ಕಾವ್ಯಯಾನ
ಪ್ರಿಯ ಕೊಲೆಗಡುಕರೇ
ಹೇಗಿದ್ದೀರಿ?
ಬಹುಶಃ ಚೆನ್ನಾಗಿರುವಿರಿ
ನನಗೆ ನೆನಪಿಲ್ಲ
ನಿಮ್ಮ ಮಡಿಲನು ನಾನು
ತುಂಬಿದ ದಿನ
ನಾನು ಹುಟ್ಟಿದ ಕಾರಣಕ್ಕೆ
ನೀವು ಅಪ್ಪ ಅಮ್ಮರಾದಿರಿ
ಎಂದು ನೀವು ಹೇಳಿಯೇ ಗೊತ್ತು…
ನಾನು ಚಿಕ್ಕವಳಾಗಿದ್ದಾಗ
ಊರಿನ ಜಾತ್ರೆಯಲ್ಲಿ ನಾನು ಇಷ್ಟಪಟ್ಟ
ರಾಜಕುಮಾರನ ಬೊಂಬೆಯನ್ನು ಕೊಡಿಸಿ
ನನ್ನ ಆಟವನ್ನು ನಿಮ್ಮ ಸಂಭ್ರಮವಾಗಿಸಿದಿರಿ
ಬಹುಶಃ ನನಗೆ ಹನ್ನೆರಡೋ
ಹದಿಮೂರೋ ವಯಸ್ಸಿರಬೇಕು
ಹೊಟ್ಟೆ ನೋವೆಂದು ಮುಖಕಿವಿಚಿದಾಗ
ಹೆಣ್ಣಾದಳೆಂದು ಊರಿಗೆಲ್ಲಾ ಸುದ್ದಿಹಂಚಿದಿರಿ
ಎಲ್ಲವೂ ಸರಿ ಇತ್ತು
ಅರವಿಂದ ನನ್ನನ್ನು ನೋಡುವವರೆಗೆ
ಇಲ್ಲ ನಾನು ಅವನನ್ನು ಕಾಣುವವರೆಗೆ
ಜಾತ್ರೆಯಲಿ ಕೊಂಡ ಬೊಂಬೆ ರಾಜಕುಮಾರ
ಜೀವತಳೆದು ನನ್ನ ಅರವಿಂದನಾಗಿದ್ದ
ಅವನನ್ನು ಕಂಡಂದು ಒಡಲೊಳಗೆ
ಬಣ್ಣದ ಚಿಟ್ಟೆಯೊಂದು ರೆಕ್ಕೆ ಬಡಿದ ಹಾಗೆ
ಮನಸ್ಸು ಅವನೆಡೆಗೆ ಹೊರಟಿತು
ಕಿಟಕಿ ಗಾಜಿನ ಮೇಲಿನ ನೀರ ಹನಿಯ ಹಾಗೆ
ಅರವಿಂದ ನನ್ನೊಳಗಿನ
ಹೆಣ್ಮನಸನ್ನು ಕದ್ದ ಕಳ್ಳ
ಅವನಿಗೆ ನಾನು ಕಣ್ಣಾಗಿ
ಅವನು ನನ್ನ ಕಣ್ಣ ರೆಪ್ಪೆಯಾಗಿ
ಬದುಕಿಡೀ ಜೊತೆಯಾಗಿರಬೇಕೆಂಬುದು
ಹೃದಯ ನ್ಯಾಯಾಲಯದ ತೀರ್ಪು
ನಿಜವಾಗಿಯೂ
ನನಗೆ ಗೊತ್ತಿರಲಿಲ್ಲ ಪ್ರೀತಿಸುವುದು
ಒಂದು ಉದ್ಯೋಗ ಅದು ಖಾಯಂ
ಆಗಬೇಕಾದರೆ ತಪ್ಪದೆ ನಡೆದಿರಬೇಕು
ಜಾತಿಯ ಪರಿಶೀಲನೆ ಎಂಬುದು
ಅಪ್ಪಾ ನಿನಗೆ ನೆನಪಿದೆಯೇ?
ಕೆಲ ವರ್ಷಗಳ ಹಿಂದೆ ನಡುರಸ್ತೆಯಲಿ
ಅಪಘಾತವಾಗಿ ಬಿದ್ದಿದ್ದ ನಿನ್ನನ್ನು
ಉಪಚರಿಸಿದವರು, ಆಸ್ಪತ್ರೆ ಸೇರಿಸಿದವರು,
ರಕ್ತ ನೀಡಿ ಉಪಕರಿಸಿದವರು ಯಾರ
ಜಾತಿಯನ್ನು ನಾನು ಕೇಳಲಿಲ್ಲ, ನಿನ್ನೊಡಲ ರಕ್ತ
ಕೊನೆಗೂ ಯಾವ ಜಾತಿ ತಿಳಿಯಲೇ ಇಲ್ಲ
‘ಮುಟ್ಟಿಸಿಕೊಂಡವನು’ ಕತೆಯನ್ನು
ಮನಮುಟ್ಟುವಂತೆ ಬೋಧಿಸುವ ಅಮ್ಮಾ
ನಿನ್ನ ಕಿಡ್ನಿ ಕಸಿ ಮಾಡಿದ ವೈದ್ಯರು
ನಿನಗೆ ನೀಡಿದ ಕಿಡ್ನಿ ಯಾವ
ಜಾತಿಯವರದೆಂದು ಹೇಳಿದರೇ?
ಪ್ರತೀದಿನ ನಿನ್ನನ್ನು ಶುದ್ಧಗೊಳಿಸುವ
ಕಿಡ್ನಿ ಯಾವ ಜಾತಿಯದೆಂದು ಅರಿವಾಗಲೇ ಇಲ್ಲ
ನಿಮಗಗತ್ಯವಿದ್ದಾಗ ಎದುರಾಗದ ಜಾತಿ
ನಮ್ಮನ್ನು ಬೆಸೆಯುವ ಸಮಯದಲ್ಲಿ
ಎದುರಾಯಿತೇ?
ಹಸಿದಾಗ ಅನ್ನವಿಡದ
ದಿಕ್ಕುಗೆಟ್ಟಾಗ ದಾರಿ ತೋರದ
ಬಿದ್ದಾಗ ಹುಸಿ ಸಂತಾಪ ತೋರುವ
ಈ ಸತ್ವಹೀನ ಸಮಾಜ, ಮಠದ ಐಗಳ
ಹುಸಿ ಮರ್ಯಾದೆಗೆ ಕಟ್ಟುಬಿದ್ದಿರಲ್ಲ…
ಮದುವೆ, ಮಡದಿ, ಮಕ್ಕಳು
ಕೊನೆಗೆ ಮನೆಗೂ ವಿಮುಖರಾದ
ಮಠದ ಐಗಳಿಗೆ ಅನ್ಯರ ಮದುವೆ ಚಿಂತೆ…!
ಅವರಿಗೇಕೆ ನಮ್ಮ ಪ್ರೀತಿಯ ಗೊಡವೆ?
ಅವರಿಗೇಕೆ ನಮ್ಮ ಮರ್ಯಾದೆಯ ಒಡವೆ?
ಎಷ್ಟೊಂದು ಜನ್ಮಗಳಳಿದು
ಮತ್ತೆ ಸೇರಿದ್ದೆವು ನಾವು
ನಮ್ಮನ್ನು ದೂರಮಾಡುವುದರಲ್ಲಿ
ಅವರಿಗೆ, ನಿಮಗೆ ಏಕಿಷ್ಟು ಆತುರ?
ಬಾಳುಗೆಡುಹುವುದರಲ್ಲಿ
ಏಕಿಷ್ಟೊಂದು ತರಾತುರಿ?
ಬಿದ್ದಾಗ ಉಪಚರಿಸಿದಿರಿ
ಬೇಕೆಂದಾಗ ಒದಗಿಸಿದಿರಿ
ಪ್ರೀತಿ ಎಂದರೇನು ತಿಳಿಸಿದಿರಿ
ಪ್ರೀತಿಸುವುದನ್ನು ಕಲಿಸಿದರಿ
ಬದುಕಲು ಬಿಡಿ ಎಂದು
ಬೇಡಿದಾಗ ಕೊಂದಿರಿ…
ಅಯ್ಯೋ….
ಏನಾಗಿಹೋಯಿತು…
ಅರಳಲು ಹಂಬಲಿಸಿದ ಮೊಗ್ಗೊಂದು
ನರಳಿ ಅವಸಾನ ಹೊಂದಿತು
ಯಾವ ಅತ್ತರಿನಿಂದ
ತೊಳೆದರೂ ನಿಮ್ಮ ಕೈಗಂಟಿರುವ
ರಕ್ತದ ವಾಸನೆ ದೂರಾಗದು
ಪ್ರಿಯ ಕೊಲೆಗಡುಕರೇ…
ಅರಿಯದೇ ಮಾಡಿದ ಪಾಪ ಅರಿತಂದು
ಪರಿಹಾರವಂತೆ, ನನಗೆ ಗೊತ್ತಿಲ್ಲ…
ಕೊನೆಯಲ್ಲಿ ಒಂದೇ ಪ್ರಶ್ನೆ
ನಾನು ಜನಿಸಿದಂದು ಇದ್ದ ಸಂಭ್ರಮ
ನನ್ನನ್ನು ಕೊಲ್ಲುವಾಗಲೂ ಇತ್ತೇ?
ಇರಲಿ ನಾನು ನಿಮ್ಮನ್ನು ಕ್ಷಮಿಸಿದ್ದೇನೆ
ಹೇಳಿ, ನೀವು ಕ್ಷಮೆಗೆ ಅರ್ಹರೇ?
ಇತಿ
ಎಂದೂ ನಿಮ್ಮವಳಾಗದ
ಹತಭಾಗಿನಿ
ಅಭೀಪ್ಸ..
—————————-
ಕಾಂತರಾಜು ಕನಕಪುರ
ಮನಸ್ಸನ್ನು ಹಿಂಡಿ, ಕರಾಳ ಸತ್ಯವನ್ನು ಅನಾವರಣಿಸುವ ಕವನದ ಪರಿ ಅದ್ಭುತ. ಕವಿಗೆ ಪ್ರೀತಿಯ ಅಭಿನಂದನೆ…
ಅನಂತ ಧನ್ಯವಾದಗಳು ಸರ್
ಆಪ್ಯಾಯಮಾನವಾದ ಕವಿತೆ. ಧಮನಿ ಧಮನಿಗಳನ್ನು ಒಳಹೊಕ್ಕು ಒಡಲೊಳಗನ್ನು ಹಿಂಡಿ ಹಿಪ್ಪೆ ಮಾಡುವಷ್ಟು ಭಾವಗಳನ್ನು ಕೆದಕುತ್ತೆ. ವಾಸ್ತವ ಚಿತ್ರಣವನ್ನು ಕವನವಾಗಿಸಿದ ಪರಿ ಚಂದ. ನೈಸ್..
ಧನ್ಯವಾದಗಳು ಮೇಡಂ