ಅನುವಾದ ಸಂಗಾತಿ
ಮಾಸಗಳ, ಋತುಗಳ, ಸಂವತ್ಸರಗಳ ಉರುಳಿನಲ್ಲಿ ಸಿಲುಕಿ ಸವೆಯುತ್ತಾ ಹೋಗುವ ಕ್ಷಣ ಭಂಗುರ ಬದುಕನ್ನು ಸಮೃದ್ಧ ಪ್ರಕೃತಿಯ ಕೊಡುಗೆಗಳೊಂದಿಗೆ ಆಡುತ್ತಾ ಸಂತಸಮಯವಾಗಿಸಿಕೊಳ್ಳುವ ಒಳ ದನಿಯ ಕವನ ನೋಬೆಲ್ ಪ್ರಸಸ್ತಿ ವಿಜೇತ ಮೆಕ್ಸಿಕನ್ ಕವಿ ಆಕ್ಟೇವಿಯೋ ಪಾಜ್ ನ “ಗೇಮ್” . ಅನುವಾದ ಇಲ್ಲಿದೆ:
ಮೂಲ: ಮೆಕ್ಸಿಕನ್ ಕವಿ ಆಕ್ಟೇವಿಯೋ ಪಾಜ್.
ಕವಿತೆ: ಗೇಮ್.
ಕನ್ನಡಕ್ಕೆ: ಮೇಗರವಳ್ಳಿ ರಮೇಶ್.
ಕೊಳ್ಳೆ ಹೊಡೆಯುತ್ತೇನೆ ಋತುಗಳನ್ನು
ಆಡುತ್ತೇನೆ ಮಾಸಗಳೊಂದಿಗೆ, ಸಂವತ್ಸರಗಳೊಂದಿಗೆ,
ಚಳಿಯ ದಿನಗಳೊಂದಿಗೆ, ಬೇಸಗೆಯ ಕೆಂಪು ಮುಖಗಳೊಂದಿಗೆ.
ರಸ್ತೆಯಲ್ಲಿ ಮೌನವಾಗಿ ಚಲಿಸುವ
ನಿಶ್ಚಲ, ಕಠಿಣ ದಿನಗಳ ಮೆರವಣಿಗೆಯ ನಡುವೆ
ಆಯೋಜಿಸುತ್ತೇನೆ ಕವಿ ಗೋಷ್ಠಿಗಳನ್ನು
ಭೌದ್ಧಿಕ ಕಸರತ್ತುಗಳನ್ನು.
ಶರದೃತುವಿನ ನಸುಕಿನಲ್ಲಿ,
ಈಗಷ್ಟೆ ಮಿಂದು ಬಂದಂತೆ ತಂಪಾದ,
ತುಟಿಗೆ ಲಿಪ್ಸ್ಟಿಕ್ ಹಚ್ಚಿಕೊಂಡ,
ಕಲರವ ತರಂಗಗಳ ಮುಂಜಾನೆ
ಹಿಡಿಯುತ್ತೇನೆ
ಕೆಂಪು, ನೀಲಿ, ನೇರಳೆ ಬಣ್ಣಗಳ ಮೋಡಗಳನ್ನ.
ಮತ್ತವುಗಳನು ಎಸೆಯುತ್ತೇನೆ
ನಿರ್ಭಾವುಕ ನೀಲಿ ಆಗಸದೆಡೆಗೆ.
ಆಗ ಅವು ಬರೆಯುತ್ತವೆ
ಜಾಗತಿಕ ಭಾಷೆಯಲ್ಲಿ ಪತ್ರವೊಂದನ್ನು
ತಮ್ಮ ಆಪ್ತ ಮಿತ್ರ ಗಾಳಿಗೆ.
ಅಂಗಡಿಗಳ ಮಂದಿಗೆ ಅನುಕೂಲವಾಗಲೆಂದು
ಬೆಳಗುವ ಜಾಹೀರಾತು ಬೋರ್ಡುಗಳನ್ನು ತಯಾರಿಸಿ ಕೊಡುತ್ತೇನೆ
ಕೋರೈಸುವ ಮಿನುಗು ನಕ್ಷತ್ರಗಳ ಬೆಳಕಿಂದ
ಮುಂಬೆಳಗೊಂದನ್ನುಕೊಲ್ಲ ಬಹುದು ನಾನು
ರಕ್ತ ಸುರಿಸುವ ಅದು
ಬಿಳಿ ಮೋಡಕ್ಕಂಟಿ ನೇರಳೆಯ ಬಣ್ಣಕ್ಕೆ ತಿರುಗಿಸ ಬಹುದು.
ಋತುಗಳ ಅಂಗಡಿಯಲ್ಲಿ ಮಾರುತ್ತೇನೆ
ಶರದೃತುವಿನ ಮಂಜಿನ ಕಾಗದಗಳಲ್ಲಿ ಸುತ್ತಿದ
ಕಳಿತ ಸೇಬುಗಳನ್ನು.
ಅಪಹರಿಸುತ್ತೇನೆ ವಸಂತ ಋತುವನ್ನು
ಸುಂದರ ಬ್ಯಾಲೆ ನರ್ತಕಿಯಾಗಿ ಅದು
ನನ್ನ ಮನೆಯಲ್ಲಿರಲಿ.
ಗಾಳಿ ತನ್ನ ನಿಗದಿತ ವೇಳೆಯನ್ನು ಬದಲಿಸುವುದು
ಅನಿಶ್ಚಿತ ಮೋಡಗಳ ತಡೆ ಹಾಯುತ್ತಾ.
ಓಡುವೆ ನಾನು ಭವಿಷ್ಯದ ಹಾದಿಯಲಿ ಚಳಿಗಾಲದೆಡೆಗೆ
ಬೇಸಗೆಯೊಡನೆ ಬೆರೆತ ಅದನ್ನು
ಅನಿರೀಕ್ಷಿತವಾಗಿ ಸಂಧಿಸಿ ಅಚ್ಚರಿ ಮೂಡಿಸಲು.
ಈ ಹಸಿರು ಹಾಸಿನ ಮೇಲೆ ಉರುಳುವ
ದಿನದ ದಾಳಗಳ ಮೇಲೆ ಬಾಜಿ ಕಟ್ಟುತ್ತೇನೆ.
ಆಡುತ್ತೇನೆ-
ಮಾಸಗಳೊಡನೆ, ಸಂವತ್ಸರಗಳೊಡನೆ.