ಕಾವ್ಯ ಸಂಗಾತಿ
ನಿನ್ನ ಬೆರೆವ ಹಠ
ಶಿವಲೀಲಾ ಹುಣಸಗಿ
ಕನಸು ಬಿತ್ತಿದ್ದು ನನ್ನೊಳಗೆ
ಚಿಗುರೊಡೆದಿದ್ದು ನಿನ್ನೊಳಗೆ
ಅಂತರ ಕಾಣದ ಬಿಗುವಿನಲ್ಲಿ
ಸಲಿಸಾಗಿ ಹುಟ್ಟಿತು ಹೇಗೋ
ಕಾವಿನಂಚಿನಲಿ ಮರೆತೊಮ್ಮೆ
ಅದಲು ಬದಲಾದ ಗಳಿಗೆಯಲ್ಲಿ.
ಆಗಾಗಾ ಬೀಸುವ ತಂಗಾಳಿಗೆ
ಮೈಸೋಕಿದಷ್ಟು ಬೆವರಿದ್ದೆ ಹೆಚ್ಚು!
ಮೇಣದಂತೆ ಕರಗಿದಾಗಲೆ
ಕನವರಿಸಿ ಬೆಚ್ಚಿಬಿದ್ದೆಷ್ಟೋ ಗುಂಗು
ಯಾರೋ ಕರೆದಂತಾಗಿದ್ದು ದಿಟ
ಪಿಸುಮಾತಿನ ಸಲ್ಲಾಪದ ಲೇಪನ
ರಿಂಗಣದ ಸದ್ದು ಕೇಳಿದಂತಾಗಿದ್ದು ಭ್ರಮೆ
ದೌಡಾಯಿಸಿ ಬಂದಾಗಲೇ ಗೊತ್ತು
ಮನದಲ್ಲೊಂದು ದುಗುಡವಿದೆಯೆಂದು !
ನೂರು ಕನಸುಗಳು ಛಿದ್ರವಾದರೂ
ನಿನ್ನ ಬೆರೆವ ಹಠ ಮಾತ್ರ ತಾಜಾಯಿದೆ!
ಮೊನ್ನೆ ಗುಡಿಗೋಪುರ ಸುತ್ತುವಾಗೆಲ್ಲ
ನಿನ್ನ ಪ್ರತಿಬಿಂಬ ಕಂಗಳಲಿ ಮೂಡಿತ್ತು
ಮುಗುಳ್ನಗೆ ಚಿಮ್ಮಿದಾಕ್ಷಣ ಹುರುಪು
ಕಳೆದೊದ ತಾರೆಗಳು ಮುಡಿಸೇರಿದಂತೆ!
ಮೌನದ ಮುಂಗುರುಳು ನಲಿದಂತೆ
ಅಧರಗಳು ಕಂಪಿಸಿದ ಹನಿಯಂತೆ
ಸಾಗಲಿ ಹೀಗೆ ನಿನ್ನರಸುತ ಚಿರಕಾಲ
ಗಾಳಿಗುಂಟ ಗುದ್ದಾಡಿದಂತಿರಲಿ
ಒಮ್ಮೆಯಾದರೂ ಚಿಗುರಿತು ಮನಸು!
ಕಾರಣ ಕೇಳದೆ ಮನದಲವಿತು…
ಶಿವಲೀಲಾ ಹುಣಸಗಿಯವರ ಕವನ ‘ನಿನ್ನ ಬೆರೆಯುವ ಹಠ’ ಬಹಳ ಚಂದವಾಗಿದೆ. ನೂರು ಕನಸುಗಳು ಛಿದ್ರವಾದರೂ ನಿನ್ನ ಬೆರೆವ ಹಠ ಮಾತ್ರ ತಾಜಾಯಿದೆ ಎಂಬ ಕವಿಯ ಆಶಯ ಇಷ್ಟವಾಯಿತು.
-ಗಣಪತಿ ಬಾಳೆಗದ್ದೆ
ಕನಸು ಛಿದ್ರವಾದರೂ..ಮನಸ್ಸು ಛಿದ್ರವಾಗಲೂ ಬಿಡದೆ ನಾ ನಿನ್ನೊಂದಿಗೆ ಬೆರೆವೆ ಎಂಬ ಅಚಲವಾದ ನಂಬಿಕೆ ನಿಜವಾಗಿಯೂ ಮೆಚ್ಚುವಂತಹದ್ದು .ಕವನ ಚೆನ್ನಾಗಿ ಮೂಡಿಬಂದಿದೆ ಶುಭವಾಗಲಿ
ತುಂಬಾ ಸೊಗಸಾಗಿ ಮೂಡಿ ಬಂದಿದೆ ರೀ…ಮನವನ್ನು ಮುಟ್ಟು ವ ಸಾಲುಗಳು…ಎಷ್ಟು ಸರಿ ಓದಿದರೂ ಕಡಿಮೆ…ವೆರೀ ನೈಸ್ ಅಭಿನಂದನೆಗಳು