ಸಾವಿನ-ಅರಮನೆ

ಕಾವ್ಯಯಾನ

ಸಾವಿನ-ಅರಮನೆ

ವಸಂತಕುಮಾರ ಎಸ್. ಕಡ್ಲಿಮಟ್ಟಿ

Turner, Joseph M. W. Death on a Pale Horse Painting Reproductions, Save  50-75%, Free Shipping, ArtsHeaven.com

ಬೆಚ್ಚಗೆ ಮಲಗಿದವನು ಬೆರಗಾಗೆದ್ದನು
ಓಹ್..! ಇನ್ನೂ ಬದುಕಿದ್ದೇನೆಂದು
ಅಯ್ಯೋ ಪಕ್ಕದಲೇ ಎಲ್ಲರೂ,
ಗಿಡಗಂಟಿ – ಚಿಲಿಪಿಲಿ ಸದ್ದು ಹೊರಗಡೆ,
ದೀರ್ಘದುಸಿರೆಳೆದು ಕಣ್ಣು ಪಿಳುಕಿಸಿದ,
ಹೊಣೆ ಯಾರು? ನಾನಿನ್ನೂ ಬದುಕಿರುವದಕೆ,
ಅವನೋ, ಅವಳೋ, ಅದೋ,
ಇನ್ಯಾರಿರಬಹುದು…!

ಹುಟ್ಟಿಸಿದವರು ಅವರೇ,
ಸುಳಿದಾಡುವವರು ಅವರೇ,
ಕಲಿಸಿದವರು ಅವರೇ,
ಬದುಕುವವನು ಅವನೇ,
ರೂಢಿಸಿಕೊಂಡವನು ಅವನೇ,
ಹಾಳುಗೆಡುವವನು ಅವನೇ,
ಈ ಸಾಯಿಸುವವರು ಯಾರು?
ಅವನಾ, ಅವರಾ, ಅದಾ ಯಾರೂ ಅಲ್ಲವಲ್ಲ,
ಯಾರೀ ಹೊಣೆಗೇಡಿ ಮನುಷ್ಯ…!

ಹುಟ್ಟಿಸಿದವರನಾಮಿಕರಾಗಿದ್ದಾರೆ,
ಸುಳಿದಾಡಿದವರ ಸುಳಿವಿಲ್ಲ,
ಕಲಿಸಿದವರಿಗರಿವೇ ಇಲ್ಲ,
ಬದುಕಿದವ, ರೂಢಿಸಿಕೊಂಡವ,
ಕೊನೆಗೆ ಹಾಳುಗೆಡಿಸಿಕೊಂಡವನ
ಆರ್ತನಾದ ಅವನಿಗೇ ಪ್ರತಿಧ್ವನಿಸುತ್ತಿದೆ,
ತೋಚದ-ಗೀಚದ ದಿಕ್ಕೇಡಿಯಾಗಿ,
ಹೊಣೆಗೇಡಿಯಾದವನ ಹುಡುಕಾಟಕೆ…!

ಕೋಟಿ ಮೂರ್ತಿಗಳ ಸುಳಿವಿಲ್ಲ,
ಕೋಟಿ ಹೆಸರವತಾರಗಳ ಪರಿವಿಲ್ಲ,
ಕೋಟಿ ನರನಾಡಿಗಳಲಿ ರಕ್ತವಿಲ್ಲ,
ಬಿದ್ದೆನೆಂಬ ಬಂಧನದ ಉರುಳಿಲ್ಲ,
ಗುರುತಿರದ-ಗುಣವಿರದ
ಮಾಯದ ಛಾಯೆಯೊಂದು,
ತೇಲುವ ಹೆಣದ ಉಸಿರನು
ಹಚ್ಚ-ಹಸಿರಾಗಿಸಿದೆ…!

ಈಗರ್ಥವಾಗುತಿದೆ ಇದೇನಾ ಅದು…!
ನಿದಿರೆಯಲೊಮ್ಮೊಮ್ಮೆ ಬೆದರಿಸಿ ಸ್ಖಲಿಸುವ,
ಕೊರೆಯುವ ಏಕಾಂತದ ಚಳಿಯಲಿ ನಡುಗಿಸುವ,
ಬಿರುಬಿಸಿಲಿನಲೇ ಬರಸಿಡುಲು ಬಡಿದಂತೆ,
ಅರ್ಥವಿದ್ದೆಲ್ಲ ಪ್ರಶ್ನೆಗಳು ಅನರ್ಥವಾಗಿವೆ,
ಕೊನೆಇರದ ಪ್ರಾರಂಭದ ಕೊನೆ ಹೆಜ್ಜೆಯೂ
ಭಾರವಾಗಿದೆ,
ಶೂನ್ಯದರಿವಿನ ಪಿಸುಮಾತು
ಹಿತವೆನಿಸುತಿದೆ ಯಾಕೋ ಗೊತ್ತಿಲ್ಲ…!

************************

Leave a Reply

Back To Top