ಅಂಕಣ ಬರಹ
ರಾಮಕೃಷ್ಣ ಗುಂದಿ ಅವರ ಆತ್ಮಕಥೆ—50
ಯಕ್ಷರಂಗದ ಮಾನಾಪಮಾನಗಳು
೧೯೭೦-೮೦ ದಶಕವೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನದ ಸುಗ್ಗಿಕಾಲ. ಅಪರೂಪಕ್ಕೆ ಕಾಣಲು ಸಿಗುವ ಸಿನೇಮಾ ಹೊರತು ಪಡಿಸಿದರೆ ಹಳ್ಳಿ-ಹಳ್ಳಿಗಳಲ್ಲಿ ನಡೆಯುವ ಯಕ್ಷಗಾನ ಬಯಲಾಟ, ನಾಟಕ ಪ್ರದರ್ಶನಗಳೇ ಜನಸಾಮಾನ್ಯರಿಗೆ ಮನರಂಜನೆಯ ಪ್ರಮುಖ ಮಾದ್ಯಮಗಳಾಗಿದ್ದವು. ಎಲ್ಲ ಆಟ-ನಾಟಕಗಳಿಗೂ ಸಮೃದ್ಧವಾದ ಪ್ರೇಕ್ಷಕ ಸಮುದಾಯದ ಹಾಜರಿ ಇರುತ್ತಿತ್ತು.
ಜಿಲ್ಲೆಯ ಕೆರೆಮನೆ, ಕರ್ಕಿ, ಬಚ್ಚಗಾರು ಇತ್ಯಾದಿ ವೃತ್ತಿಮೇಳಗಳ ತಿರುಗಾಟವಲ್ಲದೆ ದಕ್ಷಿಣದ ಕಡೆಯಿಂದಲೂ ಸೂರತ್ಕಲ್, ಧರ್ಮಸ್ಥಳ, ಮೂಲ್ಕಿ, ಮಂಗಳೂರು, ಕೋಟ ಮುಂತಾದ ಮೇಳಗಳು ಕನಿಷ್ಟ ವರ್ಷಕ್ಕೊಂದು ತಿರುಗಾಟವನ್ನಾದರೂ ಪೂರೈಸಿ ಜಿಲ್ಲೆಯ ಜನರ ಮನರಂಜನೆಯ ಹಸಿವು ಹಿಂಗಿಸುವಲ್ಲಿ ಸಹಕರಿಸುತ್ತಿದ್ದವು!
ಆಯಾ ಊರಿನ ಕೆಲವರು ತಿರುಗಾಟದ ವೃತ್ತಿ ಮೇಳದಾಟಗಳನ್ನು ಕಂಟ್ರಾಕ್ಟು ಹಿಡಿದು ಕಾಸು ಮಾಡಿಕೊಳ್ಳುವ ಯೋಜನೆಯನ್ನೂ ಹಾಕಿಕೊಳ್ಳುತ್ತಿದ್ದರು. ಕೆಲವು ಬಾರಿ ನಿರೀಕ್ಷಿತ ಲಾಭವಾಗದೆ ನಷ್ಟ ಹೊಂದಿದ್ದರೂ ಮೇಳದಾಟಗಳನ್ನು ಗುತ್ತಿಗೆ ಹಿಡಿಯುವ ಪರಂಪರೆ ಮಾತ್ರ ಇಂದಿಗೂ ಮುಂದುವರಿದಿರುವುದು ಜಿಲ್ಲೆಯ ಜನರ ಯಕ್ಷ ಪ್ರೀತಿಯ ದ್ಯೋತಕವೇ ಆಗಿದೆ.
೧೯೮೦ ರ ಸಮಯ. ಅಂಕೋಲೆಯಲ್ಲಿ “ಅಮೃತೇಶ್ವರಿ” ಮೇಳದ ಆಟ. ಆ ದಿನಗಳಲ್ಲಿ ಅಂಕೋಲೆಯ ಸೃದಯರಿಗೆ ಅಮೃತೇಶ್ವರಿ ಮೇಳವು ಅತ್ಯಂತ ಪ್ರಿಯವಾದ ತಿರುಗಾಟದ ಮೇಳವಾಗಿತ್ತು. ಇಲ್ಲಿಯ “ಗುಂಡಬಾಳಾ ಶೆಟ್ಟಿ” ಎಂಬ ದಿನಸಿ ವ್ಯಾಪಾರಿಯೊಬ್ಬರು ಬಹುತೇಕ ಮೇಳದಾಟಗಳನ್ನು ಕರೆಸಿ ಆಟವಾಡಿಸುತ್ತಿದ್ದರು. ಯಕ್ಷಗಾನವನ್ನು ಕಲಾವಿದರನ್ನು ತುಂಬಾ ಪ್ರೀತಿಸುವ ಶೆಟ್ಟರು ಇಲ್ಲಿನ ಹವ್ಯಾಸಿ ಕಲಾವಿದರನ್ನೂ ಸಂಘಟಿಸಿ ಆಗಾಗ ಆಟ ಆಡಿಸಿ ಪ್ರೋತ್ಸಾಹಿಸುತ್ತಿದ್ದರು. ನನ್ನ ಪಾತ್ರ ನಿರ್ವಹಣೆಯ ಕುರಿತಾಗಿಯೂ ತುಂಬ ಅಭಿಮಾನ ಪಡುತ್ತಿದ್ದರು. ಅವರಿಗೆ ನನ್ನನ್ನು ವೃತ್ತಿ ಮೇಳದ ಆಟದಲ್ಲಿ ಅತಿಥಿ ಕಲಾವಿದನನ್ನಾಗಿ ಪರಿಚಯಿಸಬೇಕೆಂಬ ಬಹುದೊಡ್ಡ ಆಸೆಯಿತ್ತು. ಇದೇ ಕಾರಣದಿಂದ ಅಮೃತೇಶ್ವರಿ ಮೇಳದಲ್ಲಿ ನನ್ನ ಪಾತ್ರವೊಂದನ್ನು ನಿಶ್ಚಯಿಸಿ ಆಟದ ಸಿದ್ಧತೆ ಮಾಡಿದರು.
ರಾಮಚಂದ್ರ ಹೆಗಡೆ ಚಿಟ್ಟಾಣಿ, ಗೋಡೆ ನಾರಾಯಣ ಹೆಗಡೆ ಮುಂತಾದ ಅತಿರಥ ಮಹಾರಥರು ಈ ಮೇಳದಲ್ಲಿ ಮುಖ್ಯ ಕಲಾವಿದರಾಗಿದ್ದರು. ಉಪ್ಪೂರರು ಮುಖ್ಯ ಭಾಗವತರಾಗಿದ್ದರೆ ಕಾಳಿಂಗ ನಾವುಡರು ಅದೇ ಆಗ ಭಾಗವತಿಕೆಗೆ ಆರಂಭಿಸಿ ಸಭಾಲಕ್ಷಣ ಭಾಗವನ್ನಷ್ಟೆ ಪೂರೈಸುತ್ತಿದ್ದರು.
ರಾತ್ರಿಯ ಮೊದಲ ಪ್ರಸಂಗ “ಬಬ್ರುಸೇನ ವಧೆ” ಗೋಡೆಯವರ ಅರ್ಜುನ, ಯಲ್ಲಾಪುರದ ಕಡೆಯ ಹೆಗಡೆಯೋರ್ವರ ಭೀಮ, ನನ್ನದು ಕೃಷ್ಣ.
ಚಿಟ್ಟ್ಟಾಣಿಯವರು ನನ್ನ ಮೇಲಿನ ಪ್ರೀತಿಯಿಂದ ನನ್ನನ್ನು ಭಾಗವತ ಉಪ್ಪೂರವರಿಗೆ ಪರಿಚಯಿಸಿದರು. ಎರಡನೆಯ ವೇಷಧಾರಿಯಾಗಿ ತಾವು ಕುಳಿತುಕೊಳ್ಳುವ ಚೌಕಿಮನೆಯ ಸ್ಥಳದಲ್ಲಿ ನನ್ನನ್ನು ಕುಳ್ಳಿರಿಸಿ ಮೇಳದ ಮೇಕಪ್ ಕಲಾವಿದರಿಂದ ನನಗೆ ಬಣ್ಣ ಮಾಡಿಸಿ ವೇಷವನ್ನು ಸಿದ್ಧಗೊಳಿಸಿ ನನಗೆ ತುಂಬ ಸಹಕಾರ ನೀಡಿದರು.
ಪ್ರಚಂಡ ಜನದಟ್ಟಣೆಯ ಪ್ರದರ್ಶನವಾಯಿತು! ನಾನು ವೇಷ ಕಳಚಿದ ಬಳಿಕ ತರುಣ ಭಾಗವತರಾದ ಕಾಳಿಂಗ ನಾವುಡರನ್ನು ಪರಿಚಯಿಸಿಕೊಂಡೆ. ಸ್ನೇಹದಿಂದ ಹೊರಗೆ ತಿರುಗಾಡುತ್ತ ಆಟದ ದೆಸೆಯಿಂದ ಬಂದ ಚಹಾದಂಗಡಿಯಲ್ಲಿ ಚಹಾ ಕುಡಿದು ಯಕ್ಷಗಾನ ಕಲೆಯ ಕುರಿತು ಮಾತನಾಡಿದೆವು. ಮಾತಿನ ಮಧ್ಯೆ ನಾನು ಯಕ್ಷಗಾನ ಪ್ರಸಂಗ ರಚಿಸಿದ ಸಂಗತಿ ಕೇಳಿ ತಿಳಿದ ನಾವುಡರು ಅದನ್ನು ನೋಡುವ ಕುತೂಹಲದಿಂದ ನಮ್ಮ ಮನೆಗೆ ಬರಲು ಇಚ್ಛಿಸಿದರು.
ರಾತ್ರಿಯ ಎರಡನೆಯ ಪ್ರಸಂಗ ಆರಂಭವಾದ ಹೊತ್ತಿನಲ್ಲಿ ನಾನು ನಾವುಡರನ್ನು ನನ್ನ ಬೈಕಿನಲ್ಲಿ ಕರೆದುಕೊಂಡು ಆಗ ನಾನು ವಾಸಿಸುತ್ತಿದ್ದ “ಮುಲ್ಲಾ ಬಾಡಾ” ಭಾಗದ ನನ್ನ ಮನೆಗೆ ಕರೆದೊಯ್ದೆ.
ನಾನು ಬರೆದ “ವೀರ ವಾಲಿ” ಪ್ರಸಂಗದ ಹಸ್ತಪ್ರತಿಯನ್ನು ಪರಿಶೀಲಿಸಲು ಅವರಿಗೆ ನೀಡಿದೆ. ಬೆಳಕು ಹರಿಯುವವರೆಗೆ ಮಾತನಾಡಿ ನಸುಕಿನಲ್ಲಿ ಅವರನ್ನು ಮೇಳದ ವಾಹನಕ್ಕೆ ತಲುಪಿಸಲು ನಾನು ನಾವುಡರನ್ನು ಮತ್ತೆ ಆಟ ನಡೆಯುತ್ತಿದ್ದ ಜೈಹಿಂದ್ ಮೈದಾನಕ್ಕೆ ಕರೆದು ತಂದೆ.
ಆಟ ಮುಗಿದು ಮೇಳವು ಮುಂದಿನ ಊರಿಗೆ ಹೊರಡುವ ಸನ್ನಾಹದಲ್ಲಿತ್ತು. ಆಗಲೇ ತೀರ ಅಪ್ರಿಯವಾದ ಒಂದು ಸಂಗತಿ ನನ್ನ ಗಮನಕ್ಕೆ ಬಂದಿತು.
ನಾನು ದಲಿತನೆಂಬ ಕಾರಣದಿಂದ ಮೇಳಕ್ಕೆ ಮೈಲಿಗೆಯಾಗಿದೆ ಎಂಬ ಸಂಗತಿ ಚೌಕಿ ಮನೆಯಲ್ಲಿ ರಾತ್ರಿಯೆಲ್ಲ ಚರ್ಚೆಯಾಯಿತೆಂದೂ ಮೇಳದ ಕಂಟ್ರಾಕ್ಟು ಹಿಡಿದ ಶೆಟ್ಟರು ತಪ್ಪು ಕಾಣಿಕೆ ನೀಡಿ ಪರಿಹಾರ ಮಾಡಿಕೊಡುವಂತೆ ಮೇಳದ ವ್ಯವಸ್ಥಾಪಕರು ಗುಂಡಬಾಳಾ ಶೆಟ್ಟರನ್ನು ಒತ್ತಾಯಿಸಿ ತಪ್ಪು ಕಾಣಿಕೆ ಸ್ವೀಕರಿಸಿದರೆಂದೂ ಕೆಲವು ನನ್ನ ಪರಿಚಿತ ಜನರು ನನಗೆ ತಿಳಿಸಿದಾಗ ನನಗೆ ತುಂಬಾ ಸಂಕಟವಾಯಿತು.
ನಾನು ವೃತ್ತಿ ಮೇಳದಲ್ಲಿ ಅತಿಥಿ ಕಲಾವಿದನಾಗಿ ಪಾತ್ರವಹಿಸುವುದರಿಂದಲೇ ನನಗೆ ವಿಶೇಷ ಗೌರವ ಪ್ರಾಪ್ತವಾಗುವ ನಂಬಿಕೆಯಾಗಲೀ ಹಂಬಲವಾಗಲೀ ನನಗಿರಲಿಲ್ಲ. ಜನರ ಒತ್ತಾಸೆಗೆ ಮಣಿದು ಸಹಜವಾಗಿ ಒಪ್ಪಿಕೊಂಡು ಭಾಗವಹಿಸಿದ್ದೆ. ಅದು ಇಂಥ ಅವಮಾನಕ್ಕೆ ಕಾರಣವಾದದ್ದು ನನ್ನ ಯಕ್ಷರಂಗದ ಬದುಕಿನಲ್ಲಿ ಬಹುದೊಡ್ಡ ಗಾಯವಾಗಿ ಉಳಿದು ಹೋಯಿತು!
ನಂತರದ ವರ್ಷಗಳಲ್ಲಿ ಹಲವು ಭಾರಿ ಹಲವಾರು ವೃತ್ತಿ ಮೇಳಗಳಲ್ಲಿ ಅತಿಥಿ ಕಲಾವಿದನಾಗಿ ಭಾಗವಹಿಸಿದೆನಾದರೂ ಆ ಎಲ್ಲ ಕ್ಷಣಗಳ ಸಂತೋಷದ ನಡುವೆಯೂ ಅಂದಿನ ಕಹಿ ನೆನಪು ಮರೆಯಲಾಗದಂತೆ ಉಳಿದಿದೆ.
ಯಕ್ಷಗಾನ ಹವ್ಯಾಸಿ ತಂಡದೊಡನೆ ಪಾತ್ರ ನಿರ್ವಹಿಸುವಾಗ ಹಲವು ವಿಧದಲ್ಲಿ ಹೊಂದಾಣಿಕೆಗೆ ನಮ್ಮನ್ನು ನಾವು ಅಣಿಗೊಳಿಸುವುದು ಅನಿವಾರ್ಯ. ಭಿನ್ನ ಅಭಿರುಚಿಯ ಆಚಾರ ವಿಚಾರಗಳ ಹಿನ್ನೆಲೆಯಿಂದ ಬಂದ ಕಲಾವಿದರುಗಳಲ್ಲಿ ಹೊಂದಾಣಿಕೆ ಕಷ್ಟವೇ ಆದರೂ ಹೊಂದಾಣಿಕೆಯಿಲ್ಲದೆ ಕಲಾತಂಡಗಳನ್ನು ಮುನ್ನಡೆಸುವುದು ಕಷ್ಟವೇ ಆಗುತ್ತದೆ. ಇದು ನಾವು ನೀಡುವ ಪ್ರದರ್ಶನದ ಮೇಲೂ ಪರಿಣಾಮ ಬೀರಬಹುದು. ಕಲಾವಿದರ ನಂಬಿಕೆ, ಅಪನಂಬಿಕೆಗಳೂ ಒಟ್ಟಾರೆಯಾಗಿ ತಂಡವನ್ನು ಪ್ರಭಾವಿಸುವ ಸಂದರ್ಭಗಳೂ ಇಲ್ಲದಿಲ್ಲ.
ಶಿರ್ಶಿ ತಾಲೂಕಿನ ಮತ್ತಿಘಟ್ಟ ಎಂಬ ಕಾಡಿನಿಂದ ಆವೃತವಾದ ಹಳ್ಳಿಯಲ್ಲಿ ಒಂದು ಆಟ. ಅಂಕೋಲೆಯ ನಮ್ಮ ಕಲಾತಂಡವು ಅಲ್ಲಿಯ ಜಮೀನ್ದಾರರೊಬ್ಬರ ವಿನಂತಿಯ ಮೇರೆಗೆ ‘ಗದಾಯುದ್ಧ’ ಪ್ರಸಂಗವನ್ನು ಪ್ರದರ್ಶಿಸಬೇಕಿತ್ತು. ಸಂಜೆಯ ಹೊತ್ತಿಗೆ ಮತ್ತಿಘಟ್ಟ ತಲುಪಿದ ತಂಡದ ಸದಸ್ಯರೆಲ್ಲ ಆಟ ನಡೆಯುವ ಸ್ಥಳವನ್ನು ಸೇರಿದ ಬಳಿಕ ಕೊಂಚ ವಿಶ್ರಾಂತಿ ಪಡೆದು ಕತ್ತಲಾಗುವ ಹೊತ್ತಿಗೆ ಊಟಕ್ಕೆ ಹೊರಟೆವು.
ನಮಗೆ ಆಹ್ವಾನ ನೀಡಿದ ಹೆಗಡೆಯವರ ಮನೆಯಲ್ಲಿಯೇ ನಮಗೆ ಊಟಕ್ಕೆ ವ್ಯವಸ್ಥೆಯಾಗಿತ್ತು. ಹತ್ತಾರು ಎಕರೆ ಅಡಿಕೆ ತೆಂಗುಗಳ ತೋಟದ ಒಡೆಯರಾಗಿದ್ದ ಹೆಗಡೆಯವರು ಊರಿನಲ್ಲಿಯೇ ಬಹು ಜನಪ್ರಿಯ ವ್ಯಕ್ತಿಯೆಂಬುದು ತಿಳಿಯಿತು. ಮನೆಯಲ್ಲಿ ಯಾವುದೋ ದೇವತಾಕಾರ್ಯ ನೆರವೇರಿಸಿದ ಹೆಗಡೆ ರಾತ್ರಿಯ ಜಾಗರಣೆಗಾಗಿ ಯಕ್ಷಗಾನ ಪ್ರದರ್ಶನದ ಏರ್ಪಾಡು ಮಾಡಿ ನಮ್ಮನ್ನು ಆಹ್ವಾನಿಸಿದ್ದರು.
ಯಕ್ಷಗಾನ ನಡೆಯುವ ರಂಗ ವೇದಿಕೆಯಿಂದ ಕೂಗಳತೆ ದೂರದಲ್ಲಿದ್ದ ಹೆಗಡೆಯವರ ಮನೆಗೆ ಹೋಗುವಾಗ ವಿಶಾಲವಾದೊಂದು ಗದ್ದೆ ಬಯಲನ್ನು ದಾಟಬೇಕಿತ್ತು. ಕಲಾ ತಂಡದ ಸದಸ್ಯರೆಲ್ಲ ಆಟದ ಕುರಿತು ಚರ್ಚಿಸುತ್ತ ಗದ್ದೆ ಹಾಳೆಯ ಮೇಲೆ ಸಾಲಾಗಿ ಹೊರಟಾಗ ದಾರಿಯ ಮಧ್ಯೆ ಗುಂಪಿನಲ್ಲಿ ಯಾರೋ ಒಬ್ಬರು “ಹೌದು……. ಈ ಮತ್ತಿಘಟ್ಟದಲ್ಲಿ ಮದ್ದು ಹಾಕುವ ರೂಢಿ ಇದೆಯಂತಲ್ಲ?” ಎಂದು ಒಂದು ಸಂದೇಹದ ಪಟಾಕಿ ಸಿಡಿಸಿದರು. ಮತ್ತೊಬ್ಬ “ಹೌದು……….. ಹೌದು ನಾನೂ ಕೇಳಿದ್ದೇನೆ….. ಈ ಊರೇ ಅದಕ್ಕೆ ಪ್ರಸಿದ್ಧವಾಗಿದೆ………..” ಎಂದು ತನ್ನದೂ ಒಂದನ್ನು ಎಸೆದ.
ನಡೆಯುತ್ತಿದ್ದ ಗುಂಪು ನಡಿಗೆಯನ್ನು ನಿಲ್ಲಿಸಿ ಚರ್ಚೆಯನ್ನೇ ಮುಂದುವರಿಸಿತು.
ತಂಡದಲ್ಲಿ ಹಿರಿಯರಾದ ವಿಠೋಬ ನಾಯಕ ವಂದಿಗೆ, ಮಂಗೇಶ ಗೌಡ, ಅನಂತ ಹಾವಗೋಡಿ, ಹಾಸ್ಯಗಾರ ವೆಂಕಟ್ರಮಣ ನಾಯ್ಕ ಮುಂತಾದ ಕಲಾವಿದರೂ ಹಿಮ್ಮೇಳದವರೂ ಇದ್ದಾರೆ. ಎಲ್ಲರಿಗೂ ಒಂದು ಅವ್ಯಕ್ತ ಭಯ ಶುರುವಾಯಿತಲ್ಲದೇ ಗೊತ್ತಿದ್ದ ಕೆಲವರು “ಮದ್ದು” ಹಾಕುವುದರಿಂದ ಆಗುವ ದುಷ್ಪರಿಣಾಮದ ಕುರಿತು ದೀರ್ಘವಾದ ವಿವರಣೆಯನ್ನೇ ನೀಡಲು ಆರಂಭಿಸಿದರು. ತಾವು ಕಣ್ಣಾರೆ ಕಂಡ ಅನುಭವಗಳನ್ನೇ ಕೆಲವರು ಭಯಾನಕವಾಗಿ ಬಣ್ಣಿಸಿದ ಪರಿಣಾಮ ತಂಡದ ಎಲ್ಲರಲ್ಲಿಯೂ ಅವ್ಯಕ್ತ ಭಯವೇ ಶುರುವಾಯಿತು.
ಅಂತಿಮವಾಗಿ ನಡುದಾರಿಯಿಂದಲೇ ಎಲ್ಲರೂ ಮರಳಿ ರಂಗವೇದಿಕೆಯತ್ತ ಹೊರಡಲು ಸಿದ್ಧರಾದರು.
ಹೆಗಡೆಯವರು ನಮಗಾಗಿ ಸಿದ್ಧಪಡಿಸಿದ ಅಡಿಗೆ ವ್ಯರ್ಥವಾಗುವುದರೊಂದಿಗೆ ಅವರ ಮನಸ್ಸಿಗೆ ನೋವಾಗಬಹುದೆಂಬ ಕಾಳಜಿಯೂ ಇಲ್ಲದೆ ನಾವೆಲ್ಲರೂ ಮರಳಿ ಬಂದೆವು. ಸಂಘಟಕರಿಗೆ ಸಂದೇಶ ತಲುಪಿಸಿ ರಂಗವೇದಿಕೆಯ ಸನಿಹವೇ ಒಲೆ ಹೂಡಿ ಒಂದಿಷ್ಟು ಅಕ್ಕಿ ಬೇಳೆ ಇತ್ಯಾದಿ ತರಿಸಿಕೊಂಡು ಎಂಥದೋ ಒಂದು ಅಡಿಗೆ ಮಾಡಿ ಊಟದ ಶಾಸ್ತ್ರ ಮುಗಿಸಿ ನಿರಾಳರಾದೆವು.
ಮರುದಿನ ಮುಂಜಾನೆ ಆಟ ಮುಗಿಸಿ ಊರಿಗೆ ಹೊರಡಬೇಕೆನ್ನುವಾಗ ನನಗೊಂದು ಒತ್ತಾಯದ ಆಮಂತ್ರಣ ಬಂದಿತು.
ನಮ್ಮ ಕಾಲೇಜಿನಲ್ಲಿ ನಮ್ಮ ಸಹೋದ್ಯೋಗಿಯಾಗಿದ್ದ ಹಿಂದಿ ಭಾಷಾ ಉಪನ್ಯಾಸಕ ಭಾಸ್ಕರ ಹೆಗಡೆ ಎಂಬುವವರ ಪತ್ನಿ ಜಯಲಕ್ಷ್ಮಿ ಹೆಗಡೆ ಎಂಬುವವರ ತವರೂರು ಇದು. ಕಳೆದ ತಿಂಗಳಷ್ಟೇ ಹೆರಿಗೆಯಾಗಿ ವಿಶ್ರಾಂತಿ ಪಡೆಯುತ್ತ ಇದ್ದವರು ಪರಿಚಿತನಾದ ನನಗೆ ಮುಂಜಾನೆಯ ಉಪಹಾರಕ್ಕೆ ಬರುವಂತೆ ಆಹ್ವಾನ ನೀಡಿ ಅವರ ತಂದೆಯ ಮೂಲಕ ಸಂದೇಶ ಕಳುಹಿಸಿದ್ದರು.
ನಾನು ನಿರಾಕರಿಸಲಾಗದೆ ಸನಿಹದಲ್ಲೇ ಇದ್ದ ಅವರ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿ ಅವರ ಯೋಗಕ್ಷೇಮ ವಿಚಾರಿಸಿಕೊಂಡೆ. ಜಯಲಕ್ಷ್ಮಿ ಹೆಗಡೆಯವರು ನಿನ್ನೆಯ ರಾತ್ರಿ ನಾವು ಹೆಗಡೆಯವರ ಮನೆಯ ಊಟ ನಿರಾಕರಿಸಿದ್ದಕ್ಕೆ ತುಂಬಾ ನೋವಿನಿಂದ ಮಾತನ್ನಾಡಿದರು.
ಮತ್ತಿಘಟ್ಟದಲ್ಲಿ ‘ಮದ್ದು ಹಾಕುವ’ ಪದ್ಧತಿ ಬಹಳ ಹಿಂದಿನ ಕಾಲದಲ್ಲಿ ರೂಢಿಯಲ್ಲಿ ಇದ್ದುದು ನಿಜ. ಈಗ ಸಂಪೂರ್ಣವಾಗಿ ಅಂಥ ಪದ್ಧತಿ ನಿಂತು ಹೋಗಿದೆ. ಯಕ್ಷಗಾನ ಸಂಘಟಿಸಿದ ಹೆಗಡೆಯವರು ಆಟದ ಮೇಳದವರಿಗಾಗಿ ವಿಶೇಷವಾದ ಸಿಹಿ ಭೋಜನ ಸಿದ್ಧಪಡಿಸಿ ಕಾಯ್ದಿದ್ದರಂತೆ. ಕಲಾವಿದರೆಲ್ಲ ಹೀಗೆ ಸಂದೇಹಪಟ್ಟು ಊಟವನ್ನು ನಿರಾಕರಿಸಿದ್ದು ಅವರಿಗೆ ತುಂಬಾ ನೋವನ್ನು ಅವಮಾನವನ್ನುಂಟುಮಾಡಿದೆ. ಕೋಪದಿಂದ ಕಲಾವಿರಿಗಾಗಿ ಸಿದ್ಧಪಡಿಸಿದ ವಿಶೇಷ ಅಡಿಗೆಯನ್ನು ಅಡಿಕೆ ಮರದ ಬುಡಕ್ಕೆ ಚೆಲ್ಲಿಸಿದರಂತೆ……….
ಇತ್ಯಾದಿ ವಿವರಿಸಿದ ಜಯಲಕ್ಷ್ಮಿಯವರು “ನಿಮ್ಮ ಕಲಾವಿದರೆಲ್ಲ ದೊಡ್ಡ ತಪ್ಪು ಮಾಡಿದರು ಸರ್….” ಎಂದು ನೊಂದು ನುಡಿದರು.
ವಿದ್ಯಾವಂತರಾದ ನಾವೆಲ್ಲ ತಂಡದಲ್ಲಿದ್ದು ಇಂಥದೊಂದು ಅಪನಂಬಿಕೆಗೆ ಅವಕಾಶ ನೀಡಿ ಹಿರಿಯರ ಮನ ನೋಯಿಸಿದ್ದು ಆಕ್ಷೇಪಾರ್ಹವೇ ಎಂಬ ದಾಟಿಯಲ್ಲಿ ಜಯಲಕ್ಷ್ಮಿಯವರು ಮಾತನಾಡಿದಾಗ ನನಗೆ ಒಂದು ಬಗೆಯಲ್ಲಿ ನಮ್ಮ ಕೃತ್ಯಕ್ಕೆ ನಾವೇ ನಾಚಿಕೆ ಪಡುವಂತಾಯಿತು.
ನಿರುಪಾಯನಾದ ನಾನು ನಮ್ಮ ಮೌಢ್ಯಕ್ಕೆ ವಿಷಾದ ವ್ಯಕ್ತಪಡಿಸಿ ಅಲ್ಲಿಂದ ಹೊರಟು ಬಂದೆ. ಮತ್ತೆ ನನಗೆ ಊಟಕ್ಕೆ ಆಮಂತ್ರಿಸಿದ ಹೆಗಡೆಯವರನ್ನು ಕಂಡು ಮಾತಾಡಿಸುವಷ್ಟು ನೈತಿಕ ಸ್ಥೆರ್ಯ ಇರಲಿಲ್ಲ.
ರಾತ್ರಿಯ “ಗದಾಯುದ್ಧ” ಪ್ರದರ್ಶನ ಮತ್ತಿಘಟ್ಟದ ಪ್ರೇಕ್ಷಕರ ಮನಸೂರೆಗೊಂಡಿದ್ದು ಅವರ ಶ್ಲಾಘನೇಯ ಮಾತುಗಳಿಂದ ಉಲ್ಲಿಸಿತರಾಗಬೇಕಾದ ನಾವೆಲ್ಲ ನಾವೇ ಮಾಡಿದ ಪ್ರಮಾದಕ್ಕೆ ಪಶ್ಚಾತ್ತಾಪ ಪಡುತ್ತಲೇ ಊರಿಗೆ ಮರಳಿದ್ದೆವು.
ರಾಮಕೃಷ್ಣ ಗುಂದಿ
ಗುರೂಜಿ, ಪದೇ ಪದೇ ಜಾತಿ ಎಂಬ ಶಬ್ದ ಕೇಳಿ ತುಂಬಾ ನೋವು ಅನಿಸುತ್ತದೆ, 80ರ ದಶಕತನಕ ಇದು ತುಂಬಾನೇಯಿತು. ಈಗ ಅದರ ಹೆಸರೇ ಇಲ್ಲ. ಗುರೂಜಿ ಇವಾಗಲೂ ನಿಮಗೆ ಆ ಅಳುಕು ಇದ್ದರೆ ಅದನ್ನು ಬಿಟ್ಟು ಹಾಕಿ. ಏಕೆಂದರೆ ಕೆಲವೊಂದು ಸಲ ಓದುವಾಗ ನನಗೆ ಮನಸ್ಸು ತುಂಬಾ ಭಾರವಾಗುತ್ತಿದೆ…..
ಇಲ್ಲ….ಈಗ ಬಿಡಿ…ಆನಂತರ ಅಂಥ ತೊಂದರೆ ಆಗಲಿಲ್ಲ
ನಿರ್ಲಿಪ್ತತೆಯಿಂದ ಹೊರಡುವ ಗುಂದಿಯವರ ಧ್ವನಿ ಹಿತವಾದ ಅನುಭೂತಿ ಕೊಡುತ್ತದೆ.