ಕನ್ನಡಿ ಮುಂದಿನ ನಗ್ನ ಚಿತ್ರಗಳು

ಪುಸ್ತಕ ಸಂಗಾತಿ

ಕನ್ನಡಿ ಮುಂದಿನ ನಗ್ನ ಚಿತ್ರಗಳು

:

ಕೃತಿ: ಕನ್ನಡಿ ಮುಂದಿನ ನಗ್ನ ಚಿತ್ರಗಳು (ಗಜಲ್ ಸಂಕಲನ)

ಲೇ: ಪ್ರಶಾಂತ ಅಂಗಡಿ (ಶ್ವೇತಪ್ರಿಯ)

ಪ್ರಕಾಶಕರು: ನೇರಿಶಾ ಪ್ರಕಾಶನ

ಪುಟಗಳು: ೧೦೪

ಬೆಲೆ: ೧೧೦/-

8147403964

_________

ನಗ್ನ ಚಿತ್ರಗಳು ಬದುಕಿನ ಸತ್ಯಗಳಾಗಿ ನುಡಿದಾಗ…”

ಏಳನೇಯ ಶತಮಾನದ ಗಜಲ್ ಎಂಬ ಕಾವ್ಯ ಪ್ರಕಾರವೊಂದು  ದೇಶದಿಂದ ದೇಶಕ್ಕೆ, ಭಾಷೆಯಿಂದ ಭಾಷೆಗೆ, ಒಂದು ಸಂಸ್ಕೃತಿಯಿಂದ ಮತ್ತೊಂದು ಸಂಸ್ಕೃತಿಗೆ, ಕವಿಯಿಂದ ಕವಿಗೆ ಭಿನ್ನ ಮನಸ್ಥಿತಿ, ಬಗೆ ಬಗೆ ದೃಷ್ಟಿಕೋನದೊಂದಿಗೆ ಒಡಗೂಡಿ, ಹತ್ತು ಹಲವು ಶತಮಾನಗಳನ್ನು ದಾಟಿ, ಕೆಲವು ವರುಷಗಳ ಹಿಂದಷ್ಟೆ ‘ಶ್ರೀ. ಶಾಂತರಸ’ ರಿಂದ ಕನ್ನಡಕ್ಕೆ ಪರಿಚಯಿಸಲ್ಪಟ್ಟು, ಗಜಲ್ ಕಾವ್ಯದ ಜನಪ್ರಿಯತೆ ಇಪ್ಪತ್ತೊಂದನೆ ಶತಮಾನದಲ್ಲೂ ಕಳೆಗುಂದದೆ ಪ್ರಕಾಶಮಾನವಾಗಿ ಬೆಳಗುತ್ತಿದೆ… ಪ್ರಾಚಿನ ಕಾವ್ಯ ಪ್ರಕಾರವೊಂದು ಇಂದಿಗೂ ತನ್ನ ಎಂದಿನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಗಜಲ್ಕಾರರು ಹಾಗು ಓದುಗರು ಎನ್ನಬಹುದು.

ಪ್ರಸ್ತುತ ವಿದ್ಯಾಮಾನಗಳನ್ನು ಗಮನಿಸಿದಾಗ ಕನ್ನಡದಲ್ಲಿ ಗಜಲ್ ರಚಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ.  ಇದು ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ ಮುಖ್ಯವಾದರೂ ಸಹ, ಓದುಗರ ಸಂಖ್ಯೆಯಲ್ಲಿ ಈವೊಂದು ಬೆಳವಣಿಗೆ ಅಷ್ಟಾಗಿ ಪ್ರಗತಿ ಕಾಣುತ್ತಿಲ್ಲ. ಈಗ ಇರುವ ಅಲ್ಪ ಸಂಖ್ಯೆಯ ಓದುಗರಲ್ಲೂ ಸಹ ಯಾವುದು ಗಜಲ್? ಏಕೆ? ಯಾವುದು ಗಜಲ್ ಅಲ್ಲ? ಹೇಗೆ? ಗಜಲ್ ಎಂದರೆ ಹೇಗಿರಬೇಕು? ಅದರ ಬಾಹ್ಯ ಲಕ್ಷಣಗಳನ್ನು ಗುರುತಿಸುವ ವಿಧಾನ, ನಿಯಮಗಳ ಪರಿಚಯ, ರಚನಾ ಕ್ರಮ, ಇತ್ಯಾದಿ ವಿಚಾರಗಳನ್ನು ಕೇವಲ ಗಜಲ್ ಬರೆಯ ಬಯಸುವವನು ತಿಳಿದುಕೊಂಡರೆ ಸಾಲದು, ಓದುಗನಿಗೂ ಆ ಬಗ್ಗೆ ಅರಿವು ತುಂಬಾ ಮುಖ್ಯವಾಗುತ್ತದೆ. ಇದೊಂದು ತರಹ ಬಂಗಾರವನ್ನು ಮಾರುವ ಮತ್ತು ಕೊಳ್ಳುವವನ ಜ್ಞಾನದಂತಹುದು. ಇಲ್ಲದಿದ್ದರೆ ಹಿತ್ತಾಳೆ, ತಾಮ್ರ, ಕಬ್ಬಿಣವನ್ನು ಸಹ ಬಂಗಾರವೆಂದು ಭ್ರಮಿಸಿ ಮೋಸ ಹೋಗುವ, ವಸಂಚಿಸುವ ಸಾಧ್ಯತೆಗಳನ್ನು ನಾವಿಂದು ಗಜಲ್ ಕಾವ್ಯದ ಕುರಿತಾಗಿ ವಿಫುಲವಾಗಿ ಕಾಣಬಹುದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ಗಜಲ್ ಎಂಬ ಶಿರೋನಾಮೆಗಳನ್ನು ಹೊತ್ತ ಕವಿತೆಗಳನ್ನು ಏತೇಚ್ಛವಾಗಿ ಓಡಾಡುತ್ತಿರುವುದನ್ನು ಕಾಣುತ್ತಿದ್ದೇವೆ.

ಗಜಲ್ ಎಂಬುವುದು ಸಹ ಒಂದು ಬಗೆಯ ಕವಿತೆಯೇ ಆಗಿದ್ದರೂ ಸಹ, ಅದರ ರಚನಾ ಕ್ರಮ, ಅನುಸರಿಸುವ ನಿಯಮಾವಳಿಗಳು, ಅದು ಹೊಂದಿರುವ ನಿರ್ದಿಷ್ಟ ಚೌಕಟ್ಟಿನಿಂದಾಗಿ ಗಜಲನ್ನು ಇತರೆ ಕವಿತೆಗಳಿಗಿಂತ ಭಿನ್ನ ಸ್ವರೂಪದಲ್ಲಿ, ವೈಶಿಷ್ಟ್ಯಪೂರ್ಣವಾಗಿ, ಪ್ರತ್ಯೇಕರಿಸಿ ಕಾಣಲಾಗುತ್ತದೆ. ಈವೊಂದು ಪ್ರತ್ಯೇಕತೆಯೇ ಇಂದು ಗಜಲ್ ಕಾವ್ಯ ಪ್ರಕಾರದ ಜೀವಂತಿಕೆಗೆ ಕಾರಣವಾಗಿರುವುದು ಹಾಗು ಕಾವ್ಯರಾಣಿಯ ಬಿರುದಿಗೆ ಪಾತ್ರವಾಗಿಸಿರುವುದು ಎಂದರೆ ಬಹುಶಃ ಅತಿಶಯೋಕ್ತಿ ಆಗಲಾರದು.

“ಗಜಲ್ ಎಂಬುದು ತನ್ನೊಳಗೆ ಪಿಸುಮಾತಾಗುವ, ಮೌನ ಸಂವೇದನೆಗೆ ತೆರೆದುಕೊಳ್ಳುವ, ಅಂತಃಕರಣದ ಮೂಸೆಯಲ್ಲಿ ಧ್ಯಾನಸ್ಥ ಅನುಭವಕ್ಕೆ ಒಳಗೊಳ್ಳುವ, ಒಂದು ಅನಹತವಾದ ಅಮೂರ್ತ ಪ್ರಕ್ರಿಯೆಯಾಗಿದೆ”. ಕವಿಯಾದವನು ಅಂತಹ ಪ್ರಕ್ರಿಯೆಗೆ ತನ್ನನ್ನು ತಾನು ಗುರಿಪಡಿಸಿಕೊಂಡಾಗ, ಹೃದಯದ ಮಣ್ಣಿನೊರತೆಯಲ್ಲಿ ನಿಸ್ವಾರ್ಥದ ಬೀಜ ಅಂಕುರಿಸಿ, ಪ್ರೇಮದ ಸಸಿಯೊಂದು ಜನ್ಮ ತಳೆಯುತ್ತದೆ; ಅದೇ ಗಜಲ್!

ಅಂತಹ ಹಲವು ಗಜಲ್ಗಳ ಹುಟ್ಟಿಗೆ ಕಾರಣರಾದ ಯುವ ಗಜಲ್ಕಾರರಲ್ಲಿ “ಶ್ವೇತಾ ಪ್ರಿಯ” ಎಂಬ ಕಾವ್ಯನಾಮದಿಂದ ಖ್ಯಾತರಾದ ‘ಪ್ರಶಾಂತ್ ಅಂಗಡಿ’ ರವರು ಪ್ರಮುಖರು. “ಕನ್ನಡಿ ಮುಂದಿನ ನಗ್ನ ಸತ್ಯಗಳು” ಎಂಬ ವಿಭಿನ್ನ ಮತ್ತು ಕುತೂಹಲಭರಿತ ಶೀರ್ಷಿಕೆಯೊಂದಿಗೆ, ಕಲಾತ್ಮಕ ಮುಖಪುಟದೊಂದಿಗೆ, ಅರವತ್ತು ಗಜಲ್ಗಳನ್ನು ಗಜಲ್ ಕಾವ್ಯ ಪ್ರಕಾರದ ಪ್ರಾಥಮಿಕ ಮಾಹಿತಿಯೊಂದಿಗೆ ತಮ್ಮ ಚೊಚ್ಚಲ ಗಜಲ್ ಸಂಕಲನವನ್ನು ಪ್ರಕಟಿಸುವುದರ ಮುಖಾಂತರ, ಅಧಿಕೃತ ಗಜಲ್ಕಾರರಾಗಿ ಮುನ್ನಾಲೆಗೆ ಬಂದಿದ್ದಾರೆ. ಪ್ರಸ್ತುತ ಕೃತಿಯೂ ಕರ್ನಾಟಕ ಸರ್ಕಾರದ ಪುಸ್ತಕ ಪ್ರಾಧಿಕಾರಕ್ಕೆ ಆಯ್ಕೆಯಾಗಿದ್ದು, ಈ ನಿಟ್ಟಿನಲ್ಲಿ ಮೊದಲು ಪ್ರಶಾಂತ್ ರವರಿಗೆ ಅಭಿನಂದನೆಗಳು ಸಲ್ಲುತ್ತವೆ.

ಈ ಮೊದಲೇ ತಿಳಿಸಿದಂತೆ, ಏಳನೇಯ ಶತಮಾನದಿಂದ ಇಪ್ಪತ್ತೊಂದನೇ ಶತಮಾನದ ಗಜಲ್ ಕಾವ್ಯದ ಈವೊಂದು ಸುದೀರ್ಘವಾದ ಪಯಣದಲ್ಲಿ ಗಜಲ್ ಕಾವ್ಯ, ಅದರ ಛಂದಸ್ಸು, ಭಾವ ಹಾಗೂ ಪ್ರಕಾರಗಳಲ್ಲೂ ಸಹ ಹಲವು ಬದಲಾವಣೆಗಳಾಗಿರುವುದನ್ನು ಕಾಣಬಹುದಾಗಿದೆ. ಮೊದಮೊದಲು ಕೇವಲ ಪ್ರೇಮ , ಶೃಂಗಾರ, ವಿರಹ, ವೈರಾಗ್ಯ ಮತ್ತು ಅಧ್ಯಾತ್ಮದ ಅನುಸಂಧಾನಕ್ಕೆ ಮೃದು – ಮಧುರ, ನಯಾ – ನಾಜೂಕಿನ ಪದ ಸಂಯೋಗಕ್ಕೆ ನವಿಲುಗರಿಯ ಸ್ಪರ್ಶದ ಅನುಭೂತಿಯ ಆಸ್ವಾದನೆಗೆ ಮೀಸಲಿದ್ದ ಗಜಲ್ ಕಾವ್ಯ, ಕಾಲಾಂತರದಲ್ಲಿ, ಬದಲಾವಣೆಯ ಗಾಳಿಗೆ ಒಳಗಾಗಿ, ಅದರಲ್ಲೂ ಗಂಡು ಭಾಷೆ ಎಂಬ ಹೆಮ್ಮೆಯ ನಮ್ಮ ಕನ್ನಡದಲ್ಲಿ ಹೆಚ್ಚಿನ ಮಟ್ಟಿಗೆ ಬಂಡಾಯ ಸ್ವರೂಪಕ್ಕೆ ಒಗ್ಗಿಕೊಳ್ಳುತ್ತಿರುವುದು ಹಾಗೂ ಜನಪ್ರಿಯತೆಯನ್ನು ಸಹ ಪಡೆಯುತ್ತಿರುವುದು ಸಂತಸದ ವಿಷಯವೇ ಆದರೂ ಅಂತಹ ರಚನೆಗಳನ್ನು ಹಾಡುಗಬ್ಬವಾಗಿಸಲು ಕಷ್ಟಸಾಧ್ಯವಾದರೂ, ಗೇಯತೆಗೆ ಒಳಪಡಿಸಲಾಗದೆ ವಾಚ್ಯವೆನಿಸಿದರೂ ಸಹ ಪ್ರೇಮ ಗಜಲ್ಗಳಿಗಿಂತ, ಪ್ರಸ್ತುತ ವಿದ್ಯಾಮಾನಗಳಿಗೆ, ಸಾಮಾಜಿಕ  ತಲ್ಲಣಗಳಿಗೆ ಸ್ಪಂದಿಸುವ, ಅವುಗಳನ್ನೊಳಗೊಂಡ  ವಸ್ತುವಿಷಯಗಳಿಂದ ಮಾನ್ಯವಾಗುತ್ತಿರುವುದು ಹಾಗೂ ಗೋಷ್ಠಿಗಳಲ್ಲಿ ಸದ್ದು ಮಾಡುತ್ತಿರುವುದು ವಿಶೇಷ.

ಇಂದು ಯುವ ಸಮೂಹವೇ ಹೆಚ್ಚಿನ ಮಟ್ಟದಲ್ಲಿ ಇಂತಹ ಗಜಲ್ಗಳನ್ನು ರಚಿಸುತ್ತಿದ್ದು, ಯುವ ಕವಿಗಳೆಂದರೆ ಕೇವಲ ಪ್ರೀತಿ, ಪ್ರಣಯದ ವಿಷಯಗಳಿಗೆ ಸಂಬಂಧಿಸಿದಂತೆ ಹಸಿ ಬಿಸಿ ಭಾವಗಳಲ್ಲೇ ಮೈಮರೆತು, ಕನಸು ಕಲ್ಪನೆಗಳ ಭ್ರಮಾ ಲೋಕದಲ್ಲಿ ತೇಲುತ್ತಿರುತ್ತಾರೆ ಎಂಬ ಆರೋಪವನ್ನು ಇಂದಿನ ಯುವ ಗಜಲ್ಕಾರರು ಸುಳ್ಳಾಗಿಸಿದ್ದಾರೆ. ಅದಕ್ಕೆ ಪ್ರಶಾಂತ್ ಅಂಗಡಿಯವರು ಸಹ ಹೊರತಾಗಿಲ್ಲ.

ನನ್ನವ್ವ ಬಯಲಲ್ಲಿ ಬದುಕು ಕಟ್ಟಿಕೊಂಡವಳು

ನನ್ನವ್ವ ನೆರಳಿಗೆ ತುಂಡು ಬಟ್ಟೆ ಹೊದಿಸಿದವಳು ಬೆತ್ತಲಾಗಿದ್ದವಳು

ವಾಸ್ತವ ಸ್ಥಿತಿಗತಿಗಳಿಗೆ ಮಿಡಿಯುವ, ಸಮಾಜದ ನೋವುಗಳಿಗೆ ತುಡಿಯುವ, ಅವವ್ಯವಸ್ಥೆಯನ್ನು ವಿಡಂಬಿಸುವ, ಅತ್ಯಾಚಾರಗಳನ್ನು ಖಂಡಿಸುವ ಮತ್ತು ಸರ್ಕಾರಗಳನ್ನು ಎಚ್ಚರಿಸುವ ಮನೋಭಾವದಲ್ಲಿ ಗಜಲ್ಗಳನ್ನು ಮಾರ್ಮಿಕವಾಗಿ ಹೆಣೆದಿದ್ದಾರೆ.

ಉಸಿರಿಗೆ ಬೆಲೆ ಕಟ್ಟಿ ಹರಾಜು ಕೂಗಿದ್ದಾರೆ

ಅವನ ಗಜಲಿಗೆ ಬೆಲೆ ಇನ್ನೂ ನಿಗದಿಯಾಗಿಲ್ಲ

“ಕನ್ನಡಿ ಮುಂದಿನ ನಗ್ನ ಚಿತ್ರಗಳು” ಕೃತಿಯಲ್ಲಿ ಬದುಕಿನ ಬವಣೆ, ವಾಸ್ತವದ ಹತಾಶೆ, ಭವಿಷ್ಯದ ಭರವಸೆ ಎಲ್ಲಾ ಅಡಗಿದೆ. ಬದುಕಿನ ಅನುಭವಗಳನ್ನು ಪಾಠವಾಗಿಸಿಕೊಂಡು ಹೆಜ್ಜೆಯಿಡುವ ಪರಿ, ಒಡಲಾಳದ ನೋವನ್ನು ಆವೇಶವಾಗಿ ಹೊರ ಹಾಕುವ, ಕಿಡಿಯೊಂದು ಹೊತ್ತು ಉರಿದು ಧಗಧಗಿಸುವ ಬಂಡಾಯ ಸ್ವರೂಪದ ಪ್ರಶಾಂತರವರ ಗಜಲ್ಗಳು ನಿಜಕ್ಕೂ ಗುಡುಗುತ್ತವೆ. ಪ್ರಶ್ನೆ ಎತ್ತುತ್ತವೆ. ಉತ್ತರ ಬಯಸುತ್ತವೆ. ಕಂಡ ಸತ್ಯವನ್ನೇ ಪ್ರತಿಬಿಂಬಿಸುತ್ತವೆ. ಹೆಸರಿಗಷ್ಟೇ ಇವರು ಪ್ರಶಾಂತರಾಗಿದ್ದರು ಇವರ ಲೇಖನಿಗೆ ಖಡ್ಗದ ಹರಿತವಿದೆ. ಈ ನಿಟ್ಟಿನಲ್ಲಿ ಕೆಲವು ಶೇರ್ಗಳ ಬಿಡಿ ಮಿಸ್ರಾಗಳನ್ನು ಹಂಚಿಕೊಳ್ಳಬಯಸುವೆ….

ಬಯಲಲ್ಲಿ ಬೆತ್ತಲಾದವನಿಗೆ ರಾತ್ರಿಯೇನು ಹೊಸತಲ್ಲ ಬಿಡು

_

ಅವನ ಕವಿತೆ ಸತ್ತಿರಬಹುದು ಭಾವನೆಗಳಲ್ಲ

_

ಸತ್ತ ಸೆರಗಿಗೆ ಸದ್ದಿಲ್ಲದೆ ಜಾರುವ ಲಾಡಿಗಳು

_

ಸಾವಿನೊಳಗೊಂದು ಸಾವು ಹುಟ್ಟಿದೆ

_

ಚೂಪಾದ ಕೂಳಿ, ಪಾದದ ನೆತ್ತರಿಗೆ ಹೊಂಚು ಹಾಕಿ ಕುಳಿತಿತ್ತು

_

ಎಂದೋ ಅವನ ವಶದಲ್ಲಿ ಮನಸ್ಸು ಎಂಜಲಾಗಿದೆ

_

ಯಾವ ಬೆಳಕಿಗಾಗಿ ದೀಪ ಹಚ್ಚಲಿ ಬಯಲಲ್ಲಿ ಬದುಕು ಕತ್ತಲಾಗಿದೆ

_

ಹಗಲು ಇರುಳುಗಳು ಸರಿದಿವೆ ನಾಳೆಗಾಗಿ ಅಲ್ಲಿ ನನ್ನ ಸಾವಿಗಾಗಿ

_

ಕಳೆದುಕೊಳ್ಳುವುದೆಂದರೆ ಕತ್ತಲಲ್ಲಿ ನೆರಳು ಹುಡುಕಾಡುವಂಥದ್ದು

_

ಕಾಮನಬಿಲ್ಲು ಬಣ್ಣ ಮಾರಿಕೊಳ್ಳುವ ಸಂತೆಗೆ ಹೋಗಿರುವೆ

_

ಅವನು ಗಜಲಿನ ನಶೆಗೆ ಮಧುಶಾಲೆಗೆ ಹೋದವನು ಹೇಗೆ ತಡೆಯಲಿ

ಹೀಗೆಲ್ಲಾ ನುಡಿಗಟ್ಟುಗಳನ್ನು ತಮ್ಮದೇ ಶೈಲಿಯಲ್ಲಿ ಕಟ್ಟುವುದನ್ನು ರೂಢಿಸಿಕೊಂಡಿರುವ ಪ್ರಶಾಂತ್ ಅಂಗಡಿರವರು ನಮ್ಮ ನಡುವಿನ ಸಶಕ್ತ ಗಜಲ್ಕಾರರಾಗಿ ಹೊರಹೊಮ್ಮಿದ್ದಾರೆ. ನಿಜಕ್ಕೂ ಚಿಂತನೆಗೆ ಹಚ್ಚುವ ಅವರ ಕಾವ್ಯ ಬಂಡಾಯದೊಂದಿಗೆ ತಾತ್ವಿಕ ಚಿಂತನೆಯ ಸ್ಪರ್ಶ ಹೊಂದಿರುವುದು ಒಂದು ಬಗೆಯ ಅಪರೂಪದ ಜುಗಲ್ಬಂದಿಯಾಗಿದೆ. ಒಟ್ಟಾರೆಯಾಗಿ ಕನ್ನಡಿ ಮುಂದಿನ ನಗ್ನ ಚಿತ್ರಗಳು ಸತ್ಯಗಳಾಗಿ, ಎಲ್ಲಾ ಗಜಲ್ಗಳು ಉತ್ತಮವಾಗಿ ರಚಿಸಲ್ಪಟ್ಟಿರುವುದಲ್ಲದೆ ಚಿಂತನೆಗೆ ಗುರಿ ಮಾಡುತ್ತವೆ. ಈ ನಿಟ್ಟಿನಲ್ಲಿ ಶ್ವೇತ ಪ್ರಿಯ ಮೊದಲ ಹಂತದಲ್ಲೇ ಪ್ರಾಥಮಿಕ ಯಶಸ್ಸನ್ನು ತಮ್ಮದಾಗಿಸಿಕೊಂಡಿದ್ದಾರೆ.

ಉಪಸಂಹಾರ:

ಗಜಲ್ ಸಾಹಿತ್ಯದಲ್ಲಿ ಪ್ರಾಶಾಂತ್ ಅಂಗಡಿಯವರಿಗೆ ಉತ್ತಮ ಭವಿಷ್ಯವಿದ್ದು, ತಮ್ಮನ್ನು ತಾವು ಮತ್ತಷ್ಟು  ಗುರುತಿಸಿಕೊಳ್ಳುವ ಅವಶ್ಯಕತೆ ಇದೆ. ಕೊನೆಕೊನೆಗೆ ಸಂಕಲನದಲ್ಲಿ ಬೆಹರ್ಗಳು ನದಿಯಂತೆ ಹರಿದಿದ್ದು, ಅವುಗಳನ್ನು ಕಡಿತಗೊಳಿಸುವ ಅವಶ್ಯಕತೆ ಇತ್ತು. ಕಠಿಣ ಮತ್ತು ಕ್ಲಿಷ್ಟವಾದ ಪದಗಳ ಬಳಕೆಯನ್ನು ಸಹ ಕಡಿಮೆ ಮಾಡಿಕೊಳ್ಳಬೇಕಾಗಿದೆ. ಎಂಬ ಕಾಳಜಿಯುಕ್ತ ಕಿವಿ ಮಾತಿನೊಂದಿಗೆ ಶುಭ ಹಾರೈಸುತ್ತೇನೆ.

ಜಬೀವುಲ್ಲಾ ಎಮ್. ಅಸದ್

Leave a Reply

Back To Top