ಪ್ರಬಂಧ
ಚಾಕು ಹೆಗಡೆ
ಗಣಪತಿ ಹೆಗಡೆ
“‘ಸುಬ್ರಾಯ, ವಿಘ್ನೇಶ ಹೇಳುವುದರಲ್ಲಿ ತಪ್ಪಿಲ್ಲ. ಅವನಿಗೂ ಅವನ ಸಂಸಾರ ಅಂತ ಇದೆ. ಕಾಲವೂ ಬದಲಾಗಿದೆ ನೋಡು. ದೇಶಕ್ಕೇ ಸ್ವಾತಂತ್ರ್ಯ ಬಂದಿದೆ. ಅವನು ಅದನ್ನು ಬಯಸಿದರೆ ತಪ್ಪೇ?. ನೀನು ಹೇಗೋ ನಿನ್ನ ಸ್ವಂತ ತಮ್ಮ ಅಂತ ತಿಳಿದು ಅವನ ಬಗ್ಗೆ ಕಾಳಜಿ ವಹಿಸುತ್ತೀಯೆ. ಅವನ ಹೆಂಡತಿ ನಿನ್ನ ಹೆಂಡತಿಗೆ ಸ್ವಂತ ತಂಗಿಯಲ್ಲವಲ್ಲ. ಅವನ ಮಕ್ಕಳಿಗೆ, ಎಲ್ಲ ವಿಷಯಕ್ಕೂ ನಿನ್ನಲ್ಲಿ ಕೇಳಲು ಮುಜುಗರವಾದರೆ ತಪ್ಪಲ್ಲ. ಆದ್ದರಿಂದ ಅವನು ಕೇಳುವ ಅವನ ಪಾಲನ್ನು ಅವನಿಗೆ ಕೊಡುವದೇ ಸರಿ. ಇದು ನನ್ನ ಅಭಿಪ್ರಾಯವೇ ವಿನಃ ಒತ್ತಾಯ ಅಲ್ಲ.”‘
ಕುಮಾರ ಹೆಗಡೆಗೆ ಸುಬ್ರಾಯ ಭಟ್ಟರ ಕುಟುಂಬದಲ್ಲಿ ಹಸ್ತಕ್ಷೇಪ ಮಾಡಿದಲ್ಲಿ ಯಾವುದೇ ಲಾಭವಿಲ್ಲ. ವಿಘ್ನೇಶಭಟ್ಟರು ಕುಮಾರ ಹೆಗಡೆಯವರಲ್ಲಿ ಏನನ್ನೂ ಹೇಳಿರಲಿಲ್ಲವೆನ್ನಿ. ಒಮ್ಮೆ ತೋಟದಲ್ಲಿ ಕೊನೆಕೊಯ್ಲಿನ ಸಂದರ್ಭದಲ್ಲಿ ವಿಘ್ನೇಶಭಟ್ಟರನ್ನು ಭೇಟಿಯಾದ ಕುಮಾರ ಹೆಗಡೆಯೇ ಹೇಳಿದ್ದನು . “‘ವಿಘ್ನೇಶ ಏನೋ ಹೇಗಿದ್ದೀಯಾ?. ಅಣ್ಣ ಸುಮಾರು ದಿನಗಳಿಂದ ಕಾಣುತ್ತಿಲ್ಲವಲ್ಲ. ಸವಾರಿ ಎಲ್ಲಿಗೆ ಹೋಗಿದೆ?”‘
“‘ಮೊನ್ನೆ ಯಾವುದೋ ಕೆಲಸವಿದೆ ಅಂತ ಬೆಂಗಳೂರಿಗೆ ಹೋಗಿದ್ದಾನೆ ಅಂತ ಅತ್ತಿಗೆ ಹೇಳಿದ್ದಾಳೆ. ಎರಡು ದಿನಗಳಲ್ಲಿ ಬರುತ್ತಾನಂತೆ”‘.
“‘ಇತ್ತಿತ್ತಲಾಗಿ ಅಣ್ಣ ಬೆಂಗಳೂರಿಗೆ ಹೋಗುವದು ಹೆಚ್ಚಾದ ಹಾಗಿದೆ.”‘
“‘ಯಜಮಾನನೆಂದರೆ ಅದೂ ಇದೂ ಕೆಲಸ ಇದ್ದೇ ಇರುತ್ತದೆಯಲ್ಲವೇ?”‘
“‘ನೋಡು ವಿಘ್ನೇಶ. ನಿಮ್ಮ ಮನೆಯ ವ್ಯವಹಾರ ನನಗೆ ಸಂಬಂಧಿಸಿದ್ದಲ್ಲ. ಅದರಿಂದ ನನಗೇನಾಗಬೇಕಿದೆ ಹೇಳು. ಆದರೂ ನಿನ್ನ ಸ್ನೇಹಿತ ನಾನು. ನಿನಗೆ ಲುಕ್ಸಾನು ಆಗುವದನ್ನು ಹೇಗೆ ಸಹಿಸಲಿ ಹೇಳು. ಏನಿದ್ದರೂ ನೀನೂ ಅವನ ಕುರಿತು ಕಾಳಜಿವಹಿಸುವದು ಒಳ್ಳೆಯದು. ಬೆಂಗಳೂರಿನಲ್ಲಿ ಅವನ ಸ್ವಂತಕ್ಕೆ ಜಮೀನು ಖರೀದಿ ಮಾಡಲು ಹೋಗಿದ್ದಾನೆ ಅಂತ ಸುದ್ದಿ ಇದೆ. ನಿನ್ನಣ್ಣ ಕುಟುಂಬದ ಯಜಮಾನನಾಗಿ ನಿನಗೆ ಅದರಲ್ಲೂ ನನ್ನ ಚಡ್ಡೀದೋಸ್ತನಿಗೆ ಅನ್ಯಾಯಮಾಡಿಯಾನು ಎನ್ನುವ ನೋವುಂಟು ನನಗೆ. ಅಷ್ಟೆ. ನೀನುಂಟು ನಿನ್ನ ಅಣ್ಣ ಉಂಟು ಬಿಡು.”‘ ವಿಘ್ನೇಶ ಭಟ್ಟರ ಮನಸ್ಸಿನಲ್ಲಿ ಹುಳು ಬಿಟ್ಟು ಹೊರಟ ಕುಮಾರ ಹೆಗಡೆ.
ಕುಮಾರ ಹೆಗಡೆಯ ಸ್ವಭಾವವೇ ಹಾಗೆ. ಊರಿನಲ್ಲಿಯ ವಿಷಯಗಳನ್ನು ಹೇಗೋ ತಿಳಿದು ಕೊಳ್ಳುತ್ತಿದ್ದ. ಅಣ್ಣ-ತಮ್ಮ, ತಂದೆ- ಮಗ, ಬಾವ-ನೆಂಟ, ಯಜಮಾನ-ಆಳು ಹೀಗೆ ಯಾವ ಸಂಬಂಧವಾದರೂ ಅವರ ಮಧ್ಯದಲ್ಲಿರುವ ಭಿನ್ನಾಭಿಪ್ರಾಯಗಳನ್ನು ದೊಡ್ಡದು ಮಾಡಿಯೊ ಅಥವಾ ಮನಸ್ತಾಪವನ್ನೇ ತಂದು ಹಾಕಿಯೊ ಕೆಲಸ ಮಾಡುತ್ತಾ ಇರಬೇಕು.
ಅನಂತ ಗೋಪಾಲರಾಯರ ಮಗ . ಅವನ ಹೆಂಡತಿ ವೈಶಾಲಿಯ ಬಾಯಿ ಸ್ವಲ್ಪ ಜೋರು. ಕುಮಾರ ಹೆಗಡೆಗೆ ಪೇಟೆಯಲ್ಲಿ ಗೋಪಾಲರಾಯರು ಸಿಕ್ಕಿದರು. “‘ರಾಯರೆ, ಇದು ಯಾಕೋ ನನಗೆ ಸರಿ ಬರಲಿಲ್ಲ”‘
“‘ಏನು?”‘.
“‘ನೀವು ಗಂಡ ಹೆಂಡತಿ ವಯಸ್ಸಾದವರು. ನಿಮ್ಮ ಸೊಸೆ ವೈಶಾಲಿ ತಗ್ಗಿ ಬಗ್ಗಿ ನಡೆಯಬೇಕಲ್ಲವೇ? ಅನಂತನಾದರೂ ಹೇಳಬೇಕಿತ್ತು. ನಿಮ್ಮ ಪಕ್ಕದ ಮನೆ ಸುನಂದಾಬಾಯಿಯೇ ಹೇಳಿದ್ದಾಳಂತಲ್ಲ ‘ಗಂಡು ಬೀರಿಯನ್ನು ಅತ್ತೆ ಮಾವ ಹೇಗೆ ಸುಧಾರಿಸಿಕೊಳ್ಳುತ್ತಾರೋ ಅಂತ.’ ಅಂತೂ ನಿಮಗೆ ಮಗ ಸೊಸೆ ಇದ್ದರೂ ಇಲ್ಲದಂತಾಯಿತು ಅಂತ ನನಗೆ ಚಿಂತೆ ಅಷ್ಟೇ.”‘
“‘ದೇವರ ಇಚ್ಛೆಯಂತಾಗುತ್ತದೆ”‘ ಗೋಪಾಲರಾಯರು ಹೇಳಿದರು.
ನಾಲ್ಕು ದಿನದ ನಂತರ ಅನಂತ ಭೇಟಿಯಾದ ಕುಮಾರ ಹೆಗಡೆಗೆ.
“‘ಅನಂತ, ತಂದೆ ಅನುಭವಿಗಳು. ನಿನ್ನ ಹೆಂಡತಿ ಹುಡುಗು ಬುದ್ಧಿಯವಳು. ಅವರು ಸುಧಾರಿಸಿ ಕೊಂಡು ಹೋಗಬೇಕಲ್ಲವೇ?.”‘
“ಹೌದು. ಹಿರಿಯರಲ್ಲವೇ ಅವರು. ಸುಧಾರಿಸಿಯಾರು”‘.
“‘ನೋಡು ತಪ್ಪು ತಿಳಿದುಕೊಳ್ಳಬೇಡ. ನನ್ನ ಮಗ ಬೇರೆಯಲ್ಲ ನೀನು ಬೇರೆಯಲ್ಲ. ಒಂದು ಮಾತು ಬರುತ್ತದೆ ಹೋಗುತ್ತದೆಯಪ್ಪ. ನಿಮ್ಮ ಪಕ್ಕದ ಮನೆ ಸುನಂದಾಬಾಯಿಯಲ್ಲಿ ಅದನ್ನೇ ಹೇಳಿ ಊರೆಲ್ಲಾ ಪ್ರಚಾರವಾದರೆ ಹೇಗೆ? ನೀವು ಹೇಗೆ ದಿನಾಲೂ ಸಂಬಾಳಿಸಿಕೊಳ್ಳುತ್ತೀರೋ ಏನೋ? ಅಂತೂ ನೀವು ಸಮಾಧಾನದಲ್ಲಿದ್ದರೆ ಸಾಕು. ಬರುತ್ತೇನೆ.”‘
ಮುಂದಿನದು ಊಹೆಗೆ ಬಿಟ್ಟಿದ್ದು.
ಊರಿನಲ್ಲಿ ಬೇರೆಯವರ ಜೊತೆ ಕುಮಾರ ಹೆಗಡೆ ಹೇಳುವುದೇ ಬೇರೆ.
“‘ಅವರು ನೋಡು ಅಣ್ಣ ತಮ್ಮ, ಹಾವು ಮುಂಗಸಿಯ ತರ ಇದ್ದಾರೆ. ಅವರಲ್ಲಿ ಮನಸ್ತಾಪ ಬೇಡ ಅಂತ ನಾನೇ ಪಂಚಾಯ್ತಿ ನಡೆಸಿ ಗಿಳಿಗೆ ಹೇಳಿದ ಹಾಗೆ ಹೇಳಿದೆ. ಕೇಳುವ ಹಂತದಲ್ಲಿಲ್ಲ ಅಣ್ಣ ತಮ್ಮ ಇಬ್ಬರೂ . ಬೇರೆಯಾಗಿಯೇ ಶುದ್ಧ ಅಂತ ಇಬ್ಬರೂ ಹೇಳುವವರೇ. ಏನೋ ಅಂತೂ ಮನಃಕಷಾಯ ಹೊಂದಿ ಒಟ್ಟಿರುವದಕ್ಕಿಂತ ಬೇರೆಯಾಗಿ ಪ್ರೀತಿಯಿಂದ ಇದ್ದರೊಳ್ಳೆಯದಲ್ಲವೇ?”‘ ಅಂತ ನಿರ್ಣಯದ ಶರಾ ಬರೆಯುತ್ತಾನೆ.
“‘ಮಾರು, ನಿನ್ನ ಗಣೇಶ ಹೆಗಡೇರು ಪುಣ್ಯಾತ್ಮ ರು.”‘
ಮಾರು ಗಣೇಶ ಹೆಗಡೆಯ ಮನೆ ಆಳು. ಬಹಳ ವರ್ಷಗಳಿಂದ ಅವರಲ್ಲಿ ಕೆಲಸ ಮಾಡುತ್ತಿದ್ದಾನೆ. ಇಬ್ಬರೂ ಕುಮಾರ ಹೆಗಡೆಗೆ ಗೊತ್ತಿದ್ದವರೆ. ಕುಮಾರ ಹೆಗಡೆಯ ಮಾತು ಕೇಳಿ ಮಾರುವಿಗೆ ಏನು ಹೇಳಬೇಕು ಅಂತ ತತ್ ಕ್ಷಣ ಸೂಚಿಸಲಿಲ್ಲ. ಒಂದು ರೀತಿಯ ಉದಾಸೀನದಿಂದಲೇ “‘ಹಂ”‘ ಅಂತ ಹೇಳಿದ.
“‘ನಿನ್ನ ಅಣ್ಣನ ಮಗ ದೇವು ಹೇಳಿದ. ನಿನ್ನಂತಹ ಕೆಲಸಗಾರ ಇಡೀ ಕೊಪ್ಪದಲ್ಲಿಯೇ ಯಾರೂ ಇಲ್ಲವಂತೆ. ಅವನು ಸೆಂಟ್ರಿಂಗ್ ಕೆಲಸಕ್ಕೆ ಹೋಗುತ್ತಾನಂತೆ. ಅರ್ಧ ದಿನದ ಕೆಲಸಕ್ಕೇ ಐನೂರು ರೂಪಾಯಿ ಪಗಾರಂತೆ. ಯಾಕೋ ನಿನ್ನ ಬಿಟ್ಟಿ ಕೆಲಸ ಹೆಚ್ಚಾಯಿತು ಅಂತ ಅನಿಸುತ್ತದೆ. ನಿನ್ನ ಪ್ರಾಮಾಣಿಕ ಕೆಲಸಕ್ಕೆ ಬರೇ ಮುನ್ನೂರ ?. ಯಾರಾದರೂ ನಾನೂರು ಕೊಟ್ಟಾರು. ಅಂತೂ ನಿಮ್ಮ ಹೆಗಡೇರ ಪುಣ್ಯ ಹೇಳು.”‘
“‘ಮಗನೂ ಹಾಗೇ ಹೇಳುತ್ತಿದ್ದಾನೆ ಹೆಗಡೇರೆ. ಗಣೇಶ ಹೆಗಡೇರ ಹತ್ತಿರ ಕೆಲಸ ಬಿಟ್ಟು ದೇವಣ್ಣನ ಜೊತೆ ಸೆಂಟ್ರಿಂಗ್ ಗೆ ಹೋದರೆ ಪಗಾರೂ ಹೆಚ್ಚು. ಮನೆ ಕೆಲಸಕ್ಕೂ ಸುಲಭ ಅಂತ. ಒಮ್ಮೆ ಹೇಗಡೇರ ಹತ್ತಿರ ಹೇಳಿಯೇ ಮುಂದುವರಿಯುತ್ತೇನೆ”‘ ಅಂತ ಕುಮಾರ ಹೆಗಡೆಯಲ್ಲಿ ಹೇಳಿದ ಮಾರು.
ನಾಲ್ಕು ದಿನದ ಮೇಲೆ ಭಟ್ಟರ ಅಂಗಡಿಗೆ ಸಾಮಾನು ತರಲು ಹೋದಾಗ ಗಣೇಶ ಹೆಗಡೆ ಭೇಟಿಯಾದರು ಕುಮಾರ ಹೆಗಡೆಗೆ.
“‘ಗಣೇಶಣ್ಣ, ಇದು ಕಲಿ ಕಾಲ. ಚಿಗುರೇ ಬೇರನ್ನು ನುಂಗಿದ ಹಾಗಾಯಿತು'”.
“‘ಏನು ಹಾಗಂದರೆ ಕುಮಾರ?”‘.
“‘ನೋಡು, ಮೊನ್ನೆ ಮಾರು ಸಿಕ್ಕಿದ್ದ. ನಿನ್ನ ಮನೆಯಲ್ಲಿ ಪಗಾರು ಸರಿಯಾಗಿ ಕೊಡುವುದಿಲ್ಲ, ಅವನ ಅಣ್ಣನ ಮಗ ದೇವು ಜೊತೆ ಸೆಂಟ್ರಿಂಗ್ ಕೆಲಸಕ್ಕೆ ಹೋದರೆ ಪಗಾರು ಹೆಚ್ಚು ಅಂತ ಹೇಳಿದನಪ್ಪ. ಅದಕ್ಕೇ ನೆನಪಿಗೆ ಬಂದಿತು, ಹೇಳಿದೆ ಅಷ್ಟೇ.”‘
“‘ಏನಾಗುತ್ತದೆಯೋ ನೋಡೋಣ”‘.
“‘ಗಣೇಶ, ನಾನು ಅಧಿಕಪ್ರಸಂಗಿ ಅಂತ ನೀನು ಹೇಳಿದರೂ ಅಡ್ಡಿಯಿಲ್ಲ. ನನ್ನವರ ಅಭಿಮಾನ ನನಗೆ ಹೆಚ್ಚಿನದು. ಇದು ಕೇವಲ ದುಡ್ಡಿನ ವಿಷಯವಲ್ಲ. ಮೂವತ್ತು ವರ್ಷದಿಂದ ನಿನ್ನ ಹತ್ತಿರ ಕೆಲಸಕ್ಕಿದ್ದವ ಅವನು. ಕೆಲಸ ಇರಲಿ ಇಲ್ಲದಿರಲಿ ಅವನನ್ನು ಹಾಗೂ ಅವನ ಕುಟುಂಬವನ್ನು ಸಾಕಿದವನು ನೀನು. ಖಾಯಂ ಆಗಿ ಕೆಲಸ ಕೊಡುತ್ತಾರೆ ಅಂದರೆ ಅವನಪ್ಪನಂತವನೂ ಕೆಲಸಕ್ಕೆ ಬಂದಾನು. ಅವನ ಬೇಡಿಕೆಗೆ ನೀನು ಮಣಿಯುವದು ಸರಿ ಅಲ್ಲ ಅಂತ ಅನಿಸಿತು. ಅದಕ್ಕೇ ಹೇಳಿದೆ. ಇನ್ನು ನೀ ಉಂಟು ಮಾರು ಉಂಟು. ಹೇಳಲು ನಾನು ಯಾರು?. ಮನೆಗೆ ಬೇಗ ಹೋಗಬೇಕಾಗಿದೆ.”‘ ಹೇಳುವದನ್ನೆಲ್ಲಾ ಹೇಳಿ ಮನೆಗೆ ಹೊರಟ ಕುಮಾರ ಹೆಗಡೆ.
ಇಂತಹ ಎಷ್ಟೋ ಘಟನೆಗಳಿಗೆ ಕುಮಾರ ಹೆಗಡೆ ಕಾರಣನಾದರೂ ಅವನು ಉದ್ದೇಶಪೂರ್ವಕವಾಗಿ ಹೀಗೆ ಮಾಡುವುದಿಲ್ಲ. ಅವನ ಮಟ್ಟಿಗೆ ಎಲ್ಲರಿಂದಲೂ ಪ್ರೀತಿ ಪಡೆಯಬೇಕು ಎನ್ನುವ ಆಸಕ್ತಿ. ಆದ್ದರಿಂದಲೇ ಎಲ್ಲರಿಗೂ ಅವನಲ್ಲಿ ವಿಶ್ವಾಸ. ಎಲ್ಲರಿಗೂ ಅವನ ಮಧ್ಯಸ್ತಿಕೆ ಬೇಕೇ ಬೇಕು. ಊರಿನಲ್ಲಿ ಯಾವ ಪಂಚಾಯ್ತಿಯಾದರೂ ಕುಮಾರ ಹೆಗಡೆಗೆ ಕರೆ ಹೋಗುತ್ತದೆ.
ಆದರೆ ಇತ್ತೀಚಿಗೆ ಯಾಕೋ ಕೆಲವರು ಪಡ್ಡೆ ಹುಡುಗರು ಕುಮಾರ ಹೆಗಡೆಗೆ ಚಾಕು ಹೆಗಡೆ (ಚಾಡಿಕೋರ ಕುಮಾರ ಹೆಗಡೆ) ಎನ್ನುತ್ತಾರೆ.
*************************************