ದಾರಾವಾಹಿ

ಆವರ್ತನ

ಇದು ಆವರ್ತನ ಧಾರಾವಾಹಿಯ ಕೊನೆಯ ಕಂತು. 58 ವಾರಗಳ ಕಾಲ ಒಂದೇ ದಿನವೂ ತಪ್ಪಿಸದೆ ಸಂಗಾತಿಗಾಗಿ ಈ ಬರಹಗಳನ್ನು ಬರೆದ ಗುರುರಾಜ್ ಸನಿಲ್ ಅವರಿಗೆ ಸಂಗಾತಿ ಪತ್ರಿಕೆ ಮತ್ತುಸಾವಿರಾರು ಓದುಗರ ಕಡೆಯಿಂದ ದನ್ಯವಾದಗಳು

ಅದ್ಯಾಯ-58

vellanadu: 58-year-old Man Commits Suicide | Thiruvananthapuram News -  Times of India

ಶಂಕರನ ಮಗನ ಆತ್ಮಹತ್ಯೆಯ ಸುದ್ದಿ ತಕ್ಷಣ ಪೊಲೀಸ್ ಠಾಣೆಗೆ ತಲುಪಿತು. ಜೊತೆಗೆ ಶಂಕರನ ಅದೃಷ್ಟವೂ ಆವತ್ತು ಅವನಿಗೆ ಶಾಶ್ವತವಾಗಿ ಕೈಕೊಡುವ ಪ್ರಥಮ ಸೂಚನೆಯಾಗಿ ಆಗ ಇಲಾಖೆಯಲ್ಲಿದ್ದುದು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಪದ್ಮನಾಭ್! ಸುದ್ದಿ ತಿಳಿದ ಅವನು ಕೂಡಲೇ ತನ್ನ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿದವನು ಆ ಕುರಿತು ತನಿಖೆಗಾರಂಭಿಸಿದ. ಆದ್ದರಿಂದ ಹುಡುಗ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದರೂ ಪದ್ಮನಾಭ್ ಹುಡುಗನ ಹೆಣವನ್ನು ಪರೀಕ್ಷಿಸಿದವನು ಆಘಾತಗೊಂಡ. ಕಾರಣ ಬಾಲಕನ ದೇಹದ ಮೇಲೆ ಹತ್ತಾರು ಕಡೆ ರಕ್ತ ಹೆಪ್ಪುಗಟ್ಟಿತ್ತು! ಅದನ್ನು ಕಂಡ ಗಟ್ಟಿ ಗುಂಡಿಗೆಯ ಪದ್ಮನಾಭನೂ ಒಮ್ಮೆ ತಲ್ಲಣಿಸಿಬಿಟ್ಟವನು ಮರುಕ್ಷಣ ಶಂಕರನನ್ನೂ, ವಿನೋದಾಳನ್ನೂ ದುರುಗುಟ್ಟಿ ನೋಡಿದ. ಆಗ ಅವರಿಬ್ಬರೂ ಬಿಳಿಚಿಕೊಂಡರು. ಅದರಿಂದ ಅವನ ಅನುಮಾನ ಬಲವಾಯಿತು. ಸ್ವಂತ ಕರುಳ ಕುಡಿಯನ್ನೇ ಹೊಡೆದು ಕೊಂದ ಇಂಥ ಹೆತ್ತರಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಯೋಚಿಸಿದವನು ಇಬ್ಬರನ್ನೂ ದಸ್ತಗಿರಿಮಾಡುವಂತೆಯೂ ಮತ್ತು ಹೆಣವನ್ನು ಪೋಸ್ಟ್ ಮಾರ್ಟಮ್ಗೆ ಕಳುಹಿಸುವಂತೆಯೂ ಸಿಬ್ಬಂದಿಗಳಿಗೆ ಸೂಚಿಸಿ ಹಿಂದಿರುಗಿದ. ಮರುದಿನ ಪೋಸ್ಟ್ ಮಾರ್ಟಮ್ ವರದಿಯೂ ಬಂತು. ಅದರಲ್ಲಿ, ‘ಹುಡುಗನ ಸಾವಿಗೆ ಆತ್ಮಹತ್ಯೆಯೇ ಕಾರಣವಾದರೂ ಅದಕ್ಕಿಂತ ತುಸು ಮೊದಲು ಅವನನ್ನು ಧಾರುಣವಾಗಿ ಥಳಿಸಿರುವುದರಿಂದಲೂ ಅವನು ಸಾಯುವ ಸಾಧ್ಯತೆ ಿತ್ತು!’ ಎಂದು ದಾಖಲಾಗಿತ್ತು.
ಅಷ್ಟು ತಿಳಿದ ಇನ್ಸ್ಪೆಕ್ಟರ್ ಪದ್ಮನಾಭ್ ಕೂಡಲೇ ಶಂಕರ ದಂಪತಿಯನ್ನು ತೀವ್ರ ವಿಚಾರಣೆಗೊಳಪಡಿಸಿದ. ಅದರಿಂದ ಕಂಗಾಲಾದ ವಿನೋದಾ ತನ್ನ ಗಂಡ ತನ್ನ ಮೇಲೂ, ಮಗನ ಮೇಲೂ ನಿರಂತರವಾಗಿ ನಡೆಸುತ್ತಿದ್ದ ಹಿಂಸೆಯನ್ನೂ ಮತ್ತವನ ವಿಕೃತ ಮನಸ್ಥಿತಿಯನ್ನೂ ಬಯಲುಗೊಳಿಸಿಬಿಟ್ಟಳು. ಹಾಗಾಗಿ ಶಂಕರನ ವಿಷಯದಲ್ಲಿ ಅವಳು ಕೂಡಾ ಬಲಿಪಶುವೇ! ಎಂದು ಪದ್ಮನಾಭನಿಗೆ ಅರ್ಥವಾಯಿತು. ಆದರೂ ಮಗನ ಸಾವಿಗೆ ಅವಳೂ ಕಾರಣಳೇ ಎಂಬುದೂ ಸ್ಪಷ್ಟವಾಯಿತು. ಆದರೆ ಅವಳು ಪುರುಷನೊಬ್ಬನ ದೌರ್ಜನ್ಯಕ್ಕೊಳಗಾದ ಮಹಿಳೆ ಮಾತ್ರವಲ್ಲದೇ ತನ್ನಕಣ್ಣಮುಂದೆಯೇ ಮಗನ ಸಾವನ್ನು ಕಂಡಂಥ ನತದೃಷ್ಟ ತಾಯಿಯೂ ಹೌದು! ಎಂದು ಯೋಚಿಸಿದ ಪದ್ಮನಾಭ ಅವಳ ಮೇಲೆ ಅನುಕಂಪಗೊಂಡು ಕ್ಷಮಿಸಿಬಿಟ್ಟ. ಆದರೆ ಶಂಕರನ ಮೇಲೆ, ‘ತನ್ನ ಮಗನನ್ನು ಅಮಾನುಷವಾಗಿ ಥಳಿಸಿ ಕೊಂದ ಅಪ್ಪ!’ ಎಂಬ ಆರೋಪ ದಾಖಲಿಸಿದನಲ್ಲದೇ ಕೆಲವು ವರ್ಷಗಳ ಹಿಂದೆ ಸಂತಾನಪ್ಪ ಕಿಲ್ಲೆ ಎಂಬ ಕೂಲಿ ಕಾರ್ಮಿಕನನ್ನೂ ಕೊಲೆ ಮಾಡಿ ಕಾನೂನಿನಿಂದ ತಪ್ಪಿಸಿಕೊಂಡಿದ್ದ ಕೇಸಿಗೂ ಮರುಜೀವ ನೀಡಿದವನು ಅದರ ತನಿಖಾ ದಾಖಲೆಗಳನ್ನೂ ಸಂಗ್ರಹಿಸಿ ಈ ಕೇಸಿನೊಂದಿಗೆ ಲಗತ್ತಿಸಿದ. ಆದ್ದರಿಂದ ಎರಡೂ ಕೇಸುಗಳು ಸುಮಾರು ನಾಲ್ಕು ವರ್ಷಗಳ ಕಾಲ ನಡೆದವು. ಆದರೆ ಈ ಬಾರಿ ಶಂಕರನನ್ನು ಜಾಮೀನಿನ ಮೇಲೆ ಬಿಡಿಸಿಕೊಳ್ಳಲು ಅವನ ಒಡಹುಟ್ಟಿದವರಾಗಲೀ ಅಥವಾ ಸ್ನೇಹಿತರಾಗಲೀ ಯಾರೂ ಮುಂದೆ ಬರಲಿಲ್ಲ. ಆ ಕಾರಣದಿಂದಲೂ ಮತ್ತು ಪ್ರಾಮಾಣಿಕ ಅಧಿಕಾರಿಯೊಬ್ಬನ ಪರಿಶ್ರಮದಿಂದಲೂ ಶಂಕರನ ಎರಡೂ ಅಪರಾಧಗಳು ಸಾಬೀತುಗೊಂಡು ಅವನು ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ.


ಇತ್ತ ಡಾ. ನರಹರಿಯು ಹಲವು ಸಮಯದ ನಂತರ ಇತ್ತೀಚೆಗೆ ಒಂದು ವಾರದ ರಜೆಯನ್ನು ಪಡೆದಿದ್ದ. ಆ ಬಿಡುವಿನ ದಿನಗಳನ್ನು ಪಶ್ಚಿಮಘಟ್ಟದ ಚಾರಣದಲ್ಲಿ ಕಳೆಯಬೇಕೆಂದೂ ಯೋಚಿಸಿದ್ದ. ಆದರೆ ತನ್ನ ಇಷ್ಟದ ದೇವರಕಾಡಿನ ಸಂರಕ್ಷಣೆಯ ಘಟನೆ ನಡೆದ ಬಳಿಕ ಅವನು ಅತ್ತ ಹೋಗಿರಲಿಲ್ಲ. ಇಂದು ಆ ಬನವನ್ನು ನೋಡುವ ಆಸೆಯಾಯಿತು. ಆದ್ದರಿಂದ ರಜೆಯ ಮೊದಲ ದಿನವನ್ನು ಅಲ್ಲಿಯೇ ಕಳೆಯಲು ಮನಸ್ಸು ಮಾಡಿ ಹೊರಟ. ಅದು ಗ್ರೀಷ್ಮಋತುವಿನ ಆರಂಭದ ಕಾಲ. ಬುಕ್ಕಿಗುಡ್ಡೆಯಿಡೀ ತೀಕ್ಷ್ಣ ಧಗೆಯಿಂದ ಧುಮುಗುಡುತ್ತಿತ್ತು. ನರಹರಿ ಕಾಡಿನ ಸಮೀಪ ಬಂದು ನಿಂತವನು ಒಮ್ಮೆಲೇ ಅಚ್ಚರಿಗೊಂಡ. ಕಾರಣ ಅವನು ತನ್ನ ಕಣ್ಣುಗಳನ್ನೇ ನಂಬಲಾರದಷ್ಟು ಆ ಕಾಡು ಭವ್ಯ ಸೌಂದರ್ಯದಿಂದ ನಳನಳಿಸುತ್ತಿತ್ತು. ಆ ಬನದ ಹಿಂದಿನ ಕೆಲವಾರು ವಸಂತಗಳನ್ನೂ ಅವನು ಕಂಡಿದ್ದ ಮತ್ತು ಮನಸಾರೆ ಅನುಭವಿಸಿದ್ದ. ಆದರೆ ಈ ವರ್ಷದ ವಸಂತನಾಗಮನವು ಆ ಕಾಡನ್ನು ಆವರಿಸಿದ್ದ ರೀತಿಯು ಹಿಂದೆಂದಿಗಿಂತಲೂ ಅದ್ಭುತವಾಗಿತ್ತು. ಅದರ ನಡುವೆ ಅವನಿಗೆ ಇನ್ನೊಂದು ವಿಶೇಷವೂ ಗೋಚರಿಸಿತು. ಏನೆಂದರೆ ಆ ವನವು ತನ್ನ ಪ್ರವೇಶ ದ್ವಾರದಲ್ಲಿ, ‘ಅಮೂಲ್ಯ ಸಸ್ಯಸಂಪತ್ತು ಮತ್ತು ಸೂಕ್ಷ್ಮ ಜೀವಸಂಕುಲಗಳ ಸಂರಕ್ಷಿತ ತಾಣ!’ ಎಂಬ ಶಿರೋನಾಮೆಯನ್ನು ಹೊತ್ತು ನಿಂತಿತ್ತು. ಅದನ್ನು ಕಂಡ ನರಹರಿಗೆ ತನ್ನ ಜನ್ಮ ಸಾರ್ಥಕವಾದಂಥ ಭಾವ ಮೂಡಿತು. ಅಕ್ಕರೆಯಿಂದ ಆ ಕಾಡಿನ ಸುತ್ತೆಲ್ಲ ಕಣ್ಣು ಹಾಯಿಸಿದ. ಮರುಕ್ಷಣ ಗೆಳೆಯ ರಾಜಶೇಖರನ ನೆನಪು ಒತ್ತರಿಸಿತು. ಕೂಡಲೇ ಅವನಿಗೆ ಕರೆ ಮಾಡಿದ. ಅವನು ಅತ್ತಲಿಂದ ‘ಹಲೋ…!’ ಎಂದಾಕ್ಷಣ, ‘ಥ್ಯಾಂಕ್ಯೂ ವೆರಿ ಮಚ್ ರಾಜೂ…!’ ಎಂದ ತುಂಬು ಅಭಿಮಾನದಿಂದ.
‘ಅರೇ, ಇದ್ದಕ್ಕಿದ್ದಂತೆ ಥ್ಯಾಂಕ್ಸ್ ಯಾಕೋ…?’ ಎಂದ ಅವನೂ ಅಚ್ಚರಿಯಿಂದ.
‘ನನ್ನ ದೇವರಕಾಡನ್ನು ಕಷ್ಟಪಟ್ಟು ಉಳಿಸಿಕೊಟ್ಟಿದ್ದಕ್ಕೆ ಗೆಳೆಯ…! ಈಗ ಅದೇ ಹಸಿರ ಮಡಿಲಲ್ಲಿ ಸಂಚರಿಸುತ್ತ ನಿನ್ನೊಂದಿಗೆ ಮಾತಾಡುತ್ತಿದ್ದೇನೆ. ಎಷ್ಟೊಂದು ಚಂದವಾಗಿದೆ ಗೊತ್ತಾ ಈ ಬನ…!’ ಎಂದು ಉಲ್ಲಾಸದಿಂದ ಉದ್ಗರಿಸಿದ.
‘ಓಹೋ ಹಾಗೋ ವಿಷಯ! ಆದರೆ ಅದು ನಿನ್ನ ಪರಿಶ್ರಮ ಮತ್ತು ಪ್ರಯತ್ನದಿಂದಲೇ ಉಳಿದುಕೊಂಡಿದ್ದಲ್ವಾ ಮಾರಾಯಾ! ಆದರೂ ಆ ಕಾಡನ್ನೊಮ್ಮೆ ನನಗೂ ನೋಡಬೇಕೆನ್ನಿಸುತ್ತಿದೆ ಸದ್ಯದಲ್ಲೇ ಬರುತ್ತೇನೆ!’ ಎಂದ ಅವನು ಉತ್ಸಾಹದಿಂದ.
‘ಖಂಡಿತಾ ನೀನು ಬರಲೇಬೇಕು ರಾಜೂ. ಈ ಅರಣ್ಯ ಕೂಡಾ ನಿನ್ನನ್ನು ನೋಡಲು ಹಂಬಲಿಸುತ್ತಿದೆ ಅಂತ ನನಗನ್ನಿಸುತ್ತಿದೆ. ಆದರೂ ಈಗ ನಾನು ನಿನ್ನೊಡನೆ ಹರಟೆ ಹೊಡೆಯುವ ಮೂಡಿನಲ್ಲಿಲ್ಲ ಮಾರಾಯಾ. ಒಂದಷ್ಟು ಹೊತ್ತು ಈ ಸುಂದರವಾದ ವಾತಾವರಣದಲ್ಲಿ ಸಮಯ ಕಳೆಯಬೇಕೆಂದಿದ್ದೇನೆ. ಮತ್ತೆ ಮಾತಾಡುತ್ತೇನೆ ಬೈ!’ ಎಂದು ಹೇಳಿ ಫೋನಿಟ್ಟ.
ನಂತರ ಮೆಲ್ಲನೇ ಕಾಡನ್ನು ಪ್ರವೇಶಿಸಿದ. ಅವನು ಒಳಗಡಿಯಿಡುತ್ತಲೇ ಕಾಡಿನೊಳಗಿನ ವಾತಾವರಣವೂ ಸೂಕ್ಷ್ಮವಾಗಿ ಬದಲಾಗಿಬಿಟ್ಟಿತು. ಅಲ್ಲಿಯವರೆಗೆ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಂಥ ಪ್ರಾಣಿಪಕ್ಷಿ ಮತ್ತು ಕ್ರಿಮಿಕೀಟಗಳಲ್ಲಿ ನವಚೈತನ್ಯ ಮೂಡಿದಂತಾಯಿತು. ಕೋಗಿಲೆ, ಗೊರವಂಕ, ಹೊನ್ನಕ್ಕಿ, ಕಾಜಾಣ, ಭೀಮರಾಜ, ಮಲೆಮಂಗಟ್ಟೆ ಮತ್ತು ನವಿಲುಗಳೆಲ್ಲ ಆನಂದಾತಿರೇಕಗೊಂಡಂತೆ ಗರಿಗೆದರಿ ಕುಣಿಯುತ್ತ ತಮ್ಮ ಇಂಪಾದ ವೃಂದಗಾನದಿಂದ ಆದರದಿಂದ ಸ್ವಾಗತಿಸುತ್ತಿರುವಂತೆ ಅವನಿಗನ್ನಿಸಿತು. ಮುಂದಿನ ಕ್ಷಣ ಇಡೀ ಅರಣ್ಯವು ಖಗಪಕ್ಷಿಗಳ ಸ್ವರ ಮಾರ್ಧುಯದಿಂದ ತುಂಬಿ ಹೋಯಿತು. ತಂತಮ್ಮ ಹಳೆಯ ಎಲೆಗಳನ್ನುದುರಿಸಿಕೊಂಡಿದ್ದ ಅಶ್ವತ್ಥ, ಆಲ, ಸುರಗಿ, ರೆಂಜೆ, ನಂದಿ, ಚಾಕಟೆ, ಕಾಸರಕ, ಸುರಹೊನ್ನೆ ಮತ್ತು ಚೆಕ್ಕೆಮರಗಳೆಲ್ಲ ಮೈತುಂಬ ಬಣ್ಣಬಣ್ಣದ ಚಿಗುರೆಲೆಗಳನ್ನು ತುಂಬಿಕೊಂಡು ಮದುವಣಗಿತ್ತಿಯರಂತೆ ಕಾಣುತ್ತ ನರಹರಿಯ ಗಮನವನ್ನು ಸೆಳೆಯಲೆಂಬಂತೆ ನವಿರಾಗಿ ತೊನೆಯತೊಡಗಿದವು. ಅವನ್ನೆಲ್ಲ ಗಮನಿಸುತ್ತ ನಡೆಯುತ್ತಿದ್ದ ನರಹರಿಯು ನೆಲದ ಮೇಲಿನ ಸೂಕ್ಷ್ಮ ಜೀವರಾಶಿಗಳಿಗೂ ಹಾನಿಯಾಗದಂತೆ ಹಗುರವಾದ ಹೆಜ್ಜೆಯನ್ನಿಡುತ್ತ ಬಲು ಜಾಗ್ರತೆಯಿಂದ ನಡೆಯುತ್ತಿದ್ದ. ಅಷ್ಟರಲ್ಲಿ ಜೋರಾದ ಗಾಳಿಯೆದ್ದು ಆ ಮರಗಿಡ ಬಳ್ಳಿಗಳೆಲ್ಲ ಅವನ ಮೇಲೆ ಒಂದೊಂದಾಗಿ ಹೂವು ಹಣ್ಣುಗಳನ್ನುದುರಿಸಿದವು. ಅದನ್ನು ಕಂಡವನು ರೋಮಾಂಚಿತನಾದ. ತುಸುಹೊತ್ತಲ್ಲಿ ಅದೇ ಗಾಳಿಯು ತಂಗಾಳಿಯಾಗಿ ಬೀಸಲಾರಂಭಿಸಿ ಅವನನ್ನು ನಲ್ಮೆಯಿಂದ ಆವರಿಸಿಕೊಂಡಿತು. ಅವನು ಆನಂದದಿಂದ, ‘ಹಾಯ್…!’ ಎನ್ನುತ್ತ ಮುಂದೆ ಸಾಗಿದ.
ಅಲ್ಲಿ ಒಂದಷ್ಟು ದೂರದಲ್ಲಿ ಹತ್ತಾರು ಬಗೆಯ ವನ್ಯಜೀವಿಗಳು, ಈ ದಟ್ಟ ಹಸಿರಿನ ಸ್ವಚ್ಛಂದ ಪರಿಸರಕ್ಕೆ ಇನ್ನು ಮುಂದೆ ತಾವೇ ಒಡೆಯರು ಎಂಬಂತೆ ಕುಣಿದು ಕುಪ್ಪಳಿಸುತ್ತ ವಿಹರಿಸುತ್ತಿದ್ದವು. ನರಹರಿಯು ಅವೆಲ್ಲವನ್ನೂ ಏಕಾಗ್ರತೆಯಿಂದ ಗಮನಿಸುತ್ತ ಅವುಗಳ ಸಡಗರದಲ್ಲಿ ತಾನೂ ಭಾಗಿಯಾಗುತ್ತ ಸರೋವರದತ್ತ ನಡೆದ. ಆಗ ತಂಗಾಳಿಯೂ ಅವನನ್ನು ಹಿಂಬಾಲಿಸಿತು. ಆ ಕೊಳವು ಅವನನ್ನು ಕಂಡು ಉಲ್ಲಾಸವನ್ನು ಸ್ಫುರಿಸಿತು. ತಂಗಾಳಿ ಮುದಗೊಂಡು ನೀರಿನ ಸಾಂಗತ್ಯದಲ್ಲಿ ಮೇಳೈಸಿ ನವಿರು ಭಾವಗಳನ್ನು ನುಡಿಸಿತು. ಆಗ ಪುಷ್ಕರಣಿಯೂ ಅದರೊಂದಿಗೆ ಬೆರೆತು ತನ್ನ ಅಲೆಯಲೆಗಳಲ್ಲಿ ಇನಿದನಿಯನ್ನು ಮಾರ್ದನಿಸಿತು. ಆ ಮದಗದ ನೀರಿನಲ್ಲಿ ಒಂದರ ಮೇಲೊಂದರಂತೆ ಮೆಲುನಡೆಯಲ್ಲಿ ಬಂದಪ್ಪಳಿಸುತ್ತಿದ್ದ ತರಂಗಗಳ ರಿಂಗಣವನ್ನು ನೋಡುತ್ತ ನರಹರಿಯು ಸುಮಾರು ಹೊತ್ತು ಅದರ ದಂಡೆಯಲ್ಲಿ ಕುಳಿತ. ಅಲ್ಲಿನ ಆಹ್ಲಾದಕರ ವಾತಾವರಣಕ್ಕೆ ಮೈಮರೆತು ಧ್ಯಾನಸ್ಥಿತಿಗೂ ಜಾರಿದ. ಆದರೆ ಸ್ವಲ್ಪ ಹೊತ್ತಿನ ನಂತರ ಮತ್ತೆ ಎದ್ದು ನಡೆದಾಡತೊಡಗಿದ. ಒಂದೆಡೆ ಹುತ್ತದ ಸಮೂಹವೊಂದು ಬೃಹದಾಕಾರವಾಗಿ ಬೆಳೆದು ನಿಂತಿತ್ತು. ಅದರಲ್ಲೊಂದು ದೊಡ್ಡ ಹುತ್ತವು ಅವನ ಗಮನ ಸೆಳೆಯಿತು. ಹತ್ತಿರ ಹೋಗಿ ಅದರ ಮೇಲ್ಮೈಯನ್ನು ಮೃದುವಾಗಿ ಸ್ಪರ್ಶಿಸಿ ಸವರಿದ. ಗೆದ್ದಲು ಹುಳುಗಳ ಕಲಾ ಕೌಶಲ್ಯತೆ ಕಂಡು ಅವನಲ್ಲಿ ಬೆರಗು ಮೂಡಿತು. ಅಲ್ಲೇ ಕುಳಿತುಕೊಂಡು ಕುತೂಹಲದಿಂದ ಅದನ್ನು ವೀಕ್ಷಿಸತೊಡಗಿದ. ಅವನ ಆ ಶುದ್ಧ ಸ್ವರ್ಶದ ಬಿಸುಪು ತಕ್ಷಣ ಹುತ್ತದೊಳಗಿನ ಗೆದ್ದಲು ಸೈನ್ಯಕ್ಕೆ ತಲುಪಿರಬೇಕು. ಅವು ಕೂಡಲೇ ಆ ಸುದ್ದಿಯನ್ನು ತಮ್ಮ ಸಮುದಾಯಕ್ಕೆ ತಿಳಿಸಿದವು. ಮರುಕ್ಷಣ ಅವುಗಳೆಲ್ಲ ಹಿಂಡುಹಿಂಡಾಗಿ ಬಂದು ಹತ್ತಾರು ದ್ವಾರಗಳ ಮೂಲಕ ಅವನನ್ನು ಗಡಿಬಿಡಿಯಿಂದ ಇಣುಕತೊಡಗಿದುವು. ಆದರೆ ಆ ದಿವ್ಯಜೀವಿಯಿಂದ ತಮಗೆ ಯಾವ ಅಪಾಯವೂ ಇಲ್ಲವೆಂಬುದನ್ನು ಮನಗಂಡ ಅವು ತಮ್ಮ ಪಾಡಿಗೆ ತಾವು ಮರಳಿ ಹುತ್ತವನ್ನು ಸೇರಿಕೊಂಡು ಕಾರ್ಯನಿರತವಾದವು.
ಅಚ್ಚರಿಯ ಸಂಗತಿಯೆಂದರೆ, ಹಿಂದೊಮ್ಮೆ ಭಾಗೀವನದೊಳಗೆ ಸುತ್ತಾಡುತ್ತಿದ್ದ ನಾಗರಹಾವು ಕೂಡಾ ಇದೇ ಹುತ್ತದಲ್ಲೀಗ ವಿಶ್ರಮಿಸುತ್ತಿತ್ತು. ಆದರೆ ನರಹರಿಯಿಂದ ಹೊಮ್ಮುತ್ತಿದ್ದ ದೈವೀ ತರಂಗವು ಅದನ್ನೂ ಎಚ್ಚರಿಸಿತು. ಆ ಹಾವು ತಕ್ಷಣ ಎಚ್ಚೆತ್ತು ಹುತ್ತದ ಮುಖ್ಯ ದ್ವಾರಕ್ಕೆ ಧಾವಿಸಿ ಬಂದುದು ರಪ್ಪನೆ ಅವನಿಗೆ ಮುಖಾಮುಖಿಯಾಗಿ ಮಾರೆತ್ತರಕ್ಕೆ ಹೆಡೆಯೆತ್ತಿ ನಿಂತುಬಿಟ್ಟಿತು. ಅತ್ತ ಹುತ್ತದ ಹಿರಿಮೆಯನ್ನೂ ಮತ್ತದರ ನಿರ್ಮಾಣದಲ್ಲಿ ಗೆದ್ದಲುಗಳ ಪರಿಶ್ರಮವನ್ನೂ ವಿಸ್ಮಯದಿಂದ ಗಮನಿಸುತ್ತಿದ್ದ ನರಹರಿಯ ಗಮನವು ರಪ್ಪನೆ ಹಾವಿನತ್ತ ಹರಿಯಿತು. ಮರುಕ್ಷಣ ಹೌಹಾರಿ ಹಿಂದೆ ನೆಗೆದುಬಿಟ್ಟ! ಆದರೆ ತನ್ನ ಗಂಭೀರ ಭಂಗಿಯಲ್ಲಿ, ಸಮ್ಮೋಹನಗೊಳಿಸುವಂಥ ರೀತಿಯಲ್ಲಿ ಹೆಡೆಯರಳಿಸಿ ನಿಂತಿದ್ದ ಸರ್ಪರಾಜನನ್ನು ಕಂಡ ಅವನೊಳಗಿನ ಭಯವೂ ಮೆಲ್ಲನೇ ಮರೆಯಾಗಿಬಿಟ್ಟಿತು. ನಿಧಾನವಾಗಿ ಮುಂದೆ ಬಂದು ಹಾವನ್ನು ಪ್ರೀತಿಯಿಂದ ದಿಟ್ಟಿಸಿದ. ಅದರ ರುದ್ರರಮಣೀಯ ರೂಪವು ಅವನನ್ನು ಮಂತ್ರಮುಗ್ಧಗೊಳಿಸಿತು. ಕೆಲವುಕ್ಷಣ ಇಬ್ಬರ ನೋಟಗಳೂ ಆಪ್ತವಾಗಿ ಸಂಧಿಸಿದವು. ಆ ಹಾವು ಮನಸಾರೆ ತನ್ನ ಕೃತಜ್ಞತೆಯ ತರಂಗಗಳನ್ನು ಅವನೆಡೆಗೆ ಹರಿಸಿದಂತೆ ಭಾಸವಾಯಿತು. ಬಳಿಕ ಅದು ನಿಧಾನವಾಗಿ ಒಳಗೆ ಹರಿದು ಕಣ್ಮರೆಯಾಯಿತು. ನರಹರಿಯು ತನ್ನ ಜೀವಮಾನದಲ್ಲೇ ಇಷ್ಟೊಂದು ಸಮೀಪದಲ್ಲಿ, ನಿರ್ಜನ ಪ್ರದೇಶದಲ್ಲಿ ಮತ್ತು ಒಬ್ಬಂಟಿಯಾಗಿ ದೊಡ್ಡ ನಾಗರಹಾವೊಂದನ್ನು ನೋಡಿದವನು ಅದೇ ಯೋಚನೆಯಿಂದ ರೋಮಾಂಚಿತನಾದ. ಹಾಗಾಗಿ ಇಂಥದ್ದೊಂದು ಅದ್ಭುತ ಜೀವಿಯನ್ನು ನಮ್ಮ ಪೂರ್ವಜರು ‘ನಾಗದೇವರು!’ ಎಂದು ಕಂಡಿದ್ದರಲ್ಲಿ, ಪೂಜಿಸುತ್ತ ಬಂದಿರುವುದರಲ್ಲಿ ಯಾವುದೇ ಅಜ್ಞಾನವಾಗಲೀ, ಅತಿಶಯೋಕ್ತಿಯಾಗಲೀ ಇಲ್ಲ! ಎಂದು ಅವನಿಗನ್ನಿಸಿತು. ಆನಂತ ಅವನು ಸುಮಾರು ಹೊತ್ತು ಆ ದೇವರ ಕಾಡಿನಲ್ಲಿ ಕಳೆದವನು ಮನೆಯತ್ತ ಹಿಂದಿರುಗಿದ.


ಇತ್ತ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿದ ಗೋಪಾಲ ಪುನರ್ಜನ್ಮ ಪಡೆದು ಮನೆಗೆ ಹಿಂದಿರುಗಿದ್ದ. ತನಗೆ ಸೋಕಿದ್ದು ಮನುಷ್ಯ ಸಹಜವಾದ ಕಾಯಿಲೆಯೆಂಬುದು ಆಸ್ಪತ್ರೆಯ ವೈದ್ಯರಿಂದಲೂ ಮತ್ತು ಮುಖ್ಯವಾಗಿ ಡಾ. ನರಹರಿಯಿಂದಲೂ ತಿಳಿದ ಮೇಲೆ ಅವನು ತನ್ನ ಆಲೋಚನೆ ಹಾಗು ಅಸಂಗತ ಕಲ್ಪನೆಗಳ ಕುರಿತು ತೀವ್ರ ಪಶ್ಚಾತ್ತಾಪಪಟ್ಟಿದ್ದ. ಹಾಗಾಗಿ ಅವನಲ್ಲಿ ಮತ್ತೆ ಚೈತನ್ಯ ಮೂಡಿತ್ತು. ಇತ್ತ ರಾಧಾಳೂ ಬದಲಾಗಿದ್ದಳು. ಅವಳೀಗ ಹಿಂದಿನಂತೆ ತನ್ನ ನೆರೆಕರೆಯವರೊಂದಿಗೆ ಕೀಳರಿಮೆ ಅಥವಾ ಹಿಂಜರಿಕೆಯಿಂದ ಒಡನಾಡುವುದನ್ನು ತೊರೆದು ಆತ್ಮವಿಶ್ವಾಸದಿಂದ ಬಾಳತೊಡಗಿದ್ದಳು. ಆನಂತರ ವಠಾರದ ಅವರಿವರಿಂದೆಲ್ಲ ಆಗಾಗ ಹಾರಿ ತೇಲಿ ಬರುತ್ತಿದ್ದಂಥ ವಿವಿಧ ನಂಬಿಕೆ ಮತ್ತು ಮೌಢ್ಯತೆಗಳಿಗೆ ಕಿವಿಗೊಡದೆ, ಆ ಕುರಿತು ತಲೆಕೆಡಿಸಿಕೊಳ್ಳದೆ ನೆಮ್ಮದಿಯಿಂದ ಜೀವಿಸುವುದು ಹೇಗೆ ಎಂಬುದನ್ನು ರೂಢಿಸಿಕೊಂಡಿದ್ದಳು. ಆದ್ದರಿಂದ ಅವರ ಹಳಿ ತಪ್ಪಿದ ಜೀವನವು ಬಹಳ ಬೇಗನೇ ಮರಳಿ ಸುಸೂತ್ರವಾಗಿ ಸಾಗಲಾರಂಭಿಸಿತು.
ಗೋಪಾಲ ದಂಪತಿಯ ಕಷ್ಟಕಾರ್ಪಣ್ಯಗಳನ್ನು ಸಮೀಪದಿಂದ ಕಂಡಿದ್ದ ಡಾ. ನರಹರಿಯು ಅವರ ಬಗ್ಗೆ ಅತೀವ ಸಹಾನುಭೂತಿ ಹೊಂದಿದ್ದ. ಆದ್ದರಿಂದ ಅಂಥ ಬಡ ಕುಟುಂಬಕ್ಕೆ ತನ್ನಿಂದೇನಾದರೂ ಸಹಾಯವಾಗಬೇಕೆಂದುಕೊಂಡಿದ್ದ ಅವನು ಗೋಪಾಲ ಆಸ್ಪತ್ರೆಯಿಂದ ಹಿಂದಿರುಗಿದ ಮೇಲೆ ಅವನಿಗೆ ಒಂದಿಷ್ಟು ಧನ ಸಹಾಯ ಮಾಡಿದ. ಅದರಿಂದ ಗೋಪಾಲ ಇನ್ನಷ್ಟು ಗೆಲುವಾದ. ಹಿಂದೆ ತಾನು ಸಾಲಸೋಲ ಮಾಡಿ ಕೊಂಡು ತಂದು ತನ್ನ ಕುಟುಂಬಕ್ಕೆ ಆಸರೆಯಾಗಿದ್ದ ಹಸುವೊಂದು ಅನಾವಶ್ಯಕವಾಗಿ ಮಾರಿ ಹೋದ ನೋವು ಅವನನ್ನು ಸದಾ ಕಾಡುತ್ತಿತ್ತು. ಈಗ ನರಹರಿ ನೀಡಿದ ಹಣದಿಂದ ಕೂಡಲೇ ಒಳ್ಳೆಯ ಹಸುವೊಂದನ್ನು ಕೊಂಡು ತಂದು ಮತ್ತೆ ಹೈನುಗಾರಿಕೆಯನ್ನಾರಂಭಿಸಿ ಸಂಪಾದಿಸತೊಡಗಿದ.
ಇಂದು ದೇವರಕಾಡನ್ನು ವೀಕ್ಷಿಸಿ ಹಿಂದಿರುಗುತ್ತಿದ್ದ ನರಹರಿಯು ಅಲ್ಲೇ ಎದುರುಗಡೆ ಕಾಣುತ್ತಿದ್ದ ಗೋಪಾಲನ ಮನೆಯತ್ತ ಗಮನ ಹರಿಸಿದ. ಆ ಹೊತ್ತು ಗೋಪಾಲನ ನಾಯಿ ಮೋತಿಯು ದೂರದಿಂದಲೇ ನರಹರಿಯನ್ನು ಗುರುತಿಸಿದ್ದು, ತನ್ನೆಜಮಾನನಿಗೆ ಜೀವದಾನ ಮಾಡಿದವನನ್ನು ಕಂಡು ವಿನಯದಿಂದ ಬಾಲ ಅಲ್ಲಾಡಿಸುತ್ತ ಕೃತಜ್ಞತೆ ಸಲ್ಲಿಸಿತು. ಅಷ್ಟರಲ್ಲಿ ಅಂಗಳದ ಮೂಲೆಯ ಹಟ್ಟಿಯಲ್ಲಿದ್ದ ಎಳೆ ಕರುವನ್ನು ಹೊರಗೆ ತಂದ ರಾಧಾ ಬೇಲಿನ ಗಿಡಕ್ಕೆ ಅದನ್ನು ಕಟ್ಟಿಹಾಕಿ ಹಸುವಿನ ಹಾಲು ಕರೆಯತೊಡಗಿದಳು. ಅದೇ ಹೊತ್ತಿಗೆ ಗೋಪಾಲ ದೂರದ ಗುಡ್ಡದಲ್ಲಿ ಮೇಯಲು ಕಟ್ಟಿದ್ದ ಇನ್ನೊಂದು ಹಸುವನ್ನೂ ಸಾಗಿಸಿಕೊಂಡು ಬಂದು ಮನೆಯ ಗೇಟು ಪ್ರವೇಶಿಸುತ್ತಿದ್ದ. ಅದನ್ನೆಲ್ಲ ಕಂಡ ನರಹರಿಗೆ ಮನುಷ್ಯನ ಬದುಕಿನಲ್ಲಿ ನೋವು, ಸಂಕಷ್ಟಗಳು ಎದುರಾದರೆ ಮಾತ್ರ ಅವನು ತನ್ನ ಜೀವನವನ್ನು ಆಳವಾಗಿ ಮತ್ತು ಅರ್ಥಪೂರ್ಣವಾಗಿ ಅನುಭವಿಸುತ್ತ ಸಾರ್ಥಕತೆ ಹೊಂದಲು ಸಾಧ್ಯವೇನೋ. ಅಂಥ ಅಡೆತಡೆಗಳನ್ನೆಲ್ಲ ಸ್ವೀಕರಿಸಿ, ಅವೆಲ್ಲವನ್ನೂ ಮೀರಿ ಜೀವಂತಿಕೆಯಿಂದ ಬಾಳುತ್ತಿರುವ ರಾಧಾ ಗೋಪಾಲರ ಜೀವನಪ್ರೀತಿಯನ್ನು ಕಂಡವನು ಅವರ ಮೇಲೆ ಅಭಿಮಾನಪಡುತ್ತ ತನ್ನ ಮನೆಯತ್ತ ನಡೆದ.

ಪರಿಸಮಾಪ್ತಿ


ಗುರುರಾಜ್ ಸನಿಲ್

ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

2 thoughts on “

  1. 22-03-2022 *ಪರಿಸರ ಸಂರಕ್ಷಣೆಯ ಕಥಾನಕವುಳ್ಳ ಈ ಕೃತಿ ಬಹಳ ಮನೋಜ್ಞವಾಗಿತ್ತು. ಒಂದು ಹಾವಿನ ಆಗಮನದಿಂದ ಜನರಲ್ಲೂ, ಸಮಾಜದಲ್ಲೂ, ಪರಿಸರದಲ್ಲೂ ಏನೆಲ್ಲ ಉತ್ಪಾತಗಳು ಸಂಭವಿಸಿ ಎಷ್ಟೆಲ್ಲ ಬದಲಾವಣೆಗಳಿಗೆ ಕಾರಣವಾದವು, ಕೊನೆಯಲ್ಲಿ ಅದಕ್ಕೆಲ್ಲ ಕಾರಣರಾದವರ ಅಂತ್ಯ ಹೇಗಾಯಿತು, ತೀರಾ ಸ್ವಾರ್ಥಕ್ಕಿಳಿದು ಕಪಟವಾಡಿದರೆ ಅದು ತಾತ್ಕಾಲಿಕ ಆನಂದವನ್ನೂ ಆಡಂಬರವನ್ನೂ ತಂದುಕೊಟ್ಟರೂ, ಕೊನೆಯಲ್ಲಿ ಅಶಾಂತಿ, ಅನಾರೋಗ್ಯ ಮತ್ತು ಅವನತಿ ಕಟ್ಟಿಟ್ಟ ಬುತ್ತಿ ಎಂಬುದನ್ನು ಲೇಖಕರು ಒತ್ತಿ ಮನಗಾಣಿಸುವಲ್ಲಿ ಸಫಲರಾಗಿದ್ದಾರೆ.

    ನವಿರಾದ ಹಾಸ್ಯ, ಗಂಭೀರ ವಿಡಂಬನೆ ಮತ್ತು ಸುಲಲಿತ ಕಥನ ಶೈಲಿ ಈ ಕೃತಿಯ ವೈಶಿಷ್ಟ್ಯ. ಲೇಖಕರು ಸ್ವತಹ ಉರಗತಜ್ಞರೂ, ಪರಿಸರ ಸಂರಕ್ಷಣೆಯಲ್ಲಿ ತನ್ನನ್ನು ನಿಸ್ವಾರ್ಥವಾಗಿ ತೊಡಗಿಸಿಕೊಂಡವರೂ ಆಗಿರುವುದರಿಂದ, ಈ ಕಥಾನಕದಲ್ಲಿ ಎಲ್ಲಿಯೂ ಉತ್ಪ್ರೇಕ್ಷೆಯಾಗಲೀ ಕೃತಕತೆಯಾಗಲೀ ಕಂಡು ಬರದೇ, ನಮ್ಮ ಸುತ್ತಮುತ್ತಲೂ ಈಗಲೂ ಅವ್ಯಾಹತವಾಗಿ ನಡೆಯುತ್ತಿರುವ ಮೂಢನಂಬಿಕೆಗಳ ಢಂಬಾಚಾರದ ಅನಾವರಣವಾಗಿದೆ ಎಂದೇ ನನ್ನ ಭಾವನೆ.

    ಸರೀಸೃಪಗಳ ಮತ್ತು ಪರಿಸರದ ಕುರಿತು ತಿಳುವಳಿಕೆಯ ಮಾಲಿಕೆ ತಂದರೂ ಪ್ರಚಾರ ಮಾಡಿದರೂ, ಈ ಅಪಸವ್ಯ ಇನ್ನು ಮುಂದೆಯೂ ಇದೇ ಮಾದರಿ ನಡೆದುಕೊಂಡು ಹೋಗುವುದು ನಿಶ್ಚಿತ. ಅದೇ ರೀತಿ, ‘ಸುಶಿಕ್ಷಿತ’ ಸ್ವಾರ್ಥಿಗಳಿಂದಲೇ ಆಧುನಿಕ ಸವಲತ್ತುಗಳನ್ನು ಮನುಕುಲಕ್ಕೆ ಇನ್ನಷ್ಟು ಒದಗಿಸಿ ಅವರ ಜೀವನವನ್ನು ಸುಖಮಯ ಮಾಡುವ ನೆಪವೊಡ್ಡಿ ಅನಿಯಂತ್ರಿತ ಪ್ರಕೃತಿ ನಾಶವೂ ಖಂಡಿತವೇ. ಆದರೂ ಶ್ರೀಮಾನ್ ಗುರುರಾಜ್ ಸನಿಲ್ ರಂತವರ ಲೇಖನಗಳು, ಪುಸ್ತಕಗಳು ಮಾರ್ಗದುದ್ದಕ್ಕೂ ಬೆಳಕು ಚೆಲ್ಲಲು ಅಲ್ಲಲ್ಲಿ ನಿಲ್ಲಿಸಿದ ಬೀದಿ ದೀಪಗಳಂತೆ ಎಚ್ಚರಿಸುವ ಸಾಧನವಾಗಿರಲಿ ಎಂದು ಹಾರೈಸುತ್ತೇನೆ.

    ನಾನು ಧಾರಾವಾಹಿ ಟೀವಿ ಸೀರಿಯಲ್ ಗಳನ್ನಾಗಲೀ, ಕಾದಂಬರಿಗಳನ್ನಾಗಲೀ ನೋಡುವುದನ್ನು ನಿಲ್ಲಿಸಿ ಕೆಲವು ವರ್ಷಗಳಾಗಿವೆ. ಆದರೆ ಕಳೆದ ಒಂದುವಾರದಿಂದ ‘ಆವರ್ತನ’ವನ್ನು ದಿನಕ್ಕೆ ಐದಾರು ಅಧ್ಯಾಯಗಳಂತೆ ಓದಿ ಮುಗಿಸಿ ಖುಷಿ ಪಟ್ಟಿದ್ದೇನೆ. ನಿಮಗೂ ಮತ್ತು ಲೇಖಕರಿಗೂ ಅನಂತ ವಂದನೆಗಳು.
    -ಬಾರಕೂರು ನಾಗರಾಜ ರಾವ್.

  2. ಪರಿಸರದ ಕಾಳಜಿಯನ್ನು ಉತ್ತಮ ಕಥಾಹಂದರ ದೊಂದಿಗೆ ತಿಳಿಸಿದ ತಮಗೆ ಧನ್ಯವಾದಗಳು ಸರ್…..

Leave a Reply

Back To Top