ಗಜಲ್
ಅಂತರಂಗದ ಪ್ರೀತಿಯ ದೀಪ ಬೆಳಗಬೇಕಿದೆ ತೂಗುದೀಪವೇ
ವಿರಹವು ಮಂಜಿನ ಹೂವಾಗಿ ಕರಗಬೇಕಿದೆ ತೂಗುದೀಪವೇ
ಒಲುಮೆಯ ಮಧುರ ನಕ್ಷತ್ರಗಳ ಎಣಿಕೆಯ ಎಷ್ಟೋ ರಾತ್ರಿಗಳು ಕಳೆದಿವೆ
ಹೃದಯಗಳ ಬಡಿತ ಕೇಳುತ ಕರಗಳಲ್ಲಿ ಬೆರೆಯಬೇಕಿದೆ ತೂಗುದೀಪವೇ
ಬೇವಫಾ ನಾವಿಬ್ಬರೂ ಅಲ್ಲ ಜನುಮಾಂತರ ಬಂಧನ ಬದಲಾಗುವುದೆ
ಸ್ಪಂದಿಸಿದ ಭಾವ ರಾಗ ರಾಗಿಣಿಯರು ಬಾಳಬೇಕಿದೆ ತೂಗುದೀಪವೇ
ಚಾತಕ ಪಕ್ಷಿಯಂತೆ ಕಾಯುತಿರುವೆ ನಿನ್ನೊಲುಮೆಯ ಗುಟುಕಿಗಾಗಿ
ಹೃದಯಗಳಲ್ಲಿ ಮೂಡಿದ ಪ್ರೀತಿಯು ನೀಗಬೇಕಾಗಿದೆ ತೂಗುದೀಪವೇ
ಆಮಂತ್ರಣ ನೀಡದೆ ಬರುವ ಸಾವು ಬರುವ ಮುನ್ನವೇ ಮಾಜಾ
ದುಃಖ ದುಮ್ಮಾನ ಬಿಟ್ಟು ಒಂದಾಗಬೇಕಿದೆ ತೂಗುದೀಪವೇ
ಮಾಜಾನ್ ಮಸ್ಕಿ