದ್ದುದ್ದ ಕೋಲು, ಬಡಿಗೆಗಳನ್ನು ಹಿಡಿದು ಸಮಾವೇಶದ ಸ್ಥಳದತ್ತ ಮುನ್ನುಗ್ಗುತ್ತಾ ಎದುರು ಬಂದವರನ್ನು ತಳಿಸುತ್ತಾ, ಬಡಿಯುತ್ತಾ ಮಹಿಳೆ, ಮಕ್ಕಳು, ವೃದ್ದರೆನ್ನದೆ ಮನಸ್ಸಿಗೆ ಬಂದಂತೆ ಹೊಡೆಯಲು ಆರಂಬಿಸುತ್ತಾರೆ. ಉಟಕ್ಕೆ ಕುಳಿತ ಜನ ಭಯಬೀತಗೊಂಡು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಾರೆ. ಊಟಕ್ಕೆ ಮಾಡಿದ ಅಡುಗೆ ನೆಲದಮೇಲೆ ಚಲ್ಲಾಡಿಹೋಗುತ್ತದೆ. ಕ್ಷಣಾರ್ದದಲ್ಲಿ ಶಾಂತವಾಗಿದ್ದ ವಾತವಾರಣ  ರಣರಂಗವಾಗಿ ಬಿಡುತ್ತದೆ. ಓಡಿಹೋಗುತ್ತಿದ್ದ ಅಸ್ಪೃಶ್ಯರನ್ನು ಹಿಡಿದು ಮನಸ್ಸಿಗೆ ಬಂದಂತೆ ಥಳಿಸುತ್ತಾರೆ. ಇದರಿಂದ ಬಹಳಷ್ಟು ಅಸ್ಪೃಶ್ಯರಿಗೆ ಗಂಬೀರ ಗಾಯಗಳಾಗುತ್ತವೆ. ಕೆಲವರು ತೆಲೆಗೆ ಪೆಟ್ಟು ಬಿದ್ದು ರಕ್ತ ಸುರಿಯಲು ಆರಂಭಿಸುತ್ತದೆ. ಹಿಂದೂಗಳು ತಮ್ಮ  ಆತ್ಮಸಾಕ್ಷಿಯನ್ನು ಕಳೆದುಕೊಂಡು ಕ್ರೂರ ಮೃಗಗಳಂತೆ ವರ್ತಿಸುತ್ತಾರೆ.

      ಅತಿಥಿ ಗೃಹದಲ್ಲಿ  ತಂಗಿದ್ದ ಅಂಬೆಡ್ಕರರಿಗೆ ಸುದ್ದಿ ತಿಳಿಯುತ್ತಿದ್ದಂತೆ ಧಾವಿಸಿ ಹೊರಬರುತ್ತಾರೆ, ಎದುರಿಗೆ ತಹಸಿಲ್ದಾರ ಮತ್ತು ಪೋಲಿಸ ಅಧಿಕಾರಿಗಳು ಅಂಬೇಡ್ಕರವರನ್ನು ಬೇಟಿ ಮಾಡಿ ತಕರಾರು ಹೇಳುತ್ತಾರೆ. ಆಗ ಅಂಬೇಡ್ಕರರು ನೀವು ನಿಮ್ಮ ಜನರನ್ನು ನಿಯಂತ್ರನಕ್ಕೆ ತನ್ನಿ ನಾನು ನನ್ನ ಜನರನ್ನು ನಿಯಂತ್ರಿಸುತ್ತೆನೆಂದು ಅಧಿಕಾರಿಗಳಿಗೆ ಹೇಳಿ ತಮ್ಮ ಸಂಘಡಿಗರೋಂದಿಗೆ ಮುಂದೆ ಸಾಗುತ್ತಾ ಘಟನಾ ಸ್ಥಳಕ್ಕೆ ಬರುತ್ತಾರೆ. ರೌಡಿಗಳಂತೆ  ದೌರ್ಜನ್ಯ ಎಸುಗುತ್ತಿದ್ದ  ಸವರ್ಣಿಯರ ಗುಂಪಿಗೆ ತಡೆದು ನಿಲ್ಲಿಸಿ ವಿರೇಶ್ವರ ಮಂದಿರ ಪ್ರವೇಶ ನಮ್ಮ ಕಾರ್ಯಕ್ರಮದಲ್ಲಿ ಇಲ್ಲ, ದೇವಸ್ಥಾನವನ್ನು ಅಕ್ರಮ ಪ್ರವೇಶ ಮಾಡುವುದಿಲ್ಲ ಸುಳ್ಳು ಸುದ್ದಿಗೆ ಗಾಳಿಮಾತಿಗೆ ಕಿವಿಕೊಡಬೇಡಿ ಎಂದು ಶಾಂತವಾಗಿ ಸ್ಪಷ್ಟಪಡಿಸುತ್ತಾರೆ. ನಾವು ನಿಮ್ಮ ಶತ್ರುಗಳಲ್ಲ ನಾವು ಪರಕೀಯರಲ್ಲ ನಾವು ಈ ದೇಶದ  ಮೂಲ ನಿವಾಸಿಗಳು, ಪರಕೀಯರನ್ನು ಅನ್ಯಧರ್ಮದವರನ್ನು ಸಹೋದರ-ಸಹೋದರಿಯರೆಂದು ಅಪ್ಪಿಕೊಳ್ಳುವ ನೀವು ನಮ್ಮನ್ನು ಸಹೋದರ-ಸಹೋದರಿಯಂತೆ ಕಾಣಿರಿ ಎಂದು ಮನವಿ ಮಾಡುತ್ತಾರೆ. ಪರಿಸ್ಥಿತಿ ಶಾಂತಗೊಳ್ಳುತ್ತದೆ. ಅಲ್ಲಿ ನೆರೆದಿದ್ದ ಹತ್ತು ಸಾವಿರದಷ್ಟು ಅಸ್ಪೃಶ್ಯರು ಅಂಬೇಡ್ಕರರಿಗೆ ನೀವು ಅನುಮತಿ ಕೊಡಿ , ಈ ಊರಿನ ಎರಡು ಪಟ್ಟು ಜನ ನಾವಿದ್ದೆವೆ ಎಲ್ಲರನ್ನು ಜಜ್ಜಿ ಹೊಸಕಿ ಹಾಕುತ್ತೆವೆ ಎಂದು ಒತ್ತಾಯಿಸಿತ್ತಾರೆ. ಭಾವಾವೇಶಗೊಂಡಿದ್ದ ಜನರಿಗೆ ಅಂಬೇಡ್ಕರರು ಸಮಾದಾನ ಪಡೆಸುತ್ತಾ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು, ಕಾನೂನು ಮೂಲಕ ಹೋರಾಡೋನವೆಂದು ಸಮಾದಾನ ಪಡೆಸುತ್ತಾ ಆಗ ಬಹುದಾದ ದುರಂತವನ್ನು ತಪ್ಪಿಸುತ್ತಾರೆ. ಅನಂತರಾವ ಚಿತ್ರೆಯವರೊಂದಿಗೆ ಪೋಲಿಸ ಠಾಣೆಗೆ ಬೇಟಿ ಕೊಟ್ಟು ದೂರು ದಾಖಲಿಸಿ ಮರುದಿನ ಮುಂಬಯಿಗೆ ಹಿಂದಿರುಗುತ್ತಾರೆ.

ನೀರಿನ ಸತ್ಯಾಗ್ರಹದ ನಂತರ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಹೋರಟದ ಜೀವನದಲ್ಲಿ ಸಾಮಾಜಿಕವಾಗಿ ಮತ್ತು ರಾಷ್ಟ್ರೀಯಾವಾಗಿ ಮಹತ್ತರ ಬದಲಾವಣೆಗಳಾಗುತ್ತವೆ. ನಿಮ್ನ ವರ್ಗದ ಜನರಲ್ಲಿ ಮಹಾನಾಯಕನ ಮಾತುಗಳಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಬಾಂಬೆ ಕ್ರಾನಿಕಲ್ ಪತ್ರಿಕೆಯು, ಮಹಾಡ್ ಚಳುವಳಿ ನಡೆದದ್ದು ಐತಿಹಾಸಿಕ ಘಟನೆಯೆಂದು ಭಾರತದ ಇತಿಹಾಸದಲ್ಲಿ ಒಂದು ಮೈಲುಗಲ್ಲಾಯಿತು. ಈ ಚಳುವಳಿಯಿಂದ ಮೇಲ್ವರ್ಗದ ಜನರು ಶೋಷಿತ ವರ್ಗದ ಜನರಿಗೆ ಕನಿಷ್ಠ ಹಕ್ಕುಗಳನ್ನು ಕೂಡ ನೀಡಲು ಸಿದ್ದರಿರಲಿಲ್ಲ ಮತ್ತು ಅವರನ್ನು ನೀರು ತೆಗೆದುಕೋಳ್ಳುವಂತೆ ತಡೆದಿದ್ದರು ಎಂಬುದು ಸ್ಪಷ್ಟವಾಗುತ್ತದೆ ಎಂದು ವರದಿ ಮಾಡಿತು. ಮೇಲ್ವರ್ಗದ ಜನರು ಚಳುವಳಿಯಲ್ಲಿ ಭಾಗವಹಿಸಿದ ಅಸ್ಪೃಶ್ಯರನ್ನು ಅವರವರ ಊರುಗಳಲ್ಲಿ ಬಹಿಷ್ಕಾರ ಹಾಕಿದ್ದನ್ನು ಮತ್ತು ಅವರಿಗೆ ಹೊಲಗದ್ದೆಗಳ ಕೆಲಸಗಳಿಂದ ತೆಗೆದು ಹಾಕಿದ್ದನ್ನು ಅಂಬೇಡ್ಕರರು ಖಂಡಿಸುತ್ತಾರೆ ಮಹಾರ ನಗರದ ಸಂಪ್ರದಾಯವಾದಿ ಹಿಂದೂಗಳು ಕೆರೆಯ ನೀರನ್ನು 108 ಬಿಂದಿಗೆಗಳಲ್ಲಿ ಹೊರತೆಗೆದು ಅವುಗಳಲ್ಲಿ ಗೋಮೂತ್ರ, ಸಗಣಿ, ಮೊಸರು ಹೀಗೆ ನೀರಿನಿಂದ ಬೆರೆಸಿ ಮಂತ್ರಘೋಷ ಮಾಡಿ ಕೆರೆಯ ನೀರಿನಲ್ಲಿ ಬೆರೆಸಿ, ನೀರನ್ನು ಗೋಮೂತ್ರಗಳಿಂದ ಪವಿತ್ರಗೊಳಿಸುತ್ತಾರೆ,    ಡಾ. ಅಂಬೇಡ್ಕರರಿಗೆ ಈ ವಿಷಯ ತಿಳಿದಾಗ ಅವರು “ಭೂಮಿಯ ಮೇಲೆ ಅಪವಿತ್ರಗೊಂಡ ಯಾವುದೇ ವಸ್ತುವೇ ಆದರೂ ಅದನ್ನು ಶುದ್ಧೀಕರಿಸುವ ಬಗೆ ಹಿಂದೂಗಳಿಗೆ ಕರಗತವಾಗಿದೆ” ಎಂದು ಖೇದ ವ್ಯಕ್ತಪಡಿಸುತ್ತಾರೆ.

ಡಾ. ಬಾಬಾ ಸಾಹೇಬ ಅಂಬೇಡ್ಕರರು ಮಾನವ ಹಕ್ಕುಗಳಿಗಾಗಿ ಮಾಡಿದ ಕ್ರಾಂತಿ ಇದಾಗಿತ್ತು. ಅಂಬೇಡ್ಕರರು ಸಹಸ್ರ ಅನುಯಾಯಿಗಳೊಂದಿಗೆ ಮಹಾರಾಷ್ಟ್ರದ ಕೊಲಾಬಾ ಜಿಲ್ಲೆಯ ಮಹಾಡ ಪಟ್ಟಣದ ಚೌಡರ್ ಕೆರೆಯ ದಂಡೆಗೆ 1927 ರ ಮಾರ್ಚ 20 ರಂದು ಬಂದು ಸೇರಿ ಕೆರೆಯ ನೀರನ್ನು ಬೊಗಸೆಯಲ್ಲಿ ಎತ್ತಿಕೊಂಡು ಕುಡಿಯುವುದರ ಮೂಲಕ ಈ ದೇಶದಲ್ಲಿರುವ ಕೋಟಿ ಕೋಟಿ ಶೋಷಿತ ಜನರ ಹಕ್ಕು ಇದೆ ಎಂಬುದನ್ನು ಜಗತ್ತಿಗೆ ಸಾರಿ ಹೇಳಿದ್ದರು.

                                            (ಮುಂದುವರೆಯುವುದು) 



ಸೋಮಲಿಂಗ ಗೆಣ್ಣೂರ.

Leave a Reply

Back To Top