ಮುಸರಿ ಹಾಕಬ್ಯಾಡ್ರಿ

ಸರೋಜಾ ಪ್ರಭಾಕರ್

13,911 Kitchen Sink Stock Photos, Pictures & Royalty-Free Images - iStock

ಬೆಂಗಳೂರಿನಿಂದ ಹುಬ್ಬಳ್ಳಿಗೆ ವರ್ಗವಾಗಿ ಅನಿವಾರ್ಯವಾಗಿ ಬಾಡಿಗೆ ಮನೆ ವಾಸ ಮಾಡಬೇಕಾದ ಸಂಧರ್ಭ ಬಂದಿದ್ದ ಬೇಸ ರದಲ್ಲಿದ್ದ ನಮಗೆ ಕೆಲ ದಿನಗಳಲ್ಲೇ ಮನೆಮಾಲಿಕರ ಆದೇಶವೊಂದುಬಂತು.


ʻನೋಡಿ, ಸಿಂಕ್ನ್ಯಾಗ ಪಾತ್ರೆತೊಳಿಬ್ಯಾಡ್ರಿ. ಅದರಾಗ ಮುಸರಿ ಹಾಕಬ್ಯಾಡ್ರಿ. ಸಿಕ್ಕೊಂತಾವʼ . ಹುಬ್ಬಳ್ಳಿ ಭಾಷೆಯಲ್ಲಿ ಬಂದ ಆದೇಶ ನನಗೆ ಕಿರಿಕಿರಿಯನ್ನುಂಟುಮಾಡಿದ್ದಂತೂ ನಿಜ. ನಮ್ಮವರು ಹಾಗೆಲ್ಲ ನಾವು ಸಿಂಕಿಗೆ ಕಸವನ್ನೆಲ್ಲ ಹಾಕುವುದಿಲ್ಲವೆಂಬ ಸಮಜಾಯಿಷಿ ನೀಡಿದರೂ,ಮಾಲಿಕರುತಮ್ಮ ಮಾತನ್ನು ಬಿಡಲೇ ಇಲ್ಲ. ʻಇಲ್ಲೇನು ಮುಸರಿಯನ್ನು ಕುಡಿದು ತಿನ್ನಲಿಕ್ಕೆ ದನಪನ ಏನೂ ಇಲ್ಲವಲ್ಲ. ಇವರಿಗೆ ನಮ್ಮ ಕಷ್ಟ ಗೊತ್ತಾಗುವುದಾದರೂಹ್ಯಾಗೆ?ʼ- ಎಂದು ಬೆಂಗಳೂರಿನ ಫ್ಲ್ಯಾಟ್ನ ಬಿಂದಾಸ್ ಘಳಿಗೆಯನ್ನು ನೆನೆದುಕೊಂಡು ಹಳಹಳಿಸಿದೆ.
ಪಾತ್ರೆ ತೊಳೆಯುವುದಿರಲಿ, ಅಡುಗೆ ಮಾಡುವುದೇ ಬೇಸರವೆನ್ನಿಸಿಬಿಟ್ಟಿತು. ಅಡುಗೆ ಮಾಡದೆ ಪಾತ್ರೆ ತೊಳೆಯದೆ ಮನೆ ಹೇಗಾದೀತು?ಅದರಲ್ಲೂ ಮನೆಯಲ್ಲಿ ಬೆಳೆದ ಮಕ್ಕಳಿರುವಾಗ ದಿನಕ್ಕೆ ನಾಲ್ಕಾರು ಬಾರಿಯಾದರೂ ಒಂದಷ್ಟು ಪಾತ್ರೆ ತೊಳೆಯದೆ ಇರಲಾದೀತೆ? ಹೇಗೋ ಮ್ಯಾನೇಜ್ ಮಾಡಲೇಬೇಕಾದ ಅನಿವಾರ್ಯತೆ ನನ್ನ ಮುಂದೆ. ಸಿಂಕ್ ಮೇಲೆ ಒಂದು ಬಟ್ಟೆ ಹಾಸಿ ಅದರೊಳಗೆ ಬಿದ್ದ ಮುಸುರೆಯನ್ನು ತೆಗೆದು, ಬೇರೆಡೆ ಹಾಕಿ…..ಹೀಗೆ ಏನೇನೋ ಸರ್ಕಸ್ಮಾಡಬೇಕಾಗಿ ಬಂತು- ಮಾಲಿಕರ ಮಾತು ಕೇಳಬಾರದೆಂಬ ಹುಕಿಗೆ.


ಆದರೂ ತಿಂಗಳು ಬಿಟ್ಟು ಮತ್ತೊಮ್ಮೆ ಅದೇ ಆದೇಶವನ್ನು ಕಂಪ್ಲೇಟ್ ಜೊತೆಗೆ ರವಾನಿಸಿದಾಗ ಏಕಾದರೂ ಇಲ್ಲಿಗೆ ಬಂದೆವೋ ಅನ್ನಿಸಿತು. ʻಸರಿಯಾಗಿ ಗಟರ್ ವ್ಯವಸ್ಥೆಯನ್ನೇ ಮಾಡದೆ ಮನೆ ಕಟ್ಟುತ್ತಾರಲ್ಲʼಅಂದುಕೊಳ್ಳುತ್ತಲೇ ಪರ್ಯಾಯ ಮಾರ್ಗ ಹುಡುಕತೊಡಗಿದೆ. ʻಊರಲ್ಲಿ ಅಮ್ಮ ಮೊದಲು ಪಾತ್ರೆಯನ್ನೆಲ್ಲ ತೊಳೆದು ಆ ನೀರುಮುಸುರೆಯನ್ನೆಲ್ಲಒಂದು ಬಾಂಡಲೆಗೆ ಹಾಕಿ ಅದನ್ನು ಅಕ್ಕಚ್ಚಾಗಿ ಬಳಸುತ್ತಿದ್ದುದು ಸರಿ. ಇಲ್ಲೇನೂ ಮಾಡಲಿ?ʼ -ಎಂದು ಯೋಚಿಸತೊಡಗಿದೆ.
ಆ ಕ್ಷಣಕ್ಕೆ ಬೆಂಗಳೂರಿನ ನಮ್ಮ ಫ್ಲ್ಯಾಟಿನಲ್ಲಿ ಒಮ್ಮೆ ಗಟರ್ ಕಟ್ಟಿಕೊಂಡು ಅದನ್ನು ಕ್ಲೀನ್ ಮಾಡಲಿಕ್ಕೆ ಹಣ ತೆತ್ತ ನಮ್ಮವರು ಹೆಂಗಸರ ಜಾತಿಗೆ ಹಿಡಿದು ಬಯ್ದದ್ದು ನೆನಪಾಯ್ತು. ಇಲ್ಲಿ ಮುಸರಿ ಹಾಕಲಿಕ್ಕೂ ವ್ಯವಸ್ಥೆ ಇಲ್ಲವಲ್ಲ ಎನ್ನಿಸಿತು. ಸುತ್ತಲೂ ನೋಡಿದೆ.ಬೆಂಗಳೂರಿನಿಂದ ಸಾಮಾನು ವರ್ಗಾಯಿಸುವಾಗಲೂ ನಮ್ಮನ್ನು ಬಿಡದೆ ಹಿಂಬಾಲಿಸಿ ಬಂದ ಹಳೆಯ ಬಳಕೆಯಿಲ್ಲದ ಸೋಸುವ ಸೌಟು ಕಣ್ಣಿಗೆ ಬಿದ್ದ ತಕ್ಷಣ ಜಾಗೃತಳಾದೆ. ಎಲ್ಲ ಪಾತ್ರೆಯನ್ನು ದೊಡ್ಡದೊಂದು ಪಾತ್ರೆಯಲ್ಲಿ ಮೊದಲು ತೊಳೆದು ಚೊಕ್ಕಟ ಮಾಡಿಕೊಂಡೆ. ಒಂದು ಹಂತವಾದ ಬಳಿಕ ಮುಸುರೆ ನೀರನ್ನು ಶೋಧಿಸುವ ಸೌಟಿಗೆ ಹಾಕಿ ನೀರನ್ನು ಮಾತ್ರ ಸಿಂಕಿಗೆ ಬಿಟ್ಟು ಮುಸುರೆ ಕಸವನ್ನೆಲ್ಲ ಶೋಧಿಸುವ ಸೌಟಿನಿಂದ ಕಸದ ಬುಟ್ಟಿಗೆ ರವಾನಿಸಿದೆ. ಒಂದೆರಡು ದಿನ ತುಸು ಕಿರಿಕಿರಿ ಎನಿಸಿದರೂ, ರೂಢಿ ಆದ ಬಳಿಕ ಕಂಡ ಕೆಲವು ಬದಲಾವಣೆ ನನಗೇ ಖುಷಿ ತಂದಿತ್ತು.
ಈಗ ಸಿಂಕಿನಿಂದ ವಾಸನೆ ದೂರವಾದದ್ದಲ್ಲದೆ, ಸಿಂಕ್ ಕೂಡ ಸ್ವಚ್ಛವಾಗಿರುತ್ತದೆ. ನಾವು ಹಾಕುವ ಮುಸುರೆ ಹೋಗಿ ಸೇರುವುದು ನದಿಯನ್ನೋ ಇನ್ನಾವುದೋ ಜಲಮೂಲವನ್ನು. ನನ್ನಿಂದ ಅದು ತಪ್ಪಿತಲ್ಲಾ ಎನ್ನುವ ಸಮಾಧಾನ. ಪ್ರಕೃತಿಗಾಗಿ ನಾನು ಏನೋ ಮಾಡಿದ ಖುಷಿ. ಸ್ವಚ್ಛತೆ ಆರಂಭವಾಗುವುದು ಮನೆಯಿಂದಲೇ ಅಲ್ಲವೇ?

ನಾನಂತೂ ಈ ಹೊಸಪದ್ಧತಿಗೆ ಒಗ್ಗಿಕೊಂಡು ಎಂಭತ್ತೈದು ವರ್ಷದ ಮನೆಮಾಲಿಕರಿಗೆ ಮನಸ್ಸಿನಲ್ಲೇ ಧನ್ಯವಾದ ಹೇಳಿದೆ. ನೀವು?
ನಾನೂ ಈಗ ಹೇಳುತ್ತಿದ್ದೇನೆ, – “ಮುಸುರಿನಾ ಸಿಂಕಿಗೆಹಾಕಬ್ಯಾಡ್ರಿ”.


Leave a Reply

Back To Top