ಅಂಕಣ ಸಂಗಾತಿ

ಕಾವ್ಯದರ್ಪಣ

ಬೆಳ್ಳಬೆಳ್ಳಗೆ ತೆಳ್ಳತೆಳ್ಳಗಿಹೆನೀನು

ಬೇಟೆಗಾರನ ಬಿಲ್ಲಿನಂತಿರುವೆನಾನು

ಒತ್ತಾಗಿ ಕಪ್ಪಾಗಿ ಬೆಳೆದಿರುವ ಹುಬ್ಬು

ಪಾರಿವಾಳದ ಕಣ್ಗೆ ನೆರಳನಿತ್ತಿಹುದು

ನವಿಲೂರಿನೊಳಗೆಲ್ಲ

     – ಕೆ.ಎಸ್.ನರಸಿಂಹ ಸ್ವಾಮಿ

ಕಾವ್ಯ ಪ್ರವೇಶಿಕೆಯ ಮುನ್ನ

ಪ್ರೀತಿ ಎಂಬ ಪದವು ಕರ್ಣಪಟಲದ ಮೇಲೆ ಬಿದ್ದೊಡನೆ ತನುಮನಗಳು ಪುಳಕಗೊಳ್ಳುತ್ತವೆ. ಹೃದಯದ ಬಡಿತ ಹೆಚ್ಚಾಗಿ ತನಗರಿವಿಲ್ಲದೆ ಪಿಸುಗುಡುತ್ತದೆ. ಮನಸು ಕನವರಿಸುತ್ತದೆ. ಮಧುರಾತಿಮಧುರ ಭಾವಗಳು ಮೇಳೈಸುತ್ತವೆ. ಮನಸ್ಸು ಬಾನಲ್ಲಿ ಬಾನಾಡಿಯಂತೆ ತೇಲುತ್ತದೆ.‌

ಸಲಿಲ ಜಲಧಾರೆಯಾಗಿ ಹರಿಯುತ್ತದೆ. ನಿಷ್ಕಲ್ಮಶವಾದ ಮೌನಗೀತೆಯಾಗಿ ಪ್ರೀತಿ ಹರಿಯುತ್ತದೆ. ಪ್ರೀತಿ ಎಂಬುದೊಂದು ಅಮೂರ್ತವಾದ ಕಲ್ಪನೆಯಾಗಿದ್ದು, ಅನಿರ್ವಚನೀಯ ಭಾವಗಳನ್ನು ಸೃಜಿಸುವ ಒಂದು ಸುಂದರವಾದ ಅನುಭೂತಿಯಾಗಿದೆ. ಪ್ರೀತಿ ಎಂದರೆ ಎರಡು ದೇಹಗಳ ಮಿಲನ ಮಾತ್ರವಲ್ಲ ಎರಡು ಪವಿತ್ರ ಮನಸ್ಸುಗಳ ಸಮ್ಮಿಲನವಾಗಿದೆ. ನಿಷ್ಕಲ್ಮಶ ಮನಗಳ ಭಾವಗಳು ಬೆರೆತಾಗ ಪ್ರೀತಿಯಂಕುರಿಸುತ್ತದೆ.

ಮನಸ್ಸು ಮನಸ್ಸುಗಳ ಮಿಲನವೇ ಪ್ರೀತಿ. ಇದು ಭಾವಗಂಗೆಯಾಗಿ ನಲ್ಲ ನಲ್ಲೆಯರ ಹೃದಯದಲ್ಲಿ ಪ್ರವಾಹವಾಗಿ ಹರಿಯುತ್ತದೆ.

ಪ್ರೀತಿಯೆಂಬುದು ರೋಚಕ ಅನುಭವ, ಅಪೂರ್ವ ಆನಂದ, ಅಪರಿಮಿತ ಅಮಿತೋತ್ಸಾಹ, ಉತ್ಕಟವಾದ ಭಾವ, ಆರಾಧನಾ ಅನುಭೂತಿ, ಭಾವನೆಗಳ ಚೆಲ್ಲಾಟ. ಒಲವಿನಲ್ಲಿ ಬೆರಗಿದೆ, ಬೆಡಗಿದೆ, ಸೊಗಸಿದೆ, ಸವಿಯಿದೆ, ಸಿಹಿಯಿದೆ, ಆರೈಕೆಯಿದೆ, ಸಾಂತ್ವನವಿದೆ, ಓಲೈಕೆಯಿದೆ, ವಿರಹಕ್ಕೆ ಮದ್ದಿದೆ, ಮನಸ್ಸಿಗೆ ಹಿತವಿದೆ, ಮುಗ್ಧತೆಯಿದೆ, ಸಾಧನೆಗೆ ಸ್ಫೂರ್ತಿಯಿದೆ, ಬದುಕಿಗೆ  ಉತ್ಸಾಹವಿದೆ, ಸಾಧನೆಗೆ ಪ್ರೋತ್ಸಾಹವಿದೆ ಒಟ್ಟಾರೆ ಪ್ರೀತಿಯನ್ನು ವರ್ಣಿಸಲು ಪದಗಳಿಗೆ ಅಭಾವ ಕಾಡುತ್ತದೆ.‌ ಒಲವನ್ನು ಒಲವಿನಲಿ ಅನುಭವಿಸಿಯೆ ತಿಳಿಯಬೇಕು. ನಾನು ಹೀಗೇಕೆ ಹೇಳುತ್ತಿರುವೆ ಎಂದು ಅಚ್ಚರಿಯಾಗುತ್ತದೆಯೆ? ಸ್ನೇಹಿತರೆ ನಾನು ನಿಮ್ಮ ಮುಂದೆ ಪ್ರೇಮ ಕವಿತೆಯ ಕಾವ್ಯದ ರಸದೂಟವನ್ನು ಉಣಬಡಿಸಲಿದ್ದೇನೆ ಅದನ್ನು ಸವಿಯಲು ನೀವು‌ ಸಿದ್ಧರಿದ್ದೀರಿ ತಾನೇ ?

ಕವಿ ಪರಿಚಯ

 ಕೊಪ್ಪಳದ ಕವಿಗಳಾದ ಹೆಚ್ಕೆ. ಹನುಮಂತಪ್ಪನವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯದಿಂದ ಇವರ ಚೊಚ್ಚಲ “ಕವನ ಸಂಕಲನ” “ಕಾಡು ಮಲ್ಲಿಗೆ” ಈಗಾಗಲೇ ಕನ್ನಡ ಸಾರಸ್ವತಲೋಕವನ್ನು ಸೇರಿ ಓದುಗರನ್ನೂ ರಂಜಿಸಿದೆ. ಇವರು “ಹುಗ್ಗಿ ಬೀರನ ಲಗ್ಗೆಗಳು” ಶೀರ್ಷಿಕೆಯಡಿಯಲ್ಲಿ ಪ್ರಚಲಿತ ವಿದ್ಯಮಾನಗಳನ್ನು ಕುರಿತು ಬಹಳ ತೀಕ್ಷ್ಣವಾದ ಭಾವಗಳಲ್ಲಿ ಆಧುನಿಕ ವಚನಗಳನ್ನು ರಚಿಸುತ್ತಾ ಸಮಾಜದ ಅಂಕು ಡೊಂಕುಗಳಿಗೆ ಛಾಟಿ ಬೀಸುತ್ತಾ ಜನರನ್ನು ಸರಿ ದಾರಿಯಲ್ಲಿ ಸಾಗುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಇವರು ಸ್ವತಃ ಹಾಡುಗಾರರಾಗಿದ್ದು ಇವರು ರಚಿಸಿದ ಪರಿಸರ ಗೀತೆಗಳು, ಜಾಗೃತಿ ಗೀತೆಗಳು ಮತ್ತು ಫಕೀರೇಶ್ವರನ ಭಕ್ತಿಗೀತೆಗಳನ್ನು ಹಾಡುವ ಮೂಲಕ ಸಂಗೀತ ಪ್ರಿಯರ ಮನಸೂರೆಗೊಂಡಿದ್ದಾರೆ. ಇವರಿಗೆ ಸಾಹಿತ್ಯರತ್ನ ರಾಜ್ಯ ಪ್ರಶಸ್ತಿ, ಸಾಹಿತ್ಯ ಸಿಂಧು ರಾಜ್ಯಪ್ರಶಸ್ತಿ, ಕನ್ನಡ ಕಣ್ಮಣಿ ರಾಜ್ಯ ಪ್ರಶಸ್ತಿಗಳು ಲಭಿಸಿವೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಸಾಹಿತ್ಯ ಪರಿಷತ್ ಕಾರ್ಯಕ್ರಮಗಳಲ್ಲಿ ಭಾಗಿಯಾದ ಖುಷಿ ಇವರದಾಗಿದೆ.

ಈ ಕವಿತೆಯನ್ನು “ಕಾಡು ಮಲ್ಲಿಗೆ” ಕವನ ಸಂಕಲನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.

ಕವಿತೆಯ ಆಶಯ

 ಗಂಡು ಹೆಣ್ಣಿನ ಪ್ರಾಕೃತಿಕ ಆಕರ್ಷಣೆಯಿಂದ ಮೂಡುವ ಭಾವನೆ ಪ್ರೀತಿ. ಈ ಕವಿತೆಯಲ್ಲಿ ಪ್ರೇಮಿಗಳಿಬ್ಬರ ಹುಚ್ಚು ಪ್ರೀತಿ ಅನಾವರಣವಾಗಿದೆ . ಇಲ್ಲಿ ನಲ್ಲನು ಅದ್ಭುತ ರೂಪಕಗಳಲ್ಲಿ ನಲ್ಲೆಯನ್ನು ವರ್ಣಿಸುತ್ತ ಸಾಗಿದ್ದಾನೆ. ಇವರು ಹುಚ್ಚು ಪ್ರೇಮಿಗಳಂತೆ ಪ್ರೀತಿಸುತ್ತಾರೆ ‌ಅಂದರೆ ಭಾವಪರವಶವಾಗಿ ಪ್ರೀತಿಯನ್ನು ಆರಾಧಿಸುತ್ತಾರೆ. ಪ್ರೀತಿ ಎಲ್ಲರಿಗೂ ಪ್ರಿಯವಾಗಬೇಕು ಎಂದು ಆಶಿಸುತ್ತಾರೆ. ಅದನ್ನು ಒಪ್ಪಿ ಹರಸಬೇಕೆಂದು ಆಶಿಸುತ್ತಾರೆ. ಅವರದೆಯಲಿ ಪ್ರಜ್ವಲಿಸುವ ಒಲವ ಜ್ಯೋತಿಯನ್ನು ಕಾಪಾಡಬೇಕಾಗಿದೆ. ಅದು ಕವಿಯನ್ನು ಬಹಳವಾಗಿ ಕಾಡಿದೆ. ಕವಿತೆಯುದ್ದಕ್ಕೂ ಕವಿಯು ಪ್ರಶ್ನೆ ಹಾಕುತ್ತಾ ಪ್ರೀತಿಯನ್ನು ಎಣ್ಣೆ ಹಾಕಿ ಬತ್ತಿ ಹೊಸೆದು ಕಾಲಕಾಲಕ್ಕೆ ಆರದಂತೆ ಕಾಪಾಡುವವರು ಯಾರು ಎಂದು ಚಿಂತಿಸುತ್ತಲೇ ಪ್ರೀತಿಯನ್ನು ಅದ್ಭುತವಾಗಿ ವ್ಯಕ್ತಪಡಿಸುತ್ತಾ ಸಾಗಿದ್ದಾರೆ.

ಕವಿತೆ ಶೀರ್ಷಿಕೆ

ಹುಚ್ಚು ಪ್ರೀತಿ

ಇಲ್ಲಿ ಕವಿಯು ಪ್ರೀತಿಯನ್ನು ಹುಚ್ಚು ಎನ್ನುವ ಮೂಲಕ ಪ್ರೇಮಿಗಳಿಬ್ಬರು ಹುಚ್ಚರಂತೆ ಪ್ರೀತಿಸುತ್ತಾರೆ. ಅಂದರೆ ಅವರು ಪ್ರೀತಿಯಲ್ಲಿ ಜಗವನ್ನು ಮರೆತು ನಿಷ್ಕಲ್ಮಶ ಮನದಿಂದ ಆರಾಧಿಸುತ್ತಾರೆ. ಇದಕ್ಕೆ ಅಡೆತಡೆಗಳು ಅನೇಕ. ಅವುಗಳೆಲ್ಲವನ್ನು ಮೀರಿದ್ದು  ಈ ಪ್ರೀತಿ.‌ ಪ್ರೇಮ ಲೋಕದಲ್ಲಿ ಪ್ರೇಮಿಗಳು ಹೇಗೆ ವಿಹರಿಸುತ್ತಾರೆ ಎಂಬುದನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರೇಮಿಗಳ ಹೃದಯದ ಪಿಸುಮಾತುಗಳೇ ಈ‌ ಹುಚ್ಚು ಪ್ರೀತಿಯಾಗಿದೆ.

ಕವಿತೆಯ ವಿಶ್ಲೇಷಣೆ

“ಹುಚ್ಚು ಪ್ರೀತಿ”

ಹುಚ್ಚಿಯಾಗಿಹೆ ನೀನು ಹುಚ್ಚನಾಗಿಹೆ ನಾನು

 ಮೆಚ್ಚಿದ ಹುಚ್ಚ ದೀಪವನ್ನು ಹಚ್ಚಿ

 ನೆಚ್ಚಿ ಅಚ್ಚಾಗುವಂತೆ ಹಚ್ಚುವವರು ಯಾರು?

 ಅಚ್ಚಳಿಯದಂತೆ

ಇಲ್ಲಿ ಪ್ರೇಮಿಗಳಿಬ್ಬರ ಪ್ರೀತಿಯ ಸಂಭಾಷಣೆಯ ಸಾಲುಗಳು ಬಹಳ ತೀವ್ರ ಭಾವದಲ್ಲಿ ಮೂಡಿಬಂದಿವೆ. ಹುಚ್ಚಿಯಾಗಿಹೆ‌ ನೀನು, ಹುಚ್ಚನಾಗಿಹೆ ನಾನು ಎನ್ನುವ ಪದಗಳು ಪ್ರೀತಿಯು ಹುಚ್ಚು ಎಂಬುದನ್ನು ಸಾಬೀತುಪಡಿಸುತ್ತದೆ

ಪ್ರೀತಿಯನ್ನು ‌ದೀಪಕ್ಕೆ ಹೋಲಿಸಿದ್ದಾರೆ.ಅವರಿಬ್ಬರ ಹೃದಯದಿಂದ ‌ಪ್ರೀತಿಯ ನಾದ ಹೊಮ್ಮಿಸುವ ಪಿಸುಧ್ವನಿ ಇದಾಗಿದೆ.ಯಾರಿಗೂ ಅರಿವಾಗದಂತೆ ಕಣ್ಣೋಟದಿಂದಲೇ ತನ್ನೆಲ್ಲ ಭಾವಗಳನ್ನು, ಆಸೆಗಳನ್ನು ವಿನಿಮಯ ಮಾಡಿಕೊಳ್ಳುವ ಮಾಧ್ಯಮವೇ ಪ್ರೀತಿಯಾಗಿದೆ.

ಇಲ್ಲಿ ಪ್ರೇಮಿಗಳು ತಮ್ಮ ಪ್ರೀತಿಯ ಹುಚ್ಚನ್ನು ದೀಪವಾಗಿಸಿ ಹಚ್ಚಲು ಬಯಸುತ್ತಾರೆ. ಪ್ರೀತಿ ಎಂಬುದು ಬಾಳನ್ನು ಬೆಳಗುವ ಪ್ರಭೆಯಿದ್ದಂತೆ.ಅದಿಲ್ಲದ ಬದುಕು ಕಾರ್ಗತ್ತಲ‌ ಕೂಪದಂತೆ, ಗ್ರಹತಾರೆಗಳು ಇಲ್ಲದ ಬರಡು ಬಾನಿನಂತೆ. ಇಲ್ಲಿ ನಂಬಿಕೆ ವಿಶ್ವಾಸ ಎಂಬ ಎಣ್ಣೆಯನ್ನು ಹಾಕಿ, ಹೊಂದಾಣಿಕೆ ಸಾಮರಸ್ಯದ ಬತ್ತಿಯನ್ನು ಹೊಸೆದು ಒಲವ ಜ್ಯೋತಿಯ ಬೆಳಗಲು ಪ್ರೇಮಿಗಳಿಬ್ಬರು ಉತ್ಸುಕರಾಗಿದ್ದಾರೆ. ಆದರೆ ಅವರನ್ನು ಕಾಡುತ್ತಿರುವ ಪ್ರಶ್ನೆ ನೆಚ್ಚಿ ಅಚ್ಚಾಗುವಂತೆ‌ ಅಂದರೆ ಎಲ್ಲರಿಗೂ ಇಷ್ಟವಾಗುವಂತೆ ಏನೇ ತೊಂದರೆ ತೊಡಕುಗಳು ಬಂದರೂ, ಕಷ್ಟಗಳೆಂಬ ಬಿರುಗಾಳಿಗೆ ಸಿಲುಕಿದರೂ ಆರದಂತೆ ಉರಿಯುವ ನಿತ್ಯ ‌ದೀಪ್ತಿಯನ್ನು  ಬೆಳಗುವವರು ಯಾರು ಎಂಬ ಕುತೂಹಲಕಾರಿ ಪ್ರಶ್ನೆ ಕವಿಯ ಲೇಖನಿಯಿಂದ ಮೂಡಿದೆ.

“ತಂಗಾಳಿಯೊಳಗೆ ತೇಲುತಿರುವೆ ನೀನು

 ಬಿರುಗಾಳಿಯೊಳು ಹುದುಗಿರುವೆ ನಾನು

 ಹಾಗಿದ್ದರೆ ಹೃದಯಂಗಳದಿ ಬಿಂಬವು ನೀಡಿ

 ಬೆಳಕಿನ ಅಲೆ ಅಲುಗಾಡದಂತೆ ಕಾಪಾಡಿ

ಆ ದೀಪವನ್ನು ಹಚ್ಚಿ ಮೆಚ್ಚುವವರು ಯಾರು

 ಅಳಿಸಿ ಹೋಗದಂತೆ.”

ಪ್ರೀತಿಯ ತಂಗಾಳಿ ನಲ್ಲೆಯ ತನುಮನಗಳಿಗೆ ಹಿತ ಸ್ಪರ್ಶ ನೀಡಿದೆ. ಅದರೊಳು ಸಹಸ್ರ ಕನಸುಗಳನ್ನು ಹೊತ್ತು ಆಗಸದಲ್ಲಿ ತೇಲುತಿದ್ದಾರೆ ಆದರೆ ನಲ್ಲನು ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿದ್ದಾನೆ ಅಂದರೆ ಕಷ್ಟಗಳೊಳಗೆ ಬಂಧಿಯಾಗಿದ್ದಾನೆ. ಅವುಗಳಿಂದ ಮುಕ್ತಿ ಪಡೆಯಬೇಕಾಗಿದೆ. ಪ್ರೀತಿಗಿಲ್ಲಿ‌ ನೆಲೆ ಇಲ್ಲವಾಗಿದೆ ಎನ್ನುವ ಕವಿಯು ಪ್ರೀತಿಯ ಅರಮನೆಯೆಂದರೆ ಎಂದರೆ ಹೃದಯದಂಗಳ.ಅಲ್ಲಿ ಪ್ರತಿರೂಪವನ್ನು ಇಟ್ಟು ಬೆಳಕಿನ ಕಿರಣ ಅಲುಗಾಡದಂತೆ ಪ್ರೀತಿಯ ದೀಪವನ್ನು ಇಷ್ಟ ಪಟ್ಟು ಒಪ್ಪಿ ಕಾಪಾಡುವವರು ಯಾರು ಎಂದು ಆ ಮೂಲಕ ಪ್ರೀತಿಗೆ ಶತ್ರುಗಳಿದ್ದಾರೆ. ಅದನ್ನ  ಒಪ್ಪಿಕೊಳ್ಳುವಂತಹ ಮನಸ್ಸುಗಳು ಸೃಷ್ಟಿಯಾಗಬೇಕು ಎಂಬುದು ಕವಿಯ ಭಾವವಾಗಿದೆ.

ಮೀನುಗಾರನ ಬಲೆಯೊಳಗಿರುವ ಮತ್ಯ ನೀನು

 ಬರಣಿಯೊಳಗಡೆಧರಣಿ ನೋಡದ ನಾನು

 ಹಾಗಿದ್ದರೆ ಮನದಂಗಳದಿ ಹುಡುಕಾಡಿ

 ಬೆಳ್ಳಿಯ ಬೆಳಕ ನೀಡಿ

  ಹುಚ್ಚು ದೀಪವನ್ನು ಮಿಂಚುಹುಳಿಂದ

 ಕಾಯುವವರು ಯಾರು

ಪ್ರಿಯತಮೆಯನ್ನು ಮತ್ಸ್ಯ ಕನ್ಯೆಗೆ ಹೋಲಿಸಲಾಗಿದೆ

 ಅವಳು ಮೀನುಗಾರ ಬೀಸಿದ ಬಲೆಯೊಳಗೆ ಬಂಧಿಯಾಗಿದ್ದಾಳೆ. ಅಂದರೆ ಸಮಾಜದ ಕಟ್ಟು ಪಾಡುಗಳಲ್ಲಿ ಸಿಲುಕಿದ್ದಾಳೆ.

ಅವು ಅವಳ ಪ್ರೀತಿಯನ್ನು ‌ಒಪ್ಪಿಕೊಳ್ಳುತಿಲ್ಲ. ಅದರಿಂದ ಹೊರಬರಲಾಗದೆ ಪರಿತಪಿಸುತ್ತಾಳೆ.ಪ್ರಿಯತಮನದು ಬೇರೆಯೇ ಕತೆಯಾಗಿದೆ. ಭರಣಿ ಒಳಗಡೆ ಧರಣಿ ನೋಡದ ಮೀನು ಇವನಾಗಿದ್ದಾನೆ. ಅಂದರೆ ಸಮಾಜದ ಇನ್ನೊಂದು ಕ್ರೂರ ಮುಖವನ್ನೇ ಕಾಣದ ಅಮಾಯಕ ಇವರಿಬ್ಬರ ನಡುವೆ ಪ್ರೀತಿಯಂಕುರಿಸಿದೆ. ಹಾಗಿದ್ದಾಗ ಇವರಿಬ್ಬರ ಮನಸ್ಸನ್ನು ಅರಿತು ಪ್ರಜ್ವಲಿಸುವ ಒಲವ ಜ್ಯೋತಿಯನ್ನು ಕಾಯಬೇಕು. ಇಲ್ಲಿ ಮಿಂಚುಹುಳು ಎಂಬ ರೂಪಕ ಇರುವ ಶತ್ರುಗಳಾಗಿದ್ದರೆ ಪ್ರೀತಿಯೆಂಬ ಹಣತೆಯನ್ನು ನಂದಿಸಲು ಶತ್ರುಗಳು ಕಾಯುತ್ತಿರುತ್ತಾರೆ. ಅಂತಹ ಸಮಯದಲ್ಲಿ ಹುಚ್ಚು ಪ್ರೀತಿಯ ದೀಪವನ್ನು ಕಿಚ್ಚಿನಿಂದ ಕಾಪಾಡುವವರು ಯಾರು ಎಂದು ಕವಿಮನ ರೋಧಿಸುತ್ತದೆ.

ಇರುಳ ಮಬ್ಬಿನಲ್ಲಿ ಅರಳುವ ಕಾಡು ಮಲ್ಲಿಗೆಯಾಗಿಹೆ ನೀನು

 ಹುಚ್ಚು ಮಲ್ಲಿಗೆ ಹುಡುಕುವ ಬೇಡನಾಗಿಹೆ ನಾನು

 ಹಾಗಿದ್ದರೆ ನೋಟದ ಅಂಗಳದಲ್ಲಿ ಹುಡುಕಾಡಿ

 ಗಾಳಿ ಸೋಕದಂತೆ ಕೋಲ್ಮಿಂಚಿನ ಬೆಳಕ ನೀಡಿ

  ಹುಚ್ಚು ದೀಪವನ್ನು ಮಳೆ ಗಾಳಿಯಿಂದ ಕಾಪಾಡುವವರು ಯಾರು

ಇರುಳೆಂದರೆ ಕತ್ತಲೆಯ ಕೂಪ. ಅದರಲ್ಲೂ ಕಾಡೆಂದರೆ ಕಗ್ಗತ್ತಲು. ಬೆಳಕೆ ಕಾಣದ ಗಿಡ ಮರಗಳ ನಡುವೆ ಹುಣ್ಣಿಮೆ ಬೆಳಕಾಗಿರುವ ಮಲ್ಲಿಗೆ ಕಾಡಿನ ತುಂಬಾ ಸುಗಂಧ ಸೂಸುತ್ತಾ ಚೆಲುವನ್ನು ಹೆಚ್ಚಿಸಿದೆ. ಅಂದರೆ ಇಲ್ಲಿ ಗೆಳತಿಯ ನಿಸ್ಸಾರ ತುಂಬಿದ ಬದುಕಿನಲ್ಲಿ ಪ್ರೀತಿಯ ಹೊಂಗಿರಣ ಸೂಸುತ್ತ ಬಾಳು ಬೆಳಗುವಳು ಎಂಬ ಅಭಿಮಾನದ ಮಾತುಗಳಿಗೆ ಮೂಡಿರುವ ರೂಪಕಗಳಿವು.

ಹುಚ್ಚು ಮಲ್ಲಿಗೆಯನ್ನು ಹುಡುಕುತ್ತಾ ಕಾಡಿಗೆ ಬೇಡನಾಗಿ ಪ್ರಿಯತಮ ಬಂದಿದ್ದಾನೆ. ಅಂದರೆ ದುಂಬಿಯಾಗಿ ಮಲ್ಲಿಗೆಯನರಸಿ ಬಂದಿದ್ದಾನೆ. ಅವಳನ್ನು ಕಣ್ಣೋಟದಿಂದ ಹುಡುಕುವ‌ ನಲ್ಲ ಅವಳಿಗೆ ಗಾಳಿ ಸೋಕಿದಂತೆ, ತೊಂದರೆಯಾಗದಂತೆ ಕೋಲ್ಮಿಂಚಿನ ಬೆಳಕನ್ನು ನೀಡಿ ಮಳೆಗಾಳಿಗೆ ಸೋಕದಂತೆ ಕಾಪಾಡುವವರು ಯಾರು ಎಂಬ ತತ್ವವನ್ನು ಮುಂದಿಟ್ಟಿದ್ದಾರೆ.

ಬಿಟ್ಟು ಬಿಡದೆ ಸುರಿವ ಸ್ವಾತಿ ಮಳೆಯಾಗಿಹೆ  ನೀನು

 ಮುಂಜಾನೆಯ ಇಬ್ಬನಿಯಾಗಿ ಕರಗುತ್ತಿರುವೆ ನಾನು

 ಹಾಗಿದ್ದರೆ ಮತ್ತನಲ್ಲಿ ಹಚ್ಚಿದ

  ಮುತ್ತಿನ ದೀಪವನ್ನು ಹೊತ್ತಿಸಿ

 ಕಾಯುವವರು ಯಾರು

ಸ್ವಾತಿ ಮಳೆ ಪ್ರೇಮಿಗಳಿಗೆ ಬಹಳ ಪ್ರಿಯ.ಬಿಡದೆ ಸುರಿವ ತುಂತುರು ಮಳೆಯಲ್ಲಿ ತೋಯುತ್ತಾ, ಒದ್ದೆ ಮೈಯಲ್ಲಿ ಪ್ರೀತಿಯ ಹೆಜ್ಜೆ ಹಾಕುತ್ತಾ, ನಲಿಯುವ ಕ್ಷಣಗಳೇ ಮಧುರ. ಅಂತಹ‌ ಸುಂದರ ಅನುಭೂತಿ ನೀಡುವ ಸ್ವಾತಿ ಮಳೆಯಾಗಿ ಗೆಳತಿ ಕಾವ್ಯದಲ್ಲಿ ಕಾಣಿಸಿಕೊಂಡಿದ್ದಾಳೆ. ಇವನು ಮುಂಜಾನೆಯ ಇಬ್ಬನಿ ಯಾಗಿದ್ದಾನೆ. ಮುಂಜಾನೆಯ ಮಂಜು ಸೂರ್ಯನ ಆಗಮನದೊಂದಿಗೆ ಕರಗಿ ನೀರಾಗಿ ಹರಿವಂತೆ ಅವಳ ಪವಿತ್ರ ಪ್ರೀತಿಗೆ ಸೋತು ಅವಳಲ್ಲಿ ಭಾವಪರವಶನಾಗಿದ್ದಾನೆ .‌ಇವರಿಬ್ಬರು ಪ್ರೀತಿಯ ನಿಶೆಯಲ್ಲಿ‌ okತೇಲುತಿದ್ದಾರೆ. ಮತ್ತಿನಲಿ ಹಚ್ಚಿದ  ಮುತ್ತಿನ ದೀಪ ಎಂಬ ರಮ್ಯಾ ಸಾಲುಗಳು ಓದುಗರಿಗೆ ಮತ್ತನ್ನು ಏರಿಸುತ್ತವೆ. ಆ ಮತ್ತಿನಲ್ಲಿ ಹಚ್ಚಿರುವ ದೀಪವನ್ನು ಜೀವಮಾನವೆಲ್ಲ ಹೊತ್ತು ಪೊರೆವವರು ಯಾರು ಎಂಬ ತಾತ್ವಿಕ ಮತ್ತು ಅಧ್ಯಾತ್ಮಿಕ ಸ್ಪರ್ಶದ ಪ್ರಶ್ನೆ ಹಾಕುತ್ತಾ ಸಾಗಿದ್ದಾರೆ.

ಕವಿತೆಯಲ್ಲಿ ನಾ ಕಂಡ ಕವಿ ಭಾವ

ಎಚ್ಕೆ. ಹನುಮಂತಪ್ಪನವರು ಸೊಗಸಾದ ರೂಪಕಗಳನ್ನು ಪ್ರತಿಮೆಗಳನ್ನು ಬಳಸಿ ಕಾವ್ಯ ಹೆಣೆಯುವಲ್ಲಿ ನಿಷ್ಣಾತರಾಗಿದ್ದಾರೆ. ಅವರ ಕಾವ್ಯಾಭಿವ್ಯಕ್ತಿಯು ಓದುಗರನ್ನು ಕಳೆದು ಹೋಗುವಂತೆ ಮಾಡುತ್ತದೆ. ಅವರ ಕವನದ ಸಾಲುಗಳು ಕಾಡುವುದರ ಜೊತೆಗೆ ಎದೆಯಲ್ಲಿ ತರಂಗಗಳಾಗಿ ಪ್ರತಿಧ್ವನಿಸುತ್ತಿರುತ್ತವೆ. ಮಾರ್ಮಿಕ ಶೈಲಿಯಲ್ಲಿ ‌ಪರಿಮಿತ ಶಬ್ದಗಳಲ್ಲಿ ಅಗಾಧವಾದ ಅರ್ಥವನ್ನು, ಭಾವವನ್ನು ತುಂಬಿಕೊಡುವುದೆ ಅವರ ಲೇಖನಿಯ ಪ್ರಬಲವಾದ ಶಕ್ತಿಯಾಗಿದೆ. ಅಲ್ಲಲ್ಲಿ ಬಳಸುವ ಉತ್ತರ ‌ಕರ್ನಾಟಕದ ಜವಾರಿ ಶಬ್ದಗಳು ಓದುಗರಿಗೆ ಹೆಚ್ಚು ಆಪ್ಯಾಯಮಾನವಾಗಿವೆ.

ಇವರ ಕಾವ್ಯದಲ್ಲಿ ರಮ್ಯತೆ ಮತ್ತು ರಸಾನುಭವದ ಅನುಭೂತಿ ಇದೆ. ಸತ್ವಯುತವಾದ ಸಾಹಿತ್ಯ ಸದಾ ಓದುಗರನ್ನು ತನ್ನತ್ತ ಸೆಳೆಯುತ್ತಿರುತ್ತದೆ. ಅಂತಹ ಆಕರ್ಷಣೆ ಇವರ ಕವನದಲ್ಲಿದೆ. ಲಯಬದ್ದ ಸಾಲುಗಳು ಕಾವ್ಯದ ಮೆರುಗನ್ನು ಮತ್ತಷ್ಟು ‌ಸಾಣೆ ಹಿಡಿದಿವೆ. ಕಾವ್ಯದಲ್ಲಿ ಸುಕುಮಾರ ಭಾವಗಳು, ಪ್ರೀತಿಯನ್ನು ಅಕ್ಷರಗಳಲ್ಲಿ ಬಂಧಿಸಿ ಶಬ್ದ ತರಂಗಗಳಾಗಿ ಕಾವ್ಯದ ತುಂಬಾ ಪ್ರತಿಧ್ವನಿಸಿವೆ.

ಇವರ ಕವಿತೆಯಲ್ಲಿ ಪ್ರೀತಿಯ ತುಡಿತವಿದೆ. ಪ್ರೀತಿಯನ್ನು ದೈವದಂತೆ ಆರಾಧಿಸುವ ಕವಿಯು ಭಾವತೀವ್ರತೆ ಒಳಗಾಗಿ ಸುಮಧುರವಾದ ಭಾವದೊನಲಿನ ಪ್ರೇಮ ಲಹರಿಯನ್ನು ಹರಿಸಿದ್ದಾರೆ. ಭಾವಗಂಗೆ ಪ್ರೇಮ‌ಗಂಗೆಯಾಗಿ ನಲ್ಲೆಯೊಂದಿಗಿನ ಆತ್ಮಸಂಧಾನದ ರೂಪದಲ್ಲಿ ಮೂಡಿಬಂದಿದೆ. ಪ್ರೇಮಿಗಳಿಗೆ ತಮ್ಮ ಪ್ರೀತಿಯನ್ನು ಕಾಪಾಡಲು ಆರಾಧನಾ ಭಾವವಿದೆ. ಹಾಗೆಯೇ ಪ್ರೀತಿಯನ್ನು ಕೊಲ್ಲುವ ಶತ್ರುಗಳ ಬಗ್ಗೆ ಆತಂಕವಿದೆ.

ಇಲ್ಲಿ ಕವಿಯು ತನ್ನ ಕವಿತೆ ಉದ್ದಕ್ಕೂ ತಮ್ಮ ಅನುಪಮ ಪ್ರೇಮಾಲಾಪನೆಯನ್ನು ಅನುರಾಗದ ಹರಿಗೋಲಲ್ಲಿ ತೇಲಿಸುತ್ತಾ, ಅನುರೂಪದ ಜೋಡಿಯಾಗಿ, ಪ್ರೇಮ ಲೋಕದ ಪ್ರಣಯ ಪಕ್ಷಿಗಳಾಗಿ ವಿಹರಿಸುತ್ತಾ‌ ಸಾಗುತ್ತಿರುವ  ಜೊತೆ ಜೊತೆಗೆ ಪ್ರೀತಿಯ ದಾರಿಯಲ್ಲಿರುವ ಮುಳ್ಳುಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ಅವುಗಳಿಂದ ಒಲವನ್ನು‌ ಪಹರೆ ಕಾಯುವವರು ಯಾರು ಎಂದು ಆತಂಕ ವ್ಯಕ್ತಪಡಿಸುತ್ತಾ ತಾತ್ವಿಕವಾಗಿ ಪ್ರಶ್ನೆಯೊಂದನ್ನು ಕೇಳುತ್ತಾ ಸಾಗಿದ್ದಾರೆ. ಅಪಾರವಾದ ಒಲವನ್ನು ಸಂವೇದನಾಶೀಲವಾಗಿ  ಸಂಭ್ರಮಿಸುತ್ತಾ, ತಕ್ಷಣವೇ ಪ್ರೇಮಿಗಳ ವಿರೋಧಿಗಳನ್ನು ನೆನೆದು ಮೌನ ಮೂರ್ತಿಯಾಗಿ ತಾರ್ಕಿಕವಾದ ಚಿಂತನೆಯನ್ನು ಹುಟ್ಟುಹಾಕುತ್ತಾ ಸಾಗಿದ್ದಾರೆ. ಒಟ್ಟಿನಲ್ಲಿ ಒಲವನ್ನು ಒಲವಿನಿಂದಲೇ ಓಲೈಸುತ್ತಾ ಪೋಷಿಸುತ್ತಾ ಕಾವ್ಯಾಸಕ್ತರಿಗೆ ರಸದೌತಣವನ್ನು ಉಣಬಡಿಸಿದ್ದಾರೆ.

ಸ್ನೇಹಿತರೆ ಈ ಕವಿತೆ ನಿಮಗೆಲ್ಲಾ ಇಷ್ಟವಾಗಿದೆ ಎಂದು ಭಾವಿಸುತ್ತೇನೆ. ನಾನು ಮುಂದಿನವಾರ ಮತ್ತೊಬ್ಬ ಕವಿಯ ಕವಿಕಾವ್ಯದೊಂದಿಗೆ ಹಾಜರಾಗುವೆ . ವಿಭಿನ್ನ ಹಾಗೂ ವೈವಿಧ್ಯಮಯ ಕಾವ್ಯವಸ್ತುವನ್ನು  ನಿಮ್ಮ ಮುಂದೆ ತರಲಿದ್ದೇನೆ. ಅಲ್ಲಿಯವರೆಗೂ ನಿಮ್ಮೆಲ್ಲರಿಗೂ ನಮಸ್ಕಾರ. ನಿಮ್ಮ ಓದಿನ ನಿರೀಕ್ಷೆಯಲ್ಲಿ ನಾನು ಬರೆಯಲು ಉತ್ಸುಕಳಾಗಿದ್ದೇನೆ. ಧನ್ಯವಾದಗಳು


ಅನುಸೂಯ ಯತೀಶ್

ಅನುಸೂಯ ಯತೀಶ್ ಇವರು ನೆಲಮಂಗಲದ ನಿವಾಸಿ. ಸ್ನಾತಕೋತ್ತರ ಪದವೀಧರೆಯಾದ ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ

Leave a Reply

Back To Top