Solitary!
ತೆಲುಗು ಮೂಲ : ರವಿ ವೀರೆಲ್ಲಿ
ಅನುವಾದ : ರೋಹಿಣಿಸತ್ಯ
ಒಂಟಿ ಮೇಘದಂತೆ
ಅಲ್ಲಿ ಇಲ್ಲಿ
ಎಷ್ಟುಹೊತ್ತು ಅಡ್ಡಾಡಲು ಸಾಧ್ಯ?!
ಸ್ವಲ್ಪಹೊತ್ತಿಗೆ ಸಾವಿರವಾಗಿ ಸೀಳಿಹೋಗುತ್ತೇನೆ
ಕಡೆಗೆ ಹನಿಗಳೆಲ್ಲವನ್ನು ಒಟ್ಟುಗೂಡಿಸಿಕೊಂಡು
ದೊಡ್ಡ ಸಮೂಹವಾಗಿ ದಾಳಿಯಿಡುತ್ತೇನೆ
ಯುದ್ಧ ಮುಗಿದಮೇಲೆ
ಯಾವ ತೊರೆಯಲ್ಲೋ ಏಕಾಂಗಿಯಾಗಿ ಹರಿಯುತ್ತೇನೆ
ಒಂಟಿಯಾಗಿ ಬಾಳಲಾಗದಿರುವುದಕ್ಕೆ
ಸಮೂಹದಲ್ಲಿ ನಡೆಯಲಾಗದಿರುವುದಕ್ಕೆ ನಡುವೆ
ಎಷ್ಟೋ ಕಾಲಗಳು ಹಾಗೆ ಓರೆಗಣ್ಣಿನಿಂದ ನೋಡುತ್ತಾ ಸಾಗುತ್ತಿರುತ್ತವೆ
ಮತ್ತೆಷ್ಟೋ ಕ್ಷಣಗಳು ಕಾಯದೆ ಅನುಕಂಪದಿಂದ ಕದಲುತ್ತಿರುತ್ತವೆ
ಯಾವ ಕೈಯಾಸರೆ ನನ್ನನ್ನು ಲಾಲಿಸುವುದಿಲ್ಲವೆಂದು
ಯಾವ ಮೊಗ್ಗು ನನಗಾಗಿ ಮೂಡುವುದಿಲ್ಲವೆಂದು ತಿಳಿದಾಗ
ನನ್ನ ಕಾಲುಗಳ ಕೊರಡಿನ ಮೇಲೆ ನಾನೇ ಬೆಳೆದು
ನನ್ನ ಬೇರುಗಳ ತುದಿಗಳನ್ನು ನಾನೇ ಚಿಗುರಿಸಿಕೊಂಡು
ನನ್ನೊಳಗೆ ನಾನೇ ಹೊರಲಾರದಂತಹ ಹುವ್ವಾಗಿ ಅರಳುತ್ತೇನೆ
ಎಂದೋ ಒಂದು ದಿನ
ನನ್ನನ್ನು ನಾನೇ ತುಂಡರಿಸಿಕೊಂಡು
ಬೀಜಗಳನ್ನ ಅಪ್ಪಿಕೊಂಡು ತೇಲುವ ಹತ್ತಿಹೂವಿನಂತೆ
ಯಾವುದೊ ಗಾಳಿಯ ದೋಣಿಯಲ್ಲಿ ತೇಲುತ್ತಾ
ಕದಲುವ ಕಾಲಗಳ ಬಾಗಿಲುಗಳನ್ನು ಒಂದೊಂದಾಗಿ ತಟ್ಟುತ್ತಾ ಸಾಗುತ್ತಿರುತ್ತೇನೆ
ಕೂಡಿಬರುವ ಕಾಲವೊಂದು ಹಿತ್ತಲ ಬಾಗಿಲು ತೆರೆದು
ನನ್ನನ್ನು ಬಯಸಿ ಬಿತ್ತಿಕೊಳ್ಳುವವರೆಗು!