ಲೇಖನ

ಬರವಣಿಗೆಯೆಂಬ ಮಾಯಾ ಜಾಲ

ಮಾಧುರಿ

A Chronological History of Social Media

ಬರವಣಿಗೆಯ ಗೀಳು ಸಣ್ಣ ವಯಸ್ಸಿನಿಂದ ಬರಬಹುದು; ದೊಡ್ಡವರಾದ ಮೇಲೆ ಬರಬಹುದು; ಮುದುಕರಾಗದ ಮೇಲೆಯೂ ಬರಬಹುದು.  ಇದು ಇಂದಿನ ವಾಸ್ತವ.  ಈಗ್ಯೆ ೪೦-೫೦ ವರ್ಷಗಳ ಹಿಂದೆ ಸರಸ್ವತಿಯ ಸೇವೆಯಾಗಿದ್ದ ಸಾಹಿತ್ಯ.  ಇಂದು ವೃತ್ತಿ ಪ್ರವೃತ್ತಿ ಆದಾಯದ ಮೂಲವಾಗಿದೆ.  ಅದರಲ್ಲೂ ಕಳೆದ ಎರಡು ದಶಕಗಳಲ್ಲಿ ಬರವಣಿಗೆಗೆ ಪ್ರೋತ್ಸಾಹ ಮತ್ತು ಅವಕಾಶಗಳು ಬಹಳವೇ ಆಗಿವೆ.

ಮೊದಲೆಲ್ಲಾ ಮುದ್ರಣ ಮಾಧ್ಯಮದಲ್ಲಿ ಯಾವುದೇ ಶಿಫಾರಸ್ಸು ಇಲ್ಲದೇ ಕಳುಹಿಸಿದ ಲೇಖನಗಳು ಪ್ರಕಟಗೊಳ್ಳುತ್ತಿದ್ದವು,  ಇಂದೂ ಇದೆ ಆದರೂ ಪರಿಚಯದವರ ಮತ್ತು ಬೇರೆ ರೀತಿಯಲ್ಲಿ ಉಪಯೋಗಕ್ಕೆ ಬರುವವರ ಲೇಖನ ಮುದ್ರಣಗೊಳ್ಳುವ ಜಾಯಮಾನ,  ಒಬ್ಬರ ಲೇಖನವನ್ನು ತಮ್ಮ ಹೆಸರಿನಲ್ಲಿ ಹಾಕಿಕೊಂಡು ಮುದ್ರಿಸಿಕೊಳ್ಳುವ ಜನರು, ಮುದ್ರಣ ಮಾಡಲು ಹಣ ಕೇಳುವ ಜನರು, ನಿಮ್ಮ ಲೇಖನ ಮುದ್ರಿಸಿಕೊಡುತ್ತೇನೆ ಅದಕ್ಕೆ ಪ್ರತಿಯಾಗಿ ನೀವು ನನಗೆ ಇಂತಹ ಕೆಲಸ ಮಾಡಿಕೊಡಬೇಕೆಂಬ ಜನರ ಪರಿಚಯವೂ ಇದೆ.  ಇದು ಪತ್ರಿಕೆಗಳ ಕಥೆ.  ಎಲ್ಲರೂ ಇದೇ ರೀತಿ ಇರುತ್ತಾರೆ ಎಂಬ ವಿಷಯ ಹೇಳುತ್ತಿಲ್ಲ ಆದರೂ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಲಾಬಿಗಳು ಹೆಚ್ಚಾಗಿದೆ.

ಇನ್ನು ಪುಸ್ತಕ ಪ್ರಪಂಚದಲ್ಲಿ  ಘೋಸ್ಟ್‌ ರೈಟಿಂಗ್‌ ಬಹಳ ಹಿಂದೆಯೂ ಕೇಳಿದ್ದೇವೆ.  ಕೆಲವೊಮ್ಮೆ ತಮ್ಮ ಪರಿಚಯ ಆಗದಿರಲೆಂದು ಅನಾಮಿಕರಾಗಿ ಬರೆದರೆ ಇನ್ನು ಕೆಲವೊಮ್ಮೆ ಹಣದ ಅನುಕೂಲತೆಗೆ ತಮ್ಮ ಬರವಣಿಗೆಗೆ ಬೆಲೆ ಕಟ್ಟಿ ತಮ್ಮ ಪ್ರತಿಭೆಯನ್ನು ಮಾರಿಕೊಳ್ಳುವ ಪ್ರಸಂಗ ಬಂದಿರುತ್ತದೆ.   ಇನ್ನು ಕೆಲವರು ತಮಗೆ ಹೆಸರು ಬೇಡ ಹಣ ಬಂದರೆ ಸಾಕು ಎನ್ನುವ  ಲೋಭದಿಂದ ತಮ್ಮ ಬರವಣಿಗೆಯ ಬೆಲೆ ಕಟ್ಟಿಕೊಂಡು ಬೇರೆಯವರಿಗೆ ಬರೆದು ಕೊಡುತ್ತಾರೆ.  ದುಃಖದ ಸಂಗತಿಯೆಂದರೆ ಉತ್ತಮ ಕೃತಿಗಳನ್ನು ಬರೆದು ಕೊಟ್ಟವರು ತಮ್ಮ ಹೆಸರು ಹಾಕಿಕೊಂಡು ಪ್ರಶಸ್ತಿ ಪಡೆದಾಗ.

ಬರವಣಿಗೆ ಸ್ವಂತದ್ದೇ ಇರಲಿ, ಅನುವಾದವೇ ಇರಲಿ, ಕತೆ, ಕವನ, ಕಾದಂಬರಿ ಸಾಹಿತ್ಯದ ಯಾವುದೇ ಪ್ರಕಾರವೇ ಆಗಲಿ ಒಂದು ಪ್ರತಿಭಾವಂತ ಲೇಖಕರಿಗೆ ತಮ್ಮದೇ ಆದ ಛಾಪು ಇರುತ್ತದೆ.   ಬರವಣಿಗೆ ಕಲೆಯಾದರೂ ಪ್ರತಿಭೆಯು ಸ್ವಂತದ್ದಾಗಿಬೇಕು.  ಕಲೆಯನ್ನು ಅಭ್ಯಾಸ ಮಾಡುವಾಗ ತಿಳಿದವರ ಬಳಿ ತಿದ್ದಿಸಿಕೊಂಡರೆ ಅಡ್ಡಿ ಇಲ್ಲ,  ನೀವೇ ಬರೆದು ಕೊಡಿ ಎಂದು ಕೇಳುವವರು ಬಹಳ ಜನರಾಗಿದ್ದಾರೆ.  ಒಂದು ವಿಷಯದ ಬಗೆಗೆ ನಾಲ್ಕಾರು ಬಾರಿ ಬರೆದಾಗ ಮೊದಲ ಬರಹಕ್ಕಿಂತ ಎರಡನೇ ಬರಹ ಉತ್ತಮವಾಗಿರುತ್ತದೆ.  ಆದರೆ ಬರಹಗಾರರಿಗೆ ಬರವಣಿಗೆ ಎಂಬುದು ತಮ್ಮ ಮಕ್ಕಳಂತೆ ಯಾವ ಮಗು ಇಷ್ಟ ಎಂದರೆ ಎಲ್ಲವೂ ಚಂದವೇ ಇರುತ್ತದೆ ಎನ್ನುತ್ತಾರೆ.  ಆದ್ದರಿಂದ ಪ್ರಕಟಿಸುವ ಸಮಯದಲ್ಲಿ ಉತ್ತಮವಾದುದ್ದನ್ನೇ ಆಯ್ದಿ ಕೊಳ್ಳುವುದು ಉತ್ತಮ.

ಇನ್ನು ಇಂದಿನ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆಯುವವರೂ ಪ್ರತಿಭೆ ಇರುವವರೇ…. ಆದರೂ ಹಲವರು ಪ್ರಚಾರಕ್ಕೆ ಸ್ನೇಹಿತರನ್ನು ಮಾಡಿಕೊಂಡು ಲೈಕ್‌ ಕಾಮೆಂಟ್‌ ಮಾಡಲು ಪದೇ ಪದೇ ಕಳುಹಿಸುವುದು ಹೆಸರಿಗಾಗಿ ಪರದಾಡುವ ಸಾಹಿತಿಗಳು. ಕೆಲವು ಗುಂಪುಗಳಲ್ಲಿ ಬರೆಯುವ ಕೆಲವು ಲೇಖಕರು ಒಮ್ಮೆ ತಮ್ಮ ಲೇಖನವನ್ನು ಇಷ್ಟ ಪಟ್ಟು ಲೈಕ್‌ ಕಾಮೆಂಟ್‌ ಮಾಡಿದವರಿಗೆ ಲಿಂಕ್‌ ಕಳಿಸುತ್ತಾರೆ. ಅದು ತಪ್ಪಲ್ಲ

ನಮ್ಮ ಲೇಖನ ಓದಿ ಎಂದು ಪದೇ ಪದೇ ಮೇಸೆಜ್‌ ಕೂಡ ಮಾಡುತ್ತಿರುತ್ತಾರೆ.  ಎಲ್ಲರಿಗೂ ಲಿಂಕ್‌ ಕಳುಹಿಸುವುದಾಗಲಿ ಲೇಖನ ಕಳಿಸುವುದಾಗಲೀ ತಪ್ಪಲ್ಲ ..ಆದರೆ ಪದೇ ಪದೇ ಹಿಂಸಿಸುವುದು ತಪ್ಪು.  ಕೆಲವರು ತಮ್ಮ ಲೇಖನಗಳನ್ನು ಪೋಸ್ಟ ಮಾಡುವುದರ ಜೊತಗೆ ಬೇರೆಯವರ ಬಗೆಗೆ ಟೀಕೆಗಳನ್ನು ಮಾಡುತ್ತಾರೆ.  ಕಾಮೆಂಟ್‌ ಬಾಕ್ಸ್‌ನಲ್ಲಿ ನಿಮ್ಮ ವ್ಯಾಕರಣ ಸರಿ ಇಲ್ಲ, ನೀವು ಬರೆದ ಸಾಲು ಸರಿ ಇಲ್ಲ ಎಂದೆಲ್ಲಾ ತಿದ್ದಿರುತ್ತಾರೆ,  ಅವರ ಫ್ರೆಂಡ್‌ ಲಿಸ್ಟ್‌ನಲ್ಲಿ ಇದ್ದಾರೆಂದರೆ ಅವರನ್ನು ಸಾರ್ವಜನಿಕವಾಗಿ ತಿದ್ದುವ ಕೆಲಸ ತಂದೆ ತಾಯಿಯೇ ಮಾಡಿರುವುದಿಲ್ಲ.  ಇನ್ನು ಬೇರೆಯವರಿಗೆ ಹಕ್ಕಿರುತ್ತದೆಯೇ?  ಸಾಹಿತ್ಯಿಕ ಗುಂಪುಗಳಲ್ಲಿ ನಾಲ್ಕಾರು ಬಾರಿ ಪ್ರಮಾಣ ಪತ್ರ ಸಿಕ್ಕಿರುತ್ತವೆ.. ಅವರು ಲೇಖನ ಬರೆಯುವ ಹೊಸಬರೇ ಆಗಿರಬೇಕೆಂದಿರುವುದಿಲ್ಲ.  ಸಾಹಿತ್ಯ ಮನದ ಆನಂದಕ್ಕೆಂದು ಆದ್ದರಿಂದ ಬಹಳಷ್ಟು ಕೆಲಸ ಮಾಡಿರುವ ಸಾಹಿತಿಗಳೂ ಬರೆದಿರುತ್ತಾರೆ.  ಇಲ್ಲಿ ಸ್ಪಷ್ಟವಾಗಿ ಹೇಳ ಬಯಸುವುದೇನೆಂದರೆ ಅಂಬೆಗಾಲು ಇಡುತ್ತಿರುವ ಮಗುವಿರಲಿ, ಕೋಲು ಹಿಡಿದ ವೃದ್ಧರಿರಲಿ ಅವರವರ ಪರಿಸ್ಥಿತಿಯಲ್ಲಿ ಅವರು ಮುದ್ದೇ .ಹಾಗೆಯೇ ಬರಹಗಳೂ ಕೂಡ.  ಪ್ರಬುದ್ಧತೆ ವಯಸ್ಸಿನ ಅಥವಾ ಎಷ್ಟು ಬರೆದಿದ್ದಾರೆಂಬುದರ ಮೇಲೆ ಇರುವುದಿಲ್ಲ ಅವರ ವಿಚಾರಧಾರೆ ಮತ್ತು ಅಭಿವ್ಯಕ್ತಿ ಪಡಿಸುವ ರೀತಿಯಲ್ಲಿ ಇರುತ್ತದೆ.  ಎಲ್ಲರಿಗೂ ಗೌರವ ಕೊಟ್ಟು ನಾವು ಗೌರವ ಪಡೆಯಬೇಕು

ಪುಸ್ತಕ ಪ್ರಕಟಿಸಿದವರು ಜನರಿಗೆ ನೀವು ಕೊಂಡು ಓದಿ ಎಂದು ಹೇಳಬಾರದೆಂದಲ್ಲ..  ಆದರೆ ನಮ್ಮ ಪುಸ್ತಕ ಕೊಂಡು ಓದಿ ಎಂಬ ಒತ್ತಾಯವೂ ಸಲ್ಲದು. ಎಷ್ಟೋ ಸಾಹಿತ್ಯಾಸಕ್ತರು ಕೊಂಡು ಓದುತ್ತಾರೆ.  ಇನ್ನು ಕೆಲವು ಅನುಕೂಲ ಇರುವವರು ಕೊಂಡು ಓದುತ್ತಾರೆ.  ಆದರೆ ಸಾಹಿತ್ಯ ಆಸಕ್ತಿ ಇದ್ದು ಅನುಕೂಲತೆ ಇಲ್ಲದವರಿಗೆ ಪ್ರೀತಿ ಪೂರ್ವಕವಾಗಿ ಪುಸ್ತಕ ಕೊಡಬಹುದು.  ಇನ್ನು ಹಲವು ಕಡೆ ಕಾರ್ಯಕ್ರಮಗಳಿಗೆ ಹೋದರೆ ಕೊಳ್ಳಲೇ ಬೇಕಂತ ನಿಯಮಗಳೂ ಇವೆ.   ಹಲವರು ಸೌಮ್ಯ ಸ್ವಭಾವದ ಲೇಖಕರಿಗೆ ಪುಸ್ತಕ ಕಳುಹಿಸಿ ಹಣ ಕೊಡುತ್ತೇನೆಂದು ಕಳಿಸದ ಸಂದರ್ಭಗಳೂ ಇರುತ್ತವೆ.   ಇಲ್ಲಿ ಓದುಗರೂ ವಿಚಿತ್ರವಾಗಿದ್ದಾರೆ ಜೊತೆಗೆ ಬರಹಗಾರರೂ.  ಸಾಹಿತ್ಯ ಆಸಕ್ತಿ ಇದ್ದು ಆರ್ಥಿಕ ಪರಿಸ್ಥಿತಿ ಇಲ್ಲದವರು ಪುಸ್ತಕವನ್ನು ಓದಬಾರದೆಂದು ಇಲ್ಲವಲ್ಲ.

ಇನ್ನು ಅನುವಾದ ಕೃತಿಗಳ ಅನುವಾದ ಕೆಲಸವೂ ಕೂಡ ಬರವಣಿಗೆಯ ಭಾಗ ಇದರಲ್ಲಿ ನಮ್ಮ ಸಾಹಿತ್ಯಾಸಕ್ತಿಗೆ ಮಾಡುವುದು ಉದ್ಯೋಗವಾಗಿ ಮಾಡುವುದು ಎರಡು ವಿಧ . ಉದ್ಯೋಗಕ್ಕೆಂದು ಮಾಡಿದಾಗಲೂ ಮೋಸ ಹೋದ ಅನುಭವಗಳಾಗುತ್ತವೆ.  ಅನುವಾದದ ಕೆಲಸ ಮಾಡಿಸಿಕೊಂಡು ನೀವು ಮಾಡಿದ್ದು ಸರಿಯಾಗಿ ಅಗಿಲ್ಲವೆಂದು ಹಣ ಕೊಡದವರು ಇದ್ದಾರೆ.  ಉತ್ತಮವಾಗಿದೆ ಎಂದು ಸರಿಯಾದ ಮೊತ್ತವನ್ನು ಕೊಡುವವರೂ ಇದ್ದಾರೆ.

ಸಾಹಿತ್ಯದ ಪ್ರಸಾರ ಪ್ರಚಾರಕ್ಕೆ ಎಷ್ಟೋ ಜನ ತಮ್ಮ ಖರ್ಚಿನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಏರ್ಪಡಿಸಿರುತ್ತಾರೆ. ಅಂತಹವರಿಗೆ ಪ್ರೋತ್ಸಾಹ ನೀಡಬೇಕು,  ಕೆಲವೊಮ್ಮೆ ಅನಿಸುತ್ತದೆ ಇವರಿಗ್ಯಾಕೆ ಕಾರ್ಯಕ್ರಮ ಮಾಡಿ ಮೈ ಮೇಲೆ ಖರ್ಚು ಎಂದು ಕೆಲವರು ಬರೆಯದೇ ಹೋದರೂ ಕೂಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿರುತ್ತಾರೆ. ಅದೇ ಅಲ್ಲವೇ ಮಾಯಾಜಾಲ.  ಬರೇ ಸಿನೆಮಾ ದೂರದರ್ಶನ ರೇಡಿಯೋದ ಮೋಡಿ ಇರುವುದಿಲ್ಲ.  ಪುರಾತನ ಕಾಲದಿಂದಲೂ ಓದುವ ಹವ್ಯಾಸ ಇದ್ದೇ ಇದೆ.  ಮೊದಲು ಕೆಲವೇ ಜನರಷ್ಟೇ ಓದುತ್ತಿದ್ದ ಪುಸ್ತಕಗಳಿಗೆ ಇಂದು ಓದುವವರ ಸಂಖ್ಯೆ ಬಹಳಷ್ಟಾಗಿದೆ,  ಪುಸ್ತಕ ಪ್ರಕಟಿಸುವುದು ಕಷ್ಟದ ಕೆಲಸವೇ ಅದಕ್ಕಿಂತಲೂ ಅಂತರ್‌ ಜಾಲದ ಮೂಲಕ ಜನರನ್ನು ತಲುಪುವುದಾಗಿದೆ.  ಪ್ರತಿಲಿಪಿಯಂತಹ ಆಪ್‌ ಗಳಲ್ಲಿ ಕಾಪಿ ರೈಟ್‌ ಇಲ್ಲದ ಕಾರಣ ಸ್ವಲ್ಪ ಸಮಯದ ನಂತರ ಎಲ್ಲರೂ ಓದಲೂ ಬರುತ್ತದೆ. ಕೆಲವೊಮ್ಮೆ ಕೃತಿ ಚೌರ್ಯದ ಭಯವೂ ಇರುತ್ತದೆ. ಆನ್‌ ಲೈನ್‌ ಮೂಲಕ ಪುಸ್ತಕ ವ್ಯಾಪಾರ, ಸಾಫ್ಟ್‌ ಕಾಪಿ ಖರೀದಿಸುವುದು ಇವೆಲ್ಲ ಹೊಸ ಟ್ರೆಂಡ್‌ ಆಗಿವೆ.

 ದಿನ ನಿತ್ಯದ ಕೆಲವು ಶುಭೋದಯ ಮತ್ತು ಶುಭ ರಾತ್ರಿ ಸಂದೇಶಗಳಿಗೂ ಕಳ್ಳರು ಇರುತ್ತಾರೆ.  ಬರೆದವರ ಹೆಸರನ್ನು ಬಳಸುವ ಸೌಜನ್ಯತೆ ಇರುವದಿಲ್ಲ.   ಈ ಬರವಣಿಗೆಯ ಕ್ಷೇತ್ರದಲ್ಲಿ ರಾಜಾರೋಷವಾಗಿ ಕಳ್ಳತನ ನಡೆಯುತ್ತದೆ. ಇತ್ತೀಚಿಗೆ ಜಾಲತಾಣಗಳಲ್ಲಿ ಗಮನಿಸಿದ ಮತ್ತೊಂದು ಸಂಗತಿ ಎಂದರೆ ಪುಸ್ತಕ ಮುದ್ರಿಸುವ ನೆಪದಲ್ಲಿ ಹೆಣ್ಣು ಮಕ್ಕಳ ದುರುಪಯೋಗ ಮಾಡಿ ಕೊಂಡ ಪ್ರಕಾಶಕರು ಕಾರಣದಿಂದ ಆತ್ಮ ಹತ್ಯೆ.  ತಪ್ಪು ಹೆಣ್ಣು ಮಗಳದ್ದೇ ಅನ್ನುವ ಸಮಾಜದಲ್ಲಿ ಗಂಡನ್ನು ಶಿಕ್ಷಿಸದೇ ಬಿಡುವ ಪರಿಪಾಠ ಇದೆ.  ಕಾನೂನು ಸಾಕ್ಷಿ ಕೇಳುತ್ತದೆ . ಆದರೆ ಸಮಾಜಕ್ಕೆ ಎಲ್ಲ ತಿಳಿದಿದ್ದೂ ಅಂತಹ ವ್ಯಕ್ತಿಗಳನ್ನು ಬಹಿಷ್ಕರಿಸುವುದಿಲ್ಲ.   ಯಾವುದೇ ಕ್ಷೇತ್ರದಲ್ಲಿ ಪೂರಕವಾದ ಜನರು ಇದ್ದೇ ಇರುತ್ತಾರೆ.  ಪ್ರಕಾಶಕರು ಮುದ್ರಕರು ಬರಹಗಾರರು ಇಲ್ಲಿ ಪರಸ್ಪರ ಗೌರವ ಮತ್ತು ಕಷ್ಟ ಅರಿತು ನಡೆದಲ್ಲಿ ಸಾಹಿತ್ಯದ ಮುನ್ನಡೆ, ಸಾಹಿತಿಯ ಪ್ರತಿಭೆಗೆ ಬೆಲೆ ಮತ್ತು ಪ್ರಕಾಶಕರ ವ್ಯಯಿಸಿದ ಹಣಕ್ಕೆ ಮರುಪಾವತಿ.  ಕೆಲವು ಕಡೆಗಳಲ್ಲಿ ಬರಹಗಾರರು, ಪ್ರಕಾಶಕರು ಮೋಸ ಹೋಗುವ ಸಂದರ್ಭಗಳನ್ನು ಕಾಣುತ್ತೇವೆ.  ಮೌಲ್ಯಗಳ ಬಗೆಗೆ ದೊಡ್ಡ ದೊಡ್ಡ ಮಾತನಾಡುವ ಸಾಹಿತಿಗಳೂ ಸಣ್ಣತನ ತೋರುವ ಪ್ರಕರಣಗಳೂ ಇವೆ,

 ಬರವಣಿಗೆಯ ಮಾಯಾಜಾಲ ಎಂದಿದ್ದು ಏಕೆಂದರೆ ಕೆಲವರು ಕೇವಲ ಹಣಕ್ಕಾಗಿ ಬರೆದರೆ , ಇನ್ನು ಕೆಲವರು ಕೇವಲ ಹೆಸರು ಪ್ರಸಿದ್ಧಿಗಾಗಿ ಬರೆಯುತ್ತಾರೆ.  ನಿಮ್ಮ ಬರವಣಿಗೆ ಹೇಗೆ ಇರಲಿ ಒಂದು  ನೈತಿಕತೆಯನ್ನು ಇಟ್ಟುಕೊಂಡರೆ ಉತ್ತಮ. ಎಡ ಪಂಥವಿರಲಿ, ಬಲ ಪಂಥವಿರಲಿ ಯಾವುದೇ ಪಂಥದವರಿರಲಿ ನಮ್ಮ ಭಾವ ಅಭಿವ್ಯಕ್ತಿ ಮತ್ತೊಬ್ಬರನ್ನು ದೂಷಿಸಿ ಅಥವಾ ನೋವು ಕೊಟ್ಟು ಆಗಬಾರದು.  ನಿಮ್ಮ ಬರವಣಿಗೆಗೆ ಸಕಾರಾತ್ಮಕ ಕಾಮೆಂಟ್‌ ಬರಲಿ ನಕಾರಾತ್ಮಕ ಕಾಮೆಂಟ್‌ ಬರಲಿ ಟೀಕೆಯನ್ನು ಸ್ವೀಕರಿಸುವ ಗುಣ ಇರಲೇ ಬೇಕು.  ಈ ವಿಚಾರಕ್ಕೆ ಒಬ್ಬ ರಾಜಕಾರಣಿಯನ್ನು ನಾವು ಅನುಸರಿಸಬೇಕು.  ಅವನಿಗೆ ಚಪ್ಪಲಿ ಏಟು ಕೊಟ್ಟರೂ ಆತ ನಗುತ್ತಾ ಇರುತ್ತಾನೆ.  ಹಾಗೆಂದು ನಮಗೆ ಸಂಬಂಧ ಇಲ್ಲದವರು ಚಪ್ಪಲಿಗೆ ಸಮ.  ನಮ್ಮ ಲೇಖನ ಎಂದರೆ ಅವರ ಮನೋಭಾವ ನಾವು ಕೂಡ ಅವರ ಮಟ್ಟಕ್ಕೆ ಇಳಿದು ಅವರೊಂದಿಗೆ ಜಗಳಕ್ಕೆ ನಿಂತರೆ ಏನು ಪ್ರಯೋಜನ ಅಲ್ಲವೇ? ಕೆಲವು ಬಾರಿ ಜಾಲತಾಣಗಳ ಲೇಖನ ಒಬ್ಬರ ನಡವಳಿಕೆಗೆ ಇನ್ನೊಬ್ಬರ ಪ್ರತಿಕ್ರಿಯೆ ಆಗಿರುತ್ತದೆ.  ಕೆಲವೊಮ್ಮೆ ಅದು ತಪ್ಪಲ್ಲವೆನಿಸಿದರೂ ಯಾರದೇ ಆಗಲಿ ಮನ ನೋಯಿಸುವ ಅಥವಾ ನೇರ ಆರೋಪಣೆ ಸಲ್ಲದು,  ಮತ್ತು ಕೆಲವರು ಹಾಸ್ಯ ಲೇಖನಗಳೆಂದು ವೈಯಕ್ತಿಕವಾಗಿ ಒಬ್ಬರ ವಿಷಯಗಳನ್ನು ಬರೆಯುವುದು ಆಡಿಕೊಳ್ಳುವುದು ಮಾಡುತ್ತಿರುತ್ತಾರೆ.  ಅದಕ್ಕೂ ಒಂದು ಮಿತಿ ಎಂದು ಇದೆ ಎಂಬ ಅರಿವು ಬರಹಗಾರರಲ್ಲಿ ಇರಬೇಕು.

ಇಂತಹ ಅನೇಕ ಮಾಯಾ ಜಾಲವನ್ನು ಹೊಂದಿರುವ ಬರವಣಿಗೆಯ ಪ್ರಪಂಚ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ.  ನಮ್ಮತನ ಕಳೆದುಕೊಳ್ಳದೇ, ನಮ್ಮ ವಿಚಾರ ಧಾರೆಯನ್ನು ನಾಲ್ಕು ಜನರಿಗೆ ಅನುಕೂಲವಾಗುವಂತೆ ತಿಳಿಸಿ ಮೆಚ್ಚಿದವರಿಗೆ ಋಣಿಯಾಗಿ , ಖಂಡಿಸಿದವರಲ್ಲಿ ಸತ್ವವಿದ್ದರೆ ಅವರ ಸಲಹೆ ಸ್ವೀಕರಿಸಿ ಇಲ್ಲದೇ ಹೋದಲ್ಲಿ ನಿರ್ಲಕ್ಷಿಸಿ ಗಾಂಭೀರ್ಯತೆಯಿಂದ ನಡೆದಲ್ಲಿ ಮಾಯಾಜಾಲದಲ್ಲಿ ಕಳೆದು ಹೋಗದೇ.  ಮಾಯಾ ಜಾಲದಲ್ಲಿ ಮಿನುಗಬಹುದು.


3 thoughts on “

  1. ಲೇಖನ ಇಂದಿನ ಯಾವ ಸಾಹಿತಿಗಳಿಗೆ ಅತ್ಯಂತ ಸೂಕ್ತವಾಗಿ ಮಾರ್ಗದರ್ಶನ ನೀಡುವಂತಿದೆ ರಿ…

Leave a Reply

Back To Top