ಸರಣಿ ಬರಹ
ಅಂಬೇಡ್ಕರ್ ಓದು
ಭಾಗ-2
ಬಾಲ್ಯ
ಮಧ್ಯಾಹ್ನದ ಬಿಸಿಲಿನಲ್ಲೊಮ್ಮೆ ಅತೀವ ಬಾಯಾರಿಕೆಯಾಗಿ ಸಾರ್ವಜನಿಕ ನಲ್ಲಿ ತಿರುಗಿಸಿ ನೀರು ಕುಡಿದಾಗ ಸವರ್ಣೀಯರಿಂದ ಮೈಲಿಗೆ ಮಾಡಿದನೆಂದು ಬೈಗುಳ ತಿಂದು ಹೊಡೆಯಿಸಿ ಕೊಂಡಿದ್ದು, ತನ್ನ ರೇಷ್ಮೆಯಂತ ತೆಲೆಗೂದಲನ್ನು ಕತ್ತರಿಸಲು ಕ್ಷೌರಿಕನು ನಿರಾಕರಿಸಿದಾಗ ಭೀಮನ ಮನಸ್ಸು ಜರ್ಜಿತವಾಗಿ ಚಿಂತಿತವಾಗುತಿತ್ತು. ಹಿರಿಯ ಅಕ್ಕನೆ ಭೀಮನ ತೆಲೆಗೂದಲನ್ನು ಕತ್ತರಿಸುತ್ತಿದ್ದಳು ಅದೇ ಹಿಂದು ದೇವರಗಳನ್ನು ಪೂಜಿಸಿದರು, ಅದೇ ಹಿಂದು ಹಬ್ಬ ಹರಿದಿನಗಳನ್ನು ಆಚರಿಸಿದರೂ, ಅದೇ ಹಿಂದು ಹೆಸರುಗಳನ್ನಿಟ್ಟುಕೊಂಡರೂ ಸವರ್ಣೀಯರು, ಹೀಗೇಕೆ ನಮ್ಮನ್ನು ಕೀಳಾಗಿ ನಡೆಸಿಕೊಳ್ಳುತ್ತಾರೆ, ಮುಟ್ಟಿದೆಲ್ಲ, ಮೈಲಿಗೆ ಆಯಿತೆಂದು ನಮ್ಮನ್ನೇಕೆ ದೂಷಿಸುತ್ತಾರೆ, ಮಂದಿರ ಪ್ರವೆಶಿಸದಂತೆ ನಮ್ಮನ್ನೇಕೆ ತಡೆಯುತ್ತಾರೆ, ಹೀಗೆ ಭೀಮ ಪ್ರಶ್ನಿಸುತ್ತಿದ್ದ. ತಂದೆ ಮತ್ತು ಅಕ್ಕ ಭೀಮನ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಗೋ ಸಮಾಧಾನ ಪಡಿಸುತ್ತಿದ್ದರು.
ಒಂದು ದಿನ ಮಳೆ ಸುರಿಯುತಿತ್ತು, ಮೇಲ್ಜಾತಿಯ ವಿಧ್ಯಾರ್ಥಿಯೊಬ್ಬ ಭೀಮನಿಗೆ ಶಾಲೆಗೆ ಹೊಗುವಂತೆ ಸವಾಲು ಹಾಕಿದನು. ಭೀಮ ಛತ್ರಿ ಇಲ್ಲದೆ ಮಳೆಯಲ್ಲಿಯೇ ನಡೆದು ಶಾಲೆಗೆ ಬಂದ. ಸುರಿಯುತ್ತಿರುವ ಮಳೆಯಲ್ಲಿ ಬಂದಿದ್ದರಿಂದ ಬಟ್ಟೆ ಒದ್ದೆಯಾಗಿತ್ತು. ಪೇಂಡ್ಸೆ ಎಂಬಾತ ಗುರುಗಳು ತೊಯ್ದ ಬಟ್ಟೆಯಿಂದ ಮೈಯಲ್ಲ ತಂಪಾಗಿ ನಡುಗುತ್ತಿದ್ದ ಭೀಮನನ್ನು ನೋಡಿ, ಕೂಡಲೆ ತನ್ನ ಮಗನೊಂದಿಗೆ ಹತ್ತಿರದಲ್ಲಿ ತನ್ನ ಮನೆಗೆ ಕಳುಹಿಸಿ ಉಡಲು ಬೆಚ್ಚನೆ ಬಟ್ಟೆ ಕೊಟ್ಟು ಅರ್ಧಗಂಟೆ ವಿಶ್ರಾಂತಿ ಪಡೆದು ಬರುವಂತೆ ತಿಳಿಸಿದರು. ಪೇಂಡ್ಸೆ ಗುರುಗಳ ಈ ಪ್ರೀತಿ ಹರುಷ ತಂದಿತು. ಅದೆ ಶಾಲೆಯಲ್ಲಿ ಅಂಬೇಡ್ಕರ್ ಹೆಸರಿನ ಇನ್ನೊಬ್ಬ ಶಿಕ್ಷಕ ಇದ್ದರು. ಅವರು ಭೀಮನನ್ನು ತುಂಬಾ ಅಕ್ಕರೆಯಿಂದ ಕಾಣುತ್ತಿದ್ದರು. ತಾವು ತಂದ ಊಟದಲ್ಲಿ ಭೀಮನಿಗೆ ಹಂಚಿಕೊಡುತ್ತಿದ್ದರು. ಅಭಿಮಾನದಿಂದ ಆ ಶಿಕ್ಷಕರು ತಮ್ಮ ಹೆಸರನ್ನೆ ಭೀಮನ ಅಡ್ಡ ಹೆಸರು ಅಂಬಾವಾಡೇಕರ್ ಇದ್ದದ್ದನ್ನು ಬದಲಾಯಿಸಿ ಅಂಬೇಡ್ಕರ ಅಂತಾ ಶಾಲಾ ದಾಖಲೆಗಳಲ್ಲಿ ಬರೆಸಿದರು. ಇದೇ ಹೆಸರು ಮುಂದೆ ಖಾಯಂ ಆಗಿ ಉಳಿಯಿತ್ತು. ಭೀಮಜಿ ಬೆಳೆಯುತ್ತ ಕಠಿಣ ಪರಿಶ್ರಮ ಪಟ್ಟು ಓದಿ ಸಾಧನೆ ಮಾಡಿ ಮಹಾ ನಾಯಕನಾದನು. ಅಂಬೇಡ್ಕರ ಹೆಸರು ಜಗತ್ಪ್ರಸಿದ್ದವಾಯಿತು.ಶಿಷ್ಯನ ಸಾಧನೆಯಿಂದ ಗುರುವಿನ ಹೆಸರು ಶಿಷ್ಯನೊಂದಿಗೆ ಅಮರವಾಯಿತು.
ಅಂಬೇಡ್ಕರ ಶಿಕ್ಷಕರು ತರಗತಿಯಲ್ಲಿ ಭೀಮನಿಗೆ ಓದಲು ಬರೆಯಲು ಪ್ರೋತ್ಸಾಹಿಸುತ್ತಿದ್ದರು. ಶಾಲೆಯಲ್ಲಿ ಸವರ್ಣೀಯ ವಿದ್ಯಾರ್ಥಿಗಳು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಶೀಲವಂತಿಕೆ ಮಾಡುತ್ತಿದ್ದರು. ತಾನು ಮತ್ತು ಅಣ್ಣನು ಮನೆಯಿಂದ ಬರುವಾಗ ಗೋಣೀಚೀಲ ತಂದು ಮೂಲೆಯಲ್ಲಿ ಹಾಸಿಕೊಂಡು ಕೂಡ್ರುತ್ತಿದ್ದರು. ಶಿಕ್ಷಕರು ಅಕ್ಕರೆಯಿಂದ ಕಾಣುತ್ತಿದ್ದರೂ ಅವರ ಪಾಠಿ ಪುಸ್ತಕ ಮುಟ್ಟಿ ಬರೆದು ಕೊಡುತ್ತಿರಲಿಲ್ಲ. ದೂರದಿಂದಲೆ ಪಾಠ ಹೇಳಿಕೊಡುತ್ತಿದ್ದರು. ಇನ್ನು ಅವರಿಗೆ ನೀರಡಿಕೆಯಾದರಂತೂ ಹೇಳಲಾರದ ನೋವು, ಅನುಭವಿಸಬೇಕು, ನೀರಿನ ಹೂಜಿ ಮುಟ್ಟಿ ನೀರು ಕುಡಿಯುವಂತಿಲ್ಲ. ಬಾಯಾರಿಕೆಯಾಗಿ ನೀರು ಬೇಕಾದಾಗ ಸಿಪಾಯಿ ಬಂದು ತಂಬಿಗೆಯಿಂದ ಒಂದಡಿ ಮೇಲಿಂದ ನೀರು ಸುರಿಯಬೇಕು, ಆಗ ಇವರು ಬಾಗಿ ಬೊಗಸೆಯೊಡ್ಡಿ ನೀರು ಹಾಕಿಸಿಕೊಂಡು ಕುಡಿಯಬೇಕು. ಶಾಲೆಗೆ ಸಿಪಾಯಿ ಬರಲಿಲ್ಲ ಅಂದ್ರೆ ಅಂದು ನೀರು ಇಲ್ಲ. ದಿನವಿಡಿ ನೀರು ಕುಡಿಯದೆ ಕಳೆಯಬೇಕು. ಈ ಅಪಮಾನಗಳು ಮುಗ್ದ ಬಾಲಕನ ಮನಸ್ಸಿನ ಮೇಲೆ ಬೆಟ್ಟದಂತೆ ಬೆಳೆದು ನಿಂತವು.
ಅಮಾನವೀಯ ಘಟನೆಗಳಿಂದಾಗಿ ಭೀಮನ ಓದುವ ಆಸಕ್ತಿ ಕಡಿಮೆ ಆಗತೊಡಗಿತ್ತು. ಶಾಲೆ ತಪ್ಪಿಸಿ ಮೇಕೆ ಕಾಯಲು ಹೋಗಿದ್ದುಂಟು, ಸಾತಾರ ರೈಲು ನಿಲ್ದಾಣದಲ್ಲಿ ಒಮ್ಮೆ ಕೂಲಿ ಕೆಲಸ ಮಾಡಿದ. ಅತ್ತೆ ಮೀರಾಬಾಯಿಗೆ ಇದು ಗೊತ್ತಾಗಿ ಓದಲು ಬುದ್ದಿ ಹೇಳಿದಳು. ಅತ್ತೆ ಮನಸ್ಸು ನೋಯಿಸಬಾರದೆಂದು ತೀರ್ಮಾನಿಸಿ ಮತ್ತೆ ಓದಿನ ಕಡೆ ಭೀಮನು ಗಮನ ಹರಿಸಿದ. ಇಂತಹದರಲ್ಲಿ ತಂದೆ ಮರುಮದುವೆ ಮಾಡಿಕೊಂಡಿದ್ದು ಅಘಾತವೆನಿಸಿತು. ಮಲತಾಯಿ ತನ್ನ ತಾಯಿಯ ಆಭರಣಗಳನ್ನು, ಉಡುಪುಗಳನ್ನು ಧರಿಸುವುದು ಭೀಮನಿಗೆ ಇಷ್ಟವಾಗುತ್ತಿರಲಿಲ್ಲ. ರಾಮಜಿ ಸಕ್ಪಾಲ ಕುಟುಂಬ ನಡೆಸಲು ಕಷ್ಟ ಪಡುತ್ತಿದ್ದರು. ತಮ್ಮನ್ನು ಸಾಕಿಸಲುಹಿ, ಓದಿಸಲು ಕಷ್ಟ ಪಡುವ ತಂದೆಗೆ ಆಸರೆಯಾಗಲು ಸ್ವಂತ ಕೆಲಸ ಮಾಡಲು ನಿರ್ಧರಿಸಿ ಮುಂಬಯಿ ಬಟ್ಟೆ ಕಾರ್ಖಾನೆಗಳಲ್ಲಿ ಕೆಲಸ ಸಿಗುವುದೆಂದು ತಿಳಿದು ಮುಂಬಯಿಗೆ ಹೊಗಲು ಯೋಚಿಸಿದ. ಆದರೆ ಮುಂಬಯಿಗೆ ಪ್ರಯಾಣ ಮಾಡಲು ಹಣ ಇರಲಿಲ್ಲ. ಅತ್ತೆ ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಿದ್ದ ಚಿಕ್ಕ ಚೀಲದಲ್ಲಿ ದುಡ್ಡು ಇದ್ದಿರಬಹುದೆಂದು ಬಾವಿಸಿ ಅದನ್ನು ಕದಿಯಲು ಮೂರುನಾಲ್ಕು ಬಾರಿ ಪ್ರಯತ್ನಿಸಿ ವಿಫಲವಾಗಿದ್ದನು, ಒಂದು ದಿನ ರಾತ್ರಿ ಅತ್ತೆ ಮಲಗಿದ್ದಾಗ ಚೀಲ ಕದ್ದುದುಡ್ಡು ಹುಡುಕಿದಾಗ ಅದರಲ್ಲಿ ಮುಂಬಯಿಗೆ ಪ್ರಯಾಣ ಮಾಡುವಷ್ಟು ಹಣ ಅದರಲ್ಲಿರಲಿಲ್ಲ. ಇದರಿಂದ ನಿರಾಶೆಯಾಯಿತು. ಮನಸ್ಸಿನ ಮೇಲೆ ಈ ಘಟನೆ ಪರಿಣಾಮ ಬೀರಿತು, ಮುಂದೆ ಎಂದು ಕದಿಯುವಂತೆ ಕೆಲಸ ಮಾಡಲಿಲ್ಲ, ಚನ್ನಾಗಿ ಓದಲು ನಿರ್ಧರಿಸಿದ. ನ್ಯಾಯಮೂರ್ತಿ ಮಹಾದೇವ ಗೋವಿಂದ ರಾನಡೆ ಅವರ ನಿದನದಿಂದ ಶಾಲೆಗೆ ರಜೆ ಕೊಡಲಾಗಿತ್ತು. ಭೀಮನು ಶಾಲೆಗೆ ಏಕೆ ರಜೆ ಕೊಟ್ಟರೆಂದು ತಂದೆಯನ್ನು ವಿಚಾರಿಸಿದ, ರಾನಡೆಯವರು ಮಹಾನ ಸಮಾಜ ಸುಧಾಕರಾಗಿದ್ದರು, ಅವರು ಮಾಡಿದ ಸಮಾಜ ಸುಧಾರಣೆ ಕಾರ್ಯಗಳ ಗೌರವಾರ್ಥವಾಗಿ ರಜೆ ಕೊಟ್ಟಿರುವುದಾಗಿ ರಾಮಜಿ ವಿವರಿಸಿದರು. ಅವರಂತೆ ತಾನು ಸುಧಾರಕನಾಗಿ ಸಾಧನೆ ಮಾಡಬೇಕೆಂದು ಭೀಮನ ಮನದಲ್ಲಿ ಛಲ ಮೂಡಿತು. ಸೋದರತ್ತೆ ದುಡ್ಡಿನ ಚೀಲ ಕದಿಯಲು ಮಾಡಿದ ಕಳ್ಳತನ ಕೃತ್ಯ ಇನ್ನೆಂದಿಗೂ ಮಾಡದಂತೆ ಮನಸ್ಸು ಪರಿವರ್ತನೆಯಾಯಿತು. ರಾನಡೆ ಅವರಂತೆ ಸಮಾಜ ಸುಧಾರಕನಾಗಲು ನಿರ್ಧರಿಸಿದ. ಈ ಎರಡು ಘಟನೆಗಳು ಭೀಮನ ಜೀವನದಲ್ಲಿ ತಿರುವು ತಂದು ಕೊಟ್ಟವು ಓದು ಗುರಿಯಾಯಿತು. ಅವಮಾನಗಳನ್ನು ಸೇಡಿನಿಂದ ನೋಡದೆ ಸವಾಲಾಗಿ ಸ್ವೀಕರಿಸಿದ.
1904 ರಲ್ಲಿ ರಾಮಜಿ ಸಕ್ಪಾಲರು ಸಂಸಾರ ಸಮೇತ ಸಾತಾರದಿಂದ ಮುಂಬಯಿಗೆ ಬಂದು ಲೋವರ ಪರೇಳಿನ ಡಾಬಕ ಚಾಳದಲ್ಲಿನ ಚಿಕ್ಕ ಮನೆಯೊಂದನ್ನು ಬಾಡಿಗೆ ಹಿಡಿದು ಅಲ್ಲಿಯೇ ನೆಲೆಸಿದರು. ಹೆಣ್ಣುಮಕ್ಕಳ ಮದುವೆ ಮಾಡಿದರು. ಗಂಡು ಮಕ್ಕಳನ್ನು ಎಲ್ಪಿನ್ ಸ್ಟನ್ ಶಾಲೆಗೆ ಸೇರಿಸಿದರು. ಎಲ್ಪಿನ್ ಸ್ಟನ್ ಶಾಲೆ ಅಂದು ಶಿಕ್ಷಣಕ್ಕೆ ಹೆಸರುವಾಸಿಯಾಗಿತ್ತಲ್ಲದೆ, ಪ್ರತಿಷ್ಠಿತ ಶಾಲೆಗಳಲ್ಲೊಂದಾಗಿತ್ತು. ಸರಕಾರಿ ಶಾಲೆಯಾದರು ಅಲ್ಲಿಯೂ ಅಸ್ಪೃಶ್ಯತೆಯ ಅವಮಾನಗಳು ತಪ್ಪಲಿಲ್ಲ. ಭೀಮನು ಸಂಸ್ಕೃತ ಕಲಿಯಲು ಇಷ್ಟಪಟ್ಟ. ಆದರೆ ಭೀಮ ಅಸ್ಪೃಶ್ಯನೆಂಬ ಕಾರಣದಿಂದ ಸಂಸ್ಕೃತ ಪಂಡಿತ ಮೇಷ್ಟ್ರು ಸಂಸ್ಕೃತ ಕಲಿಸಲು ಒಪ್ಪಲಿಲ್ಲ. ಅಸ್ಪೃಶ್ಯರು ಸಂಸ್ಕೃತ ಕಲಿಯಬಾರದೆಂದು ನಿರ್ಬಂಧ ಹಾಕಿದ್ದರು. ಕಲಿಯಲು ಸಂಸ್ಕೃತ ವಿಷಯ ಸಿಗದೆ ಇದ್ದುದ್ದರಿಂದ ಭೀಮನು ತಂದೆ ಮುಂದೆ ಕಣ್ಣೀರು ಹಾಕಿದ. ಸಂಸ್ಕೃತ ಸಿಗದೆ ಹೋದರೆ ಏನಾಯ್ತು, ಅದಕ್ಕಿಂತ ಸರಳ ಸುಂದರ ಭಾಷೆ ಇಂಗ್ಲೀಷ ಕಲಿಯಲು ರಾಮಜಿ ಮಗನನ್ನು ಪ್ರೋತ್ಸಾಹಿಸಿ ಇಂಗ್ಲೀಷ ರೀಡರ ಪುಸ್ತಕಗಳನ್ನು ತಂದು ಕೊಟ್ಟರು, ಭೀಮನ ಓದು ಮುನ್ನಡೆಯಿತು.
ಒಂದು ಸಲ ಗಣಿತ ಮೇಷ್ಟ್ರು ಭೀಮನಿಗೆ ಲೆಕ್ಕ ಬಿಡಿಸಲು ಕರೆದರು. ಭೀಮ ಲೆಕ್ಕ ಬಿಡಿಸಲು ಕಪ್ಪು ಹಲಗೆಯತ್ತ ಧಾವಿಸುತ್ತಿದಂತೆಯೇ ಸವರ್ಣೀಯ ವಿದ್ಯಾರ್ಥಿಗಳು ಓಡೋಡಿ ಹೋಗಿ ಆ ಕಪ್ಪು ಹಲಗೆ ಹಿಂದೆ ಇಟ್ಟಿದ್ದ ತಮ್ಮ ತಮ್ಮ ಊಟದ ಡಬ್ಬಿಗಳನ್ನು ಎತ್ತಿಕೊಂಡು ಬಂದರು. ಭೀಮನು ಕಪ್ಪು ಹಲಗೆ ಮುಟ್ಟುವುದರಿಂದ ಅವರ ಊಟದ ಡಬ್ಬಿಗಳು ಮೈಲಿಗೆಯಾಗುತ್ತವೆಂದು, ಅಸ್ಪೃಶ್ಯರು ಮುಟ್ಟಿದ ಆಹಾರ ತಿನ್ನಬಾರದೆಂದು ಗೊಣಗುತ್ತ ಶಪಿಸುತ್ತಾರೆ. ಕೆಲವರು ಭೀಮನತ್ತ ಊಟದ ಡಬ್ಬಿಗಳನ್ನು ಎಸೆದರು. ಭೀಮನಿಗೆ ಅವಮಾನವಾಯಿತು. ಇಂಥ ಅವಮಾನಗಳನ್ನು ಸವಾಲಾಗಿ ಸ್ವಿಕರಿಸುತ್ತ ಓದು ಮುಂದುವರೆಸಿದ.
(ಮುಂದುವರೆಯುವುದು)
ಸೋಮಲಿಂಗ ಗೆಣ್ಣೂರ