ಗೋನವಾರ ಕಿಶನ್ ರಾವ್ ಕವಿತೆ ಖಜಾನೆ

  ಹಾಳು ಮರೆವು

10 essential oil painting techniques and tips | Creative Bloq

ಮರೆತುಹೋಗಿದೆ.

ಅಂದೊಂದು ದಿನ

ನಾನೂ ಹೀಗೆ ಇದ್ದೆನೆ ?

ಅದೇ ಶುದ್ದ, ಜುಳು ಜುಳು

ಹರಿವ ನೀರ ಮಂದಹಾಸ

ಆ ದಿನಗಳು ಮುಗಿದದ್ದು ಯಾಕೆ ?

ಆ ನಗು ಹೋಯಿತೆಲ್ಲಿ ?

ಈ ಅರವತ್ತರ ಅವಸರ ಯಾರಿಗೆ ಬೇಕಿತ್ತು ?

ನನಗಂತೂ ಬೇಡ !

ಬೇಕೆಂದರೂ ಸಿಗದೆಂದು ತಿಳಿದೂ

ಹುಡುಕುತಿರುವೆ

‘ಕಳೆದುದು ಸಿಕ್ಕಿದೆ’

ಬೋರ್ಡ ಎಲ್ಲಾದರೂ

ಇದ್ದೀತು. ಕಂಡವರು ಹೇಳಿ

ಏನು ?  ಅದೇ ಕೆಲಸದಲ್ಲಿರುವಿರಾ ?

ಬನ್ನಿ ಹುಡುಕೋಣ

ಸಿಗುವದಿಲ್ಲೆಂದೂ ತಿಳಿದೂ

ತಿಳಿದೂ,

ಓಡುವ  ಸೂರ್ಯ ಜೊತೆ

ಹೋಗುವ ಕಾತರ ಯಾಕೆ ?

ಸಿಗಲಾರದ ಕಳೆದದ್ದು,

ಸಿಕ್ಕೀತೆ ಎನುವ ಈ ದೊಂಬರಾಟ ಸಾಕಿನ್ನು.

ಯಾರದು ? ಓಹ !

ಹೌದಲ್ಲ.

ನಿನ್ನ ನೆನಪೇ ಮಸಕಾಯಿತಲ್ಲ !

ಸಂಜೆ ನಸುಕಲಿ.

**********************

 ಎತ್ತರ.

Oil Painting Artwork for Sale, Buy Art Online | UGallery

ನೀ ಬೆಳೆಯಬೇಕು

ನಿನ್ನ ಎತ್ತರಕ್ಕಾದರೂ,

ಶೂನ್ಯ ದಿಂದಾಚೆಗೆ !

ಎತ್ತರಕ್ಕೆ, ಏರು, ಸುತ್ತ ನೀ ನೋಡು

ಅಷ್ಟಿಷ್ಟು ಹಿತ ನಿನಗೂ, ನನಗೂ,

ಅದಕಾಗಿ ಇರಬೇಕು ಅವನಿರುವ,

ಏಳೆತ್ತರಗಳ ಮೇಲೆ !

 ಹತ್ತುವ ಖುಷಿ, ಅದರ ಗಮ್ಮತ್ತು,

ಒಂದೊಂದು ಹಂತವೂ ,ಆಸ್ತಿಕ,

ನಾಸ್ತಿಕ,ವಿಚಾರ,ವಿವೇಕ,ಏನಾದರೇನು ?

ಅದು ಪರಿಪೂರ್ಣ.

ಅಲ್ಲಿಂದ ಕಾಣುವ ಕುಬ್ಜತೆ ? ಗಾತ್ರ?

ಅಜ್ಞಾನದ ಹರಿವು ,ಅದು. ಅಪರಿಪೂರ್ಣ.

ಎತ್ತರವೇ ಜ್ಞಾನ, ಏಳೆತ್ತರವೇ ಮೌನ

ಬೆಳೆಯಬೇಕು ಎತ್ತರ,

ನಿನ್ನ ಎತ್ತರಕ್ಕಾದರೂ,

ಶೂನ್ಯ ದಿಂದಾಚೆಗೆ !

ಇಳಿಯುವ ಆತುರವೇಕೋ

ಅದು ಇದ್ದೇ ಇದೆ !.

********************

  ನಿನ್ನೆ ಆಗುವ ನಾಳೆಗಳು

KOI FISHES Textured Palette Knife Oil Painting Mona Edulesco Painting by  Mona Edulesco

ನಾಳೆ ಎಂಬ ನಾನು

ಸೇರಿ ಹೋಗುವೆನು

ನೂರ್ಕೋಟಿ ನಿನ್ನೆಗಳಲಿ

ನಾನೂ ನಾನಾಗದೆ

ಇಂದಿಡೀ ಆಶಾಭಾವ,ನಾಳೆ ಸುಖದಾಶೆ

ಬೆಳಗು ಹರಿದಾಗ ಬಯಲೋ ಬಯಲು,

 ತಿರುಕನ ಕನಸು!

 ನಿರಾಶೆಯ,ಕಾರ್ಮೋಡ ಇಂದು,

ಬೆಳಗಾಯಿತು !

ನನ್ನ ಸಾವಿರಾರು ನಾಳೆಲ್ಲಾ,

 ನಿನ್ನೆಗಳೇ !

ಬರೀ ಅಂಕೆಗಳು, ಸಂಖ್ಯೆಗಳು

ಸಿದ್ಧಾಂತ ವಿರದ,  ಸೂತ್ರಗಳು  !

ನಸುನಕ್ಕೆ. ಧುತ್ತೆಂದು ಕಣ್ಮುಂದೆ

ಯಾರೆಂದೆ ? ನಾನು  ‘ ಇಂದು ‘

ನಾಚಿ ನೀರಾದೆ  !!


ಗೋನವಾರ ಕಿಶನ್ ರಾವ್

One thought on “ಗೋನವಾರ ಕಿಶನ್ ರಾವ್ ಕವಿತೆ ಖಜಾನೆ

  1. ಕಿಶನ್ ಸರ್,
    ನಿಮ್ಮ ಮೂರೂ ಕವನಗಳು ಒಳಮಾತುಗಳ ಸಂವಾದೀ ಕವನಗಳು. ಕಲಾವಿದ ಎರಡು ದಿಕ್ಕುಗಳಲ್ಲಿ ಸಂವಾದ ನಡೆಸುತ್ತಾನೆ. ಒಂದು, ತನ್ನ ಮತ್ತು ಸಮಾಜ ಪ್ರಜ್ಞೆಗಳ ನಡುವೆ. ಎರಡನೆಯದು, ತನ್ನ ಬಾಹ್ಯಪ್ರಜ್ಞೆ ಮತ್ತು ಅಂತರ್ ಪ್ರಜ್ಞೆ ಗಳ ನಡುವೆ. ಬಾಹ್ಯಜಗತ್ತಿನ ಜತೆಗಿನ ಆತನ ಸಂವಾದ, ಇಂದ್ರಿಯಮುಖೀ ಹೊರಹರಿವು, ಮತ್ತು ಅದು ಡೈವರ್ಜೆಂಟ್. ಅದಕ್ಕೆ ಶಬ್ಧ ವಿದೆ, ಶಬ್ದವಿದೆ, ಮಾತು ಕತೆಯಿದೆ.
    ಒಳಜಗತ್ತಿನ ಆತನ ಅಂತರ್ ಸಂವಾದ, ಒಳಮುಖೀ, ಎಲ್ಲೋ ಒಳಗಿನ ಕೇಂದ್ರದತ್ತಲೇ ಚಿತ್ತಮಸೂರದ ಮೂಲಕ ಯೋಚನಾರಶ್ಮಿಗಳ ಗಮನ. ಹಾಗಾಗಿ ಈ ಕ್ರಿಯೆಯಲ್ಲಿ ಸಾಕಷ್ಟು ತಾಕಲಾಟ, ತಿಕ್ಕಾಟ ಇದ್ದರೂ ಇದು ಕನ್ವರ್ಜೆಂಟ್ ಕ್ರಿಯೆ.
    ಮೇಲಿನ‌ ಮೂರೂ ಕವನಗಳು ಈ ಬಗೆಯವು.

    ಮೊದಲ ಕವನ ‘ ಹಾಳು ಮರೆವು’. ಮನೆಯಲ್ಲಿ ಪ್ರತೀದಿನವೂ ಮೊಸರು ಕಡೆದು ಸಿಕ್ಕಿದ ಬೆಣ್ಣೆಯುಂಡೆಯನ್ನು ಕಡೆದಾಗ ಉತ್ಪತ್ತಿಯಾದ ಮಜ್ಜಿಗೆಯಲ್ಲಿ ತೇಲಿಸಿ ಇಡುತ್ತಾರೆ. ಮರುದಿನ ಮೊಸರು ಕಡೆದಾಗ ಸಿಕ್ಕಿದ ಬೆಣ್ಣೆಯುಂಡೆಯನ್ನು ಹಿಂದಿನ ದಿನದ ಬೆಣ್ಣೆ ಯ ಜತೆಗೂಡಿಸಿ, ದೊಡ್ಡ ಬೆಣ್ಣೆಯುಂಡೆ ಮಜ್ಜಿಗೆಯಲ್ಲಿ ತೇಲುತ್ತೆ!. ಹೀಗೆ ದಿನದಿಂದ ದಿನಕ್ಕೆ ಗಾತ್ರದಲ್ಲಿ ಬೆಳೆದ ಬೆಣ್ಣೆಗೋಲ ನಿರ್ದಿಷ್ಟ ಗಾತ್ರ ತಲಪಿದಾಗ, ಉರುಳಿಯಲ್ಲಿ ಬಿಸಿ ಮಾಡಿ ಚೆನ್ನಾಗಿ ಕಾದು ಕಂದು ಬಣ್ಣಕ್ಕೆ ತಿರುಗಿದಾಗ ಘಮಘಮ ತುಪ್ಪವಾಗುತ್ತದೆ. ಈ ಹಾಳು ಮರೆವು ಕವನ ದಲ್ಲಿ ಹಾಳು ಏನೂ ಇಲ್ಲ, ಇದ್ದರೆ ಅದು ಕಾಳುಗಟ್ಟಿದ ತುಪ್ಪವಷ್ಟೇ. ಬಾಲ್ಯದ ಆಟದಂತಹಾ ಅರಿವು, ದಿನ ದಿನವೂ ಸಂಗ್ರಹವಾಗಿ ಕೊನೆಗೆ ಸ್ವತಾಪದಿಂದ ತುಪ್ಪವಾಗುವ ಕ್ರಿಯೆಯೇ ಈ ಅಂತರ್ ಸಂವಾದ. ತುಪ್ಪದಿಂದ ಪುನಃ ಬೆಣ್ಣೆಯಾಗಿ ಹೇಗೆ ರೂಪಾಂತರಿಸಲು ಸಾಧ್ಯವಿಲ್ಲವೋ, ಹಾಗೆಯೇ ಪಕ್ವವಾದ ಯೋಚನೆಗಳನ್ನು ಎಳೆಬೆಳೆಚಿತ್ತವೃತ್ತಿಯಾಗಿ ಹಿಂತಿರುಗಿಸಲು ಸಾಧ್ಯವಿಲ್ಲ. ಆದರೆ, ಹ್ಞಾ, ಹಿನ್ನೋಟ ಮತ್ತು ಹಿನ್ನೆಲೆ ದರ್ಶನ ಸಾಧ್ಯ. ಕವನದುದ್ದಕ್ಕೂ ಇದೇ ಪ್ರಯತ್ನ.

    ಎರಡನೇ ಕವನ, ‘ಎತ್ತರ’
    ಇದರಲ್ಲಿ ಸಂವಾದದ ಮೂಲಕ ಪ್ರಜ್ಞೆಯನ್ನು ಅತೀತದತ್ತ ಪ್ರೊಜೆಕ್ಟ್ ಮಾಡುವ ಪ್ರಯತ್ನ. ಬೆಳೆಯುವುದು ಜೀವಿಗಳಿಗೆ ಸೀಮಿತ ಕ್ರಿಯೆ ಮಾತ್ರವಲ್ಲ. ಜಿಯಾಲಜಿಯಲ್ಲಿ, ಕಲ್ಲು, ಮಣ್ಣು, ಬೆಳೆಯುತ್ತವೆ, ಸಾಂದ್ರವಾಗುತ್ತವೆ. ಪರ್ವತಗಳು ( ಉದಾಹರಣೆಗೆ ಹಿಮಾಲಯ ಪರ್ವತ ಶ್ರೇಣಿ) ಕೂಡಾ ವರ್ಷಕ್ಕೊಂದಷ್ಟು ಇಂಚು ಬೆಳೆಯುತ್ತಿದೆ. ಕವನದಲ್ಲಿ ಪ್ರಜ್ಞೆ ಬೆಳೆಯಲು ಕಾತರಿಸುತ್ತೆ. ಆಚೆ ಏನಿದೆ, ಆಚೆಯಾಚೆ ಏನಿದೆ ಎಂದು ಕಾಣುವ ಕುತೂಹಲ. ಇಲ್ಲಿ ಕವಿ ನೆಲದಿಂದ ಎತ್ತರದತ್ತ ನೋಟವನ್ನೂ ಮತ್ತು ಎತ್ತರದಿಂದ ನೆಲದ ನೆಲೆ ಯತ್ತ ಕಾಣ್ಕೆಯನ್ನೂ ಚಿತ್ರಿಸುವಾಗ, ಅವ್ಯಕ್ತ ಅನಂತವಾಗಿಯೂ, ಅನುಭವ ಸಂಕುಚಿತ ಚಿತ್ರವಾಗಿಯೂ ಗುರುತಿಸಿದ್ದನ್ನು ಗಮನಿಸಬಹುದು. ಅದು ನೋಟಪಟಲಕ್ಕೆ ಸಾಪೇಕ್ಷ ಅನಿಸುತ್ತದೆ.
    ಅವನು ಏಳೆತ್ತರದ ಮೇಲೆ ಎಂದಾಗ, ಏಳುಕೊಂಡದಾಚೆಗಿನ ದೇವರ ಚಿತ್ರ ಮನಸ್ಸಿಗೆ ಮೂಡಿದರೂ, ನಂಬಿಕೆ ಮತ್ತು ಪ್ರಶ್ನೆ ಇವೆರಡರ ಮೂಲಕ ಮನುಷ್ಯ ಮನಸ್ಸಿನ ತೊಯ್ದಾಟ ಕವನದಲ್ಲಿ ಮೂಡಿದೆ.

    ಮೂರನೆಯ ಕವನ
    ‘ ನಿನ್ನೆ ಆಗುವ ನಾಳೆಗಳು’.
    ಮೇಲಿನ ಮೂರೂ ಕವನಗಳಲ್ಲಿ ಕಾಲದ ಆಯಾಮಕ್ಕೆ ಪೂರಕವಾಗಿ ಕವನ ಬೆಳೆಯುತ್ತದೆ. ಆದರೆ ಮೂರನೆಯ ಕವನ ಕಾಲವನ್ನು ಹಿಮ್ಮುಖೀ ನೋಟದಿಂದ ದರ್ಶಿಸುವ ಪ್ರಯತ್ನ. ಜಗತ್ತಿನ ಹೆಚ್ಚಿನ ಡೈನಾಮಿಕ್ ಕ್ರಿಯೆಗಳು ಸೈಕ್ಲಿಕ್ ಆದರೂ, ಕಾಲ ಮಾತ್ರ ಏಕಮುಖೀ. ಕಾಲದಿಂದ ಆಗುವ ಪರಿಣಾಮಗಳೂ ಹಲವು ಬಾರಿ ಸೈಕ್ಲಿಕ್ ಆಗಿವೆ ತಾನೇ.( ಉದಾಹರಣೆಗೆ, ಋತುಗಳು ಇತ್ಯಾದಿ). ಭವಿಷ್ಯದತ್ತ ಕನಸು ಕಾಣುವ ಮನಸ್ಸು, ಇಂದನ್ನು ಅನುಭವಿಸಿ ನಾಳೆಯನ್ನು ಇಂದಾಗಿಸುವಾಗ ಕನಸು ಭವಿಷದಯದತ್ತ ಮುಖಮಾಡಿದರೆ, ಅನುಭವ ಚರಿತ್ರೆಯಾಗುತ್ತೆ.

    ಅಂಕೆಗಳು, ಸಂಖ್ಯೆಗಳು ಎಂದು ಕವಿ ಅನ್ನುವಾಗ, ಅಂಕೆ ಎಂಬುದನ್ನು ಬೌಂಡರಿ ಎಂಬ ಅರ್ಥದಲ್ಲಿಯೂ, ನಂಬರ್ ಎಂಬರ್ಥದಲ್ಲಿಯೂ ಗ್ರಹಿಸಬಹುದು. ಸುತ್ತ ಮುತ್ತಲಿನ ಅಗಾಧ ವಿದ್ಯಮಾನಗಳು ನಮ್ಮ ತಿಳಿವಿನ ಸೂತ್ರಕ್ಕೆ ಹೊಂದದಿರುವುದು ಜ್ಞಾನವಿಕಾಸಕ್ಕೆ ಅಗತ್ಯವಾದರೂ, ಇಂದ್ರಿಯದಾಚೆಗೆ ಕಾಣಲಾಗದ ಮನಸ್ಸಿಗೆ ಅದು ಸಿದ್ಧಾಂತವಿರದ ಸೂತ್ರವಾಗಿ ಅಂಕಿತವಾದದ್ದು ಅಚ್ಚರಿಯಲ್ಲ.

Leave a Reply

Back To Top