ಬುದ್ಧನಾಗುವತ್ತ ಟಿ.ಪಿ ಉಮೇಶ್

ಬುದ್ಧನಾಗುವತ್ತ ಬದ್ಧನಾಗಿ ನಡೆ;
ಛಿದ್ರವಾದ ಎದೆಗಳೊಡನೆ;
ದೋರು ಹುದಲಿನ ಹಾದಿಗಳಲೆ.

ಅಮಿತವಾಗದ ಪ್ರೀತಿ;
ಅರಿತು ಆಳದ ರೀತಿ;
ನಿಡಿದಾದ ವಟ ಬಿಳಲುಗಳ ಏರಿ ಆತ್ಮನೆಡೆ!
ವೃಕ್ಷದ ಆಳ ಅಗಾಧತೆಯಲಿ ಏಕಾಂತದೆಡೆ!
ಕಲ್ಪಿಸಿದ ಕಲ್ಪ ಕೈ ಗೆರೆಗಳಾಗಲಿಲ್ಲ;
ಚಿಂತಿಸಿದ ಚಿತ್ರ ಬಣ್ಣಗೂಡಲಿಲ್ಲ;
ಬುದ್ಧನ ಕಣ್ಗಳ ನೋಟ ಗುರಿತೋರಿದರೂ;
ದಾರಿ ಹೊಡೆದು ಮಾರ್ಗವಾಗಲಿಲ್ಲ!!
ಬುದ್ಧನ ಅಭಯ ಬೆಳಕು ಚಿಮುಕಿಸಿದರೂ;
ಕರುಣೆ ಉಕ್ಕಿ ಭೋರ್ಗರೆಯಲಿಲ್ಲ!!

ಸತ್ ವಾಕ್ ಗಳ ಹುಡುಕುವುದರಲಿ ಬಿಕ್ಕು ಮಗ್ನ;
ಸತ್ ಕಾರ್ಯಗಳ ಎಸಗುವುದರಲಿ ಕಾಯ ನಗ್ನ;
ತಿಗರಿ ತಿರುತಿರುಗಿ ಮೇಲೆ ಕೆಳಗೆ ನಡೆ ನುಡಿಗಳ ತಾಕಲಾಟ;
ವಸ್ತು ಸನ್ನಿಪಾತಗಳ ಬೆಂಬಿದ್ದು ಮನಸುಗಳ ಕೈಗಳಲಿ ದೊಂಬರಾಟ!

ಮನೆ ಮಡದಿ ಮಗನ ಮೋಹ ಕಳಚುವುದು
ಸ್ಮಶಾನದಲು ಕಾಣೆ;
ಕಾಯ ವಾಚಾ ಮನ ಧನ ಶುದ್ಧಿ ಈ ಬುದ್ಧನಿದ್ದ ಮನೆಯಲ್ಲು ಕಾಣೆ!
ಅಮಿತವಾಗುವ ಪ್ರೀತಿ;
ಬುದ್ಧನ ಮುಗ್ಧತೆಯ ರೀತಿ!

ಇಳಿಬಿದ್ದ ಬಿಳಲುಗಳ ವಟಗೂಡಿನಲಿ ಯಾತನೆ;
ಕುಳಿಬಿದ್ದ ನುಗ್ಗಾದ ಜೀವನಗಳಲಿ ಆಸೆಯ ಯಾಚನೆ!

ಬುದ್ಧನಾಗುವ ನಡೆ; ರಾತ್ರಿಯಲಿ ಮಿನುಗಬೇಕು ಕಪ್ಪು ಸೂರ್ಯ!
ಬಿಳಿ ಮೋಡಗಳ ಹಿಡಿದು ನಿಲ್ಲಿಸಿ, ಹಿಂಡಿ ಅಮೃತ ಕಡೆವ ಕಾರ್ಯ!!


Leave a Reply

Back To Top