ಕಾವ್ಯ ಸಂಗಾತಿ
ಸ್ಮಿತಾ ರಾಘವೇಂದ್ರ ಎರಡು ಕವಿತೆಗಳು
ಪೊರೆ ಕಳಚಿದಮೇಲೂ
ಸುಮ್ಮನೇ ಎದುರು ಬದುರೇ ಇರಬೇಕು
ಅಂದು ಕೊಳ್ಳುತ್ತೀವಲ್ಲ
ಅದೆಷ್ಟು ಬಾಲಿಶ ಅನ್ನಿಸುವುದು
ಈಗೀಗ.
ಜನ್ಮ ಜನ್ಮಗಳ ನಂಟು ಬೆಸುಗೆ
ಋಣ ಇವೆಲ್ಲ
ಪ್ರೇಮದ ಉಟ್ಕಟತೆಯ ಸುಳ್ಳಿನಲ್ಲಿ
ಸ್ಫುರಿಸುವ ಮುಮ್ಮೇಳದ
ವೈಭವವಾ!
ಜಡಕಾಗಿ ಸುತ್ತಿಕೊಂಡ ದಾರದ-
ಉಂಡೆಯಿಂದ ಹೊರಬಿದ್ದ ದಾರದ ತುಂಡು ತುದಿಯೋ ಮೊದಲೋ
ಅರ್ಥವಾಗುವುದಿಲ್ಲ.
ಬಿಡಿಸುವ ವ್ಯವದಾನ ತದನಂತರ ಉಳಿಯುವುದಿಲ್ಲ.
ಜೀಕುವ ಕಲೆಯ ಮರೆತು
ಯಾಕಾದರೂ ಕಟ್ಟಿಕೊಳ್ಳಬೇಕು
ಹಗ್ಗ-
ತುಂಡಾಗುವ ಭಯನ್ನೂ ಮೀರಿ
ಈಗದು ಹಗ್ಗ ಜಗ್ಗಾಟ.
ಪ್ರೇಮದ ತುತ್ತ ತುದಿಯನ್ನೂ
ತಳವನ್ನೂ ಮುಟ್ಟಿದ ಮೇಲೆಯೇ
ಅನ್ನಿಸುವುದು
ಪ್ರೀತಿಗೆ ಉತ್ಕಟತೆ ಎನ್ನುವುದು
ಇಲ್ಲವೇ ಇಲ್ಲ-
ಯಾರೂ ತಲುಪಿಯೂ ಇಲ್ಲ
ಇದುವರೆಗೂ ಎಂದು.
ಕೊನೆಗೊಮ್ಮೆ ಅರ್ಥವಾಗುವುದು
ಪ್ರೇಮವೆನ್ನುವುದು ಪೊರೆ ಕಳಚಿದ ಮೇಲೂ ಹಾವಾಗಿಯೇ ಇರುವ
ಒಂದು ಗತಿ ಅಷ್ಟೇ.
************
ಏನನ್ನೂ ಉಳಿಸುವುದಿಲ್ಲ
ಇಳಿದ ಮೇಲೆ ರಣರಂಗ
ಪ್ರತಿಷ್ಠೆಯ ಕಣ
ಒಂದಕ್ಕೆ ಎರಡು ಎರಡಕ್ಕೆ ನಾಲ್ಕು
ಹರಿವ ನೆತ್ತರಿನಲಿ
ಇನ್ನಷ್ಟು ಉಗ್ರಗೊಳ್ಳುವ
ಪಿಪಾಸುತನ.
ಕಿಮ್ಮತ್ತಿಲ್ಲ ಉಸಿರು ಬೇಡುವವನಿಗೆ
ಯುದ್ಧಭೂಮಿಯಲ್ಲಿ.
ಯುದ್ಧವೆಂದಾಗಲೆಲ್ಲ
ಮೊದಲು ಎದುರಾಗುವುದು
ಒಂದು ಅನಾಥ ಮಗು,ಅಸಹಾಯಕ ಹೆಣ್ಣು
ಅಪಾರ ವಿಶ್ವಾಸದಲಿ ಅರಿವಿಲ್ಲದೇ ಹೊರಟ
ಅಮಾಯಕ ಮುಖ.
ಆಕ್ರಮಣಗಳು ಇಂದು ನಿನ್ನೆಯದಲ್ಲ,
ಎಂತೆಂಥಾ ಘೋರ ಕದನಗಳು
ಸಂಬಂಧವೇ ಇಲ್ಲದವರ ತಲೆಗಳ
ಹೋಳಾಗಿಸಿ
ಹೊಸ ಅರಸೊತ್ತಿಗೆಯ ದಾಹ.
ಇಡಿ ಇಡಿಯಾಗಿದ್ದುದೆಲ್ಲ
ಬಿಡಿ ಬಿಡಿ ಯಾಗಿ
ಯಾರೋ, ಯಾರನ್ನೋ ಕಬಳಿಸಿ
ಅಳಿದುಳಿದವರು ದಿಕ್ಕಾಪಾಲಾಗುವ
ಮೂಕ ಮರ್ಮರ
ಮಂತ್ರವಾಗಿಯೇ ಉಳಿದು ಹೋದ
ಶಾಂತಿ
ಬದುಕಿನ ಅಶಾಂತಿ
ಯಾರು ಯಾರಲ್ಲಿ ಬೇಡುವುದು
ಬದುಕು
ಅಪ್ಪಾ ಯದ್ಧವೇಕೆ ಮಾಡುತ್ತಾರೆ!
ಉತ್ತರಿಸಲಾಗದೆ ತಣ್ಣಗೆ ಮಲಗಿದ ದೇಹ.
ಪ್ರೀತಿ ,ನಂಬಿಕೆ,ಒಲವು ಚೆಲುವು
ಏನನ್ನೂ ಉಳಿಸುವುದಿಲ್ಲ ಯುದ್ಧ
ಸ್ಮಿತಾ ರಾಘವೇಂದ್ರ