ಜೀವಜಲ
ನಟ್ಟಿರುಳಿನ ಮಸಿಕತ್ತಲಿಗೆ
ದನಿಗೂಡಿಸಿದ ಗುಮ್ಮಗಳು
ಪ್ರೇಮಸಲ್ಲಾಪ ನಡೆಸಿವೆ
ಗರಿಗೆ ಗರಿಯೊತ್ತಿ ಕೂತಿರಬೇಕು
ತಲೆಗೆ ತಲೆಯಾನಿಸಿ
ಮಾವಿನ ಕವಲು ಕೊಂಬೆಯಲ್ಲಿ
ಸಂಪಿಗೆಯೆಲೆ ಮುತ್ತಿಡುವ
ನನ್ನ ಕೋಣೆಯ ಕಿಟಕಿಗೆ
ಮುಖವಿಟ್ಟು ಆಲಿಸಿರುವೆ
ಇರುಳ ಸದ್ದುಗಳ, ನಿನ್ನ
ನಿಚ್ಚಳ ಬಿಂಬದೊಂದಿಗೆ
ಮೈಲಿಗಳಾಚೆ ಕಡಲಕೂಗು
ಮೊರೆಯುತ್ತಿದೆ- ಇಬ್ಬನಿ
ತೊಟ್ಟಿಕ್ಕುವ ಸಪ್ಪಳದೊಂದಿಗೆ
………….
ಒಂದು ಗಾಢ ಅಪ್ಪುಗೆಯ
ನಿರಾಳತೆಗೆ ಹಾತೊರೆದಿರುವೆ
ಮಾಟಗಾರರ ವಿಕಾರ
ಕಾಮನೆಗಳಂತೆ ಸಾವು
ಶತಪಥ ತಿರುಗುತ್ತಿದೆ
ಅಮಾನುಷ ನರಮನುಷ್ಯರು
ಕನಸಿಗೂ ದಾಳಿಯಿಟ್ಟಿದ್ದಾರೆ
ಬೇಗ, ಬೇಗ ಬಂದುಬಿಡು
ಜೀವಜಲದೊಂದಿಗೆ
ಕಾಯುತಿರುವೆ ದಣಿದಿರುವೆ.
.
************
ದಿನಉರುಳುತ್ತದೆ!
ಹಗಲಿಡೀ ಹೊದ್ದು ಮಲಗಿ
ಯೋಚಿಸಿದ್ದೇನೆ…..
ಯಾರಾದರೂ ಯಾಕಾದರೂ
ನನ್ನೊಂದಿಗೆ ಮಾತಾಡಬೇಕು!
ಪ್ರತಿಯೊಬ್ಬ ಮನುಷ್ಯನ
ಪ್ರಪಂಚವೂ ಬೇರೆ
-ಬೇರೆಯೇ ಆಗಿರುವಾಗ!
ಸೆಕೆ ಮಳೆ ಚಳಿ ಸೊಳ್ಳೆ
ಊಟ ತಿಂಡಿ ನಿದ್ದೆ
ಇದರಿಂದಾಚೆಗೆ ಇನ್ಯಾರದ್ದೋ
ಟೀಕೆ ಅಸಹನೆ ಹೊಗಳಿಕೆ
ಸಾಹಿತ್ಯದ ಚರ್ಚೆ ರಾಜ
-ಕಾರಣದ ದುರವಸ್ಥೆ
ದುರಿತದ ದಿನಗಳ ಕುರಿತು
ದುಗುಡ ನಿಡುಸುಯ್ಯುವಿಕೆ
ಏನೇ ಯಾವುದೇ ಆದರೂ
ಸರಿಯಾದ ಪದಗಳಲಿ ಹೇಳಲಾಗಿದೆಯೇ
ಇದ್ದದ್ದು ಇದ್ದ ಹಾಗೆ
ಅಥವಾ ಅನಿಸಿದ ಹಾಗಾದರೂ….
ಇಲ್ಲ, ಅಂಥಹಾ ಶಬ್ದಗಳೇ
ಎಲ್ಲೂ ಇಲ್ಲ- ಒಳಗನ್ನು
ಬಗೆದು ತೋರಿಸುವಂತವು
ಪ್ರೀತಿ ಪ್ರೇಮ ಮಮತೆಯಂತಹ
ಉತ್ಕಟತೆಯಲ್ಲೂ ಕೂಡಾ!
ಆಡುವುದೆಲ್ಲವೂ ಬರಿದೇ
ಔಪಚಾರಿಕತೆ ಮೆಚ್ಚಿಸುವಿಕೆ
ಹೊಂದಿಸುವಿಕೆ ತಲೆ
-ತಪ್ಪಿಸಿಕೊಳುವಿಕೆ ಸಾಂಗತ್ಯ
ಬಯಸುವಿಕೆ, ನಿರಾಸೆಗೊಳ್ಳುವಿಕೆ……
ಯಾಕೀ ತಹತಹ ಗೊಂದಲ
ಗಲಿಬಿಲಿ ಕಾಯುವುದು ಸಾಯುವುದು
ಹಕ್ಕಿ ಹಾಡುತ್ತದೆ ಹೂ
ಅರಳುತ್ತದೆ
ನನ್ನೊಂದಿಗೆ ನನ್ನ ಸಂವಾದ
ಜರುಗುತ್ತಲೇ ಇರುಳಾಗುತ್ತದೆ
ಬೆಳಗು ಕರೆಯುತ್ತದೆ
ದಿನ ಉರುಳಿಯೇ ಉರುಳುತ್ತದೆ
ಯಾರ ಅಪ್ಪಣೆಯೂ ಬೇಕಿಲ್ಲದೆ!
********
ಸ್ತಬ್ಧಲೋಕ
ಬೆಳಕನೆಲ್ಲ ಆರಿಸಿದ
ಸ್ತಬ್ಧಲೋಕ –
ಕಡಲದಂಡೆಯಲ್ಲಿ
ಅಲೆಗಳ ಕಾಯುತ್ತ
ಥಂಡಿ ಮಳೆಗೆ ನೆನೆಯಿತು
ಜ್ವರವಾಗಿ ಮೋಹವಾಗಿ
ಮೈಕೈ ನೋವು ನೀವುತ್ತ
ಬಿಸಿ ಒಲೆದಂಡೆಗೆ ಕಾಲಿಟ್ಟು
ಕಷಾಯ ಹೀರಿ ಧ್ಯಾನಿಸಿತು
ಅವಳು ಮೀನಿನ ಹುಡುಗಿ
ನಕ್ಷತ್ರಗಳ ಆಯುತ್ತ
ಮಿಣುಕುಹುಳದ ಮಾಲೆ
ಹಿಡಿದು ಘಲ್ ಘಲ್ಲೆಂದು
ಹೆಜ್ಜೆಯೂರುತ್ತ ಹೊರಟಳು ..
ಲೋಕದೆದೆಗೆ ಕತ್ತಲ
-ದೀಪವೊಂದು ಒಲಿದಂ
-ತಾಯಿತು ಕೊನೆಕೊನೆಗೆ
ದಾರಿಗಳ ತಿರುವಿನಲಿ
ಓಕುಳಿ ನೀರೆರಚಿ
ಅರಳಿಸಿದ ಹೂ ಜೊತೆ
ಕಾತರಿಸಿತು -ಮೂಗುತಿ
ಮಿಂಚಿನ ಅವಳು
ನಕ್ಕಳು -ಉದುರಿಬಿದ್ದ
ಮುತ್ತುಗಳ ಆಯಲು ಬಿಟ್ಟು
ಮಾಯವಾದಳು ..!
———————–
ವಿಜಯಶ್ರೀಹಾಲಾಡಿ
ಬಹಳ ಸೊಗಸಾಗಿದೆ ಎಲ್ಲಾ ಕವಿತೆಗಳೂ…. ಮೇಡಂ…ಅಭಿನಂದನೆಗಳು ನಿಮಗೆ