ಅಂಕಣ ಬರಹ
ರಾಮಕೃಷ್ಣ ಗುಂದಿ ಅವರ ಆತ್ಮಕಥೆ—39
ಆತ್ಮಾನುಸಂಧಾನ
ಅರಸಿ ಬಂದ ಆತ್ಮ ಬಂಧು
ನಾನು ಎಂ. ಎಂ. ಅಂತಿಮ ವರ್ಷದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ತರಗತಿಯ ಪಾಠಗಳು ಮುಗಿದಿದ್ದವು. ಅಗತ್ಯವಾದಾಗ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಭೇಟಿ ನೀಡುವುದನ್ನು ಬಿಟ್ಟರೆ ಹೆಚ್ಚಿನ ಸಮಯ ಹಾಸ್ಟೆಲ್ಲಿನ ಕೋಣೆಯಲ್ಲೇ ಉಳಿದು ಓದಿಕೊಳ್ಳುತ್ತಿದ್ದೆವು.
ಅಂಥ ದಿನಗಳಲ್ಲಿ ರವಿವಾರದ ಒಂದು ದಿನ ಮುಂಜಾನೆ ನನ್ನ ಕೊಠಡಿಗೆ ಆಕಸ್ಮಿಕವಾಗಿ, ಅಪರಿಚಿತ ಅತಿಥಿಯೊಬ್ಬರ ಆಗಮನವಾಯಿತು. ಬಾಗಿಲು ಸದ್ದು ಕೇಳಿ ತೆರೆದು ನೋಡಿದೆ. ಸಾಮಾನ್ಯ ಎತ್ತರದ ಬೆಳ್ಳಗಿನ, ಎಣ್ಣೆ ಹಚ್ಚಿ ಮಿದುವಾಗಿ ಕ್ರಾಪ್ ಮಾಡಿದ ಗುಂಗುರು ಕೂದಲಿನ ಅಂದಾಜು ಮೂವತ್ತೈದು ನಾಲ್ವತ್ತರ ತರುಣ ವ್ಯಕ್ತಿಯೊಬ್ಬರು ನಿಂತಿದ್ದರು. ಯಾರು? ಎಂಬ ಪ್ರಶ್ನಾರ್ಥಕ ಚಿಹ್ನೆಗೆ ತಾವೇ ಉತ್ತರ ಆರಂಭಿಸಿ “ಹಾಯ್, ನಾನು ಎ.ಎ.ಸಣ್ಣು… ಅಂದ್ರೆ ಸಣ್ಣು ಆಯು ಆಗೇರ…ಪ್ರಮ್ ಕಂತ್ರಿ, ಅಂಕೋಲಾ…” ಎಂದು ಪರಿಚಯಿಸಿಕೊಳ್ಳುತ್ತ ಅವರು ಒಳಗೆ ಬಂದರು.
ಸಣ್ಣು! ನಮ್ಮ ಜಾತಿಯಲ್ಲೇ ಮೊದಲು ಬಿ.ಎ.ಪದವಿ ಪಡೆದ ಮಹಾನುಭಾವರು. ಹೆಸರು ಕೇಳಿದ್ದೆ ಪರಿಚಿತರು ಆಗಿರಲಿಲ್ಲ.
ಅವರು ಕೋಣೆಯಲ್ಲಿ ಕುಳಿತ ಅರ್ಧ ಗಂಟೆಯಷ್ಟು ಅಲ್ಪಕಾಲದಲ್ಲಿಯೇ ತಮ್ಮ ಪರಿಚಯ ಹೇಳಿಕೊಂಡ ರೀತಿ ನನ್ನ ಕುರಿತು ಅವರಿಗೆ ಗೊತ್ತಿರುವ ವಿವರಗಳು ಇತ್ಯಾದಿಗಳಿಂದ ಸಣ್ಣು ನನ್ನನ್ನು ತುಂಬಾ ಪ್ರಭಾವಿಸಿ ಬಿಟ್ಟರು.
ನಿನ್ನೆ ಹುಬ್ಬಳ್ಳಿಗೆ ಯಾವುದೋ ಕೆಲಸದ ನಿಮಿತ್ತ ಬಂದ ಸಂಗತಿಯನ್ನು ತಿಳಿಸಿ ನಾನು ಇಲ್ಲಿ ವಿದ್ಯಾರ್ಥಿಯಾಗಿರುವ ವಿಷಯ ಮೊದಲೇ ಗೊತ್ತಿರುವುದರಿಂದ ಕಂಡು ಮಾತನಾಡಿಸಿ ಹೋಗಲೆಂದೇ ಇಂದು ಧಾರವಾಡಕ್ಕೆ ಬಂದು ವಿಶ್ವವಿದ್ಯಾಲಯದ ಬಸ್ಸು ಹತ್ತಿದ್ದಾರೆ! ಎಂಬುದನ್ನು ಕೇಳಿದಾಗ ನನಗೆ ನನ್ನ ಆತ್ಮ ಬಂಧುವೊಬ್ಬ ನನಗಾಗಿ ಅರಸಿ ಬಂದಿದ್ದಾರೆ ಎಂದು ಹೆಮ್ಮೆಯೂ, ಸಂತೋಷವೂ ಆಯಿತು.
ಸಣ್ಣು ನನ್ನನ್ನು ಬಿಟ್ಟೂ ಬಿಡದೇ ಒತ್ತಾಯಿಸಿ ಹುಬ್ಬಳ್ಳಿಯ ತಿರುಗಾಟಕ್ಕೆ ಅಣಿಗೊಳಿಸಿದರು. ನಿರುಪಾಯನಾಗಿ ಅವರ ಹಿಂದೆ ಹೊರಟೆ. ವಿಶ್ವವಿದ್ಯಾಲಯದ ಬಸ್ ಟಿಕೇಟ್ ಪಡೆಯಲೆಂದು ಕಿಸೆಯಿಂದ ಚಿಲ್ಲರೆ ಕಾಸು ತೆಗೆದರೂ ಕೈ ತಡೆದು “ನೋ ನೋ…ಯೂ ಆರ್ ರ‍್ನಿಂಗ್… ಐಯಾಮ್ ರ‍್ನಿಂಗ್…” ಎಂದು ತಿಳಿಹೇಳಿ ಅಲ್ಲಿಂದ ಮುಂದೆ ಇಡಿಯ ಹುಬ್ಬಳ್ಳಿಯ ತಿರುಗಾಟದಲ್ಲೂ ನನ್ನ ಒಂದೇ ಒಂದು ಪೈಸೆಯೂ ಹೈಗೈ ಆಗಲು ಬಿಡದಂತೆ ಹುಬ್ಬಳ್ಳಿ ದರ್ಶನ ಮಾಡಿಸಿದರು.
ಅಂಕೋಲಾ ತಾಲೂಕಿನ ಗ್ರಾಮೀಣ ಭಾಗಗಳಾದ ಕಂತ್ರಿ-ಅಲಗೇರಿ-ಅಂಬಾರಕೊಡ್ಲ ಇತ್ಯಾದಿ ಹಳ್ಳಿಗಳ ನಿವಾಸಿಗಳಾಗಿದ್ದ ವೈಶ್ಯ ಸಮಾಜದ ಶೆಟ್ಟರು ಬಹುಸಂಖ್ಯೆಯಲ್ಲಿ ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಮುಗಿಯುತ್ತಿದ್ದಂತೆ ವ್ಯಾಪಾರ ವ್ಯವಹಾರ ವೃತ್ತಿಗೆಂದು ಹುಬ್ಬಳ್ಳಿಗೆ ಹೊರಟು ಬದುಕು ಕಟ್ಟಿಕೊಂಡಿದ್ದರು. ಅವರಲ್ಲಿ ಬಹಳಷ್ಟು ಜನರು ಹೋಟೆಲ್ ಉದ್ಯಮದಲ್ಲೂ, ಕಿರಾಣಿ ವ್ಯಾಪಾರದಲ್ಲೂ ಕ್ರಿಯಾಶೀಲರಾಗಿದ್ದರು. ಅಂಥವರಲ್ಲಿ ಬಹಳಷ್ಟು ಹಿರಿಯರು ಸಣ್ಣು ಅವರಿಗೆ ತುಂಬಾ ಪರಿಚಿತರಾಗಿದ್ದರು. ಸಣ್ಣು ಅವರ ಓರಗೆಯ ಮಕ್ಕಳಂತೂ ಆತ್ಮೀಯ ಸ್ನೇಹಿತರೇ ಆಗಿದ್ದರು.
ಅವರು ಈಗ ವಾಸ್ತವ್ಯ ಮಾಡುತ್ತಿರುವ ಹುಬ್ಬಳ್ಳಿ ನಗರದ ಬೇರೆ ಬೇರೆ ವಿಭಾಗಗಳ ಕಡೆಗೆ ನನ್ನನ್ನು ಕರೆದೊಯ್ದ ಸಣ್ಣು ಅವರು ಎಲ್ಲರಿಗೂ “ಇವ ರಾಮಕೃಷ್ಣ ಗುಂದಿ… ನನ್ನ ಅಕ್ಕನ ಮಗ… ಯೂನಿವರ್ಸಿಟಿಯಲ್ಲಿ ಎಂ.ಎ ಮಾಡ್ತಿದಾನೆ…” ಎಂದೇ ಪರಿಚಯಿಸಿದರು.
ಮಧ್ಯಾಹ್ನದ ಊಟವನ್ನು ಚೆನ್ನಾಗಿ ಮಾಡಿಸಿ, ಯಾವುದೋ ಚಲನ ಚಿತ್ರವನ್ನು ತೋರಿಸಿ ನನ್ನನ್ನು ಸಂಜೆಯ ಬಸ್ಸಿಗೆ ಧಾರವಾಡಕ್ಕೆ ಕಳುಹಿಸಿದ್ದು ಒಂದು ಅವಿಸ್ಮರಣೀಯ ನೆನಪಾಗಿ ನನ್ನೊಳಗೆ ನೆಲೆಯಾಗಿದೆ.
ನಾನು ಎಂ.ಎ ಮುಗಿಸಿ ಅಂಕೋಲೆಯಲ್ಲಿ ನನ್ನ ವೃತ್ತಿ ಜೀವನ ಆರಂಭಿಸಿದ ಬಳಿಕ ಸಣ್ಣು ನನ್ನನ್ನು ಒಡಹುಟ್ಟಿದ ಸಹೋದರನಂತೆಯೇ ನೋಡಿಕೊಂಡರು. ನಮ್ಮ ನಡುವಿನ ಬಹುವಚನದ ಸಂಬೋಧನೆ ನಿಂತೇ ಹೋಯಿತು. ನನ್ನ ಆಸಕ್ತಿಯ ಸಾಹಿತ್ಯ-ಕಲೆ-ಯಕ್ಷಗಾನಗಳಲ್ಲಿ ಸಣ್ಣು ಆಸಕ್ತಿ ಹೊಂದಿದ್ದರು. ನನಗಿಂತಲೂ ಬೆಳ್ಳಗೆ ಚಂದ ಇದ್ದುದರಿಂದ ಬಹುತೇಕ ನನ್ನ ಜೊತೆಗೂ ಅವರು ಸ್ತ್ರೀವೇಷ ಮಾಡಿ ರಂಜಿಸುತ್ತಿದ್ದರು.
ಅವರ ಒಡನಾಟದ ಅನುಭವ ವಿಕಾಸವಾದಂತೆಲ್ಲ ಅವರ ಕುರಿತು ನನಗೆ ಗೌರವಾದರಗಳು ಹೆಚ್ಚಿದವು. ಅವರು ಹುಟ್ಟಿ ಬೆಳೆದ ಬಡತನದ ಕುಟುಂಬ, ಶಿಕ್ಷಣ ಪಡೆಯಲಾಗದ ಅಸಹಾಯಕತೆ, ಅನ್ನ ಸಂಪಾದನೆಗಾಗಿ ದನ ಕಾಯುವ ಅನಿವಾರ್ಯತೆ ಇತ್ಯಾದಿಗಳೆಲ್ಲ ಸಣ್ಣು ಅವರ ಕುರಿತು ನನಗೆ ಪ್ರೀತಿ ಗೌರವಗಳು ಹೆಚ್ಚುವಂತೆಯೇ ಮಾಡುತ್ತಿದ್ದವು.
ನಾಡಿನ ಕ್ರಾಂತಿಕಾರಿ ಕವಿ, ರೈತ ಚಳುವಳಿಯ ನಾಯಕ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆನರಾವೆಲ್‌ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಮೂಲಕ ಅಕ್ಷರ ಸೂಯನನ್ನು ಬೆಳಗಿಸಿದ ಮಾನ್ಯ ಡಾ|| ದಿನಕರ ದೇಸಾಯಿಯವರ ಕೃಪಾ ದೃಷ್ಟಿಗೆ ಪಾತ್ರನಾದ ಬಾಲಕ ಸಣ್ಣು ಅವರ ಆಶ್ರಯದಲ್ಲೇ ಇದ್ದುಕೊಂಡು ಇಂಟರ್ ಮೀಡಿಯೇಟ್ ವರೆಗೆ ಶಿಕ್ಷಣ ಪಡೆದದ್ದು ಬಹುದೊಡ್ಡ ಅದೃಷ್ಟವೇ ಸರಿ.
ಅಲ್ಲಿಂದ ಮುಂದೆ ಜೀವನ ನಿರ್ವಹಣೆಗಾಗಿ ಸಮಾಜಕಲ್ಯಾಣ ಇಲಾಖೆಯಲ್ಲಿ ಉದ್ಯೋಗಿಯಾಗಿ ಸೇರಿದರು. ಉದ್ಯೋಗ ಮಾಡುತ್ತಲೇ ಬಾಹ್ಯ ಅಭ್ಯರ್ಥಿಯಾಗಿ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅದೇ ರೀತಿ ಅಭ್ಯಾಸದಲ್ಲಿ ಮುಂದುವರಿದು ಸ್ನಾತಕೋತ್ತರ ಎಂ.ಎ. ಪದವಿ ಗಳಿಸಿದುದು ಕೆಲವಷ್ಟು ದಿನ ಲಾ. ಕಾಲೇಜು ತರಗತಿಗಳಲ್ಲಿಯೂ ಅನುಭವ ಗಳಿಸಿದುದು ಇತ್ಯಾದಿ ಸಾಧನೆಗಳಿಂದ ದಲಿತ ಆಗೇರ ಸಮಾಜ ಹೆಮ್ಮೆ ಪಡುವಂತೆಯೇ ಬದುಕನ್ನು ಎದುರಿಸಿದ್ದಾರೆ.
ನನ್ನ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಸಣ್ಣು ಅವರ ಒಡನಾಟವು ನನಗೆ ಹಲವು ದಿಕ್ಕುಗಳಲ್ಲಿ ಮಾರ್ಗದರ್ಶನ ನೀಡಿ ನನ್ನ ಸರಿ ತಪ್ಪುಗಳನ್ನು ತಿದ್ದಿ ಮುನ್ನಡೆಸಿದ ಸಂದರ್ಭಗಳನ್ನು ನಾನು ಮರೆಯಲಾರೆ.
ಆದರೆ ಮಧ್ಯಂತರದ ಬದುಕಿನಲ್ಲಿ ನಾವು ಪರಸ್ಪರ ಪರಿಹಾರ ಕಾಣದ ಹಗೆತನದಲ್ಲಿ ಬಾಳಿದೆವು ಎಂಬುದು ವಿಪರ್ಯಾಸ!
ಸುಶಿಕ್ಷಿತರೆಂಬ ಕಾರಣಕ್ಕೆ ನಾವು ಸಾಮಾಜಿಕ ಸಂಘಟನೆಯೊಂದನ್ನು ಕಟ್ಟಿಕೊಂಡು ನಮ್ಮ ದಲಿತ ಸಮಾಜದ ಏಳ್ಗೆಗೆಗೆಪ್ರಯತ್ನಿಸುವ ಕಾಲದಲ್ಲಿಯೇ ಸಂಘಟನೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡಿದವು. ಎರಡು ಗುಂಪುಗಳಾಗಿ ಸಣ್ಣು ಮತ್ತವರ ಬೆಂಬಲಿಗರು ಬೇರೆಯಾದರು. ನನ್ನನ್ನು ಅತಿಯಾಗಿ ಪ್ರೀತಿಸುವ ಸಣ್ಣು ಅವರು ನಾನೂ ಸಂಘಟನೆಯಿಂದ ಹೊರಬರಲು ಒತ್ತಾಯಿಸಿದರು. ಆದರೆ ಸಂಘಟನೆಯ ಉದ್ದೇಶ ಮತ್ತು ಸಂಘಟನೆಯಲ್ಲಿ ತೊಡಗಿಕೊಂಡ ಸ್ನೇಹಿತರ ಪ್ರೀತ್ಯಾದರಗಳಿಂದ ನಾನು ಸಂಘಟನೆಯನ್ನು ಬಿಡುವುದು ಸಾಧ್ಯವೇ ಆಗಲಿಲ್ಲ.
ಇದು ಪರಸ್ಪರ ದ್ವೇಷಕ್ಕೆ, ಆರೋಪಗಳಿಗೆ, ಟೀಕೆಗಳಿಗೆ ಅವಕಾಶ ಮಾಡಿಕೊಡುತ್ತ ನಮ್ಮನ್ನು ಪರಸ್ಪರ ದೂರಮಾಡಿತು. ನನ್ನ ಗೆಳೆಯರಿಗೆಲ್ಲ ಪತ್ರ ಬರೆದು ನನ್ನನ್ನು ಟೀಕಿಸುವ ದುಸ್ಸಾಹಸವನ್ನೂ ಸಣ್ಣು ಮಾಡತೊಡಗಿದರು. ಹಿರಿಯರಾದ ವಿ.ಜೆ.ನಾಯಕ, ಪ್ರೋ.ಮೋಹನ ಹಬ್ಬು ಮುಂತಾದ ನನ್ನ ಆತ್ಮೀಯರು ಸಣ್ಣು ಅವರು ಬರೆದ ಪತ್ರಗಳನ್ನೆಲ್ಲ ನನಗೂ ತೋರಿಸಿ ವಿನೋದ ಮಾಡಿ ನಕ್ಕರು. ಅಂಥ ಪತ್ರಗಳು ಇತರ ಗೆಳೆಯರಿಗೂ ಬಂದಿರಬಹುದು. ಕೆಲವರು ನನಗೆ ನೋವಾಗಬಹುದೆಂದು ಗೌಪ್ಯವಾಗಿ ಇಟ್ಟಿರಲೂ ಬಹುದು.
ಇಂಥ ಕ್ಷುದ್ರತನವನ್ನು ಹೇಗೆ ಮುಂದುವರಿಸತೊಡಗಿದರೆಂದರೆ ಒಮ್ಮೆ ಹುಬ್ಬಳ್ಳಿಯ “ಸಾವಿತ್ರಿ ಗುಂಡಿ” ಎಂಬವರು ಹುಬ್ಬಳ್ಳಿ ನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾದರು. ಅದು ದಿನಪತ್ರಿಕೆಗಳಲ್ಲಿ ಸುದ್ದಿಯಾಯಿತು. ಅದೇ ದಿನ ಸಂಜೆ ಸಣ್ಣು ಅವರು, “ಕಾಂಗ್ರಾಚ್ಯುಲೇಶನ್ಸ್ ಹಸ್ಬಂಡ್ ಆಫ್ ಮೇಯರ್ ಸಾವಿತ್ರಿ ಗುಂಡಿ” ಎಂದು ನನಗೆ ಅಂಚೆಕಛೇರಿಯಿಂದ ಸ್ವಂತ ಹೆಸರಿನಲ್ಲೇ ಟೆಲಿಗ್ರಾಂ ಕಳಿಸಿ ಅಪಹಾಸ್ಯ ಮಾಡಿದರು.
ಪ್ರಾಸ್ತಾಪಿಸಲೇ ಬೇಕಾದ ಇನ್ನೊಂದು ಪ್ರಕರಣವೆಂದರೆ-
ಸಣ್ಣು ಅವರು ನಿವೃತ್ತಿಯ ಅಂಚಿನಲ್ಲಿ ಇರುವಾಗ ನೀಲಂಪುರದ ಅವರ ಸ್ವನಿವೇಶನದಲ್ಲಿ ನೂತನ ಗ್ರಹ ನಿರ್ಮಾಣಕ್ಕೆ ತೊಡಗಿದ್ದರು. ಆಗ ಸಣ್ಣು ಅವರು ಜಿಲ್ಲಾ ಸಮಾಜ ಕಲ್ಯಾಣ ಇಲಾಖಾ ಕಛೇರಿ ಕಾರವಾರದಲ್ಲಿ ಲೆಕ್ಕಪತ್ರ ತಪಾಸಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಛೇರಿಯಲ್ಲಿ ಏನೋ ಪ್ರಕರಣ ಸಂಭವಿಸಿದೆ. ಆದರೆ ರಾತ್ರಿ ಹೊತ್ತಿನಲ್ಲಿ ಯಾರೋ ಕಿಡಿಗೇಡಿಗಳು ಕಾರಿನಲ್ಲಿ ಬಂದು ಸಣ್ಣು ಅವರ ಮನೆಯ ಕಡೆ ಕಲ್ಲು ತೂರಿ ರಂಪಮಾಡಿ ಮತ್ತೆ ಅದೇ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಮರುದಿನ ಅಂಕೋಲಾ ಪೊಲೀಸ್ ಸ್ಟೇಶನ್ನಿನಿಂದ ಆಗೇರ ಸಮಾಜ ಸಂಘಟನೆಯ ಪದಾಧಿಕಾರಿಗಳೂ ಆಗಿದ್ದ ಗುಣು ಮಾಸ್ತರ ನೀಲಂಪುರ, ಸುರೇಶ ಮಾಸ್ತರ ಬೆಳಸೆ, ಮಾದೇವ ಮಾಸ್ತರ ನೀಲಂಪುರ ಮತ್ತು ನನಗೆ ಕರೆ ಬಂದಿತು. ಸರಕಾರಿ ನೌಕರಿ ಮಾಡುತ್ತ ಸಮಾಜ ಸೇವೆಗಾಗಿ ಸಮಾಜ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ನಮಗೇನು ಬಂತು ಗ್ರಹಚಾರ? ಎಂಬ ಆತಂಕದಲ್ಲಿಯೇ ಸ್ಟೇಶನ್ನಿಗೆ ಹೋದೆವು. ಅಲ್ಲಿ ಆಗಲೇ ನಮಗೆ ಚಿರಪರಿಚಿತರಾಗಿದ್ದ (ಬಹುಶಃ ಅಂದು ಪಿ.ಎಸ್.ಐ ಟಿನ್‌ಮೇಕರ್ ಸಾಹೇಬರು ಎಂದು ನೆನಪು) ಪೊಲೀಸ್ ಅಧಿಕಾರಿಗಳು ಸಣ್ಣು ಅವರು ಸಲ್ಲಿಸಿದ ಕಂಪ್ಲೇಂಟ್ ಪ್ರತಿಯನ್ನು ನಮ್ಮ ಮುಂದೆ ಹಿಡಿದು, ನಾವೆಲ್ಲ ನಿನ್ನೆರಾತ್ರಿ ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿದ ವಿವರಗಳನ್ನು ಓದಿ ಹೇಳಿದರು. ಓದು ಮುಗಿಸಿದ ಸಾಹೇಬರು ಗಹಗಹಿಸಿ ನಕ್ಕರಲ್ಲದೆ, ಕರೆಸಿಕೊಂಡುದಕ್ಕೆ ಕ್ಷಮೆಯಾಚಿಸಿ ನಮ್ಮನ್ನು ಬೀಳ್ಕೊಟ್ಟರು. ಏಕೆಂದರೆ ತನಿಖೆಯಲ್ಲಿ ಅಂದಿನ ಹಲ್ಲೆಗೆ ಯಾರು ಕಾರಣ? ಎಂಬ ಕುರಿತು ಸುಳಿವು ನೀಡುವ ಸಾಕ್ಷ್ಯಗಳು ದೊರೆತಿದ್ದವು!
ತೀರ ಗಂಭೀರ ವ್ಯಕ್ತಿತ್ವದಿಂದ ವಿಕ್ಷಿಪ್ತತೆಯ ಕಡೆಯ ಸಣ್ಣು ಅವರ ನಡೆಗೆ ಅವರ ವಯೋಧರ್ಮವೂ ಕಾರಣವಾಗಿರಬಹುದು. ಆದರೆ ಎರಡು-ಮೂರು ದಶಕಗಳ ಕಾಲದ ಅವರ ಒಡನಾಟದ ಕಹಿ ಮಧುರ ನೆನಪುಗಳು ನಮ್ಮಿಂದ ಮರೆಯಲು ಸಾಧ್ಯವೇ ಇಲ್ಲ ಎನ್ನುವಷ್ಟು ಸಣ್ಣು ನಮ್ಮನ್ನು ಪ್ರಭಾವಿಸಿದ್ದಾರೆ. ಅವರಿಗೆ, ಅವರು ಕಲಿಸಿದ ಉತ್ತಮ ವಿಚಾರಗಳಿಗೆ ನಾವು ಋಣಿಗಳೇ…
***********************
ರಾಮಕೃಷ್ಣ ಗುಂದಿ
ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.
ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಸರ,
ತುಂಬಿದ ಕೊಡ ತುಳುಕುವುದಿಲ್ಲ. ಸಣ್ಣ ಜನರ ಒಳ್ಳೆಯ ಗುಣ ಗ್ರಹಿಸಿ ನೆನಸಿದ್ದು ನಿಮ್ಮ ದೊಡ್ಡತನ ಧನ್ಯವಾದಗಳು.
ಧನ್ಯವಾದಗಳು
ಗುಂದಿ ಸರ್ ರವರ ಎಷ್ಟೋ ಸಂಗತಿಗಳು ನನಗೆ ಗೊತ್ತಿದ್ದರೂ ಈ ಸಂಗತಿ ನನಗೆ ಗೊತ್ತಿರಲಿಲ್ಲ. ಸಂಘಟನೆಯಲ್ಲಿ ಒಣ ಪ್ರತಿಷ್ಠೆಗಳು ಒಮ್ಮೊಮ್ಮೆ ಮುಖ್ಯವಾಗಿರುತ್ತದೆ ಅದರಿಂದ ಸಣ್ಣು ಹೊರತಾಗಿರಲಿಲ್ಲ ಅಂತ ಕಾಣ್ಸುತ್ತೆ.
ಸಣ್ಣುವವರ ದ್ವೇಷದ ದಿನಗಳ ಬದಿಗಿಟ್ಟು ಅವರ ಪ್ರಭಾವವನ್ನು ಸ್ಮರಿಸಿ, ಅವರಿಗೆ ಋಣಿಯಾಗಿರುವ ತಮ್ಮ ಔದಾರ್ಯ ಆದರ್ಶವಾಗಿದೆ ಸರ್. ನಾವು ನಿಮ್ಮ ಶಿಷ್ಯರೆಂದು ಹೇಳಿಕೊಳ್ಳಲು ಹೆಮ್ಮೆ. ನಿಮ್ಮಂಥ ಗುರುಗಳ ಪಡೆದ ನಾನು ಧನ್ಯೆ.
ದ್ವಿಮುಖ ವ್ಯಕ್ತಿತ್ವದ ಮುಖಗಳು ಎಲ್ಲರ ಸುತ್ತ ಇರುತ್ತಾರೆ. ನೀವು ಹೆಸರು ಹೇಳಿ ವಿವರಿಸಿದ್ದೀರಿ. ತಿಳಿಯಿತಲ್ಲ?