ಅಂಕಣ ಬರಹ

“ಕಾವ್ಯದರ್ಪಣ”

ಜಲಗಣ್ಣಿ

ನನ್ನೆಲ್ಲಾ ಸಹೃದಯ ಓದುಗ ಮಿತ್ರರಿಗೆ ಅನುಸೂಯ ಯತೀಶ್ ಮಾಡುವ ನಮಸ್ಕಾರಗಳು.

ಅವ್ವ

 ನನ್ನವ್ವ ಫಲವತ್ತಾದ ಕಪ್ಪು ನೆಲ

 ಅಲ್ಲಿ ಹಸಿರು ಪತ್ರದ ಹರವು

 ಬಿಳಿಯ ಹೂ ಹಬ್ಬ

 ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು

 ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;;

 ಹೊತ್ತ ಬುಟ್ಟಿಯ ಇಟ್ಟು ನರಳಿ

 ಎವೆ ಮುಚ್ಚಿದಳು ತೆರೆಯದಂತೆ

ಪಿ.ಲಂಕೇಶ್

ಕಾವ್ಯ ಪ್ರವೇಶಿಕೆಯ ಮುನ್ನ

 “ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ”    

 ಈ ನಾಣ್ನುಡಿಗೆ ಎಂತಹ ತರ್ಕಬದ್ಧತೆಯು ಬುಡಮೇಲಾಗುತ್ತದೆ… ಜಗತ್ತಿನ ಅದ್ಭುತ ಸೃಷ್ಟಿಗಳಲ್ಲೊಂದು ಅಮ್ಮ. ಇವಳು ಬೆಲೆ ಕಟ್ಟಲಾರದ ಅಮೂಲ್ಯ ಆಸ್ತಿ, ಮಮತೆಯ ಮಡಿಲು, ಪ್ರೀತಿಯ ಸಾಕಾರಮೂರ್ತಿ, ಪ್ರೀತಿಗೆ ಕೊನೆಯಿಲ್ಲ, ಅವಳಿಲ್ಲದೆ ಮಕ್ಕಳಿಗೆ ಬದುಕಿಲ್ಲ. ಅವಳ ಮನಸ್ಸು ಸಮುದ್ರದಂತೆ ಆಳ, ಆಗಸದಂತೆ ವಿಶಾಲ, ಭೂ ತಾಯಿಯಂತೆ ತಾಳ್ಮೆ. ಅಮ್ಮನದು ಕಪಟವರಿಯದ ಸ್ವಾರ್ಥರಹಿತ ನಿಷ್ಕಲ್ಮಶ ಪ್ರೇಮ. ಅವಳ ಅಕ್ಕರೆಯು ಅನನ್ಯ, ತನ್ನ ಕರುಳ ಕುಡಿಗಾಗಿ ಬಾಳ ತೇಯ್ಯುವ ಶ್ರೀಗಂಧ. ತನ್ನೆಲ್ಲ ನೋವುಗಳನ್ನು ತುಟಿಕಚ್ಚಿ, ಬಿಗಿದಪ್ಪಿ ಕರುಳಕುಡಿಗಳಿಗೆ ಜೀವತುಂಬಿ, ಭಾವತುಂಬಿ ಅವರನ್ನು ಸಾಧನೆಯ ಉತ್ತುಂಗ ಶಿಖರಕ್ಕೆ ಏರಿಸುವ ಕಣ್ಣೆದುರಿಗಿರುವ ನೈಜ ದೇವತೆ ತಾಯಿ. ಅಮ್ಮನ ಪ್ರೀತಿ, ಪ್ರೇಮ, ವಾತ್ಸಲ್ಯ, ತ್ಯಾಗಗಳನ್ನು ಅಳೆಯಲು ಯಾವುದೇ ಸಾಧನ ಮಾಪನಗಳಿಲ್ಲ. ಬದುಕಿನಲ್ಲಿ ಧಾವಿಸುವ ಕಷ್ಟ ಕಾರ್ಪಣ್ಯಗಳನ್ನು ಸಮಚಿತ್ತದಿಂದ ಎದುರಿಸುವ ಕಲೆಯನ್ನು ಕರಗತ ಮಾಡಿಕೊಂಡವಳು ತಾಯಿ.ಮಕ್ಕಳು ಸೋತಾಗ ಮೇಲೆತ್ತಿ ಗೆಲುವಿನ ದಾರಿ ತೋರಿಸಿದಾಕೆ. ಇಂತಹ ಅದ್ಭುತ ಜೀವಪರ ವ್ಯಕ್ತಿತ್ವವನ್ನು ಕುರಿತು ನಮ್ಮ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಪರಿಮಿತ ಕಾವ್ಯಧಾರೆ ಹರಿದು ಬಂದಿದೆ ಎಂಬುದು ಅವಳ ಪ್ರೌಢಿಮೆಗೆ ಸಾಕ್ಷಿಯಾಗಿದೆ. ಇಂದು ನಾನು ಅಂತಹ ಮಹಾನ್ ಚೇತನವೊಂದರ  ಮಹಿಮೆಯನ್ನು ಸಾರುವ ಅಭೂತಪೂರ್ವವಾದ ಕವಿತೆಯೊಂದನ್ನು ನಿಮ್ಮೊಂದಿಗೆ ಬಿತ್ತರಿಸಲಿದ್ದೇನೆ.

ಕವಿ ಪರಿಚಯ

ತುಮಕೂರಿನ ಊರ್ಡಿಗೆರೆಯವರಾದ ಶ್ರೀ “ಗಂಧರ್ವ ರಾಯ ರಾವುತ” ಅವರು HMT ಯಲ್ಲಿ  ಸಹಾಯಕ  ಇಂಜಿನಿಯರಿಂಗ್ ಆಗಿ ಕೆಲಸ ನಿರ್ವಹಿಸುತಿದ್ದರು. “ಆಡು ಮುಟ್ಟದ ಸೊಪ್ಪಿಲ್ಲ” ಎಂಬ ಗಾದೆ ಮಾತು ಇವರಿಗೆ ತುಂಬ ಚನ್ನಾಗಿ ಅನ್ವಯಿಸುತ್ತದೆ.

ಗಂಧರ್ವ ರಾಯ ರಾವುತರು ಕೈಯಾಡಿಸದ ಕ್ಷೇತ್ರವಿಲ್ಲ ಎನ್ನಬಹುದು. ಇವರು ಹೆಸರಾಂತ ಚಿತ್ರಸಾಹಿತಿಗಳು ಹಾಗೂ ನಿರ್ದೇಶಕರು. ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ನಿರತರಾಗಿರುವ ಇವರು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಲವಾರು ಸಿನಿಮಾಗಳಿಗೆ ತಮ್ಮದೇ ಆದ ಸಾಹಿತ್ಯ ರಚನೆಯ ಮೂಲಕ ಸಂಗೀತ ಸಂಯೋಜಿಸಿದ್ದಾರೆ. ಚಲನಚಿತ್ರ ಗೀತೆಗಳನ್ನು ಬರೆಯುವ ಜೊತೆಗೆ ಕವಿತೆಗಳನ್ನು ಬರೆಯುವ ಹವ್ಯಾಸವಿದ್ದು, ಪೌರಾಣಿಕ, ವೈಚಾರಿಕ, ಚಿಂತನಾಶೀಲವಾದ ವಿಶಿಷ್ಟವಾದ ಕಾವ್ಯ ರಚನೆಯ ಮೂಲಕ ತನ್ನದೇ ಆದಂತಹ ಓದುಗ ಬಳಗವನ್ನು ಹೊಂದಿರುವ ಬರಹಗಾರರು. ಇವರು ಬಳಸುವ ಅಭೂತಪೂರ್ವ ರೂಪಕಗಳು, ಪ್ರತಿಮೆಗಳು, ಉಪಮಾನ ಮತ್ತು ಉಪಮೆಗಳು ಓದುಗರ ಹೃದಯದಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅವು ಎಂದಿಗೂ ಓದುಗರ ಮನದಿಂದ ಮಾಸಿ ಹೋಗಲು ಸಾಧ್ಯವಿಲ್ಲ. ಆ ಮೂಲಕ ಮತ್ತೆ ಮತ್ತೆ ಕಾಡಿಸಿಕೊಂಡು ಓದಿನ ಹಕೀಕತ್ತಿನಲ್ಲಿ ಬಂಧಿಸುತ್ತವೆ.

ಕವಿತೆಯ ಆಶಯ

 ನೊಂದ ತಾಯಿಯ ಮನೋಗತವನ್ನು ತೆರೆದಿಡುವ ಪ್ರಯತ್ನವೆ ಗಂಧರ್ವ ರಾಯ ರಾವುತರ ಕವಿತೆಯ ಪ್ರಮುಖ ಆಶಯವಾಗಿದೆ. ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನು ಗಾಳಿಗೆ ತೂರಿ, ಭಗ್ನಗೊಂಡ ತನ್ನ ಕನಸುಗಳನ್ನೆಲ್ಲ ಮಕ್ಕಳ ಕಣ್ಣಲ್ಲಿ ನೋಡುತ್ತಾ, ಹಗಲಿರುಳು ಬೆವರಿನ ಸ್ನಾನ ಮಾಡಿ, ಕರುಳ ಕುಡಿಗಳಿಗಾಗಿ ಮಿಡಿಯುವ ಹೃದಯದ ಮಿಡಿತ ತುಡಿತವೆ ಕವಿತೆಯ  ಜೀವಾಳವಾಗಿದೆ. ಹೆತ್ತವರ ಬಗೆಗಿನ ಮಕ್ಕಳ ನಿರ್ಲಕ್ಷ್ಯ, ಸೊಸೆಯ ಶೋಷಣೆ, ವೃದ್ಧಾಪ್ಯದಲ್ಲಿ ಮಕ್ಕಳಿದ್ದರೂ ಅನಾಥರಂತೆ ವೃದ್ಧಾಶ್ರಮಗಳಲ್ಲಿ ಒಂಟಿಯಾಗಿ ಬದುಕುವ ಹಿರಿಯ ಜೀವಗಳ ಮನದ ತಲ್ಲಣಗಳು ಕವಿಯನ್ನು ಬಹುವಾಗಿ ಕಾಡಿವೆ. ಮಾತೃ ಹೃದಯದ ಮಮಕಾರ ಕಣ್ಣೀರಧಾರೆಯನ್ನೇ ಹರಿಸಿದೆ. ತನ್ನ ಕರುಳ ಕುಡಿಯನ್ನು ನಾನಾ ರೀತಿಯಲ್ಲಿ ಹಿಂಸಿಸುತ್ತಾ, ಹರಕೆಯ ಕುರಿಯಾಗಿಸಿದರು. ಅವಳು ಮಾತ್ರ ಅವರ ಏಳ್ಗೆಗಾಗಿ, ಶ್ರೇಯಸ್ಸಿಗಾಗಿ ನಿತ್ಯ ಹಂಬಲಿಸುವ ಪರಿ ಅಮೋಘವಾಗಿ ಮೂಡಿಬಂದಿದೆ. ಜನ್ಮದಾತೆಯೆ ಮನಸ್ಸನ್ನು ಬಿಂಬಿಸುವ ಮೂಲಕ ಸಮಾಜಕ್ಕೆ, ಮಕ್ಕಳಿಗೆ, ಯುವಜನಾಂಗಕ್ಕೆ ಮೌಲಿಕವಾದ ಸಂದೇಶವನ್ನು ರವಾನಿಸುವುದು ಕವಿಯ ಮನದಿಂಗಿತವಾಗಿದೆ. ಈ ಕಾವ್ಯ ಜೀವಕಾರುಣ್ಯ ಪ್ರತಿಪಾದಿಸುವ ಒಂದು ಮಹಾನ್ ಗ್ರಂಥದಂತೆ ಓದುಗನನ್ನು ಆವರಿಸಿಬಿಡುತ್ತದೆ. ಆ ನಿಟ್ಟಿನಲ್ಲಿ ಕವಿಯ ಲೇಖನಿಯು ಪ್ರಬಲವಾದ ಅಸ್ತ್ರದಂತೆ ಪ್ರಯೋಗಿಸಲ್ಪಟ್ಟಿದೆ.

ಕವಿತೆಯ ಶೀರ್ಷಿಕೆ

“ಹತ್ತು ದೇವರನ್ನು ಪೂಜಿಸುವ ಮುನ್ನ ಹೆತ್ತ ತಾಯಿಯನ್ನು ಗೌರವಿಸು” ಎಂಬ ನುಡಿಯು ನಮಗೆ ಹೆತ್ತಮ್ಮನ ಮೌಲ್ಯವನ್ನು ಪ್ರತಿನಿಧಿಸುತ್ತದೆ. ಕವನದ ಶೀರ್ಷಿಕೆ “ಜಲಗಣ್ಣಿ” ಅದ್ಭುತವಾದ ರೂಪಕದಲ್ಲಿ ವಿನೂತನವಾದ ವಿಶೇಷತೆಯನ್ನು ಹೊತ್ತು ಎಲ್ಲರ ಗಮನ ಸೆಳೆಯುತ್ತದೆ. ಬಹಶಃ ಈ “ಜಲಗಣ್ಣಿ” ಎಂಬ ಪದ ಪ್ರಯೋಗ ಮೊದಲ ಬಾರಿಗೆ ಇವರಿಂದಲೇ ಪ್ರಯೋಗಸಲ್ಪಟ್ಟಿದೆ ಎನಿಸುತ್ತದೆ. ಇದು ಓದುಗರನ್ನು ಸೆಳೆಯುವ ಪ್ರಭಾವಶಾಲಿಯಾದ ಅಸ್ತ್ರವಾಗಿದೆ. ಜಲಗಣ್ಣಿ ಶೀರ್ಷಿಕೆ ಓದಿದರೆ ಸಾಕು ಕವಿಯ ಆಂತರ್ಯ ಕಣ್ಣುಮುಂದೆ ಬರುತ್ತದೆ. ವ್ಯಸನಿಯಾದ ಮಗ ತನ್ನ ತಾಯಿಯನ್ನು ಜೀವನಪರ್ಯಂತ ಅಳಿಸುತ್ತ, ಕಣ್ಣೀರಧಾರೆ ಹರಿಸುವ ವೈವಿಧ್ಯಮಯ ಮಜಲುಗಳನ್ನು ಈ ಜಲಗಣ್ಣಿ ಹೊತ್ತು ನಿಂತಿದೆ. ಆಧುನೀಕರಣದ ಭರಾಟೆಯಲ್ಲಿ ತಾಯಿಯ ನಿರ್ಲಕ್ಷ, ಆಸರೆ ನೀಡದಿರುವುದು, ತಾಯಿಗೆ ಜೀವನದ ಸಂಧ್ಯಾಕಾಲದಲ್ಲಿ ಭದ್ರತೆಯಿಲ್ಲದೆ ಹಿಂಸಿಸುವ ಮಕ್ಕಳ ನೀಚ ಕೃತ್ಯದ ಅನಾವರಣವೆ ಈ ಜಲಗಣ್ಢಿ.

 ಕವಿತೆ : ಜಲಗಣ್ಣಿ

.

 “ಸಾಲುಮರಗಳ ನೆಟ್ಟಿರುವೆ

ನಿನ್ನ ದುರ್ದೆಶೆಯ ಹಾದಿಯಲಿ.

ಬಿಸಿಲಾದರೂ ಸೈಮಳೆಯಾದರೂ ಸೈ.

ನಡೆದು ಹೋಗೋ ಕುಡಿಯೇ

ಕುಡಿದ ನೀರು ಕುಲುಕದಂತೆ.”

ಇಲ್ಲಿ ಕೆಟ್ಟ ಹಣೆಬರಹ ಹೊಂದಿರುವ ಮಗನ ಕುರಿತು ತಾಯಿ ಪ್ರಲಾಪಿಸುವ ಸಾಲುಗಳನ್ನು ನೋಡಬಹುದು. ಮಗನಿಗೆ ದುರ್ಧೆಸೆ  ಶುರುವಾಗಿದೆ. ಅಂದರೆ ಕಷ್ಟಗಳು ಎದುರಾಗಿವೆ. ಏನು ಮಾಡಿದರೂ ಅವನಿಗೆ  ಯಶಸ್ಸು ಸಿಗುತ್ತಿಲ್ಲ. ಅವನಿಗಾಗಿ ನಾನು ಸಾಲು ಮರಗಳನ್ನು ನೆಟ್ಟಿರುವೆ ಎಂದರೆ ಹಲವಾರು ಅವಕಾಶಗಳನ್ನು  ನೀಡಿರುವೆ. ಜೀವನದಲ್ಲಿ ಕಷ್ಟ ಸುಖ ಏನೆ ಬಂದರು ಎದುರಿಸುತ್ತ ಮುಂದೆ ಸಾಗು ಎಂಬ ತಾಯಿಯ ಶುಭ ಹಾರೈಕೆಯ ಮಾರ್ಮಿಕ ಬರಹ ಇದಾಗಿದೆ. “ಸಾಲುಮರಗಳ ನೆಟ್ಟಿರುವೆ ನಡೆದುಹೋಗು ಕುಡಿಯೆ ನೀರು ಕುಲುಕದಂತೆ” ಈ ಸಾಲುಗಳು ಓದುಗರಿಗೆ ಹೆಚ್ಚು ಆಪ್ತತೆಯನ್ನು ಒದಗಿಸುತ್ತವೆ.

ತಾಯಿಯ ಕರಳಿಗೆ ಸಾಟಿ ಇನ್ನೊಂದು ತಾಯಿ ಮಾತ್ರ. ಅವರ ಪ್ರತಿ ಮತ್ತೊಂದು ಇರಲು ಸಾಧ್ಯವಿಲ್ಲ. ವಾಸ್ತವಿಕತೆಯ ಅನಾವರಣ ಮಾಡುವ ಕವಿತೆಯಿದು. ಈ ಕಾವ್ಯಾಭಿವ್ಯಕ್ತಿಯ ಸುಂದರ ಪದಪುಂಜಗಳು ಎಲ್ಲರನ್ನು ಸೆಳೆಯುತ್ತದೆ.

ತಾಯಿಗೆ ಮಕ್ಕಳ ಮೇಲೆ ಅತಿಯಾದ ವ್ಯಾಮೋಹ ಎಂಬುದನ್ನ ಬಲಪಡಿಸುವ ಪ್ರಬಲ ಶಬ್ದಗಳಿವು. ಭಾಷೆಗೆ ನಿಲುಕದ ವ್ಯಕ್ತಿತ್ವ ಅವಳದು. ಅವಳ ಪ್ರೇಮ ಸಾಗರವನ್ನು ವರ್ಣಿಸಲು ಶಬ್ದಗಳಿಗೆ ಬಡತನ ಕಾಡುತ್ತದೆ. ನಿಘಂಟುಗಳು ತಾಯಿ ಮುಂದೆ ಸೋತು ಶರಣಾಗತಿ ಬಯಸುತ್ತವೆ.

ವೃದ್ಧಾಶ್ರಮದ ಮಾಡಿನ ಮೇಲೆ ನಿಂತು

ಪರಿಚಯವಿದ್ದ ಅಪರಿಚಿತನ ನೆನೆದು

ನಿಟ್ಟುಸಿರ ನಿಡುಸುಯ್ದು ಅತ್ತಳೋಜಲಗಣ್ಣಿ“.

ಬಿಗಿದ ಕಂಠದ ಗದ್ಗರಿತವಾದ  ನೋವಿನಲಿ ಜಲಧಾರೆ ಹರಿಸಿದೆ. ಓದುಗರ ಕರುಳು ಹಿಂಡುವ ಸಾಲುಗಳಿವು. ತನ್ನೆದೆಯಲ್ಲಿ ಕಷ್ಟ, ನೋವು, ಅಸಹಾಯಕತೆ, ಏಕಾಂಗಿತನದ ಜ್ವಾಲಾಮುಖಿಯನ್ನು ಇಟ್ಟುಕೊಂಡು ಅವುಗಳನ್ನೆಲ್ಲ ತನ್ನೊಳಗೆ ಅನುಭವಿಸುತ್ತಾ, ಸುಟ್ಟು ಕರಕಲಾದ ಭಾವಗಳನ್ನು ಸೆರಗೊಳಗೆ ಮರೆಮಾಚಿ ನಿಲ್ಲುವ ತಾಯೊಡಲ ನೋವನು ಅನಾವರಣ ಮಾಡುವ ಸಾಲುಗಳು ಓದುಗರೆದೆಯನ್ನು ಝಲ್ಲೆನಿಸುತ್ತವೆ.

ಮಕ್ಕಳ ಹೆತ್ತು ಸಾಕಿದರು

 ಮುತ್ತಿಕ್ಕಿ ಮಮತೆಯಲಿ

 ಅಕ್ಕರೆಯ ಹಂಚಿದರು

 ಮುಪ್ಪಿನಲ್ಲಿ ಹೆತ್ತ ಮಕ್ಕಳು ಲೆಕ್ಕಕ್ಕಿಲ್ಲ” ಈ ಮಾತು ಕವಿ ಭಾವಕ್ಕೆ ಸೂಕ್ತವಾಗಿ ಹೊಂದುತ್ತದೆ. ತಾಯಿಯ ಮಹಿಮೆಯನ್ನು ಅರಿಯದ ಇಂತಹ ನಿಷ್ಕರುಣಿಗಳಿಗೆ “ಅಬ್ದುಲ್ ಕಲಾಂ”ರವರ ವಾಣಿಯ ಎರಕ ಉಯ್ಯಬೇಕು. “ತಾಯಿ ಖುಷಿಯಾಗಿದ್ದರೆ ಕುಟುಂಬ ಖುಷಿಯಾಗಿರುತ್ತದೆ. ಕುಟುಂಬ ಖುಷಿಯಾಗಿದ್ದರೆ ದೇಶ ಖುಷಿಯಾಗಿರುತ್ತದೆ.” ಅಂದರೆ ದೇಶದ ಭವಿಷ್ಯ ತಾಯಿಯ ಸಂತೋಷದಲ್ಲಿ ಅಡಕವಾಗಿರುತ್ತದೆ.

ಸಾಕಲಾಗದೆ ವೃದ್ಧಾಶ್ರಮ ಸೇರಿದ ತಾಯ ಮನೋವ್ಯಾಕುಲತೆ ಭಾವಪೂರ್ಣವಾಗಿ ಜೀವಂತಿಕೆ ಪಡೆದಿದ್ದು, “ಪರಿಚಯವಿದ್ದ ಅಪರಿಚಿತನ ನೆನೆದು” ವಾವ್ ಎಂತಹ ಅಮೋಘ ಶಬ್ದ ಪ್ರಯೋಗವಿದೆ. ಹೆತ್ತು ಹೊತ್ತು ಸಾಕಿದ ಪರಿಚಿತ ಮಗ ಈಗ ತಾಯಿಂದ ದೂರವಾಗಿ ಮರೆತುಹೋಗಿ ಅವಳಿಗೆ ಅಪರಿಚಿತನಾಗಿರುವುದು ವಿಪರ್ಯಾಸದ ಪ್ರತೀಕವೆ ಸರಿ.

.

ತೊಡೆಯ ತೊಟ್ಟಿಲಿನಿಂದ

ಎದೆಗೆ ಕೈಚಾಚಿ ನಗುತಿದ್ದ…..

ಹಸಿವೋ ಆಟವೋ ತಿಳಿಯಲಿಲ್ಲ

ಏಳನೇ ಋತು ನನಗವನು….!

ಎಂಟು ದಿಕ್ಕಲು ನನ್ನ ತಬ್ಬಿದವನು” ….!!

ಇಲ್ಲಿ ಕವಿ ಮಗು ಅವ್ವನ ಸೆರಗಿನೊಳಗೆ ಅಂಟಿಕೊಂಡು ಆಡುವ ಬಾಲ ಲೀಲೆಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.ತಾಯಿಯ ತೊಡೆಯನ್ನು ತೊಟ್ಟಿಲಿನ ರೂಪಕದ ಮೂಲಕ ಬಣ್ಣಿಸಿದ್ದಾರೆ. ಅವಳು ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಜೋಗುಳ ಹಾಡುತ ತೊಡೆ ಕುಲುಕಿಸಿ ಮಗುವನ್ನು ನಿದ್ರೆಯಲ್ಲಿ ಮುಳುಗಿಸುತ್ತಾಳೆ.

ಮಗು ತನ್ನ ತಾಯಿಯ ಎದೆಗೆ ಕೈಚಾಚಿ ಕಚಗುಳಿಯಿಡುತ್ತಾ, ಎದೆಕಚ್ಚಿ ಕುಡಿಯದೆ, ಕಿಲಕಿಲ ನಗುತ್ತಾ, ಮತ್ತೆ ಮತ್ತೆ ತಾಯಿಯ ಮುಖ ನೋಡಿ ಆಡುವ ತುಂಟಾಟಗಳ ವರ್ಣನೆ ಅಭೂತಪೂರ್ವವಾಗಿ ಮೂಡಿಬಂದಿದೆ.  ಸೃಷ್ಟಿಯಲ್ಲಿ ನಾವು ಆರು ಋತುಗಳನ್ನು ಕಂಡಿದ್ದೇವೆ. ಆದರೆ ಇಲ್ಲಿ ಕವಿಯ ಮನದಾಳದಲ್ಲಿ ತಾಯಿಗೆ ತನ್ನ ಮಗು ಏಳನೆ ಋತುವಿನಂತೆ ಕಂಡುಬಂದಿದೆ. ಅಷ್ಟೊಂದು ಅಮೋಘ ಅಭಿಮಾನ ಮೂಡಿಸುವಂತಹ ಸಾಲುಗಳನ್ನು ರಚಿಸಿದ್ದಾರೆ.

.

ಸೊಸೆ ಕೊಟ್ಟ ಹಳೆಯ ಕುಪ್ಪುಸದಲ್ಲಿ

ಜೋತು ಬಿದ್ದ ಮುದಿ ಮೊಲೆಗೆ

ಅವನ ಹಾಲ್ಗಲ್ಲ, ಹವಳದ ತುಟಿಯ ನೆನಪು…!

ಮೊಲೆ ತೊಟ್ಟಿನ ಮೇಲೆ ಹಲ್ಲ ಗುರುತು“…!

ಈ ಸಾಲುಗಳನ್ನು ಓದುತ್ತಿದ್ದಂತೆ ಹೃದಯ ಮಮ್ಮಲ ಮರುಗುತ್ತದೆ. ಇಲ್ಲಿ ಸೊಸೆಯ ಶೋಷಣೆಯ ಬಲಿಪಶುವಾಗಿ ಮೂಖವಾಗಿ ರೋಧಿಸುವ ತಾಯ ಭಾವವು ಕಣ್ಣಾಲಿಗಳು ಒದ್ದೆಯಾಗಿಸುತ್ತದೆ. ಇವರ ಕಾವ್ಯ ಕಟ್ಟಿರುವ ಪರಿ ತಾಯಿಯನ್ನು ಮಾತ್ರ ಪ್ರತಿನಿಧಿಸದೆ ಇಂತಹ ನೋವನ್ನು ಅನುಭವಿಸುವ ತಾಯ್ಕುಲವನ್ನು ಬಿಂಬಿಸುತ್ತದೆ. ಜೀವನದಲ್ಲಿ ಮೊದಲೆಲ್ಲ ಮಕ್ಕಳಿಗಾಗಿ ಕಲರ್ಫುಲ್ ಬಟ್ಟೆ ತೊಡಿಸಿ ತಾನು ಮಾತ್ರ ತೇಪೆ ಹಾಕಿದ ಬಟ್ಟೆಯನ್ನು ತೊಟ್ಟ ಜೀವಕ್ಕೆ ಈಗಲೂ ಅದೇ ಪಡಿಪಾಟಲು. ಸೊಸೆಯ ಕೃಪಾ ಕಟಾಕ್ಷದಲ್ಲಿ ದೊರೆತಿರುವುದು ಹಳೆಯ ಕುಪ್ಪಸವೇ ಆದರೂ ತಾಯಿಯ ಸುಂದರ ಸವಿ ನೆನಪುಗಳಿಗೆ ಬರವಿಲ್ಲ. ಅವುಗಳಿಗೆ ಎಂದು ಬಣ್ಣ ಮಾಸದು. ಇಲ್ಲಿ ಕವಿಯು ಬಳಸಿರುವ ಸಾಲುಗಳು ನಿಜಕ್ಕೂ ದಾಖಲೆಯಾಗುವಯಷ್ಟು  ಪ್ರಭಾವಶಾಲಿಯಾಗಿವೆ. “ಜೋತು ಬಿದ್ದ ಮೊಲಯಲ್ಲಿ” ಅಂದರೆ ಅಷ್ಟು ವಯಸ್ಸಾದ ತಾಯಿ ಮಗನಿಗೆ ಹಾಲುಣಿಸುವಾಗ ಆಗಿದ್ದ ಹಲ್ಲ ಗುರುತು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿ  ತಾಯ್ತನದ ಸಂತಸದಲ್ಲಿ ತೇಲಿಸುತ್ತದೆ ಎಂಬ ಸಾಲು ತಾಯಿ ಮಗುವಿನ ಅಮೃತದಂತಹ ಹಾಲುಣಿಸುವ  ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

೫.

ಅಕ್ಕಕ್ಕಿ ಅನ್ನದ ಅಗುಳುಗಳ ಹಿಚುಕುತ್ತಾ,

ಉಂಡನೋ, ಉಪವಾಸವಿರುವನೋ,

ಉಣ್ಣದೇ ನನ್ನಂತೆ ಅಗುಳ ಹಿಚುಕುತ್ತಿರುವನೋ.

ಹೋಗಿ ಎರಡೆಜ್ಜೆ ಉಣಿಸಿ ಬರಲೆ?.

ಕೊರಗಿ ಕನಲಿದಳು ಪಾಪಿ “ಜಲಗಣ್ಣಿ “.

ಈ ಸಾಲುಗಳು ಮಾತೆಯ ಅಂತರಂಗದಲ್ಲಿ ಆಗುವ ಹೊಯ್ದಾಟವನ್ನು ಓದುಗರಿಗೆ ಪರಿಚಯಿಸುತ್ತವೆ. ಮಗನ ಒಡಲ ಹಸಿವು ತಾಯಿಯ ಹೃದಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಮನದೊಳಗೆ ಮಗನನ್ನು ಧೇನಿಸುವ ಪರಿ ಮನಕಲಕುತ್ತದೆ. ತನ್ನ ಜೀವನದಲ್ಲಿ ಮಗನಿಗೆ ತುತ್ತುಣಿಸಿ ಸಾಕಿ ಸಲಹಿದ ಮೇಲೆ ಮೊಟ್ಟೆಯಿಂದ ಹೊರಬಂದ ಪಕ್ಷಿ ರೆಕ್ಕೆ ಮೂಡುತ್ತಿದ್ದಂತೆ ಹಾರಿ ಹೋಗುವಂತೆ ತಾಯಿಯನ್ನು ತೊರೆದ ಮಗನ ಬಗ್ಗೆ ಅವಳಲ್ಲಿ ಸ್ವಲ್ಪವೂ ಬೇಸರವಿಲ್ಲ ತನ್ನಂತೆ ಮಗನು ಉಪವಾಸವಿರುವನೇನೋ ಎಂಬ ಭ್ರಮೆ ಅವಳನ್ನು ಆವರಿಸಿದೆ ಎಂಬ ಭಾವ ಕವಿಯ ಲೇಖನಿಯಲ್ಲಿ ಅಮೋಘವಾಗಿ ಜೀವ ತಳೆದಿದೆ. “ಹೋಗಿ ಎರಡೆಜ್ಜೆ ಉಳಿಸಿ ಬರಲೆ” ಎಂಬ ಸಾಲು ಹೆತ್ತೊಡಲ ಕನಲಿಕೆಯನ್ನು ಮನೋಜ್ಞವಾಗಿ ಚಿತ್ರಿಸಿದೆ. ಇಲ್ಲಿ ಅಮ್ಮನ ಕುರಿತಾಗಿ “ಸ್ವಾಮಿ ವಿವೇಕಾನಂದ”ರ ವಾಣಿಯನ್ನು ನಾವು ಸಂದರ್ಭೋಚಿತವಾಗಿ ಸ್ಮರಿಸುವುದಾದರೆ “ಈಗ ನಾನು ಏನಾಗಿದ್ದೇನೋ ಅದಕ್ಕೆ ಕಾರಣ ನನ್ನಮ್ಮ. ನಾನು ಇದ್ದೇನೆ, ಆದರೂ ಆಕೆ ಋಣವನ್ನು ತೀರಿಸುವುದು ಸಾಧ್ಯವಿಲ್ಲ.” ಎಂದು ಹೇಳಿರುವುದು ಬಹುಶಃ ಅವಳ ಹೃದಯದ ಈ ಭಾವಕ್ಕೆ ಇರಬಹುದು.

ಪಕ್ಕೆ ಗೂಡಿಗೆ ಒದೆತ.

ಮೂರು ಮೂಳೆ ಮುರಿತ.

ಮೂಟೆ ಕಟ್ಟಿ ತಂದೆಸೆ

ಆಶ್ರಮದ ಅಂಗಳಕೆ.

ನೋಡಲಿಲ್ಲ ತಿರುಗಿ ಒಂದು ನಿಮಿಷ“…!

ದುಷ್ಟ ಮಕ್ಕಳ ಪೌರುಷವನ್ನು ಜನತೆಯ ಮುಂದಿಡುವ ಅಭೂತಪೂರ್ವ ಪ್ರಯತ್ನವಾಗಿದೆ. ಗರ್ಭದಲ್ಲಿರುವಾಗ ಕಂದನ ಒದೆತ ತಾಯಿಗೆ ರೋಮಾಂಚನವನ್ನು ಉಂಟುಮಾಡಿದರೆ, ಇಳಿವಯಸ್ಸಿನಲ್ಲಿರುವ ಜೀವಕ್ಕೆ ಹಾನಿ ಮಾಡುತ್ತದೆ. ಅಂತಹ ದೃಷ್ಟ ಕೃತ್ಯವೆಸಗುವ ಮಗನ ಮನಸ್ಥಿತಿಯ ಅನಾವರಣ ಈ ಸಾಲುಗಳಲ್ಲಿ ಮೂಡಿಬಂದಿದೆ “ತಿರುಗಿ ನೋಡಲಿಲ್ಲ ಒಂದು ನಿಮಿಷ” ಎನ್ನುವ ಸಾಲು ಹಿರಿಯರ ನಿರ್ಲಕ್ಷವನ್ನು ಮುನ್ನೆಲೆಗೆ ತರುತ್ತದೆ.

“ತಾಳಿಯಿಲ್ಲ ಬರೀ

ಮೂಗುತಿಯ ಸಿಂಗಾರ .

ಮೂಗಿನ ಖಂಡದಲ್ಲಿ

ಹುದುಗಿಹೋದ ನಿಧಿಯ

 ಬಗೆದು  ತೆಗೆದೇ ಬಿಟ್ಟ

ಇದು ಛಲದಂಕಮಲ್ಲನ ಮುಗಿಯದಾ ಪ್ರವರ.

ಏನೇ ಹೇಳಿ ಅವನು ಶತಮಾನದ ಕುವರ”…!

ಜೀವನದ ಸಂಧ್ಯಾಕಾಲದಲ್ಲಿ ತನ್ನ ಸೌಭಾಗ್ಯವನ್ನು ಕಳೆದುಕೊಂಡು ಒಂಟಿಯಾಗಿ ಜೀವಿಸುವ ಅವಳಲ್ಲಿ ಈಗ ಉಳಿದಿರುವುದು ಕೇವಲ ಮೂಗುತಿ ಮಾತ್ರ. ಈಗ ಅದೊಂದೇ ಅವಳ ನಿಧಿ ಬಂಡಾರ ಎಲ್ಲವೂ.

 ವಿಪರ್ಯಾಸ ಎಂದರೆ ಈಗ ಅದನ್ನು ಕಿತ್ತುಕೊಳ್ಳುವ ಕ್ರೌರ್ಯದ ಅನಾವರಣ ಮನವನ್ನು ದುಃಖಸಾಗರದಲ್ಲಿ ಮುಳುಗಿಸುತ್ತದೆ. ಇಲ್ಲಿ ಕವಿ ಬಳಸಿರುವ ಸಾಲು “ಮೂಗಿನ ಖಂಡದಲ್ಲಿ ಹುದುಗಿರುವ ನಿಧಿ” ಎಂತಹ ವ್ಯಂಗ ರೂಪದಲ್ಲಿ ಅದ್ಭುತ ಕವಿಕಲ್ಪನೆ. “ಒಗೆದುಬಿಟ್ಟ  ಛಲದಂಕಮಲ್ಲನ ಮುಗಿಯದ ಪ್ರವರ,” ಇವು ವಯಸ್ಸಾದ ತಾಯಿಯ ಮೇಲೆ ತೋರುವ ಅವನ ಪ್ರತಾಪ ಷಂಡತನದ ಪರಮಾವಧಿಯಾಗಿದೆ. “ಏನೇ ಹೇಳಿ ಅವನು ಶತಮಾನದ ಕುವರ” ಎಂಬ ಮಾತು ಯುಗ ಪರಿವರ್ತನೆಯ ಮೂಲವಾಗಿ ಮೂಡಿಬಂದಿದೆ. ತಾನು ದುಡಿದು ತಂದು ಹಾಕುವ ಸಮಯದಲ್ಲಿ ತಾಯಿಯ ಬಳಿ ಇರುವುದನ್ನು ಕಿತ್ತುಕೊಳ್ಳುವ ನೀಚ ಮಕ್ಕಳ ಮನಸ್ಥಿತಿ ಬಹು ಕಠಿಣವಾದ ಶಬ್ದ ಪ್ರಭಾರದಲ್ಲಿ ಸೃಷ್ಟಿಸಿದ್ದಾರೆ.

೮.

“ಕೊರಗಿಹನು ಕೈಯಲ್ಲಿ ರಮ್ಮಿ ಇಲ್ಲ

ಕೈ ತುಂಬಾ ಜೋಕರ್ ಗಳು ನಸೀಬಿಲ್ಲ….!

ಬಸವಳಿದು ಬಗ್ಗಿಸಿದ ಸಾರಾಯಿ ಗ್ಲಾಸೊಳಗೆ,

ಇಳಿಸಿದನು ಬಾಯಾರಿ ಒಡಲ ತಳಕೆ”…..!

ಈ ಸಾಲುಗಳು ದುಶ್ಚಟಗಳ ದಾಸನಾಗಿ ವ್ಯಸನಿಯಾದ ನಸಿಬಿಲ್ಲದ ಮಗನ ಹಣೆಬರಹವನ್ನು ಹೊತ್ತು ತಂದಿದೆ. ಸತತ ಸೋಲುಗಳನ್ನು ಕಾಣುತ್ತ, ಜಯವನ್ನೇ ಕಾಣದೆ ಹಣವನ್ನು ವ್ಯರ್ಥ ಮಾಡುವುದರ ವಿರುದ್ಧ ಆಕ್ರೋಶದ ಪ್ರಕಾರವಾಗಿದೆ.

“ಬಿದ್ದು ಗಬ್ಬೆದ್ದು ಮತ್ತೆದ್ದು ಓಡಿದನು

ದಿಕ್ಕು ಯಾವುದೆಂದು ತಿಳಿಯಲಿಲ್ಲ.

ಹಲ್ಕಿರಿದು ಕೈಯೊಡ್ಡಿ

ವೃದ್ಧಾಶ್ರಮದ ಮುಂದೆ

ನಿಲ್ಲುವ ಮೊದಲೇನೆ

ಪಿಂಚಣಿಯ ನೋಟುಗಳ

ನಡುಗುವ ಕೈಲಿಡಿದು,

ನಿಂತಿಹಳು ಕಾಯುತ್ತಾ

ತುಂಬಿದ ಕಣ್ಣುಗಳ “ಜಲಗಣ್ಣಿ “…….!!

ಇದು ಮುಗಿಯದಾ ಮುದುಕಿಯ ವ್ಯಸನವೆನ್ನಿ…!!!.

ಈ ಸಾಲು ನೋಡಿದಾಗ ಮಾತು ಮೌನವಾಗಿ, ಮನಸ್ಸು ಭಾರವಾಗಿ ವಾಸ್ತವದ ಕಥೆ ವ್ಯಥೆ ಕಣ್ಣೆದುರು ಬರುತ್ತಿದೆ. ಇಲ್ಲಿ ಅಮೇರಿಕಾದ ಅಧ್ಯಕ್ಷರಾಗಿದ್ದ “ಅಬ್ರಹಾಂ ಲಿಂಕನ್” ಅವರ ಅಮ್ಮನ ಕುರಿತಾದ ಮಾತುಗಳು ನೆನಪಿಗೆ ಬರುತ್ತವೆ.

“ನನಗೆ ನನ್ನಮ್ಮನ ಪ್ರಾರ್ಥನೆಗಳು ಇಂದಿಗೂ ನೆನಪಿನಲ್ಲಿವೆ. ಅವು ಯಾವತ್ತೂ ನನ್ನನ್ನು ಅನುಸರಿಸುತ್ತಿದ್ದವು. ನನ್ನ ಜೀವನದುದ್ದಕ್ಕೂ ನನ್ನನ್ನು ಗಟ್ಟಿಯಾಗಿ ಹಿಡಿದಿಟ್ಟಿದ್ದವು.”ಈ ಪ್ರಾರ್ಥನೆಯ ನುಡಿಗಳಲ್ಲಿ ಅಮ್ಮನ ಕಾಳಜಿಯನ್ನು ನಾವು ಅರಿಯದಿರಲು ಸಾಧ್ಯವೆ ?

ಇಲ್ಲಿ ವ್ಯಸನಿ ಕುಡಿದು ಎದ್ದು ಬಿದ್ದು ನಿಶೆಯಲ್ಲಿ  ತೇಲುತ್ತ ವೃದ್ಧಾಶ್ರಮದ ಮುಂದೆ ಹಲ್ಕಿರಿದು ಕೈಯೊಡ್ಡುವ ಮಗನ ಅಮಾನುಷ ಕೃತ್ಯದ ವಿಡಂಬನೆ ಒಂದೆಡೆಯಾದರೆ ತನ್ನ ಜೀವನೋಪಾಯಕ್ಕಾಗಿ ಸರ್ಕಾರ ನೀಡುವ ಮಾಸಿಕ ಪಿಂಚಣೆಯನ್ನು ಕಸಿಯಲು ಕಾದು ಕುಳಿತ ಮಗನೆಂಬ ಬಕನಿನಾಗಿ ತಾಯಿ ನಿರೀಕ್ಷಿಸುವ ಮಮಕಾರದ ವ್ಯಸನ ಮತ್ತೊಂದೆಡೆ ಕವಿಯ ಮನದಾಳವನ್ನು ಕಲಕಿದೆ. ಬಹುಶಃ ಅದಕ್ಕೆ ಇರಬಹುದು “ಮುಗಿಯದ ಮುದುಕಿಯ ವ್ಯಸನ” ಎಂದು ಉದ್ಘರಿಸಿರುವುದು.

ಒಟ್ಟಾರೆ ಹೇಳುವುದಾದರೆ ಗಂಧರ್ವರ ಕವಿತೆ ತಾಯೊಬ್ಬಳ ಮಮಕಾರವನ್ನು ಪ್ರತಿಫಲಿಸುವ ಕಥನ ಕವನ ರೂಪದಲ್ಲಿ ದೃಶ್ಯಾವಳಿಗಳನ್ನು ಕಣ್ಣೆದುರಿಗೆ ತಂದು ನಿಲ್ಲಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಷ್ಟು ಭಾವತೀವ್ರತೆಯ ಸಾಲುಗಳು ಅವರ ಲೇಖನಿಯಿಂದ ಮೂಡಿಬಂದಿದ್ದು ಎಲ್ಲರಿಗೂ ಬಹಳ ಆಪ್ತವಾಗುತ್ತವೆ.

ಕವಿತೆಯಲ್ಲಿ ನಾ ಕಂಡ ಕವಿ ಭಾವ

 ಕವಿಯ ಉದ್ದೇಶ ಕೇವಲ ಮನ ತಣಿಸುವ ಕಾವ್ಯಸೃಷ್ಟಿ, ಪ್ರಕೃತಿಯ ಆರಾಧನೆ, ಪ್ರೀತಿ, ಪ್ರೇಮ, ಸರಸ,ಸಲ್ಲಾಪ, ವಿರಹವೇದನೆಯಷ್ಟ ಅಲ್ಲ. ಅದನ್ನು ಮೀರಿದ ಸಾಮಾಜಿಕ ಜವಾಬ್ದಾರಿ ಕವಿಯ ಪ್ರಮುಖ ಪ್ರತಿಪಾದನೆಯಾಗಬೇಕು. ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕು. ಓರೆಕೋರೆ ಗಳಿಗೆ ಚಿಕಿತ್ಸಕನಾಗಬೇಕು. ನೊಂದವರ ಬಾಳಿನ ದಾರಿದೀಪವಾಗಬೇಕು. ಅಸಹಾಯಕರಿಗೆ ಬರವಸೆಯ ಕಂದೀಲಾಗಬೇಕು. ಜೀವನದಲ್ಲಿ ಜಿಗುಪ್ಸೆಗೊಂಡು ಅಂತ್ಯಕಾಲ ಆಶಿಸುವ ಮನೆಗಳಿಗೆ ಬದುಕುವ ಸಂಜೀವಿನಿಯಾಗಬೇಕು. ತಪ್ಪನ್ನು ನಿರ್ಧಾಕ್ಷಿಣ್ಯವಾಗಿ ಖಂಡಿಸುವ ಮನೋಭಾವವಿರಬೇಕು. ನ್ಯಾಯಕ್ಕಾಗಿ ಪ್ರತಿಭಟಿಸುವ ಎದೆಗಾರಿಕೆಯಂತೂ ಇರಲೆಬೇಕು. ಆ ನಿಟ್ಟಿನಲ್ಲಿ ದೃಢ ಹೆಜ್ಜೆಯಿಟ್ಟಾಗ ಮಾತ್ರ ಸಮಾಜಮುಖಿ ಬರಹದ ಸೃಷ್ಟಿಯಾಗಿ ಸಂವೇದನಶೀಲ ಬರಹ ಜನ್ಮತಾಳಿ ಖಡ್ಗಕ್ಕಿಂತ ಲೇಖನಿ ಹರಿತ ಎಂಬ ವಾಲ್ಟೆನ್ ನುಡಿಯು ಮೌಲ್ಯಯುತವಾಗುವುದು. ಕವಿಯ ಕಾವ್ಯ ರಚನೆಯ ಈ ಎಲ್ಲ ಆಸೆ ಆಶಯಗಳನ್ನು ತಮ್ಮ ಕಾವ್ಯ ವಸ್ತುವಾಗಿಸಿಕೊಂಡ ಪರಿಣಾಮವೇ ಗಂಧರ್ವ ರಾಯ ರಾವುತರ ಜಲಗಣ್ಣಿಗೆ ಜೀವಂತಿಕೆ ಬಂದಿದೆ. ಈ ಕವಿತೆಯ ಮೂಲಕ ಸಮಾಜವನ್ನು ಎಚ್ಚರಿಸುವ ಜೊತೆಗೆ  ತಪ್ಪುಗಳನ್ನು ಎತ್ತಿ ಹಿಡಿದು ಸರಿ ಮಾರ್ಗದಲ್ಲಿ ನಡೆಯುವಂತೆ ನಿರ್ದೇಶಿಸುತ್ತದೆ. ಮಾಗಿತ ಕವಿತೆಯಿದು ಎಂದರೆ ಉತ್ಪ್ರೇಕ್ಷೆಯಾಗಲಾರದು. ಇದು ಅಮ್ಮನ ಪರವಾಗಿ ಬರೆದ ಕವಿತೆಯೊಂದರ ಅಸ್ಮತೆ ಎನ್ನಬಹುದು. ಕ ಕವಿತೆ ಕವಿಯ ಲೇಖನಿಯ ಬಗ್ಗೆ ಅಭಿಮಾನ ಮೂಡಿಸುತ್ತದೆ .

ಗಂಧರ್ವ ರಾಯರ ರಾವುತರ ಕವಿತೆ ಜಲಗಣ್ಣಿ ತಾಯಿಯ ಮನದೊಳಗಿನ ನೂರಾರು ಸಂಕಟಗಳನ್ನು, ತೊಳಲಾಟವನ್ನು, ಪಲ್ಲಟವನ್ನು ತುಂಬಿಕೊಂಡಿರುವ ಬೃಹತ್ ಸಾಗರ. ಇದರಲ್ಲಿ ತಾಯಿಯ ಬದುಕಿನ ಪಡಿಪಾಟಲಿನ ದಿಗ್ದರ್ಶನವಿದೆ. ಆ ಮೂಲಕ ಓದುಗರನ್ನು ಮೌನ ಚಹರೆಯಲ್ಲಿ ಬಂಧಿಸುತ್ತದೆ. ಇವರ ಕಾವ್ಯ ವಸ್ತು ಬಹಳ ಗಹನವಾಗಿದ್ದು, ಗಾಂಭೀರ್ಯ ತುಂಬಿ ತಮ್ಮ ಭಾವವನ್ನು ಹೆಣೆದಿದ್ದಾರೆ. ಈ ಕವಿತೆಯ ಒಳನೋಟ ಅಮೋಘವಾದ ಭಾವತೀವ್ರತೆಯನ್ನು ಹೊತ್ತು ಓದುಗರ ದನಿಯಾಗಿ ಹೊರಹೊಮ್ಮಿದೆ . ಮಾತೆಯ ಬೆಣ್ಣೆಯಂತ ಮನಸ್ಸು ಮಕ್ಕಳಿಗಾಗಿ ಕಷ್ಟಗಳನ್ನು ಎದುರಿಸುವಾಗ ಉಕ್ಕಿನಂತೆ ಗಟ್ಟಿಯಾಗಿ ಪರಿವರ್ತನೆಯಾಗುತ್ತದೆ ಎಂಬ ಆಂತರ್ಯ ಕವಿತೆಯ ಗೆಲುವಿಗೆ ಅತಿದೊಡ್ಡ ನೆಲೆಯನ್ನು ಒದಗಿಸುತ್ತದೆ.

ಹರಿತವಾದ ಹಾಗೂ ತೀಕ್ಷ್ಣವಾದ ಪದಪುಂಜಗಳಲ್ಲಿ ಕವಿತೆ ವಿಶ್ಲೇಷಿಸುತ್ತ ಓದುಗನ ಗ್ರಹಿಕೆಗೆ ನಿಲುಕುವಂತೆ ರೂಪಗೊಂಡಿದೆ. ತಾಯಿಯ ಪ್ರೀತಿ ಮಮತೆ ವಾತ್ಸಲ್ಯ ಗಳಲ್ಲಿ ಕವಿತೆ ಉಸಿರಾಡುತ್ತ ವೈವಿಧ್ಯಮಯವಾದ ಮಗ್ಗುಲುಗಳಲ್ಲಿ ಬಾಂಧವ್ಯಗಳ ಕಸುವಿನ ಕುಸುರಿತನವನ್ನು ಎತ್ತಿಹಿಡಿದಿದೆ. ಅನನ್ವ ಪಾಂಡಿತ್ಯದ ಜೊತೆಗೆ ಹಿತಮಿತವಾದ ಹದವಾದ ಭಾಷಾ ಪ್ರಯೋಗವಿರುವುದು 

 ಪ್ರಯೋಗಿಸುವುದನ್ನು ಗಮನಿಸಬಹುದು. ಭಾವನೆಗಳ ಗಟ್ಟಿತನವೆ ಇವರ ಕವಿತೆಯ ಒಳ ಹೂರಣವಾಗಿದ್ದು ಕಾವ್ಯ ಕಟ್ಟುವ ಕಲೆ ತಾಜಾತನದಿಂದ ಕೂಡಿದೆ.  ಇವರ ಹೃದಯಸ್ಪರ್ಶಿಯಾಗಿ ಬರೆಯುವ ಬರಹದ ಶೈಲಿ ವರ್ಣಿಸಲಸದಳ.

ಪ್ರಿಯ ಓದುಗರೆ …..

   ನಾನು ಮುಂದಿನ ಶುಕ್ರವಾರ ಇನ್ನೊಂದು ವಿಶಿಷ್ಟವಾದ ಹಾಗೂ ವಿಭಿನ್ನವಾದ ಬರಹದೊಂದಿಗೆ ಕವಿ ಕಾವ್ಯವನ್ನು ಹೊತ್ತು ನಿಮ್ಮಮುಂದೆ ಹಾಜರಾಗಲಿದ್ದೇನೆ.ಅದುವರೆಗೂ ಕುತೂಹಲದಿಂದ ನನ್ನ ಬರಹವನ್ನು ನಿರೀಕ್ಷಿಸುವಿರೆಂಬ ಸದಾಶಯದೊಂದಿಗೆ ನಾನಿರುವೆ.


ಅನುಸೂಯ ಯತೀಶ್

ಅನುಸೂಯ ಯತೀಶ್ ಇವರು ನೆಲಮಂಗಲದ ನಿವಾಸಿ. ಸ್ನಾತಕೋತ್ತರ ಪದವೀಧರೆಯಾದ ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ

2 thoughts on “

  1. ಅತ್ಯುತ್ತಮ ಸಾಹಿತ್ಯಕ್ಕೆ ಅತ್ಯದ್ಭುತವಾಗಿ ವಿಮರ್ಶೆ ಮಾಡಿ ಓದುಗರನ್ನು ಹರ್ಷಿಸಿದಿರಿ. ಒಂದೊಂದು ಚರಣವನ್ನು ವರ್ಣಿಸುವಾಗುಲು ಸಾಹಿತ್ಯದ ಭಾವ ಆಕರ್ಷಣೆಗೆ ಒಳಲ್ಪಡುತಿತ್ತು. ನೀವು ಅದ್ಭುತ ವಿಮರ್ಶಕರು. ತಮ್ಮ ಮುಂದಿನ ವಾರದ ವಿಮರ್ಶೆಗೆ ಕಾತರವಾಗಿರುವ ಅಭಿಮಾನಿಗಳು.

  2. “ಜಲಗಣ್ಣಿ” ಕವಿತೆ ತುಂಬ ಪ್ರಬುದ್ಧವಾಗಿದೆ. ಸಮಕಾಲಿನ ಸಮಸ್ಯೆಗಳಲ್ಲೊಂದಾದ ಹೆತ್ತವರ ನಿರ್ಲಕ್ಷ್ಯ ದ ಮೇಲೆ ಬೆಳಕಲ್ಲ ಬಿಸಿಲು ಚೆಲ್ಲಿದೆ. ಸಮಾಜಮುಖಿಯಾದ ಜೀವಪರ ಕಾಳಜಿಯುಳ್ಳ ಅದ್ಭುತ ಕವಿತೆ. ಕವಿ ಗಂಧರ್ವ ರಾಯ ರಾವುತ ಅವರಿಗೆ ಅಭಿನಂದನೆ. ವಂದನೆ
    **********************
    “ಕಾವ್ಯ ದರ್ಪಣ” ಅಂಕಣದ ಮೂಲಕ ಕಾವ್ಯ ಲೋಕದ ಸೊಬಗನ್ನು ಬಹಳ ಅಚ್ಚುಕಟ್ಟಾಗಿ ಪರಿಚಯಿಸಲು ಮುಂದಾಗಿರುವ ಶಿಕ್ಷಕಿ, ಕವಯಿತ್ರಿ,ಲೇಖಕಿ ಅನುಸೂಯ ಯತೀಶ್ ಮೇಡಂ ಅವರ ಈ ವಿನೂತನ ಕಾರ್ಯ ಅಭಿನಂದನೀಯ. ಅರೆಬರೆ ಓದಿಕೊಂಡವರಿಗೆ ಇದು ಅಂದುಕೊಂಡಷ್ಟು ಸುಲಭವೇನಲ್ಲ. ದಿನನಿತ್ಯದ ಮನೆಗೆಲಸ ಗಳೊಂದಿಗೆ, ವೃತ್ತಿ ಹಾಗೂ ಪ್ರವೃತ್ತಿಯನ್ನು ಸಮಾನವಾಗಿ ಪ್ರೀತಿಸುತ್ತಾ , ಎರಡರಲ್ಲೂ ಪ್ರಗತಿಯ ಹೆಜ್ಜೆಗಳನ್ನು ದಾಖಲಿಸುತ್ತಾ ಸಾಗುವುದೆಂದರೆ ಅನುಸೂಯ ಅವರಿಗೆ ಕಷ್ಟದ ಕೆಲಸವೇನಲ್ಲ ಬಿಡಿ ಎನ್ನುವಷ್ಟು ತೊಡಗಿಸಿಕೊಂಡವರು. ಮೇಡಂ ಅವರ ಈ ಸಾಮರ್ಥ್ಯವನ್ನು ಗುರುತಿಸಿ ಅಂಕಣ ಬರಹದ ಅವಕಾಶ ಮಾಡಿ ಕೊಟ್ಟ ಸಂಪಾದಕರಿಗೆ ಧನ್ಯವಾದಗಳು.
    **********************
    ಜಲಗಣ್ಣಿ ಕವಿತೆ ಈ ಮೊದಲು ನಾನು ಎಲ್ಲೂ ಓದಿರಲಿಲ್ಲ. ಕವಿತೆ ನನ್ನ ಕೈಗೆ ಸಿಕ್ಕು ನೇರವಾಗಿ ನಾನೇ ಓದಿಕೊಂಡಿದ್ದರೆ ಕವಿತೆಯ ಒಳ ಆಶಯ, ಕವಿಯ ಭಾವ ಸಮರ್ಥವಾಗಿ, ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು, ಕವಿತೆಯ ಮೊನಚನ್ನು ಸ್ಪರ್ಶಿ ಸಲು ಸಾಧ್ಯವಾಗುತ್ತಿರಲಿಲ್ಲವೇನೋ ಅನಿಸುತ್ತದೆ. ಜಲಗಣ್ಣಿ ಕವಿತೆ ಕಾಲಮಾನದ ಕನ್ನಡಿ . ಆ ಕನ್ನಡಿಯಲ್ಲಿ ಅಡಕವಾದ ಎಂದೆಂದೂ ಮಾಸಲಾಗದ ಮಾತೆಯ ಪ್ರೀತಿ, ಮನುಷ್ಯತ್ವ ಮರೆತ ಮಕ್ಕಳ ಅನಾಗರೀಕ ವರ್ತನೆ, ದಾರಿ ತಪ್ಪಿದ ಮಕ್ಕಳಿಗಾಗಿ ಹಂಬಲಿಸುವ ತಾಯ್ತನ, ಹದಗೆಟ್ಟ ಸಮಾಜಕ್ಕೆ ಸರಿಯಾದ ಚಾಟಿ ಬೀಸುವ ಕವಿಯ ಮನೋಭಾವ “ಕಾವ್ಯ ದರ್ಪಣ” ದಲ್ಲಿ ಮೇಡಂ ಅವರು ಬಹಳ ಮನೋಜ್ಞವಾಗಿ ಬಿಂಬಿಸಿದ್ದಾರೆ. ಒಂದು ಕವಿತೆಯನ್ನು ಇಷ್ಟೊಂದು ಪರಿಣಾಮಕಾರಿಯಾಗಿ ಪರಿಚಯಿಸಬಹುದೆ ? ಎನ್ನುವಷ್ಟು ಕಾವ್ಯಾಸಕ್ತರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಅನುಸೂಯ ಮೇಡಂ ಅವರು.
    ಕವಿತೆ ಇಷ್ಟವಾಯಿತು. ವಿಶ್ಲೇಷಣೆ ಇನ್ನೂ ಇಷ್ಟವಾಯಿತು.
    ಈ ಎರಡು ಕವಿಹೃದಯಗಳಿಗೆ ಗೌರವದ ವಂದನೆಗಳು.
    ************************
    ಭೀಮರಾಯ ಹೇಮನೂರ (ಭೀಜಿ)

Leave a Reply

Back To Top