ಅಂಕಣ ಬರಹ
ರಾಮಕೃಷ್ಣ ಗುಂದಿ ಅವರ ಆತ್ಮಕಥೆ—53
ನಾನೂ ‘ಕತೆಗಾರ’ನಾದೆ
ನಮ್ಮ ಊರು, ಜಾತಿ, ಜನರೆಲ್ಲರೂ ಜನಪದ ಸಂಸ್ಕೃತಿಯ ಆವರಣದಲ್ಲಿಯೇ ಬದುಕು ಕಟ್ಟಿಕೊಂಡವರು. ಬದುಕಿನ ದೈನಂದಿನ ಕ್ರಿಯೆಗಳೆಲ್ಲವೂ ಒಂದು ಲಯದಲ್ಲಿಯೇ ನಡೆಯುವಂಥ ಜಾಯಮಾನದಲ್ಲೇ ನಮ್ಮ ಜೀವನ ಸಾಗುತ್ತದೆ. ನೆಲಮೂಲ ಸಂಸ್ಕೃತಿಯ ಸ್ವಾರಸ್ಯ ಮತ್ತು ಶಕ್ತಿಯೇ ಅಂಥ ಸಂಪನ್ನತೆಯನ್ನು ನಮಗೆ ಕರುಣಿಸಿದೆ.
೧೯೬೨ ನೇ ಇಸ್ವಿಯಲ್ಲಿ ಭಾರತ ಮತ್ತು ಚೈನಾ ನಡುವಿನ ಯುದ್ಧ ಸಂಭವಿಸಿದಾಗ ನಾನು ಬನವಾಸಿಯಲ್ಲಿ ಮೂರನೆಯ ತರಗತಿಯಲ್ಲಿ ಓದುತ್ತಿದ್ದೆ. ಆಗ ಸರಕಾರವು ಒಂದು ಘೋಷಣೆ ಮಾಡಿ ಜನಸಾಮಾನ್ಯರಿಂದಲೂ ಸೈನಿಕ ಸಹಾಯನಿಧಿಯನ್ನು ಸಂಗ್ರಹಿಸುತ್ತಲಿತ್ತು. ಶಾಲೆಯ ಶಿಕ್ಷಕರೂ, ಮಕ್ಕಳೂ ಸೇರಿ ಶಕ್ತ್ಯಾನುಸಾರ ಹಣ ಸಂಗ್ರಹ ಮಾಡುತ್ತಿದ್ದರು. ಕೆಲವರು ಹಾಡು ಹೇಳುತ್ತ ಸೈನಿಕರಿಗಾಗಿ ಹಣ ನೀಡುವಂತೆ ಪ್ರೇರಣೆ ನೀಡುತ್ತಿದ್ದರು.
ಅದೇ ಸಂದರ್ಭದಲ್ಲಿ ನಾನೂ ಒಂದು ಕವಿತೆ ಬರೆದಂತೆ ನೆನಪು. ಕವಿತೆಯೆಂದರೆ ಕವಿತೆಯೂ ಅಲ್ಲದ, ಪ್ರಾಸಕ್ಕೆ ಪ್ರಯಾಸ ಪಟ್ಟು ಬರೆದ ಹಾಡು ಅದು. ಅದರ ಪೂರ್ಣ ಪಾಠ ನನಗೆ ನೆನಪಿಲ್ಲ. ಪಲ್ಲವಿಯ ಮೊದಲ ಸಾಲುಗಳು ಹೀಗಿದ್ದ ನೆನಪು…..
“ಸೈನಿಕರಿಗೆ ನೀಡಿರಿ ನಿಮ್ಮ ಹಣ ಗಡಿಯಲ್ಲಿ ಬಿದ್ದಿವೆ ನೋಡಿ ಹೆಣ”
ಹೀಗೆ ಆರಂಭವಾದ ಕವಿತೆ. ನಮ್ಮ ತಂದೆಯವರೇ ನಮ್ಮ ತರಗತಿಯ ಶಿಕ್ಷಕರೂ ಆಗಿದ್ದರು. ಅವರಿಗೆ ತೋರಿಸಿದೆ. ತರಗತಿಯಲ್ಲಿ ಓದಿ ಹೇಳಿದಂತೆ ನೆನಪು.
ಕಾಲೇಜು ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಒಂದಿಷ್ಟು ಸಾಹಿತ್ಯ-ಸಾಂಸ್ಕೃತಿಕ ಪ್ರಭಾವಲಯದಲ್ಲಿ ನನ್ನನ್ನು ಪರಿಷ್ಕರಿಸಿಕೊಳ್ಳುವ ಎಲ್ಲ ಅವಕಾಶಗಳೂ ಇದ್ದವು. ಆದರೆ ವಯೋ ಸಹಜ ಹುಡುಗಾಟಿಕೆಯಲ್ಲಿ ದಿನ ಕಳೆದೆನಲ್ಲದೆ ಇಂಥ ಪ್ರಭಾವಕ್ಕೆ ನಾನು ಒಳಗಾಗಲಿಲ್ಲ. ಗೆಳೆತನದ ಸಲುಗೆ, ಹರೆಯದ ಹುಚ್ಚು ಮನಸ್ಸಿನ ಕೈಗೆಟುಕದ ಕನಸುಗಳು, ಅದರ ಪರಿಣಾಮದಿಂದಲೇ ಪ್ರೇರಣೆಗೊಂಡು ಆಡುವ ಹಲವು ಬಗೆಯ ಹುಚ್ಚಾಟಗಳು……… ಇತ್ಯಾದಿ ಕಾಲೇಜು ವಿದ್ಯಾರ್ಥಿ ಬದುಕಿನ ಹರೆಯದ ಕಾಲಾವಧಿಯನ್ನು ವ್ಯರ್ಥವಾಗಿಸಿದವು.
ನನ್ನ ಕೆಲವು ವಿದ್ಯಾರ್ಥಿಗಳು ಕಾಲೇಜು ಓದಿನ ದಿನಗಳಲ್ಲಿಯೇ ಸಾಹಿತ್ಯ-ಸಾಂಸ್ಕೃತಿಕ ಎಂದೆಲ್ಲ ಗಂಭೀರ ಚಟುವಟಿಕೆಗಳಲ್ಲಿ ತೊಡಗಿಕೊಂಡದ್ದನ್ನು ಕಂಡಾಗ ನನಗೇ ಅಚ್ಚರಿ ಮೂಡಿತಲ್ಲದೆ ಅಂಥ ವಿದ್ಯಾರ್ಥಿಗಳ ಕುರಿತು ಈಗಲೂ ಅಭಿಮಾನ ಉಕ್ಕಿ ಬರುತ್ತದೆ. ವೆಂಕಟ್ರಮಣ ಗೌಡ, ಫಾಲ್ಗುಣ ಗೌಡ, ವಿವೇಕ್ ಶಾನಭಾಗ, ಕೃಷ್ಣ ನಾಯಕ ಹಿಚ್ಕಡ, ಪ್ರಕಾಶ್ ಶೆಟ್ಟಿ ಕಡಮೆ, ವಿನಯ ವಕ್ಕುಂದ, ಅಕ್ಷತಾ ಕೃಷ್ಣಮೂರ್ತಿ ಮುಂತಾದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಉಲ್ಲೇಖಿಸಬಹುದು.
ನಾನು ನನ್ನ ಕಾಲೇಜು ವಿದ್ಯಾರ್ಥಿ ಬದುಕಿನಲ್ಲಿ ಒಂದಿಷ್ಟು ಯಕ್ಷಗಾನದ ನಂಟು ಬೆಳೆಸಿಕೊಂಡೆನಲ್ಲದೆ ಸಾಹಿತ್ಯ-ಸಾಂಸ್ಕೃತಿಕ ಸಂಘಟನೆ ಮತ್ತು ವ್ಯಕ್ತಿತ್ವಗಳ ಸಂಪರ್ಕ ಸಾಧಿಸಿಕೊಳ್ಳಲಿಲ್ಲ. ಹಲವಾರು ಕವಿ ಲೇಖಕರ ಕೆಲವು ಕೃತಿಗಳನ್ನಾದರೂ ತಕ್ಕಮಟ್ಟಿಗೆ ಓದಿಕೊಂಡಿದ್ದೆನಾದರೂ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ, ಚಿಂತನೆಗಳಲ್ಲಿ ಆಸಕ್ತಿಯಿಂದ ನನ್ನೊಳಗಿನ ಕಿಂಚಿತ್ ಕವಿತಾ ಶಕ್ತಿಯನ್ನು ಪರಿಷ್ಕರಣೆಗೊಳಿಸುವುದು ನನಗೆ ಸಾಧ್ಯವಾಗಲೇ ಇಲ್ಲ.
ಹುಚ್ಚು ಪ್ರೇಮದ ಹುಡುಗಾಟದಲ್ಲಿ ಆಗಾಗ ಗೀಚಿದ.
“ಚೆಂಗುಲಾಬಿ ನಿನ್ನಲೇಕೆ ಸೌಂದರ್ಯವ ಹೊಸೆದ ನೀ ಹುಟ್ಟಿದ ಗಿಡಕೆ ದೇವ ಮುಳ್ಳನೇಕೆ ಬೆಸೆದ?”
ಎಂಬರ್ಥ ಹಾಡುಗಳೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಾಗ ರೋಮಾಂಚಿತನಾದರೂ ಈ “ಕವಿತನ” ಎಂಬುದು ನನಗೆ ಮರಿಚಿಕೆಯಾಗಿಯೇ ಉಳಿಯಿತು. ಅಧ್ಯಾಪಕನಾದಮೇಲೂ ಅಲ್ಲಿ ಇಲ್ಲಿ ಪ್ರಕಟಿಸಿದ ಅಪರೂಪದ ಕವಿತೆಗಳೂ ಖುಷಿ ನೀಡಲಿಲ್ಲ. ಚಂದ್ರಶೇಖರ ಪಾಟೀಲರ ‘ಸಂಕ್ರಮಣ’ಪತ್ರಿಕೆಯಲ್ಲಿ ನಾನು ಬರೆದ “ತಾತನ ನಾತ”ಎಂಬ ಕವಿತೆಯೊಂದು ಪ್ರಕಟವಾದ ಬಳಿಕ ನನಗೇ ಮುಜುಗರವೆನ್ನಿಸಿ ಕವಿತೆಯ ಗೊಡವೆಯನ್ನೇ ಬಿಟ್ಟುಕೊಟ್ಟೆ.
ಎಪ್ಪತ್ತರ ದಶಕದಲ್ಲಿ ಕರ್ನಾಟಕ ರಾಜ್ಯದಾದ್ಯಂತ ಆರಂಭವಾದ ದಲಿತ ಬಂಡಾಯ ಚಳುವಳಿ ನನ್ನನ್ನು ಮುಖ್ಯವಾಗಿ ಪ್ರಭಾವಿಸಿತು. ನಾನು ಹುಟ್ಟು ದಲಿತನಾಗಿರುವುದು, ಅದಾಗಲೇ ಹಲವಾರು ಸಂದರ್ಭಗಳಲ್ಲಿ ಅಸ್ಪೃಶ್ಯತೆಯ ನೋವಿಗೆ ಮುಖಾಮುಖಿಯಾಗಿರುವುದು ಇದಕ್ಕೆ ಕಾರಣವಾಗಿರಬಹುದು. ದೇವಾಲಯಗಳಲ್ಲಿ, ಹೋಟೆಲುಗಳಲ್ಲಿ, ಬಹುತೇಕ ಸಾರ್ವಜನಿಕ ಸಮಾರಂಭಗಳಲ್ಲಿ ನಮಗಿರುವ ನಿಷೇಧವನ್ನು, ತತ್ಪರಿಣಾಮವಾಗಿ ನನ್ನ ಜಾತಿ ಬಂಧುಗಳು ಅನುಭವಿಸಿದ ಸಂಕಟವನ್ನು ಕಣ್ಣಾರೆ ಕಂಡುದರಿಂದ ನನ್ನೊಳಗೆ ಬಚ್ಚಿಟ್ಟುಕೊಂಡ ನೋವಿನ ಬೆಂಕಿಗೆ ಒಂದು ಅಭಿವ್ಯಕ್ತಿ ನೀಡುವುದಕ್ಕೆ ದಲಿತ ಬಂಡಾಯ ಚಳುವಳಿ ನನಗೆ ಬಹುಮುಖ್ಯವಾದ ಸಶಕ್ತ ಪ್ರೇರಣೆಯಾಯಿತು.
ರಾಜ್ಯಮಟ್ಟದಲ್ಲಿ ಈ ಚಳುವಳಿಯ ನಾಯಕರೆನ್ನಿಸಿದ ದೇವನೂರು, ಸಿದ್ಧಲಿಂಗಯ್ಯ, ಕುಂ.ವೀ, ಬರಗೂರು ಮುಂತಾದ ಲೇಖಕರೆಲ್ಲ ನಮ್ಮ ಗಮನ ಸೆಳೆಯುತ್ತ ನಮ್ಮನ್ನು ಚಿಂತನೆಗೆ ಈಡು ಮಾಡಿದರು. ಸ್ವತಃ ಬರಗೂರು ರಾಮಚಂದ್ರಪ್ಪ ಅವರು ಬಂಡಾಯ ಚಳುವಳಿಯನ್ನು ಸಂಘಟನಾತ್ಮಕವಾಗಿ ಬಲಗೊಳಿಸುವ ಉದ್ದೇಶದಿಂದ ನಮ್ಮ ಜಿಲ್ಲೆಗೂ ಬಂದರು. ಜಿಲ್ಲೆಯ ಆರ್.ವ್ಹಿ. ಬಂಢಾರಿ, ಜಿ.ಎಸ್. ಅವಧಾನಿ, ವಿಷ್ಣು ನಾಯ್ಕ, ಶಾಂತರಾಮ ನಾಯಕ, ವ್ಹಿ.ಜೇ,ನಾಯಕ ಇತ್ಯಾದಿ ಹಿರಿಯರ ಮೂಲಕ ನಮಗೂ ಪರಿಚಿತರಾದರು. ಬಂಢಾರಿಯವರ ಹಿರಿತನದಲ್ಲಿಯೇ ಜಿಲ್ಲಾ ಘಟಕವೂ ರಚನೆಗೊಂಡು ನಾವು ಯುವಕರೆಲ್ಲ ಅದರ ಸದಸ್ಯರಾದೆವು. ಬಂಡಾಯದ ಆಶಯಗಳು, ಎಡಪಂಥೀಯ ವಿಚಾರಧಾರಯ ಅರಿವು ಮೂಡಿಸುವ ಚರ್ಚೆ-ಸಂವಾದಗಳು ನಡೆಯುತ್ತ ಸಂಘಟನೆಯ ಆಶೋತ್ತರಗಳು ಜನಸಾಮಾನ್ಯರಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದವು. ಚಳುವಳಿಯ ಕಾವು ಜಿಲ್ಲೆಯನ್ನು ವ್ಯಾಪಿಸಿತು. ಇದರ ಪ್ರಭಾ ವಲಯದಲ್ಲಿ ನಾನು ಮತ್ತು ನನ್ನಂಥ ಹಲವು ಗೆಳೆಯರು ಬಂಡಾಯದ ಧೋರಣೆಯಲ್ಲಿ ಬರೆಯಲು ಆರಂಭಿಸಿದೆವು.
ಅಧ್ಯಾಪಕ ವೃತ್ತಿಯ ಆರಂಭದ ದಿನಗಳಲ್ಲಿ ನನಗೆ ಅತ್ಯಾಪ್ತರಾದ ಅಧ್ಯಾಪಕ ಮಿತ್ರರೆಂದರೆ ಆಂಗ್ಲಭಾಷಾ ಉಪನ್ಯಾಸಕ ಸದಾನಂದ ನಾಯಕ. ಕಾಲೇಜಿನ ಕಾರ್ಯಭಾರದುದ್ದಕ್ಕೂ ನಾವು ಹೆಚ್ಚು ಜೊತೆಯಾಗಿ ಇರುತ್ತಿದ್ದೆವು. ಕಾಲೇಜಿನ ‘ಕಲಾಮಂಡಲ’, ‘ಅಭಿನಯ ಮಂಟಪ’ ಇತ್ಯಾದಿ ಸಂಘಟನೆಗಳಲ್ಲಿ ಒಟ್ಟಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದೆವು. ಕ್ಯಾಂಟೀನ್‌ನಲ್ಲಿ ಚಹಾ ಕುಡಿಯುವುದಿದ್ದರೆ, ಗ್ರಂಥಾಲಯದಲ್ಲಿ ಓದುವುದಿದ್ದರೆ ಜೊತೆಯಾಗಿಯೇ ಹೊರಡುತ್ತಿದ್ದವು. ಅಧ್ಯಾಪಕರನ್ನು ಬಿಡಿ, ವಿದ್ಯಾರ್ಥಿಗಳಿಗೂ ನಮ್ಮ ಗಾಢ ಸ್ನೇಹದ ಸುಳಿವು ದೊರೆತಿತ್ತು. ನಾವು ಜೊತೆಗೂಡಿಯೇ ಹೊರಡುವುದನ್ನು ನೋಡುತ್ತಲೇ ವಿದ್ಯಾರ್ಥಿಗಳು “ಹೊರಟರು ನೋಡಿ ಚಹಾ ಪುಡಿ ಸಕ್ಕರೆ!” ಎಂದು ಚೇಷ್ಟೇ ಮಾಡಿ ನಗುತ್ತಿದ್ದರಂತೆ. ಕಪ್ಪಗಿದ್ದ ನಾನು ಚಹಾಪುಡಿಯಾದರೆ, ಕೆಂಪು ಮಿಶ್ರಿತ ಬೆಳ್ಳಗಿನ ಸುಂದರ ಕಾಯದ ಸದಾನಂದ ಸಕ್ಕರೆ!
ನಮಗೆ ವಿದ್ಯಾರ್ಥಿಗಳ ಚೇಷ್ಟೆ ಗೊತ್ತಾದ ಮೇಲೂ ನಮಗೇನೂ ಬೇಸರವಾಗಲಿಲ್ಲ ಬದಲಿಗೆ ಇದು ವಿದ್ಯಾರ್ಥಿ ಬಳಗ ನಮಗೆ ನಮ್ಮ ಸ್ನೇಹಕ್ಕೆ ನೀಡಿದ ಪ್ರಶಸ್ತಿ ಎಂದೇ ಭಾವಿಸಿದ್ದೆವು. ನಮ್ಮಿಬ್ಬರ ಆಸೆ ಅಭಿರುಚಿಗಳು ಬಹುತೇಕ ಹೊಂದಾಣಿಕೆ ಆಗುತ್ತಿದ್ದವು. ಬಿಡುವಿನ ವೇಳೆಯ ಸಿನೇಮಾ, ನಾಟಕ, ಯಕ್ಷಗಾನ ಇತ್ಯಾದಿ ನೋಟಗಳಲ್ಲಿಯೂ ನಮ್ಮ ಅಭಿರುಚಿಗೆ ತಕ್ಕಂತೆಯೇ ಆಯ್ಕೆ ಮಾಡಿಕೊಳ್ಳುತ್ತಿದ್ದೆವು…..
ಅದು ‘ನೇವಿ’ ನಿರಾಶ್ರಿತರ ಸಮಸ್ಯೆಯ ಕುರಿತು ಜಿಲ್ಲೆಯಾದ್ಯಂತ ಚರ್ಚೆ ನಡೆಯುತ್ತಿದ್ದ ಸಮಯ. ಸದಾನಂದ ನಾಯಕರು ಇದೇ ಸಮಸ್ಯೆಯನ್ನು ವಸ್ತುವಾಗಿಟ್ಟು ಸಣ್ಣ ಕಥೆಯೊಂದನ್ನು ಬರೆದರು. ಅದು ಅಂದಿನ ಜನಪ್ರಿಯ ದೈನಿಕ ಸಂಯುಕ್ತ ಕರ್ನಾಟಕದ ವಾರದ ಪುರವಣೆಯಲ್ಲಿ ಪ್ರಕಟವಾಯಿತು.
ಇಲ್ಲಿಂದ ಕತೆಗಳನ್ನು ಬರೆಯುವ ಹುಚ್ಚು ನನ್ನೊಳಗೂ ಅರಳಲಾರಂಭಿಸಿತು. ಧಾರ್ಮಿಕ ನಂಬಿಕೆ ಕಾರಣದಿಂದ ನಮ್ಮ ಗ್ರಾಮ ದೇವತೆಗಳಿಗೆ ಸಲ್ಲಿಸುವ ‘ಅವಾರಿ’ ಪೂಜೆಯ ಸಂದರ್ಭದಲ್ಲಿ ನಮ್ಮ ಜಾತಿಯ ಜನರು ಅನುಭಿಸುವ ಶೋಷಣೆಯ ಕುರಿತಾದ ನೋವಿನ ಚಿತ್ರಣವೊಂದು ನನ್ನ ಮನಸ್ಸನ್ನು ಕಾಡುತ್ತಲಿತ್ತು. ಹಠದಿಂದ ಕುಳಿತು “ಅವಾರಿ” ಎಂಬ ಶೀರ್ಷಿಕೆಯಲ್ಲಿಯೇ ಸಣ್ಣಕತೆಯೊಂದನ್ನು ಬರೆದು ಅದೇ ‘ಸಂಯುಕ್ತ ಕರ್ನಾಟಕ’ ದೈನಿಕಕ್ಕೆ ಕಳುಹಿಸಿ ಪ್ರಕಟಣೆಯ ದಿನಾಂಕಕ್ಕೆ ಆಸೆಯಿಂದ ಕಾಯುತ್ತ ಕುಳಿತೆ.
ನನ್ನ ದುರಾದೃಷ್ಟ! ಕತೆಯು ಅಸ್ವೀಕೃತವೆಂದೂ ಪ್ರಕಟಣೆ ಸಾದ್ಯವಿಲ್ಲವೆಂದೂ ಪತ್ರಿಕೆಯಿಂದ ಸಂದೇಶ ಬಂತು. ತುಂಬಾ ನಿರಾಶೆಯಾಯಿತು. ಕೆಲವು ದಿನ ನೋವಿನಲ್ಲಿ ಕಳೆದೆನಾದರೂ ಬರೆಯಬೇಕೆಂಬ ಉತ್ಸಾಹ ಅಡಗಿರಲಿಲ್ಲ. ಕೆಲವೇ ದಿನಗಳಲ್ಲಿ ನಮ್ಮದೇ ಜಾತಿ ಸಮಸ್ಯೆಯ ವಸ್ತುವನ್ನಾಧರಿಸಿ “ಇರಿತ” ಎಂಬ ಕತೆಯೊಂದನ್ನು ಬರೆದು ಮತ್ತೆ “ಸಂಯುಕ್ತ ಕರ್ನಾಟಕ” ದೈನಿಕಕ್ಕೆ ಕಳುಹಿಸಿ ಕಾಯತೊಡಗಿದೆ.
೧೫ ಅಕ್ಟೋಬರ್ ೧೯೮೧ ರ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಪುರವಣೆಯಲ್ಲಿ ನನ್ನ ಪ್ರಪ್ರಥಮ ಕಥೆ “ಇರಿತ” ಪ್ರಕಟವಾಯಿತು. ಅಂದು ಅನುಭವಿಸಿದ ಆನಂದ ಶಬ್ಧಾತೀತವಾದದ್ದು!
ಮುಂದಿನ ದಿನಗಳಲ್ಲಿ ನನ್ನ ಹಲವು ಕಥೆಗಳಿಗೆ ವೇದಿಕೆಯಾದದ್ದು ಇದೇ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಪುರವಣಿ. ನಾನು ಬರೆದ “ಅಪ್ಪ” ಎಂಬ ಕತೆಗೆ ತಿಂಗಳ ಕಥಾ ಸ್ಪರ್ಧೆಯ ದ್ವೀತಿಯ ಬಹುಮಾನ ಕೂಡ ದೊರೆಯಿತು. ಹೀಗೆ ನನ್ನನ್ನು ಒಬ್ಬ ಕತೆಗಾರನೆಂದು ನಾಡಿಗೆ ಪರಿಚಯಿಸಿದ ಮೊದಲ ಪತ್ರಿಕೆ “ಸಂಯುಕ್ತ ಕರ್ನಾಟಕ” ಅದಕ್ಕೆ ನಾನು ಚಿರಋಣಿ.
ಮುಂದಿನ ದಿನಗಳಲ್ಲಿ ನಾಡಿನ ಪ್ರತಿಷ್ಠಿತ ದೈನಿಕಗಳಲ್ಲಿ ಒಂದಾದ ‘ಉದಯವಾಣಿ’, ವಾರಪತ್ರಿಕೆಗಳಾದ ‘ತರಂಗ’, ‘ಸುಧಾ’ ಬಿ.ವಿ ವೈಕುಂಟ ರಾಜು ಅವರ ‘ವಾರಪತ್ರಿಕೆ’ ಮಾಸ ಪತ್ರಿಕೆಗಳಾದ ‘ತುಷಾರ’, ‘ಮಯೂರ’ ಮುಂತಾದವುಗಳು ನನ್ನ ಕತೆಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿ ನಾನೊಬ್ಬ ‘ಕತೆಗಾರ’ನೆಂದು ಗುರುತಿಸಿಕೊಳ್ಳಲು ಪ್ರೇರಕ ಶಕ್ತಿಗಳಾದವು.
೧೯೮೪ ರಲ್ಲಿ ಅಂಕೋಲೆಯ ರಾಘವೇಂದ್ರ ಪ್ರಕಾಶನವು ನನ್ನ ಮೊದಲ ಕಥಾಸಂಕಲನ ‘ಅವಾರಿ’ ಯನ್ನು ಪ್ರಕಟಿಸಿತು. ನಾಡಿನ ಖ್ಯಾತ ವಿಮರ್ಶಕರಾದ ಪ್ರೊ.ಟಿ.ಪಿ. ಅಶೋಕ ಅವರು ಕೃತಿಯನ್ನು ಬಿಡುಗಡೆಗೊಳಿಸಿ ಮೆಚ್ಚುಗೆಯ ಮಾತನ್ನಾಡಿ ಬೆನ್ನು ತಟ್ಟಿದರು. ‘ಸಂಯುಕ್ತ ಕರ್ನಾಟಕ’ ದೈನಿಕವು ‘ಅವಾರಿ’ ಕತೆಯನ್ನು ಪ್ರಕಟಣೆಗೆ ನಿರಾಕರಿಸಿದರೂ ನಾನು ಪ್ರೀತಿಯಿಂದ ಬರೆದ ನನ್ನ ನೆಚ್ಚಿನ ಕತೆಯಾದ್ದರಿಂದ ಸಂಕಲನಕ್ಕೆ ‘ಅವಾರಿ’ ಎಂದು ಹೆಸರಿಟ್ಟು ಪ್ರಕಟಿಸಿದ್ದೆ. ಇದೇ ಕಥೆ ಮುಂದೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬೆಂಗಳೂರು, ಪ್ರಕಟಿಸಿದ “ದಲಿತ” ಎಂಬ ಅಂಥಾಲಜಿಯಲ್ಲಿಯೂ ಸೇರ್ಪಡೆಗೊಂಡಿತು. ಅಲ್ಲದೇ ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಪ್ರಕಟಿಸಿದ “An Anthology of dalit writings” ಎಂಬ ಹೊತ್ತಿಗೆಯಲ್ಲಿಯೂ ಮರು ಮುದ್ರಣಗೊಂಡಿತು.
೧೯೯೬ ರ ಸಪ್ಟೆಂಬರ್ ತಿಂಗಳಲ್ಲಿ ಅಂಕೋಲೆಯ ರಾಘವೇಂದ್ರ ಪ್ರಕಾಶನದಿಂದಲೇ ನನ್ನ ಎರಡನೆಯ ಕಥಾಸಂಕಲನ “ಕಡಲ ಬೆಳಕಿನ ದಾರಿಗುಂಟ” ಪ್ರಕಟನೆಗೊಂಡಿತು. ೨೦೦೦ನೇ ಇಸ್ವಿಯಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಬಿ.ಕಾಂ. ಭಾಗ ಒಂದರ ಕನ್ನಡ ಅವಶ್ಯಕ ಪಠ್ಯ ಪುಸ್ತಕದಲ್ಲಿ ಈ ಸಂಕಲನದ ‘ಕಡಲ ಬೆಳಕಿನ ದಾರಿಗುಂಟ’ ಎಂಬ ಕತೆಯನ್ನು ಮುದ್ರಿಸಿ ವಿದ್ಯಾರ್ಥಿಗಳ ಓದಿಗೆ ಅವಕಾಶ ಕಲ್ಪಿಸಿತ್ತು.
೨೦೦೭ ರಲ್ಲಿ ನನ್ನ ಮೂರನೆಯ ಕಥಾಸಂಕಲನ ‘ಅತಿಕ್ರಾಂತ’ವನ್ನು ನನ್ನ ಶ್ರೀಮತಿ ನಿರ್ಮಲಾ ಗುಂದಿ ಸ್ವತಃ ಪ್ರಕಾಶಕಿಯಾಗಿ ಬಿಡುಗಡೆಗೊಳಿಸಿದರು. ಇಲ್ಲಿಯ ಶಿರ್ಷಿಕೆಯ ಕಥೆ ‘ತುಷಾರ’ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡುದಲ್ಲದೆ ಮಾಸಿಕ ಕಥಾಸ್ಪರ್ಧೆಯಲ್ಲಿ ನೀಡುವ “ಎಚ್.ಎಂ.ಟಿ ಕಥಾ ಪ್ರಶಸ್ತಿ”ಯನ್ನು ಪಡೆದುಕೊಂಡಿತ್ತು. ಅಂಕೋಲೆಯ ಸಾಹಿತ್ಯ ಪರಿಷತ್ ನಡೆಸಿದ ತಾಲೂಕು ಸಮ್ಮೇಳನದಲ್ಲಿ ನನ್ನ ಕನ್ನಡ ವಿದ್ಯಾಗುರು ಪ್ರೊ. ವಿ.ಏ. ಜೋಷಿ ಈ ಹೊತ್ತಿಗೆಯನ್ನು ಬಿಡುಗಡೆಗೊಳಿಸಿದರೆ, ಖ್ಯಾತ ಕತೆಗಾರ ಪ್ರಹ್ಲಾದ ಅಗಸನಕಟ್ಟೆ ಕೃತಿಯ ಕುರಿತು ಮೆಚ್ಚುಗೆಯ ಮಾತನ್ನಾಡಿ ಆಶೀರ್ವದಿಸಿದ್ದರು.
ಇದೇ ಕಥಾ ಸಂಕಲನಕ್ಕೆ ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು ಇವರು ಚಿತ್ರನಟ ಲೇಖಕ ವಿಶುಕುಮಾರ ಹೆಸರಿನಲ್ಲಿ ಕೊಡಮಾಡುವ “ವಿಶುಕುಮಾರ್ ಪ್ರಶಸ್ತಿಯನ್ನು ೨೦೦೯ ರಲ್ಲಿ ನೀಡಿ ಗೌವಿಸಿತು.
೨೦೧೫ ರಲ್ಲಿ ನನ್ನ ನಾಲ್ಕನೆಯ ಕಥಾ ಸಂಕಲನ “ಸೀತೆ ದಂಡೆ ಹೋವೇ”ಎಂಬ ಹೊತ್ತಿಗೆಯನ್ನು ನಾನೇ ಪ್ರಕಾಶಕನೂ ಆಗಿ ಬಿಡುಗಡೆಗೊಳಿಸಿದೆ.
ಯಾವಾಗಲೂ ನನ್ನ ಕಥಾ ಲೇಖನದ ಕುರಿತು ಪ್ರೀತಿ ಅಭಿಮಾನ ತೋರುತ್ತಲೇ ಇದ್ದ ರಾಘವೇಂದ್ರ ಪ್ರಕಾಶನ ಸಂಸ್ಥೆಯ ಒಡೆಯರಾದ ವಿಷ್ಣು ನಾಯ್ಕರು ನನ್ನ ನಾಲ್ಕೂ ಕಥಾ ಸಂಕಲನದ ಎಲ್ಲ ಕತೆಗಳನ್ನು ಸಂಕಲಿಸಿ “ಡಾ. ರಾಮಕೃಷ್ಣ ಗುಂದಿ ಅವರ ಸಮಗ್ರ ಕತೆಗಳು” ಎಂಬ ಶೀರ್ಷಿಕೆಯಲ್ಲಿ ೨೦೨೦ ರಲ್ಲಿ ಸಮಗ್ರ ಕತೆಗಳ ಸಂಕಲವನ್ನು ಪ್ರಕಟಿಸಿ ಬೆಂಬಲಿಸಿದ್ದಾರೆ.
ಕಾಲಕಾಲಕ್ಕೆ ಪ್ರಕಟಗೊಳ್ಳುವ ನನ್ನೆಲ್ಲ ಹೊತ್ತಿಗೆಗಳಿಗೆ ಮುನ್ನುಡಿ ಬೆನ್ನುಡಿಗಳನ್ನು ಬರೆಯುತ್ತ ಕತೆಗಳ ಕುರಿತು ಪತ್ರಿಕೆಗಳಲ್ಲಿ ವಿಮರ್ಶೆಯನ್ನು ಬರೆಯುತ್ತ ನನ್ನ ಬೆನ್ನು ತಟ್ಟಿದ ಗೌರೀಶ ಕಾಯ್ಕಿಣಿ, ಪಿ. ಲಂಕೇಶ್, ಡಾ. ಆರ್.ವಿ. ಭಂಡಾರಿ, ಡಾ. ಶ್ಯಾಮ ಸುಂದರ ಬಿದರ ಕುಂದಿ, ಡಾ. ಪ್ರಹ್ಲಾದ ಅಗಸನ ಕಟ್ಟೆ, ಆರ್.ಡಿ. ಹೆಗಡೆ ಆಲ್ಮನೆ, ಡಾ. ವಿಠ್ಠಲ ಭಂಡಾರಿ, ಡಾ. ಶ್ರೀಪಾದ ಶೆಟ್ಟಿ, ಮಹಾಬಲ ಮೂರ್ತಿ ಕೊಡ್ಲೆಕೆರೆ, ಪ್ರೊ. ವಿಜಯಾ ಡಿ. ನಾಯ್ಕ, ಶ್ರೀಮತಿ ನಾಗರೇಖಾ ಗಾಂವಕರ, ಶ್ರೀಮತಿ ಅಕ್ಷತಾ ಕೃಷ್ಣ ಮೂರ್ತಿ ಮೊದಲಾದ ಎಲ್ಲ ಮಹನೀಯರೂ ನನ್ನ ಸ್ಮರಣೆಯ ಪುಟದಲ್ಲಿ ಶಾಶ್ವತ ಗೌರವದ ನೆನಪಾಗಿ ಉಳಿದಿದ್ದಾರೆ.
ರಾಮಕೃಷ್ಣ ಗುಂದಿ
ಕನ್ನಡದಖ್ಯಾತಕತೆಗಾರ. ಅವಾರಿ, ಕಡಲಬೆಳಕಿನದಾರಿಗುಂಟ, ಅತಿಕ್ರಾಂತ, ಸೀತೆದಂಡೆಹೂವೇ …ಈನಾಲ್ಕುಅವರಕಥಾಸಂಕಲನಗಳು. ಅವರಸಮಗ್ರಕಥಾಸಂಕಲನಸಹಈಚೆಗೆಪ್ರಕಟವಾಗಿದೆ.ಯಕ್ಷಗಾನಕಲಾವಿದ. ಕನ್ನಡಉಪನ್ಯಾಸಕರಾಗಿಅಂಕೋಲಾದಜೆ.ಸಿ.ಕಾಲೇಜಿನಲ್ಲಿಸೇವೆಪ್ರಾರಂಭಿಸಿ, ಕಾರವಾರದದಿವೇಕರಕಾಲೇಜಿನಲ್ಲಿಪ್ರಾಂಶುಪಾಲರಾಗಿಕರ್ತವ್ಯನಿರ್ವಹಿಸಿನಿವೃತ್ತರಾಗಿದ್ದಾರೆ. ಯಕ್ಷಗಾನಅಕಾಡೆಮಿಸದಸ್ಯರಾಗಿಸೇವೆಸಲ್ಲಿಸಿದ್ದಾರೆ. ಮಗಅಮೆರಿಕಾದಲ್ಲಿಸಾಫ್ಟ್‌ವೇರ್ಎಂಜಿನಿಯರ್. ಅಗೇರಸಮುದಾಯದಿಂದಬಂದಗುಂದಿಅವರುಅದೇಜನಾಂಗದಬಗ್ಗೆಪಿಎಚ್ಡಿಪ್ರಬಂಧಮಂಡಿಸಿ, ಡಾಕ್ಟರೇಟ್ಸಹಪಡೆದಿದ್ದಾರೆ . ದಲಿತಜನಾಂಗದಕಷ್ಟನಷ್ಟನೋವು, ಅವಮಾನ, ನಂತರಶಿಕ್ಷಣದಿಂದಸಿಕ್ಕಬೆಳಕುಬದುಕುಅವರಆತ್ಮಕಥನದಲ್ಲಿದೆ. ಮರಾಠಿದಲಿತಸಾಹಿತಿಗಳ,ಲೇಖಕರಒಳನೋಟ , ಕನ್ನಡನೆಲದದಲಿತಧ್ವನಿಯಲ್ಲೂಸಹಇದೆ. ರಾಮಕೃಷ್ಣಗುಂದಿಅವರಬದುಕನ್ನುಅವರಆತ್ಮಕಥನದಮೂಲಕವೇಕಾಣಬೇಕು. ಅಂತಹನೋವಿನಹಾಗೂಬದುಕಿನ ಚಲನೆಯಆತ್ಮಕಥನವನ್ನುಸಂಗಾತಿ ..ಓದುಗರಎದುರು, ಕನ್ನಡಿಗರಎದುರುಇಡುತ್
ನಿಮ್ಮ ಕಥೆಯನ್ನೋದಿದರೆ ನಿಮಗೆ ಯಾವ ಕಥೆಗಸರನ ಪ್ರಭಾವ ಕೂಡ ತಟ್ಟಿಲ್ಲ ಎಂದೇ ಹೇಳಬೇಕು.ಅಷ್ಟು ವಿಶಿಷ್ಟವಾಗಿದೆ ನಿಮ್ಮ ಕಥನ..
ಇನ್ನೂ ಸಂಕಲನಗಳು ಬರಲಿ ಎಂಬುದು ಹಾರೈಕೆ..
ರಾಮಕೃಷ್ಣ ಗುಂದಿ ಅವರ ಅಂಕಣ ಓದುತ್ತಿರುವದಕ್ಕೆ ಖುಷಿಯಾಗುತ್ತಿದೆ.
ಅಂಕೋಲಾ ನೆನಪಿನ ಬುತ್ತಿ ತೆರೆದುಕೊಳ್ಳುತ್ತದೆ.
ತುಂಬಾ ಚೆನ್ನಾಗಿದೆ.
ಧನ್ಯವಾದಗಳು ನಿಮ್ಮ ಪ್ರೀತಿಗೆ ಫಾಲ್ಗುಣ
ಸರ್, ತಮ್ಮ ಸಾಹಿತ್ಯದ ಹಾದಿ, ಮೊದಲ ಕವಿತೆಯ ಸಾಲು, ಕತೆ, ಪ್ರಕಟಿಸಿದ ಮೊದಲ ಪತ್ರಿಕೆ, ಬೆನ್ನು ತಟ್ಟಿದವರು, ಇವನ್ನೆಲ್ಲ ಅಂಕಣದ ಮೂಲಕ ಓದಿಬಹಳ ಸಂತೋಷವಾಗುತ್ತಿದೆ.
.ತಾವು ಆಶೀರ್ವದಿಸಿ ಪ್ರೀತಿಯಿಂದ ನೀಡಿದ ‘ಸಮಗ್ರ ಕತೆಗಳು’ ಕಥಾಸಂಕಲನವನ್ನು ಓದುತ್ತಿರುವೆ. ಇನ್ನೂ ಅನೇಕ ಕಥಾ ಸಂಕಲನಗಳು ಮೂಡಿಬರಲಿ ಸರ್.