ಡಾ. ಅಜಿತ್ ಹರೀಶಿಕವಿತೆ ಖಜಾನೆ

ತಿಮಿರ

ಸೂಡಿ ಹಿಡಿದು ಓಡಾಡುವ ಕಾಲದಲ್ಲಿ
ಕೊಳ್ಳಿ ದೆವ್ವಗಳು ಕಾಲಿಗೊಂದು ತಲೆಗೊಂದು
ಹರದಾರಿ ನಡೆದು ಸಾಗುವ ದಿನಗಳಲ್ಲಿ
ಅವುಗಳ ಜಾತ್ರೆ ರಸ್ತೆ ಪಕ್ಕದಲ್ಲಿ

ಕಳೆದ ಬಾಯಿ ಮುಚ್ಚದಂತೆ ಲಾಟೀನು
-ಬೆಳಕಿನಲ್ಲಿ ಕೇಳಿ ಸುದ್ದಿ ಹೆದರಿಕೆ ಬೇಜಾನು
ತಿರುಚಿದ ಪಾದ ಗುರುತರವಾದ ಗುರುತು
ದೆವ್ವ ಕಂಡವನಿಂದ ಇತರರಿಗೆ ತರಬೇತು!

ಕತ್ತಲಿನಲ್ಲಿ ಇಣುಕುವ ಬೆಳಕು, ಬರುವ ಶಬ್ದ
ಎಂತಹವರನ್ನೂ ಮಾಡುವುದು ಸ್ತಬ್ಧ
ಎಲ್ಲರೊಳಗೊಬ್ಬ ಕವಿ, ಆಗ ರವಿಯಿಲ್ಲ
ಕಲ್ಪನೆಗೆ ಕಾಲು ಬಾಲ

ಗಲ್ ಗಲ್, ಸರ ಪರ
ಚಿತ್ತದಲ್ಲಿ ಮೂಡುವ ಚಿತ್ರ
ಗುಂಡಿಗೆಯಲ್ಲಿ ನಡುಕ
ಆಕ್ರಮಿಸುವ ಆತಂಕ

ಅಕ್ರಮಕ್ಕೆ ಸೂಕ್ತ ಅಮಾವಾಸ್ಯೆ
ವಿದ್ಯುತ್ ಕಡಿತಗೊಳಿಸಿಯೂ
ಹುಟ್ಟಿಸುವರು ಅಮಾಸೆಯ ಸಮಸ್ಯೆ
ಚುನಾವಣೆಯ ಹಿಂದಿನ ದಿನ
ಗಂಧದ ಮರ ನಾಪತ್ತೆಯಾದ ಕ್ಷಣ

ಕತ್ತಲು ಬಗ್ಗೆ ಅಜ್ಜಿ ಹೆದರಿಸಿದ್ದು
ಹುಳ ಹುಪ್ಪಟೆ ತುಳಿಯದಿರಲೆಂದು
ಕೂರುತ್ತದೆ ಮಗುವಿನ ಮಿದುಳೆಂಬ
ಹಸಿ ಗೋಡೆಯಲ್ಲಿ ಮಣ್ಣಾಗಿ
ಕತ್ತಲು ಭಯಾನಕ

ಕಪ್ಪಾದಾಗ ನೆರಳು ಮಂದಬೆಳಕಿನಾಟ
ಆಕೃತಿಗಳಿಗೆ ಜೀವ, ಪಿಶಾಚಿ ಕಾಟ
ಆತ್ಮಸ್ಥೈರ್ಯದ ಅಗ್ನಿಪರೀಕ್ಷೆ
ಪಾಪ ಪ್ರಜ್ಞೆ ಭೂತವಾಗಿ ಶಿಕ್ಷೆ

ರಕ್ತ ಕಾರಿ, ಬೆನ್ನಮೇಲೆ ಮೂಡಿ ಬೆರಳು
ಮುರಿದು ಗೋಣು, ಧ್ವನಿಯಡಗಿ
ಸತ್ತವರ ಕತೆಯೆಲ್ಲ ಎದ್ದು ಬಂದು
ಅಂತರ್ಪಿಶಾಚಿಯಾಗಿ ಅಲೆದಾಡಿ

ಮುಗಿಯದ ಕತೆ; ಹೆದರಿ
ಮೂತ್ರ ವಿಸರ್ಜನೆ ಮಾಡಿದವರದು
ಅದನ್ನೇ ದಿಗ್ಬಂಧನದ ವೃತ್ತವಾಗಿಸಿದವರದು

ಕತ್ತಲು ಮಾತ್ರ ದಿಗಿಲು ಸೃಷ್ಟಿಸುವುದಾದರೆ
ಕುರುಡನ ಜೀವನ ಹೇಗೆ?

ಬೆಳಕ ಕಂಡವಗೆ ಕತ್ತಲ ಭಯ
ಬಾಳ ಅನುಭವಿಸಿದವಗೆ ಸಾವ ಭಯ
ಹಗ್ಗ ಹಾವಾಗಿ ಹತನಾಗುವ ಉಪಮೆ
ಅರಿವ ಹಣತೆ ಆರದಿರೆ ನಿತ್ಯ ಹುಣ್ಣಿಮೆ.

*******

ವಜನು

ಗೊತ್ತಿಲ್ಲದೇ ಅಡಗಿದೆ
ಎಲ್ಲರ ಚಿತ್ತದಲೂ
ತರತಮದ ತಕ್ಕಡಿಯೊಂದು

ಬೇಕೋ ಬೇಡವೋ
ಅಳೆಯುತ್ತದೆ ಸುತ್ತಲಿನ ಎಲ್ಲವ(ರ)ನ್ನು

ಒಬ್ಬೊಬ್ಬರ ತಕ್ಕಡಿಯದೂ
ಅಳತೆಗಲ್ಲು ಬೇರೆ
ಇಂದಿನ ಲಕ್ಷುರಿ ನಾಳಿನ
ಅವಶ್ಯಕತೆಯಾಗುವುದು ಖರೇ

ಇವನ ನೂರರ ಕಲ್ಲು
ಆಗಬಹುದವನ ಸಾವಿರದ ಕಲ್ಲು
ಇವಳ ಸುಖದ ವ್ಯಾಖ್ಯಾನ
ಸರಿಯೆನಿಸದಿರಬಹುದು ಅವಳಿಗೆ

ಮಗುವಿಗೆ ಯಾವ ಸ್ಕೂಲಲ್ಲಿ ಸೀಟು
ಯಾವ ಲೇ ಔಟ್‌‌ನಲ್ಲಿ ಸೈಟು
ಹೊಸ ಮನೆ, ಕಾರಿನ ರೇಟು
-ಗಳ ಮೇಲೆ ನಿರ್ಧಾರವಾಗುವುದು ವೇಯ್ಟು

ಅವರಿವರ ತಕ್ಕಡಿಯಲಿ
ಮೇಲಾಗಿ ತೂಗಲು ಜನರ ಪೈಪೋಟಿ
ಜಾಗ್ರತೆ! ತಪ್ಪದಿರಲಿ ಹತೋಟಿ

ತಕ್ಕಡಿಯಲಿ-
ಇಂದೊಬ್ಬ ಮೇಲಾಗಿ
ನಾಳೆ ಮತ್ತೊಬ್ಬ ಹೆಚ್ಚು ತೂಗಿ,
ಒಮ್ಮೆ ಮೇಲಾದವನು
ಇನ್ನೊಮ್ಮೆ ಕೆಳಗೆ ಬಾಗಿ
ತನ್ನ ತಾನೇ ತೂಗಿಕೊಳ್ಳಲು ಹೋಗಿ
ಕೊನೆಗೆ ತೂಗಿ ನೋಡುವವನ
ತೂಕವೇ ಕಡಿಮೆಯಾಗಿ
ದುಃಖಕ್ಕೆ ಮೂಲ ಈ ತಕ್ಕಡಿ
ಇರಲಿ ಬದುಕಲಿ
ಸತ್ಯವನಷ್ಟೇ ಬಿಂಬಿಸುವ ಕನ್ನಡಿ
ಬದುಕಿನಂಗಡಿಯಲಿ
ಖರೀದಿಸಲು ಖುಷಿಯ
ಮಾರಿಬಿಡಿ ತರತಮದ ತಕ್ಕಡಿ

****

ತನ್ನ ಬಿಟ್ಟು…

ಜಗತ್ತಿನಲ್ಲಿ
ಜನರೇಳು
ಇರುತ್ತಾರಂತೆ
ಒಂದೇ ತರಹದವರು

ತುಂಬಾ ಸನಿಹದಲ್ಲಿ
ನಾನು
ಸಿಕ್ಕಿದ್ದಾರೆ
ಜನರು ಆರು

ಅವರೋ ಪ್ರತಿರೂಪಿಗಳು ಮಾತ್ರ
ಗುಣ ಬದಲು ಬದಲು
ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯದವರು.
ನೋಡಲು ಮಾತ್ರ ನನ್ನಂತೆ
ಗೊತ್ತಲ್ಲ ನಾನು? ಸುಗುಣ ಸಂಪನ್ನ

ಏಳು ಇರಬೇಕಿತ್ತಲ್ಲ?
ಎಣಿಸುತ್ತಿದ್ದಾರೆ ಎಲ್ಲ
ಲೆಕ್ಕ ಸರಿಯಾಗಲು
ಪಂಚತಂತ್ರದ
ಕರ್ತೃವೇ ಬರಬೇಕೇನೋ!

———————————-


ಡಾ. ಅಜಿತ್ ಹರೀಶಿ

6 thoughts on “ಡಾ. ಅಜಿತ್ ಹರೀಶಿಕವಿತೆ ಖಜಾನೆ

  1. ಪ್ರತಿಯೊಂದು ಕವಿತೆಗಳು ಅದ್ಭುತವಾಗಿದೆ. ಅಭಿನಂದನೆಗಳು.

Leave a Reply

Back To Top