ಕಾವ್ಯಯಾನ
ಅಭಿಜ್ಞಾ ಪಿ ಎಮ್ ಗೌಡ
ಅನ್ನದಾತನ ಸ್ವಗತ
ಸಾರುತಿವೆ
ಹಿಮ್ಮಡಿಯೊಳಗಿನ ಒಡಕುಗಳು
ನಿತ್ರಾಣ ಬದುಕಿನೊಳಗಿನ
ನೊಂದ ಗಾಥೆಯಾ.!!
ತೋರುತಿವೆ
ಬಾಯ್ಬಿಟ್ಟ ಧರೆಯೊಡಲ ಬಿರುಕುಗಳು
ಹನಿ ನೀರಿಲ್ಲದೆ ಬಿಕ್ಕುತಿಹ
ದಾರುಣ ಸ್ಥಿತಿಯಾ.!
ಬೀರುತಿವೆ
ಸ್ವಾರ್ಥ ಕೂಪದ ಪ್ರಭಾವಳಿಗಳು
ಆಡಂಬರದಿ ಮುಳುಗಿ ದೂಡಿವೆ
ನಿರ್ಮಾನದಂಚಲಿ ಜಗವಾ.!
ಮುನಿದೆಯಾ ವರುಣ.?
ಕರುಣೆ ತೋರುವವನು ನೀನೆ
ನಾಶ ಮಾಡುವವನು ನೀನೆ.!
ಬೆಳೆ ಬೆಳೆಯಲು ಬುವಿಯೊಡಲ
ತಣಿಸುತ ಜೊತೆಗೂಡಿ ಬರುವೆ
ಇನ್ನೇನು ಕಟಾವು ಮಾಡುವ ಹೊತ್ತಲ್ಲೆ
ಬಂದು ನಾಶ ಮಾಡುವೆ.!
ಯಾವ ತಪ್ಪಿಗೆ ಈ ಶಿಕ್ಷೆ ವರುಣ
ಸ್ವಾರ್ಥ ಮನುಜನ ನಡೆಗೆ
ರೈತನ ಬಾಳಿಗೇಕೆ ಕೊಳ್ಳಿ ಹಿಡಿದಿರುವೆ.?
ಇದ್ಯಾವ ನ್ಯಾಯ.?
ನನ್ನ ಮೇಲೇಕೆ ನಿನ್ನೀ ಕೋಪ.?
ಬೆವರ ಹನಿಗಳಲ್ಲ ಸುರಿವುದು ನಾ
ರುಧಿರದನಿಗಳು ಬಲ್ಲೆಯಾ.?
ಎದೆಬಯಲು ನೊಂದಿದೆ
ದೇಹದೊಡಲು ಕೊರಗುತಿದೆ
ಯಾಕೀಗೆ ನೋಯಿಸುವಿರಿ…
ಕಷ್ಟಪಟ್ಟು ದಣಿದು ದುಡಿದ
ಮನಸಿಗಿಲ್ಲವೆ ನೆಮ್ಮದಿ ದೇವಾ.?
ಮಧ್ಯವರ್ತಿಗಳ ಕಾಟ ತೊಳಲಾಟದಿ
ಬಾಗಿದೆ ನನ್ನೀ ದೇಹ
ಸರಿಯಾದ ಬೆಲೆಯಿಲ್ಲದೆ
ಕೊರಗಿದೆ ಜೀವದುಸಿರ ಭಾವ…
ಸಂತೈಸುವವರಿಲ್ಲದೆ ಬಳಲಿದೆ ಮನ
ಅಹರ್ನಿಶಿಯ ದುಡಿತದ ಫಲ
ಪ್ರತಿ ಬೆವರನಿಗಳಲ್ಲಡಗಿದೆ
ಲೋಕದ ಭವಿಷ್ಯ
ನೊಂದರು ಹರಿಸುತಿಹನು ಬೆವರೆಂಬ
ನೆತ್ತರಿನ ನದಿಯನು…