ಕಾವ್ಯ ಸಂಗಾತಿ
ಕವಿತೆ ಭಾರವಾಗುವುದು ಎಂದರೆ
ಬಿ.ಶ್ರೀನಿವಾಸ
ಮುಂಜಾನೆ ಹೊತ್ತು ಭಾರವಾಗಿರುವುದಿಲ್ಲ ಕವಿತೆ, ಪಯಣಿಸುವ ಮುನ್ನ
ಹೊತ್ತೆಂಬುದಿರುವುದಿಲ್ಲ ಅಳುವಿಗೆ,
ನಗುವಿಗೆ ಇರುವಂತೆ.
ಕವಿತೆಗೂ ಅಷ್ಟೆ,
ಹೊತ್ತು-ಗೊತ್ತೂ ಇರುವುದಿಲ್ಲ ಹೂಗಳಿಗಿರುವಂತೆ.
ಕೆಲವೊಮ್ಮೆ ಗಕ್ಕನೆ ನಿಂತೇ ಬಿಡುತ್ತವೆ ಅರ್ಧದಾರಿಯಲಿ, ರಚ್ಚೆ ಹಿಡಿದು.
ದಡ ಸೇರಿಸುವುವು ಕನಸುಗಳು ಕೈಯ್ಯ ಹಿಡಿದು, ಎಷ್ಟೋ ಬಾರಿ.
ಭಾವಗಳ ಹೆಜ್ಜೆಕಿತ್ತು ಒದ್ದೆಗಣ್ಣಲ್ಲಿ
ಸ್ವಾಗತಿಸುತ್ತವೆ,
ಅತಿಥಿ-ಅಭ್ಯಾಗತರ ಭೇದವಿಲ್ಲದೆ
ಮುಚ್ಚುವುದಿಲ್ಲ ಎಂದಿಗೂ ಬಾಗಿಲು,
ಕವಿಯ ಹೊರತು.
ಕವಿತೆಗಳೆಂದೂ ಮರಳಿ ಬಾರವು
ಎಂಬುದು ಸತ್ಯ
ಮತ್ತು ಮಿಥ್ಯವೂ ಅಹುದು
ಕೆಲವೊಮ್ಮೆ ಕವಿಯನ್ನು,ಶವವನ್ನೂ
ಹೊತ್ತು ನಡೆದೇ ಬಿಡುತ್ತವೆ ಶೂನ್ಯದೆಡೆಗೆ.
ದಣಿದ ಜನಗಳ ಹೊತ್ತ ಟಂ ಟಂ ಗಾಡಿಯು
ಮನೆಗೆ ಮರಳುವ ಇಳಿಹೊತ್ತಿನಲಿ
ಭಾರವಾಗುವುದು
ಕವಿತೆ
ಭಾರವಾಗುವುದು ಹೀಗೆ.
ತುಂಬಾ ಸುಂದರವಾಗಿದೆ ಸರ್