ಸ್ವರ ವ್ಯಂಜನಳಿಗೆ ಒಂದೇ ಮಣೆ, ಕ-ನಾದ ಕೀಲಿಮಣೆ

ಸ್ವರ ವ್ಯಂಜನಳಿಗೆ ಒಂದೇ ಮಣೆ, ಕ-ನಾದ ಕೀಲಿಮಣೆ

ಸರೋಜಾ ಪ್ರಭಾಕರ್

ʻಕ-ನಾದ ಫೋನೆಟಿಕ್ಸ್‌ ಪ್ರೈ. ಲಿ.ʼ ಇದು ಕರ್ನಾಟಕ ಸ್ಟಾರ್ಟ್‌ ಅಪ್‌ ಅಡಿಯಲ್ಲಿನ ಒಂದು ಪುಟ್ಟ ಕಂಪೆನಿ. ಫೋನೆಟಿಕ್ಸ್‌ ಎಂದರೆ ಧ್ವನಿಶಾಸ್ತ್ರ, ಸ್ವರಶಾಸ್ತ್ರ, ಭಾಷಾಧ್ವನಿ ಶಾಸ್ತ್ರ ಎನ್ನುವ ಅರ್ಥವಿದೆ. ಈ ಪುಟ್ಟ ಕಂಪೆನಿಯ ಮುಂದೆಯೂ ಭಾರತೀಯ ಭಾಷೆ ಮತ್ತು ಲಿಪಿಯ ಅಳಿವು, ಉಳಿವು ಬೆಳವಣಿಗೆಯ ಮಹದಾಸೆಯಿದೆ, ಸವಾಲೂ ಇದೆ. ʻಕನ್ನಡ ಅನ್ನ ನೀಡುವ ಭಾಷೆ ಅಲ್ಲʼ ಎನ್ನುವ ಮಾತನ್ನು ಸುಳ್ಳಾಗಿಸಿ, ಭಾರತೀಯ ಭಾಷೆಗೆ ತಂತ್ರಜ್ಞಾನದ ಸ್ಪರ್ಶ ನೀಡುವ ಮೂಲಕ ಅದನ್ನು ಅನ್ನ ನೀಡುವ ಭಾಷೆಯಾಗಿ ಪರಿವರ್ತಿಸುವ ಪಣ ತೊಟ್ಟಿದೆ ಈ ಕಂಪೆನಿ.

 

 ಅದರ ಮೊದಲ ಹೆಜ್ಜೆಯಾಗಿ ಕನ್ನಡವೂ ಒಳಗೊಂಡಂತೆ ೯ ಭಾರತೀಯ ಭಾಷೆಯ ಕೀಲಿಮಣೆಯನ್ನು ಸಿದ್ಧಪಡಿಸಿ ಆಗಸ್ಟ್‌ ೧೫, ೨೦೨೦ರಂದು ಕನ್ನಡದ ಕೀಲಿಮಣೆಯು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿ.ಎಸ್.‌ ನಾಗಾಭರಣ ಅವರಿಂದಲೂ, ತುಳು ಕೀಲಿಮಣೆಯು ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಪೂಜ್ಯ ವೀರೇಂದ್ರ ಹೆಗ್ಗಡೆ ಅವರಿಂದಲೂ ಲೋಕಾರ್ಪಣೆಗೊಂಡಿತು. 

ಭಾರತೀಯ ಭಾಷೆಗಳಿಗೆ ಶತಶತಮಾನಗಳ ಶ್ರೀಮಂತ ಇತಿಹಾಸವುಂಟು; ಪರಂಪರೆಯುಂಟು. ಆದರೆ ನಾವು ನಮ್ಮ ಭಾಷೆಯನ್ನು ಟಂಕಿಸಲು ಬಳಸುವ ಕೀಲಿಮಣೆ ಮಾತ್ರ ಆಂಗ್ಲಭಾಷೆಯ ಕ್ವರ್ಟಿ ಕೀಲಿಮಣೆ. 

ನಾವು ಈ ವಿಚಾರವನ್ನು ತುಂಬ ಸಹಜವಾಗಿ ಸ್ವೀಕರಿಸಿಬಿಟ್ಟಿದ್ದೇವೆ. ಅದು ಯಾಕೆ ಹೀಗೆ, ಅದರ ಪರಿಣಾಮವೇನು? ಎಂಬ ಬಗ್ಗೆ ಎಂದೂ ಯೋಚಿಸುವ ಗೋಜಿಗೂ ಹೋಗಿಲ್ಲ.  

ಹಾಗೆಂದು ಯೋಚಿಸದವರೇ ಇಲ್ಲ ಎನ್ನುವದೇನಿಲ್ಲ; ಯೋಚಿಸಿದವರಿದ್ದಾರೆ, ಅದೂ ನಮ್ಮ ನಡುವೆಯೇ. ಅದನ್ನು ತುಂಬ ಗಂಭೀರವಾಗಿ ಪರಿಗಣಿಸಿ ಅದಕ್ಕಾಗಿಯೇ ಕೆಲಸ ಮಾಡಿ ಯಶಸ್ಸು ಪಡೆದು ಇಂದು ಕನ್ನಡವೊಂದೇ ಅಲ್ಲದೆ, ಭಾರತದ ಒಂಬತ್ತು ಭಾಷೆಗಳ ಕೀಲಿಮಣೆ ತಯಾರಿಸಿದ್ದಾರೆ. ತಯಾರಿಸಿದ ಬಳಿಕ ಅದನ್ನು ಬಳಸದೆ ಇಡಲಾದೀತೆ? ಅಂತಹ ಸವಾಲೊಂದು ಕೀಲಿಮಣೆಯನ್ನು ಹತ್ತುವರ್ಷಕಾಲದ ಪರಿಶ್ರಮದಿಂದ ಅನ್ವೇಷಿಸಿರುವ ವಿಜ್ಞಾನಿ ಡಾ. ಗುರುಪ್ರಸಾದ್‌ ಅವರ ಮುಂದೆ ಬಂದಾಗ, ಆ ಕಾರ್ಯವನ್ನೂ ತಮ್ಮ ಹೆಗಲಮೇಲೆ ಹೊತ್ತುಕೊಂಡು ಕಂಪೆನಿಯನ್ನೂ ತಂಡವನ್ನೂ ಕಟ್ಟಿ ಮುನ್ನಡೆಸುತ್ತಿದ್ದಾರೆ.

ಬೀಜಾವಾಪ

ಮೂಲತಃ ಮೈಸೂರಿನವರಾದ ಡಾ. ಗುರುಪ್ರಸಾದ ಅವರಿಗೆ ಮೊದಲಿನಿಂದಲೂ ರೊಬೋಟ್‌ ಮೇಲೆ ವಿಪರೀತ ಪ್ರೀತಿ. ಮಂಡ್ಯದ ಗದ್ದೆಬಯಲಿನಲ್ಲಿ ಸ್ನೇಹಿತರನ್ನು ಕಟ್ಟಿಕೊಂಡು ರೊಬೋಟ್‌ ತಯಾರಿಸಿ ಖುಷಿಪಡುತ್ತಿದ್ದ ಇವರು ಬಳಿಕ ಸೇರಿದ್ದು ಇಸ್ರೋವನ್ನು. ಅಲ್ಲಿ ಕಸ್ತೂರಿರಂಗನ್‌ ಅವರೊಡನೆ ಕೆಲಸ ಮಾಡುತ್ತಿದ್ದವರು ರೊಬೋಟ್‌ ಕುರಿತಾದ ತಮ್ಮ ಆಸಕ್ತಿಯನ್ನು ಹೇಳಿದಾಗ ಅವರು ಅಮೆರಿಕೆಗೆ ಕಳುಹಿಸಿದರು. ಒರ್ಲೆಂಡೋ ಕೆನಡಿ ಸ್ಪೇಸ್‌ ಸೆಂಟರ್‌ನಲ್ಲಿ ಇವರಿಗೆ ಅಲ್ಲಿನ ನಾಗರಿಕತ್ವ ಇಲ್ಲದ ಹಿನ್ನೆಲೆಯಲ್ಲಿ ಉತ್ಸಾಹಕ್ಕೆ ತುಸು ಹಿನ್ನಡೆಯುಂಟಾದರೂ, ಪೈಲಟ್‌ ಇಲ್ಲದ ವಿಮಾನ ಹಾರಿಸುವುದು ಇವೇ ಮೊದಲಾದ ಕಾರ್ಯದಲ್ಲಿ ಮೂವತ್ತು ವರ್ಷ ಕಳೆದರು. 

ಕಾಲ ಹಾಗೇ ನಿಲ್ಲುವುದಿಲ್ಲ; ಬದುಕು ಇನ್ನೆಲ್ಲೋ ತಿರುವು ಪಡೆದುಬಿಡುತ್ತದೆ. ಒರ್ಲೆಂಡೋ ಕನ್ನಡ ಸಂಘದಿಂದ ಮಕ್ಕಳಿಗೆ ಕನ್ನಡ ಕಲಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯ್ತು. ಇವರ ಮಗನೂ ಕ್ಲಾಸಿಗೆ ಸೇರಿದಾಗ ಅದೊಂದು ದಿನ ಇವರ ಮಗನಿಗೆ ಕನ್ನಡ ಅಕ್ಷರ ತಿದ್ದಲು ಹೇಳಿದರು. “ನಾನ್ಯಾಕೆ ಕನ್ನಡ ಅಕ್ಷರ ತಿದ್ದಬೇಕು? ಆಂಗ್ಲಕೀಲಿಮಣೆಯಲ್ಲಿ ಕನ್ನಡವನ್ನು ಆರಾಮಾಗಿ ಟೈಪಿಸಬಹುದು. ನೀನೂ ಟೈಪಿಸಬಹುದು. ನಾವಿಬ್ಬರೂ ಕನ್ನಡವನ್ನೇ ಮಾತನಾಡುತ್ತೇವೆ. ಮತ್ತ್ಯಾಕೆ ಕಲಿಯುವುದು?” ಎಂದು ಪ್ರಶ್ನಿಸಿದಾಗ ಇವರ ಯೋಚನಾದಿಕ್ಕೇ ಬದಲಾಗಿಹೋಯ್ತು.

“ನ್ಯೂಯಾರ್ಕ ಟೈಮ್ಸ್‌ ವರದಿಯ ಪ್ರಕಾರ ಕೆಲವೇ ವರ್ಷಗಳಲ್ಲಿ ಕೇವಲ ಆಡುಭಾಷೆಯಾಗಿ ಉಳಿಯುವ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ ಎಂಬುದು ಆತಂಕಕಾರಿ ವಿಚಾರ. ಕನ್ನಡವು ಅನ್ನ ಕೊಡಲಾರದೆಂಬುದು ನಮ್ಮ ಭಾವನೆ. ಯಾಕೆ ಹೀಗೆ? ಜಪಾನ್‌ನಂತಹ ದೇಶವು ತನ್ನ ಮಾತೃಭಾಷೆಯನ್ನೇ ಬಳಸಿಯೂ ತಂತ್ರಜ್ಞಾನದಲ್ಲಿ ವಿಶ್ವದಲ್ಲೇ ನಂ. ಒನ್‌ ಆಗಿಲ್ಲವೇ? ಅದು ನಮಗ್ಯಾಕೆ ಸಾಧ್ಯವಾಗುವುದಿಲ್ಲ?” ಎಂದು ಪ್ರಶ್ನಿಸುತ್ತಾರೆ ಡಾ. ಗುರುಪ್ರಸಾದ್.‌ 

ಇದೇ ವಿಚಾರವನ್ನು ಮುಂದಿಟ್ಟುಕೊಂಡು ನೋಡಿದಾಗ ಅವರಿಗೆ ಕ್ವರ್ಟಿ ಕೀಲಿಮಣೆಗಿಂತ ನಮ್ಮ ಭಾಷೆಯದೇ ಕೀಲಿಮಣೆ ಯಾಕೆ ತಯಾರಿಸಬಾರದು? ಎನ್ನುವ ವಿಚಾರ ಬಂತು. ಅಲ್ಲಿಂದ ಇವರ ಕೀಲಿಮಣೆ ಧ್ಯಾನ ಶುರುವಾಯ್ತು. ಅದಕ್ಕೆ ಇಂಬುಗೊಟ್ಟು ತಮ್ಮ ಲಿಪಿಜ್ಞಾನವನ್ನೆಲ್ಲ ಧಾರೆ ಎರೆದು ಇವರಿಗೆ ಪೂರ್ಣ ನೆರವು ಒದಗಿಸಿದವರು ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಬಿವಿಕೆ ಶಾಸ್ತ್ರಿ ಅವರು. ಕೀಲಿಮಣೆಗೆ ಅಮೆರಿಕದ ಪೆಟೆಂಟ್‌ ದೊರೆತ ಕ್ಷಣದಲ್ಲೇ ಮನೆಯವರ ಸಲಹೆಯಂತೆ ಕರ್ನಾಟಕಕ್ಕೇ ಬಂದು ಇಲ್ಲೇ ಆ ಸಲುವಾಗಿ ಕೆಲಸ ಪ್ರಾರಂಭಿಸಿದರು.

 

ಸವಾಲುಗಳ ಸರಮಾಲೆ

ಇವರು ಮೊದಲು ತಯಾರಿಸಿದ್ದು ಚೌಕಾಕಾರದ ಕ-ನಾದ ಏಕರೂಪ ಕೀಲಿಮಣೆಯನ್ನು. ಆಯತಾಕಾರದ ಕ್ವರ್ಟಿ ಕೀಲಿಮಣೆ ರೂಢಿಯಾದ ಜನ ಚೌಕಾಕಾರದ ಕೀಲಿಮಣೆಯನ್ನು ಸ್ವೀಕರಿಸದೆ ಹೋದಾಗ ಅದಕ್ಕಾಗಿ ಈ ಕೀಲಿಮಣೆಯನ್ನೂ ಸಹ ಆಯತಾಕಾರವಾಗಿ ರೂಪಿಸಬೇಕಾಯ್ತು. ಗ್ರಾಮೀಣಭಾಗದಲ್ಲಿ ವಿದ್ಯುತ್‌ ತೊಂದರೆ ಜಾಸ್ತಿ. ಅದಕ್ಕಾಗಿ ಬ್ಯಾಕ ಅಪ್‌ ನೀಡಬೇಕಾಯ್ತು. ಬರಿಯ ಕೀಲಿಮಣೆ ಯಾರಿಗೆ ಬೇಕು? ಅದನ್ನು ಗಮನಿಸಿ ʻಇಂಡಿಕ್‌ ಕೀಬೋರ್ಡ್‌ ಲ್ಯಾಂಗ್ವೇಜ್‌ ಲ್ಯಾಬ್‌ & ಸ್ಟೆಮ್‌ ಲ್ಯಾಬ್‌ʼ ಎನ್ನುವ ವಿನೂತನ ಭಾಷಾ ಪ್ರಯೋಗಾಲಯ ಸ್ಥಾಪಿಸಿದರು. ಶಾಲೆಯಲ್ಲಿ ಪಠ್ಯವನ್ನು ಗಣಕಯಂತ್ರದಲ್ಲಿ ಕಲಿಸುವ ವ್ಯವಸ್ಥೆಯನ್ನು ಶಿಕ್ಷಕರೊಡಗೂಡಿ ಮಾಡಬೇಕಾಯ್ತು. ಗಣಕಯಂತ್ರದ ಲ್ಯಾಬ್‌ಗೆ ತುಸುಮಟ್ಟಿಗೆ ತರಬೇತಿ ಪಡೆದ ಒಬ್ಬ ಅಸಿಸ್ಟೆಂಟ್‌ ಒದಗಿಸುವ ವ್ಯವಸ್ಥೆ ಮಾಡಬೇಕಾಯಿತು. ಪ್ರಾಥಮಿಕ, ಮಾಧ್ಯಮಿಕ, ಕಾಲೇಜು ಈ ರೀತಿ ಬೇರೆಬೇರೆ ವ್ಯವಸ್ಥೆ ರೂಪಿಸಬೇಕಾಯ್ತು. ಹಾಲಿ ಇರುವ ಗಣಕಯಂತ್ರ ಪ್ರಯೋಗಾಲಯಕ್ಕೆ ಆಫ್ಲೈನ್‌ ವಿಷಯದೊಂದಿಗೆ ೧ ಪಾಕೆಟ್‌ ಸರ್ವರ್‌, ೫ ಕೀಬೋರ್ಡ್‌, ನೆಟ್‌ವರ್ಕಿಂಗ್‌ ಹಾರ್ಡ್ವೇರ್‌ ಒದಗಿಸಿದರೆ ಸಾಕಾಯ್ತು. ಹೊಸ ಪ್ರಯೋಗಾಲಯಕ್ಕೆ ಆಫ್ಲೈನ್‌ ವಿಷಯದೊಂದಿಗೆ ಪಾಕೆಟ್‌ ಸರ್ವರ್‌, ೫ ಕೀಬೋರ್ಡ್‌ ಜೊತೆಗೆ ಮೈಕ್ರೋ ಪಿಸಿ ಸೆಟ್‌, ೫ ಅಂಡ್ರಾಯ್ಡ್‌ ಸಾಧನಕ್ಕೆ ಸಂಪರ್ಕಿಸುವ ಕೀಬೋರ್ಡ್‌, ೨ ಕೀಬೋರ್ಡ್‌ ಸಾಗಿಸುವ ಕೇಸ್‌, ನೆಟ್ವಕ್ರಿಂಗ್‌ ಹಾರ್ಡ್ವೇರ್‌, ೬ ತಿಂಗಳು ಅರೆಕಾಲಿಕ ತರಬೇತಿ ಪಡೆದ ಸಿಬ್ಬಂದಿ, ಹೀಗೆಲ್ಲ ಒದಗಿಸಬೇಕಾಯ್ತು. ಇದೆಲ್ಲಕ್ಕೂ ಒರ್ಲೆಂಡೋ ಕನ್ನಡ ಸಂಘದ ಬೆಂಬಲವೂ ಇದೆ. ನಮ್ಮಲ್ಲಿ ಒಂದು ಮಾತಿದೆಯಲ್ಲ, ʻಸಂನ್ಯಾಸಿ ಸಂಸಾರʼ ಎಂದು. ಹಾಗೆ ಒಂದು ಕೀಲಿಮಣೆಯ ಜೊತೆಗೆ ಇವೆಲ್ಲವನ್ನೂ ನೀಡಿ ಶಾಲೆಯ ಮಕ್ಕಳನ್ನು ಡಿಜಿಟಲ್‌ ಸಾಕ್ಷರರನ್ನಾಗಿ ಮಾಡುವ ಹೊಣೆಯನ್ನೇ ತನ್ನ ಹೆಗಲ ಮೇಲೆ ಹೊತ್ತುಕೊಂಡಿದೆ ಕ-ನಾದ.

ಇದರ ಜೊತೆಗೆ ಡಿಕೋಡಿಂಗ್‌, ಆನ್ಲೈನ್‌ ಭಾಷಾಕಲಿಕೆ ಸಹ ಕ-ನಾದ ಕೀಲಿಮಣೆಯಿಂದ ಸಾಧ್ಯವಾಗಿದೆ. ತುಳುರಾಮಾಯಣವನ್ನು ಡೀಕೊಡ್‌ ಮಾಡಿ ಧರ್ಮಸ್ಥಳಕ್ಕೆ ಒಪ್ಪಿಸಲಾಗಿದೆ. ʻಒಮ್ಮೆ ಕಳೆದುಕೊಂಡರೆ ಪುನಃ ತರುವುದು ಸುಲಭವಲ್ಲʼ ಎನ್ನುವುದು ತುಳುಲಿಪಿಯನ್ನು ಪುನಃ ಹೊರತರುವ ಕಾರ್ಯ ಮಾಡುತ್ತಿರುವ ಡಾ. ಗುರುಪ್ರಸಾದ್‌ ಅವರ ಅನುಭವ. “ಕನ್ನಡವೂ ಆ ಪಟ್ಟಿಗೇ ಸೇರಬೇಕೆ? ಯೋಚಿಸಿ” ಎನ್ನುತ್ತಾರೆ ಇವರು. ನಮ್ಮಲ್ಲಿ ವರ್ತಮಾನದ ಚಿತ್ರಣ ಹೇಗಿದೆಯೆಂದರೆ, ಅಕ್ಷರಾಭ್ಯಾಸ ಮಾಡಿಸುವುದಕ್ಕೂ ಪುರಸೊತ್ತಿಲ್ಲದಂತೆ ಸೀದಾ ʻಎ ಫಾರ್‌ ಆಪಲ್‌, ಬಿ ಫಾರ್‌ ಬಾಲ್‌ʼ ಎಂದು ಶುರುವಿಟ್ಟುಕೊಳ್ಳುತ್ತಿದ್ದೇವೆ. ʻನೀರಿಳಿಯದ ಗಂಟಲೊಳ್‌ ಕಡುಬು ತುರುಕಿದಂತೆʼ ಎನ್ನುವ ಮಾತೇ ಸರಿಯಾದೀತು ಪಾಲಕರ ಈ ಆತುರಕ್ಕೆ. ಹೀಗೆ ಮುಂದುವರಿದರೆ ಇನ್ನೆರಡು ಪೀಳಿಗೆ ನಂತರ ಕನ್ನಡ ಲಿಪಿಯೇ ಮಾಯವಾಗುವುದರಲ್ಲಿ ಸಂಶಯವೇ ಇಲ್ಲ. ʻಕನ್ನಡಲಿಪಿ ಬಡವಾಗುತ್ತಿದೆ, ಕಲಿಸುವುದರಲ್ಲೂ ಜಿಪುಣತನ ಕಾಣುತ್ತಿದೆ, ಎಷ್ಟೋ ಅಕ್ಷರಗಳನ್ನೂ ಕಲಿಸುತ್ತಲೇ ಇಲ್ಲʼ ಎನ್ನುವ ಮಾತು ಕೇಳಿಬರುತ್ತಿದೆ. ಜೊತೆಗೆ ಪತ್ರಿಕೆಯವರೂ ಲಿಪಿಯ ಕುರಿತಾಗಿ ಹೊಣೆಗಾರಿಕೆಯನ್ನು ತೋರುತ್ತಿಲ್ಲ ಎನ್ನುವ ಬೇಸರವನ್ನೂ ಕೆಲವರು ಹೊರಹಾಕುತ್ತಿದ್ದಾರೆ. ʻಭಾಷೆ ಲಿಪಿಯ ಅವನತಿಯೊಡನೆ ಒಂದು ಸಂಸ್ಕೃತಿಯೇ ನಾಶವಾಗುತ್ತದೆʼ. ʻನಮಸ್ತೆ ಶಾರದಾ ದೇವಿ ಕಾಶ್ಮೀರ ಪುರವಾಸಿನಿʼ ಎನ್ನುತ್ತೇವೆ. ಆದರೆ ಕಾಶ್ಮೀರದಲ್ಲಿ ಶಾರದಾ ಲಿಪಿ ಎನ್ನುವುದೊಂದಿತ್ತು ಎಂದು ನಾವು ಇತಿಹಾಸದ ಪಠ್ಯದಲ್ಲೂ ಓದಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದರೆ ನಂಬುವಿರಾ?

 ದಾನಕ್ಕೂ ಸೈ 

ಕ-ನಾದ ಹಾರ್ಡವೇರ್‌ ತಂತ್ರಾಂಶವನ್ನು ಇವೆಲ್ಲದರ ಜೊತೆಗೆ ಒಂದು ಶಾಲೆಗೆ ಒದಗಿಸುವುದೆಂದರೆ ಒಬ್ಬರಿಂದ ಸಾಧ್ಯವಿಲ್ಲ. ಹಾಗಾಗಿ ಕ-ನಾದ ದಾನಿಗಳಿಗೆ ʻನಮ್ಮ ಕಾರ್ಯದಲ್ಲಿ ಕೈಜೋಡಿಸಿʻ ಎಂದು ಕೇಳಿಕೊಳ್ಳುತ್ತಿದೆ. ದುಡ್ಡಿದ್ದವರು ಭಾಷಾ ಲ್ಯಾಬ್‌ ಒಂದನ್ನೇ ಶಾಲೆಯಲ್ಲಿ ಸ್ಥಾಪಿಸಬಹುದಾಗಿದ್ದರೆ ಕೆಲವರಿಗೆ ಹೆಚ್ಚು ಹಣವಿರದಿದ್ದರೂ ದಾನ ಮಾಡುವ ಮನಸ್ಸಿರುತ್ತದೆ. ಅಂತಹವರು ಒಂದು ಕೀಲಿಮಣೆ ಕೂಡಾ ದಾನ ಮಾಡಬಹುದು. ದಾನಿಗಳ ಹೆಸರನ್ನು ಕೀಲಿಮಣೆಯಲ್ಲಿ, ವೆಬ್‌ಸೈಟ್ನ ದಾನಿಗಳ ಪಟ್ಟಿಯಲ್ಲಿ ಪ್ರಕಟಿಸಲಾಗುವುದು. ದಾನ ಅಥವಾ ಉಡುಗೊರೆ ಎನ್ನುವುದನ್ನು ನೀಡುವವರೇ ನಿರ್ಧರಿಸಬಹುದು.

ಕ-ನಾದ ಕೀಲಿಮಣೆಯೇ ಯಾಕೆ?

ʻನಮ್ಮ ಗ್ರಾಮೀಣ ಭಾಗದ ಶಾಲೆಗಳು, ವಿದ್ಯಾಭಾರತಿ ಶಾಲೆಗಳಲ್ಲಿ ಶೇ. ೨೭ರಷ್ಟು ಮಾತ್ರ ಡಿಜಿಟಲ್‌ ವ್ಯವಸ್ಥೆ ಹೊಂದಿದೆʼ ಎನ್ನುತ್ತಾರೆ ಗುರುಪ್ರಸಾದ್‌ ಅವರು. ಗ್ರಾಮೀಣ ಭಾಗದ ಪ್ರತಿಭೆಗಳು ಆಂಗ್ಲ ಭಾಷೆ ಬರುವುದಿಲ್ಲ ಎಂದು ಗಣಕಯಂತ್ರವನ್ನೂ ಬಳಸಲು ಸಾಧ್ಯವಾಗದೆ ಭವಿಷ್ಯದಲ್ಲಿ ಕೀಳರಿಮೆ, ಆತ್ಮವಿಶ್ವಾಸದ ಕೊರತೆಯಿಂದ ಬಳಸುವಂತಾಗುತ್ತದೆ. ಕ-ನಾದ ಕೀಲಿಮಣೆಯಲ್ಲಿ ಕನ್ನಡದಲ್ಲೇ ಟೈಪ್‌ ಮಾಡಬಹುದು. ಪ್ರಾಥಮಿಕ ಹಂತದಲ್ಲೇ ಅದರಲ್ಲೂ ಗ್ರಾಮೀಣ ಭಾಗದಲ್ಲೂ ಡಿಜಿಟಲ್‌ ಸಾಕ್ಷರತೆಗೆ ಇದರಿಂದ ಅನುಕೂಲ. ನಾವು ಯೋಚಿಸುವ ಭಾಷೆಯಲ್ಲೇ ಟಂಕಿಸುವುದರಿಂದ ಕ್ವರ್ಟಿ ಕೀಲಿಮಣೆಗಿಂತಲೂ ಶೇ. ೩೦ರಷ್ಟು ವೇಗದಲ್ಲಿ ಟಂಕಿಸಬಹುದು, ಇದರಿಂದ ಡಿಜಿಟಲ್‌ ಸಾಕ್ಷರತೆಯೊಡನೆ ನಮ್ಮ ಮಾತೃಭಾಷೆ ಲಿಪಿಯೂ ಉಳಿದು ಬೆಳವಣಿಗೆಯಾಗುತ್ತದೆ. ನಮ್ಮ ಸಂಸ್ಕೃತಿಯ ಉಳಿವಿಗೂ ಅನುಕೂಲ. ಕ-ನಾದ ಕೀಲಿಮಣೆಯಲ್ಲಿ ರಾಕೆಟಿಂಗ್‌, ರೊಬಾಟಿಕ್ಸ್‌, ಅನಿಮೇಶನ್‌ ಗೇಮಿಂಗ್‌ನಂತಹ ಆಧುನಿಕ ತಂತ್ರಜ್ಞಾನವನ್ನೂ ಕಲಿತು ಕೆಲಸ ಮಾಡಬಹುದಾಗಿದೆ. ಇಂದು ಹಲವಾರು ಶಾಲೆಗಳಲ್ಲಿ ಇದನ್ನು ಬಳಸುತ್ತಿದ್ದು, ನಾಲ್ಕು ವರ್ಷದ ಮಗುವೂ ಗಣಕಯಂತ್ರದಲ್ಲಿ ಟಂಕಿಸುತ್ತಿದೆ ಎಂದರೆ ನಂಬಲಾರಿರಿ ಎನ್ನುತ್ತಾರೆ ಡಾ. ಗುರುಪ್ರಸಾದ್.‌ ನಮ್ಮ ರಾಷ್ಟ್ರೀಯ ಶಿಕ್ಷಣನೀತಿಯನ್ನೂ, ಕರ್ನಾಟಕ ಸರ್ಕಾರದ ಆಶಯವಾದ ಕಚೇರಿಯಲ್ಲಿ ಕನ್ನಡ ಇವೆಲ್ಲವನ್ನೂ ಕ-ನಾದ ಬಳಸಿ ಸಾಧ್ಯವಾಗಿಸಬಹುದು. ಅಂಗನವಾಡಿಯಂತಹ ಕೇಂದ್ರಗಳಲ್ಲೂ ಆರಾಮಾಗಿ ಗಣಕಯಂತ್ರದ ವ್ಯವಸ್ಥೆಯನ್ನು ಕ-ನಾದದಿಂದ ಸಾಧ್ಯವಾಗಿಸಬಹುದು. ಆಂಗ್ಲಭಾಷೆಯ ಹಂಗಿಲ್ಲದೆ ಮಕ್ಕಳು ತಮ್ಮ ಜ್ಞಾನವನ್ನು ವೇಗವಾಗಿ ಹೆಚ್ಚಿಸಿಕೊಳ್ಳಬಹುದು. ಏಕರೂಪ ಕೀಲಿಮಣೆಯಾಗಿರುವ ಕಾರಣ ಭಾರತದ ಹಲವಾರು ಭಾಷೆಗಳನ್ನು ಜೊತೆಗೆ ಆಂಗ್ಲಭಾಷೆಯನ್ನೂ ಇದರಲ್ಲಿ ಟಂಕಿಸಬಹುದು. ಆಸಕ್ತರು ಇದನ್ನೇ ಬಳಸಿ ಹಲವಾರು ಭಾಷೆಯನ್ನೂ ಕಲಿಯುವ ಅವಕಾಶವನ್ನು ಕಲ್ಪಿಸಲಾಗಿದೆ. ಇದು ಮೇಡ್‌ ಇನ್‌ ಇಂಡಿಯಾ ಯೋಜನೆಯಡಿಯಲ್ಲಿ ರೂಪಿಸಿರುವ ಕೀಲಿಮಣೆಯಾಗಿದೆ. ಇದನ್ನು ವ್ಯಾಪಕವಾಗಿ ಬಳಸುವ ಕಾರ್ಯ ಕನ್ನಡಿಗರಿಂದ, ಇತರ ಭಾಷೆಯವರಿಂದ ಆಗಬೇಕಾಗಿದೆ;ಇದೇ ನಮ್ಮ ಕೀಲಿಮಣೆ ಎನ್ನುವಂತಾಗಬೇಕಾಗಿದೆ.

   ಮಾತೃಭಾಷೆಗೆ ಮೊದಲಸ್ಥಾನ

ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯನ್ನು ಮಕ್ಕಳು ಉಸಿರಾಗಿಸಿಕೊಂಡಿರುತ್ತಾರೆ. ಅದನ್ನೇ ಮುಂದೆಯೂ ನೀಡಿದರೆ ಗಟ್ಟಿಯಾಗಿ ಅವರು ಬದುಕಿನಲ್ಲಿ ನಿಲ್ಲಬಲ್ಲರು. ಆಂಗ್ಲಭಾಷೆಯೊಂದನ್ನು ಅರ್ಥಮಾಡಿಕೊಳ್ಳಲು ಮಗುವಿಗೆ ಹತ್ತುವರ್ಷ ಬೇಕಾಗುವುದಂತೆ. ಅಷ್ಟು ಆ ಮಗುವಿನ ವಿಷಯ ಅರ್ಥೈಸಿಕೊಳ್ಳುವ ಅವಧಿ ಕಡಿತಗೊಳ್ಳುತ್ತದೆ.

ಕನ್ನಡವು ಅನ್ನಕೊಡುವುದಿಲ್ಲವೆಂದು ಮೂಲೆಗುಂಪಾಗಿಸುವ ಅಗತ್ಯವೇನೂ ಇಲ್ಲ. ಕನ್ನಡಕ್ಕಾಗಿ ಕೀಲಿಮಣೆಯಿದೆ; ಕನ್ನಡದ್ದೇ ಕೀಲಿಮಣೆಯಿದೆ. ನಿರಾತಂಕವಾಗಿ ನಮ್ಮ ಮುಂದಿರುವ ಈ ಹಾರ್ಡವೇರ್‌ ತಂತ್ರಾಂಶವನ್ನು ಬಳಸುವುದಷ್ಟೆ ನಮ್ಮ ಮುಂದಿರುವ ಜವಾಬ್ದಾರಿಯಾಗಿದೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು:

Mo: +919606796810/9945031391

E-Mail: info@ka-naada.com

https://ka-naada.com/shop/

Leave a Reply

Back To Top