ಸಂಗೀತ ಸಂಗಾತಿ

ಸಂಗೀತದ ಹಿರಿಮೆ

Image result for images of veena, tambura tabla flute

ರತ್ನಾ ಬಡವನಹಳ್ಳಿ


ಪ್ರತಿ ಮಾನವನಲೂ ಒಂದೊಂದು ಕಲೆ ತನಗರಿಯದೆ ಅಡಗಿ ಕುಳಿತೇ ಇರುತ್ತದೆ.ಅದನ್ನು ಗುರುತಿಸಿ ಬೆಳಕಿಗೆ ತರುವ ಸಾಮರ್ಥ್ಯ ಕೆಲವರಲ್ಲಿ‌ ತಕ್ಷಣ ಮೂಡುವುದಿಲ್ಲ. ಅದನ್ನು ಗ್ರಹಿಸಿ ಹೊರತರುವ ಗುರು,ಹಾಗೂ ಕಲಾಪೋಷಕರೂ ಸಿಗಬೇಕು.
ಎಂತಹ ಕಠಿಣ ಮನಸಿನ ಮನುಜನಾದರೂ ಸಂಗೀತದ ರಾಗಕ್ಕೆ ಒಮ್ಮೆಯಾದರೂ ತಲೆದೂಗದೆ ಇರಲಾರ. ಎಂದಾದರೂ ಒಂದಲ್ಲ ಒಂದು ಹಾಡಿಗೆ ಕಾಲು ,ಕೈ ಬೆರಳು ತಾಳ ಹಾಕಿ ತಲೆದೂಗಿಯೇ ಇರುತ್ತಾನೆ ಆ ಸೆಳೆಯುವ ಶಕ್ತಿ ಸಂಗೀತಕ್ಕಿದೆ.ಒಬ್ಬೊಬ್ಬರಿಗೆ ಒಂದೊಂದು ರಾಗ ಇಷ್ಟವಾಗಬಹುದು.
ರಚ್ಚೆ ಇಳಿದು ಅಳುವ ಮಗುವೂ ಸಹ ಅಮ್ಮನ ಜೋಗುಳ ಕೇಳಿ ಅಳು ನಿಲ್ಲಿಸುವುದ ಕಂಡಿಲ್ಲವೇ .ಎಲ್ಲ ತಾಯಂದಿರೂ ಸಂಗೀತ ,ಹಾಡು ಕಲಿತವರೇ ಇರುವುದಿಲ್ಲ ಆದರೂ ಮಗು ಅಳುತಿರಲು ಮಲಗಿಸುವಾಗ “ನನ್ನ ಬಂಗಾರೀ ಮುದ್ದೂ ಚಿನ್ನುಮರೀ,ಜಾಣ ಪಾಚೋ ಪುಟ್ಟೂ ” ಎಂದು ರಾಗವಾಗಿ ಹೇಳುತ್ತಾ ಮಲಗಿಸುವುದಿಲ್ಲವೇ ಹಾಗೆ ಸಂಗೀತ ಎಲ್ಲ ವಿಧದ ಧ್ವನಿಗಳಲಿ ಅಡಗಿದೆ.
ಕೊಂಚ ಭಾವಜೀವಿಯಾಗಿ ಕಲೆಯ ಬಲೆ ಮನದಿ ಹರಡಿದ್ದರಂತೂ ಶಬ್ದಗಳಲೂ ಮಧುರ ಲಯಬದ್ದ ರಾಗ ಅನುಭವಿಸುವುದು ನಿಜ. ಮಳೆ ಸುರಿಯುವ ಮತ್ತೆ ಮಳೆ ನಿಂತು ಹೆಂಚಿನ ಅಥವಾ ಮನೆಯ ಚಪ್ಪರದ ತುದಿಯಿಂದ ಬೀಳುವ,ಮಳೆಬಂದಾಗ ಹಳ್ಳಿಯ ಮಣ್ಣಿನ ಮನೆ ಸೋರುವಾಗ ಪಾತ್ರೆ ಇಟ್ಟು ಅದರಲ್ಲಿ ಬೀಳುವ ಹನಿ ಹನಿ ನೀರಿನ ದನಿಯಲೂ ಲಯಬದ್ದ ರಾಗ ಆಲಿಸಬಲ್ಲದು.
ಹಾಲು ಕರೆಯುವಾಗ ಖಾಲಿ ತಂಬಿಗೆಯಲಿ ಬೀಳುವ ಹಾಲಿನ ಸೊರ್ ಸೊರ್ ಶಬ್ದ ತುಂಬುತ್ತಾ ಬಂದಾಗ ನೊರೆಯ ಮೇಲೆ ಬೀಳುವ ಶಬ್ದವೇ ಬೇರೆ
ಹಳ್ಳಿ ಮನೆಗಳಲ್ಲಿ ಹಸು,ದನಕರುಗಳು ಕಟ್ಟುವ ಜಾಗ ಮನೆಯಪಕ್ಕ ಇದ್ದರೆ ರಾತ್ರಿ ಮಲಗಿದಾಗ ಅವುಗಳು ಮೆಲುಕು ಹಾಕುತ್ತಾ ಜೋರು ಉಸಿರು ಬಿಡುತ್ತಾ ಅತ್ತ ಇತ್ತ ತಿರುಗುವಾಗ ಗೊರಸಿನ ಶಬ್ದ ,
ಎತ್ತಿನ ಬಂಡಿ ಹೊರಟಾಗ ಕೊರಳ ಗೆಜ್ಜೆಯ ಹಾಗೂ ಬಂಡಿಯ ಚಕ್ರದ ಸಪ್ಪಳ ಮಧ್ಯೆ ಮಧ್ಯೆ ಎತ್ತಗಳನ್ನು ಓಡಿಸಲು ಹೇ ಹೇ ಎನುವ ಸವಾರನ ಧ್ವನಿ ಹೀಗೆ ಎಲ್ಲವೂ ನಾದ ಮಯ ಅನುಭವಿಸಿ ಆಸ್ವಾದಿಸುವ ಮನಸಿದ್ದರೆ ಮಾತ್ರ
ಹೀಗೆ ರೈಲಿನಲಿ ಕುಳಿತಾಗ ಅದರ ಒಂದೇ ಸಮನಾಗಿ ಉಂಟಾಗುವ ಶಬ್ದ ಜೋಗುಳ ಹಾಡಿದಂತೇ ಆಗುವುದು.
ಹಾಗೆ ಕೆಲವರ ಕೈ ಬೆರಳು ಬಸ್ಸಿನ ಕಂಬಿ ಹಿಡಿದು ನಿಂತಾಗಲೂ ತಾಳ ಹಾಕುವುದ ಕಂಡಿದ್ದೇವೆ.
ಮಾನವ ತನ್ನ ಭಾವನೆಯನ್ನು ಅಭಿವ್ಯಕ್ತಪಡಿಸುವ ಮಾಧ್ಯಮವೇ ಕಲೆ.ಕಲೆಯು ಮಾನವನ ಮನಸನ್ನು ಸಂಸ್ಕರಿಸುತ್ತದೆ.ಕಲೆಯ ಮೂಲವೇ ಪ್ರಕೃತಿ. ಇದರ ಸೌಂದರ್ಯೋಪಾಸನೆಯ ಮೂಲಕ ಮಾನವನ ಪ್ರತಿಭೆ ಅನಾವರಣಗೊಳ್ಳುತ್ತದೆ. ಅರವತ್ನಾಲ್ಕು ಕಲೆಗಳನ್ನು ಭಾರತೀಯ ಗ್ರಂಥಗಳು ತಿಳಿಸುತ್ತವೆ.ಅವುಗಳಲ್ಲಿ ಲಲಿತಕಲೆ,ವಿಜ್ಞಾನ,ವಾಣಿಜ್ಯ ಹೀಗೆ ವಿಂಗಡಿಸಿದ್ದಾರೆ
ಅದರಲ್ಲಿ ಲಲಿತ ಕಲೆ ಸಂಸ್ಕಾರ,ಪ್ರತಿಭೆಯ ಮೂಲಕ ತೆರೆದುಕೊಳ್ಳುತ್ತದೆ
ಸಂಗೀತ,ನೃತ್ಯ,ಸಾಹಿತ್ಯ,ನಾಟಕ,ಶಿಲ್ಪ,ಚಿತ್ರ ಇವೆಲ್ಲ ಲಲಿತಕಲೆಗಳೆನಿಸುತ್ತವೆ.
ಈ ಲಲಿತ ಕಲೆಗಳಲ್ಲಿ ಸಂಗೀತ ಪ್ರಮುಖ ಸ್ಥಾನ ಪಡೆದಿದೆ ನಾದದ ಮೂಲಕ ಅಂತರೀಕ ಸೌಂದರ್ಯವ ಕಿವಿಯ ಮೂಲಕಹರಿಸಿ ಲೌಕಿಕ ಜಗದ ಜಂಜಾಟವ ಮರೆಸಿ ಕಲಾವಿದ ಹಾಗೂ ಶ್ರೋತೃವಿನ ಮನವ ತಣಿಸುವುದೇ ಸಂಗೀತ
ಗೀತ ಎಂದರೆ ಹಾಡು. ಸಂಗೀತವೆಂದರೆ ಒಳ್ಳೆಯ ಹಾಡು .ಕಿವಿಗೆ ಹಿತವ ತಂದು ಮನದ ಮುಟ್ಟಿ ಮಾನಸಿಕ ಉದ್ವೇಗಶಮನ ಮಾಡಿ ಶಾಂತರಸದಲಿ ನೆಲೆಗೊಳಿಸುವುದು ಶಾಸ್ತ್ರೀಯ ಸಂಗೀತ
ಮತ್ತಷ್ಟು ಮುಂದಿನವಾರ ತಿಳಿಯೋಣ


One thought on “ಸಂಗೀತ ಸಂಗಾತಿ

Leave a Reply

Back To Top