ಪ್ರಬಂಧ
ಮತ್ತೆಮಳೆ ಹೊಯ್ಯುತ್ತಿದೆ
ಸ್ಮಿತಾ ಅಮೃತರಾಜ್.
ಕೈಯಾಲೆಯ ಐಂಬರದ ಮೇಲೆ ಕೂತರೆ ಹುಚ್ಚುಗಟ್ಟಿ ಹರಿಯುವ ಹೊಳೆ ಕಾಣುತ್ತಿತ್ತು. ಬಿಡದೇ ಸುರಿಯುವ ಮಳೆಗೆ ಹೊಳೆಯ ಕೆನ್ನೀರು, ಹೊಳೆಕರೆ ಗದ್ದೆ ಹತ್ತಿ, ಮಜಲು ಗದ್ದೆ ಹತ್ತಿ,, ದೊಡ್ಡ ಗದ್ದೆಗೆ ಕುಣಿ ಕುಣಿದು ಏರಿ ಬರುವುದು ಕಾಣುತ್ತಿತ್ತು. ನನ್ನ ಅಜ್ಜಿಯ ಕಣ್ಣುಗಳಲ್ಲಿ ಹೇಳ ತೀರದ ದಿಗಿಲು. ಕಷ್ಟ ಪಟ್ಟು ಹೇಗೆಲ್ಲ ಮಾಡಿ ಆ ದಿನ ಜನ ಹೊಂದಿಸಿ ದೊಡ್ಡ ಗದ್ದೆ ನಾಟಿ ಮಾಡಿಸಿದ್ದಳು. ದೊಡ್ಡ ಗದ್ದೆ ನಾಟಿ ಮುಗಿಯಲಿಕ್ಕೆ ಪುರುಸೊತ್ತಿಲ್ಲ. ಉಕ್ಕೇರಿ ಬರುವ ನೀರು ನೋಡಿ ,ನೀರು ಇಳಿದ ಮೇಲೆ ನಾಟಿ ಮಾಡಿದರೆ ಆಯ್ತು ಅಂದು ಕೊಂಡು ಎಲ್ಲ ಜನರು ಏರಿ ಹತ್ತಿ, ಅದೇ ಕೆಸರು ನೀರಿನಲ್ಲಿ ಚಳಪಳ ಅಂತ ಕಾಲು ತೊಳೆದು, ಇದು ಇವತ್ತಿಗೆ ನಿಲ್ಲುವ ಲಕ್ಷಣ ಇಲ್ಲ ಅಂತ ಅಂದಾಜಿಸಿ ಕೊಂಡು, ಇನ್ನೂ ಸ್ವಲ್ಪ ಹೊತ್ತು ಇಲ್ಲೇ ಇದ್ದರೆ ಮನೆಗೆ ಹೋಗೋದೂ ಕಷ್ಟವಾಗಬಹುದು, ಅಲ್ಲಿ ಏನೆಲ್ಲ ಮಳೆ ಅನಾಹುತ ಮಾಡಿರಬಹುದೋ ಅಂತ ಗೊಣಗಿಕೊಂಡು, ಕರಿ ಕಾಪಿ ಕುಡಿಯಲೂ ಬರದೇ ಗೊರಗ ಏರಿಸಿಕೊಂಡು ಅವರವರ ಮನೆ ಹಾದಿ ಹಿಡಿದಿದ್ದರು.
ಇಂತ ಮಳೆ ಹೊಯ್ದದ್ದು ಇಲ್ಲಿ ತನಕ ನಾನು ನೋಡಿಯೇ ಇಲ್ಲಪ್ಪಾ.. ಎಂದು ಗಂಟಲಿನ ಆಳದಿಂದ ಹೇಳುತ್ತಾ ಸೊಕ್ಕಿ ಬರುವ ಕೆನ್ನೀರ ಮೇಲೆ ದೃಷ್ಟಿ ನೆಟ್ಟಿದ್ದಾಳೆ ಅಜ್ಜಿ. ಪ್ರತೀ ಮಳೆಗಾಲದಲ್ಲೂ ಅವಳು ಇಂತದೇ ಮಾತನ್ನು ಪ್ರತೀ ಸಾರಿ ಹೊಸತೆಂಬಂತೆ ಹೇಳಿದ್ದನ್ನು ನಾನೂ ಅದೆಷ್ಟೋ ಬಾರಿ ಕೇಳಿಸಿ ಕೊಂಡಿದ್ದೇನೆ. ಆದರೆ ಅವಳಿಗದು ಮರೆತಂತೆ ತೋರುತ್ತದೆ. ಅಥವಾ ಪ್ರತೀ ಹೊಸ ಮಳೆಯೂ ಹಳೆ ಮಳೆಯನ್ನು ಮರೆಸುವಷ್ಟು ಹೊಸ ಬಗೆಯಲ್ಲಿ ಸುರಿಯುತ್ತದೆಯೇನೋ. ಯಾಕೆ ಅಜ್ಜಿ ಹೀಗೆ ಪ್ರತೀ ವರ್ಷ ಈ ರೀತಿ ಹೇಳುತ್ತಾಳೆ ಅಂತ ತುಸು ಗೊಂದಲವುಂಟಾದರೂ ಅವಳ ಸೆರಗಿಗೆ ಆತುಕೊಂಡು ಕೆಂಪು ಕಡಲಂತೆ ಕಾಣುವ ದೊಡ್ಡ ಗದ್ದೆಯನ್ನೇ ನೋಡುತ್ತೇನೆ. ನನಗೆ ದಿಗಿಲಿನ ಬದಲಾಗಿ ಅಚ್ಚರಿ ಹುಟ್ಟುತ್ತದೆ. ಜೊತೆಗೆ ಸಣ್ಣಗೆ ಕುಶಿಯೂ. ಬದುಕಿನ ಕುರಿತು ಅಷ್ಟೊಂದು ಜವಾಬ್ದಾರಿ ಇನ್ನೂ ಬಲಿಯದ ಪ್ರಾಯವದು. ಒಮ್ಮೆ ಮಳೆ ನಿತ್ತಿದ್ದರೆ ಸಾಕಿತ್ತು ಅಂತ ಕಾಣದ ದೇವರಿಗೆ ಹರಕೆ ಹೊತ್ತು ಕೊಂಡು ಅಜ್ಜಿ ಕಾಯುತ್ತಿದ್ದರೆ,ನಾನೋ ಇನ್ನೆಷ್ಟು ದಿನ ಮಳೆಗೆ ರಜೆ ಸಿಗಬಹುದು ಅನ್ನುವ ನನ್ನದೇ ಯೋಚನಾ ಸರಣಿಯಲ್ಲಿದ್ದೆ. ಮಳೆ ಧೋ… ಧೋ.. ಹೊಯ್ಯುತ್ತಿದೆ. ದೊಡ್ಡ ಗದ್ದೆಯಲ್ಲಿ ನೆಟ್ಟ ನಾಟಿಯೆಲ್ಲ ಕೊಚ್ಚಿಕೊಂಡು ಹೋಗುತ್ತಿವೆ..ರಾಮ..ರಾಮ…ದೊಡ್ಡ ದೊಡ್ಡ ಮರದ ಕುಂಟೆಗಳು ಎಲ್ಲಿಂದಲೋ ತೇಲಿ ಬರುತ್ತಿವೆ. ಬಿತ್ತಿದ ಅಗೆಯೆಲ್ಲ ಮುಳುಗಿ ಹೋಗಿದೆ. ಇನ್ನು ಮತ್ತೊಮ್ಮೆ ಎಲ್ಲಿಂದ ಅಗೆ ತರುವುದು ಅಂತ ಅಜ್ಜಿ ನಿಡಸುಯ್ಯುತ್ತಾ ಸಂಕಟ ಪಡುತ್ತಿದ್ದಾಳೆ.
ನನ್ನೂರಿನ ಮಲೆನಾಡಿನಲ್ಲಿ ಇಂತಹ ಮಳೆಗಾಲಗಳು ಅದೆಷ್ಟೋ ಸುರಿದು ಹೋಗಿವೆ. ಅಲ್ಲೆಲ್ಲೋ ಬರಗಾಲ ಬಂದು ನೀರಿಲ್ಲದೆ ಹುಯಿಲಿಡುತ್ತಿದ್ದರೆ, ಎಲ್ಲ ಊರಿನ ಮಳೆಯೂ ಇಲ್ಲಿ ಸುರಿಯುತ್ತಿರುವಂತೆ ತೋರುತ್ತದೆ. ಇಲ್ಲಿ ತನಕದ ಬದುಕಿನಲ್ಲಿ ನಾನೂ ಕೂಡ ಅದೆಷ್ಟೊಂದು ಮಳೆಗಾಲಗಳನ್ನು ಅನುಭವಿಸಿಲ್ಲ? ಪ್ರತೀ ಮಳೆಯೂ ಹೊಸತೇ ಭಾವದೊಂದಿಗೆ ಸುರಿಯುವುದು. ಶಾಲೆಗೆ ಹೋಗುವ ಹೊತ್ತಿನಲ್ಲಿ ಮಳೆ ಬಂದು ಹೊಳೆ ತುಂಬಿ ಪಾಲ ದಾಟಲಾಗದೆ, ಊರೂರು ಸುತ್ತು ಬಳಸಿ ಹೊತ್ತಲ್ಲದ ಹೊತ್ತಿನಲ್ಲಿ ಮನೆ ಬಂದು ತಲುಪುತ್ತಿದ್ದೆವು. ಅಷ್ಟೊತ್ತಿಗಾಗಲೇ ಸುಡು ಸುಡು ನೀರು ತುಂಬಿದ ಬಾಲ್ಡಿ ,ಮೆಟ್ಟು ಬಾಗಿಲಿನಲ್ಲಿ ನಮಗಾಗಿ ಕಾಯುತ್ತಿತ್ತು. ಎರಡು ಪಾಟೆ ನೀರು ಕಾಲಿಗೆ ಹೊಯ್ಯುವಾಗ ದೇಹದೊಳಗೆ ಒಂದು ಹೊಸ ಜೀವ ಸಂಚಾರವಾಗುತ್ತಿತ್ತು. ಒದ್ದೆ ಸಮವಸ್ತ್ರವನ್ನು ಬೆಸಗೆಯ ಮೇಲಿನ ನೇಕೆಯಲ್ಲಿಯೋ, ಅಥವಾ ಬಚ್ಚಲಿನ ಮೂಲೆಯಲ್ಲಿರುವ ಕೂಂಟಗೆಯ ಮೇಲೆಯೋ ಹಾಕಿ ಒಲೆ ಬುಡದಲ್ಲಿ ಕರಿ ಬೆಲ್ಲದ ಕಾಫಿ ಕುಡಿಯುವುದೆಂದರೆ ಅಮೃತದ ಗುಟುಕನ್ನು ಗಂಟಲಿನೊಳಗೆ ಇಳಿಬಿಟ್ಟಂತೆ. ಬಹುಶಃ ಅದು ಅಮೃತವೇ ಇರಬೇಕು ಅಂತ ಈ ಹೊತ್ತಿನಲ್ಲಿ ಅನ್ನಿಸುತ್ತಿದೆ. ಇಲ್ಲದಿದ್ದರೆ ಎಂತಾ ಜೋರು ಶೀತ ಜ್ವರ ಬಂದರೂ ಒಲೆ ಬುಡದಲ್ಲಿ ಕೂತು ಎರಡು ಗುಟುಕು ಕಾಫಿ ಗುಟುಕರಿಸಿದರೆ ಸಾಕು ಒಂದೇ ದಿನದಲ್ಲಿ ಜ್ವರ ಶೀತ ಮಂಗ ಮಾಯ. ಒಲೆಯ ಉರಿಯ ಮುಂದೆ ಕೂತ ತಕ್ಷಣ ಮೈಯ ಸಂದಿ ಸಂದಿಗಳಲ್ಲಿ ಗಟ್ಟಿಯಾಗಿ ಕಚ್ಚಿ ಹಿಡಿದು ಕೊಂಡು ರಕ್ತ ಹೀರಿದ್ದ ಇಂಬಳಗಳು ರಕ್ತ ಕುಡಿದು ಕೊಬ್ಬಿ,ಮತ್ತಿನಲ್ಲಿ ಉದುರುತ್ತಿದ್ದವು. ಇನ್ನುಳಿದವು ಅಲ್ಲೆಲ್ಲೋ ಹೀರುತ್ತಾ ಸುಖದ ಅಮಲಿನಲ್ಲಿ ಉಬ್ಬುತ್ತಾ ಹೋಗುತ್ತಿದ್ದವು. ಅವುಗಳನ್ನೆಲ್ಲ ಹುಡುಕಿ ,ಒಂದೊಂದೇ ಕಿತ್ತು ಒಲೆಗೆ ಹಾಕುವಾಗ ಅವು ಚಟ ಪಟ ಮಿಡುಕಿ ಸಾಯುತ್ತಿದ್ದವು. ಕೆಲವೊಂದು ಇಂಬಳಗಳು ಅದೆಷ್ಟು ಗಟ್ಟಿಯಾಗಿ ಕಚ್ಚಿ ಹಿಡಿದಿರುತ್ತಿದ್ದವು ಎಂದರೆ ಅವು ಕಿತ್ತರೂ ಬರುತ್ತಿರಲಿಲ್ಲ. ಆಗ ನನ್ನಜ್ಜಿ ಒಂದು ದೊಡ್ಡ ಕಲ್ಲು ಉಪ್ಪನ್ನು ತಂದು ಅದರ ಮೇಲೆ ಇಡುತ್ತಿದ್ದಳು. ಅಷ್ಟಕ್ಕೇ ಅದು ತುಪಕ್ಕನೆ ಧರಾಶಾಯಿಯಾಗಿ ವಿಲ ವಿಲ ಒದ್ದಾಡಿ ರಕ್ತ ಕಾರಿ ಸತ್ತು ಬಿಡುತ್ತಿತ್ತು. ಶಾಲೆಯಿಂದ ಬರುವಾಗ,ಅಣಬೆ ಆಯಲು ಹೋದಾಗ, ಕಣಿಲೆ ಕೊಂಬು ಬಿಟ್ಟಿದೆಯಾ ಅಂತ ಹುಡುಕಲು ಹೋದಾಗ, ಪಣ್ಪುಳಿ ಹೆಕ್ಕಲು ಹೋದಾಗ, ಓಡೋಡಿ ಬಂದು ಸಿಕ್ಕ ಜಾಗ ಕಚ್ಚಿ ಹಿಡಿದು ಬಿಡುತ್ತಿತ್ತು. ಮಳೆಗಾಲದ ಈ ಕಷ್ಟ ಅನುಭವಿಸಿದವರಿಗಷ್ಟೇ ಗೊತ್ತು. ಇಂಬಳ ಕಚ್ಚಿ ಉದುರಿದ ಜಾಗ ತುರಿಸುವ ಪಾಡು ಯಾರಿಗೆ ಹೇಳುವುದು? ಮಳೆ ಬಂದ ಮೇಲೆ ಇಂಬಳ ಹುಟ್ಟುವುದ? ಅಥವಾ ಇಂಬಳ ಹುಟ್ಟಿದ್ದಕ್ಕೆ ಮಳೆ ಬರುವುದ? ಅನ್ನುವಷ್ಟು ಉತ್ತರವಿಲ್ಲದ ಪ್ರಶ್ನೆಗಳು ಒಳಗೆ ಎಡೆಬಿಡದೆ ಸುರಿಯುತ್ತದೆ. ಮಳೆಗಾಲ ಕಳೆದರೆ ಸಾಕು ಎನ್ನಿಸುವಷ್ಟು ರೇಜಿಗೆ ಹುಟ್ಟಿಸಿ ಬಿಡುತ್ತಿತ್ತು.
ಪ್ರತೀ ಸಾರಿ ಮತ್ತೆ ಮಳೆಗಾಲ ಬರುತ್ತದೆ. ಗದ್ದೆ ಸಾಲಿನಲ್ಲಿ ಎತ್ತುಗಳ ಕವಾಯತು ಶುರುವಾಗುತ್ತದೆ. ಗೆರೆ ಎಳೆದಂತೆ ನೇಗಿಲ ಎಳೆದುಕೊಂಡು ಹೂಡ ತೊಡಗುತ್ತವೆ, ಹೇ..ಹೇ.. ಹೊಯ್… ಲಯಬದ್ಧ ಸ್ವರ ನಾಕು ದಿಕ್ಕಿನಿಂದಲೂ ಕೇಳಿ ಬರುವಾಗ ನಿಜಕ್ಕೂ ಅದೊಂದು ಮಂತ್ರ ಘೋಷದಂತೆ ಕೇಳಿಸಲಿಕ್ಕೆ ಶುರುವಾಗುತ್ತದೆ. ಆ ಮಳೆಗಾಲವೇ ಇಡೀ ಕೃಷಿ ಬದುಕಿಗೆ ಮುನ್ನುಡಿಯಿತ್ತು ವರುಷದ ಅನ್ನದ ದಾರಿಗೆ ನಾಂದಿ ಹಾಡುವ ಸ್ವರವದು. ಆದರೆ ಒಮ್ಮೊಮ್ಮೆ ಇದೇ ಮಳೆ ಯಾರ ಮೇಲಿನ ಕೋಪಕ್ಕೋ, ತಾಪಕ್ಕೋ,ರಚ್ಚೆ ಹಿಡಿದು ಕೂಗಿ ಅನಾಹುತ ಸೃಷ್ಟಿ ಮಾಡಿ ಅನ್ನದ ದಾರಿಯ ಮೇಲೆ ಬರೆ ಎಳೆದು ಬಿಡುತ್ತದೆ. ಬದುಕಿನಲ್ಲಿ ಶೋಕ ಗೀತೆಯನ್ನು ಹಾಡಿ ಬಿಡುತ್ತದೆ. ಅಂತಹ ಶೋಕ ಗೀತೆಯೊಂದು ಈ ಹಿಂದಿನ ಮೂರು ವರುಷಗಳು ನನ್ನೂರಿನಲ್ಲಿ ಕೇಳಿಸಿ ಬದುಕು ದುರಂತಮಯ ವಾಗಿದ್ದನ್ನು ಹೇಗೆ ಮರೆಯುವುದು? ಚೆಂದದ ಕವಿತೆಯಂತ ಮಲೆನಾಡಿನಲ್ಲಿ ಮಳೆ ಸುರಿದು ಹೀಗೊಂದು ಶೋಕ ಆವರಿಸ ಬಹುದೆಂಬ ಕಲ್ಪನೆಯಾದರೂ ನಮಗಿತ್ತಾ? ಅಲ್ಲೆಲ್ಲೋ ದೂರದಲ್ಲಿ ಭೂಕುಸಿತ, ನೆರೆ ಕೇಳುವಾಗಲೇ ಎದೆ ಝಲ್ ಎನ್ನಿಸುತ್ತಿತ್ತು. ಅಂತಹುದರಲ್ಲಿ ನಾವು ನಿಂತ ನೆಲ ಕುಸಿಯ ಬಹುದೆಂಬ ಕಲ್ಪನೆಯಾದರೂ ನಮಗೆ ಇತ್ತಾ?ಒಂದು ಮಳೆ ಏನೆಲ್ಲ ಮಾಡಬಹುದು?ಬದುಕನ್ನು ಕಟ್ಟಿಕೊಡಬಹುದು, ಹಾಗೇ ಕಸಿದು ಕೊಳ್ಳಲೂ ಬಹುದು ಅನ್ನುವಂತದ್ದು ಅಕ್ಷರಶಃ ವೇದ್ಯವಾಯಿತು
.
ಗುಡ್ಡಕ್ಕೆ ಗುಡ್ಡವೆ ಕುಸಿಯತೊಡಗಿತು. ಮನೆಗಳೆಲ್ಲ ನೋಡು ನೋಡುತ್ತಿದ್ದಂತೆಯೇ ನೆಲ ಸಮವಾಯಿತು. ಭೂಗರ್ಭದಿಂದ ಚಿಮ್ಮಿದ ನೀರ ಸೆಲೆಗಳು ಬೋರ್ಗೆರೆದು ಮನೆ ಮಠ ನೀರು ಪಾಲಾಯಿತು. ಕಣ್ಣೆದುರೇ ಶವಗಳು ನೀರಿನಲ್ಲಿ ತೇಲಿದವು. ಕೆಲವು ಜೀವಗಳು ಸಿಗದೇ ಕಣ್ಮರೆಯಾದರೂ ಹುಡುಕಾಟ ನಿರಂತರವಾಯಿತು. ಅಲ್ಲಲ್ಲಿ ಗಂಜಿ ಕೇಂದ್ರಗಳು ತೆರೆದುಕೊಂಡವು. ಮಾಲಿಕನೂ ಸೇವಕನೂ ಸರತಿ ಸಾಲಿನಲ್ಲಿ ತಟ್ಟೆ ಹಿಡಿದರು. ನೆಲ ಕಳಕೊಂಡವರಿಗೆ ಒಂದೇ ರೀತಿಯ ವಸತಿ ಪುನರ್ ನಿರ್ಮಾಣ ಗೊಂಡಿತು. ಒಂದು ಮಳೆ ಒಂದು ಕಡೆಯಲ್ಲಿ ಬದುಕನ್ನು ಮೂರಾಬಟ್ಟೆ ಮಾಡಿದರೆ,ಮತ್ತೊಂದು ಕಡೆ ಭಾವನಾತ್ಮಕ ಸೆಲೆಯನ್ನು ಹುಟ್ಟು ಹಾಕಿ ಮಾನವೀಯತೆ ಎಲ್ಲಕ್ಕಿಂತ ಮಿಗಿಲು ಅನ್ನುವುದನ್ನು ತೋರಿಸಿ ಕೊಟ್ಟಿತು.ಇದಾಗಿ ಎರಡು ವರುಷ ಕಳೆದರೂ ಈಗ ಮಳೆ ಸುರಿದಾಗ ಪುಳಕ ಹುಟ್ಟುವುದಿಲ್ಲ. ಯಾವುದೂ ಒಂದು ಯಾತನೆ ಆಳದಲ್ಲಿ ಒಂದು ಭಯದ ಅಲೆಯನ್ನು ಎಬ್ಬಿಸಿ ಬಿಟ್ಟಿದೆ. ಮೊದಲ ಮಳೆಗೆ ಅಂಗೈ ಹಿಡಿಯಬೇಕು ಅನ್ನಿಸುವುದಿಲ್ಲ, ಮುಖ ಒಡ್ಡಿ ಸುಖಿಸಬೇಕು ಅನ್ನಿಸುವುದಿಲ್ಲ. ಮಳೆ ಎಂದರೆ ಜೀವ ಬಿಡುವ ಬಯಲು ಸೀಮೆಯ ಆತ್ಮೀಯ ಜೀವಗಳನ್ನು ಮಳೆ ನೋಡಲು ಕರೆಯಬೇಕು ಅನ್ನಿಸುವುದಿಲ್ಲ. ಮಳೆಯ ರಮಣೀಯತೆಯನ್ನೂ, ಭೀಕರತೆಯನ್ನ ಏಕಕಾಲಕ್ಕೆ ಕಂಡುಂಡ ಜೀವಗಳಿಗೆ ಈ ರೀತಿಯ ತಲ್ಲಣ ಸಹಜವೇ ತಾನೇ?
ಮತ್ತೆ ಇಲ್ಲಿ ಅಕಾಲಿಕ ಮಳೆ ಹೊಯ್ಯುತ್ತಲೇ ಇದೆ. ಕಾಲಗಳೇ ಅದಲು ಬದಲಾಗಿ ಎದುರು ಬದುರಾದಂತಾಗಿದೆ. ದೈನಂದಿನ ಬದುಕು ಏರುಪೇರಾದ ಗೊಂದಲದಲ್ಲಿ ಕೃಷಿಕರು ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದಾರೆ . ಬಿಸಿಲು ಬಂದ ಮಾರನೇ ದಿನಕ್ಕೆ ಜಡಿಗುಟ್ಟಿ ಮಳೆ. ತೇವ ಆರದೆ ಹಸಿ ಹಸಿ ಅಂಗಳದಲ್ಲಿ ಯಾವ ಬೆಳೆಗಳೂ ಒಣಗುವ ಲಕ್ಷಣ ಕಾಣುತ್ತಿಲ್ಲ. ಮಳೆ ಬಂದು ಅಡಿಕೆ ಕುಯ್ಯಲು ಆಗದೇ ಎಲ್ಲ ಉದುರುತ್ತಿವೆ. ಉದುರಿದ ಅಡಿಕೆ ಹಸಿ ಅಂಗಳದಲ್ಲಿ ಒಣಗದೆ ಹಾಳಾಗುತ್ತಿವೆ, ಮಳೆಗಾಲಕ್ಕೆ ಮಾಡಿಟ್ಟ ಸೌದೆ ಮುಗಿದೇ ಹೋಗಿದೆ. ಮಳೆ ಮುಗಿಯದೆ ರಬ್ಬರ್ ಟ್ಯಾಪಿಂಗ್ ಮಾಡದೆ ತಿಂಗಳುಗಳೇ ಕಳೆದು ಹೋದವು, ಅನ್ನದ ಮೂಲದ ದಾರಿ ಮಳೆಯಿಂದಲೇ ಮುಚ್ಚಿ ಹೋಗುತ್ತಿವೆ, ಮಕ್ಕಳ ಶಿಕ್ಷಣ, ಇತರ ಖರ್ಚು ಭರಿಸುವುದು ಎಂತು? ಹೀಗೇ ಆದಾರೆ ಇನ್ನು ಮುಂದೆ ಹೇಗೆ? ಎಲ್ಲ ಕೃಷಿಕರು ಅಲವತ್ತು ಕೊಳ್ಳುತ್ತಿದ್ದಾರೆ. ಯಾರ ಬಳಿಯೂ ಸಮರ್ಪಕ ಉತ್ತರವಿಲ್ಲ. ಕಾಲವಿಡೀ ಹೀಗೆ ಮಳೆ ಸುರಿದರೆ ಇನ್ನೇನು ಆಗಬಹುದು? ಯಾರಲ್ಲೂ ಉತ್ಸಾಹವಿಲ್ಲ, ಜೀವಂತಿಕೆಯಿಲ್ಲ. ಇದಕ್ಕೆಲ್ಲ ಯಾರನ್ನೂ ಹೊಣೆಯಾಗಿಸುವುದು? ಪ್ರಕೃತಿಯ ಮೇಲೆ ಹಿಡಿತ ಸಾಧಿಸಲು ಹೋದ ಪರಿಣಾಮವೇ? ಯಾವುದಕ್ಕೂ ಉತ್ತರ ಕೊಡಲು ಪುರುಸೊತ್ತು ಇಲ್ಲ ಅನ್ನುವಂತೆ ಹಸಿರಿಲ್ಲದ ಕಾಂಕ್ರೀಟ್ ಕಾಡಿನಲ್ಲಿ ಈಗ ಮಳೆ ನಿರಂತರ ಸುರಿಯುತ್ತಲೇ ಇದೆ. ಮಳೆ ಹಿಡಿದಿಟ್ಟು ಕೊಳ್ಳುವ ಕಾಡುಗಳು ಗುಳೇ ಹೋಗಿವೆ. ಯಾರು ಯಾವುದನ್ನೂ ಹುಡುಕುವಷ್ಟು ವ್ಯವಧಾನ ಕಳೆದುಕೊಂಡಂತೆ ಖಿನ್ನತೆಯಲ್ಲಿ ಕಳೆದು ಹೋಗಿದ್ದಾರೆ. ಇನ್ನೇನು ಬಿಸಿಲು ಹತ್ತಿ,ಚಳಿ ಹುಟ್ಟ ಬೇಕಾದ ಹೊತ್ತಿನಲ್ಲಿ ರಾತ್ರಿಯಿಡೀ ಗುಡುಗು,ಸಿಡಿಲು ಅಬ್ಬರಿಸುತ್ತಿದೆ. ರಚ್ಚೆ ಹಿಡಿದಂತೆ ಮಳೆ ಒಂದೇ ಸಮನೆ ಸುರಿಯುತ್ತಿದೆ. ಹಗಲಿಡೀ ಮುಖ ದುಮ್ಮಿಸಿಕೊಂಡು ಚಲಿಸುತ್ತಿದೆ. ಇನ್ನೇನು ಒಂದು ಮಾತು ಕಾರಣ ಕೇಳಿದರೂ ಮತ್ತೆ ಕಟ್ಟೆ ಒಡೆದು ಅತ್ತು ಬಿಡುತ್ತದೆಯೇನೋ ಅನ್ನುವಷ್ಟು. ಹೀಗೆ ವಿನಾಕಾರಣ ಸುರಿಯುವ ಮಳೆಯ ಹಿಂದೆ ಅದೆಷ್ಟು ಕಾರಣಗಳಿರ ಬಹುದು? ಮಳೆಯೊಂದು ಎಷ್ಟು ಬಗೆಯಲ್ಲಿ ಹೀಗೆ ತೆರೆದುಕೊಂಡು ಕಾಡುತ್ತಿದೆ? ತಳಮಳ ಎಬ್ಬಿಸುವ ಒಳ ಮನಸನ್ನು ಯಾವ ರೀತಿಯಲ್ಲಿ ಸಂತೈಸುವುದು? ಕಳೆದು ಹೋದ ಮಳೆಯ ಪರಿಮಳವನ್ನು ಮತ್ತೊಮ್ಮೆ ಹೇಗೆ ಆಗ್ರಾಣಿಸುವುದು?
ಸ್ಮಿತಾ ಚಂದ ಬರಹ. ಹದ ಮಳೆಯಷ್ಟೇ ಆಪ್ತ.
ಅಭಿನಂದನೆಗಳು.
Muddadha baraha.. Abinandhanegalu Madam
ಎಷ್ಟು ಚೆನ್ನಾಗಿ ಬರೆದಿರುವೆ…. ಸ್ಮಿತಾ….ಬಹಳ ಇಷ್ಟವಾಯ್ತು….
Odhutha hodanthe kuthuhala huttisuva baraha….abhinandanegalu
ಮಳೆ ಸುಖವನ್ನು ನೀಡುತ್ತದೆ. ಅದೇ ಮಳೆ ದುಃಖವನ್ನು ಕೊಡುತ್ತದೆ. ಮನುಷ್ಯನ ಮನಸ್ಥಿತಿ ಮಳೆಗೆ ಏನು ಗೊತ್ತು. ತನ್ನ ಕರ್ತವ್ಯವನ್ನು ತಾನು ಮಾಡುತ್ತಿರುವುದು. ಅನುಸರಿಸಬೇಕಾದ ಅನಿವಾರ್ಯತೆ ಯನ್ನು ಮನುಷ್ಯ ಅರಿಯಬೇಕು. ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಬಳಸಿದ ಪದಗಳು ಗ್ರಾಮ್ಯ ಶೈಲಿ ಉತ್ತಮ ರೀತಿಯಲ್ಲಿ ಮೂಡಿಬಂದಿದೆ. ಧನ್ಯವಾದಗಳು.
ಮನಮೆಚ್ಚಿದ ಪ್ರಬಂಧ. ಮಳೆಗಾಲದ ಭೀಕರತೆ ಸೌಜನ್ಯ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ. ಮಳೆಗಾಲದ ಚಿತ್ರ ಕಣ್ಣ ಮುಂದೆ ಬರುತ್ತದೆ
ತುಂಬ ಚೆಂದ ಬರೆದಿರುವೆ ಸ್ಮಿತ.
ಬರಹ ತುಂಬಾ ಹತ್ತಿರವಾಗಿದೆ ಮೇಡಂ.ಧನ್ಯವಾದಗಳು