ಕಾವ್ಯ ಸಂಗಾತಿ
ವಿಷಾದವೊಂದು ಎದೆಯೊಳಗೆ
ವಿಜಯಶ್ರೀ ಹಾಲಾಡಿ
ತಿಳಿವಿಲ್ಲದೆ ಪ್ರಶ್ನಿಸಿದರೆ
ಸಾವಿರ ಸಮಾಧಾನಗಳ
ಎದೆಯಿಂದ ಕೊಡಬಹುದು;
ಕಣ್ಣೊಳಗೆ ಕಣ್ಣಿರಿಸಿ…
ಗೊತ್ತಿದ್ದೂ ಸವಾಲೆಸೆದು
ಗುಂಪು ಕಟ್ಟಿ
ತೋಳು ತಿರುವಿ ನಿಂತರೆ
ಏನೂ ಹೇಳಲಾಗುವುದಿಲ್ಲ
ಮೌನದ ಹೊರತು
ಜಾತಿ ಮತ ಧರ್ಮ
ಪ್ರತಿಷ್ಠೆಯ ಅಮಲು
ಶ್ರೇಷ್ಠತೆಯ ವ್ಯಸನ
ಭಾಷೆ ಗಡಿ ನೀರು
ಸೂರ್ಯ ಚಂದ್ರ ಚುಕ್ಕಿ
ಕೊನೆಗೆ
ತಿನ್ನುವ ಕೂಳಿಗೂ
ನಿಂದಿಸಿ ಹೊಡೆದಾಡೋಣ
ಬ್ರಹ್ಮಾಂಡಗಳು ಬಿದ್ದು ನಗಲಿ
ಬಸವನ ಹುಳುಗಳು
ಮಿಡತೆ ಹಾವು ಹಕ್ಕಿ
ನಾಯಿ ಬೆಕ್ಕು ಕರಡಿಗಳು
ಲೇವಡಿ ಮಾಡಲಿ
….
ವಾದ ವಿವಾದ ಜಗಳ
ಬಡಿದಾಟಗಳ ಅಖಾಡಕ್ಕಿಳಿದು
ಅಸಹ್ಯವಾಗಿ ಬಯ್ದು
ನಿರಂತರ ಕತ್ತಿ ಮಸೆದು
ರಕ್ತ ಸುರಿಸಿ
ಸಾಯೋಣ….
ಅಲ್ಲವೇ?!!
———————————