ಪಕ್ಷಿಗಳೋ… ಪಕ್ಷಿವೀಕ್ಷಕರೋ

ಲೇಖನ

ಪಕ್ಷಿಗಳೋ… ಪಕ್ಷಿವೀಕ್ಷಕರೋ

ಸಂಧ್ಯಾ ಕೋಟೇಶ್ವರ

“ಸರ್ ಸರ್,  ನನ್ನ ಫೋಟೋನೂ ತೆಗೀರಿ ಸರ್.  ಮೇಡಂ,  ನಾನು ಪ್ರತಿದಿನದ  ಹಾಗೇ ಇವತ್ತೂ ತುಂಬಾ ಕಲರ್ ಫುಲ್ ಆಗಿ ಬಂದಿದೀನಿ. ನನ್ನ ಫೋಟೋ ತೆಗೀರಿ.  ಇವಾಗ ತಿರುಗಿ ನಿಲ್ಲುತ್ತೇನೆ.  ಈ ಕಡೆ ಕ್ಲಿಕ್ ಮಾಡಿ”.  ಹೀಗೇ ಬೇಡಿಕೆಗಳ ಪಟ್ಟಿ ಮುಗಿಯದಷ್ಟು.  ಎಷ್ಟು ಫೋಟೋ ಹೊಡೆದರೂ ಹೊಡೆಯುವವರಿಗೆ ಬೇಜಾರಾಗುತ್ತಿಲ್ಲ.  ಹೊಡೆಸಿಕೊಳ್ಳುವವರಿಗಂತೂ ಒಂದು ಚೂರು ಮುಲಾಜಿಲ್ಲ.  ಇದು ಯಾವ ಸ್ಟುಡಿಯೋ ಅಂದುಕೊಳ್ತಾ ಇದ್ದೀರಾ?  ಚಳಿಗಾಲ ಬಂತೆಂದರೆ ಸಾಕು,  ಫೋಟೋಗಾಗಿ ಬೇಡಿಕೆ ಇಡುವವರು ರಂಗುರಂಗಿನ ವಲಸೆ ಪಕ್ಷಿಗಳು.  ಹುಚ್ಚು ಹಿಡಿದಂತೆ ತಲ್ಲೀನರಾಗಿ ಕ್ಲಿಕ್ಕಿಸುವವರು ಪಕ್ಷಿವೀಕ್ಷಕರು.  ಒಂದು ವಿಶೇಷ ಪಕ್ಷಿಯ  ಕರೆ ಕೇಳುತ್ತಲೇ ಏನೇನೋ ಚರ್ಚೆ ಮಾಡುತ್ತಾ ಕೂತವರೆಲ್ಲಾ ಒಂದೇ ಸಮನೆ ತಂತಮ್ಮ  ಕ್ಯಾಮರ ಬಳಿ ಓಡುತ್ತಾರೆ. ಎಲ್ಲರ ಎದೆ ಬಡಿತ ಜೋರಾಗುತ್ತದೆ. ಏದುಸಿರು ಬಿಡುತ್ತಾರೆ. ಆ ಬಣ್ಣ ,  ಮೈಕಟ್ಟು ಸುಮ್ಮನೆ ನಿಂತು ಆನಂದಿಸುತ್ತಾರೆ.  ಎಷ್ಟು ನೋಡಿದರೂ ತೃಪ್ತಿ ಇಲ್ಲ. ಅದು ಓಡಿದ ಕಡೆ ಎಲ್ಲಾ ಓಡಿ,  ಬೇರೆ ಬೇರೆ ಅಂಗುಲಗಳಲ್ಲಿ ಅದರ ಅಂದ ಸವಿಯುತ್ತಾರೆ. ತಮಗೆ ಬೇಕಾದಷ್ಟು ಕ್ಲಿಕ್ಕಿಸಿ ಮತ್ತೆ ಬಂದು ಸುಮ್ಮನೆ  ಕುಳಿತು ಬಿಡುತ್ತಾರೆ.  ಇದು ಈಗ ಅಂತಲ್ಲ.  ಪ್ರತಿ ಬಾರಿ ಹೊಸ ಪಕ್ಷಿ ನೋಡಿದಾಗಲೂ ಇದೇ ಧಾವಂತದಿಂದ  ಪಕ್ಷಿ ವೀಕ್ಷಕರು ಧಾವಿಸುತ್ತಾರೆ.  ಮುಂಜಾವಿನ ಸರ‍್ಯೋದಯದ ಮುಂಚೆ ಗಾಢ ಮೌನದಲ್ಲಿರುವ ಪ್ರಕೃತಿ, ಚಿಲಿಪಿಲಿ ನಿನಾದದಲಿ ಎಲ್ಲರ ಉಸಿರು ಬಿಗಿ ಹಿಡಿಸಲು ತಯಾರಿ ನಡೆಸುತ್ತಿದೆಯೋ ಅನ್ನಿಸುತ್ತದೆ. ತಂಪಾಗಿರುವ ಮೌನಕ್ಕೆ,  ನಿದ್ರಿಸುತ್ತಿರುವ ಗಿಡ ಗಂಟಿಗಳಿಗೆ,  ಬಿದಿರು ಕಡ್ಡಿಗಳಿಗೆ,  ಪೊದೆಗಳಿಗೆಲ್ಲ ಚಲನೆ ಕೊಡುವುದೇ ಈ ಪಕ್ಷಿಗಳ ಚಟುವಟಿಕೆ.  ಇವುಗಳ ಅಂದ ಅನುಭವಿಸುವವನೇ ಬಲ್ಲ. ಒಂದಕ್ಕೆ ಮೈ ತುಂಬಾ ಒಂದೇ ಬಣ್ಣ; ಇನ್ನೂ ಕೆಲವು ಒಂದೊಂದು ಇಂಚಿಗೂ ಚಂದದ ಒಂದೊಂದು,  ಬಣ್ಣ,  ವಿನ್ಯಾಸವನ್ನು ಬಳಿದುಕೊಂಡಿರುತ್ತದೆ.  ಕೆಲವಕ್ಕೆ ಯಾರೋ ಅದ್ಭುತ ಕಲಾವಿದ, ಕುಂಚವನ್ನು ದಟ್ಟ ಶ್ರೀಮಂತ ಬಣ್ಣಕ್ಕದ್ದಿ ರಾಚಿ ಬಿಟ್ಟಿರಬೇಕು.  ಕೆಲವು ಪಕ್ಷಿಗಳು ಎದುರು ಬಂದು ಕುಳಿತಾಗಲಂತೂ ಸೃಷ್ಠಿಕರ‍್ತ ಎಷ್ಟು ರಸಿಕನಿರಬಹುದು ಎನಿಸುತ್ತದೆ.  ಪಕ್ಷಿಗಳ ಲಗುಬಗೆ ಒಂದೆಡೆಯಾದರೆ ಇನ್ನು ಪಕ್ಷಿ ವೀಕ್ಷಕರ ಸಂಭ್ರಮ ನೋಡಬೇಕು.

ಪಕ್ಷಿಗಳನ್ನು ಹುಡುಕಿಕೊಂಡು ಹೋಗುವ ಒಂದು ಗುಂಪಿದೆ. ಅವರನ್ನು ಬರ್ಡರ್ಸ  ಅಥವಾ  ಪಕ್ಷಿವೀಕ್ಷಕರು ಅಂತ ಕರೀತಾರೆ. ಇವರಲ್ಲಿ ವೃತ್ತಿಪರರು ಹಾಗು ಹವ್ಯಾಸಿಗಳು ಇರುತ್ತಾರೆ. ಪಕ್ಷಿಗಳನ್ನು ಗಮನಿಸುವುದು, ಅವರ ಚಲನವಲನ ಕಂಡು ಆನಂದಿಸುವುದು ಎಷ್ಟು ಖುಷಿ ಕೊಡುತ್ತದೋ , ಈ  ಪಕ್ಷಿವೀಕ್ಷಕರನ್ನು ನೋಡುವುದು ಅಷ್ಟೇ ಮಜಾ ಕೊಡುತ್ತದೆ. ಅವರಿಗೆ ಪ್ರಕೃತಿಯ ಚಿಕ್ಕ ಚಿಕ್ಕ ಬದಲಾವಣೆಗಳು ಪ್ರಚೋದಿಸುತ್ತವೆ. ಸಾಮಾನ್ಯರಿಗೆ ಬಹುಶಃ ಕಾಗೆ,ಮೈನಾ, ಕೊಕ್ಕರೆ, ಬಾತುಕೋಳಿ , ಇಂತಹ ಕೆಲವು ಪಕ್ಷಿಗಳ  ಹೆಸರು ತಿಳಿದಿರುತ್ತದೆ.  ಬೇರೆ ಎಲ್ಲಾ ಪಕ್ಷಿಗಳೂ ಒಂದೇ ತರಹ ಕಾಣಿಸುತ್ತದೆ.  ಆದರೆ ಇವರಿಗೆ ಪಕ್ಷಿಯ ಮೇಲಿನ ಒಂದು ಚಿಕ್ಕ ವಿವರವೂ ಮುಖ್ಯವಾಗುತ್ತದೆ.  ಪಕ್ಷಿಯ ಆವಾಸ, ಗಾತ್ರ, ಆಕಾರ,  ಬಣ್ಣ,  ಕೂಗು ಇವೆಲ್ಲದಕ್ಕೂ  ಸೂಕ್ಷ್ಮ ಗ್ರಾಹಿಗಳಾಗಿರುತ್ತಾರೆ.  ಆಗಸದ ಅಂಚಲ್ಲಿ ಎಷ್ಟೋ ಎತ್ತರದಲ್ಲಿ ಹಾರುವ ಪಕ್ಷಿಯ ಹೆಸರನ್ನು ಥಟ್ ಅಂತ ಹೇಳುತ್ತಾರೆ.  ಇಷ್ಟೇ ಅಲ್ಲ,  ಪಕ್ಷಿಗಳ ನಡವಳಿಕೆಗಳು ಕೂಡಾ ಮುಖ್ಯವಾಗುತ್ತದೆ. ಪಕ್ಷಿಗಳನ್ನು ನೋಡಿದಂತೆ ತಮ್ಮ ದಾಖಲೆ ಯ ಪಟ್ಟಿಗೆ ಸೇರಿಸುತ್ತಾರೆ.  ಅದರಲ್ಲಿ ಒಂದು ಹೊಸದು ಸರ‍್ಪಡೆಯಾದರೂ ಏನೋ ಖುಷಿ.  ಈಗ ಚಳಿಗಾಲ ಶುರುವಾಗಿದೆ ನೋಡಿ, ಈಗಂತೂ ಹಬ್ಬ.‌ ದೇಶ ವಿದೇಶಗಳಿಂದ ಪಕ್ಷಿಗಳು ವಲಸೆ ಬಂದಿರುತ್ತವೆ. ತಾವು  ನೋಡದೆ ಇರುವ ಪಕ್ಷಿ  ಒಂದು ಜಾಗದಲ್ಲಿ ಇದೆ ಎಂದು ತಿಳಿದು ಬಂದರೆ ಸಾಕು,  ಮಳೆ,  ಗಾಳಿ,  ಧೂಳು,ಕೊಚ್ಚೆ ಯಾವುದನ್ನೂ ಲೆಕ್ಕಿಸದೆ ಅದನ್ನು ನೋಡಲು ಅಣಿಯಾಗಿ ಹೊರಟುಬಿಡುತ್ತಾರೆ.  ಇನ್ನೇನಾದರೂ  ಅವರನ್ನು ಗಮನಿಸಲು ತೊಡಗಿದರೆ ಮೊದಲ ಸಲ ನೋಡಿದರೆ ಕಿರಿಕಿರಿಯಾಗುತ್ತದೆ.  ನಂತರ ಹುಚ್ಚು ಅನಿಸುತ್ತದೆ ! ಇದೊಂಥರಾ ಪ್ರಕೃತಿಯೊಂದಿಗೆ ಬೆರೆಯುವ ಹುಚ್ಚು.  ನಿರ‍್ಗದ ಮಡಿಲಲ್ಲಿ ಲೀನವಾಗುವ ಹುಚ್ಚು.  ಯಾವುದೋ ಪಕ್ಷಿ ನೀರ ಸೆಲೆಯಲ್ಲಿ ಮಿಂದು ಮೈ ಕೊಡವಿ ಎದ್ದರೆ ಇವರ ಮೈ ಎಲ್ಲಾ ರೋಮಾಂಚನ.  ಹಕ್ಕಿಯೊಂದು ಆಹಾರಕ್ಕಾಗಿ ಮೀನೋ,  ಕೀಟವನ್ನೋ ಬಾಯಲ್ಲಿ ಹಿಡಿದರೆ ಆ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವ ತವಕ. ಬಯಲಿನ  ಮೂಲೆಯಲ್ಲಿ ಒಂದು ಕೂಗು ಕೇಳಿದರೂ,

ಅತೀವವಾದ ಆನಂದದಿಂದ ಅದನ್ನು ಹುಡುಕಿ ಅಲೆಯುತ್ತಾರೆ. ಅವರ ಕಣ್ಣ ಮುಂದೆ ಒಂದೊಂದು ಸುಯ್ನ್ ಅಂತ ಸುಳಿದಾಗಲೂ ವಿಚಿತ್ರವಾದ ಕೌತುಕವೊಂದು ಅವರ ಕಣ್ಣಂಚಲಿ ಮೂಡುತ್ತದೆ.  ಆ ಪಕ್ಷಿಯ ಬರುವಿಕೆಗಾಗಿ,  ಒಂದು ನೋಟಕ್ಕಾಗಿ ದಿನವಿಡೀ ಕಾಯುತ್ತಾರೆ. ಬಹುಶಃ ಆ ತಾಳ್ಮೆಯನ್ನೂ ಪ್ರಕೃತಿಯೇ ಕಲಿಸಿರಬೇಕು. ಪಕ್ಷಿವೀಕ್ಷಕರ ನಿರ‍್ಗದ ಬಗೆಗಿನ ಕಳಕಳಿಯೂ  ಶ್ಲಾಘನೀಯ. ಮರ ಕಡಿಯುವುದರಿಂದ,  ಕೆರೆಗಳ ನಾಶದಿಂದ, ಜನರ ಹಾವಳಿಯಿಂದ  ಪಕ್ಷಿಗಳ ವಾಸಸ್ಥಾನಕ್ಕೆ ತೊಂದರೆಯಾಗುವುದರ ಬಗ್ಗೆ ದನಿಯೆತ್ತುತ್ತಾರೆ.  ಕಟ್ಟಿರುವ ಗೂಡು ನಾಶವಾಗದಂತೆ ಕಾಳಜಿ ವಹಿಸುತ್ತಾರೆ.  ಅಪಾಯದ ಅಂಚಿನಲ್ಲಿರುವ ಸಂಕುಲದ ಬಗ್ಗೆ ಮರುಗುತ್ತಾರೆ.  ಇವರ ಆಸಕ್ತಿಯಿಂದ ಪಕ್ಷಿಸಂಕುಲ ಉಳಿದು ಪರಿಸರ ಸಮೃದ್ಧಿಯಾಗಿರಲಿ ಎಂಬುದೇ ಆಶಯ.

Leave a Reply

Back To Top